ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಮೋಟಾರ್ ಸೈಕಲ್ ಡೈರೀಸ್ ಮೂಲ : ಆರ್ನೆಸ್ಟೋ ಚೆ ಗೆವಾರ್ ಕನ್ನಡಕ್ಕೆ : ಸೃಜನ್ ಪುಟ : 228 ಬೆಲೆ : ರೂ. 150 ಮುಖಪುಟ ವಿನ್ಯಾಸ : ಪುರುಷೋತ್ತಮ ಕೆ. ಪ್ರಕಾಶನ : ವೈಷ್ಣವಿ ಪ್ರಕಾಶನ, ರಾಯಚೂರು
*
ಚಿತ್ರಕಲಾವಿದ, ಅನುವಾದಕ ಸೃಜನ್ ಅವರು ಕನ್ನಡಕ್ಕೆ ತಂದ ಆರ್ನೆಸ್ಟೋ ಚೆ ಗೆವರ್ ಅವರ ಲ್ಯಾಟಿನ್ ಅಮೆರಿಕನ್ ಪ್ರವಾಸದ ಟಿಪ್ಪಣಿಗಳ ಆಯ್ದ ಭಾಗ ನಿಮ್ಮ ಓದಿಗೆ.
ಅನುವಾದದಲ್ಲಿ ‘ಮೂಲ ‘ ಅನ್ನೋದು ಅನುವಾದಿಸಲ್ಪಡುವ ‘ಉದ್ದೇಶಿತ ‘ ಭಾಷೆಗೆ ಸದಾ ಅವಿಧೇಯವಾಗಿರುತ್ತದೆ ಅಥವಾ ಅದೊಂದು ಕೇವಲ ಪ್ರಯತ್ನ ಆಗಿರುತ್ತದೆ ಎಂಬ ಅಭಿಪ್ರಾಯದ ಆಚೆಗೆ, ಅದು ಎರಡು ನುಡಿಗಳ ಬೆವರು ಮತ್ತು ನೆತ್ತರಿನ ನಂಟನ್ನು ಇನ್ನೊಂದು ಸಮುದಾಯಕ್ಕೆ ಪರಿಚಯಿಸುವ ಕೆಲಸ. ಓದಲೇಬೇಕಾದ ‘ಕರಿ ಮೆಣಸಿನ ಗಿಡ’, ‘ನನ್ನಿಷ್ಟ ’ ‘ವೋಡ್ಕಾ ವಿತ್ ವರ್ಮಾ’ಗಳಾಗಿ ಮತ್ತು ಬಿಡಿ ಕತೆಗಳ ಮೂಲಕ ತೆಲುಗು ಸಾಹಿತ್ಯದ ಮುಖ್ಯ ಕೃತಿಗಳನ್ನು ಕನ್ನಡಕ್ಕೆ ಮತ್ತು ‘ತೆಗಿಂಪು’ ’ನಾಲೋನಿ ರಾಗಂ ಕ್ಯೂಬಾ’ ‘ದೊಸಿಟ್ಲೋ ಚಿನುಕುಲು ‘ ಕೃತಿಗಳನ್ನು ತೆಲುಗಿಗೆ ಸಮರ್ಥವಾಗಿ ಅನುವಾದಿಸಬಲ್ಲ ಅಪರೂಪದ ಕೆಲಸವನ್ನು ಸೃಜನ್ ಮಾಡುತ್ತಿದ್ದಾರೆ. ಇತರೆ ಭಾಷೆಯಿಂದ ಕನ್ನಡಕ್ಕೆ ತಂದವರ ಪಟ್ಟಿ ಹೆಚ್ಚಿರುವ ಈ ಹೊತ್ತಲ್ಲಿ, ಕನ್ನಡದ ಕೃತಿಗಳನ್ನು ತೆಲುಗಿಗೆ ಅವುಗಳ ಬೆವರು ಮತ್ತು ನೆತ್ತರಿನ ಸಾಂದ್ರತೆಯನ್ನು ಎಲ್ಲೂ ಕುಗ್ಗಿಸದೆ ತರ್ಜುಮೆ ಮಾಡಬಲ್ಲ ತಾಕತ್ತು ಸೃಜನ್ಗಿದೆ. ಇನ್ನು ಉತ್ತಮ ಕೃತಿಗಳು ಎರಡು ಗಡಿಗಳನ್ನು ದಾಟಿ, ಓದುಗರ ಮನ ಮೀಟಲಿ ಎಂದು ಹಾರೈಸುತ್ತೇನೆ. ರಮೇಶ ಅರೋಲಿ, ಕವಿ, ಪ್ರಾಧ್ಯಾಪಕ
