Art and Entertainment : ‘ಸಂಪೂರ್ಣ ನಗ್ನರಾದ ಹೆಣ್ಣುಮಕ್ಕಳನ್ನು ನೋಡುವುದು ಸಾಧ್ಯವಾಗಲಿಲ್ಲ’

Film Industry : ‘ಚಿತ್ರರಂಗಕ್ಕೆ ಬಂದಾಗ ನನಗೆ ಹದಿಮೂರು ವರ್ಷ, ಮೊದಲ ಚಿತ್ರದಲ್ಲಿಯೇ ರೇಪ್‌ನ ದೃಶ್ಯ. ಒಂದೂವರೆ ಗಂಟೆ ಇದರ ಚಿತ್ರೀಕರಣ ನಡೆಯಿತು. ನಾನು ಅತ್ತಷ್ಟು ಅವರಿಗೆ ಉತ್ಸಾಹ ಹೆಚ್ಚಾಗುತ್ತಿತ್ತು. ತೆರೆಯ ಮೇಲೆ ಇದು ಕ್ಷಣ ಮಾತ್ರದ ದೃಶ್ಯ. ಹಾಗಾದರೆ ಅಷ್ಟು ಹೊತ್ತು ಚಿತ್ರೀಕರಿಸಿದ್ದು ಏಕೆ ಎಂದರೆ ನನ್ನನ್ನು ಪಳಗಿಸಲು ಎಂದು ನಿರ್ದೇಶಕರು ಹೆಮ್ಮೆಯಿಂದ ಹೇಳಿಕೊಂಡಿದ್ದರು’

Art and Entertainment : ‘ಸಂಪೂರ್ಣ ನಗ್ನರಾದ ಹೆಣ್ಣುಮಕ್ಕಳನ್ನು ನೋಡುವುದು ಸಾಧ್ಯವಾಗಲಿಲ್ಲ’
ಸೌಜನ್ಯ : Boundoir
Follow us
ಶ್ರೀದೇವಿ ಕಳಸದ
|

Updated on:Jul 28, 2021 | 3:07 PM

ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್​ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ಈ ವಿಚಾರವಾಗಿ ಇಂದಿನಿಂದ ಶುರುವಾಗಲಿದೆ ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಹೊಸ ಸರಣಿ. ಇದರಲ್ಲಿ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸುತ್ತಾರೆ.      

ಹಿರಿಯ ಪತ್ರಕರ್ತ, ಲೇಖಕ,ಎನ್. ಎಸ್​. ಶ್ರೀಧರ ಮೂರ್ತಿ ಅವರು ಸಿನೆಮಾಲೋಕವೆಂಬ ದೊಡ್ಡ ಕ್ಯಾನ್ವಾಸಿನೊಳಗೆ ಬಂಧಿಯಾದ ಈ ವಿಷಯವನ್ನು ಸ್ಥೂಲವಾಗಿ ಚರ್ಚಿಸುವ ಪ್ರಯತ್ನ ಮಾಡಿದ್ದಾರೆ.

*

ಕನ್ನಡದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕ ಎಂ.ಆರ್.ವಿಠಲ್. ಒಮ್ಮೆ ಅವರು ಗೇವರ್ಟ್ ಕಂಪನಿಯ ಆಹ್ವಾನದ ಮೇರೆಗೆ ಪ್ಯಾರೀಸಿಗೆ ಹೋದರು. ಅಲ್ಲಿ ಸಂಸ್ಥೆ ಅವರ ಗೌರವಾರ್ಥ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಿತು. ಅದಕ್ಕಾಗಿ ಮಿಸೆಸ್ ಲೊದಿನೋ ಕಾಮಾ ಅವರನ್ನು ಮಾರ್ಗದರ್ಶಿಯಾಗಿ ಕಳುಹಿಸಿತು. ಅವರು ಪ್ಯಾರಿಸ್ ಒಪೆರಾದಲ್ಲಿನ ಫ್ರೆಂಚ್ ಬ್ಯಾಲೆ ‘ಹ್ಯಾಮ್ಲೆಟ್’ ನೋಡುವ ವ್ಯವಸ್ಥೆ ಮಾಡಿದ್ದರು. ಈ ಬ್ಯಾಲೆಯಲ್ಲಿ ಒಂದು ಸನ್ನಿವೇಶದಲ್ಲಿ ನರ್ತಕಿಯರು ಸಂಪೂರ್ಣ ನಗ್ನವಾಗುವ ಸಂಯೋಜನೆ ಇತ್ತು. ಅದನ್ನು ನೋಡಲು ವಿಠಲ್ ಅವರಿಗೆ ಬಹಳ ಸಂಕೋಚವಾಯಿತು. ಆದರೆ ಅವರ ಮಾರ್ಗದರ್ಶಿ ಕಾಮಾ ಅವರಿಗೆ ಮತ್ತು ಅಲ್ಲಿ ನೆರೆದಿದ್ದ ಮಹಿಳೆಯರಿಗೆ ಇದು ಯಾವ ಸಂಕೋಚವನ್ನು ಉಂಟು ಮಾಡಿರಲಿಲ್ಲ. ವಿಠಲ್ ಮರು ಮಾತಾಡದೆ ಅರ್ಧಕ್ಕೆ ಎದ್ದು ಬಂದು ಬಿಟ್ಟರು. ಮರುದಿನ ಲೋದಿನೋ ಕಾಮಾ ‘ಏಕೆ ನಿಮಗೆ ಬ್ಯಾಲೆ ಇಷ್ಟವಾಗಲಿಲ್ಲವೆ?’ ಎಂದು ಕೇಳಿದರು. ಅದಕ್ಕೆ ವಿಠಲ್ ‘ನೃತ್ಯ ಚೆನ್ನಾಗಿ ಇತ್ತು, ಆದರೆ ಹೆಣ್ಣು ಮಕ್ಕಳು ಈ ರೀತಿಯಲ್ಲಿ ಸಂಪೂರ್ಣ ನಗ್ನವಾಗುವುದನ್ನು ನೋಡುವುದು ನನ್ನಿಂದ ಸಾಧ್ಯವಾಗಲಿಲ್ಲ’ ಎಂದರು.

