Poetry : ಅವಿತಕವಿತೆ ; ಹಸಿವಿನ ಮುಂದೆ ಧ್ಯಾನ, ಮುದ್ರಿಕೆ, ನಾಥಪಟ್ಟ ಇವೆಲ್ಲವೂ ಶೂನ್ಯ

Poetry : ಅವಿತಕವಿತೆ ; ಹಸಿವಿನ ಮುಂದೆ ಧ್ಯಾನ, ಮುದ್ರಿಕೆ, ನಾಥಪಟ್ಟ ಇವೆಲ್ಲವೂ ಶೂನ್ಯ

Kannada Literature : ‘ದೇಶ ಕಾಲಗಳ ಮೀರಿ ಮಾನವೀಯತೆಯ ಜೊತೆಗೆ ಕಲಾತ್ಮಕ ದರ್ಶನವನ್ನು ನೀಡುವುದೇ ಕಾವ್ಯಪ್ರಪಂಚದ ಉದ್ದೇಶ. ಸದಾ ಕಾಡುವ ಸಂಗತಿಗಳು, ನಗರೀಕರಣ ತರುವ ಒಂಟಿತನ, ಸಂಬಂಧಗಳ ರಣಕಹಳೆ, ಆಧುನಿಕ ಬದುಕಿನ ಅಮಾನವೀಯ ನಡತೆಗಳು ಆಗಾಗ ನನ್ನನ್ನು ಕವಿತೆ ಬರೆಯಲು ಪ್ರೇರೇಪಿಸುತ್ತವೆ’ ಸೂರ್ಯಕೀರ್ತಿ 

ಶ್ರೀದೇವಿ ಕಳಸದ | Shridevi Kalasad

|

Aug 01, 2021 | 10:32 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈ ವಾರ ಕವಿ ಸೂರ್ಯಕೀರ್ತಿ (ಕೀರ್ತಿ ಪಿ.) ಅವರ ಕವಿತೆಗಳು ನಿಮ್ಮ ಓದಿಗೆ.

ಹೊಸ ತಲೆಮಾರಿನ ಕವಿಗಳು ಹೇಗೆ ಗ್ರಹಿಸುತ್ತಿದ್ದಾರೆಂಬುದಕ್ಕೆ ಕೀರ್ತಿಯವರ ಇಲ್ಲಿಯ ಕವಿತೆಗಳು ಸಾಕ್ಷಿ. ಅವರಲ್ಲಿ ಅಪಾರವಾದ ಕಾವ್ಯದ ಉರ್ಜಿಯಿದೆ, ಜೊತೆಗೆ ಹೇಳಬೇಕೆಂಬ ಹುಮ್ಮಸಿಗೆ ಹೇಳು ಹೇಳುತ್ತಾ ಅವರು ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಾರೆ. ಬಂಡಾಯದ ಬಾವುಟವನ್ನು ಘಡಫಡಿಸುತ್ತಾರೆ. ಕಾವ್ಯದ ಸಮಸ್ತ ಪ್ರಕಾರಗಳನ್ನು ತಮ್ಮ ಕವಿತೆಗಳಲ್ಲಿ ಬಳಸಲು ಯತ್ನಿಸಿರುವುದು ಅವರ ಕಾವ್ಯ ಪ್ರತಿಭೆಗೆ ಸಾಕ್ಷಿ. ಡಾ. ಸರಜೂ ಕಾಟ್ಕರ್, ಹಿರಿಯ ಪತ್ರಕರ್ತರು * ಕೀರ್ತಿಯವರ ಕವಿತೆಗಳಲ್ಲಿ ವಸ್ತು ವೈವಿಧ್ಯವಿದೆ ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇದೆ. ರಮ್ಯತೆಯ ಬಗ್ಗೆ ರುಚಿಯಿದೆ. ಭಾಷೆಯಲ್ಲಿ ಭಾವಗೀತಾತ್ಮಕ ಗುಣವಿದೆ. ಡಾ. ಎಂ. ಆರ್. ಕಮಲ, ಹಿರಿಯ ಕವಿ.

