Yashwant Chittal: ವಿಲಂಬಿತ ಲಯ ತಂತ್ರಮಾಂತ್ರಿಕ ಯಶವಂತರ ‘ಚಿತ್ತಾಲತನ’

Yashwant Chittal: ವಿಲಂಬಿತ ಲಯ ತಂತ್ರಮಾಂತ್ರಿಕ ಯಶವಂತರ ‘ಚಿತ್ತಾಲತನ’
ಹಿರಿಯ ಕಥೆಗಾರರಾದ ವಿವೇಕ ಶಾನಭಾಗ ಮತ್ತು ಯಶವಂತ ಚಿತ್ತಾಲ

Chittal 93 : ‘ಯಾವ ದೃಷ್ಟಿಯಿಂದ ನೋಡಿದರೂ ಚಿತ್ತಾಲರಿಗೆ ‘ಹನೇಹಳ್ಳಿ’ ಅದ್ಭುತ ವರ. ಇಂಥ ಸಾತತ್ಯವಿರುವ ಕಥಾಲೋಕವು ಕನ್ನಡಕ್ಕೆ ಅಪರೂಪ. ಒಂದು ನೆಲಕ್ಕೆ ಕಟ್ಟುಬಿದ್ದು, ಆ ಒಂದು ನೆಲೆಯಿಂದಲೇ ಎಂಥ ಆಧುನಿಕತೆಯನ್ನಾದರೂ ನಿರ್ವಹಿಸಬಲ್ಲ ಹಟವನ್ನು ತಮ್ಮ ಕಥೆಗಳುದ್ದಕ್ಕೂ ಅವರು ತೋರಿದರು. ಅರ್ಧ ಶತಮಾನ ಕಾಲದ ಅವರ ಕಥಾಸೃಷ್ಟಿಯಲ್ಲಿ ಈ ಅಂಶ ಯಾವ ರಾಜಿಗೂ ಒಳಪಡದೇ ಉಳಿದುಬಂದಿತು.’ ವಿವೇಕ ಶಾನಭಾಗ

ಶ್ರೀದೇವಿ ಕಳಸದ | Shridevi Kalasad

|

Aug 03, 2021 | 3:30 PM

Yashwant Chittal Birth Anniversary : ಯಶವಂತ ಚಿತ್ತಾಲರಿಗೆ ಇಂದಿಗೆ 93 ವರ್ಷ (1928-2014). ಹುಟ್ಟಿದ್ದು ಉತ್ತರ ಕನ್ನಡದ ಹನೇಹಳ್ಳಿಯಲ್ಲಿ. ತಂದೆ ವಿಠೋಬಾ ತಾಯಿ ರುಕ್ಮಿಣಿ. ಅಪರೂಪದ ಕವಿ ಗಂಗಾಧರ ಚಿತ್ತಾಲರ ಕಿರಿಯ ಸೋದರ ಇವರು. ಕುಮಟಾ, ಧಾರವಾಡ, ಮುಂಬೈ, ಅಮೆರಿಕಾ, ನ್ಯೂಜರ್ಸಿಯಲ್ಲಿ ವಿದ್ಯಾಭ್ಯಾಸಗೈದು ಸುಮಾರು ಐದು ದಶಕಗಳ ಕಾಲ ಮುಂಬೈಯಲ್ಲಿ ನೆಲೆಸಿದ್ದರು. ವಿಜ್ಞಾನದ ವಿದ್ಯಾರ್ಥಿಯಾದ ಇವರು ರಾಸಾಯನಿಕ ತಂತ್ರಜ್ಞಾನದ ಮಹತ್ವದ ಶಾಖೆಯಾದ ಪೊಲಿಮರ್ ಟೆಕ್ನಾಲಜಿಯಲ್ಲಿ ವಿಶೇಷ ಪರಿಣತಿ ಪಡೆದರು. ಬೇಕೆಲ್ಯಾಟ್ ಹೈಲಮ್ ಲಿಮಿಟೆಡ್ ಕಂಪನಿಯಲ್ಲಿ ಹಲವು ವರ್ಷಗಳ ಕಾಲ ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ಆಗಿದ್ದರು ಮುಂದೆ ಇದೇ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನಿವೃತ್ತಿ ಹೊಂದಿದರು. ಐದು ಕಾದಂಬರಿಗಳು, ಒಂಬತ್ತು ಕಥಾ ಸಂಕಲನಗಳು ಮತ್ತು ಮೂರು ಪ್ರಬಂಧ ಸಂಗ್ರಹಗಳನ್ನು ಪ್ರಕಟಿಸಿದರು.  

ಈ ಸಂದರ್ಭದಲ್ಲಿ ಹಿರಿಯ ಕಥೆಗಾರರಾದ ವಿವೇಕ ಶಾನಭಾಗ ಅವರ ಬರಹ ನಿಮ್ಮ ಓದಿಗೆ.

ನನ್ನ ಹದಿನಾರನೆಯ ವಯಸ್ಸಿನಲ್ಲಿ ಒಂದು ದಿನ ಅಕಸ್ಮಾತ್ತಾಗಿ ಯಶವಂತ ಚಿತ್ತಾಲರ ‘ಆಟ’ ಕಥಾಸಂಕಲನ ಕೈಗೆ ಸಿಕ್ಕಿತು. ತಾರತಮ್ಯವಿಲ್ಲದೇ ಕೈಗೆ ಸಿಕ್ಕ ಪುಸ್ತಕಗಳನ್ನು ಓದುತ್ತಿದ್ದ ದಿನಗಳವು. ಆದರೆ ಈ ಪುಸ್ತಕ ನನ್ನನ್ನು ಎಷ್ಟು ಸೆಳೆಯಿತೆಂದರೆ ಮರುದಿನವೇ ಅವರ ‘ಆಬೋಲಿನ’ ಮತ್ತು ‘ಸಂದರ್ಶನ’ಗಳನ್ನು ಹುಡುಕಿ ಓದಿದೆ. ಉತ್ತರ ಕನ್ನಡದಲ್ಲಿಯೇ ಬಾಲ್ಯದ ಬಹುವರ್ಷಗಳನ್ನು ಕಳೆದಿದ್ದ ನನಗೆ ಈ ನೆಲದ ಜೀವನ, ನನ್ನ ಸುತ್ತಲಿನ ನಿತ್ಯಜಗತ್ತು ಹೀಗೆ ಸಾಹಿತ್ಯದೊಳಗೆ ಬರಬಹುದೆನ್ನುವ ಸಾಧ್ಯತೆಯೇ ರೋಮಾಂಚಕಾರಿಯಾಗಿತ್ತು. ಅನುಭವ ಎಂದರೆ ದೇಶಾಂತರ ಹೋಗಿಯೇ ಗಳಿಸಿಕೊಳ್ಳುವುದೆಂಬ ಭ್ರಮೆಗಳಿಂದ ಆ ವಯಸ್ಸಿನಲ್ಲಿ ಬರೆಯಲು ಹಿಂಜರಿಯುತ್ತಿದ್ದವನಿಗೆ, ನನ್ನ ಅಕ್ಕಪಕ್ಕದಲ್ಲೇ ಇರುವ ಅನುಭವದ್ರವ್ಯದ ಬಗ್ಗೆ ಎಚ್ಚರ ಮೂಡಿಸಿದವರು ಚಿತ್ತಾಲರು. ಹೀಗೆ ಒಂದು ಅರ್ಥದಲ್ಲಿ ಅವರು ನನಗೆ – ಆಗ ಮುಖತಃ ಪರಿಚಯವಿಲ್ಲದಿರುವಾಗಲೂ – ಪರೋಕ್ಷವಾಗಿ ಸಾಹಿತ್ಯ ದೀಕ್ಷೆಯನ್ನು ಕೊಟ್ಟರು. ಒಬ್ಬ ಬರಹಗಾರನಾಗಿ ನಾನು ಅವರಿಗೆ ಈ ಕಾರಣಕ್ಕೆ ಕೃತಜ್ಞನಾಗಿದ್ದೇನೆ. ಚಿತ್ತಾಲರ ಪ್ರಖರ ಪ್ರತಿಭೆ ಉತ್ತರ ಕನ್ನಡದ ಜೀವನವನ್ನು ಎಷ್ಟು ದಟ್ಟವಾಗಿ ಮತ್ತು ಶಕ್ತಿಯುತವಾಗಿ ಸಾಹಿತ್ಯದೊಳಗೆ ತಂದಿದೆಯೆಂದರೆ ಅವರನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸದೇ ನನಗೆ ಬರೆಯುವುದೇ ಅಸಾಧ್ಯವಾಯಿತು. ಹೀಗೆ ಅವರಿಂದ ಭಿನ್ನವಾದ, ನನ್ನದೇ ಉತ್ತರ ಕನ್ನಡವನ್ನು ಹುಡುಕಲು ಅವರು ಪ್ರೇರಣೆಯಾದರು. ಈ ಕಠಿಣ ಹಾದಿಯುದ್ದಕ್ಕೂ ಅವರಿಂದ ಪ್ರೋತ್ಸಾಹವನ್ನೂ, ಪ್ರೀತಿಯನ್ನೂ ಪಡೆದಿದ್ದೇನೆ. ಈಗ ಅವರು ನನ್ನಿಂದ ಈ ಪ್ರಸ್ತಾವನೆಯನ್ನು ಬಯಸಿದಾಗ ತಮಗಿಂತ ಕಿರಿಯ ತಲೆಮಾರು ತಮ್ಮ ಕತೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿಯುವ ಕುತೂಹಲವಿದೆ ಎಂಬ ಅರ್ಥ ಬರುವ ಮಾತುಗಳನ್ನು ಆಡಿದರು. ಇದನ್ನೊಂದು ಗೌರವವೆಂದು ಭಾವಿಸಿ, ಈ ಸ್ಪಂದನದ ಕಾರ್ಯವನ್ನು ನಾನು ಸಂತೋಷದಿಂದ, ಪ್ರೀತಿಯಿಂದ ನಿರ್ವಹಿಸುತ್ತಿದ್ದೇನೆ.

