New Play : ಅಚ್ಚಿಗೂ ಮೊದಲು ; ‘ಮನಸಲ್ಲಿರೋ ಮನೆ ಹುಡುಕಬೇಡಿ ವಿಳಾಸ ಹಿಡಿದು ಹುಡುಕಿ’

Vivek Shanbhag : ‘ಕಷ್ಟದ ಕಾಲವಿದು - ಒಂದು ಕಡೆಗೆ ನೀನು ಇಂಥ ನೆಲೆಗೆ ಸೇರಿದವನೆಂದು ಘೋಷಿಸಿಕೋ ಎಂದು ಒತ್ತಾಯಿಸುವ ಜನನಾಯಕರು, ಇನ್ನೊಂದೆಡೆ ನಕಾಶೆಯಲ್ಲಿರುವ ನೆಲವನ್ನೇ ಇಲ್ಲದ ಹಾಗೆ ಮಾಡುವ ಭೂಗಳ್ಳರು, ಇವತ್ತು ಪರಸ್ಪರ ಕೈಕೂಡಿಸಿದ್ದಾರೆ. ಇವರಿಬ್ಬರ ಭೂಗತ ಸಂಬಂಧದ ನೆಲೆಗಟ್ಟಿನ ಮೇಲೆ ಇಂದಿನ ಮಹಾನಗರಗಳು ಮೇಲೆದ್ದು ನಿಂತು ನಮ್ಮನ್ನು ಕೈಬೀಸಿ ಕರೆಯುತ್ತಿವೆ.’

New Play : ಅಚ್ಚಿಗೂ ಮೊದಲು ; ‘ಮನಸಲ್ಲಿರೋ ಮನೆ ಹುಡುಕಬೇಡಿ ವಿಳಾಸ ಹಿಡಿದು ಹುಡುಕಿ’
ಹಿರಿಯ ಕಥೆಗಾರರಾದ ವಿವೇಕ ಶಾನಭಾಗ
Follow us
ಶ್ರೀದೇವಿ ಕಳಸದ
|

Updated on:Aug 01, 2021 | 1:14 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

* ಕೃತಿ : ಇಲ್ಲಿರುವುದು ಸುಮ್ಮನೆ (ನಾಟಕ) ಲೇಖಕರು : ವಿವೇಕ ಶಾನಭಾಗ ಪುಟ : 72 ಬೆಲೆ : ರೂ. 145 ಮುಖಪುಟ ವಿನ್ಯಾಸ : ಎಸ್. ವಿಷ್ಣುಕುಮಾರ್ ಪ್ರಕಾಶನ : ಅಕ್ಷರ ಪ್ರಕಾಶನ, ಹೆಗ್ಗೋಡು *

ಭಾರತದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ವಿವೇಕ ಶಾನಭಾಗ ಅವರು ಮೂಲತಃ ಉತ್ತರ ಕನ್ನಡದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ನಾಟಕ, ಕಥೆ, ಕಾದಂಬರಿಗಳು ಓದುಗರ ಆಂತರ್ಯದೊಳಗೆ ‘ಜರುಗಲು’ ಅವಕಾಶ ಕಲ್ಪಿಸಿಕೊಡುವ ಮೂಲಕ ಸೂಕ್ಷ್ಮತೆ ಕಂಡುಕೊಳ್ಳುತ್ತವೆ. 2015ರಲ್ಲಿ ಪ್ರಕಟವಾದ ಘಾಚರ್ ಘೋಚರ್ ಜಗತ್ತಿನ ಹದಿನೆಂಟು ಭಾಷೆಗಳಿಗೆ ಅನುವಾದಗೊಂಡು ಜಾಗತಿಕ ಸಾಹಿತ್ಯ ವಲಯದಲ್ಲಿ ಇನ್ನೂ ಚರ್ಚೆಯಾಗುತ್ತಲೇ ಇದೆ. ಈ ಕೃತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪುರಸ್ಕಾರಗಳು ಲಭಿಸಿವೆ. ಇತ್ತೀಚೆಗೆ ಇವರ ಒಂದು ಬದಿ ಕಡಲು ಕಾದಂಬರಿಯು ತೆಲುಗಿಗೆ ಅನುವಾದಗೊಂಡಿದೆ. ಕೆಲದಿನಗಳಲ್ಲೇ ಸಕೀನಾಳ ಮುತ್ತು ಕಾದಂಬರಿಪ್ರಿಯರ ಕೈಸೇರಲಿದೆ. ಈಗಿಲ್ಲಿ ಇವರ ಇಲ್ಲಿರುವುದು ಸುಮ್ಮನೆ ಹೊಸ ನಾಟಕದ ಆಯ್ದ ಭಾಗ ನಿಮ್ಮ ಓದಿಗೆ.