*

ಗೌರಿ‌ ಉತ್ತ ನೆಲ

ಕೈಲಾಸದಲ್ಲಿ‌ ಬರಗಾಲವಂತೆ ಹಿಮಗಳೆಲ್ಲ ಬೆಂದು ಬೆವರಿ ಇಂಗಿವೆಯಂತೆ ಸುಟ್ಟ ಮರಗಳ ದಿಮ್ಮಿ ಎತ್ತ ನೋಡಿದರೂ ಭೂತನಾಥನ ಸುಟ್ಟಭೂಮಿಯಂತೆ

ಗಣಪ ಇಲಿ ದಂಡುಗಳ ಕಟ್ಟಿಕೊಂಡು ಆಡುತಿದ್ದಾನಂತೆ ಷಣ್ಮುಗ ನವಿಲುಗಳ ಮೇಲೆ ಕುಳಿತುಕೊಂಡು ಹಾರುತಿದ್ದಾನಂತೆ ಸಿವಪ್ಪ ಕಣ್ಣು ಮುಚ್ಚಿ ಕೈ ಕಾಲುಗಳ ಜೋಡಿಸಿ ಪದ್ಮಾಸನದಲ್ಲಿ ಕುಳಿತು ಬಿಟ್ಟನಂತೆ

ಹರಿದ ರವಕೆಯಲ್ಲಿ ಗೌರಿ ಸೆಗಣಿಯಿಂದ ಮನೆ ತಾರಿಸಿ, ರಂಗೋಲಿ ಬಿಡಿಸಿ ಹಿತ್ತಲಲ್ಲಿ‌ದ್ದ ಸೌದೆಗಳ ತಂದು ಒಲೆ ಮುಂದೆ ಕುಂತಳಂತೆ. ರಾಗಿ ಮಡಿಕೆಯಲ್ಲಿ ಹಿಟ್ಟಿಲ್ಲ ಅವಳ ಕೈ ಬಾಯಿಗಳಿಗೆ ಬೂದಿ ತುಂಬಿಕೊಂಡು, ಸೆರಗ ಮುಚ್ಚಿಕೊಂಡು ಅತ್ತಳಂತೆ

ಹಸಿದ ಗಣಪ ‘ಅಮ್ಮ‌ಊಟ, ಅಮ್ಮ‌ಊಟ’ ಅಂದನಂತೆ, ಹಾರಿಕೊಂಡು ಬಂದ ಷಣ್ಮುಗ ‘ಏನು ಬುವ್ವನಮ್ಮ‌’ಅಂದನಂತೆ. ಹಸಿದ ಮಕ್ಕಳ‌ ನೋಡಿ‌ ಪೇಚಾಡುತ್ತಾ ಸಿವನ‌ ಬಳಿ ಕೇಳಿದಳಂತೆ. ಸಿವ ಧ್ಯಾನದಲ್ಲಿದ್ದವನು ನೋಡಲಿಲ್ಲ; ‘ಮುಂಡೇಗಂಡನ್ಗೆ ಹೆಂಡ್ರೂ, ಮಕ್ಳು ಯ್ಯಾಕೆ?’ ಎಂದು ವಿರಾಗಿಯ ಮುಂದೆ ಜೋತು ಬಿದ್ದಳಂತೆ.

ತೆರೆದ ಕಣ್ಗಳ ಮುಂದೆ ಅತ್ತು ಅತ್ತು ಲೋಕದ ಹಸಿವು ಈ ಬೂದನಿಗೆ ಹೇಗೆ ಗೊತ್ತಾಗಬೇಕು ಎನ್ನುತ್ತಲೇ ಗಣಪನ ‌ಮೂಗಿನ‌ ಗೊಣ್ಣೆಯ ವರೆಸಿ; ಷಣ್ಮುಗನ ತಿಕವ ತೊಳೆದು ಲೋಕನಾಥನ ಕಡೆ ನೋಡಿ ನೋಡಿ, ಎಚ್ಚರಾಗದ ರುದ್ರ ಮತ್ತೆ ಅಕ್ಕಿ ಬೇಳೆಗಳ ತಂದು ಕೊಡುವನೆ? ಭಂಗಿಯ ಸೇದಿದ ಈ ಮೂಳ ಭಂಗದ ಬದುಕನ್ನು‌ ನಿವಾರಿಸಬಲ್ಲನೇ? ಸೋಮರಸವ ಕುಡಿದ ಸಂಕರ ಎಣ್ಣೆ ಕಾಳುಗಳ ತರುವನೇ? ಎಂದು ಬಿಕ್ಕಿ ಬಿಕ್ಕಿ ಅತ್ತು…