ಅವರ ಈವರೆಗಿನ ಎಲ್ಲ ಕಥೆಗಳನ್ನು ಕುರಿತು ಚರ್ಚಿಸಲು ಈ ಪ್ರಸ್ತಾವನೆಯಲ್ಲಿ ಸ್ಥಳವಿಲ್ಲ. ಅದಕ್ಕೆ ಪ್ರತ್ಯೇಕವಾದ ಅಧ್ಯಯನದ ಅಗತ್ಯವಿದೆ. ಆದ್ದರಿಂದ ಇಲ್ಲಿ ಅವರ ಒಟ್ಟೂ ಕಥಾಪ್ರಪಂಚವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಅವರ ಕಥನಕ್ರಮದ ವಿಶಿಷ್ಟತೆಯ ಬಗ್ಗೆ, ಮತ್ತೆ ಮತ್ತೆ ಮರುಕಳಿಸುವ ಕೆಲವು ರೂಪಕಗಳ ಬಗ್ಗೆ ಗಮನ ಸೆಳೆದು, ನಂತರ ಈ ಸಂಕಲನದ ಕತೆಗಳ ಕುರಿತು ಮಾತನಾಡುತ್ತೇನೆ.

ಮೊದಲನೆಯದಾಗಿ, ‘ಕತೆ ಹೇಳುವುದು ಒಂದು ಒಳ್ಳೆಯ ಕೆಲಸ. ಕತೆ ಇನ್ನೊಬ್ಬನಿಗೆ ಮುಟ್ಟಲು ತಕ್ಕುದಾದದ್ದು, ಮುಟ್ಟಬೇಕಾದ್ದು’ ಎಂಬ ನಂಬಿಕೆ ಅವರ ಎಲ್ಲ ಸಾಹಿತ್ಯದ ಹಿಂದೆ ಇದೆ. ಚಿತ್ತಾಲರ ಇಡೀ ಕಥನಶೈಲಿಯನ್ನು, ಅವರ ತಂತ್ರ ಮತ್ತು ಭಾಷೆಯನ್ನು ಇದು ರೂಪಿಸಿದೆ. ಈ ನಂಬಿಕೆಯು ಅವರ ನಾನಾ ಲೇಖನಗಳಲ್ಲಿ, ಮುನ್ನುಡಿಗಳಲ್ಲಿ, ಭಾಷಣಗಳಲ್ಲಿ ಮತ್ತು ಕಥೆಗಳಲ್ಲಿಯೂ ಸಹ ಆಗಾಗ ವ್ಯಕ್ತವಾಗುತ್ತ ಬಂದಿರುವುದನ್ನು ಕಾಣಬಹುದು. ಇಂಥ ನಂಬಿಕೆಗೆ ನಮ್ಮ ಸಂಸ್ಕೃತಿಯಲ್ಲಿ ಮತ್ತು ಜಾನಪದದಲ್ಲಿ ಆಳವಾದ ಬೇರುಗಳಿವೆ. ಇದು ಪುರಾಣ ಕಥನ ಮತ್ತು ಪುರಾಣ ಶ್ರವಣದ ಪುಣ್ಯಪ್ರಾಪ್ತಿಯ ಹಾಗೆ. ಮಾಸ್ತಿಯವರ ಕಥಾಸಾಹಿತ್ಯವೂ ಇಂಥ ಒಂದು ಪರಂಪರೆಗೆ ಸೇರಿದ್ದು. ಚಿತ್ತಾಲರು ಮಾಸ್ತಿಯವರಲ್ಲಿ ಗುರುತಿಸಿದ್ದು ಮತ್ತು ಬಹುವಾಗಿ ಮೆಚ್ಚಿಕೊಂಡದ್ದು ಕೂಡ ಈ ಅಂಶವನ್ನೇ. ನಾನು ಸಾರರೂಪವಾಗಿ ಹೇಳಿದ, ಸರಳವಾಗಿ ತೋರುವ ಈ ನಂಬಿಕೆಯ ನೆಲಗಟ್ಟಿನ ಮೇಲೆ ಅತ್ಯಂತ ಸಂಕೀರ್ಣವಾದ ಜೀವನದರ್ಶನವಿದೆ. ಅದು ಭಾಷೆ-ಕಲೆ-ಸಾಹಿತ್ಯ-ಮನುಷ್ಯ ಇತ್ಯಾದಿಗಳ ನಡುವಿನ ಸೂಕ್ಷ್ಮ ಸಂಬಂಧಗಳನ್ನೂ, ನಾಗರೀಕತೆಯ ಇತಿಹಾಸವನ್ನೂ, ಸತ್ತೆ-ಸಮಾನತೆ-ಧರ್ಮಗಳ ಪರಸ್ಪರ ಅವಲಂಬನೆಯನ್ನೂ ಒಳಗೊಂಡದ್ದು. ಇಂಥ ಕೋನದಿಂದ ಕಂಡಾಗ, ‘ಕಥೆ ಹೇಳುವ’ ಕ್ರಿಯೆಯೇ ಸಾರ್ಥಕ ಸಾಮಾಜಿಕ ಪುಣ್ಯಕಾರ್ಯವಾದ್ದರಿಂದ ಸಹಜವಾಗಿಯೇ ಅದರ ಒಳಹರಹುಗಳಲ್ಲಿ, ಇನ್ನೊಬ್ಬರನ್ನು ಮುಟ್ಟುವ ಅದರ ಪ್ರಕ್ರಿಯೆಯಲ್ಲಿ ಚಿತ್ತಾಲರಿಗೆ ಅಪಾರ ಆಸಕ್ತಿ ಮತ್ತು ಶ್ರದ್ಧೆ. ಇಂಥ ಅಪರೂಪದ ಬದ್ಧತೆಯಿಂದಾಗಿ ಅವರ ಎಷ್ಟೋ ಕಥೆಗಳ ತೀವ್ರತೆಯನ್ನು ಕೇವಲ ‘ಸಾಹಿತ್ಯಿಕ’ವೆಂದು ಗ್ರಹಿಸುವ ಅಪಾಯವೂ ಇದೆ. ಚಿತ್ತಾಲರ ಈ ಶ್ರದ್ಧೆಯನ್ನು ಕೇವಲ ಕಲಾಮೌಲ್ಯವಾಗಿ ಮಾತ್ರ ನೋಡದೇ ಜೀವನದರ್ಶನವನ್ನು ಗ್ರಹಿಸುವ ರೀತಿಯಾಗಿ ನೋಡಬೇಕು. ಇಲ್ಲಿ ಕಥೆ ಹೇಳುವವನಿಗೆ ಇರುವ ಶಕ್ತಿ ಭಕ್ತಿ ಶ್ರದ್ಧೆಗಳು ಕೇಳುವವನಿಗೂ ಇರಬೇಕಾಗುತ್ತದೆ. ಓದುಗರಿಂದ ಅವರ ಕನಿಷ್ಠ ಅಪೇಕ್ಷೆಯೆಂದರೆ ಇದೇ. ಅವರ ಸೃಜನಶೀಲತೆಯ ಸೆಲೆಯು ಇಂಥ ಒಂದು ಗಾಢವಾದ ಪರಸ್ಪರ ಸಂವಹನದಲ್ಲಿ ಇರಬಹುದೆಂದು ಅವರು ಒಂದೆಡೆ ಗುರುತಿಸಿಕೊಂಡಿದ್ದಾರೆ. ಚಿತ್ತಾಲರ ಕಥಾಪ್ರಪಂಚವನ್ನು ಅರ್ಥಮಾಡಿಕೊಳ್ಳುವುದಕ್ಕೆ, ಆ ಕಥನಕ್ರಮದ ನೆಲೆಗಳನ್ನು ಗ್ರಹಿಸುವುದಕ್ಕೆ ಅವರ ಈ ನಂಬಿಕೆಯನ್ನು ಅರಿಯುವುದು ಅವಶ್ಯ ಎಂದು ನಾನು ಭಾವಿಸಿದ್ದೇನೆ.