*
ಸೃಜನ್ ಅವರದು ಅಪ್ಪಟ ಕಲಾವಿದನ ಮನಸು. ಒಬ್ಬ ಸೃಜನಶೀಲನಿಗೆ ಇರಬೇಕಾದ ಅನ್ಯಮನಸ್ಕತೆ, ನಿರಂತರವಾದ ಚಡಪಡಿಕೆ, ಹಿಂಜರಿಕೆಯ ಸ್ವಭಾವ ಹಾಗೂ ಹೊಸತನ್ನು ನೋಡಿ ಪುಳಕಗೊಳ್ಳುವ ಗುಣ ಇವರಲ್ಲೂ ಇರುವುದನ್ನು ಗೆಳೆಯರು ಅನುಭವಿಸಿ ಬಲ್ಲರು. ವಿಶೇಷವಾದ ವಿನೋದ ಪ್ರಜ್ಞೆಯ ಮೂಲಕ ತಮ್ಮ ಸ್ನೇಹ ಬಳಗದಲ್ಲಿ ಚಿರಪರಿಚಿತರಾಗಿರುವ ಸೃಜನ್, ಉತ್ತಮ ಅನುವಾದಕ, ಅತ್ಯುತ್ತಮ ರೇಖಾಚಿತ್ರಕಾರ ಅದಕ್ಕೂ ಮಿಗಿಲು ಜಾಗತಿಕ ಸಿನಿಮಾವನ್ನು ಪ್ರೀತಿಸುವ ಸಹೃದಯಿ ಸ್ನೇಹಿತ. ಆರಿಫ್ ರಾಜಾ, ಕವಿ
*
‘ಮೊದಲ ಸಲ ನಾನು ಈ ನೋಟ್ಸ್ ಓದಿದಾಗ ಅವು ಪುಸ್ತಕರೂಪದಲ್ಲಿರಲಿಲ್ಲ. ಯಾರು ಬರೆದರೆಂದು ಕೂಡಾ ಗೊತ್ತಿರಲಿಲ್ಲ. ಆಗ ನಾನು ತುಂಬಾ ಚಿಕ್ಕವಳು. ಆಗಲೇ ತನ್ನ ಸಾಹಸಗಳ ಬಗ್ಗೆ ಬರೆದುದನ್ನು ಓದಿ ಅವನು ಯಾರೆಂದು ತಿಳಿದುಕೊಂಡೆ. ಈ ನೋಟ್ಸ್ ಓದುತ್ತಾ ಬರೆದ ವ್ಯಕ್ತಿಯನ್ನು ಮತ್ತಷ್ಟು ಅರಿತೆ. ನಾನು ಅವರ ಮಗಳಾಗಿದ್ದಕ್ಕೆ ತುಂಬಾ ಖುಷಿಯಾಗುತ್ತದೆ. ಕೆಲವು ಸಲವಂತೂ ನಾನು ಗ್ರಾನಡೋನಾಗಿ ಬದಲಾಗಿ ಅಪ್ಪನನ್ನು ಅವುಚಿಕೊಂಡು ಅವರ ಬೈಕಿನ ಹಿಂದೆ ಕುಳಿತುಕೊಳ್ಳಬೇಕೆನಿಸುತ್ತದೆ. ಈ ರೀತಿಯಾಗಿ ನನಗೆ ಬೆಟ್ಟ, ಕಣಿವೆ, ಸರೋವರಗಳನ್ನು ಕಣ್ತುಂಬಿಕೊಳ್ಳಬೇಕೆನಿಸುತ್ತದೆ. ಅವರ ಪ್ರವಾಸದ ನಡುನಡುವೆ ತಮ್ಮ ಇಷ್ಟದ ಕೆಲಸಗಳ ಬಗ್ಗೆ ಬಣ್ಣಿಸುತ್ತಿದ್ದರೆ ನನ್ನನ್ನು ನಾನು ಮರೆತು ಹೋಗುತ್ತೇನೆ. ನಿಜ ಹೇಳಬೇಕೆಂದರೆ ನಾನು ಹೆಚ್ಚು ಹೆಚ್ಚು ಓದುತ್ತಿದ್ದಂತೆ ಯುವಕನಾಗಿದ್ದ ಅಪ್ಪನ ಬಗ್ಗೆ ಪ್ರೀತಿ ದ್ವಿಗುಣವಾಗುತ್ತದೆ. ಅಲೆದಾ ಗೆವಾರ್, ಚೆ ಗೆವೆರರ ಹಿರಿಯ ಮಗಳು
ತನ್ನ ಕುಟುಂಬದೊಂದಿಗೆ ಚೆ ಗೆವಾರ್ ಮತ್ತು ಹಿರಿಯ ಮಗಳು ಅಲೆದಾ ಚೆ ಗೆವಾರ್.