ನೋಡಿದರೆ ಹೊಟ್ಟೆ ತುಂಬುವುದೇ ಹಸಿದ ಗಣಪ, ಕುಮಾರನ ಹಸಿವು ಹೋಗುವುದೇ? ತ್ರಿನೇತ್ರನಾದ ತ್ರಿಶೂಲಧಾರಿಗೆ ಇವೆಲ್ಲ ಅರ್ಥವಾಗುವವೇ? ಎಂದು ಕಣ್ಣೀರ ವರೆಸಿಕೊಂಡು ಗಣಪ ಅಲ್ಲಲ್ಲಿ ಬಿದ್ದ ಅವರೇಕಾಳುಗಳ ಭೂಮಿಗೆ ಅದಿಯುವುದ ಕಂಡು; ಬಸವನಿಗೆ ನೊಗವೂಡಿ ಕಲ್ಲುನೆಲಗಳ ಉತ್ತಳಂತೆ, ಮುಗುಲಿಗೆ ಬಾಯ್ಬುಟ್ಟು ಕರೆದಳಂತೆ ಸವತಿಯ

ಉತ್ತ ಗೆರೆಗಳಿಗೆ ಗಣಪ, ಷಣ್ಮುಗ ಬಿತ್ತಿದರಂತೆ ರಾಗಿಯ, ಅವರೆಯ! ಹುಯ್ದಳಂತೆ ಗಂಗೆ ಮಳೆಯಾಗಿ ಸುಟ್ಟ ನೆಲವೆಲ್ಲ ಚಿಗುರಿ, ಎತ್ತ ನೋಡಿದರೂ ಹೂ – ಕಾಯಿಗಳ ಕಂಡು ಜಿಗಿದಳಂತೆ ತುಂಬೆ ಸೊಪ್ಪಿನ ಸಾರು, ಅಂಬಲಿಯ ಮಾಡಿ ಅಣ್ಣೇಸೊಪ್ಪಿನ ಪಲ್ಯ ಬೇಯಿಸಿ ಕರೆದಳಂತೆ ಮಕ್ಕಳ ಉಂಡರಂತೆ ತಣ್ಣಿಗೆಯೂಟವ.

ತುಂಬೆ ಸೊಪ್ಪಿನ ವಾಸನೆಗೆ ಸಿವ ತೆರೆದನಂತೆ ಕಣ್ಣುಗಳ ಹಸಿದ ಹೊಟ್ಟೆಯ ಮುಂದೆ ಧ್ಯಾನ‌ ಒಗ್ಗುವುದೆ ಎಂದು ಶಪಿಸಿಕೊಂಡನಂತೆ ಗೌರಿ, ಮಕ್ಕಳ ತಬ್ಬಿಕೊಂಡು ಈ‌ ಹಸಿವಿನ ಅನ್ನ‌ದ ಮುಂದೆ ಧ್ಯಾನ, ಮುದ್ರಿಕೆ, ನಾಥ ಪಟ್ಟ ಇವೆಲ್ಲವೂ ಶೂನ್ಯ ಶೂನ್ಯ ಎಂದನಂತೆ.

*

avithkavithe soorya keerthi

ಸೂರ್ಯಕೀರ್ತಿಯವರ ಮೊದಲ ಪುಸ್ತಕ

ಕವಿತೆ ಎಂಬ ಮೋಹ

ನನ್ನ ಕವಿತೆ ಹೂಗಟ್ಟಿದಾಗ ಒಂದಷ್ಟು ಎಲೆಗಳು ಚಿಗುರುತ್ತವೆ, ಅಲ್ಲಲ್ಲಿ ಪಕಳೆಗಳ ನೋವುಗಳು ಆಗಾಗ ಇಣುಕುತ್ತಲೇ ಇರುತ್ತವೆ!