ಈ ಘಟನೆ ನಡೆದಿದ್ದು 1948ರಲ್ಲಿ. ಇದಾದ 17 ವರ್ಷಗಳ ನಂತರ ವಿಠಲ್ ಕನ್ನಡದಲ್ಲಿ ‘ಮಿಸ್ ಲೀಲಾವತಿ’ ಚಿತ್ರವನ್ನು ನಿರ್ದೇಶಿಸಿದರು. ಇದಕ್ಕೆ ಅವರ ಪ್ಯಾರೀಸ್ ಅನುಭವವೇ ಕಾರಣವಾಗಿತ್ತು. ನಾಯಕಿ ಎಂದರೆ ತಲೆ ಬಗ್ಗಿಸಿ ಕಣ್ಣನ್ನು ಪಟ ಪಟ ಅಲ್ಲಾಡಿಸುತ್ತಾ ಕುಗ್ಗಿದ ಧ್ವನಿಯಲ್ಲಿ ಮಾತನಾಡುವ ನಾಯಕಿಯರೇ ಇದ್ದ ಕಾಲದಲ್ಲಿ ಲೀಲಾವತಿ ದೊಡ್ಡ ತಿರುವನ್ನು ತಂದಳು. ‘ಡಾಲ್ ಹೌಸ್’ನ ನೋರಾಳ ನಿಲುವನ್ನು ತರಗತಿಯಲ್ಲಿ ಎಲ್ಲರೂ ವಿರೋಧಿಸಿದಾಗ ಲೀಲಾವತಿ ಸಮರ್ಥಿಸುತ್ತಾಳೆ. ಹಸಿವು, ನಿದ್ದೆಯಂತೆ ಕಾಮ ಕೂಡ ಸಹಜ ಎಂದು ವಿವಾಹ ಎಂಬ ಸಂಸ್ಥೆಗೆ ಸವಾಲು ಹಾಕುತ್ತಾಳೆ. ವಿಠಲ್ ಅವರು ತಮ್ಮ ಸಂಪ್ರದಾಯಿ ನಿಲುವಿನಿಂದ ತಾವೇ ಕಟ್ಟಿದ್ದ ಲೀಲಾವತಿಯ ಗಟ್ಟಿತನವನ್ನು ಕರಗಿಸಿ ದುರಂತ ನಾಯಕಿಯನ್ನಾಗಿಸಿದ್ದರು. ಆದರೆ ಕನ್ನಡ ಚಿತ್ರರಂಗದ ಮಟ್ಟಿಗೆ ಲೀಲಾವತಿ ಶೃಂಗಾರದ ಪರಿಕಲ್ಪನೆ ಕುರಿತು ಹೊಸ ಚಿಂತನೆಯನ್ನು ಹುಟ್ಟು ಹಾಕಿದ್ದಳು.

ಆರಂಭಿಕ ಕನ್ನಡ ಚಿತ್ರರಂಗ ಬಹುಮಟ್ಟಿಗೆ ಪಾರ್ಸಿ ರಂಗಭೂಮಿಯಿಂದ ಪ್ರೇರಣೆ ಪಡೆದಿದ್ದು. ಇಲ್ಲಿ ಪತಿವ್ರತೆಯರು ಮತ್ತು ಖಳ ನಾಯಕಿಯರು ಪ್ರತ್ಯೇಕವಾಗಿಯೇ ಇರುತ್ತಿದ್ದರು. ವಿವಾಹ ಪೂರ್ವ ಪ್ರಣಯ ಎನ್ನುವುದು ಆರಂಭಿಕ ಚಿತ್ರರಂಗದಲ್ಲಿ ಬಂದಿದ್ದು ಕಡಿಮೆ. 1941ರಲ್ಲಿ ಬಂದಿದ್ದ ‘ವಸಂತಸೇನೆ’ಯಲ್ಲಿನ ಶೃಂಗಾರ ಸನ್ನಿವೇಶಗಳನ್ನು ಗಮನಿಸಿದರೆ ಆಗಿನ ಚಿತ್ರರಂಗ ಹಾಕಿಕೊಂಡಿದ್ದ ಮಿತಿಗಳು ಎಂತಹವು ಎನ್ನುವುದು ಗೊತ್ತಾಗುತ್ತದೆ. ಸಂಪ್ರದಾಯಸ್ಥ ಮನೆತನದ ಹೆಣ್ಣುಮಕ್ಕಳು ಸಿನಿಮಾ ನೋಡಿದರೆ ಕೆಟ್ಟು ಹೋಗುತ್ತಾರೆ ಎನ್ನುವ ಕಾಲ ಅದು. ಅವರನ್ನು ಸೆಳೆಯಲು ಇಂತಹ ಮಿತಿಗಳನ್ನು ಹಾಕಿಕೊಳ್ಳುವುದು ಅನಿವಾರ್ಯ ಕೂಡ ಆಗಿತ್ತು. ಆದರೆ ಅರವತ್ತರ ದಶಕದಲ್ಲಿ ಸಿನಿಮಾ ಎನ್ನುವುದು ದೃಶ್ಯ ಮಾಧ್ಯಮ ಎನ್ನುವುದರ ಅರಿವು ಹೆಚ್ಚಾಗಲು ಆರಂಭಿಸಿದ್ದರ ಜೊತೆಗೆ ತಾಂತ್ರಿಕವಾಗಿ ಕೂಡ ಹಲವು ಪ್ರಗತಿಗಳಾದವು. ದೃಶ್ಯವನ್ನು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯ ಎಂಬ ಅಂಶ ಹೆಚ್ಚು ಬಳಕೆಯಾಗಿದ್ದ ಶೃಂಗಾರದ ವಿಷಯದಲ್ಲಿಯೇ. ಇದು ಭಾರತೀಯ ಸಂಸ್ಕೃತಿಯಲ್ಲಿಯೇ ಇದೆ ಎಂದು ಕಾವ್ಯಗಳ ಉದಾಹರಣೆ ನೀಡುವವರ ಜೊತೆಗೆ ಇದು ದೃಶ್ಯ ಮಾಧ್ಯಮ ಇಲ್ಲಿ ಪ್ರಚೋದನೆಯ ಅಂಶ ಇರುತ್ತದೆ ಎನ್ನುವ ಚರ್ಚೆಯೂ ಬಂದಿತು. ಭಾವವನ್ನು ಹುದುಗಿಸುವ ಕೆಥಾರ್ಸಿಸ್ ಮತ್ತು ಭಾವವನ್ನು ಉದ್ರೇಕಿಸುವ ನಾರ್ಕೋಸಿಸ್ ಎರಡೂ ಕೂಡ ಜಾಗತಿಕ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಶೃಂಗಾರ, ಅಶ್ಲೀಲತೆ, ಕಾಮಪ್ರಚೋದನೆ ಮೂರರ ನಡುವೆ ಇರುವ ತೆಳುವಾದ ಗೆರೆಯ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಆರಂಭದಲ್ಲಿ ಗಂಡು ಹೆಣ್ಣು ತಬ್ಬಿ ಕೊಳ್ಳುವುದೇ ಅಪರಾಧ ಎಂದು ಸೆನ್ಸಾರ್ ನಿಯಮಾವಳಿ ಹೇಳುತ್ತಿತ್ತು.

manoranjana vruttanta

ಸೌಜನ್ಯ : ಮ್ಯೂಚುವಲ್ ಆರ್ಟ್

1967ರಲ್ಲಿ ಚುಂಬನದ ದೃಶ್ಯ ಇರಬೇಕು ಎನ್ನುವ ಒಂದು ಪ್ರಬಲವಾದ ವಾದ ಕೇಳಿ ಬಂದಿತು. ಆಗ ಇದನ್ನು ‘ಅಗತ್ಯವಾದರೆ ತಪ್ಪಿಲ್ಲ’ ಎಂದು ಜಯಂತಿಯವರು ಸಮರ್ಥಿಸಿದ್ದರೆ ‘ಇದಕ್ಕೆ ಅವಕಾಶವನ್ನೇ ನೀಡಬಾರದು’ ಎಂದು ಭಾರತಿಯವರು ಸ್ಪಷ್ಟವಾಗಿ ಹೇಳಿದ್ದರು. ಈ ಚರ್ಚೆ 1992ರವರೆಗೂ ನಡೆದು ಶಕ್ತಿ ಸಾವಂತ್ ಅವರು ಅಧ್ಯಕ್ಷರಾಗಿದ್ದಾಗ ಭಾರತಿಯ ಚಿತ್ರರಂಗದಲ್ಲಿ ಚುಂಬನಕ್ಕೆ ಅವಕಾಶ ಸಿಕ್ಕಿತು. ಸೆನ್ಸಾರ್ ನಿಯಮಾವಳಿ 41(ಎಫ್) ಪ್ರಕಾರ ‘ಚುಂಬನವು ಪ್ರೇಕ್ಷಕರಲ್ಲಿ ನವಿರಾದ ಪ್ರೇಮ ಭಾವನೆಯನ್ನು ಮೂಡಿಸಬೇಕೆ ಹೊರತು ಕಾಮ ಪ್ರಚೋದನೆಯನ್ನಲ್ಲ’ ಈ ನಿಯಮದಡಿಯಲ್ಲಿಯೇ ಫ್ರೆಂಚ್ ಕಿಸ್‌ಗೆ ಅವಕಾಶವಿದೆಯೇ ಹೊರತು ಡೀಪ್ ಕಿಸ್‌ಗೆ ಅಲ್ಲ. ಆದರೆ ಇದನ್ನು ನಿರ್ಣಯ ಮಾಡುವುದು ಹೇಗೆ? ಡೀಪ್ ಕಿಸ್ ಕ್ಷಣ ಮಾತ್ರದಲ್ಲಿ ಮೂಡಿ ನವಿರಾದ ಭಾವವನ್ನು ಮೂಡಿಸಬಹುದು, ಆದರೆ ಫ್ರೆಂಚ್ ಕಿಸ್ ಸುದೀರ್ಘವಾಗಿ ಮೂಡಿ ಪ್ರೇಕ್ಷಕರಲ್ಲಿ ಪ್ರಚೋದನೆ ಉಂಟು ಮಾಡಬಹುದು. ಇಂತಹ ದೃಶ್ಯಗಳು ರೂಪುಗೊಳ್ಳುವಾಗ ಪ್ರೇಕ್ಷಕನಿಗೆ ಅಂತಹ ಅನುಭೂತಿಯನ್ನು ಮೂಡಿಸುವ ಉದ್ದೇಶವೇ ಇರುತ್ತದೆ ಎನ್ನುವುದು ಸರಳ ಸತ್ಯ. ಇನ್ನು ಕಾಮಪ್ರಚೋದನೆಯನ್ನು ಸಾರ್ವಜನಿಕ ವೀಕ್ಷಣೆಗೆ ಅನುಮೋದಿಸುವಂತಿಲ್ಲ. ಅದು ಖಾಸಗಿಯಾಗಿ ನೋಡಬಲ್ಲ ಪೋರ್ನ್ ಚಿತ್ರ ಎನ್ನಿಸಿಕೊಳ್ಳುತ್ತದೆ. ಇಂದು ಮಾಧ್ಯಮ ಇಷ್ಟೊಂದು ವಿಶಾಲವಾಗಿ ಬೆಳೆದಿರುವಾಗ ಖಾಸಗಿ ವೀಕ್ಷಣೆ ಎನ್ನುವುದು ಎಷ್ಟರ ಮಟ್ಟಿಗೆ ಸಾಧ್ಯ. ಒಂದು ಅಂತರ್ಜಾಲದ ಹುಡುಕಾಟ ಎಲ್ಲವನ್ನೂ ನಿಮ್ಮ ಮನೆಬಾಗಿಲಿಗೆ ತರಬಲ್ಲದು ಅಲ್ಲವೆ? ಇದು ಒಂದು ನೆಲೆಯಾದರೆ ಇಂತಹ ದೃಶ್ಯಗಳಲ್ಲಿ ಭಾಗವಹಿಸುವವರ ಪರಿಸ್ಥಿತಿಯನ್ನು ಗಮನಿಸಬೇಕು.

ಈಗ ಪ್ರಮುಖ ನಾಯಕಿ ಎನ್ನಿಸಿಕೊಂಡವರು ತಮ್ಮ ಅನುಭವ ಹೇಳಿಕೊಂಡಿದ್ದು ಹೀಗೆ ‘ಚಿತ್ರರಂಗಕ್ಕೆ ಬಂದಾಗ ನನಗೆ ಹದಿಮೂರು ವರ್ಷ, ಮೊದಲ ಚಿತ್ರದಲ್ಲಿಯೇ ರೇಪ್‌ನ ದೃಶ್ಯ ಇತ್ತು. ಇಂತಹ ದೃಶ್ಯ ಇರುತ್ತದೆ ಎಂದು ಯಾರೂ ನನಗೆ ಹೇಳಿರಲಿಲ್ಲ. ಹೆಚ್ಚು ಕಡಿಮೆ ಒಂದೂವರೆ ಗಂಟೆ ಇದರ ಚಿತ್ರೀಕರಣ ನಡೆಯಿತು. ನಾನು ಅತ್ತಷ್ಟು ಅವರಿಗೆ ಉತ್ಸಾಹ ಹೆಚ್ಚಾಗುತ್ತಿತ್ತು. ತೆರೆಯ ಮೇಲೆ ನೋಡಿದರೆ ಇದು ಕ್ಷಣ ಮಾತ್ರದಲ್ಲಿ ಬಂದು ಹೋಗುವಷ್ಟು ಚಿಕ್ಕದಾಗಿತ್ತು. ಹಾಗಾದರೆ ಅಷ್ಟು ಹೊತ್ತು ಚಿತ್ರೀಕರಿಸಿದ್ದು ಏಕೆ ಎಂದರೆ ನನ್ನನ್ನು ಪಳಗಿಸಲು ಎಂದು ನಿರ್ದೇಶಕರು ಹೆಮ್ಮೆಯಿಂದ ಹೇಳಿ ಕೊಂಡಿದ್ದರು’ ಇಂತಹ ಅನುಭವ ಕಥನಗಳು ಸಾಕಷ್ಟು ಇವೆ. ಶೃಂಗಾರ ದೃಶ್ಯ ಮಾಧ್ಯಮಗಳಲ್ಲಿ ಹೇಗಿರಬೇಕು ಎನ್ನುವುದು ಆಯಾ ಸಂಸ್ಕೃತಿಗೆ, ಕಾಲಘಟ್ಟಕ್ಕೆ ಸಂಬಂಧಿಸಿರುತ್ತದೆ. ‘ವೀರಕೇಸರಿ’ ಚಿತ್ರದ ‘ಮೆಲ್ಲುಸಿರೇ ಸವಿಗಾನ’ ಗೀತೆಯ ಚಿತ್ರೀಕರಣವನ್ನು ಗಮನಿಸಿ ಇಲ್ಲಿನ ಕ್ಲೋಸ್ ಅಪ್‌ಗಳಲ್ಲಿ ಇರುವುದು ಸ್ಪರ್ಶದ ಬೆರಗು. ಬಹುಕಾಲ ಭಾರತೀಯ ಚಿತ್ರರಂಗದಲ್ಲಿ ನವಿರಾದ ಭಾವ ಎಂದರೆ ಸ್ಪರ್ಶದ ಬೆರಗಿನ ಲೋಕವೇ! ‘ಜೇನುಗೂಡು’ ಚಿತ್ರದ ಸನ್ನಿವೇಶ. ಮೊದಲ ರಾತ್ರಿ ನಲ್ಲ-ನಲ್ಲೆಯರು ತಮ್ಮ ಒಸುಗೆಯ ಆರಂಭಕ್ಕೆ ಕಾತರ, ಉದ್ವೇಗ, ತಲ್ಲಣ, ಸಂಭ್ರಮಗಳಿಂದ ಕಾಯುತ್ತಾ ಇದ್ದಾರೆ. ಇಲ್ಲಿ ಕು.ರ.ಸೀಯವರ ಗೀತೆಯೊಂದು ಮೂಡಿದೆ ‘ಜೇನಿರಳು ಜೊತೆಗೂಡಿರಲು’ ಹೆಣ್ಣೆಗೆ ಲಜ್ಜೆ, ಗಂಡಿಗೆ ತಾನು ತಿಳಿದವನು ಎಂದು ತೋರಿಸಿಕೊಳ್ಳುವ ಹಂಬಲ ‘ನುಡಿ ನವಿರು, ಮೈನವಿರು ತರುತಿಹುದೇಕೆ ತಂಬೆಲರು’ ಎಂದು ಕೇಳಿದ ನಲ್ಲೆಗೆ ತಿಳಿದವನ ರೀತಿ ‘ಅಳುಕದಿರು, ಅಂಜದಿರು ಅರಿವುದು ತಾನೆ ಸಮ್ಮನಿರು’ ಎಂದು ಹೇಳುತ್ತಾನೆ. ಹೀಗೆ ಸಂಭಾಷಣೆ ಬೆಳೆಯುತ್ತಾ ಹೋಗಿ ಅವಳು ಮುಗ್ಧತೆಯಿಂದ ‘ಬಾಳುವೆಯ ಹೂಬಳ್ಳಿ ಚಿಗುರುವ ವೈಖರಿ ಹೀಗೇನೆ’ ಎಂದು ಕೇಳುತ್ತಾಳೆ. ಈ ವಿಷಯದಲ್ಲಿ ಅವನು ಹೊಸಬನೇ ‘ಕೇಳದಿರು ಮುಂದೇನೂ ಹೊಸತನ ನನಗೂ ಶಿವನಾಣೆ’ ಎನ್ನುತ್ತಾನೆ. ಈ ಗೀತೆಯ ಸೂಕ್ಷ್ಮಗಳಂತೆ ದೃಶ್ಯ ಕೂಡ ಮೂಡಿಬಂದಿದೆ. ಇಲ್ಲಿ ಸರಸ ಮತ್ತು ವಿರಸ ಎರಡೂ ಮಾದರಿಗಳೂ ಇದ್ದು ನೆರಳು-ಬೆಳಕುಗಳ ಸಂಯೋಜನೆಯನ್ನು ಸಮರ್ಥವಾಗಿ ಬಳಸಿ ಕೊಳ್ಳಲಾಗಿದೆ.

