Art and Entertainment : ‘ಮನೋರಂಜನೆ’ ಮೊಗ್ಗ ಚಿವುಟಿ ಸಂಭ್ರಮಿಸುವ ಮಾದಕತೆಯನ್ನು ವೈಭವೀಕರಿಸುವ ವಿಟರ ಕೂಟವಲ್ಲ

Lust and Love : ‘ಬೇಂದ್ರೆಯವರು ‘ವಾತ್ಸಲ್ಯದ ಅಧಿಷ್ಠಾನ’ ಎನ್ನುವ ಶೀರ್ಷಿಕೆಯಡಿಯಲ್ಲಿ ದುಷ್ಯಂತ ಶಕುಂತಲೆಯರ ಪ್ರೇಮವನ್ನು ಕುರಿತು ವಿಶ್ಲೇಶಿಸುತ್ತಾ ‘ಕಾಮ ಪ್ರೇಮವಾಗಿ ವಾತ್ಸಲ್ಯದ ಅಧಿಷ್ಠಾನದಲ್ಲಿ ಒಂದಾಗುವಿಕೆ’ ಎಂಬ ಅಂಶ ಉಲ್ಲೇಖಿಸುತ್ತಾರೆ.‘ ಜ್ಯೋತಿ ಗುರುಪ್ರಸಾದ

Art and Entertainment : ‘ಮನೋರಂಜನೆ’ ಮೊಗ್ಗ ಚಿವುಟಿ ಸಂಭ್ರಮಿಸುವ ಮಾದಕತೆಯನ್ನು ವೈಭವೀಕರಿಸುವ ವಿಟರ ಕೂಟವಲ್ಲ
ಎಡಕಲು ಗುಡ್ಡದ ಮೇಲೆ ಚಿತ್ರದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Aug 02, 2021 | 12:08 PM

ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್​ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ಈ ವಿಚಾರವಾಗಿ ಇಂದಿನಿಂದ ಶುರುವಾಗಲಿದೆ ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಹೊಸ ಸರಣಿ. ಇದರಲ್ಲಿ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸುತ್ತಾರೆ. 

*

ಉಡುಪಿ ಜಿಲ್ಲೆಯ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಜ್ಯೋತಿ ಗುರುಪ್ರಸಾದ ಈತನಕ ಚುಕ್ಕಿ, ಮಾಯಾಪೆಟ್ಟಿಗೆ, ವರನಂದಿ ಪ್ರತಿಮೆ, ಜಟಾಯು ಪಕ್ಷಿಗೆ ಶ್ರದ್ಧಾಂಜಲಿ ಮುಂತಾದ ಕವನ ಮತ್ತು ಕಥಾ ಸಂಕಲಗಳನ್ನು ಪ್ರಕಟಿಸಿದ್ದಾರೆ. ಈಗಿಲ್ಲಿ ಸಿನೆಮಾ ಮತ್ತು ಸಾಹಿತ್ಯದ ಮಗ್ಗಲುಗಳಿಂದ ಮನೋರಂಜನೆಯ ಅಂಶಗಳನ್ನು ಸಚಿತ್ರವಾಗಿ ಚರ್ಚಿಸಿದ್ದಾರೆ.