ಬೇರು ಬೆವರುತ್ತಲೇ ಕಾಂಡಕ್ಕೆ ಜೀವವಾಗುತ್ತದೆ ಮಣ್ಣು ನೋಯುತ್ತಲೆ ತನ್ನನ್ನು ತಿಂದುಕೊಳ್ಳುತ್ತದೆ ಗಿಡ ಮರವಾಗುವುದೆ ತಡ; ಕೊಂಬೆಗಳ ಹಾಸಿ ಆಕಾಶಕ್ಕೆ ಜಿಗ್ಗಿಯುತ್ತದೆ!

ನನ್ನ ಕವಿತೆ ಮರಗಟ್ಟುತ್ತದೆ; ದಿಮ್ಮಿಯಾಗೆ, ಬೇರಿನಾಗೆ, ಹೂ ಕಾಯಿ ಪೀಚುಗಳ ಕಚ್ಚಿ, ಯಾವುದೋ ಮೋಹಕ್ಕೆ ಸಿಲುಕಿ ಉಸಿರಾಡುತ್ತಲೇ ಇರುತ್ತವೆ ಇರುವವರೆಗೂ!

ಹಣ್ಣಾಗುವುದೆ ತಡ; ಬೀಜವೃಕ್ಷಗಳ ಸೃಷ್ಟಿಸಿ ತನ್ನನ್ನೆ ಸೀಳಿಕೊಂಡು ಇನ್ನೆಲ್ಲೋ ಉದುರಿಸಿದ ಬೀಜಗಳು ಗಾಳಿಗೆ ಕೇಕೆ ಹಾಕಿದ ಬೀಜಗಳು ಹಕ್ಕಿಗಳ ಬಾಯಲ್ಲಿ ಅಗಿದ ಬೀಜಗಳು ಆಗಾಗ ಕವಿತೆಗಳ ನೆನಪಿಸುತ್ತವೆ! ಈ ಕವಿತೆಯೆಂಬ ಮೋಹವ.

*

avithakavithe soorya keerthi

ಸೂರ್ಯಕೀರ್ತಿ ಕೈಬರಹದೊಂದಿಗೆ

ದೇಶ ಕಾಲಗಳ ಮೀರಿ ಮಾನವೀಯತೆಯ ಜೊತೆಗೆ ಕಲಾತ್ಮಕ ದರ್ಶನವನ್ನು ನೀಡುವುದೇ ಕಾವ್ಯಪ್ರಪಂಚದ ಉದ್ದೇಶ. ನನ್ನೊಳಗೆ ಕಾವ್ಯ ದೃಶ್ಯಯಾನದಲ್ಲಿ ನಡೆದಷ್ಟು ಕವಿತೆಗಳು, ಹಾಡಿದಷ್ಟು ಕಾವ್ಯಗಳು, ಕೇಳಿದಷ್ಟು ಕತೆಗಳು ಹುಟ್ಟುತ್ತಲೇ ಇವೆ. ಇಲ್ಲಿನ ಪದ್ಯಗಳು ‘ಗದ್ಯಕಥಾ ಪದ್ಯಗಳು’ ಎಂದು ಹೇಳುವುದಾದರೂ ಉಪಮೆ, ಮಹೋಪಮೆ, ರಸ, ಛಂದಸ್ಸು ಇತರೆ ಎಲ್ಲವನ್ನೂ ಮರೆತು ಕವಿತೆ ದೀರ್ಘವಾಗಿ ಬರೆಸಿಕೊಂಡಿವೆ. ನಗರೀಕರಣ ತರುವ ಒಂಟಿತನ, ಸಂಬಂಧಗಳ ರಣಕಹಳೆ, ಆಧುನಿಕ ಬದುಕಿನ ಅಮಾನವೀಯ ನಡತೆಗಳು ಆಗಾಗ ನನ್ನನ್ನು ಕವಿತೆ ಬರೆಯಲು ಪ್ರೇರೇಪಿಸುತ್ತವೆ.