‘ನಾಗರ ಹಾವು’ ಚಿತ್ರದ ‘ಬಾರೆ ಬಾರೆ ಚಂದದ ಚೆಲುವಿನ ತಾರೆ’ ಗೀತೆಯಲ್ಲಿ ‘ಅಂದದ ಹೆಣ್ಣಿನ ನಾಚಿಕೆ’ ಎಂಬ ರೂಪಕ ಬರುವುದನ್ನು ಗಮನಿಸಿರ ಬಹುದು. ಈ ಚಿತ್ರದ ಛಾಯಾಗ್ರಾಹಕರಾಗಿದ್ದ ಚಿಟ್ಟಿಬಾಬು ಅವರಿಗೆ ನಾಚಿಕೆಯ ರಂಗನ್ನು ಹಂತಹಂತವಾಗಿ ತೋರಿಸಿ ರೂಪಕವನ್ನು ಜೀವಂತಗೊಳಿಸಬೇಕು ಎಂಬ ಹಂಬಲ. ಆದರೆ ಆರತಿಯವರಿಗೆ ಅಂತಹ ಎಕ್ಸಪ್ರೆಷನ್ ಕೊಡಲು ಆಗಲೇ ಇಲ್ಲ. ಪುಟ್ಟಣ್ಣನವರು ಆ ಶಾಟ್‌ನ ಕುರಿತು ಸಮಾಧಾನ ತೋರಿಸಲಿಲ್ಲ, ಈಗಲೂ ನೀವು ಹಾಡಿನಲ್ಲಿ ನೋಡಬಹುದು. ಈ ರೂಪಕ ಬರುವಾಗ ಕ್ಯಾಮರಾ ವಿಷ್ಣುವರ್ಧನ್ ಅವರ ಮೇಲೆ ಪೋಕಸ್ ಆಗಿರುತ್ತದೆ. ಬೇರೆ ಛಾಯಾಗ್ರಾಹಕರಾದರೆ ಅದನ್ನು ಅಲ್ಲಿಗೆ ಮರೆತು ಬಿಟ್ಟಿರುತ್ತಿದ್ದರು. ಆದರೆ ಚಿಟ್ಟಿ ಬಾಬು ಹಾಗಲ್ಲ ಅಂತಹ ಸನ್ನಿವೇಶವನ್ನು ಹುಡುಕುತ್ತಲೇ ಇದ್ದರು. ‘ನಾ ನಿನ್ನ ಮರೆಯಲಾರೆ’ ಚಿತ್ರದ ‘ನನ್ನಾಸೆಯ ಹೂವೆ’ ಗೀತೆಯಲ್ಲಿ ಆಗಲೇ ಅಂದದ ಹೆಣ್ಣು ಎಂದು ಹೆಸರು ಪಡೆದಿದ್ದ ಲಕ್ಷ್ಮೀಯವರಿಂದ ಇಂತಹ ಎಕ್ಸಪ್ರೆಷನ್ ಬಯಸಿದರು. ಚಿಟ್ಟಿ ಬಾಬು ಆಗ 16 ಅಪರ್ಚರ್‌ನಲ್ಲಿ ಶೂಟ್ ಮಾಡುತ್ತಿದ್ದರು. ಎದುರಿಗೆ ಎರಡು ರಿಫ್ಲೆಕ್ಟರ್​ಗಳನ್ನು ಇಡುತ್ತಿದ್ದರು. ಎಕ್ಸಪ್ರೆಷನ್ ಕ್ಲಿಯರ್ ಆಗಿ ಬರಲಿ ಎನ್ನುವುದು ಅವರ ಉದ್ದೇಶ. ಈ ವಾತಾರವಣಕ್ಕೆ ಲಕ್ಷ್ಮೀ ಕೋಪಿಸಿಕೊಂಡು ‘ಮೊದಲೇ ಬಿಸಿಗಾಳಿ ಒಂದು ಕಿವಿಯಲ್ಲಿ ಹೊಕ್ಕು ಇನ್ನೊಂದು ಕಿವಿಯಿಂದ ಹೊರಗೆ ಬರ್ತಾ ಇದೆ. ಸಾಲದು ಎಂದು ಎದರುಗಡೆ ರಿಫ್ಲೆಕ್ಟರ್​ಗಳು ಕಣ್ಣನ್ನು ಕೋರೈಸುತ್ತಿವೆ. ಇಂತಹ ಕಡೆ ನಾಚಿಕೆಯ ಗ್ರೇಡೇಷನ್ ಕೊಡಬೇಕು ಎಂದರೆ ಹೇಗೆ ಸಾಧ್ಯ’ ಎಂದಿದ್ದರು.

manoranjana vruttanta

ಸೌಜನ್ಯ : ಸಾಟ್ಚೀ ಆರ್ಟ್

ಆದರೆ ಚಿಟ್ಟಿ ಬಾಬು ಹಠವಾದಿ ಲಕ್ಷ್ಮೀಯವರಿಂದ ಅಂತಹ ಎಕ್ಸಪ್ರೆಷನ್ ಪಡೆದುಕೊಂಡು. ಆದರೆ ಲೈಟಿಂಗ್ ಜಾಸ್ತಿಯಾಗಿ ಅದು ತೆರೆಯ ಮೇಲೆ ಬ್ಲರ್ ಆಗಿಬಿಟ್ಟಿತು. ಚಿಟ್ಟಿಬಾಬು ಆಗಲೂ ನಿರಾಶರಾಗಲಿಲ್ಲ. ಇನ್ನೊಂದು ಅವಕಾಶಕ್ಕೆ ಸಿದ್ದರಾದರು. ‘ಚಂದನದ ಗೊಂಬೆ’ ಚಿತ್ರದಲ್ಲಿ ಅವರಿಗೆ ಇಂತಹ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ಅನಂತ್​ನಾಗ್ ಪಾತ್ರದ ಅವಧಿ ಬಹಳ ಕಡಿಮೆಯಾಗಿದ್ದರಿಂದ ಅಷ್ಟರಲ್ಲಿಯೇ ಗೀತೆಗಳನ್ನು ತರಲು ನಿರ್ದೇಶಕ ದೊರೆ-ಭಗವಾನ್ ಉದ್ದೇಶಿಸಿದ್ದರು. ಅದರಲ್ಲಿಯೂ ಟೈಟಲ್ ಸಾಂಗ್ ‘ಆಕಾಶದಿಂದ ಧರೆಗಿಳಿದ ರಂಭೆ’ ಗೀತೆಯಲ್ಲಿ ಅನಂತನಾಗ್ ಅವರು ಹಾಡುತ್ತಿರುವುದರ ಜೊತೆಗೆ ಲಕ್ಷ್ಮೀಯವರ ಎಕ್ಸಪ್ರೆಷನ್‌ಗಳನ್ನು ಜೆಕ್ಸಟ್ರಾಪೋಸ್ ಮಾಡುವ ಸನ್ನಿವೇಶ ಒದಗಿತು. ಈಗ ಚಿಟ್ಟಿಬಾಬು ಲಕ್ಷ್ಮೀಯವರನ್ನು ಮತ್ತೆ ಒಪ್ಪಿಸಿದರು. ಈಗ ಅವರ ಪ್ರಯತ್ನ ವ್ಯರ್ಥವಾಗಲಿಲ್ಲ. ‘ಅಂದದ ಹೆಣ್ಣಿನ ನಾಚಿಕೆ’ ಸಿಕ್ಕಿಯೇ ಬಿಟ್ಟಿತು. ಇವೆಲ್ಲವೂ ಶೃಂಗಾರವನ್ನು ಸಮರ್ಥವಾಗಿ ತೆರೆಯ ಮೇಲೆ ತರಲು ಹಿಂದೆ ಹೇಗೆ ಪ್ರಯತ್ನಿಸಲಾಗುತ್ತಿತ್ತು ಎನ್ನುವುದಕ್ಕೆ ಉದಾಹರಣೆಗಳು.