yashwant chittal‘s birthday vivek shanbhag

ಚಿತ್ತಾಲರ ’ಪುಟ್ಟನ ಹೆಜ್ಜೆ ಕಾಣೋದಿಲ್ಲ’ ಮತ್ತು ’ಶಿಕಾರಿ’

ಎರಡನೇಯದಾಗಿ, ಹನೇಹಳ್ಳಿಯು ಅವರ ಕಥಾಸಾಹಿತ್ಯದ ಅತ್ಯಂತ ಪ್ರಮುಖ ಪಾತ್ರವಾಗಿದೆ. ಅವರ ಕಥಾಲೋಕದಲ್ಲಿ ಹನೇಹಳ್ಳಿಯಿಲ್ಲದ ಜಾಗವಿಲ್ಲ. ಬಹುತೇಕ ಕಥೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಅನೇಕ ಕಡೆ ಹೆಸರನ್ನೇ ಎತ್ತದಿರುವಾಗಲೂ ಅಪ್ರತ್ಯಕ್ಷವಾಗಿ ಹನೇಹಳ್ಳಿ ಇದೆ. ಪ್ರಜ್ಞೆಯಾಗಿ, ಮೌಲ್ಯವಾಗಿ, ಅಳತೆಗೋಲಾಗಿ ಇದೆ. ಈ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ ಮತ್ತು ಸ್ವತಃ ಅವರೇ ಈ ಬಗ್ಗೆ ಬರೆದಿದ್ದಾರೆ. ಆದರೆ ಇದನ್ನೊಂದು ಸ್ಪೂರ್ತಿಯ ಸೆಲೆಯಾಗಿ ಮಾತ್ರ ನೋಡದೇ ಅವರ ಕತೆಗಳಿಗೆ ನಿಬಿಡ ದೇಹವನ್ನು ಒದಗಿಸಿಕೊಟ್ಟ, ಅವರ ಸಾಹಿತ್ಯ ಸಂರಚನೆಯ ಅತ್ಯಂತ ಮುಖ್ಯವಾದ, ಅವಿಭಾಜ್ಯವಾದ ಅಂಗವಾಗಿ ನೋಡಬಯಸುತ್ತೇನೆ. ಮೊದಮೊದಲ ಕತೆಗಳಲ್ಲಿ ವಾಸ್ತವ ಪ್ರದೇಶದಂತೆ ತೋರಿದ ಹನೇಹಳ್ಳಿಯು ಬರಬರುತ್ತ ಪಡೆದುಕೊಂಡ ರೂಪಕದ ಆಕಾರವು ಅತ್ಯಂತ ವಿಶಾಲವೂ ವಿಶ್ವಾತ್ಮಕವೂ ಆಗಿದೆ. ಈ ಒಂದು ಬಿಂದುವಿನಲ್ಲಿ ನಿಂತು ಜಗತ್ತನ್ನು ಅದರ ನಾನಾ ಆಯಾಮಗಳಲ್ಲಿ ನೋಡಲು ಅವರಿಗೆ ಅನುವು ಮಾಡಿಕೊಟ್ಟಿದೆ. ಹಾಗಾಗಿ ಅವರ ಕತೆಗಳಲ್ಲಿ ಬರುವ ಹನೇಹಳ್ಳಿಯು ಮುಂಬಯಿಯನ್ನೂ ಸಹ ತನ್ನೊಳಗೆ ಇಟ್ಟುಕೊಂಡು ಅರ್ಥೈಸುವಷ್ಟು ಸಶಕ್ತವಾಗಿದೆ. ಈ ರೂಪಕದ ಬಲದಿಂದಾಗಿ ಅವರಿಗೆ ವ್ಯಕ್ತಿಗತ-ಸಾಮಾಜಿಕ ಆಯಾಮಗಳನ್ನು, ಅಂತರ್ಮುಖ-ಬಹಿರ್ಮುಖ ಆಯಾಮಗಳನ್ನು ಕತೆಗಳಲ್ಲಿ ನಿರ್ವಹಿಸುವ ಶಕ್ತಿಯು ಸಹಜವಾಗಿ ಒದಗಿಬಂದಿವೆ. ಕಾಲಕ್ರಮದಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸಲು ಮತ್ತು ದಾಖಲಿಸಲು ಅವರು ಹನೇಹಳ್ಳಿಯನ್ನೇ ಮಾನದಂಡವಾಗಿ ಉಪಯೋಗಿಸುತ್ತಾರೆ. ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಅವರಿಗೆ ಇದೊಂದು ಅದ್ಭುತ ವರವಾಗಿ ಪರಿಣಮಿಸಿರುವುದು ಕಾಣುತ್ತದೆ. ಇಂಥ ಸಾತತ್ಯವಿರುವ ಕಥಾಲೋಕವು ಕನ್ನಡಕ್ಕೆ ಅಪರೂಪವಾದುದು. ಒಂದು ನೆಲಕ್ಕೆ ಕಟ್ಟುಬಿದ್ದು, ಆ ಒಂದು ನೆಲೆಯಿಂದಲೇ ಎಂಥ ಆಧುನಿಕತೆಯನ್ನಾದರೂ ನಿರ್ವಹಿಸಬಲ್ಲ ಹಟವನ್ನು ತಮ್ಮ ಕಥೆಗಳುದ್ದಕ್ಕೂ ಅವರು ತೋರಿದ್ದಾರೆ. ಅರ್ಧ ಶತಮಾನ ಕಾಲದ ಅವರ ಈವರೆಗಿನ ಕಥಾಸೃಷ್ಟಿಯಲ್ಲಿ ಈ ಅಂಶ ಯಾವ ರಾಜಿಗೂ ಒಳಪಡದೇ ಉಳಿದುಬಂದಿದೆ.

ಮೂರನೆಯದಾಗಿ, ನಿಗೂಢ ಪ್ರಪಂಚವೊಂದರ ಜೊತೆ ಸ್ಥಾಪಿಸಲೆತ್ನಿಸುವ ಸಂಬಂಧ. ಈ ಅವ್ಯಕ್ತ ಲೋಕವು ಪೊತ್ತೆ ಮೀಸೆಯವನಾಗಿಯೋ, ಸುಳಿಗಾಳಿಯಾಗಿಯೋ, ಕಂಬಳಿ ಹೊದ್ದವನಾಗಿಯೋ, ಬಾಗಿಲಿಂದ ಹಣಿಕಿ ನೋಡಿದ ಮೋರೆಯಾಗಿಯೋ ಪ್ರತ್ಯಕ್ಷವಾಗಿ ಕಾಣಬಹುದು. ಆದರೆ ಅವರ ಕಾಳಜಿಯಿರುವುದು ಮನುಷ್ಯನ ಅನುಭವಲೋಕದ ಸರಹದ್ದುಗಳನ್ನು ಅವ್ಯಕ್ತದತ್ತ ತಳ್ಳಿ ಪರಿಶೀಲಿಸುವುದರ ಕಡೆಗೆ. ವಿಧಿಯಿರಲಿ, ಸಾವಿರಲಿ, ಅದೃಷ್ಟವೇ ಇರಲಿ – ಅದು ಗ್ರಾಹ್ಯವಾಗಬಲ್ಲುದೇ ಎಂದು ಅರಿಯುವುದರ ಕಡೆಗೆ. ಅವರು ಸ್ವತಃ ವಿಜ್ಞಾನದ ವಿದ್ಯಾರ್ಥಿಯಾಗಿರುವುದು ಸಹ ಇದರ ಹಿನ್ನೆಲೆಯಲ್ಲಿರಬಹುದು. ವಿಜ್ಞಾನವು ಸದಾ ತುಡಿಯುವುದು ತನಗೆ ಈವರೆಗೆ ತಿಳಿದಿರದ, ಕಾರ್ಯಕಾರಣ ಸಂಬಂಧದ ತೆಕ್ಕೆಗೆ ಒಳಪಡದ ಸಂಗತಿಗಳ ಅರ್ಥಗಳಿಗಾಗಿ. ಕೆಲವು ಬಾರಿ ಅವರ ಕಥೆಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಅವರ ಈ ರೂಪಕಗಳನ್ನು ಅಕ್ಷರಶಃ ಅರ್ಥೈಸಲು ಪ್ರಯತ್ನಿಸಿದ್ದರಿಂದ ಅವರು ಆ ಮೂಲಕ ಬೇರೆ ಏನನ್ನು ಹೇಳಲೆತ್ನಿಸುತ್ತಿದ್ದಾರೆ ಅನ್ನುವುದು ತುಸು ಮರೆಗೆ ಸಂದಂತಾಗಿದೆ. ಮನುಷ್ಯನ ಅಳವಿನಾಚೆಯ ಸಂಗತಿಗಳ ಕುರಿತು ಅವರಿಗಿರುವ ಆಸ್ಥೆಯು ಅವರ ಕಥಾಸಾಹಿತ್ಯದುದ್ದಕ್ಕೂ ಹರಡಿದೆ ಮತ್ತು ಅವರ ಮುಖ್ಯ ಕಾಳಜಿಗಳಲ್ಲಿ ಒಂದಾಗಿದೆ.

