Art and Entertainment : ಬೆದೆಯೊಳು ಕುರುಡಪ್ಪ ಪ್ರಕೃತಿ ಒಲವೊಳು ಕಣ್ತೆರೆವಳು

Art and Entertainment : ಬೆದೆಯೊಳು ಕುರುಡಪ್ಪ ಪ್ರಕೃತಿ ಒಲವೊಳು ಕಣ್ತೆರೆವಳು
ಖಜರಾಹೋ ದೇಗುಲ. ಸೌಜನ್ಯ : ಗಿರಿಜಾ ರೈಕ್ವಾ

Sculpture : ‘ದೇಗುಲದ ಪ್ರಾಂಗಣದಲ್ಲಿರುವ ನರ್ತನಭಂಗಿಯ ಅರೆನಗ್ನ ಹೆಣ್ಣಿನ ಪ್ರತಿಮೆಗಳು ಸ್ಫುರಿಸುವ, ಅವು ಮುದತರುವ ಭಾವಪ್ರೇರಣೆಯನ್ನು ಗೋಪುರದ ಪ್ರತಿಮೆಗಳು ಏಕೆ ನೀಡುತ್ತಿಲ್ಲ? ಗೋಪುರದ ಕೆತ್ತನೆಗಳೇಕೆ ಕಾಮಪ್ರಚೋದಕವೂ ಅದೇ ಕಾಲಕ್ಕೆ ಮುಜುಗರ ತರುವುದೂ ಆಗಿವೆ? ಒಂದೇ ದೇವಸ್ಥಾನದ ಬೇರೆ ಬೇರೆ ನೆಲೆಗಳಲ್ಲಿ ನನ್ನೊಳಗೆ ಭಿನ್ನಭಾವಗಳು ಮೈದೋರಲು ಕಾರಣಗಳೇನು?‘ ಜ. ನಾ. ತೇಜಶ್ರೀ

ಶ್ರೀದೇವಿ ಕಳಸದ | Shridevi Kalasad

|

Aug 05, 2021 | 6:40 PM

ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್​ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ಈ ವಿಚಾರವಾಗಿ ಇಂದಿನಿಂದ ಶುರುವಾಗಲಿದೆ ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಹೊಸ ಸರಣಿ. ಇದರಲ್ಲಿ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸುತ್ತಾರೆ. 

*

ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಮಾಗಿಕಾಲದ ಸಾಲುಗಳಂಥ ಕವಿತಾ ಸಂಕಲನಗಳನ್ನು ರಚಿಸಿದ ಮತ್ತು ಡಾ. ಯು. ಆರ್. ಅನಂತಮೂರ್ತಿಯವರ ಆತ್ಮಕಥೆಯನ್ನು ನಿರೂಪಿಸಿದ ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬರಾದ ಜ. ನಾ. ತೇಜಶ್ರೀ ಅವರು, ಬೇಲೂರಿನ ಗಾರೆಗೋಪುರದಲ್ಲಿ ಹುಟ್ಟಿದ ಪ್ರಶ್ನೆಗಳನ್ನು ಕಾವ್ಯಪಾಕದಲ್ಲಿ ಅದ್ದಿ, ಶೋಧಿಸಿ, ಹೊಮ್ಮಿದ ಪರಿಮಳದ ಸಾರವನ್ನಿಲ್ಲಿ ಪಸರಿಸಿದ್ದಾರೆ.

