New Novel : ಅಚ್ಚಿಗೂ ಮೊದಲು ; ‘ಕಾಮಾಟಿಪುರಕ್ಕೆ ನಾಲ್ಕೈದು ಸಲ ಭೇಟಿ ಕೊಟ್ಟು ಈ ಕಾದಂಬರಿ ಬರೆದೆ’
Sex : ‘ಮನುಷ್ಯ ಯಾವ ಸ್ಥಿತಿಯಲ್ಲೂ ಬಹಳ ಕಾಲ ನೆಮ್ಮದಿಯಾಗಿ ಇರಲಾರ. ಪ್ರತಿಕ್ಷಣ ಹೊಸ ಸುಖದ ಅನ್ವೇಷಣೆಯಲ್ಲಿ ತೊಡಗಿರುತ್ತಾನೆ ಎಂದು ಲೇಖಕರು ಒಂದು ಕಡೆ ಹೇಳುತ್ತಾರೆ. ಇದು ಸತ್ಯ. ಕಾಮದ ಸೆಳೆತ ಸಭ್ಯರಂತೆ ಮುಖವಾಡ ಧರಿಸಿದವರನ್ನು, ಬುದ್ಧಿವಂತರನ್ನು, ಗಣ್ಯರನ್ನು ಯಾರನ್ನೂ ಬಿಡುವುದಿಲ್ಲ. ಈ ಕಾದಂಬರಿಯಲ್ಲಿ ಬರುವ ಅನೇಕ ಸಮಾಜ ಸುಧಾರಕರು, ಗಣ್ಯರು ಅನೈತಿಕ ಸಂಬಂಧಕ್ಕೆ ಈಡಾದವರೇ.’ ನಟರಾಜು ಮೈದನಹಳ್ಳಿ
ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
* ಕೃತಿ : ಅಣು (ಕಾದಂಬರಿ) ಲೇ : ಕೇಶವ ರೆಡ್ಡಿ ಹಂದ್ರಾಳ ಪು : 120 ಬೆ : ರೂ. 120 ಮುಖಪುಟ ವಿನ್ಯಾಸ : ಮುರಳೀಧರ ರಾಥೋಡ್ ಪ್ರಕಾಶನ : ಅಂಕಿತ ಪುಸ್ತಕ
*
ಇದೇ ಭಾನುವಾರ (1.8.2021) ಬೆಂಗಳೂರಿನಲ್ಲಿ ಅಂಕಿತ ಪುಸ್ತಕದಿಂದ ಬಿಡುಗಡೆಯಾಗಲಿರುವ ನಿವೃತ್ತ ಕೆಎಎಸ್ ಅಧಿಕಾರಿ ಮತ್ತು ಕಥೆಗಾರರಾದ ಕೇಶವರೆಡ್ಡಿ ಹಂದ್ರಾಳ ಅವರ ಹೊಸ ಕಾದಂಬರಿ ‘ಅಣು’ವಿನ ಆಯ್ದ ಭಾಗ ನಿಮ್ಮ ಓದಿಗೆ.