ಆದರೆ ಹಸಿಹಸಿ ಚಿತ್ರಣಗಳ ಪ್ರಯೋಗಗಳೂ ಕೂಡ ನಡೆಯುತ್ತಿದ್ದವು. ಅದಕ್ಕೆ ರಾಜಮಾರ್ಗ ಸಿಕ್ಕಿದ್ದು ‘ಅನುಭವ’ ಚಿತ್ರದ ಮೂಲಕ. ಈ ಚಿತ್ರದ ಯಶಸ್ಸು ಸಾಲು ಸಾಲು ಅಂತಹ ವಿಕೃತ ಎನ್ನಬಲ್ಲ ಚಿತ್ರಗಳು ಕನ್ನಡದಲ್ಲಿ ಬರಲು ಕಾರಣವಾಯಿತು. ಕಾಶಿನಾಥ್ ಅವರೇ ಅಂತಹ ಹಲವು ಚಿತ್ರಗಳನ್ನು ನೀಡಿದರು. ರವಿಚಂದ್ರನ್ ಅವರದು ಶೃಂಗಾರ ಮತ್ತು ಕಾಮಪ್ರಚೋದನೆಯ ನಡುವಿನ ಮಾರ್ಗ. ‘ಪ್ರೇಮಲೋಕ’ ಚಿತ್ರದ ಮೂಲಕವೇ ಇದು ಆರಂಭವಾಯಿತು. ನಾಯಕಿಯರನ್ನು ದೃಶ್ಯದಲ್ಲಿ ಆಕರ್ಷಕ ಭಂಗಿಗಳಲ್ಲಿ ಬಳಸಿ ಕೊಂಡು ವಿಕೃತಿಯ ಅಂಚಿನ ಹಲವು ಪ್ರಯೋಗಗಳನ್ನು ಅವರು ಮಾಡಿದರು. ಹೊಕ್ಕಳ ಮೇಲೆ ಹಾಲು, ಜೇನುತುಪ್ಪ ಸುರಿಯುವ ದೃಶ್ಯಗಳು ಸಾಮಾನ್ಯ ಎನ್ನಿಸಿಕೊಂಡವು. ಇದೂ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಮಾದರಿ ಸೃಷ್ಟಿಸಿತು. ಹೆಣ್ಣನ್ನು ಕೆಣಕುವ ಬಹಳ ಹಿಂದಿನಿಂದ ಬಂದ ಕಲ್ಪನೆ ‘ಅಂಜದ ಗಂಡು’ ಚಿತ್ರದ ‘ಮೂರು ಕಾಸಿನ ಕುದುರೆ’ ಗೀತೆಯಲ್ಲಿ ವಿಕೃತಿಯ ಕಡೆಗೆ ಸಾಗಿತು. ಮುಂದೆ ಸೂಕ್ಷ್ಮಗಳೆಲ್ಲವೂ ಮಾಯವಾಗಿ ವಿಕೃತಿಗೇ ಹೆಚ್ಚು ಒತ್ತು ಸಿಕ್ಕಿತು. ಈಗಂತೂ ಪ್ರಣಯ ಸನ್ನಿವೇಶಗಳಲ್ಲಿ ಕೂಡ ಕ್ಲೋಸ್ ಅಪ್ ಇರುವುದಿಲ್ಲ. ಏಕೆಂದರೆ ಭಾವ ಅಭಿವ್ಯಕ್ತಿಗೆ ಅವಕಾಶವೇ ಇರುವುದಿಲ್ಲ. ಪ್ರೇಮಿಸುವವರ ಕಣ್ಣುಗಳಲ್ಲಿ ಕೂಡ ಮುಗಿಯದ ದಾಹವನ್ನು ಗಮನಿಸಬಹುದು. ಇವೆಲ್ಲವೂ ಹೆಣ್ಣು ಕೇವಲ ಪ್ರದರ್ಶನದ ವಸ್ತು ಆಗಿ ಬಿಟ್ಟಿರುವ ಆಧುನಿಕ ಮನೋಸ್ಥಿತಿಯ ಪರಿಣಾಮ ಎನ್ನಬಹುದು.