* ಒಮ್ಮೆ, ಬೇಲೂರಿನ ದೇವಸ್ಥಾನಕ್ಕೆ ನೀಡಿದ ಭೇಟಿಯಲ್ಲಿ ವಿಚಿತ್ರ ಭಾವವೊಂದು ನನ್ನೊಳಗೆ ಮೂಡಿಬಂತು. ದೇವಸ್ಥಾನವನ್ನು ಸುತ್ತು ಹಾಕಿ ಬಂದ ಮೇಲೆ ನನ್ನ ಗಮನ ಅಚಾನಕ್ಕು ಗಾರೆಗೋಪುರದ ಕಡೆಗೆ ಹೋಯಿತು. ವಾತ್ಸಾಯನನ ‘ಕಾಮಸೂತ್ರ’ದ ಹಲವಾರು ಸಂಭೋಗ ಭಂಗಿಗಳ ಪ್ರತಿಮೆಗಳು ಅಲ್ಲಿ ನೆಲೆಗೊಂಡಿರುವುದು ಮತ್ತು ಅವುಗಳನ್ನು ದಿಟ್ಟಿಸಿ ನೋಡಲಾಗದ ವಿಚಿತ್ರ ಮನಃಸ್ಥಿತಿ ನನ್ನನ್ನು ಹಲವು ದಿನ ಕಾಡಿತು. ದೇಗುಲದ ಪ್ರಾಂಗಣದಲ್ಲಿರುವ ನರ್ತನಭಂಗಿಯ ಅರೆನಗ್ನ ಹೆಣ್ಣಿನ ಪ್ರತಿಮೆಗಳು ಸ್ಫುರಿಸುವ, ಅವು ಮುದತರುವ ಭಾವಪ್ರೇರಣೆಯನ್ನು ಗೋಪುರದ ಪ್ರತಿಮೆಗಳು ಏಕೆ ನೀಡುತ್ತಿಲ್ಲ? ಗೋಪುರದ ಕೆತ್ತನೆಗಳೇಕೆ ಕಾಮಪ್ರಚೋದಕವೂ ಅದೇ ಕಾಲಕ್ಕೆ ಮುಜುಗರ ತರುವುದೂ ಆಗಿವೆ? ಒಂದೇ ದೇವಸ್ಥಾನದ ಬೇರೆ ಬೇರೆ ನೆಲೆಗಳಲ್ಲಿ ನನ್ನೊಳಗೆ ಭಿನ್ನಭಾವಗಳು ಮೈದೋರಲು ಕಾರಣಗಳೇನು? ಎಂದು ತುಂಬ ಕಾಲ ಯೋಚಿಸಿದೆ. ಅಂದಿನ ಆ ಆಲೋಚನೆಯ ತಂತುವನ್ನು ಹಿಡಿದು ಹೊರಟಾಗ ಈಗ ಅನ್ನಿಸಿದ್ದು.

ಕಾಮವು ಸೃಷ್ಟಿಯ ಆದಿಮ ಹಸಿವು. ಪ್ರತಿಯೊಂದು ಜೀವದಲ್ಲೂ ಅಂತರ್ಗತವಾಗಿರುವ ಶಕ್ತಿ ಅದು. ಕಾಮವ್ಯಾಪಾರವು ಸಂಪೂರ್ಣವಾಗಿ ದೇಹಗಳ ನಡುವಿನದ್ದು. ಅದು ಕೂಡುವ ಸುಖವೂ ದೇಹನಿಷ್ಠವೇ. ದೇಹಕ್ಕೆ ತನ್ನ ಸುಖ ಸಿಕ್ಕಿದರೆ ಸಾಕು, ಅಲ್ಲಿಗೆ ಅದರ ಹುಡುಕಾಟ ಮುಗಿದಂತೆ. ಅದಕ್ಕೆ ತನ್ನ ಸುಖಕ್ಕಾಗಿ ಮನಸ್ಸಿನ ಜೊತೆಗೂಡುವಿಕೆ ಬೇಕೇಬೇಕು ಎಂದೇನಿಲ್ಲ. ಸಂತಾನವನ್ನು ಬೆಳೆಸುವುದು, ಉಳಿಸಿಕೊಳ್ಳುವುದು ಇದರ ಮೂಲ ಉದ್ದೇಶವೆಂಬುದು ಸೃಷ್ಟಿಯ ನಡೆಯನ್ನು ಗಮನಿಸಿದರೆ ತಿಳಿಯುತ್ತದೆ. ಆದರೆ, ದೈಹಿಕವು ದೈವಿಕವಾಗಿ ಹೊರಳಿಕೊಳ್ಳುವ, ಪರಿವರ್ತನೆಗೊಳ್ಳುವ ಪವಾಡ ಸಾಧ್ಯವಾಗುವಂತಹದ್ದು ಬೇಂದ್ರೆಯವರು ಹೇಳುವ ‘ಸಮರಸ’ದಲ್ಲಿ. ಈ ಸಮರಸಕ್ಕೆ ‘ಶೃಂಗಾರ’ಭಾವದ ಸಾನಿಧ್ಯ ಸದಾ ಇರಬೇಕು. ವಿರಹಪ್ರಜ್ಞೆಯ ಜೊತೆಗೆ ಬೆಸುಗೆ ಹಾಕಿಕೊಂಡಿರುವ ಈ ಶೃಂಗಾರಕ್ಕೆ ದೇಹದ ಚಪಲ ತೀರಿದ ನಂತರವೂ ಉಳಿದೇ ಇರುವ ಆಶ್ಚರ್ಯದ ಮಗ್ಗುಲಿದೆ.