ಸದ್ದಿಲ್ಲದೇ ಮಲಗುತ್ತೇನೆ

ಯಾರೂ ಕೇಳಬೇಡಿ ನನ್ನ; ಏಕೆ ನೀನು ಸದ್ದಿಲ್ಲದೇ ಮಲಗುವೆ ಎಂದು ತೂಗಿಬಿಟ್ಟ ತೊಟ್ಟಿಲಲ್ಲಿ ಯಾಕೆ ಅಳುವುದಿಲ್ಲ, ಕರೆಯುವುದಿಲ್ಲ ಮತ್ತೆ ಆಡುವುದಿಲ್ಲ, ಸಮಸಮುದ್ರದ ಮೇಲೆ ಸದಾ ಮಲಗುತ್ತೇನೆ!

ನನಗೆ ಯಾರ ಹಾಡೂ ಬೇಡ ಕತೆಯೂ ಬೇಡ ಕಾವ್ಯವೂ; ಜೇನಿನ ಜೋಗುಳವ ಕೇಳಿ ಹೂವಿನ ಅಂದದ ಅಂಗಳದಲ್ಲಿ ಸದಾ ಮಲಗುವೆ ರಾಜರ ಕೂಗಿಗೆ ನನ್ನ ಕಿವಿಗಳು ತೂತಾಗಿವೆ ಮಂತ್ರಿಗಳ ಅಧಿಕಾರಕ್ಕೆ ನನ್ನ ಕಣ್ಣುಗಳು ಸೋತು ನಿಂತಿವೆ, ಬೇಡ ನಿಮ್ಮ ಹಂಗಿನ ವರದಾನ!

ಇನ್ನೂ ಮಲಗುತ್ತೇನೆ ನನ್ನನ್ನೇ ನಾನು ಸುತ್ತಿಕೊಂಡು; ಅಂಬರಕ್ಕೆ ಚಪ್ಪರ ಹಾಕಿಕೊಂಡು ಸೂರ್ಯನ ಕಿರಣಗಳ ಹಿಡಿದು ತಂದು ಮತ್ತೆ ಮತ್ತೆ ಮಲಗುತ್ತೇನೆ ಅಸಹನೆಯೆಂಬ ತೊಟ್ಟಿಲಲ್ಲಿ ಬೆಟ್ಟದ ಮೇಲಿನ ಕುರಿಂಜಿ ಹೂವುಗಳ ಮೇಲೆ ಹಾಡುತ್ತೇನೆ ಕೇಳುತ್ತೇನೆ, ‘‘ಈ ದುಂಬಿಗಳ ಆಳ್ವಿಕೆಯಲ್ಲಿ, ನಿಮಗೆ ಏಕೆ ಸ್ವಾತಂತ್ರ್ಯವಿಲ್ಲ’’ ಎಂದು.

ನಾನು ಮಲಗುವುದಂತೂ ಖಚಿತ; ಯಾವ ರಾಜಕೀಯದ ವ್ಯಾಜ್ಯವೂ ಬೇಡವೆಂದೇ ಬೆಚ್ಚನೆ ಮಲಗಿದ್ದೇನೆ ಕೋಣೆಯೊಳಗೆ ರಾಜ, ರಾಣಿ ಕೋಶ ದೇಶವೆಲ್ಲವೂ ಮುಳುಗಿ ಹೋದರೂ ಎಚ್ಚರಿಲ್ಲ ನಾನು ಮಲಗಿದ ನೆಲದ ಮೇಲೆ ಇಬ್ಬನಿ ಸುರಿದು ನಿಂತರೂ ಭಯವಿಲ್ಲ ಇನ್ನು ನಿಸ್ತೇಜನಂತೆ ಮಲಗಿರುವ ಈ ನಿದ್ದೆಯೊಳಗೆ ಇನ್ನೂ ಮಲಗುತ್ತೇನೆ!