ವಿಕೃತಿ ಎಂದು ಚಿತ್ರರಂಗದಲ್ಲಿ ಕರೆಯಬಹುದಾದ ಇನ್ನೊಂದು ಅಂಶವೆಂದರೆ ರೇಪ್‌ನ ದೃಶ್ಯಗಳು. ಅಸಂಖ್ಯಾತ ರೇಪ್ ದೃಶ್ಯಗಳಲ್ಲಿ ಅಭಿನಯಿಸಿದ್ದ ವಜ್ರಮುನಿ ಈ ಕುರಿತು ಹೇಳಿಕೊಂಡಿದ್ದು ಹೀಗೆ ‘ಒಂದು ಚಿತ್ರರಂಗದ ಮಾನಭಂಗದ ದೃಶ್ಯ. ಕಲ್ಲು ಮಣ್ಣು ಹರಡಿದ್ದ ಪ್ರದೇಶದಲ್ಲಿ ಹುಡುಗಿಯನ್ನು ಕೆಡವಬೇಕು, ಸೀರೆಯನ್ನು ಸಾಂಕೇತಿಕವಾಗಿ ಎಳೆಯಬೇಕು, ರವಿಕೆಯನ್ನು ಪರಪರನೆ ಹರಿಯಬೇಕು, ನಾನಾ ಕಾರಣಗಳಿಂದ ಈ ದೃಶ್ಯ ಮತ್ತೆ ಮತ್ತೆ ರೀಟೇಕ್ ಆಯಿತು. ಇದರ ಚಿತ್ರೀಕರಣದಲ್ಲಿ ಆ ನಟಿ ಬಹಳ ನೋವನ್ನು ಅನುಭವಿಸಿರಬೇಕು, ಚಿತ್ರೀಕರಣ ಮುಗಿಯುತ್ತಿದ್ದಂತೆ ನನ್ನ ಬೆನ್ನಿಗೆ ಒಂದು ಏಟನ್ನು ಕೊಟ್ಟು. ಇಷ್ಟೊಂದು ಹಿಂಸೆ ಕೊಡುವುದೇನ್ರಿ ಎಂದು ಗಟ್ಟಿಯಾಗಿ ಅಳಲು ಆರಂಭಿಸಿದಳು. ನನಗೆ ಕರಳು ಕಿತ್ತು ಬರುವಂತಾಯಿತು.

ಇಂತಹ ದೃಶ್ಯಗಳನ್ನು ಸಾಂಕೇತಿಕವಾಗಿ ತೋರಿಸಬಾರದೆ ಎನ್ನಿಸಿತು’ ಆದರೆ ಹೀಗೆ ಚಿತ್ರ ನಿರ್ಮಾತೃಗಳಿಗೆ ಅನ್ನಿಸುವುದಿಲ್ಲ. ಅವರಿಗೆ ಅದು ಒಂದು ರೀತಿಯಲ್ಲಿ ಮಾರಾಟದ ತಂತ್ರ. ಈ ಕುರಿತು ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರು ಹೇಳಿದ್ದರು ‘ರೇಪ್ ದೃಶ್ಯಗಳು ನೋಡುವವರ ಮನಸ್ಸಿನಲ್ಲಿ ಅಂತಹ ಭಾವನೆ ಶಮನ ಮಾಡುವಂತೆ ಇರಬೇಕೆ ಹೊರತು ಪ್ರಚೋದಿಸುವಂತೆ ಅಲ್ಲ’ ಇನ್ನೊಬ್ಬ ಹಿರಿಯ ಖಳನಟ ಶಕ್ತಿ ಪ್ರಸಾದ್ ಇಂತಹ ದೃಶ್ಯಗಳನ್ನು ತೋರಿಸುವ ಕುರಿತೇ ಆಕ್ಷೇಪ ಎತ್ತಿದ್ದರು. ‘ಶಕುನಿಗಿಂತ ಖಳ ಬೇಕೆ? ಆದರೆ ಆತ ಎಲ್ಲಾದರೂ ಅಬ್ಬರಿಸುದ್ದುಂಟೆ, ಹೆಂಗಸರ ಮಾನಭಂಗ ಮಾಡಿದ್ದು ಉಂಟೆ?’

ತಮ್ಮ ‘ಖಂಡವಿದೆಕೋ ಮಾಂಸವಿದೆಕೋ’ ಹಸಿಬಿಸಿ ಚಿತ್ರದ ಮೂಲಕ ವಿವಾದ ಸೃಷ್ಟಿಸಿದ್ದ ಪಿ.ಲಂಕೇಶ್ ‘ಸೆಕ್ಸ್​ನ ಸ್ಥಾನ ಜೀವನದಲ್ಲಿ ಬಹಳ ಮುಖ್ಯವಾದದ್ದು, ಆದರೆ ಅದನ್ನು ತೋರಿಸುವಾಗ ಕೌಶಲ ಬೇಕು, ಅದರ ಅರ್ಥವೂ ಗೊತ್ತಿರಬೇಕು ಇಲ್ಲದಿದ್ದರೆ ಅದು ವಿಕೃತಿಯಾಗುವ ಅಪಾಯವಿರುತ್ತದೆ’ ಈ ಚರ್ಚೆ ಇಂದಿಗೂ ಮುಂದುವರೆದುಕೊಂಡೇ ಬಂದಿದೆ. ‘ಅಂತ’ ಚಿತ್ರದಲ್ಲಿ ‘ಪ್ರೇಮವಿದೆ ಮನದೆ ನಗುವ ಹೂವಾಗಿ’ ಹಾಡಿನ ಚಿತ್ರೀಕರಣದ ಸನ್ನಿವೇಶ. ಇದರಲ್ಲಿ ಅಭಿನಯಿಸಿದ್ದ ಜಯಮಾಲಾ ನಾಯಕಿಯಾಗಿ ಮರೆದಿದ್ದವರು. ಹಾಡಿನ ಸ್ವರೂಪ ನೋಡಿ ಅಭಿನಯಿಸಲು ಹಿಂಜರಿದರು. ಆಗ ನೃತ್ಯ ನಿರ್ದೇಶಕ ಉಡುಪಿ ಜಯರಾಂ ‘ಹೆದರಬೇಡಿ, ಈ ಗೀತೆಯನ್ನು ಪ್ರೇಕ್ಷಕರ ಮನದಲ್ಲಿ ನಿಮ್ಮ ಕುರಿತು ಸಹಾನುಭೂತಿ ಹುಟ್ಟುವಂತೆ ಚಿತ್ರಿಸುತ್ತೇನೆ’ ಎಂದಿದ್ದರು. ಹಾಗೆ ಮಾಡಿದರು ಕೂಡ. ಇದು ತೋರಿಸುವ ಕ್ರಮದಲ್ಲಿನ ಆಯ್ಕೆಗಳನ್ನು ಸೂಚಿಸುತ್ತದೆ.