ಆದ್ದರಿಂದಲೇ ನಮ್ಮ ಕಾವ್ಯಮೀಮಾಂಸೆಯು ಅಗಲಿಕೆಯಲ್ಲಿಯೇ ದಿಟವಾಗುವ ವಿಪ್ರಲಂಭ ಶೃಂಗಾರವನ್ನು ‘ರಸ’ವೆಂದು ತಿಳಿಯುತ್ತದೆ. ‘ಸಂಭೋಗ’ದ ಹಾಗೆ ‘ವಿರಹ’ವೂ ರಸದ ಸೃಷ್ಟಿಗೆ ಕಾರಣವಾಗುವುದಂತೆ. ಗಂಡು ಹೆಣ್ಣಿನ ನಡುವೆ ಸಮಾನತೆಯಿಲ್ಲದ ಕಡೆ ಶೃಂಗಾರವು ಸಾಧ್ಯವಾಗುವುದಿಲ್ಲ. ಈ ವ್ಯತ್ಯಾಸಕ್ಕೆ ಸಾಮಾಜಿಕವಾದ ಕಾರಣಗಳು ಇವೆ. ಇದಕ್ಕೆ ಪುರುಷಪ್ರಧಾನತೆ, ಕೀಳರಿಮೆ, ಅನನುಭವಗಳಿಂದ ಪೀಡಿತನಾಗಿರುವ ಗಂಡಿನಂತೆಯೇ ಲೈಂಗಿಕತೆಯ ಬಗೆಗಿನ ಭಯ/ಅನಾಸಕ್ತಿ/ತಿಳಿವಳಿಕೆಯ ಕೊರತೆ/ಬಾಲ್ಯಾನುಭವಗಳಿಂದ ಪೀಡಿತಳಾಗಿರುವ ಹೆಣ್ಣು ಕೂಡಾ ಕಾರಣವಾಗಬಹುದು. ಆದ್ದರಿಂದಲೇ ಸಮರಸದ ಶೃಂಗಾರದ ಕಲ್ಪನೆಯೂ ಅನೇಕರಿಗೆ ಇರುವುದಿಲ್ಲ. ಅಂತಹ ಕಡೆಗಳಲ್ಲಿ, ಪಶು-ಕಾಮ ಕೊಡುವ ಕ್ಷಣಿಕ ತೃಪ್ತಿಯೇ ಪರಮ ಗುರಿಯಾಗಿಬಿಡುತ್ತದೆ.

Manoranjana Vruttanta Ja Na Thejashree

ಬೇಂದ್ರೆಯವರ ಕೃತಿಗಳು

ಕಾಳಿದಾಸನ ಕಾವ್ಯವಾದರೂ ‘ಬೇಂದ್ರೆ ಮೇಘದೂತ’ ಎಂದೇ ಕರೆಸಿಕೊಳ್ಳುವ ‘ಮೇಘದೂತ’ವು ಕನ್ನಡದ ಅಪೂರ್ವ ಅನುಸೃಷ್ಟಿಗಳಲ್ಲಿ ಒಂದು. ಅನುವಾದವಾದರೂ ಮೂಲಕ್ಕಿಂತ ಮಿಗಿಲಾಗಿ ನುಡಿವ ಈ ಕೃತಿಯಲ್ಲಿ (ಉತ್ತರ ಮೇಘಕ್ಕೆ ಮೊದಲು) ಬೇಂದ್ರೆಯವರ ‘ಪ್ರೀತಿ ವಿಕಸನ ನಾಕವು’ ಎನ್ನುವ ಕವಿತೆಯಿದೆ. ಅದರ ಕೆಲವು ಸಾಲುಗಳಿವು:

ಕಬ್ಬಿಣಕೆ ಒರೆಬೇಕೆ? ಬಂಗಾ- ರವನು ತಿಕ್ಕುವುದೇ ಕ್ರಮ ಪ್ರೀತಿಗೋ ವಿರಹಾಗ್ನಿ-ದಿವ್ಯವ ಹಾಯುವುದೆ ಪ್ರಥಮಾಶ್ರಮ

ಮೂಲ ಮತ್ತು ಅನುಸೃಷ್ಟಿಗಳ ಶಕ್ತಿಯ ಕೇಂದ್ರವನ್ನು ಗುರುತಿಸುವ ಸಾಲುಗಳಿವು. ಇದು ಸೃಷ್ಟಿಯ ವಿಷಯದಲ್ಲೂ ನಿಜ; ಮನುಷ್ಯ ಜೀವನವೆಂಬ ಅನುಸೃಷ್ಟಿಯ ವಿಷಯದಲ್ಲೂ ನಿಜ. ಶೃಂಗಾರದಿಂದ ತುಂಬಿದ ಕಾಮವು ‘ವಿರಹಾಗ್ನಿ’ ಎನ್ನುವ ‘ದಿವ್ಯ’ವನ್ನು ಹಾಯದೆ ಗತ್ಯಂತರವಿಲ್ಲವೆಂಬ ದಿಟ ಇದು. ಹಾಗಿಲ್ಲವಾದರೆ ಕಾಮವು ಬರಿ ‘ತೀಟೆ ಎನ್ನುವ ಹೊಳಹು ಸತ್ಯವೆ ತಾನೆ?

ಅನ್ನ ಪ್ರಾಣಗಳ ಮಿಥುನದಂತೆ ಮೈ ಎರಡು ಕಲೆತು ಬೆರೆತು ಮನದ ಕಾವಿನಲಿ ಕಾಮವಾಗಿ ಮನದಾಚೆಗೇನೊ ಅರಿತು, ಚಿತ್ತದಲ್ಲಿ ನಿಷ್ಕಾಮರತಿಯು ರಸಪಾಕವಾಗಿ ನಿಂತು ಧಾರೆಗೆಡದೆ ಭಗವಂತನಲ್ಲಿ ಚಿರಭಕ್ತಿಯಾಗಿ ಬಂತು

ಎನ್ನುವ ‘ಮೇಘದೂತ’ದಲ್ಲಿ ಯಕ್ಷನು ವಿರಹದಿಂದ ವಿಕೃತಗೊಳ್ಳದೆ ತಾನು ಕಾಣುವ ಪ್ರಕೃತಿಯ ಒಂದೊಂದು ಸಂಗತಿಯಲ್ಲೂ ನಮಗೆ ಚೆಲುವನ್ನೇ ತೋರುತ್ತ, ಅ ಮೂಲಕ ನಮ್ಮೊಳಗೆ ಉದಾತ್ತ ಭಾವವನ್ನು ಮೂಡಿಸುತ್ತಾನೆ. ಇದೇ ಭಾವದ ವಿಸ್ತರಿಕೆಯಾಗಿ ಕಾಣುವ, ಜಯದೇವನ ‘ಗೀತಗೋವಿಂದ’, ಬೇಂದ್ರೆಯವರ ‘ಸಖೀಗೀತ’, ಟಾಲ್‌ಸ್ಟಾಯ್‌ನ ‘ಅನ್ನಾಕರೆನಿನ’, ಒರಹಾನ್ ಪಾಮುಕ್‌ನ ‘ದ ಮ್ಯೂಸಿಯಮ್ ಆಫ್ ಇನೊಸೆನ್ಸ್’ ಇತ್ಯಾದಿ ಕೃತಿಗಳು; ಮಧುರಚೆನ್ನರ ‘ಮಧುರ ಗೀತ’, ‘ನನ್ನ ನಲ್ಲ’, ಗಂಗಾಧರ ಚಿತ್ತಾಲರ ‘ಕಾಮಸೂತ್ರ’, ಡಿ.ವಿ.ಜಿ.ಯವರ ‘ಶೃಂಗಾರಮಂಗಳಂ’ ಇತ್ಯಾದಿ ಕವಿತೆಗಳು ಪ್ರತಿನಿಧಿಸುವ ಉತ್ಕಟ ಕಾಮವು ‘ನಾನು ನೀನೊ ನೀ ನಾನೊ ಏನೊ’ ಆಗಿ ಪರಿವರ್ತನೆಯಾಗುವ ಮೂಲಕ ದೈಹಿಕವನ್ನು ‘ಭಾವ’ದ ಜೊತೆ ಬೆರೆಸಿ, ಲೋಕವನ್ನು ತಣಿಸುವ ಮತ್ತು ಉಳಿಸುವ ಮಾದರಿಗಳು.

ಬೇಲೂರಿನ ಅರೆನಗ್ನ ಶಿಲಾಪ್ರತಿಮೆಗಳಲ್ಲಿ ನನಗೆ ಶಿಲಾಬಾಲಕಿಯರ ದೇಹ ಅಥವಾ ನಗ್ನತೆಯು ಮುಖ್ಯವಾಗದೆ ಭಾವಸ್ಫುರಣೆಯಾದದ್ದರ ಹಿಂದೆ ದೇಹವು ‘ಭಾವ’ವಾಗಿ ಪರಿವರ್ತನೆಗೊಳ್ಳುವ ಸೋಜಿಗ ಎಂದು ಹೊಳೆದಾಕ್ಷಣ-‘ಭಾವ’ ಇದ್ದಲ್ಲಿ ಮಾತ್ರ ‘ಶೃಂಗಾರ’ ಸಾಧ್ಯ. ಇಲ್ಲವಾದರೆ ನಮಗೆ ಎದುರಿಗಿನ ಮೈ ಮಾತ್ರ ಕಾಣುತ್ತದೆ, ಅದರೊಳಗಿನ ಭಾವವಲ್ಲ; ಶಾರೀರಿಕ ವಿರಹವು ‘ಭಾವ’ವಾಗಿ ಪ್ರಕಟಗೊಂಡಾಗ ತೋರ್ಪಡುವ ಹಂಬಲ ತೀವ್ರವಾದದ್ದು; ತೀವ್ರತೆಯೇ ಎಲ್ಲ ಸಂಬಂಧ, ಜೀವಮಿಡಿತದ ಮೂಲದ್ರವ್ಯ; ಶೃಂಗಾರಕ್ಕೆ ಅತ್ಯಗತ್ಯವಾಗಿ ಬೇಕಾದದ್ದು ‘ಭಾವ’ ಮತ್ತು ‘ಭಾವ’ ಮಿಡಿಯುವುದು ‘ವಿರಹ’ದಲ್ಲಿ- ಎಂಬ ಸತ್ಯಗಳು ಮೈದೋರಿ ಮಾಯವಾದವು. ಒಂದರೊಳಗೆ ಮತ್ತೊಂದು ಬೆರೆತು ಹಲವಾರು ಸಾರ್ತಿ ದಿಕ್ಕು ತಪ್ಪಿಸುತ್ತ ಮತ್ತು ಕೆಲವೇ ಕೆಲವೊಮ್ಮೆ ಮಾತ್ರ ನಿಜವ ತೋರಿಸುತ್ತ ತನ್ನ ‘ಲೀಲೆ’ಯನ್ನು ಪ್ರಕಟಪಡಿಸುವ ಶೃಂಗಾರ ಮತ್ತು ಉತ್ಥಾನ ಕಾಮದ ಭಾವಗಳು ಒಂದೇ ದೇವಸ್ಥಾನದ ಒಳಗೆ ನೆಲೆಗೊಂಡಿರುವುದು ಮತ್ತು ಅದು ನನ್ನನ್ನು ಅಷ್ಟು ತೀವ್ರವಾಗಿ ಬಾಧಿಸಿದ್ದೇಕೆ ಅನ್ನುವ ‘ಭಾವ’ ಈಗ ತಿಳಿಗೊಳ್ಳುತ್ತಿದೆ. ಜೊತೆಗೆ ‘ಬೆದೆ’ ಎಂಬ ‘ದೇಹ’ ಮತ್ತು ‘ಒಲವು’ ಎಂಬ ‘ಭಾವ’ವನ್ನು ಸಂಕೇತಿಸುವ ಪು.ತಿ.ನ.ರ ‘ಬೆದೆ-ಒಲುಮೆ’ ಕವಿತೆಯೂ ನೆನಪಾಗುತ್ತಿದೆ…

ಬೆದೆಯಿಲ್ಲದೆ ಹುಟ್ಟೆ ಇಲ್ಲ ಒಲವಿಲ್ಲದೆ ಬದುಕೂ ನಡೆವ ದಾರಿ ಬೇರೆ ಬೇರೆ ಇದಕೂ ಅದಕೂ

ಬೆದೆಯೊ ಕ್ರೂರ ಒಲವೊ ಮೃದು ಬೆದೆ ನಾನ್ಮೆ ಒಲವೊ ನೀನ್ಮೆ ಬೆದೆಗೆ ಕೊಬ್ಬಿನುಬ್ಬಿನೊದೆತ ಒಲವಿಗೆ ಸ್ವಾರ್ಥದ ಸವೆತ ಬೆದೆಗದರದೆ ನೋವು ನಲಿವು ಅನ್ಯರೊಳಿವ ಪಡುವುದೊಲವು

ಬೆದೆಯೊ ಕ್ಷಣಿಕ ಒಲವೊ ಜೀವವಿರುವ ತನಕ ಬೆದೆಗಾತುರ ಎದೆಗೊ ತಾಳ್ಮೆ ಬೆದೆಯೊಳು ಕುರುಡಪ್ಪ ಪ್ರಕೃತಿ ಒಲವೊಳು ಕಣ್ತೆರೆವಳು

ಬೆದೆ ರಕ್ಕಸಿ ಸಂಧಾನದಿ ಜೀವ ಜರಾಸಂಧನುದಯ ಅದನುಳಿಸುತ ಪೊರೆಯುತಿಹುದು ಒಲವಿನಿಂದ ಮಿಡಿವ ಹೃದಯ

ಬೇಟದೊಳೂ ಕೂಟದೊಳೂ ಹುಲಿ ಅದೆಷ್ಟು ಭೀಕರ! ಮೊಲೆಯ ಕುಡಿದು ಮೇಲೆನೆಗೆವ ಮರಿಗೊ- ಕ್ಷೇಮದಾಗರ –

ಬೆದೆಗುರುಡಿನ ಪ್ರಕೃತಿ ಸೃಷ್ಟಿ- ಗೊಲುಮೆಯಿಂದ ಪುಷ್ಟಿ ತುಷ್ಟಿ ಬೆದೆ ವೇದನೆ ಪ್ರೇಮವಾತ್ಮದಾರಾಧನೆ

ಬೆದೆಗೆ ನೇರವಲ್ಲ ಹೃದಯ ದಾರಿ ಬೇರೆ ಬೇರೆ ಒಲವೊಳು ಬೆದೆತಂಗುವದು ಜೀವದ ಹದ ಬೇರೆ. * ಇದನ್ನೂ ಓದಿ : Art and Entertainment : ಯಾವುದು ಶೃಂಗಾರ ಯಾವುದು ಅಶ್ಲೀಲ, ನಿರ್ಧರಿಸುವವರು ಯಾರು? 

Follow us on

Most Read Stories

Click on your DTH Provider to Add TV9 Kannada