*

ಮನಸ್ಸು ಸಂತಸಗೊಂಡು ಶಾಂತವಾದರೆ ಅದಕ್ಕೆ ‘ರಂಜನೆ’ ಒದಗಿ ಸ್ವಸ್ಥವಾಗಿದೆ ಎಂದು ತಿಳಿಯಬಹುದುದೇನೋ! ಆದರೆ ಈ ‘ಸಂತಸ’, ‘ಶಾಂತಿ’, ‘ಸ್ವಾಸ್ಥ್ಯಂ’, ‘ರಂಜನೆ’ ಎಂಬ ಅಂಶಗಳೇ ಈಗ ಚರ್ಚಿಸಬೇಕಾದ ಮುಖ್ಯ ಸಂಗತಿಗಳಾಗಿಬಿಟ್ಟಿವೆ. Let noble things come from all side ಎನ್ನುವಂತೆ ‘ರಂಜನೆ’ ಎನ್ನುವುದು ಎಲ್ಲಾ ಕಡೆಗಳಿಂದಲೂ ಬರಲಿ ಎಂದುಬಿಟ್ಟರೆ ಜೀವನ ಎಷ್ಟು ಅಸೂಕ್ಷ್ಮವಾಗಿಬಿಡುಬುದು? ರಂಜಿಸುವ ಮಾನದಂಡಗಳು ವಿಕೃತಿಯಮಟ್ಟ ತಲುಪದಿರುವವರೆಗೆ ಮಾತ್ರ ಸಹ್ಯವಾಗುತ್ತದೆ. ಸಮೂಹ ಮಾಧ್ಯಮದ ಮೂಲಕ ಪ್ರಸಾರವಾಗುವ ಯಾವುದೇ ಮನೋರಂಜನಾ ಕಾರ್ಯಕ್ರಮಕ್ಕೆ ಶೀಲದ ಪರಿಕಲ್ಪನೆ ಇರಲೇಬೇಕಾಗುತ್ತದೆ. ‘ಶೀಲ’ ಎಂದರೆ ಕೇವಲ ಹೆಣ್ಣಿನ ಮೇಲೆ ಹೇರುವಂತಹ ಮೌಲ್ಯವಲ್ಲ; ಸರ್ವ ವಿಧದಲ್ಲೂ ಇಡೀ ಸಮಾಜ ಸ್ವಾಸ್ಥ್ಯಕ್ಕೆ ಎಡೆ ಮಾಡಿಕೊಡಬೇಕಾದ ಕರ್ತವ್ಯ. ಇದು ಶೀಲ ಅಶ್ಲೀಲತೆಗಳ ನಡುವೆ ಇರುವ ವ್ಯತ್ಯಾಸವನ್ನು ಅರಿಯುವ ವಿವೇಚನೆ.

ಒಂದು ಮಗುವಿಗೆ ಅದರ ತಂದೆ ತಾಯಿ ಎನಿಸಿಕೊಂಡವರು ಒದಗಿಸುವ ಲೈಂಗಿಕ ಶಿಕ್ಷಣದ ಜ್ಞಾನ ಬೇರೆ; ತಂತ್ರಜ್ಞಾನದ ಮೂಲಕ ಅಪ್ಲೋಡ್ ಮಾಡುತ್ತಾ ಲೈಂಗಿಕ ಕ್ರಿಯೆಗಳ ನೀಲಿ ಚಿತ್ರಗಳನ್ನು ಕಾನೂನು ಬಾಹಿರವಾಗಿ ಹಂಚುವ ವಿಕೃತಿ ಬೇರೆ. ಈ ವ್ಯತ್ಯಾಸ ಅರಿಯದಿದ್ದರೆ ಕಾಮ, ಪ್ರೇಮ, ವಾತ್ಸಲ್ಯ ಈ ಮೌಲ್ಯಗಳೆಲ್ಲಾ ಅಮಾನವೀಯ ನೆಲೆಯಲ್ಲಿ ಬಳಕೆಯಾಗುತ್ತ ಮನುಷ್ಯನೆನಿಸಿಕೊಂಡವನು ಕೇವಲ ಆರ್ಥಿಕ ಲಾಭಗಳಿಸುವ ಒಂದು ಶುಷ್ಕ ಘಟಕವಾಗುತ್ತಾನಷ್ಟೆ. ಅಷ್ಟೇ ಅಲ್ಲ, ಇಂಥ ಮನುಷ್ಯರ ವಿಕೃತ ಮನಸ್ಥಿತಿಯಿಂದ ಇಡೀ ಸಮುದಾಯದ ಆರೋಗ್ಯಕ್ಕೆ -ಶಾಂತಿಗೆ ಧಕ್ಕೆ ಬರುವುದರಲ್ಲಿ ಸಂಶಯವಿಲ್ಲ ಮೌಲ್ಯವೇ ಅಪಮೌಲ್ಯವಾಗುವ ಬಗೆಯಿದು. ಅಡಮ್ ಮತ್ತು ಈವ್ ಕಾಲಕ್ಕೇ ‘ಕಾಮ’ದ ಮೌಲ್ಯವೆನ್ನುವುದು ಆರಂಭವಾಗಿದೆ, ನಿಜ; ಇಡೀ ಜೀವ ಸಂಕುಲದ ವಿಕಸನಕ್ಕೆ ಬುನಾದಿಯಾಗಿರುವ ಮೌಲ್ಯ. ಆದರೆ ಪ್ರೇಮದ ಅವಿಭಾಜ್ಯ ಅಂಗವಾಗಿ ಅಮೃತ ವಾಹಿನಿಯಂತೆ ಒಳಗೊಳ್ಳುವ ಕಾಮಕ್ಕೆ ಮಾತ್ರ ಆ ಘನತೆ ಪ್ರಾಪ್ತವಾಗುವುದು ಎಂದು ನನ್ನ ಅನಿಸಿಕೆ. ಇದು ನನ್ನದು ಮಾತ್ರವಲ್ಲ ಹಿರಿಯ ವ್ಯಕ್ತಿತ್ವದಿಂದ ಬಾಳಿದ ಒಳನೋಟವುಳ್ಳ ಧುರೀಣರದ್ದು ಆಗಿತ್ತು ಎನ್ನುವುದಕ್ಕೆ ಪುರಾವೆಗಳನ್ನು ಒದಗಿಸಬಹುದು.