manoranjana vruttanta

ಸೌಜನ್ಯ : ಕ್ರಿಸ್ಟೀಸ್

ಹಾಲಿವುಡ್ ಮತ್ತು ಅನೇಕ ಯೂರೋಪಿಯನ್ ಚಿತ್ರಗಳಲ್ಲಿ 1970ರವರೆಗೂ ಲೈಂಗಿಕ ಉದ್ರೇಕಕಾರಿ ಸನ್ನಿವೇಶಗಳು ಇರುತ್ತಿದ್ದವು. 1970ರ ನಂತರ ಈ ಸ್ಥಿತಿ ಬದಲಾಗಲು ಮೊದಲಿಂದಲೂ ಇದ್ದ ನೀಲಿ ಚಿತ್ರಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದು. ಅಲ್ಲಿ ಪೋರ್ನ್ ಚಿತ್ರಗಳಿಗಾಗಿಯೇ ಅಡಲ್ಟ್ ಥಿಯೇಟರ್‌ಗಳು ಆರಂಭವಾದವು. 1990ರ ವೇಳೆಗೆ ಈ ಪ್ರವಾಹ ಗಮನಾರ್ಹವಾಗಿ ಕುಗ್ಗಿತು. ಈ ದೇಶಗಳ ಚಿತ್ರರಂಗದಲ್ಲಿ ಈಗ ಲೈಂಗಿಕತೆ ಎನ್ನುವುದು ಒಂದು ಆಕರ್ಷಕ ಅಂಶವಾಗಿ ಉಳಿದಿಲ್ಲ. ಪೋರ್ನ್ ಚಿತ್ರಗಳ ಮಾರುಕಟ್ಟೆ ಕೂಡ ಗಮನಾರ್ಹವಾಗಿ ಕುಗ್ಗಿದೆ. ಬದಲಾಗಿ ಭಾರತದಲ್ಲಿ ಮಾರುಕಟ್ಟೆ ರೂಪುಗೊಂಡಿತು. ಮೊದಲಿಂದಲೂ ಮಡಿವಂತಿಕೆಯ ಇಲ್ಲಿನ ಸಮಾಜದಲ್ಲಿ ಕದ್ದು ಓದುವ ಲೈಂಗಿಕ ಪತ್ರಿಕೆಗಳು ಇರುತ್ತಿದ್ದವು. 2000ರ ನಂತರ ಅಂತರ್ಜಾಲದ ಸಂಪರ್ಕ ಬೆಳೆದಂತೆ ಪೋರ್ನ್ ಕದ್ದು ಮುಚ್ಚಿ ಕಾಲಿಟ್ಟಿತು. ಭಾರತೀಯ ದಂಡ ಸಂಹಿತೆ 293 ಮತ್ತು ಭಾರತೀಯ ಐಟಿ ಆ್ಯಕ್ಟ್ 67 (ಎಫ್) ಎರಡರ ಪ್ರಕಾರವೂ ಪೋರ್ನ್ ಚಿತ್ರಗಳ ತಯಾರಿಕೆ, ವಿತರಣೆ, ವೀಕ್ಷಣೆ ಎಲ್ಲವೂ ಅಪರಾಧವೇ, ಆದರೆ ಕದ್ದುಮುಚ್ಚಿ ಇದು ನಡೆಯುತ್ತಲೇ ಇದೆ. ಇಂದು ಜಾಗತಿಕವಾಗಿ ಕೂಡ ಭಾರತ ಪೋರ್ನ್ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯನ್ನು ಒದಗಿಸಿದೆ. ಇದರ ನೆರಳು ಭಾರತೀಯ ಚಿತ್ರರಂಗದ ಮೇಲೆ ಬಿದ್ದಿದೆ, ಇದರ ಅನುಕರಣೆ ಕನ್ನಡ ಚಿತ್ರರಂಗದಲ್ಲಿಯೂ ಕಾಣುತ್ತಿದೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಪ್ರಮಾಣದ ವೀಕ್ಷಕರನ್ನು ನೀಡುತ್ತಾ ಇದ್ದಿದ್ದು ಮಧ್ಯಮ ವರ್ಗ. ಈಗ ಮಧ್ಯಮ ವರ್ಗದ ಸ್ವರೂಪವೇ ಬದಲಾಗಿದೆ. ಅದು ಅನೇಕ ಕಾರಣಗಳಿಂದ ಕನ್ನಡ ಚಿತ್ರರಂಗದಿಂದ ದೂರವಾಗಿದೆ. ಒಂದು ಕಾಲದಲ್ಲಿ ನವಿರಾದ ಶೃಂಗಾರ ದೃಶ್ಯಗಳು ರೂಪುಗೊಳ್ಳುತ್ತಾ ಇದ್ದಿದ್ದೇ ಮಧ್ಯಮ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿ ಇರಿಸಿ. ಈಗ ಮಧ್ಯಮ ವರ್ಗ ಹೇಗಿದ್ದರೂ ದೂರವಾಗಿದೆ ಎನ್ನುವ ಹುಂಬತನದಲ್ಲಿ ವಿಕೃತಿಯ ದಾರಿಯನ್ನು ಚಿತ್ರರಂಗ ಹಿಡಿದಿದೆ. ಇದನ್ನು ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆಯನ್ನು ಸ್ವತಃ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿದೆ. ಇದಕ್ಕೆ ಉತ್ತರಿಸುವ ಜವಾಬ್ದಾರಿ ಕೇವಲ ಸರ್ಕಾರದ್ದು ಮಾತ್ರವಲ್ಲದೆ ನಮ್ಮೆಲ್ಲರದ್ದೂ ಆಗಿದೆ.

sreedhar murthy

ಲೇಖಕ ಎನ್. ಎಸ್. ಶ್ರೀಧರ ಮೂರ್ತಿ

ಇದನ್ನೂ ಓದಿ : ‘ನನ್ನ ಗಂಡ ನಿರಪರಾಧಿ; ಅಶ್ಲೀಲ ಸಿನಿಮಾ ಮಾಡಿಲ್ಲ’; ರಾಜ್​ ಕುಂದ್ರಾ ಪರ ಶಿಲ್ಪಾ ಶೆಟ್ಟಿ ಬ್ಯಾಟಿಂಗ್

Published On - 2:34 pm, Wed, 28 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