* ಪೂರ್ಣ ಬೆಳದಿಂಗಳು ಸಮುದ್ರದ ಅಲೆಗಳೊಂದಿಗೆ ಸ್ಪರ್ಧಿಸುತ್ತಿತ್ತು. ಸಾಗರದ ಅಲೆಗಳು ಬೆಳ್ಳಿ ಬೆಳಕನ್ನು ಹೊಮ್ಮಿಸುತ್ತಿದ್ದವು. ನಾವು ತೀರದಲ್ಲಿ ಕೂತು ಅಲೆಗಳ ಆಟೋಟವನ್ನು ನೋಡುತ್ತಿದ್ದೆವು. ಅವು ತೀರವನ್ನು ಸ್ಪರ್ಶಿಸುವ ಪ್ರತಿಸಲ ನಮ್ಮ ಆಲೋಚನೆಗಳು ಹೊಸಹಾದಿ ತುಳಿಯುತ್ತಿದ್ದವು. ನನ್ನ ಮಟ್ಟಿಗೆ ಸಮುದ್ರ ಅತ್ಯಂತ ವಿಶ್ವಸಾರ್ಹ ಗೆಳೆಯ. ರಹಸ್ಯವನ್ನು ತನ್ನ ಗರ್ಭದಲ್ಲಿಟ್ಟುಕೊಂಡು ಯಾರೊಂದಿಗೂ ಹೇಳದೇ ಇರುವಷ್ಟು ನಂಬಿಕೆಗೆ ಅರ್ಹವಾದದ್ದು. ಅದು ಯಾವಾಗಲೂ ಅತ್ಯುತ್ತಮ ಸಲಹೆಯನ್ನೇ ಕೊಡುತ್ತದೆ. ಅರ್ಥವತ್ತಾಗಿ ಸಮುದ್ರದ ಅಲೆಗಳು ಹೊಮ್ಮಿಸುವ ಸದ್ದನ್ನು ನಾವು ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿಕೊಳ್ಳಬಹುದು.
ಆಲ್ಬರ್ಟೋಗೆ ಮಾತ್ರ ಇದು ಕಸಿವಿಸಿಗೊಳಿಸುವ ಸನ್ನಿವೇಶವಾಗಿತ್ತು. ಏರಿ ಬರುವ ಪ್ರತಿ ಅಲೆಯನ್ನು ಆಲ್ಬರ್ಟೋ ಕಣ್ಣುಗಳು ಕಾತರದಿಂದ ನೋಡುತ್ತಿದ್ದವು. ತನ್ನ ಮೂವತ್ತನೇ ವಯಸ್ಸಿನಲ್ಲಿದ್ದ ಆಲ್ಬರ್ಟೋ ಮೊತ್ತ ಮೊದಲ ಸಲ ಅಟ್ಲಾಂಟಿಕ್ ಮಹಾಸಾಗರವನ್ನು ನೋಡುತ್ತಿದ್ದ. ಈ ಮಹಾಸಾಗರ ಭೂಮಂಡಲದ ಪ್ರತಿಯೊಂದು ಮೂಲೆಯನ್ನು ತಲುಪುತ್ತದೆಯೆಂಬ ವಿಷಯವನ್ನು ಮೊದಲ ಸಲ ತಿಳಿದುಕೊಂಡಿದ್ದ. ಸಮುದ್ರದ ಮೇಲೆ ಬೀಸುತ್ತಿದ್ದ ತಾಜಾಗಾಳಿ ಸಮುದ್ರದ ಶಾಂತತೆಯನ್ನು ಅದರೊಳಗೆ ಭೂಗತವಾಗಿರುವ ಶಕ್ತಿಯನ್ನು ಕನ್ನಡಿಯಂತೆ ತೋರಿಸುತ್ತಿತ್ತು. ಸಮುದ್ರದ ಸ್ಪರ್ಶಕ್ಕೆ ಆ ಪ್ರದೇಶವೆಲ್ಲಾ ಬದಲಾಗತೊಡಗಿತು. ಕೊನೆಗೆ ಕಮ್‍ಬ್ಯಾಕ್ (‘ಚೆ’ ಗೆಳತಿ ಅವನ ಮುದ್ದಾದ ನಾಯಿಮರಿಗೆ ಇಟ್ಟ ಹೆಸರು) ತನ್ನ ಪುಟ್ಟ ಮೂಗನ್ನು ಹೊರಳಿಸುತ್ತಾ ಅಲೆಗಳ ತೀವ್ರತೆಯನ್ನು ಅಳೆಯಲು ಪ್ರಯತ್ನಿಸುತ್ತಿತ್ತು. ಅದು ಕ್ಷಣಕ್ಕೊಮ್ಮೆ ತನ್ನ ಮುಂದೆ ಬರುತ್ತಿದ್ದ ಬೆಳ್ಳಿ ನೊರೆಯನ್ನು ಆಸ್ವಾದಿಸಲು ಓಡುತ್ತಿತ್ತು.
ಕಮ್‍ಬ್ಯಾಕ್ ಅಸ್ತಿತ್ವಕ್ಕೆ ಚಿಹ್ನೆ. ನಾನು ಮರಳಿ ಬರಬೇಕೆಂಬ ಬಯಕೆಯ ಸಂಕೇತ. ಗಾಡಿಯ ಮೇಲಿಂದ ಬಿದ್ದದ್ದು ನಿರಂತರ ಬೇಧಿಯಿಂದ ನರಳಿದ್ದು, ಕೊನೆಗೆ ಕುದುರೆಯ ಕಾಲ್ತುಳಿತದಿಂದ ತಪ್ಪಿಸಿಕೊಂಡು ಬದುಕುಳಿದಿದ್ದು ಇಂಥ ಕಷ್ಟಗಳಿಂದ ಗೆದ್ದು ಬದುಕಿದ್ದಕ್ಕೆ ಸಾಕ್ಷಿಯಾಗಿ ಉಳಿದಿವೆ.
1200 ಕಿ.ಮೀ ಪ್ರಯಾಣದ ನಂತರ ನಾವು ಮಾರ್‍ಡೆಲ್ ಪ್ಲಾಟಾದ ಉತ್ತರಕ್ಕಿರುವ ವಿಲ್ಲಾಗೆಸೆಲ್‍ನ ನಮ್ಮ ಸಂಬಂಧಿ ಅಂಕಲ್ ಒಬ್ಬರ ಮನೆಯಲ್ಲಿ ಆತಿಥ್ಯ ಸ್ವೀಕರಿಸುತ್ತಾ ಸುದೀರ್ಘ ಪ್ರಯಾಣದ ಅನುಭವಗಳನ್ನು ಮೆಲುಕು ಹಾಕುತ್ತಿದ್ದೆವು. ಪ್ರಯಾಣವೇನೋ ಸರಳವಾಗಿಯೇ ನಡೆದಿತ್ತು. ಕೇವಲ ಇಷ್ಟುದೂರ ಪಯಣಿಸಿದ್ದಕ್ಕೆ ನಮಗೆ ಇಷ್ಟೊಂದು ಪ್ರಾಮುಖ್ಯತೆ, ಗೌರವ ಕೊಡುತ್ತಿದ್ದಾರೆ. ನಾವು ನಿರೀಕ್ಷಿಸಿದ್ದ ಗಮ್ಯವನ್ನು ತಲುಪುತ್ತೇವೆಯೋ ಇಲ್ಲವೋ ಎಂಬುದರ ಬಗ್ಗೆ ನಮಗೆ ಖಚಿತತೆ ಇರಲಿಲ್ಲ. ಆದರೆ ಮುಂದೆ ವಿಪರೀತ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಸತ್ಯ ಗೊತ್ತಿತ್ತು. ನಿಜ ಹೇಳಬೇಕೆಂದರೆ ಈವತ್ತಿಗೂ ನಮಗಿದ್ದ ಅಭಿಪ್ರಾಯ ಅದೇ. ಪ್ರಯಾಣಕ್ಕಾಗಿ ಸವಿವರಗಳೊಂದಿಗೆ ರೂಪಿಸಿದ ಯೋಜನೆಯನ್ನು-ತೋರಿಸುತ್ತಾ ಆಲ್ಬರ್ಟೋ ನಗುತ್ತಿದ್ದ. ಈ ಯೋಜನೆಯ ಪ್ರಕಾರ ನಮ್ಮ ಪ್ರಯಾಣ ಸುಮಾರಾಗಿ ಪೂರ್ತಿಗೊಂಡಿತ್ತು. ಆದರೆ ವಾಸ್ತವವಾಗಿ ನೋಡಿದರೆ ನಿಜವಾದ ಪ್ರಯಾಣ ಈಗ ಪ್ರಾರಂಭವಾಗಿತ್ತು.