1. ‘ಎರಿಕ್ ಫ್ರಾಂ’ ಎನ್ನುವ ಮನೋವಿಜ್ಞಾನಿ – ದಾರ್ಶನಿಕ ಪ್ರೀತಿಯ ಪರಿಕಲ್ಪನೆಯ ಬಗ್ಗೆ ಬರೆದಿರುವ ಕೃತಿ ಕನ್ನಡಕ್ಕೂ ಕೂಡ ‘ಪ್ರೀತಿ ಎಂದರೆ’ ಎಂಬ ಶೀರ್ಷಿಕೆಯಡಿ ಬಲು ಚೆಂದದಲ್ಲಿ ಅನುವಾದವಾಗಿದೆ. (ಅನುವಾದಕರು : ಎಚ್.ಎಸ್. ರಾಘವೇಂದ್ರ ರಾವ್)

ಈ ಕೃತಿಯಲ್ಲಿ ಗಂಡು ಹೆಣ್ಣಿನ ನಡುವಿನ ಅತ್ಯಂತ ಅಮೂಲ್ಯವಾದ ಖಾಸಗಿ ಪ್ರೀತಿಯ ಸಂಬಂಧದ ಬಗ್ಗೆ ಗಹನವಾದ ವ್ಯಾಖ್ಯಾನವಿದೆ. ತಾಳ್ಮೆ, ತಲ್ಲೀನತೆ, ನಂಬಿಕೆ ಇಂಥ ಮೌಲ್ಯಗಳು ಗಟ್ಟಿಯಾಗಿದ್ದರೆ ಮಾತ್ರ ಸಂಗಾತಿತನದ ಸಂಬಂಧ ಕೊನೆಯವರೆಗೂ ಮುರಿಯದೆ ಗಾಢವಾದ ಪ್ರೀತಿಯ ಅನುಭೂತಿಯಾಗಿಯೇ ಉಳಿಯುವುದು ಎಂಬ ಮನೋವೈಜ್ಞಾನಿಕ ಸತ್ಯವಿದು. ಇದೆಲ್ಲಾ ಗೊತ್ತಿಲ್ಲದೆಯೇ ಒಂದಾಗಿ ಬಾಳುವ ದಾಂಪತ್ಯದಲ್ಲಿಯೂ ಸಹ ಇಂಥ ಸಂಗತಿಗಳೇ ಆ ದಂಪತಿಯನ್ನು ಸುಖವಾಗಿ ಇರುವಂತೆ ನೋಡಿಕೊಂಡಿದೆ ಎಂಬುದು ವೇದ್ಯವಾಗಿರುವ ಸತ್ಯ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಇಂಥ ಪ್ರೀತಿಯ ಬೆಸುಗೆ ಇಲ್ಲದ ದಂಪತಿಯ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.

2. ವರಕವಿ ಬೇಂದ್ರೆಯವರ ಒಂದು ಮೌಲಿಕ ಬೃಹತ್ ವಿಮರ್ಶಾ ಸಂಪುಟ, “ಸಾಹಿತ್ಯ ವಿರಾಟ್ ಸ್ವರೂಪ” ಇದರಲ್ಲಿ ‘ವಾತ್ಸಲ್ಯದ ಅಧಿಷ್ಠಾನ’ ಎನ್ನುವ ಶೀರ್ಷಿಕೆಯಡಿಯಲ್ಲಿ ದುಷ್ಯಂತ ಶಕುಂತಲೆಯರ ಪ್ರೇಮವನ್ನು ಕುರಿತು ವಿಶ್ಲೇಷಿಸುತ್ತಾ ‘ಕಾಮ ಪ್ರೇಮವಾಗಿ ವಾತ್ಸಲ್ಯದ ಅಧಿಷ್ಠಾನದಲ್ಲಿ ಒಂದಾಗುವಿಕೆ’ ಎಂಬ ಅಂಶ ಉಲ್ಲೇಖಿಸುತ್ತಾರೆ. ಅವರಿಬ್ಬರಲ್ಲಿ ಸಹಜವಾದ ಕಾಮವೇ ಹರೆಯದ ಉತ್ಕಟ ಕಾಮವೇ ಮೂಡಿದ್ದರೂ ದಣಿದ ದುಷ್ಯಂತನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ನಿದ್ರಿಸಲು ಅನುವು ಮಾಡಿಕೊಡುವ ಶಕುಂತಲೆಯ ಭಾವೋತ್ಕಟತೆಯೇ ‘ವಾತ್ಸಲ್ಯ ಅಧಿಷ್ಠಾನ’ ಎಂದು ಉಲ್ಲೇಖವಾಗಿರುವುದು ಅತ್ಯಂತ ಪ್ರಶಸ್ತ ಎನಿಸುತ್ತದೆ. ಕಾಮವೆಂದರೆ ಬರೀ ಆ ಕ್ಷಣದ ಉದ್ರೇಕವಾಗುವ ಪಶು ಸಮಾನವಾದ ಕ್ರಿಯೆಯಾಗದೆ ಸಂಗಾತಿಯೊಡನೆ ಆನಂತರವೂ ಶುದ್ದ ಪ್ರೀತಿಯಿಂದ ಉಳಿಯುವ ಭಾವ ಎಂಬ ವ್ಯಾಖ್ಯಾನ ಕಾಮ ಪ್ರೇಮಗಳ ಸ್ವಸ್ಥ ರೂಪಕ್ಕೆ ಒದಗುವ ಸ್ಪಷ್ಟತೆ.

3. ಅಂದಿನಿಂದ ಇಂದಿನವರೆಗೆ ಬಂದಿರುವ ಕನ್ನಡದ ಆಯ್ದ ಸಿನಿಮಾಗಳ ಉದಾಹರಣೆಯ ಮೂಲಕ ಈ “ಮನೋರಂಜನಾ ವೃತ್ತಾಂತ”ಕ್ಕೆ ನನ್ನ ನಲ್ನುಡಿಯನ್ನು ಸೇರಿಸುವೆನು. ಈ ವಿಷಯದಲ್ಲಿ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರು ಆಚಾರ್ಯರೆನಿಸಿಕೊಳ್ಳುತ್ತಾರೆ. ಕನ್ನಡದ ಒಳ್ಳೆಯ ಕಾದಂಬರಿಗಳನ್ನು ಸಿನಿಮಾ ಮಾಡಿ ಮನೋರಂಜನೆಯ ಕ್ಷೇತ್ರಕ್ಕೆ ಉನ್ನತವಾದ ಕೊಡುಗೆ ಕೊಟ್ಟಿರುವ ಹಿರಿಮೆ ಪುಟ್ಟಣ್ಣನವರದು. ಎಂ. ಕೆ. ಇಂದಿರಾ ಅವರ ಒಂದು ಮನೋಜ್ಞ ಕಾದಂಬರಿ ಗೆಜ್ಜೆಪೂಜೆ. ದೇವದಾಸಿ ಪದ್ಧತಿಯನ್ನು ಕುರಿತು ಎಚ್ಚರಿಸುವಂಥ ಈ ಕಥೆಯನ್ನು ಪುಟ್ಟಣ್ಣ ಅವರು ಅದೆಷ್ಟು ಸೂಕ್ಷ್ಮವಾಗಿ ಸಂವೇದನಾಶೀಲವಾಗಿ ಸಿನಿಮಾ ಪರದೆ ಮೇಲೆ ತಂದಿದ್ದಾರೆಂದರೆ ಆಶ್ಲೀಲತೆಯ ಲವಲೇಶ ಮಾತ್ರವೂ ಇಲ್ಲದೆ ಶೃಂಗಾರ ರಸವೆಂದರೇನು ಎಂಬುದನ್ನೂ ಕೂಡ ‘ಪಂಚಮವೇದ ಪ್ರೇಮದ ನಾದ’ ಹಾಡಿನ ಮೂಲಕವೇ ಬಿತ್ತರಿಸುತ್ತಾರೆ. “ಜೀವ ಜೀವದ ಸ್ವರ ಸಂಚಾರ ಅಮೃತ ಚೇತನ ರಸಧಾರ” ಎಂಥ ಅರ್ಥಪೂರ್ಣ ಅನುಭೂತಿಯಿದು! ಅದು ದೇವದಾಸಿ ಮನೆಯೇ ಆಗಿದ್ದರೂ ಲೈಂಗಿಕ ಕ್ರಿಯೆಯ ವೈಭವೀಕರಣವನ್ನು ಸಿನಿಮಾದ ಭಾಗ ಮಾಡಿಕೊಂಡೇ ಇಲ್ಲ. ದೃಶ್ಯಗಳ ಮೂಲಕ ಅತ್ಯಂತ ಘನತೆಯಿಂದ ಕಥೆ ಹೇಳುವ ದಿಗ್ದರ್ಶಕನ ಕಲೆಯಿದು. ದೇವದಾಸಿಯಾದರೂ ಒಬ್ಬನಿಗೇ ನಡೆದುಕೊಳ್ಳುವ ಪ್ರೇಮವನ್ನು ಲೀಲಾವತಿಯವರ ಮುಖದಲ್ಲಿ ಹೊಳೆಯಿಸುತ್ತಾರಲ್ಲ, ಅದು ತುಂಬಾ ಮುಖ್ಯ ಎನಿಸುತ್ತದೆ ನನಗೆ.