*

ಈ ನಾಟಕವನ್ನು ಬೆಂಗಳೂರಿನ ಲೋಕಚರಿತ ತಂಡಕ್ಕಾಗಿ ಎರಡು ವರ್ಷಗಳ ಹಿಂದೆ ಬರೆದೆ. ದುರದೃಷ್ಟವಶಾತ್ ಕೋವಿಡ್ ಕಾರಣದಿಂದ ಇದನ್ನು ಪ್ರದರ್ಶಿಸುವ ಅವಕಾಶ ಒದಗಿ ಬರಲಿಲ್ಲ. ಪ್ರದರ್ಶನದ  ನಂತರ ಪ್ರಕಟಿಸುವ ಇರಾದೆಯಿದ್ದರೂ ಅದು ಯಾವಾಗ ಕೈಗೂಡೀತೆಂಬ ಭರವಸೆಯಿಲ್ಲದ್ದರಿಂದ ನಾಟಕವನ್ನು ಈಗ ಓದುಗರ ಅವಗಾಹನೆಗೆ ಇಡುತ್ತಿದ್ದೇನೆ. ವಿವೇಕ ಶಾನಭಾಗ * ‘ಕಷ್ಟದ ಕಾಲವಿದು – ಒಂದು ಕಡೆಗೆ ನೀನು ಇಂಥ ನೆಲೆಗೆ ಸೇರಿದವನೆಂದು ಘೋಷಿಸಿಕೋ ಎಂದು ಒತ್ತಾಯಿಸುವ ಜನನಾಯಕರು, ಇನ್ನೊಂದೆಡೆ ನಕಾಶೆಯಲ್ಲಿರುವ ನೆಲವನ್ನೇ ಇಲ್ಲದ ಹಾಗೆ ಮಾಡುವ ಭೂಗಳ್ಳರು, ಇವತ್ತು ಪರಸ್ಪರ ಕೈಕೂಡಿಸಿದ್ದಾರೆ. ಇವರಿಬ್ಬರ ಭೂಗತ ಸಂಬಂಧದ ನೆಲೆಗಟ್ಟಿನ ಮೇಲೆ ಇಂದಿನ ಮಹಾನಗರಗಳು ಮೇಲೆದ್ದು ನಿಂತು ನಮ್ಮನ್ನು ಕೈಬೀಸಿ ಕರೆಯುತ್ತಿವೆ. ಆ ಕರೆಗೆ ಓಗೊಟ್ಟ ನಾಗರಿಕ ಸಮಾಜದ ಸುಪ್ತಪ್ರಜ್ಞೆಯೊಳಕ್ಕೆ ಸ್ವಂತದ ನೆಲ ಮತ್ತು ನೆಲೆಗಳ ಹುಡುಕಾಟದ ಕನಸಿದೆ, ಹಳವಂಡವಿದೆ. ಇಂಥ ಹೊಸಗಾಲದ ಜಗತ್ತಿನ ಒಂದು ನಾಟಕೀಯ ಆಖ್ಯಾನವನ್ನು ಪ್ರಸ್ತುತ ಕೃತಿಯು ಆದಷ್ಟೂ ಉದ್ವೇಗ ಮತ್ತು ಗದ್ದಲಗಳಿಲ್ಲದೆ ನಮ್ಮ ಕಿವಿಯೊಳಗೆ ಉಸುರುವಂತೆ ತೋರುತ್ತದೆ.’

*

(ದೃಶ್ಯ : 6)

ಅಜ್ಞಾತವಾಸ

ಶ್ರೀನಿವಾಸನ ಮನೆ. ರಾತ್ರಿ ಹತ್ತು ಗಂಟೆ. ಇಡೀ ದೃಶ್ಯದಲ್ಲಿ ಮನೆ ಸಾಮಾನು ಕಟ್ಟಿ ಬೇರೆಡೆ ಹೊರಡುವ ತಯಾರಿ ನಡೆದಿದೆ.

ಶ್ರೀನಿವಾಸ : ಮಕ್ಕಳ ಹಾಸಗಿ ಬಿಟ್ಟ ಉಳಕಿದ್ದೆಲ್ಲಾ ಕಟ್ಟೋಣು. ಹೊರಡೋ ವ್ಯಾಳ್ಯಾಕ್ಕ ಅವರನ್ನೆಬ್ಬಿಸಿ ಹಾಸಗಿ ಸುತ್ತಿದರಾತು.

ರತ್ನ : ಖರೇನ ರಾತ್ರೋರಾತ್ರಿ ಹೊಂಟೀವೇನ?

ಶ್ರೀನಿವಾಸ : ಮತ್ತ? ಮನಿ ಸಾಮಾನ ಕಟ್ಟೋ ಆಟ ಅಂದ್ಕೊಂಡಿ? ಜೋಶಿಗೆ ಮನಿ ಹ್ಯಾಂಗ ಗೊತ್ತಾತು?

ರತ್ನ : ನಾನದನ್ನು ಕೇಳಲಿಲ್ಲ.

ಶ್ರೀನಿವಾಸ : ಕೇಳಲಿಲ್ಲ ಛಲೋ ಮಾಡಿದಿ. ಕೇಳದ ತಿಳ್ಕೋಬೇಕಿತ್ತು.

ರತ್ನ : ಶ್ರೀನಿವಾಸ ಯಾವಾಗ ಬರ್ತಾರಂತ ಮತ್ತಮತ್ತ ಕೇಳಿದ್ರು. ಹೊಳ್ಳಿ ಬಳಸಿ ಮತ್ತ ಅದs. ಹೊಲದ ಕೆಲಸಕ್ಕ ಊರಿಗೆ ಹೋಗ್ಯಾರ, ಮಳಗಾಲ ಮುಗಿಶಿ ಬರ್ತಾರಂದೆ. ಯಾವಾಗ ಹೋದ್ರು, ಹ್ಯಾಂಗ ಹೋದ್ರು. ಫೋನ್ ಮಾಡಿದ್ರೇನು… ಅಯ್ಯss ನಿಲ್ಲಿಸವೊಲ್ಲರು.

ಶ್ರೀನಿವಾಸ : ಈ ಸುಳ್ಳ ಎಷ್ಟ ಛಂದ ಕೇಳಸ್ತದ. ಹೊಲಕ್ಕ ಹೋಗ್ಯಾರ. ಮಳಗಾಲ ಮುಗಿಶಿ ಬರತಾರ!

ರತ್ನ : ಮಾತಾಡಿ ಏನ ಆಗೂದದ. ಊರಿನ ಕನಸ ಕಾಣೂದ ಸೈತ ಬಿಟ್ಟೇನಿ.

ಶ್ರೀನಿವಾಸ : ಊರಲ್ಲಿ ಒಪ್ಪತ್ತು ಊಟ ಹುಟ್ಟತಿರಲಿಲ್ಲ. ಹುಂ. ಬಿಡ ಅದ. ಜೋಶಿ ಜೋಡಿ ಯಾರಿದ್ರು?

ರತ್ನ : ಶರ್ಮಾ. ಇನ್ನೊಬ್ಬರ ಹೆಸರ ಬಾಯಿಗೆ ಬರವೊಲ್ಲದು. ಪಾಠಕ ಅಂತೇನೋ ಹೇಳಿದ್ಹಾಂಗಾತು.

ಶ್ರೀನಿವಾಸ : ಫೋನ್ ನಂಬರು ಕೇಳಿಲ್ಲೇನು?

ರತ್ನ : ಕೇಳಿದ್ರು. ಮೂರು ಮೂರು ಸೊನ್ನಿ ನಂಬರ್ ಕೊಟ್ಟೇನಿ. ಊರಾಗ ಫೋನ್ ಸಿಗಲ್ಲ ಅಂತಾನೂ ಹೇಳೇನಿ. ಭಾಳ ಮುಖ್ಯ ಮೀಟಿಂಗ್ ಅದ, ಅವರು ಬರಾಕ ಬೇಕಂದ್ರು. ಕೋರ್ಟ್ ನೋಟೀಸ್ ಅಂತಾ ಜೋಶಿ ಗೊಣಗಿದ್ರು. ನನಗ್ಗೊತ್ತಾಗೋದಿಲ್ಲ ಅವರಿಗೇ ಹೇಳ್ರೀ ಅಂದೆ.

ಶ್ರೀನಿವಾಸ : ಈ ಶಹರದಾಗ ಅವಸಿ ಕೂರೋದು ಸಸಾರ ಅಂದ್ಕೊಂಡಿದ್ದೆ. ಯಾರಿಗಾರ ಅಡ್ರೆಸ್ ಹೇಳಿಯೇನು?

ರತ್ನ : ನಾ ಯಾರಿಗೆ ಹೇಳಲಿ?

ಶ್ರೀನಿವಾಸ : ನೆನಪ ಮಾಡಿಕೊ.

ರತ್ನ : ಇಲ್ಲಿ ಬಂದಾಗಿಂದ ಫೋನ್ ಮಾಡಬ್ಯಾಡ, ಮಾತಾಡಬ್ಯಾಡ. ಅಲ್ಲಿ ಹೋಗಬ್ಯಾಡ. ಇಲ್ಲಿ ನಿಂದರÀಬ್ಯಾಡ. ಬಾಯಿ ತಗದ್ರ ಸುಳ್ಳು ಹೇಳಬೇಕು. ಎಲ್ಲೀ ತನಕ ಸಾಲ್ತದಿದು?

ಶ್ರೀನಿವಾಸ : ಈ ಕುತ್ತು ಕಳೀಲಿ. ಇನ್ನೊಂದಷ್ಟು ದಿನಾ ತಡಕೋ. ಮಕ್ಕಳು ಬಾಯಿ ಬಿಟ್ಟಿಲ್ಲಂತೀ?

ರತ್ನ : ಅವರ ಸಾಲೀ ಬದಲಾಯಿಸಿದ್ರಿ. ಹೊಸಾ ಗೆಳ್ಯಾರು. ಅವರ್ಯಾರಿಗೆ ಹೇಳ್ಯಾರು.

ಶ್ರೀನಿವಾಸ : ಮತ್ತ ಮನಿ ಹ್ಯಾಂಗ ಗೊತ್ತಾತು? ಯಾರಾರ ಬಂದಿದ್ದರೇನ ಇಲ್ಲಿ?

ರತ್ನ : ಯಾರ ಬರ್ತಾರ? ಹಾಂ, ಒಂದಿನ ಮಾಯಕ್ಕ ಬಂದಿದ್ಲು. ಪಲ್ಲೇ ತರಾಕ ಹೋದಾಗ ಸಿಕ್ಕಿದ್ಲು. ಮಗಳ ಮನಿ ಇಲ್ಲೇ ಐತಂತ. ನಂಜೋಡಿ ಮನೀತಂಕಾ ಬಂದ್ಲು.

ಶ್ರೀನಿವಾಸ : ಈಗ ಹೇಳತಾ ಇದ್ದೀ ಬೆಂಕಿ ಬಿದ್ದ ಮ್ಯಾಲೆ? ನಾ ಇಲ್ಲಿ ಸಾಯ್ತಾ ಇದೀನಿ. ಮಾಯಕ್ಕನ್ನ ಕರಕೊಂಡು ಬಂದ್ಲಂತೆ ಮಾಯಕ್ಕನ್ನ.

ರತ್ನ : ಹೇಳಾಕ ನೀವ ಇರಬೇಕಲ್ಲ. ಮತ್ತ ಮಾಯಕ್ಕಂಗೆ ಇವರ್ಯಾರ ಗುರುತಿಲ್ಲ.

ಶ್ರೀನಿವಾಸ : ದೋಣಿಗೆ ಎಷ್ಟ ಸಣ್ಣ ತೂತಾದರೂ ನೀರ ತುಂಬಿಕೋತದ.

ರತ್ನ : ಮಾಯಕ್ಕ ತವರಿನ ನೆರಿಮನಿಯಾಕಿ. ನನ್ನ ಗಂಡ ಅವಿಸಿಕೊಂಡು ಓಡ್ಯಾಡತಾನ ಮನಿಗೆ ಬರಬ್ಯಾಡ ಅನಬೇಕೇನು?

ಶ್ರೀನಿವಾಸ : ನಂಗಾಗಿ ಮಾಡತಿಲ್ಲ ಇದನ್ನ.

ರತ್ನ : ಗೊತ್ತದ. ಆದರ ನಂಗ ಸಾಕಾಗೈತಿ. ನೀವು ಕಳ್ಳನ ಹಾಂಗ ಮನೀಗ ಬರೋದು. ಮೂರುಮೂರು ಫೋನಿಟ್ಟುಕೊಂಡು ಒಬ್ಬೊಬ್ಬರಿಗೆ ಒಂದೊಂದು ನಂಬರಿಂದ ಮಾಡೋದು. ಎಷ್ಟು ಹೆಸರ ನಿಮಗ. ಫೋನ್‍ಲ್ಲಿ ಮಾತಾಡತಿದ್ರ ನೀವು ಯಾರಂತಲೇ ಗೊತ್ತಾಗೂದಿಲ್ಲ.

ಶ್ರೀನಿವಾಸ : ನಂಗ ಸಾಕಾಗಿಲ್ಲೇನು? ಬದುಕಬೇಕಂದ್ರ ಮಾಡಬೇಕು.

ರತ್ನ : ಮೊದಲ ಮರ್ಯಾದಿಯಿಂದ ಬದಕಲಿಲ್ಲೇನ? ಈಗ ವಿಕ್ರಮನ ಕಾಲಿಗೆ ಬೀಳರಿ. ನಿಮಗೆ ಆಗದಿದ್ರ ನಾ ಬೀಳತನು. ಇದನ್ನ ಕೊನೆ ಮುಟ್ಟಸರಿ. ಮನೀ ಬದಲಾಯಿಸು. ಸಾಲೀ ಬದಲಾಯಿಸು. ಓಡು ಓಡು. ಯಾರ ಅಟ್ಟಸಕೊಂಡ ಬರ್ತಾ ಅದಾರ ಅನ್ನೂದು ಸೈತ ನಿಮಗ್ಗೊತ್ತಿಲ್ಲ.

ಶ್ರೀನಿವಾಸ : ಈ ಉರುಳೋ ಚಕ್ರ ನಿಂದರಿಸಲಿಕ್ಕಾಗೂದಿಲ್ಲ. ಅಡ್ಡ ಬಂದರ ಅಡಿಗೆ ಅಪ್ಪಚ್ಚಿಯಾಗತೀವಿ.

ರತ್ನ : ಆ ಮನಿಯೊಳಗ ಎಷ್ಟ ಛಂದ ಮರಾ ಇತ್ತು. ಮನಿ ಮುಂದ ಮಕ್ಕಳು ಆಡತಿದ್ರು. ಅದ ಬೇಡಾತು ನಿಮಗ.

ಶ್ರೀನಿವಾಸ : ರತ್ನೀ, ಅದು ನಮ್ಮದಲ್ಲ. ಈವತ್ತಲ್ಲ ನಾಳೆ ಹೋಗೂದ ಇತ್ತು. ಈವತ್ತೇ ಕಳಸಿದ್ದಕ್ಕ ರೊಕ್ಕ ಸಿಕ್ಕೈತಿ. ಅದರ ಋಣ ಅಷ್ಟ.

ರತ್ನ : ಯಾವದೂ ನಮ್ಮದಲ್ಲ. ನಾವೇನು ಖಾಯಂ ಇರಾವರೇನು ಭೂಮಿ ಮ್ಯಾಲ?

ಶ್ರೀನಿವಾಸ : ಸುಮ್ಮನಿದ್ದರ ಏನೂ ಸಿಗತಿರಲಿಲ್ಲ. ಈಗ ಏನಾರ ಸ್ವಲ್ಪ ಕೈಗ ಹತ್ಯದ.

ರತ್ನ : ಆ ಏನಾರ ಖರ್ಚಾಗಿ ಯಾವ ಕಾಲ ಆತು.

ಶ್ರೀನಿವಾಸ : ಸಣ್ಣವರ ಸುಳ್ಳಿಗೆ ಅಷ್ಟ ಬೆಲಿ.

ರತ್ನ : ತಿಂದ ಪಾಪಕ್ಕ ಈಗ ಅಲೆದಾಡೋದು. ಅಡ್ರೆಸ್ಸೇ ಇಲ್ಲದಿರೋ ಮನಿ ಸಿಕ್ಕಿದ್ರ ಭೇಷಾಗತಿತ್ತು. ಗುಟ್ಟಗುಟ್ಟ ಮಾಡಕೊಂಡ ಸಾಯಬೇಕಾಗಿರಲಿಲ್ಲ.

ಶ್ರೀನಿವಾಸ : ಏನ ಮಾಡಬೇಕಂತೀ?

ರತ್ನ : ಹೇಳಿದ್ನಲ್ಲ. ವಿಕ್ರಮ್ ಜೋಡಿ ಮಾತಾಡಿ ಮುಗಿಸ್ರೀ.

ಶ್ರೀನಿವಾಸ : ಇಷ್ಟ ದಿನಾ ಒದ್ದಾಡೇನಿ. ಹ್ಯಾಂಗ್ಯಾಂಗ ಪುಸಲಾಯಿಸಿದ್ರೂ ತಪ್ಪಿಸಿಕೊಂಡೇನಿ. ಈಗ ಹೋಗಿ ಸಿಕ್ಕಿಬೀಳಲೇನು?

ರತ್ನ : ಈವತ್ತಲ್ಲ ನಾಳೆ ಆಗೂದ ಅದು.

ಶ್ರೀನಿವಾಸ : ಮಾಯಕ್ಕನ ಕೃಪಾದಿಂದ.

ರತ್ನ : ನನ್ನ ದೂರಬ್ಯಾಡ್ರೀ.

ಶ್ರೀನಿವಾಸ : ಮತ್ಯಾರಿಂದಲೂ ಗೊತ್ತಾಗಾಕ ಶಕ್ಯ ಇಲ್ಲ.

ರತ್ನ : ನಿಮ್ಮ ಗೆಳ್ಯಾರು ಸಾಕು ಗುಟ್ಟು ರಟ್ಟು ಮಾಡಾಕ.

ಶ್ರೀನಿವಾಸ : ಅವರು ನನ್ನ ಜೋಡೀ ಅದಾರು.

ರತ್ನ : ಮುಂದೇನ? ಮನಿಯಿಂದ ಮನೀಗೆ ಓಡೋದು?

ಶ್ರೀನಿವಾಸ : ಕಾನೂನಿನ ಹಗ್ಗದಿಂದ ನನ್ನ ಕಟ್ಟಲಿಕ್ಕೆ ಆಗೋದಿಲ್ಲ. ಅಷ್ಟ ಶಾಣ್ಯಾ ಅದೀನಿ.

ರತ್ನ : ಯಾರ ಹೇಳತಾರ ಹಾಂಗಂತ?

ಶ್ರೀನಿವಾಸ : ಇಷ್ಟೊತ್ತಿಗೆ ವಕೀಲರು ಹೇಳಿರತಾರ. ಅದಕ್ಕ ಮೀಟಿಂಗ್ ಕರದಾರ. ನಾಲ್ಕ ದಿನಾ ಮಾರೀ ಮರಸಿಕೊಂಡ ಇರೂದ ಒಳ್ಳೇದು. ವಿಕ್ರಮ್ ಹೊಳ್ಳಿ ಹೋಗತಾನ. ಆಗಿದು ಮುಗೀತದ.

ರತ್ನ : ಎರಡ ಬಗದ್ಹಾಂಗ ಅನಿಸಿ ಒಳಗ ಕೊರೀತದ. ಅಜ್ಜಾ ಒಳ್ಳೇದ ಮಾಡ್ಯಾರ ನಮಗ.

ಶ್ರೀನಿವಾಸ : ಮುದುಕ ಕಾಲ ಒತ್ತಿಸಿಕೊಂಡಾನ.

ರತ್ನ : ನೀವೂ ಒತ್ತೀರಿ.

ಶ್ರೀನಿವಾಸ : ನಾ ಇಲ್ಲದಾಗ ನೀ ಒತ್ತೀ ಹೌದಲ್ಲೋ? ಅದ್ಯಾಕ ಬೇಕಿತ್ತ ಮುದುಕಂಗ. ಅವನೇನ ಸರಳ ಇರಲಿಲ್ಲ ತಗೋ.