ಅಂಕಲ್ ಕೊಟ್ಟ ಮಾಂಸದ ಡಬ್ಬ, ತರಕಾರಿಯೊಂದಿಗೆ ನಮ್ಮ ಪ್ರಯಾಣ ಮತ್ತೆ ಶುರುವಾಯಿತು. ನಾವು ಬಾರಿಲೋಚ್ ತಲುಪಿದ ನಂತರ ಟೆಲಿಗ್ರಾಂ ಕೊಡಬೇಕೆಂದು ಆತ ಕೇಳಿದ್ದ. ಆ ಟೆಲಿಗ್ರಾಂ ನಂಬರ್ನಿಂದ ಒಂದು ಲಾಟರಿ ಟಿಕೆಟ್ ಕೊಳ್ಳಬೇಕೆಂದು ಆತನ ಯೋಚನೆ. ಇದು ನಮ್ಮಲ್ಲಿ ಒಂದಿಷ್ಟು ಆತ್ಮವಿಶ್ವಾಸ ಹುಟ್ಟಿಸಿತು. ಇನ್ನು ಕೆಲವರು ಕಾಲ್ನಡಿಗೆಗೆ ಮೋಟಾರ್ ಸೈಕಲ್ ಒಳ್ಳೆಯ ಸಬೂಬು ಎಂದು ಮೊದಲಿಸಿದರು. ಅವರ ಮಾತುಗಳಲ್ಲಿ ವಾಸ್ತವವಿಲ್ಲವೆಂಬ ಸತ್ಯ ನಮಗೂ ಗೊತ್ತು. ಅವರ ಕಲ್ಪನೆ ತಪ್ಪೆಂದು ಸಾಬೀತು ಪಡಿಸಬಲ್ಲೆವೆಂದು ಕೂಡಾ ನಮಗೆ ಗೊತ್ತು. ಆದರೆ ಸಾಮಾನ್ಯವಾದ ನಮ್ಮ ಸಂಕೋಚ ನಮ್ಮ ದೃಢವಿಶ್ವಾಸವನ್ನು ಹೊರಹಾಕದಂತೆ ನಮ್ಮನ್ನು ಅಡ್ಡಗಟ್ಟಿತ್ತು.
ರಸ್ತೆಯಲ್ಲಿ ನಮ್ಮೊಂದಿಗೆ ಬರುತ್ತಿದ್ದ ಕಮ್‍ಬ್ಯಾಕ್ ಗಾಳಿಯಲ್ಲಿ ಹಾರುತ್ತಿರುವಂತೆ ಚಲಿಸುತ್ತಿತ್ತು. ಈ ಕ್ರಮದಲ್ಲೇ ಮತ್ತೊಂದು ಅಪಾಯದಿಂದ ತಪ್ಪಿಸಿಕೊಂಡಿತ್ತು. ಮೋಟಾರುಸೈಕಲ್ಲನ್ನು ನಿಯಂತ್ರಿಸುವುದು ಕಷ್ಟವಾಗುತ್ತಿತ್ತು. ಹಿಂಭಾಗದಲ್ಲಿ ಲಗೇಜಿನ ಭಾರ ಜಾಸ್ತಿ ಇದ್ದುದರಿಂದ ಮುಂದಿನ ಚಕ್ರ ಆಗಾಗ ಭೂಮಿಯಿಂದ ಮೇಲಕ್ಕೆ ಏರುತ್ತಿತ್ತು. ಸ್ವಲ್ಪ ಮೈಮರೆತರೂ ನಾವು ಗಾಡಿಯ ಸಮೇತ ಗಾಳಿಯಲ್ಲಿ ಹಾರುವುದು ಖಚಿತವಾಗಿತ್ತು. ಮಾಂಸದ ಅಂಗಡಿಯೆದುರು ಸ್ವಲ್ಪ ಹೊತ್ತು ಗಾಡಿ ನಿಲ್ಲಿಸಿ ಒಂದಿಷ್ಟು ಮಾಂಸ, ನಮ್ಮೊಂದಿಗಿದ್ದ ನಾಯಿಮರಿಗಾಗಿ ಸ್ವಲ್ಪ ಹಾಲನ್ನು ಕೊಂಡೆವು. ಆದರೆ ನಾಯಿ ಮಾತ್ರ ಹಾಲನ್ನು ಮುಟ್ಟಲೇ ಇಲ್ಲ. ನಾನು ಹಾಲು ಕೊಳ್ಳಲು ಖರ್ಚುಮಾಡಿದ್ದ ಹಣದ ಚಿಂತೆಗಿಂತ ಈ ಚಿಕ್ಕ ಪ್ರಾಣಿಯ ಆರೋಗ್ಯದ ಕಡೆ ಹೆಚ್ಚು ಯೋಚಿಸತೊಡಗಿದೆ. ನಾವು ಕೊಂಡ ಮಾಂಸ ಕುದುರೆ ಮಾಂಸವೆಂದು ಗೊತ್ತಾಯ್ತು. ಅದು ಎಷ್ಟು ಸಿಹಿಯಾಗಿತ್ತೆಂದರೆ ಅದನ್ನು ಕೂಡ ನಾವು ತಿನ್ನಲಾಗಲಿಲ್ಲ. ಬೇಸರದಿಂದ ಒಂದು ತುಣುಕನ್ನು ಗಾಳಿಯಲ್ಲಿ ಎಸೆದೆ. ಆಶ್ಚರ್ಯವೆಂದರೆ ನಮ್ಮ ಕಮ್‍ಬ್ಯಾಕ್ ಥಟ್ಟನೆ ಓಡಿ ಹೋಗಿ ಆ ತುಂಡು ಕೆಳಕ್ಕೆ ಬೀಳುವ ಮೊದಲೇ ಬಾಯಿಯಿಂದ ಕಚ್ಚಿ ಹಿಡಿದು ತಿಂದಿತು. ಮತ್ತೊಂದು ತುಣುಕು ಎಸೆದಾಗಲೂ ಹಾಗೆಯೇ ಮಾಡಿತು. ಇದರಿಂದ ನಾಯಿ ಹಾಲು ಕುಡಿಯುತ್ತಿಲ್ಲವೆಂಬ ಸಮಸ್ಯೆ ಬಗೆಹರಿಯಿತು. ಹೊಟ್ಟೆ ತುಂಬಿದ ಕಮ್‍ಬ್ಯಾಕ್‍ನ ಕುಂಯ್‍ಗುಟ್ಟುವುವಿಕೆಯ ನಡುವೆ ನಾವು ಮಿರಾಮಾರ್‍ನ್ನು ಪ್ರವೇಶಿಸಿದೆವು.
ಚೆ ಗೆವಾರ್ ಮತ್ತು ಅಲ್ಬರ್ಟೋ
ಮುಗಿದ ನಿರೀಕ್ಷೆ ಈ ಡೈರಿ ಬರೆಯುವ ಉದ್ದೇಶ ಮಿರಾಮಾರ್ನಲ್ಲಿ ಕಮ್‍ಬ್ಯಾಕ್‍ಗೆ ಹೊಸಮನೆ ಸಿಕ್ಕಿದ್ದರ ಕುರಿತು ತಿಳಿಸಲು ಖಂಡಿತಾ ಅಲ್ಲ. ಮಿರಾಮಾರ್ ತಲುಪುತ್ತಿದ್ದಂತೆಯೇ ಕಮ್‍ಬ್ಯಾಕ್ ಒಂದು ಮನೆಯಲ್ಲಿ ನೆಲೆಯೂರಿತು. ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಪ್ರಯಾಣ ತಾತ್ಕಾಲಿಕವಾಗಿ ರದ್ದಾಯಿತು. ಈ ಅಪಾಯವನ್ನು ಆಲ್ಬರ್ಟೋ ಮೊದಲೇ ಊಹಿಸಿ ಅಮೆರಿಕಾ ರಸ್ತೆಯ ಮೇಲೆ ಒಬ್ಬಂಟಿಯಾಗಿ ಸಾಗುತ್ತಿದ್ದ ಕನಸು ಕಾಣುತ್ತಿದ್ದರೂ ಯಾವತ್ತೂ ದನಿ ಎತ್ತಿರಲಿಲ್ಲ. ಜಗಳ, ಮುನಿಸು ಅವಳಿಗೂ ನನಗೂ ನಡುವೆ ನಡೆಯುತ್ತಿತ್ತು. ಗೆಲುವಿನಿಂದ ನಾನು ಹಿಂತಿರುಗಿ ಬರುವಾಗ ನನಗೆ ಒಟೆರೊ ಸಿಲ್ವಾನ ಸಾಲುಗಳು ಕಿವಿಯಲ್ಲಿ ರಿಂಗಣಿಸಿದವು.