manoranjana vruttanta

ಎರಿಕ್ ಫ್ರಮ್ ಕೃತಿ ಮತ್ತು ದುಷ್ಯಂತ ಶಕುಂತಲೆಯ ಕಲಾಕೃತಿ

‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾ (ಎ ಸರ್ವಿಫಿಕೇಟ್) ದಲ್ಲೂ ಸಹ ಚಂದ್ರಶೇಖರ್ (ನಂಜುಂಡ ಪಾತ್ರಧಾರಿ) ಜಯಂತಿಯನ್ನು (ಕಥಾನಾಯಕಿ) ಕಾಮಿಸುವ ಘಳಿಗೆಯನ್ನು ಬೆತ್ತಲ ಬೆನ್ನಷ್ಟೇ ಅವನು ತೋರಿಸಿ ಬೆನ್ನುಜ್ಜಲು ಕೇಳುವ ದೃಶ್ಯದಿಂದ ಅಡಕವಾಗಿ ಹೇಳುತ್ತಾರೆಯೇ ವಿನಾ ಎಲ್ಲೂ ಕೂಡ ಅಸಹನೀಯ ಬೆತ್ತಲಾಗುವಿಕೆ ಇದೇ ಒಂದು ಅವಕಾಶವೆಂದು ನುಗ್ಗಿ ಬರುವುದಿಲ್ಲ. ಆದರೂ ಕಾಮ – ಪ್ರೇಮ ಎಲ್ಲವೂ ವಿದ್ಯುಕ್ತವಾಗಿ ಮನೋರಂಜನಾತ್ಮಕವಾಗಿ ಸ್ವಸ್ಥ ಸಂದೇಶ ಕೊಡುವ ಸಿನಿಮಾ ಅದು. ಅದೇ ಕಾಮುಕ ನಂಜುಂಡನಿಗೆ ಆರತಿ (ಕಥಾ ನಾಯಕಿಯ ತಂಗಿ) ತನ್ನ ದೃಢ ಮನಸ್ಸಿನ ಧ್ಯಾನಸ್ಥ ಸ್ಥಿತಿಯಿಂದ ಸರಿಯಾದ ಬುದ್ಧಿ ಕಲಿಸುತ್ತಾಳೆ. ಕಾಮವೆನ್ನುವುದು ನಂಜುಂಡನ ರ‍್ರಾಬರ‍್ರಿ ಮೋಟಾರು ಸೈಕಲ್ಲಿನ ಎಗ್ಗಿಲ್ಲದ ಓಟದಂತೆ ಹುಡುಗಿಯರನ್ನು ಬದಲಾಯಿಸುತ್ತಾ ಸಾಗುತ್ತಿರುತ್ತದೆ. ಕೊನೆಗೆ ಅವನಿಗೇ ಅಪಘಾತ ಮಾಡಿ ಆಹುತಿ ತೆಗೆದುಕೊಳ್ಳುತ್ತದೆ. ಕಾಮ ಅಪಮೌಲ್ಯವಾಗುವ ಘಳಿಗೆಯನ್ನು ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೆ, ಪುಟ್ಟಣ್ಣನವರು! ಇಂಥ ಸಂದೇಶ ಮನೋರಂಜನೆಯಾಗಬೇಕಾಗಿದೆಯೇ ವಿನಾ ಕಾನೂನು ಬಾಹಿರವಾಗಿರುವ ಅನೈತಿಕ ನೀಲಿ ಚಿತ್ರಗಳನ್ನು ಅಪ್‌ಲೋಡ್ ಮಾಡುವ ವಿಕೃತಿಯಲ್ಲ. ಯಾವುದೋ ವಿಷಯಕ್ಕೆ ಯಾವುದೋ ಶೋಷಣೆಗೆ ಬಲಿಯಾಗಿ ಗುಟ್ಟಾಗಿ ಚಿತ್ರೀಕರಿಸಲ್ಪಡುವ ಪ್ರಸಾರವಾಗುವ – ಫಾರ್‌ವರ್ಡ್ ಆಗುವ ಇಂಥ ದೃಶ್ಯಗಳು ಆರ್ಥಿಕ ಲಾಭದ ದುರಾಸೆ ಹಾಗೂ ವಿಕೃತಿಯನ್ನು ಹರಡಬಲ್ಲದೇ ವಿನಾ ಶೃಂಗಾರ ರಸವನ್ನು ಹೇಳುವ ಸ್ವಸ್ಥ ಅಭಿವ್ಯಕ್ತಿ ಆಗುವುದಿಲ್ಲ ಎನ್ನುವುದೇ ನನ್ನ ಅಭಿಮತ.

ಕನ್ನಡದ ಮತ್ತೊಬ್ಬ ಮಹತ್ವದ ದಿಗ್ದರ್ಶಕರಾದ ಸಿದ್ಧಲಿಂಗಯ್ಯನವರು ‘ನ್ಯಾಯವೇ ದೇವರು’ ಚಿತ್ರದಲ್ಲಿ ತಂದಿರುವ ಡಾ. ರಾಜ್ ಮತ್ತು ಬಿ. ಸರೋಜಾದೇವಿಯವರ ಪಾತ್ರಗಳು ಪ್ರೇಮಿಸುವ ದೃಶ್ಯ ಕೂಡ ಸಿನಿಮಾ ಕಥೆಗೆ ಅಗತ್ಯವಾಗಿದ್ದರೂ ನೀತಿಯ ಗಡಿಯನ್ನು ದಾಟದೆ ಸೌಂದರ್ಯವನ್ನು ಉಳಿಸಿಕೊಂಡಿದೆ. ಇಬ್ಬರೂ ಉತ್ಕಟವಾಗಿ ಪ್ರೇಮಿಸುವ ಪ್ರೇಮಿಗಳು. ಹರೆಯದ ಕಾಮ ಅವರೀರ್ವರ ನಡುವೆ ಸಹಜವಾಗಿರುತ್ತದೆ. ಮಳೆ ಬರುತ್ತಿರುತ್ತದೆ. ಕರೆಂಟ್ ಹೋಗುತ್ತದೆ. ಕತ್ತಲ ಕೋಣೆಯಲ್ಲಿ ದೀಪ ಹಚ್ಚುವಷ್ಟರಲ್ಲಿ ಬೆಕ್ಕು ನಾಯಕಿಯ ಮೇಲೆ ಬೀಳುತ್ತದೆ. ಬೆಕ್ಕೆಂದರೆ ಭಯ ಇರುವ ಆಕೆ ನಾಯಕನನ್ನು ಗಟ್ಟಿಯಾಗಿ ಅಪ್ಪಿ ಹಿಡಿಯುತ್ತಾಳೆ. ಅವರಿಬ್ಬರ ದೇಹ ಸಂಗಮವೂ ಆಗುತ್ತದೆ. ಆದರೆ ನಿರ್ದೇಶಕರು ಗುಡುಗು-ಮಿಂಚುಗಳ ನಡುವೆ ಅವರಿಬ್ಬರ ಮುಖದ ಬೆವರ ಹನಿಯನ್ನು ಫೋಕಸ್ ಮಾಡಿ ಮಾತ್ರ ಅವರ ಒಂದಾಗುವಿಕೆಯನ್ನು ಹೇಳುತ್ತಾರೆ. ಕೊನೆಗೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗಿ ಬಂದರೂ ಅವರ ಪ್ರೇಮದ ನಂಬಿಕೆಯಿಂದ ಒಂದಾಗಿ ಬಾಳುವ ಹಾಗಾಗುತ್ತದೆ. ಇಲ್ಲಿ ಕಾಮ ಕ್ಷಣಿಕದ ಮನೋರಂಜನೆಯಾಗಿ ಕೇವಲವಾಗಿ ಹೋಗಲಿಲ್ಲ.

4. ಚಿತ್ರಗೀತೆಗಳ ಪರ್ವ : ಚಲಚಿತ್ರಗೀತೆಗಳ ಮಧುರಭಾವ ನನ್ನಲಿ ಉಂಟುಮಾಡುವ ಸಕರಾತ್ಮಕ ಅಲೆಯ ಮೂಲಕ ನನಗೆ ಅದು ಒಳ್ಳೆಯದೋ ಅಲ್ಲವೋ ಎನ್ನುವ ಜಿಜ್ಞಾಸೆಯ ಫಲವಾದ ಕೃತಿ, ‘ಮನಸ್ಸು ಮಾಗಿದ ಸುಸ್ವರ ಎಂಬ ಅಂಕಣ ಮಾಲೆ’ ಒಲವನ್ನು ಸಾಕ್ಷಾತ್ಕರಿಸುವ ಎಪ್ಪತ್ಮೂರು ಗೀತೆಗಳ ಬಗೆಗಿನ ಅಂಕಣ ಮಾಲೆ. ಇದರಲ್ಲಿ ‘ಸಂಧ್ಯಾರಾಗ’ ಕ್ಕೆಂದು ಎಸ್. ಜಾನಕಿಯವರು ಹಾಡಿರುವ ‘ನಂಬಿದೆ ನಿನ್ನ ನಂಬಿದೆ ನಾದ ದೇವತೆಯೆ’ ಇಂದ ಹಿಡಿದು ಇತ್ತೀಚಿನ ‘ರಾಜಕುಮಾರ’ ಸಿನಿಮಾದ ‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ’ ಹಾಡುಗಳವರೆಗೆ ಆಯಾ ಸಿನಿಮಾ-ಕಥೆ ಹಾಗೂ ಹಾಡುಗಳ ಋಜುತ್ವದ ಬಗೆಗೆ ವಿಶ್ಲೇಷಣೆಯಿದೆ. ಇಂಥ ಗೀತೆಗಳನ್ನು ನಾನು ಉತ್ತಮ ಮನೋರಂಜನಾ ಗೀತೆಗಳೆಂದು ಕರೆಯುತ್ತೇನೆ.

ಆದರೆ ‘ಮನೋರಂಜನೆ’ಯ ನೆಪದಲ್ಲಿ ಭಾವನೆ ಕೆರಳಿಸುವಂಥ ಸಿನಿಮಾಕ್ಕೆ ಅಗತ್ಯವಿಲ್ಲದಿದ್ದರೂ ಹೆಣ್ಣಿನ ಅಂಗಾಂಗ ಪ್ರದರ್ಶನದ ಲಾಲಸೆಗೆಂದೇ ಯುವಜನರ ಅಭಿರುಚಿಯನ್ನು ಅಡ್ಡ ಮಾರ್ಗದಲ್ಲಿ ಕೊಂಡು ಹೋಗುವಂಥ ಯಾವುದೇ ಹಾಡುಗಳನ್ನು ದೃಶ್ಯಗಳನ್ನು ನಾನು ವಿರೋಧಿಸುತ್ತೇನೆ. ಮನೋರಂಜನೆಯೆಂದರೆ ಹೂವನ್ನು ಅರಳಲು ಬಿಡುವ ಸ್ವಚ್ಛ ಮನಸ್ಸು; ಮೊಗ್ಗನ್ನು ಚಿವುಟಿ ಸಂಭ್ರಮಿಸುವ ಮಾದಕತೆಯನ್ನು ವೈಭವೀಕರಿಸುವ ವಿಟರ ಕೂಟವಲ್ಲ.

ಇದನ್ನೂ ಓದಿ : Art and Entertainment : ‘ಪ್ರಿಯತಮನಿಗಾಗಿ ಚಡಪಡಿಸುತ್ತಿರುವ ನನ್ನ ದುಃಖವನ್ನು ಹೇಗೆ ಹೇಳಲಿ’

Published On - 9:30 am, Mon, 2 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