ಮೇಲಿನ ಈ ಅಂಶಗಳು ಚಿತ್ತಾಲರನ್ನು ಅವರ ಕಾಲದ ಉಳಿದ ಮುಖ್ಯ ಕಥೆಗಾರರಿಂದ ಸ್ಪಷ್ಟವಾಗಿ ಭಿನ್ನವಾಗಿಸಿವೆ ಎಂದು ನಾನು ಭಾವಿಸಿದ್ದೇನೆ. ಇದರ ಜೊತೆ ಅವರ ಕತೆಗಳಲ್ಲಿ ಮರುಕಳಿಸುವ ಹಲವು ಪ್ರತಿಮೆಗಳು, ಉತ್ತರ ಕನ್ನಡದ ನೆಲದ ಪರಿಮಳದ ಭಾಷೆ, ಅವರಿಗೇ ವಿಶಿಷ್ಟವಾದ ಕಥಾತಂತ್ರ, ನಿಪುಣ ಕಲೆಗಾರಿಕೆ – ಈ ಎಲ್ಲವೂ ಸೇರಿ ಅಡಿಗರು ಹೇಳಿದ ‘ಚಿತ್ತಾಲತನದ ಮುದ್ರೆ’ ರೂಪಿತವಾಗಿದೆ ಎಂಬುದು ನನ್ನ ತಿಳವಳಿಕೆ.

yashwant chitta's Birthday Vivek Shanbhag

ಚಿತ್ತಾಲರು ಮತ್ತವರ ಕೃತಿಗಳು

ಪ್ರಸ್ತುತ ಸಂಕಲನದ ಕತೆಗಳು ಈ ‘ಚಿತ್ತಾಲತನದ ಮುದ್ರೆ’ಯನ್ನು ಹೊತ್ತುಕೊಂಡಿದ್ದು ಮಾತ್ರವಲ್ಲದೇ ಅದರ ಸಾರ-ವಿಸ್ತಾರವನ್ನೂ ಹೆಚ್ಚಿಸಿವೆ. ಐದು ದಶಕಗಳ ಬರವಣಿಗೆಯ ನಂತರವೂ ಅವರು ಒಬ್ಬ ಹೊಸ ಬರಹಗಾರನ ಆಸ್ಥೆ ಮತ್ತು ತೀವ್ರತೆಯಿಂದ ಕತೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಯಾವುದನ್ನೂ ಗ್ರಹೀತ ಹಿಡಿದು ಮಾಡುವುದಿಲ್ಲವಾದ್ದರಿಂದ ಪ್ರಯೋಗಶೀಲತೆಯ ಸಂತೋಷ ಇನ್ನೂ ಅವರಲ್ಲಿ ಉಳಿದಿದೆ. ಈ ಸಂಕಲನದ ಕತೆಗಳಲ್ಲಿ ಅವರು ಮತ್ತೆ ಮರಳಿ ಹನೇಹಳ್ಳಿಗೆ ಕಾಲಿಟ್ಟಿದ್ದಾರೆ. ಈ ‘ಮರುಪ್ರವೇಶ’ವು ಅವರಿಗೆ ಒಂದು ಅನನ್ಯ ದೃಷ್ಟಿಕೋನವನ್ನು – ಹನೇಹಳ್ಳಿಯ ಜೊತೆ ನಿಕಟ ಸಂಬಂಧ ಇದ್ದಾಗಲೂ ಅಗತ್ಯವಾದ ‘ದೂರ’ವನ್ನು ಒದಗಿಸಿಕೊಟ್ಟಿದೆ.

ಇಲ್ಲಿರುವ, ‘ಯಾರ ಕಥೆ ಯಾರು ಹೇಳಿದ್ದು?’ ಎಂಬ ಹೆಸರಿನ ಮೊದಲ ಕತೆಯ ಸಂರಚನೆಯನ್ನು ಗಮನಿಸಿ: ನೆನೆದರೆ ನೆನ್ನೆಯಷ್ಟೇ ನಡೆದಂತೆ ಅನಿಸುವ, ಆದರೆ ಎಷ್ಟೋ ವರ್ಷಗಳ ಹಿಂದಿನ, ಸಣ್ಣಪ್ಪನ ಘಟನೆಯ ನೆನಪಿನೊಡನೆ ಕಥೆ ಆರಂಭವಾಗುತ್ತದೆ. ಅದರ ನಂತರ ನಿರೂಪಕ ಊರು ಬಿಟ್ಟು ಹೋದವನು, ಹದಿನಾಲ್ಕು ವರ್ಷಗಳ ಬಳಿಕ ಮರಳಿದ್ದಾನೆ. ಮುಂದಿನದೆಲ್ಲ ಈ ಕಾಲದಲ್ಲಿ ನಡೆಯುವ ಕಥೆ. ಅವನು ಭೆಟ್ಟಿಯಾದ ಈ ಸ್ನೇಹಿತ ಅವರ ನಡುವಿನ ಕಾಲದ ಅಂತರವನ್ನು ಮರೆಸುವಂತೆ ಮಾತನಾಡಿದರೂ ಅದನ್ನು ಮೀರುವುದು ಸಾಧ್ಯವಿಲ್ಲೆಂಬ ಅರಿವು ನಿರೂಪಕನಿಗೆ ಸದಾ ಇದೆ. ಸ್ನೇಹಿತ ಸುಬ್ರಾಯ ಅವನಿಗೆ ಪ್ರಿಯವಾದ ತಿನಿಸುಗಳಿಂದ ಆರಂಭಿಸಿ, ಅಂಗೈ ಮೇಲಿನ ಹೊಡೆತದವರೆಗೆ ನಾನಾ ರೀತಿಯಿಂದ ಅವನನ್ನು ಹಿಂದಿನ ಕಾಲಕ್ಕೆ ಎಳೆಯಲು ನೋಡುತ್ತಾನೆ. ಸುಬ್ರಾಯನಿಗೆ ಸಣ್ಣಪ್ಪನ ಕತೆಯನ್ನು ಸಜೀವಗೊಳಿಸಬೇಕಾಗಿದೆ. ಆ ಮೂಲಕ ತನ್ನದೇ ದುರಂತಕ್ಕೆ ಕಾರಣ ಸೂಚಿಸಬೇಕಾಗಿದೆ, ತನ್ನ ಗಾಯವನ್ನು ಅಡಗಿಸಿ ಇಡಬೇಕಾಗಿದೆ ಮತ್ತು ಹಾಗೆ ಮಾಡುವುದಕ್ಕೂ ಬೇರೊಂದು ಕತೆಯ ಅಗತ್ಯವಿದೆ. ಸರಳವಾಗಿ ಆರಂಭವಾದ ಇದೆಲ್ಲ ಬರಬರುತ್ತ ಯಾರ ಕಥೆಯನ್ನು ಯಾರು ಹೇಳುತ್ತಿದ್ದಾರೆ, ಯಾರು ಯಾರನ್ನು ಪ್ರತಿಫಲಿಸುತ್ತಿದ್ದಾರೆ ಎಂಬ ಪ್ರಶ್ನೆಗಳ ಮುಖಾಂತರ ಸಂಕೀರ್ಣವಾಗುತ್ತ ಹೋಗುತ್ತದೆ. ಮನೆಬಿಟ್ಟು ಓಡಿಹೋದ ಸಣ್ಣಪ್ಪನು ಬಾವಾಜಿಯಾಗಿ ಬರಬಹುದೆನ್ನುವುದು ಕಥೆಗೊಂದು ಹೊಸ ಸಾಧ್ಯತೆಯನ್ನು ಕೊಡುತ್ತದೆ. ಸುಬ್ರಾಯನ ಕಥನಕ್ಕೆ ಪರಕಾಯಪ್ರವೇಶವೆಂದು ಕರೆದಿರುವುದು ಧ್ವನಿಪೂರ್ಣವಾಗಿದೆ. ಈ ಕಥೆಯ ನೇಯ್ಗೆಯಲ್ಲಿ ವಾಸ್ತವ, ಕಲ್ಪನೆ, ಒಬ್ಬರು ಇನ್ನೊಬ್ಬರ ಕಥೆಯಾಗುವುದು ಮತ್ತು ಬಹುಮುಖ್ಯವಾಗಿ ಅದನ್ನು ನಂಬುವುದು, ಬಹುಕಲಾತ್ಮಕವಾಗಿ ಆದರೆ ಸರಳವಾಗಿ ಸಾಧ್ಯವಾಗಿದೆ.

‘ನಮ್ಮೆಲ್ಲರ ಸುಂದರಿ’ ಕಥೆ ಆರಂಭವಾಗುವುದೇ ಸುಂದರಿಯೆಂಬ ಹುಡುಗಿ ಒಂದು ನಸುಕಿನಲ್ಲಿ ಹಾಸಿಗೆಯಿಂದ ಅದೃಶ್ಯವಾಗುವುದರಿಂದ. ಈ ಘಟನೆಯ ವಾಸ್ತವವನ್ನು ಅರಿಯದೇ ಇದ್ದರೂ ಅದನ್ನು ಅರ್ಥಮಾಡಿಕೊಳ್ಳಲೋಸುಗ ಜನರು ಕಲ್ಪಿಸಿದ ಕಥೆ ಬೆಳೆಯುತ್ತ ಹೋಗುತ್ತದೆ. ಈ ಕಣ್ಮರೆಗೆ ನಡುವೆ ‘ಸಾವಿನ ವಾಸನೆ’ಯೂ (ಸಂಜ್ಞೆಯಾಗಷ್ಟೇ ಅಲ್ಲ, ಅಕ್ಷರಶಃ ಕೂಡ) ಬಡಿಯುತ್ತದೆ. ಅದರಿಂದಾಗಿ ಯಾವ ತಪ್ಪೂ ಕ್ಷಮಿಸಲು ಅಸಾಧ್ಯವಲ್ಲ, ಜೀವಕ್ಕಿಂತ ಯಾವುದೂ ಮಿಗಿಲಲ್ಲ ಎಂಬ ಭಾವನೆಯು ಪ್ರಾರ್ಥನೆಯಾಗಿ ಹುಟ್ಟಲು ಕಾರಣವಾಗುತ್ತದೆ. ಆ ಮೂವರು ಪೋಕರಿಗಳು ಬಂದು ಕೀಟಲೆ ಎಬ್ಬಿಸಲು ನೋಡುವ ಸನ್ನಿವೇಶ, ಅವರನ್ನು ಎದುರಿಸಿದ ನರ್ಮದೆಯ ಸಾತ್ವಿಕ ಸಿಟ್ಟು ಮತ್ತು ಊರಿನ ಜನರು ಸುಂದರಿಯ ಸಲುವಾಗಿ ಒಳಗೊಳಗೇ ಮಾಡಿದ ಪ್ರಾರ್ಥನೆ – ಇವೆಲ್ಲ ವಾಸ್ತವಕ್ಕಿರುವ ಬೇರೆ ಬೇರೆ ರೀತಿಯ ಅರ್ಥಸಾಧ್ಯತೆಗಳನ್ನು ಪರಿಶೀಲಿಸುತ್ತವೆ. ಈ ಹೊತ್ತಿನಲ್ಲಿ ಸುಂದರಿ ಏನಾದಳೆಂಬುದು ಯಾರಿಗೂ ಗೊತ್ತಿಲ್ಲ. ಅವಳು ಅದೃಶ್ಯವಾದ ನಂತರದ ಅವಕಾಶದಲ್ಲಿ ಜನ ನಾನಾ ಸಾಧ್ಯತೆಗಳನ್ನು ಪರಿಶೀಲಿಸಿ ನೋಡುತ್ತಾರೆ. ಯಾವ ಅತಿಯೂ ಅತಿಯೆಂದು ಅನಿಸದಂತೆ ಅವರ ಮನಸ್ಸು ಸಿದ್ಧವಾದಾಗ ಸುಂದರಿ ಮರಳಿ ಬರುತ್ತಾಳೆ.

‘ಈಗ ನನ್ನನ್ನೇ ತೆಗೆದುಕೋ’ ಅನ್ನುವುದು ಮಾತಿನ ವಾಡಿಕೆ; ಅಪರೋಕ್ಷವಾಗಿ ತನ್ನ ಬಗ್ಗೆ ಮಾತನಾಡುವ ರೀತಿ; ಒಂದು ರೀತಿಯ ಆಪ್ತ ಸಂವಾದ, ನಿವೇದನೆಯ ಶೈಲಿ; ಮತ್ತು ಮುಖ್ಯವಾಗಿ ತನ್ನದೇ ಉದಾಹರಣೆಯ ಮೂಲಕ ವಿಸ್ತಾರ ಸಮಾಜಕ್ಕೆ ಸಂಬಂಧ ಕಲ್ಪಿಸುವ ರೀತಿ. ಈ ಕತೆಯಲ್ಲಿ ಇದೆಲ್ಲವೂ ಜರುಗುತ್ತದೆ. ಶ್ರೀಧರನ ಮನೆಗೆ ಬಂದು ಇಳಿದ ರಾಮಚಂದ್ರ ಯಾರಾದರೂ ಆಗಬಹುದಾಗಿತ್ತೆನ್ನುವುದನ್ನು ಸೂಚಿಸಲೆಂಬಂತೆ ಅವನ ಗುರುತು ಉದ್ದೇಶಪೂರ್ವಕವಾಗಿಯೇ ಅಸ್ಪಷ್ಟವಾಗಿದೆ. ಅವನು ಹೇಳಿದ ಯಾವ ಬಾಲ್ಯದ ಘಟನೆಯೂ ಶ್ರೀಧರನಿಗೆ ನೆನಪಾಗುತ್ತಿಲ್ಲ. ಆದರೂ ಅವನು ರಾಮಚಂದ್ರನನ್ನು ಮನೆಯೊಳಗೆ ಸೇರಿಸಿಕೊಂಡಿದ್ದಾನೆ. ಏನನ್ನೋ ಮುಚ್ಚಿಡಲೆಂಬಂತೆ ರಾಮಚಂದ್ರ ಅತಿಯಾಗಿ ಮಾತಾಡುತ್ತಾನೆ. ಅವನ ಸೋದರಮಾವ ಗೋಪಾಲಜ್ಜನ ಹಾಗೆ, ಸಾವನ್ನು ಗೆಲ್ಲಲು ಎಡೆಬಿಡದೇ ಮಾತನಾಡುವವನ ಹಾಗೆ ಕಾಣುತ್ತಾನೆ. ಹಾಗೆಯೇ ನಿಧಾನವಾಗಿ ತೆರೆದುಕೊಳ್ಳುತ್ತ ತನಗೆ ಎದುರಾದ ಭೀಕರವಾದ ರೋಗದ ಕುರಿತು ಮಾತನಾಡುತ್ತಾನೆ. ಅಕಾರಣವಾದ ಹಿಂಸೆಯನ್ನು ಪ್ರಶ್ನಿಸುತ್ತಾನೆ. ಪಾಪಪುಣ್ಯಗಳ ಪ್ರಶ್ನೆ, ಶಿಕ್ಷೆ-ಅಪರಾಧಗಳ ಪ್ರಶ್ನೆ ಬರುತ್ತದೆ. ತನ್ನ ಮುಗ್ಧತೆಯ ಸಮಜಾಯಿಶಿಯನ್ನು ಕೊಡುತ್ತ ಊರಿಂದೂರಿಗೆ ಅಲೆವ ರಾಮಚಂದ್ರನ ಚಿತ್ರಣದೊಂದಿಗೆ ಕತೆ ಮುಗಿಯುತ್ತದೆ. ಇಲ್ಲಿಯೂ ರಾಮಚಂದ್ರ ಮನೆಯನ್ನು ತೊರೆದು ಬಂದವನೆನ್ನುವುದನ್ನು ಗಮನಿಸಬೇಕು. ಒಂದು ನಿಷ್ಕಲ್ಮಶ ಸಂಬಂಧದ ಆಸರೆಗಾಗಿ ಅವನು ಹಂಬಲಿಸುತ್ತಿರುವನೇ, ಇದು ಸಾವಿನ ಸನ್ನಿಧಿಯಲ್ಲಲ್ಲದೇ ನಮಗೆ ಕಾಣುವುದು ಶಕ್ಯವಿಲ್ಲವೇ, ಎಂಬಿತ್ಯಾದಿ ಪ್ರಶ್ನೆಗಳನ್ನು ಕತೆಯು ಎದುರಿಸುತ್ತದೆ.

yashwant chittals birthday vivek shanbhag

ಚಿತ್ತಾಲರ ಕೃತಿಗಳು

‘ಪುಟ್ಟನ ಹೆಜ್ಜೆ ಕಾಣೋದಿಲ್ಲಾ’ ಕತೆಯು ನಾಟಕೀಯ ಸನ್ನಿವೇಶಗಳಿಂದ ಕೂಡಿರುವ ಕತೆ. ಆರಂಭದಲ್ಲಿಯೇ ಹೊಸದೊಂದು ಅನುಭವಕ್ಕೆ ಸಜ್ಜುಮಾಡುವ ರೀತಿಯನ್ನು ಈ ಕತೆಯಲ್ಲಿ ಗಮನಿಸಬೇಕು. ನಗರದಿಂದ ಹಳ್ಳಿಗೆ ಬಂದ ನಿರೂಪಕ ತನ್ನ ಕುಟುಂಬಕ್ಕೆ ಆ ದಾರಿ, ಆ ಘಟ್ಟ, ಆ ಗುಡಿ, ಚಾದುಕಾನುಗಳನ್ನು ಪರಿಚಯಿಸುತ್ತಲೇ ತನ್ಮೂಲಕ ಹಳ್ಳಿಯ ಈಗಿನ ಸ್ಥಿತಿಯನ್ನು ವರ್ಣಿಸುತ್ತಾನೆ ಮತ್ತು ಓದುಗರ ಅಪೇಕ್ಷೆಯನ್ನು ಹದಗೊಳಿಸುವ ಕೆಲಸ ಮಾಡುತ್ತಾನೆ. ಕೇರಿಯ ಜನ ಒಬ್ಬೊಬ್ಬರಾಗಿ ಬಂದು ಪರಿಚಯಿಸಿಕೊಳ್ಳುವ ನಾಟಕೀಯ ದೃಶ್ಯದಲ್ಲಿ ನಾಗವೇಣಿಯ ಕಥೆಯ ಹಲವು ನೆಲೆಗಳು ಪರಿಚಯವಾಗುತ್ತವೆ. ನಾಗವೇಣಿ ಏನಾದಳು ಎಂಬ ಪ್ರಶ್ನೆಗೆ ಉತ್ತರ ಕೊಡುವ ಜವಾಬ್ದಾರಿ ನಗರದಿಂದ ಬಂದವನದೇ ಎಂಬ ಧೋರಣೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ಪ್ರಶ್ನಿಸುತ್ತಾರೆ. ನಗರದಲ್ಲಿ ನೆಲೆಸಿದ ಜನ ಮರಳಿ ಬಂದು ಊರನ್ನು ನೋಡುವ ಕ್ರಮ, ಊರವರು ಅವರನ್ನು ನೋಡುವ ಬಗೆ, ಶಹರಕ್ಕೆ ಮರುಳಾದ ನಾಗವೇಣಿ ಮುಂತಾದುವೆಲ್ಲ ಪರಸ್ಪರ ಹೆಣೆದು ಕತೆಯ ಮುಂದಿನ ಘಟ್ಟಕ್ಕೆ ಓದುಗನನ್ನು ಸಿದ್ಧಗೊಳಿಸುತ್ತದೆ. ಈ ಕತೆಯಲ್ಲಿ ವಿವಿಧ ಬಗೆಯ ಕಥನಗಳಿವೆ. ಎಷ್ಟೊಂದು ಜನ ನಾಗವೇಣಿಯ ಕತೆಯನ್ನು ಹೇಳುತ್ತಾರೆ. ಈ ಮುಗ್ಧೆಯ ದುರಂತ ಹಲವರ ಬಾಯಲ್ಲಿ ಕತೆಯಾಗಿ, ಹಾಗಾದುದರಿಂದಲೇ ಹಲವು ಮಗ್ಗಲು ಪಡೆಯುತ್ತದೆ. ಇದು ಈ ಸಂಕಲನದ ಅತ್ಯಂತ ಆಳವಾದ ಕತೆಗಳಲ್ಲಿ ಒಂದು.

ಒತ್ತಡ ತುಂಬಿದ ವಾತಾವರಣದಲ್ಲಿ ಘಟಿಸುವ ‘ಕಾಮಾಕ್ಷಿ ಮಾಡಲೆಳಸಿದ ಅತಿ ದಿಟ್ಟ ಕೆಲಸ’ ಈ ಸಂಕಲನದ ಕತೆಗಳಲ್ಲಿಯೇ ತುಸು ಭಿನ್ನವಾದುದು. ಇಲ್ಲಿ ಹೊರಗಿನ ವಾತಾವರಣದ ಕ್ರೌರ್ಯವೇ ಒಳಜಗತ್ತಿಗೆ ನಿಧಾನ ಹರಿದು ಬಂದಂತೆ ಅನಿಸುತ್ತದೆ. ಒಂದು ಕುಟುಂಬದೊಳಗಿನ ದುರಾಸೆ, ಹಿತಾಸಕ್ತಿಗಳು, ಸಂಬಂಧಗಳು, ಹೆಣ್ಣನ್ನು ನಡೆಸಿಕೊಳ್ಳುವ ರೀತಿ – ಎಲ್ಲವೂ ತಣ್ಣಗಿನ ಕ್ರೌರ್ಯದ ಕತೆಯನ್ನು ಹೇಳುತ್ತವೆ. ಎಲ್ಲದರಿಂದ ರೋಸಿಹೋಗಿ, ಈಗಿನ ಗಂಡನನ್ನು ಬಿಟ್ಟು ಮರುಮದುವೆಯಾಗುವ ದಿಟ್ಟ ನಿರ್ಧಾರ ಕೈಗೊಳ್ಳುವ ಕಾಮಾಕ್ಷಿ ಮದುವೆಯ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದರೆ ನಿರ್ಧಾರ ಇನ್ನೂ ದಿಟ್ಟವಾಗಿ ತೋರಬಹುದಿತ್ತು ಅನಿಸುತ್ತದೆ. ಅಥವಾ, ಎಂಥ ದಿಟ್ಟತನ ತೋರಿಸಿದಾಗಲೂ ಕಾಮಾಕ್ಷಿಗೆ ಮದುವೆಯ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದನ್ನು ಕತೆ ಹೇಳುತ್ತಿದೆಯೇ?

ಅಪವಾದವೊಂದಕ್ಕೆ ಹೆದರಿ ಮನೆ ತೊರೆದು ಹೋಗುವ ಸಹಪಾಠಿಯ ಕತೆ ‘ಕುಂಟನ್ಮನೆ ಬೀರ’. ಅವನು ಹೋದದ್ದೇ ನಾನಾ ಬಗೆಯ ಕತೆಗಳು ಹುಟ್ಟಿಕೊಳ್ಳುತ್ತವೆ. ಒಂದು ಸಂಗತಿಯನ್ನು ಹೀಗೆ ನಾನಾ ರೀತಿಯಾಗಿ, ನಾನಾ ಮಗ್ಗುಲಿನಿಂದ ಕಾಣಿಸುವ ಚಿತ್ತಾಲರ ರೀತಿ ಅವರಿಗೇ ಅನನ್ಯವಾದುದು. ಈ ಸಂಕಲನದ ಎಲ್ಲ ಕತೆಗಳಲ್ಲಿಯೂ ಇದು ಪ್ರಮುಖವಾದ ಕಥನಕ್ರಮವಾಗಿದೆ. ಇಲ್ಲಿ ಕಾಣುವ ಲಘು ಹಾಸ್ಯದಿಂದಾಗಿ, ಹಗುರವಾದ ನಿರೂಪಣೆಯ ದನಿಯಿಂದಾಗಿ ಅವನ ದುರಂತದ ತೀವ್ರತೆ ಹೆಚ್ಚಾಗುತ್ತದೆ. ಹಾಸ್ಯ-ಅಪಹಾಸ್ಯಗಳ ನಡುವಿನ ಬಲು ತೆಳು ಗೆರೆಯ ಮೇಲೆಯೇ ಸಾಗುವ ಅವನ ಜೀವನದ ಬಂಡಿ ಮನಸ್ಸು ಕಲಕುತ್ತದೆ. ಮನೆಬಿಟ್ಟು ಓಡಿ ಹೋದ ಬೀರನ ಕುರಿತು ನಾನಾ ಪಾತ್ರಗಳು ನಾನಾ ಕಥೆಗಳನ್ನು ಹೇಳುತ್ತವೆ. ಗ್ರಹಿಕೆ, ವಾಸ್ತವ, ಬಹುಸತ್ಯಗಳು, ಬಹುಕಥನಗಳು – ಹೀಗೆ ನಿಧಾನವಾಗಿ ಒಂದು ಸಂಕೀರ್ಣ ಜಾಲವು ಈ ಘಟನೆಯ ಸುತ್ತ ಬೆಳೆಯುತ್ತ ಹೋಗುತ್ತದೆ.

ಚಿತ್ತಾಲರ ಬಹುತೇಕ ಕತೆಗಳಲ್ಲಿ ಒಂದು ವಿಲಂಬಿತ ಲಯದ ತಂತ್ರಗಾರಿಕೆಯಿದೆ. ಮುಖ್ಯ ಘಟನೆಗಳನ್ನು, ವಿವರಗಳನ್ನು ಅವರು ತಕ್ಷಣ ಅನಾವರಣಗೊಳಿಸುವುದಿಲ್ಲ. ಇನ್ನೇನು ಎಲ್ಲವನ್ನೂ ಹೇಳುತ್ತಾರೆ ಅನಿಸಿದ ಗಳಿಗೆಯಲ್ಲಿ ಅದಕ್ಕೆ ತಡೆ ಬಂದು ಅದು ಮುಂದಕ್ಕೆ ಹೋಗುತ್ತದೆ. ಅದೇ ರೀತಿ ಗುಟ್ಟುಗಳೂ ಸಹ – ಇನ್ನೇನು ಒಡೆಯುತ್ತದೆನ್ನುವ ಗಳಿಗೆಯಲ್ಲಿ ಏನೋ ಘಟಿಸಿ ಆ ಪ್ರಸಂಗ ಮುಂದೆ ಮುಂದೆ ಹೋಗುತ್ತದೆ. ಹೀಗೆ ಮಾಡುವ ಉದ್ದೇಶ ಕುತೂಹಲ ಕೆರಳಿಸುವುದಲ್ಲ. ಆ ಘಟನೆಗೆ ಓದುಗನನ್ನೂ, ತಮ್ಮ ಪಾತ್ರಗಳನ್ನೂ ಸಿದ್ಧಪಡಿಸುವುದೇ ಆಗಿದೆ. ಇಂಥ ತಂತ್ರಕ್ಕೆ ಮತ್ತು ಕಲೆಗಾರಿಕೆಗೆ ಉದಾಹರಣೆಯಾಗಿ ‘ತುಸು ತಡೆದು ಪ್ರಯತ್ನಿಸಿರಿ’ ಎಂಬ ಕತೆಯನ್ನು ನೋಡಬಹುದು. ಕಥಾನಾಯಕ ಸುನೀಲ ಇಷ್ಟಪಟ್ಟ ಹುಡುಗಿ ಲಲಿತಾ ತನ್ನ ದುರಂತಮಯ ಭೂತಕಾಲವನ್ನು ದಿಟ್ಟತನದಿಂದ ಅವನ ಜೊತೆ ಹಂಚಿಕೊಳ್ಳಲು ಬಯಸಿ, ಅದನ್ನು ಅವನಿಗೆ ತಿಳಿಸಲು ಹೂಡಿದ ಯೋಜನೆಯು ಕಥಾತಂತ್ರವಾಗಿಯೂ, ಅವಳ ದುರಂತವನ್ನು ಸ್ವೀಕರಿಸಲು ಪಾತ್ರಗಳನ್ನು ಮತ್ತು ತನ್ಮೂಲಕ ಓದುಗರ ಮನಸ್ಸನ್ನು ಸಿದ್ಧಗೊಳಿಸಲು ಬಳಸಿದ ಉಪಾಯವಾಗಿಯೂ ಇದೆ. ಇಷ್ಟು ಮಾತ್ರವಲ್ಲ, ಈ ತಂತ್ರದಿಂದ ಅವರು ಕಥೆಯ ಓಟವನ್ನು ಸಹ ನಿಯಂತ್ರಿಸುತ್ತಾರೆ. ನಿಧಾನಗತಿಯಲ್ಲಿ ಸಾಗುತ್ತ ತಾವು ಆರಿಸಿದ್ದನ್ನು ಓದುಗನಿಗೆ ಕೊಡುತ್ತ ಹೋಗುತ್ತಾರೆ. ಹಲವಾರು ಸಾಧ್ಯತೆಗಳನ್ನು ಎದುರಿಗೆ ತಂದು ಅವುಗಳನ್ನು ಒಂದೊಂದಾಗಿ ಪರೀಕ್ಷಿಸುತ್ತಾರೆ. ಹೀಗಲ್ಲದೇ ಬೇರೆ ಹೇಗೂ ಇರಲಿಕ್ಕೆ ಸಾಧ್ಯವಿಲ್ಲ ಎಂಬ ಭಾವನೆ ಬರುವಂತೆ ಕತೆ ಮುಕ್ತಾಯ ಸ್ಥಿತಿಯನ್ನು ತಲುಪುತ್ತದೆ.

yashwant chittla‘s birthday vivek shanbhag

ಚಿತ್ತಾಲರ ಕೃತಿಗಳು

ಈ ಸಂಕಲನದ ವಿಶೇಷವೆಂದರೆ ಇಲ್ಲಿಯ ಐದು ಕತೆಗಳಲ್ಲಿ ಒಂದಲ್ಲ ಒಂದು ಪಾತ್ರವು ಮನೆ ಬಿಟ್ಟು ಓಡಿ ಹೋಗುತ್ತದೆ. ಹೀಗೆ ಕಣ್ಮರೆಯಾಗುವುದರ ಮೂಲಕ ಸೃಷ್ಟಿಯಾಗುವ ಅವಕಾಶದಲ್ಲಿ (Space) ಹೊಸ ಸಾಧ್ಯತೆಗಳ ಪರಿಶೀಲನೆಯಾಗುತ್ತದೆ. ಸಣ್ಣಪ್ಪ ಓಡಿಹೋಗಿದ್ದರಿಂದ ಹುಟ್ಟಿದ ಅವಕಾಶದಲ್ಲಿ ಸುಬ್ರಾಯನ ಕಥೆಯ ಪರಿಶೀಲನೆ ನಡೆದಿದೆ. ಅದೇ ರೀತಿ ಸುಂದರಿ ಒಂದು ನಸುಕಿನಲ್ಲಿ ಅದೃಶ್ಯವಾಗಿ, ಊರಿನ ಜನರ ಮನಸ್ಸಿನಲ್ಲಿ ಸದ್ದಿರದೇ ನಡೆದ ಪರಿವರ್ತನೆಗೆ ಕಾರಣವಾಗಿದ್ದಾಳೆ. ಭೀಕರವಾದ ರೋಗಕ್ಕೆ ತುತ್ತಾದ ರಾಮಚಂದ್ರ ಕೂಡ ಮನೆ ತೊರೆದು ಬಂದವನೇ. ಬೀರನು ಕಣ್ಮರೆಯಾದ ನಂತರ ಅವನ ಸುತ್ತ ಹಲವು ಕಥನಗಳು ಬಿಚ್ಚಿಕೊಳ್ಳುತ್ತವೆ. ನಾಗವೇಣಿ ಶಹರದ ಸೆಳೆತಕ್ಕೆ ಸಿಕ್ಕು ಮರೆಯಾದವಳು. ವಾಸ್ತವ ಮತ್ತು ಕಥನದ ನಡುವಿನ ಇಂಥ ವ್ಯಕ್ತಾತೀತ ಅವಕಾಶವನ್ನು ಅವರು ಅತ್ಯಂತ ನಿಪುಣತೆಯಿಂದ, ಕಲಾತ್ಮಕತೆಯಿಂದ ಉಪಯೋಗಿಸಿಕೊಂಡಿದ್ದಾರೆ.