ರತ್ನ : ಖರೇ ಕಾಲು ನೋವಿತ್ತು.

ಶ್ರೀನಿವಾಸ : ಕಾಲಿಂದಲೇ ಶುರುವಾಗತದ. ಆವತ್ತ ಯಾಕ ಬರಿಮೈಲೆ ಕಾಲ ಒತ್ತಸಕೋತಿದ್ದ. ಶರಟು ಹಾಕ್ಕೊಂಡರ ಕಾಲ ನೋವು ಹೆಚ್ಚಾಗತದೇನು?

ರತ್ನ : ಹೊಲಸು ಮಾತಾಡಬ್ಯಾಡರಿ.

ಶ್ರೀನಿವಾಸ : ಕೈಯಲ್ಲಾಗದಿದ್ರೂ ಮನಸಿನ್ಯಾಗ ಇತ್ತು ಮುದುಕ ಸೂಳೀಮಗ್ಗ.

ರತ್ನ : ಅದಕ್ಕ ಅವರ ಮನೀ ನುಂಗಿದ್ರಿ?

ಶ್ರೀನಿವಾಸ : ಬ್ಯಾರೇ ದಾರಿ ಇರ್ಲಿಲ್ಲ. ನೌಕರಿ ಕೇಳಿದರ ನಿನ್ನ ಪಿಯೂಸಿ ನಪಾಸಿಗೆ ಏನ ಸಿಗತೈತಿ ಅಂದಿತ್ತ ಮುದುಕ. ಇಬ್ಬರೂ ತನ್ನ ಮನೀ ಚಾಕರೀ ಮಾಡಿಕೊಂಡು ಬಿದ್ದಿರತಾರ ಅಂದಕೊಂಡಿತ್ತು. ತೋರಸ್ತೀನಿ ಈ ಪಿಯೂಸ್ಸಿ ನಪಾಸ್ ತಲೀ. ಮ್ಯಾಲಿಂದ ನೋಡಲೇ ಮುತ್ಯಾ… ಛಲೋತನ ನೋಡ…

ರತ್ನ : ದುರಾಸೆ ಬಿಟ್ಟಿದ್ದರ ಬದಕತಿದ್ದವಿ. ಆ ಮನ್ಯಾಗ ಇದ್ದಷ್ಟ ವರ್ಷಾ ಛಲೋತಂಗ ಬದಕಿದ್ದಿವಿ. ರೊಕ್ಕ ಇರಲಿಲ್ಲ ಖರೆ, ಮರ್ಯಾದಿ ಇತ್ತು. ಈಗ ಎರಡೂ ಇಲ್ಲ.

ಶ್ರೀನಿವಾಸ : ಬಾಯ್ಮುಚ್ಚು. ಹರಿಶ್ಚಂದ್ರನ ತುಂಡ ತಂದು. ಮುದುಕನ್ನ ನೋಡಿಕೊಂಡೇವಿಲ್ಲೋ? ಅವನ ಮಗಾ ಬಂದಿದ್ನೇನು? ಇಲ್ಲ ಅಲ್ಲಾ? ಅಲ್ಲೀಗೆ ಸರಿಹೋತು. ಇನ್ನ ಋಣಾ ಇಲ್ಲಾ. ಆದದ್ದಾತು. ಮತ್ತಮತ್ತ ಅದೇ ಹಾಡಬ್ಯಾಡ. ಕಾಲ ನೋವಿಗೂ ನಾವ, ಬೆನ್ನ ನೋವಿಗೂ ನಾವ. ಎಲ್ಲಾ ಕೆಲಸ ನಾವ ಮಾಡಿ ಸಾಯಬೇಕು. ಮನಿ ಮಾರಿ ಹಳ್ಳಿಗೆ ಹೋಗತೇನಿ ಅಂತ ಹಲಬತಿತ್ತದು. ಹುಚ್ಚ ಪ್ಯಾಲೀ ತಂದು. ಅಲ್ಲೇ ಹೋತು, ಒಳ್ಳೇದಾತು.

ರತ್ನ : ಹ್ಯಾಂಗೂ ಸಾಮಾನೆಲ್ಲಾ ಕಟ್ಟೇವಿ. ಊರಿಗೆ ಹೋಗೋಣೇನು ನಾಳಿ ಮುಂಜಾನೀಲೆ?

ಶ್ರೀನಿವಾಸ : ಒಮ್ಮಿ ಇಲ್ಲಿ ಬಂದೀ, ಮುಗೀತು. ಬರಾಕ ದಾರಿ ಐತಿ. ಹೋಗಾಕ ಇಲ್ಲ.

ಬಾಗಿಲು ಬಡಿದ ಸದ್ದು.

ಶ್ರೀನಿವಾಸ : (ಬಾಗಿಲ ಬಳಿ ಹೋಗಿ) ಯಾರು?

ಗಂಡು ದನಿ : ಕಣ್ಣಪ್ಪಣ್ಣ

ಶ್ರೀನಿವಾಸ : ಥೂ, ಯಾರಲೇ?

ಗಂಡು ದನಿ : ನಮೋ ಶ್ರೀನಿವಾಸಾ… ನಮೋ ವೆಂಕಟೇಶಾ… (ಕಟ್ಲೆಟ್ ನಾಗನ ಧಾಟಿಯಲ್ಲಿ ರಾಗವಾಗಿ ಹಾಡುವನು) ಶ್ರೀನಿವಾಸ ಥೂ ನೀನಾ? ಭೋಸಡೀಕೆ…

ಶ್ರೀನಿವಾಸ ಬಾಗಿಲು ತೆರೆಯುವನು.

*

acchigoo modhalu vivek shanbhag

ವಿವೇಕ ಶಾನಭಾಗರ ಕೃತಿಗಳು

ಪರಿಚಯ : ಎಂಜಿನಿಯರಿಂಗ್ ಪದವೀಧರರಾದ ವಿವೇಕ ಶಾನಭಾಗ ಅವರು ಕೊಲ್ಕತ್ತಾ, ಅಮೆರಿಕಾ, ಇಂಗ್ಲೆಂಡ್​ನಲ್ಲಿ ಹಲವು ವರ್ಷಗಳ ಕಾಲ ಉದ್ಯೋಗನಿಮಿತ್ತ ವಾಸವಾಗಿದ್ದರು. ಅಂಕುರ, ಲಂಗರು, ಹುಲಿಸವಾರಿ, ಸಕ್ಕರೆ ಗೊಂಬೆ, ಮತ್ತೊಬ್ಬನ ಸಂಸಾರ, ಇನ್ನೂ ಒಂದು, ಒಂದು ಬದಿ ಕಡಲು, ಬಹುಮುಖಿ, ಊರುಭಂಗ, ಘಾಚರ್ ಘೋಚರ್ ಪ್ರಕಟಿತ ಕೃತಿಗಳು. ಆಲನಹಳ್ಳಿ ವಾಚಿಕೆ, ಸಿರಿಗನ್ನಡ (An Anthology of Contemporary Kannada Writings) ಸಂಪಾದಿತ ಕೃತಿಗಳು. ಡಾ. ಯು. ಆರ್. ಅನಂತಮೂರ್ತಿಯವರ ‘ಹಿಂದುತ್ವ ಮತ್ತು ಹಿಂದ್ ಸ್ವರಾಜ್’ ಕೃತಿಯ ಇಂಗ್ಲಿಷ್ ಆವೃತ್ತಿಯ ಸಹ-ಅನುವಾದಕರೂ ಆಗಿರುವ ಇವರು, ಏಳುವರ್ಷಗಳ ಕಾಲ ‘ದೇಶಕಾಲ’ ಸಾಹಿತ್ಯಿಕ ತ್ರೈಮಾಸಿಕವನ್ನು ಸಂಪಾದಿಸಿದ ರೀತಿ ಅನನ್ಯ.

* ಈ ಕೃತಿಯ ಖರೀದಿಗೆ ಸಂಪರ್ಕಿಸಿ : ಅಕ್ಷರ ಪ್ರಕಾಶನ

ಇದನ್ನೂ ಓದಿ : Shakespeare‘s Plays : ಅಚ್ಚಿಗೂ ಮೊದಲು ; ‘ಇದು ನನ್ನ ಒತ್ತಾಯ ಮಗಳೆ, ನೀನು ಹಾಡುತ್ತಿರಬೇಕು’

Published On - 12:55 pm, Sun, 1 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