ದೋಣಿಯ ಮೇಲೆ ನೀರು ಸಿಂಪಡಿಸಿದ ಸದ್ದು ಕೇಳಿದೆ ಆಕೆಯ ಬರಿಗಾಲು ನನ್ನ ಮುಖದ ಪ್ರತಿಫಲಿಸಿದ ಬಣ್ಣಗಳು ಹಸಿವಿನ ಸಂಜೆ ರಸ್ತೆ, ಬೀದಿ ಅವಳ ನಡುವೆ ಹೊಯ್ದಾಡುತ್ತಿರುವ ನನ್ನ ಹೃದಯ ಆಕೆಯ ಕಣ್ಣಿಂದ, ತೋಳುಗಳಿಂದ ಬಿಡಿಸಿಕೊಳ್ಳುವ ಶಕ್ತಿ ಎಲ್ಲಿಂದ ಪಡೆದೆ ನಾನು? ಮಳೆಯೊಂದಿಗೆ ಮಡುಗಟ್ಟಿದ ದುಃಖದಿಂದ ಗಾಜಿನ ಹಿಂದೆ ಅಳುತ್ತಾ ನಿಂತಿದ್ದಾಳೆ ಇರು ನಾನು ಬರುವೆ ಜೊತೆ ಬರುವೆ
ಅಲೆಗಳೊಂದಿಗೆ ದಡ ಸೇರಿದ ಮರವೊಂದು ನಾನು ಗೆದ್ದನೆಂದು ಹೇಳಬಹುದೇ ಎಂಬ ಅನುಮಾನ ಬಂತು. ಇರಲಿ ಬಿಡಿ. ಈಗಿನ ಸಂದರ್ಭಕ್ಕೆ ತಕ್ಕುದಲ್ಲ. ಎರಡು ದಿನಕ್ಕಾಗಿ ನಾನು ರೂಪಿಸಿದ್ದ ಯೋಜನೆ ಎಲಾಸ್ಟಿಕ್‍ನಂತೆ ಎಂಟು ದಿನಗಳಿಗೆ ಮುಂದುವರೆಸಬೇಕಾಯ್ತು. ಅತೀಕಷ್ಟದ ಬೀಳ್ಕೊಡುಗೆಯಿಂದ ಉಸಿರು ಕಟ್ಟಿದಂತಾಗಿ ನಾನು ಸಾಹಸಮಯ ಜಗತ್ತಿನೆಡೆಗೆ ಹೊರಡಲನುವಾದೆ. ಈ ಜಗತ್ತು ನಾನು ಊಹಿಸಿದ್ದಕ್ಕಿಂತ ಹೊಸದಾಗಿದ್ದರೂ ಬೇರೆಯದೇ ಆದ ಪರಿಸ್ಥಿತಿಗಳ ಕಡೆ ನಾನು ಎಳೆಯಲ್ಪಟ್ಟೆ.
ಕಡಲು ನನಗೆ ರಕ್ಷಣೆಯಾಗಿ ನಿಂತ ದಿನ ನನಗೆ ಚೆನ್ನಾಗಿ ನೆನಪಿದೆ. ನಲುಗಿ ಹೋಗುತ್ತಿದ್ದ ನನ್ನನ್ನು ತನ್ನ ಬಾಹುಗಳಿಂದ ಹೊರತಂದಿದ್ದು ಈ ಕಡಲು. ಕಡಲತೀರ ಮರಳಿನಿಂದ ಮರುಭೂಮಿಯಂತೆ ಬದಲಾಗಿತ್ತು. ತಣ್ಣನೆಯ ಗಾಳಿ ಬೀಸುತ್ತಿತ್ತು. ಈ ನೆಲದ ತಾಯಿಯ ಮಡಿಲಲ್ಲಿ ಸ್ವಲ್ಪ ದಣಿವಾರಿಸಿಕೊಂಡೆ. ಸುತ್ತಲೂ ಕಡಲು ಭೋರ್ಗರೆಯುತ್ತಲೇ ಇತ್ತು. ನನ್ನ ಅಂತರಾತ್ಮದ ಆದೇಶವನ್ನು ಮನ್ನಿಸಿ ಜಗತ್ತು ವೇಗವಾಗಿ ಭೂತಕಾಲದೊಳಕ್ಕೆ ಪ್ರಯಾಣಿಸಿದಂತೆ ಭಾಸವಾಗುತ್ತಿತ್ತು. ಇದ್ದಕ್ಕಿದ್ದಂತೆ ಬಲವಾಗಿ ಬೀಸಿದ ಗಾಳಿ ಕಡಲ ಭೋರ್ಗರೆತದ ಸದ್ದನ್ನೇ ಬದಲಿಸಿತು. ನಾನು ಆಶ್ಚರ್ಯದಿಂದ ತಲೆ ಎತ್ತಿ ನೋಡಿದೆ. ಆದರೂ ಅಲ್ಲೇನೂ ಕಾಣಿಸಲಿಲ್ಲ. ಅದು ಸುಮ್ಮನೇ ಹುಸಿ ಭಯವಷ್ಟೇ. ನಾನು ಮರಳಿ ನನ್ನ ಕನಸಿನ ಲೋಕಕ್ಕೆ ಹೋಗಿ ದಣಿವಾರಿಸಿಕೊಳ್ಳತೊಡಗಿದೆ. ಆಗ ಕೊನೆಯದಾಗಿ ಕಡಲಿನ ಎಚ್ಚರಿಕೆ ಕೇಳಿಸಿಕೊಂಡೆ. ಭೀಕರಶಬ್ದದಿಂದ ಕೂಡಿದ ಕಡಲಮೊರೆತ ನನ್ನೊಳಗಿನ ಪ್ರಶಾಂತತೆಗೆ ಭಂಗ ತಂದಿತು.
ನಾವು ಬೆಚ್ಚಿಬಿದ್ದು ತೀರವನ್ನು ಬಿಟ್ಟುಬಂದೆವು. ಆ ಕಲ್ಲೋಲ ದೃಶ್ಯ ನನ್ನನ್ನು ಬಿಡಲಿಲ್ಲ. ಸ್ವಲ್ಪ ತೀರ ಪ್ರದೇಶದಲ್ಲಿ ಕಡಲು ನರ್ತಿಸಿತು. ತನ್ನ ಅಂತರ್ಗತ ಎಚ್ಚರಿಕೆಗಳನ್ನು ಕಿವಿಗೆ ಹಾಕಿಕೊಳ್ಳದೇ ಕಡಲು ನರ್ತಿಸಿತ್ತು. ಆದರೆ ಪ್ರೀತಿಯಲ್ಲಿ ಬಿದ್ದ ಮನುಷ್ಯ (ನಿಜ ಹೇಳಬೇಕೆಂದರೆ ಆಲ್ಬರ್ಟೊ ಇದಕ್ಕಿಂತ ಒರಟು ಪದ ಬಳಸಿದ್ದಾನೆ) ಪ್ರಕೃತಿಯಿಂದ ಇಂತಹ ಕರೆಗಳನ್ನು ಕೇಳಿಸಿಕೊಳ್ಳುವುದಿಲ್ಲ. ನನ್ನೊಳಗಿನ ಬೂರ್ಜುವಾ ಮನಸ್ಥಿತಿ ಇನ್ನೂ ಎಳೆಯ ಹಂತದಲ್ಲಿತ್ತು.
ಅನ್ವೇಷಕರಿಗೆ ಒಂದು ಪ್ರಾಥಮಿಕ ಸೂತ್ರ ಇರುತ್ತದೆ. ಅವರ ಪ್ರತಿ ಹುಡುಕಾಟದಲ್ಲೂ ಎರಡು ಸ್ಥಾನಗಳಿರುತ್ತದೆ. ಒಂದು ಹೊರಡುವ ಸ್ಥಾನ ಮತ್ತು ಮರಳಿ ಸೇರುವ ಸ್ಥಾನ. ಸೈದ್ಧಾಂತಿಕವಾಗಿ ಎರಡನೇ ಅಂಶವನ್ನೇ ಗುರಿಯನ್ನಾಗಿ ಮಾಡಿಕೊಳ್ಳಬೇಕೆಂದು ಪ್ರಯತ್ನಿಸುವವರು ಮಾರ್ಗವನ್ನು ಕುರಿತು ಯೋಚಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಈ ಪ್ರಯಾಣವೇ ಕೊನೆಯಿರದ ಭ್ರಮೆ. ಅದು ಯಾವಾಗ ಮುಗಿಯಬೇಕಾಗುತ್ತದೆಯೋ ಅಂದೇ ಮುಗಿಯುತ್ತದೆ. ಆದರೆ ಅದನ್ನು ಮತ್ತೊಂದು ರೀತಿಯಲ್ಲಿ ