ನ್ಯಾಮತಿ SBI ಬ್ಯಾಂಕ್ ದರೋಡೆ: ಪಾಳು ಬಾವಿಯಲ್ಲಿ 17 ಕೆಜಿ ಚಿನ್ನ ಬಚ್ಚಿಟ್ಟಿದ್ದ ಗ್ಯಾಂಗ್ ಅಂದರ್
ದಾವಣಗೆರೆಯ ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬರೋಬ್ಬರಿ ಆರು ತಿಂಗಳ ಬಳಿಕ ಚಿನ್ನಾಭರಣ ಸಹಿತ ಅರೋಪಿಗಳ ಬಂಧನವಾಗಿದೆ. ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ವಿಚಾರ ಬಯಲಾಗಿದ್ದು, ಚಿನ್ನ ಮುಚ್ಚಿಟ್ಟಿದ್ದು, ದರೋಡೆಗೆ ಕಾರಣ, ಸಂಚು ಎಲ್ಲವನ್ನೂ ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ದಾವಣಗೆರೆ, (ಮಾರ್ಚ್ 31): ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ (Nyamathi SBI Bank Robbery) ಆರು ತಿಂಗಳ ಬಳಿಕ ಚಿನ್ನಾಭರಣ (Gold) ಸಹಿತ ಅರೋಪಿಗಳ ಬಂಧನವಾಗಿದೆ. ಪ್ರಮುಖ ಆರೋಪಿಗಳಾದ ತಮಿಳುನಾಡು ಮೂಲದ ಸಹೋದರರಾದ ಅಜಯ್ ಹಾಗೂ ವಿಜಯ್ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೂರ್ವ ವಲಯ ಐಜಿಪಿ ಡಾ.B.R.ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. 2024ರ ಅಕ್ಟೋಬರ್ 28ರಂದು ನ್ಯಾಮತಿ ಎಸ್ಬಿಐ ಬ್ಯಾಂಕ್ನಲ್ಲಿ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಆರೋಪಿಗಳಿ ದರೋಡೆಗೆ ಮೊದಲು, ದರೋಡೆಯ ನಂತರ ದರೋಡೆಕೋರರು ಗಡಿ ಚೌಡಮ್ಮನ ಅಷ್ಟಧಿಗ್ಬಂಧನ ಪೂಜೆ ಮಾಡಿದ್ದರು. ಅಲ್ಲದೇ ದರೋಡೆಯ ಮಾಹಿತಿಯನ್ನು ಕುಟುಂಭಸ್ಥರ ಜೊತೆಯೂ ಹಂಚಿಕೊಂಡಿರಲಿಲ್ಲ. ಪೊಲೀಸರು ಆರೋಪಿಗಳನ್ನು ಟೆಕ್ನಿಕಲ್ ಎವಿಡೆನ್ಸ್ ಮೂಲಕ ಬಂಧಿಸಿದ್ದಾರೆ.
ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ವಿಜಯ್ ಕುಮಾರ್ ನ್ಯಾಮತಿಯಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಬ್ಯಾಂಕ್‍ನಲ್ಲಿ ಲೋನ್ ಪಡೆಯಲು ಎರಡು ಬಾರಿ ಅರ್ಜಿ ಹಾಕಿದ್ದ, ಈ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ರೋಸಿ ಹೋಗಿದ್ದ. ಇದೇ ಕಾರಣಕ್ಕೆ ಬ್ಯಾಂಕ್ ದರೋಡೆಗೆ ಹಿಂದಿ ವೆಬ್ ಸೀರಿಸ್ ನೋಡಿ ದರೋಡೆಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಇನ್ನು ಆರೋಪಿಗಳು ಮೊಬೈಲ್, ವಾಹನ ಬಳಸದೇ, ಯಾವ ಸಾಕ್ಷಿಯನ್ನೂ ಬಿಡದೆ ದರೋಡೆ ಮಾಡಿದ್ದರು. ದರೋಡೆ ಮಾಡಿದ 17 ಕೆಜಿ ಚಿನ್ನವನ್ನು ತಮಿಳುನಾಡಿನ ಮಧುರೈನಲ್ಲಿರುವ ತೋಟದ ಮನೆಯ ಪಾಳು ಬಿದ್ದ ಬಾವಿಯಲ್ಲಿ ಇಟ್ಟಿದ್ದರು.
ಇದನ್ನೂ ಓದಿ: ಅಬ್ಬಬ್ಬಾ ಚಿನ್ನವೋ ಚಿನ್ನ…ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ: ವಿಡಿಯೋ ನೋಡಿ
ಬೇಕರಿ ಮಾಲೀಕನಿಂದಲೇ ಬ್ಯಾಂಕ್ ಕಳ್ಳತನ
ಇನ್ನು ಈ ಬಗ್ಗೆ ಪೂರ್ವ ವಲಯ ಐಜಿಪಿ ಡಾ. ಬಿಆರ್ ರವಿಕಾಂತೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಮುಖ ಆರೋಪಿಗಳಾದ ತಮಿಳುನಾಡು ಮೂಲದ ಅಜಯ್, ವಿಜಯ್ ಸೇರಿದಂತೆ ಆರು ಆರೋಪಿಗಳ ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಬ್ಯಾಂಕ್‌ನಲ್ಲಿ 509 ಗ್ರಾಹಕರು ಅಡವಿಟ್ಟಿದ್ದ 17 ಕೆಜಿ 750 ಗ್ರಾಂ ಚಿನ್ನವನ್ನು ಅ.28ರಂದು ಕದ್ದಿದ್ದರು. ಮೊದಲು ನಮಗೆ ಅಂತಾರಾಜ್ಯ ಕಳ್ಳರ ಬಗ್ಗೆ ಅನುಮಾನ ಇತ್ತು. ಭದ್ರಾವತಿ ಬ್ಯಾಂಕ್ನಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದಕ್ಕೆ ಸಂಶಯ ಬಂದಿತ್ತು. ಉತ್ತರಪ್ರದೇಶ ಮೂಲದ ಕಾಕ್ರಾಳ್ ಗ್ಯಾಂಗ್ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದರೆ ನ್ಯಾಮತಿಯಲ್ಲಿ ವಿಐಪಿ ಬೇಕರಿ ಮಾಲೀಕ ಕಳ್ಳತನ ಮಾಡಿದ್ದು ಪತ್ತೆಯಾಗಿದೆ. ಬೇಕರಿ ಅಂಗಡಿ ಮಾಲೀಕ ವಿಜಯ್‌ಕುಮಾರ್ ಪ್ರಕರಣದ ಮಾಸ್ಟರ್ಮೈಂಡ್.ತಮಿಳುನಾಡು ಮೂಲದ ವಿಜಯ್ ಕುಮಾರ್, ಸೋದರ ಅಜಯ್ ಈ ಕೃತ್ಯ ಎಸಗಿದ್ದಾರೆ ಎಂದು ವಿವರಿಸಿದರು.
ಸಾಲ ಸಿಗದಿದ್ದಕ್ಕೆ ಬ್ಯಾಂಕ್ ದರೋಡೆ
ವಿಜಯ್‌ಕುಮಾರ್(30), ಸೋದರ ಅಜಯ್‌ಕುಮಾರ್(28), ಬೆಳಗುತ್ತಿಯ ಅಭಿಷೇಕ(23), ಸುರಹೊನ್ನೆ ಗ್ರಾಮದವರಾದ ಚಂದ್ರ(23), ಮಂಜುನಾಥ(32), ಪರಮಾನಂದ(30)ನನ್ನು ಬಂಧಿಸಲಾಗಿದೆ. ಕಳ್ಳತನಕ್ಕೂ ಮೊದಲು ಬ್ಯಾಂಕ್‌ನಲ್ಲಿ ಸಾಲಕ್ಕೆ ಪಡೆಯಲು ವಿಜಯ್ ಪ್ರಯತ್ನಿಸಿದ್ದಾನೆ. ಆದ್ರೆ, ಸಾಲ ಸಿಗದಿದ್ದಾಗ ಬ್ಯಾಂಕ್ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಯೂಟೂಬ್ನಲ್ಲಿ ಬ್ಯಾಂಕ್ ಕಳ್ಳತನದ ವಿಡಿಯೋ ವೀಕ್ಷಿಸಿ ತನ್ನ ಸಹೋದರ ಅಜಯ್ ಜೊತೆ ಸೇರಿ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿದ್ದ ಎಂದು ಹೇಳಿದರು.
ಚಿನ್ನವನ್ನು ಬಾವಿಯಲ್ಲಿ ಹೂತಿಟ್ಟಿದ್ದ ಗ್ಯಾಂಗ್
ಇನ್ನು ಈ ಬಗ್ಗೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ಟಿವಿ9 ಜೊತೆ ಮಾತನಾಡಿ. 6 ಜನರನ್ನು ಬಂಧಿಸಿ 17 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದೇವೆ. ದರೋಡೆ ಸಂಚು ರೂಪಿಸಿದ್ದು ವಿಜಯ್, ಅಜಯ್ ಸೋದರರು. 2 ತಿಂಗಳು ಪ್ಲ್ಯಾನ್ ಮಾಡಿ ಸರಣಿ ರಜೆ ಇದ್ದ ಹಿನ್ನೆಲೆ 2024ರ ಅ.28ರಂದು ಎಸ್‌ಬಿಐ ಶಾಖೆಯಲ್ಲಿ ದರೋಡೆ ಮಾಡಿದ್ದಾರೆ. ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ದರೋಡೆಗೆ ಸಂಚುರೂಪಿಸಿದ್ದು, ಕದ್ದ ಚಿನ್ನಾಭರಣ ಬಚ್ಚಿಡಲು 1 ಬಾಕ್ಸ್ ಖರೀದಿಸಿದ್ದರು. ಬಳಿಕ ಆರೋಪಿಗಳು ಬಾಕ್ಸ್ನಲ್ಲಿ ಚಿನ್ನಾಭರಣವಿಟ್ಟು ತಮ್ಮ ಸ್ವಗ್ರಾಮದ ಬತ್ತಿದ್ದ ಬಾವಿಯಲ್ಲಿ ಹೂತಿಟ್ಟಿದ್ದು, 1 ವರ್ಷದವರೆಗೆ ಚಿನ್ನ ಹೊರತೆಗೆಯದಿರಲು ನಿರ್ಧರಿಸಿದ್ದರು ಎಂದು ಮಾಹಿತಿ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Mon, 31 March 25