*
ಕಾದಂಬರಿಯೊಂದನ್ನು ಬರೆಯಲೇಬೇಕೆಂಬ ಹಠ ಯಾವೊತ್ತೂ ನನ್ನಲ್ಲಿ ಹುಟ್ಟಿಕೊಂಡಿರಲಿಲ್ಲ. ನನ್ನ ಎರಡನೇ ಮಗ ಸಿರಿವೆನ್ನೆಲ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅವನ ತರಬೇತಿ ಇಂಡಿಯಾದ ಬಹುತೇಕ ಭಾಗಗಳಲ್ಲಿ ನಡೆದಿದ್ದರಿಂದಾಗಿಯೂ ಮತ್ತು ನಾನು ಆ ವೇಳೆಗಾಗಲೇ ನಿವೃತ್ತನಾಗಿದ್ದರಿಂದಲೂ ಅವನು ತರಬೇತಿ ಪಡೆಯುತ್ತಿದ್ದ ಸ್ಥಳಗಳನ್ನು ನೋಡುವ ಅವಕಾಶ ಒದಗಿ ಬಂದಿತ್ತು. ಹಾಗಾಗಿ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ತಿರುಗುವ ಅವಕಾಶ ಸಿಕ್ಕಿತ್ತು. ಮಸ್ಸೂರಿ, ಡೆಹರಾಡೂನ್, ಲೇ ಲಡಾಖ್, ಬನಾರಸ್, ದೆಹಲಿ, ಮಸ್ಸೂರಿ, ಹರಿದ್ವಾರ, ಹೃಷಿಕೇಶ, ಆಗ್ರಾ , ಮುಂಬೈ , ಪುಣೆ, ಅಹಮದಾಬಾದ್, ಕೊಲ್ಕತ್ತಾ, ಅಮೃತಸರ್, ವಾಘ ಬಾರ್ಡರ್, ಕುರುಕ್ಷೇತ್ರ, ಮಥುರಾ ಮುಂತಾದ ಊರುಗಳನ್ನು ಸುತ್ತಿ ಬಂದ ನಂತರ ನನಗೆ ಬಹಳವಾಗಿ ಕಾಡಿದ ಊರುಗಳೆಂದರೆ ಬನಾರಸ್ ಮತ್ತು ಮುಂಬೈ. ಅದರಲ್ಲೂ ಮುಂಬಯಿಯ ಧಾರಾವಿ ಮತ್ತು ಕಾಮಾಟಿಪುರಗಳು ಇನ್ನಿಲ್ಲದಂತೆ ಕಾಡಿದ್ದವು. ಮೂರು ನಾಲ್ಕು ಬಾರಿ ಅಲ್ಲಿ ಸುತ್ತಿದ ನಂತರ ಒಂದು ಕಾದಂಬರಿಯನ್ನು ಏಕೆ ಬರೆಯಬಾರದೆಂಬ ಆಲೋಚನೆ ಮೂಡಿತ್ತು. ಅದರ ಫಲವೇ ನನ್ನ ಮೊಟ್ಟಮೊದಲ ಕಾದಂಬರಿ ‘ ಅಣು ‘ ಹುಟ್ಟಿಕೊಂಡಿತು. ಕೇಶವರೆಡ್ಡಿ ಹಂದ್ರಾಳ, ಹಿರಿಯ ಕಥೆಗಾರರು.
*
ಎರಡು ನಿಮಿಷದಲ್ಲಿ ರಜಿಯಾ ಬೇಗಂಳ ಚಾ ದುಖಾನಿನ ಮುಂದೆ ನಿಂತಿದ್ದೆ. ಊಟದ ಸಮಯವಾದ್ದರಿಂದಲೋ ಏನೋ ದುಖಾನಿನ ಮುಂದೆ ಯಾರೂ ನಿಂತಿರಲಿಲ್ಲ. ನನ್ನನ್ನು ಕಂಡ ಕೂಡಲೇ “ಬನ್ನಿ ಸಾಹೇಬರೆ, ನಾನು ಬೆಳಿಗ್ಗೆ ಹೇಳಿದ ಹಾಗೆ ನನ್ನ ಟೀ ಅಂಗಡಿಯನ್ನು ಹುಡುಕಿಕೊಂಡು ಬಂದಿದ್ದೀರಿ ನೋಡಿ ಮತ್ತೆ” ಎಂದು ನನ್ನನ್ನು ಪತ್ತೆ ಹಚ್ಚಿದ್ದಳು. ಭಲಾರೇ ಚಾಲೂಕಿ ಹೆಂಗಸು ಎಂದುಕೊಂಡು ಡಬ್ಬಲ್ ಚಹಾ ಹೇಳಿ ಸಿಗರೇಟು ಹಚ್ಚಿಕೊಂಡಿದ್ದೆ. “ಊಟ ಆಯ್ತಾ ಸಾಹೇಬ್ರೆ” ಚಹಾ ಕೊಡುತ್ತಾ ಕೇಳಿದ್ದಳು. ರಜಿಯಾ ಬೇಗಂ ವಯಸ್ಸಿನಲ್ಲಿ ಸೌಂದರ್ಯವತಿಯಾಗಿದ್ದಳೆಂಬುದು ಆಕೆಯ ಶರೀರದಲ್ಲಿ ಈಗಲೂ ಪ್ರಕಟವಾಗುತ್ತಿತ್ತು. “ಊಟಕ್ಕೆ ದಾದರ್ಗೆ ಹೋಗ್ತಿದ್ದೀನಿ, ಅಲ್ಲಿಯವರೆಗೂ ಹೊಟ್ಟೆ ಬೆಚ್ಚಗಿರಲಿ ಅಂತ. ಅಲ್ಲದೆ ನಿಮ್ಮ ಚಹಾದ ರುಚಿ ಕೂಡ ನಾಲಿಗೆಯನ್ನು ಬಹಳ ಕಾಡುತ್ತದೆ” ಚಹಾ ಗುಟುಕರಿಸುತ್ತಾ ಹೇಳಿದ್ದೆ.
“ಯಾಕೆ ಸಾಹೇಬ್ರೆ ಲಕುಮಿಬಾಯಿ ಊಟಕ್ಕೆ ಬಡಿಸಲಿಲ್ಲವೆ?” ಎಂದು ಕೇಳಿ ಅಚ್ಚರಿಪಡಿಸಿದ್ದಳು. ನಾನು ಏನನ್ನಾದರೂ ಉತ್ತರಿಸಬೇಕೆನ್ನುವಷ್ಟರಲ್ಲಿ ಆಕೆಯೇ ಬಾಯಿ ತೆರೆದಿದ್ದಳು, “ನಿಮಗೆ ಮನೆ ತೋರಿಸಿದನಲ್ಲ ಆ ನರಪೇತಲ ನರಸಿಂಹ ಟೀ ಕುಡಿಯಲು ಮತ್ತೆ ಬಂದಾಗ ನೀವು ಲಕುಮಿಬಾಯಿ ಕಾಣಲು ಬಂದ ವಿಚಾರವನ್ನು ಹೇಳಿದ. ನನಗಿಂತಲೂ ಹದಿನೈದು ವರ್ಷ ದೊಡ್ಡೋಳಿರಬಹುದು. ಗಟಾಣಿ ಮುದುಕಿ, ಮುಂಬೈಗೆ ನೀರು ಕುಡಿಸ್ತಾಳೆ ಬೇಕಾದ್ರೆ. ಅವಳ ಪರೋಪಕಾರ ಬುದ್ಧಿ ಮಾತ್ರ ಎಂಥಾ ಟೈಮಲ್ಲಾದ್ರೂ ನೆನೆಸ್ಕೊಬೇಕು. ಗಾಟ್ಕೋಪರ್ನಲ್ಲಿ ಐದಾರು ಸಾವಿರ ಬಾಡಿಗೆ ಬರ್ತೈತೆ, ಊರಲ್ಲಿ ಹತ್ತೆಕರೆ ಜಮೀನು ಮಾಡಿ ಬೋರ್ ಹಾಕ್ಸಿದಾಳಂತೆ. ಒಂದು ಮನೇನೂ ಕಟ್ಸಿದಾಳಂತೆ. ಈ ಏರಿಯಾದಲ್ಲಿ ಮುದುಕೀವು ಐನೂರು ಓಟು ಮೇಲಿದಾವೆ. ಅದಕ್ಕೆ ಇಲ್ಲಿ ಮುದುಕಿ ಮುಂದೆ ಯಾರೂ ಬಾಲ ಬಿಚ್ಚಲ್ಲ. ಕೈ ಕಾಲು ಬಿದ್ದೋದ ಮೇಲೆ ಊರು ಸೇರಿಬಿಡ್ತೀನಿ ಎಂದು ಮುದುಕೀನೆ ಹೇಳ್ಕೊಂಡು ತಿರಗ್ತಾಳೆ. ಯಾವ ಪೊಲೀಸ್ ಆಫೀಸರ್ಗಾದ್ರೂ ಫೋನ್ನಲ್ಲೇ ಜಬರ್ದಸ್ತ್ ಮಾಡ್ತಾಳೆ. ಆಕೆನ ಭೇಟಿಯಾಗೋಕೆ ವಾರದಲ್ಲಿ ಯಾರಾದ್ರೊಬ್ರು ಬಂದೇ ಬರ್ತಾರೆ. ಫಾರಿನ್ನೋರೂ ಹುಡುಕಿಕೊಂಡು ಬರ್ತಾರೆ. ಡಾಕ್ಟರ್ ಊರ್ಮಿಳಾ ಥಾಪರ್, ಶಬಾನ ಆಜ್ಞೆ ಸಪೋರ್ಟ್ ಮುದುಕಿಗೆ ಜಾಸ್ತಿ ಐತೆ. ಆಕೆಯ ಅನುಭವ ಕೇಳೋಕೆ ಸಿನಿಮಾ ನಿರ್ದೇಶಕರೂ ಕರೆಸ್ಕೊತಾರೆ. ಒಟ್ನಲ್ಲಿ ಮುದುಕಿ ಈ ಏರಿಯಾದಲ್ಲಿ ವಿಐಪಿ.”
ಚಹಾ ಮುಗಿದಿತ್ತು. “ಇಲ್ಲಿ ಚಹಾ ಕುಡಿತೀನಿ ಎಂದಾಗ ಲಕುಮಿಬಾಯಿ ನಿಮ್ಮ ಬಗ್ಗೇನೂ ಹೇಳಿದ್ರು” ಕಾಸು ಕೊಡುತ್ತಾ ಹೇಳಿದ್ದೆ. ರಜಿಯಾ ಬೇಗಂ ಚಹಾದ ಕಾಸು ತೆಗೆದುಕೊಳ್ಳಲಿಲ್ಲ. “ಓಹ್ ಹತ್ತು ವರ್ಷಗಳ ಹಳೆಯ ಕಥೆ, ಅದೇ ರಕ್ತದ ಕಥೆ ತಾನೆ? ಬಂದೋರಿಗೆಲ್ಲ ಹೇಳ್ತಿರ್ತಾಳೆ ಮುದುಕಿ. ಅವೊತ್ತು ಬಂದ ಹದಿಮೂರು ಸಾವಿರಕ್ಕೆ ನಾನು ಇನ್ನೊಂದು ಹತ್ತು ಸಾವಿರ ಹಾಕಿ ಪಕ್ಕದಲ್ಲೇ ರಾಜೀವ್ಗಾಂಧೀನಗರದಲ್ಲಿ ಒಂದು ಚಿಕ್ಕ ಮನೆ ತಗೊಂಡೆ. ಅದರ ವ್ಯಾಪಾರವನ್ನು ಮುದುಕಿಯೇ ಕುದುರಿಸಿದ್ದು. ಆರುನೂರ ಐವತ್ತು ರೂಪಾಯಿಗೆ ಕನ್ನಡದೋರಿಗೇನೆ ಬಾಡಿಗೆಗೆ ಕೊಟ್ಟಿದ್ದೀನಿ. ಮುದುಕಿಗೂ ನನಗೂ ಈಗಲೂ ಒಳ್ಳೆ ಫ್ರೆಂಡ್ಶಿಪ್ ಇದೆ. ಈ ತಿಂಗಳ ಹಿಂದೇನೂ ಒಬ್ಬ ಗಿರಾಕಿಯನ್ನು ಸೆಟ್ ಮಾಡಿಕೊಟ್ಟಿದ್ದಳು. ಇಪ್ಪತ್ತೈದು ವರ್ಷ ವಯಸ್ಸಿನ ಶ್ರೀಮಂತರ ಹುಡುಗ, ಅವನಿಗೆ ಐವತ್ತು ವರ್ಷ ಮೇಲಿನ ಹೆಂಗಸೇ ಬೇಕಿತ್ತಂತೆ. ಪುಣೆಗೆ ತಮ್ಮ ಗೆಸ್ಟ್ ಹೌಸ್ಗೆ ಕರೆದುಕೊಂಡು ಹೋಗಿದ್ದ. ಓಹ್, ಅವನ ಪ್ರೀತಿಯ ತೀವ್ರತೆ ನೋಡಬೇಕಿತ್ತು. ಒಬ್ಬರೊಂದಿಗೆ ಒಮ್ಮೆ ಮಾತ್ರ ಮಲಗುತ್ತಾನಂತೆ ಹುಡುಗ. ಮಸ್ತಾಗಿ ದುಡ್ಡಿರೋರಿಗೆ ಎಂಥೆಂಥವೋ ವಿಚಿತ್ರ ಖಯಾಲಿಗಳು. ಮುದುಕಿಗೂ ಎರಡು ಸಾವಿರ ಕೊಟ್ಟಿದ್ದೆ. ಅಂಥ ಲಕುಮಿಬಾಯಿಯನ್ನು ನೋಡಲಿಕ್ಕೆ ಬಂದ ನಿಮ್ಮ ಹತ್ರ ನಾನು ಕಾಸು ತಗೊಂಡ್ರೆ ದೇವರು ಮೆಚ್ತಾನ? ನೀವು ಇಲ್ಲಿ ಇರೋವರ್ಗೂ ಎಷ್ಟು ಚಹಾ ಬೇಕಾದ್ರೂ ಕುಡೀಬಹುದು.” ರಜಿಯಾ ಬೆಗಂಳ ಮಾತುಗಳನ್ನು ಕಿವಿ ಮತ್ತು ಮನಸ್ಸುಗಳೆರಡರಲ್ಲೂ ತುಂಬಿಕೊಂಡು ಮೈನ್ ರೋಡಿನ ಕಡೆ ಹೆಜ್ಜೆ ಹಾಕಿದ್ದೆ.
ಪರಿಚಯ : ಕೇಶವರೆಡ್ಡಿ ಹಂದ್ರಾಳ ಅವರು 1957 ರ ಜುಲೈ 22 ರಂದು ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ಹಂದ್ರಾಳ ಗ್ರಾಮದ ಬೇಸಾಯದ ಕುಟುಂಬದಲ್ಲಿ ಹುಟ್ಟಿದ್ದು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು. ಕೇಶವರೆಡ್ಡಿ ಅವರು ಕೃಷಿ ಕೆಲಸಗಳನ್ನು ಮಾಡಿಕೊಂಡೇ ವಿದ್ಯಾಭ್ಯಾಸ ಪೂರೈಸಿದರು. ಇವರ ಅಜ್ಜ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರರಾಗಿದ್ದರು. ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ ಮಾಡಿದರು. ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು. 1947 ರವರೆಗೂ ಕಾಡಿನಲ್ಲಿ ಭೂಗತರಾಗಿ ಬದುಕಿದ್ದು ಕಾಡುಗೊಲ್ಲರ ಸಮುದಾಯದ ಜೊತೆಗೆ. ಸ್ವಾತಂತ್ರ್ಯ ನಂತರ ಹಂದ್ರಾಳಕ್ಕೆ ಬಂದು ನೆಲೆಗೊಂಡರು.
ಕೇಶವರೆಡ್ಡಿಯವರು ಹೈಸ್ಕೂಲಿನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಂದುವರಿಸಿದರು. ಬೆಂವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೂರು ವರ್ಷಗಳ ಕಾಲ ಊರಿನಲ್ಲಿ ಬೇಸಾಯ ಮಾಡಿದರು. ಆರು ವರ್ಷಗಳ ಕಾಲ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ನಂತರ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 1991ರಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸೇರಿ 2017 ರಲ್ಲಿ ವಾಣಿಜ್ಯ ತೆರಿಗೆ ಉಪ ಆಯುಕ್ತರಾಗಿ ನಿವೃತ್ತಿ ಹೊಂದಿದರು.
ವಿದ್ಯಾರ್ಥಿ ದೆಸೆಯಿಂದಲೇ ಬಂಡಾಯ, ದಲಿತ, ರೈತ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇವರು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಪೊಲೀಸ್ ಲಾಠಿ ರುಚಿಯನ್ನೂ ಕಂಡರು. ಕ್ರಾಂತಿ ಸಿರಿ ಪ್ರಕಾಶನವನ್ನೂ ಪ್ರಾರಂಭಿಸಿದರು. ಈತನಕ 500 ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದು ಕನ್ನಡದ ಬಹುತೇಕ ಎಲ್ಲಾ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. 300 ಕ್ಕೂ ಹೆಚ್ಚು ಪ್ರಬಂಧಗಳು, ಕಥೆಗಳು ಹಿಂದಿ ಮತ್ತು ತೆಲುಗು ಭಾಷೆಗಳಿಗೆ ಭಾಷಾಂತರಗೊಂಡಿವೆ. ಅನೇಕ ಕಥೆಗಳು ನಾಟಕ ಮತ್ತು ಸಿನಿಮಾಗಳಾಗಿವೆ .
ಪ್ರಕಟಗೊಂಡ ಕೃತಿಗಳು : ನನ್ನ ಕ್ರಾಂತಿಯ ಹುಡುಗಿ, ಹಂದ್ರಾಳ, ಅಂತಃಪುರ, ಬರದ ನಾಡಲ್ಲಿ ಬೆಳದಿಂಗಳು, ಜಡೆಗೆ ಗುಲ್ ಮೊಹರ್ ಕೈಗಳು, ಮೋಡ ಕರಗುವ ಮುನ್ನ, ಒಂದು ಹಿಡಿ ಮಣ್ಣು, ಬಾರಕ್ಕ ಬೆಳದಿಂಗಳೆ, ಒಕ್ಕಲ ಒನಪು ರಾಜಧಾನಿಯ ರಾತ್ರಿಗಳಲ್ಲಿ, ಮರೆತ ಭಾರತ, ಮಣ್ಣಿನ ಗೋಡೆಗಳು, ಹಾಲು ಕುಡಿಯದಿರು ಕಂದ, ಅಲ್ಲಮನ ಆತ್ಮಲಿಂಗ, ಈ ಕ್ಷಣದ ಬುದ್ದ, ಕೀಟ, ಹಂದ್ರಾಳರ ಕಥಾಲೋಕ ಭಾಗ 1ಮತ್ತು 2, ಹಂದ್ರಾಳರ ಗ್ರಾಮ ಭಾರತ ಮೃಗಜಲ, ಮಹಾಪ್ರಸ್ಥಾನ.
ಪ್ರತಿಗಳನ್ನು ಕಾಯ್ದಿರಿಸಲು ಈ ವೆಬ್ ವಿಳಾಸ ಸಂಪರ್ಕಿಸಿ : ಅಂಕಿತ ಪುಸ್ತಕ
ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಆಕೆಯ ಕಣ್ಣಿಂದ ತೋಳುಗಳಿಂದ ಬಿಡಿಸಿಕೊಳ್ಳುವ ಶಕ್ತಿ ಎಲ್ಲಿಂದ ಪಡೆದೆ ನಾನು?
Published On - 4:36 pm, Fri, 30 July 21