ಈ ನಿದ್ದೆಯೆಂಬುದು ನಿದ್ದೆಯೇ ಅಲ್ಲ, ಜ್ಞಾನದ ತಮ ಸುರಿದ ಮೇಲೂ ಮಾಡುವ ನಿದ್ದೆ ನಿದ್ದೆಯೇ ಅಲ್ಲ ಹಾಡುವ ಕೇಳುವ ನಲಿಯುವ ವನಕುಸುಮಗಳಿಗೆ ಕ್ರಾಂತಿಯ ಕಿಚ್ಚು ಗೊತ್ತು; ಕೆಚ್ಚಲಲ್ಲಿ ಹಾಲಿರುವ ಹಸುಗಳಿಗೆ ಕ್ಷೀರಧಾರೆಯೆರೆಯುವ ಸ್ಪರ್ಶವುಂಟು ಇನ್ನು ನನ್ನಲ್ಲಿ ನಾನು ಮಲಗುವ ತನಕ ನನಗೆ ಇನ್ನೆಲ್ಲಿ ನಿದ್ದೆ, ಇನ್ನೆಲ್ಲಿ ಬಿದ್ದೆ?

ನಿದ್ದೆ ಹರಿಯು ತನಕ ಮಲಗುತ್ತೇನಷ್ಟೇ; ನಿದ್ದೆಯೇ ವೈರಿಯಾಗಿ ಸುಡುವಾಗ ಯಾವ ನಿದ್ದೆ, ಯಾವ ಮಲಗು? ಮಲಗಿರುವ ನಿದ್ದೆಗೆ ಜೋಗುಳವನ್ನೇ ಕಿತ್ತು ರಾಜರೇ ಹಾಡುವಾಗ ನನಗೆಲ್ಲಿ ನಿದ್ದೆ ?

*

ಪರಿಚಯ : ಸೂರ್ಯಕೀರ್ತಿ (ಕೀರ್ತಿ. ಪಿ) ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ತುಮಕೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಅವರ ಹುಟ್ಟೂರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ  ಬೆಟ್ಟಹಳ್ಳಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರಿಗೆ ಸಾಹಿತ್ಯದಲ್ಲಿ ತೀವ್ರ ಆಸಕ್ತಿ. ಕನ್ನಡದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 2017 ನೇ ಸಾಲಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ “ಚೈತ್ರಾಕ್ಷಿ” ಕವಿತಾ ಸಂಕಲನ ಧನ ಸಹಾಯ ಪಡೆದುಕೊಂಡು ಲೋಕಾರ್ಪಣೆಯಾಗಿದೆ. ಈ ಪುಸ್ತಕಕ್ಕೆ 2018ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡುವ “ಸುಮ್ಮನ್ ಸೋಮಶೇಖರ ಸೋಮವಾರ ಪೇಟೆ ದತ್ತಿ” ಪ್ರಶಸ್ತಿ ಲಭಿಸಿದೆ. ಇವರ ನಿರ್ದೇಶನದ ಮೂರು ನಾಟಕಗಳು ಜಲಗಾರ, ಹೆಣದ ಬಟ್ಟೆ ಮತ್ತು ಎನಿಮಲ್ ಫಾರ್ಮ್ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಪಾಕಶಾಸ್ತ್ರ, ಸಂಸ್ಕೃತ ಕಾವ್ಯಗಳ ಓದು, ಬೌದ್ಧಸಾಹಿತ್ಯ, ಶಾಸನ ಮತ್ತು ಪುರಾತತ್ವ, ಹಳಗನ್ನಡ ಓದು, ರಂಗಭೂಮಿಯಲ್ಲಿ ಇವರಿಗೆ ವಿಶೇಷ ಆಸಕ್ತಿ.

ಇದನ್ನೂ ಓದಿ : Poetry : ಅವಿತಕವಿತೆ ; ನಿದ್ದೆಯನರಿಯದ ನವಿರಿನ ಲೋಕವೆ ನಿನ್ನ ಅಂಜುಸ್ಪರ್ಶ

Follow us on

Related Stories

Most Read Stories

Click on your DTH Provider to Add TV9 Kannada