ಒಂದಕ್ಕೊಂದು ಸಂಬಂಧವಿರುವಂತೆ ತೋರುವ, ಎಲ್ಲವೂ ಒಂದೇ ಕತೆಯ ಭಾಗವೇನೋ ಎಂಬಂತೆ ಅನಿಸುವ ಇಲ್ಲಿಯ ವಿವಿಧ ಕತೆಗಳು ಚಿತ್ತಾಲರ ಈವರೆಗಿನ ಜಗತ್ತಿಗೆ ಹೊಸದೇನೋ ಸೇರಿದ ಭಾವನೆಯನ್ನು ಕೊಡುತ್ತವೆ. ಇದು ಐದು ದಶಕಗಳ ಕಾಲ ಬರೆದೂ ದಣಿಯದ ಕನ್ನಡದ ಪ್ರಮುಖ ಲೇಖಕರ ಬಹುಮುಖ್ಯ ಸಾಧನೆ. ಕಥನಕ್ರಮದ ಬಗ್ಗೆ, ಕಥೆ-ಕಥೆಗಾರ-ಓದುಗ ಸಂಬಂಧದ ಬಗ್ಗೆ ಅವರಷ್ಟು ಹಚ್ಚಿಕೊಂಡ ಇನ್ನೊಬ್ಬ ಲೇಖಕರಿಲ್ಲ ಅನ್ನಬಹುದು.

ಚಿತ್ತಾಲರ ಕಥಾಸಾಹಿತ್ಯದುದ್ದಕ್ಕೂ ಹರಡಿಕೊಂಡಿರುವ ಕಾಳಜಿಗಳು ಹಲವು. ಅವರ ಲೋಕದ ಅಮಾಯಕರಿಗೆ ತಮ್ಮ ಮುಗ್ಧತೆಯನ್ನು ಸಾಬೀತುಪಡಿಸುವ ಅನಿವಾರ್ಯತೆಯಿದೆ. ಯಾರದೋ ಪಾಪಕ್ಕೆ ಅವರು ಬೆಲೆ ತೆರುತ್ತಾರೆ. ನಗರ ಜೀವನದ ಪಾತ್ರಗಳಲ್ಲಿ ಒಂದು ಬಗೆಯ ಏಕಾಂಗಿತನವಿದೆ. ಹನೇಹಳ್ಳಿಯ ಜನರಲ್ಲಿ ಸಮುದಾಯ ಜೀವಿತದ ಸಂತೋಷಗಳಿವೆ. ನಿಸರ್ಗ ಸಹಜ ಅಭಿವ್ಯಕ್ತಿಯನ್ನು ತಡೆವ ಕ್ರೂರಿಗಳ ವಿರುದ್ಧ ಬಂಡಾಯವಿದೆ. ಸೂಕ್ಷ್ಮಗ್ರಾಹಿಯಾದ ಚಿತ್ತಾಲರು ದಟ್ಟ ವಿವರಗಳ ಮೂಲಕ ಕಟ್ಟಿಕೊಟ್ಟ ಪ್ರಪಂಚ ಸರಿಸಾಟಿಯಿಲ್ಲದ್ದು. ಒಳಿತು ಕೆಡುಕು, ಸ್ಪರ್ಧೆ ತಳಮಳ, ಪ್ರಾರ್ಥನೆಗಳ ಜಗತ್ತು ಇದು. ಈ ಕತೆಗಳ ನಿರೂಪಕನ ದನಿಯಲ್ಲಿ ಜೀವನವನ್ನು ಆಳವಾಗಿ ಕಂಡವನ ಪ್ರಬುದ್ಧತೆಯಿದೆ. ಜೀವನದ ತಿಳವಳಿಕೆಯ ಹಿನ್ನೆಲೆಯಲ್ಲಿ ತಪ್ಪುಗಳನ್ನು ಕ್ಷಮಿಸುವ ಉದಾತ್ತತೆಯಿದೆ. ಎಳೆಯರ ನಿಷ್ಕಲ್ಮಶ ಪ್ರೇಮದ ಬಗ್ಗೆ ಕಳಕಳಿಯಿದೆ. ಮರಳಿ ಹನೇಹಳ್ಳಿಗೆ ಬಂದ ಕಡೆಗಳಲ್ಲೆಲ್ಲ ಈ ನೆಲದ ಬಗ್ಗೆ ಅಗಾಧ ಪ್ರೀತಿ ಮತ್ತು ಕಾಳಜಿಯಿದೆ.

ಈ ಪ್ರಸ್ತಾವನೆಯ ನೆಪದಲ್ಲಿ ಅವರ ಎಲ್ಲ ಕತೆಗಳನ್ನು ಮತ್ತೊಮ್ಮೆ ಓದುವ ಅವಕಾಶ ನನಗೆ ಒದಗಿತು. ಇವುಗಳ ಮೂಲಕ ಅವರು ಸೃಷ್ಟಿಸಿಕೊಟ್ಟ ಕಥಾಜಗತ್ತಿನ ಶ್ರೀಮಂತಿಕೆಯಿಂದ ನಾನು ವಿಸ್ಮಿತನಾದೆ. ಅಲ್ಲಿ ಏನಿಲ್ಲ ಅನ್ನುವಂತಿಲ್ಲ. ಇಂಥ ವೈವಿಧ್ಯತೆ, ಪ್ರಯೋಗಶೀಲತೆ, ಬದ್ಧತೆ, ಬದುಕನ್ನು ಕುರಿತ ಗಾಢವಾದ ಪ್ರೀತಿಯನ್ನು ಕಂಡು ಅವರ ಬಗ್ಗೆ ನನಗಿರುವ ಗೌರವ ಇಮ್ಮಡಿಯಾಯಿತು. ಮೊಟ್ಟಮೊದಲ ಬಾರಿ ‘ಆಟ’ ಸಂಕಲನವನ್ನು ಓದಿದಾಗ ನನ್ನಲ್ಲಿ ಹುಟ್ಟಿದ ಉತ್ಸಾಹವೇ ಈಗಲೂ ಉಂಟಾಯಿತು. ಆಗ ನನಗೆ ದೊರೆತ ಉತ್ತರ ಕನ್ನಡಕ್ಕೂ ಈಗ ಮತ್ತೆ ಅದೇ ಕತೆಗಳನ್ನು ಓದಿದಾಗ ದೊರೆತ ಉತ್ತರ ಕನ್ನಡಕ್ಕೂ ವ್ಯತ್ಯಾಸವಿತ್ತು. ಬದುಕಿನ ವಿವಿಧ ಘಟ್ಟಗಳಲ್ಲಿ ಹೀಗೆ ಮತ್ತೆ ಮತ್ತೆ ಹೊಸತಾಗಿ ಒದಗಿ ಬರುವುದು, ಹೊಸ ಗುಂಗನ್ನು ಹಿಡಿಸುವುದು ಬಹಳ ಶಕ್ತಿಶಾಲಿಯಾದ, ವಿಸ್ತಾರ ಹರಹು ಇರುವ ಬರಹಕ್ಕೆ ಮಾತ್ರ ಸಾಧ್ಯ. ಇಂಥ ಗುಂಗಿನಲ್ಲೇ ಇಲ್ಲಿಯ ಮಾತುಗಳನ್ನು ಆಡಿದ್ದೇನೆ ಮತ್ತು ಆ ಮೂಲಕ ಅಪರೂಪದ ಈ ಹಿರಿಯ ಕತೆಗಾರರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

(ಪ್ರಿಸಂ ಬುಕ್ಸ್​ ಪ್ರಕಟಿಸಿದ ಚಿತ್ತಾಲರ ‘ಪುಟ್ಟನ ಹೆಜ್ಜೆ ಕಾಣೋದಿಲ್ಲ’ ಕಥಾ ಸಂಕಲನಕ್ಕೆ ಬರೆದ ಮುನ್ನುಡಿ) *

ಚಿತ್ತಾಲರ ಫೋಟೋ ಸೌಜನ್ಯ : ಎ. ಎನ್. ಮುಕುಂದ

ಚಿತ್ತಾಲರ ಪುಸ್ತಕಗಳಿಗಾಗಿ ಸಂಪರ್ಕಿಸಿ : ಪ್ರಿಸಂ ಬುಕ್ಸ್ 

ಇದನ್ನೂ ಓದಿ : New Play : ಅಚ್ಚಿಗೂ ಮೊದಲು ; ‘ಮನಸಲ್ಲಿರೋ ಮನೆ ಹುಡುಕಬೇಡಿ ವಿಳಾಸ ಹಿಡಿದು ಹುಡುಕಿ’

Follow us on

Related Stories

Most Read Stories

Click on your DTH Provider to Add TV9 Kannada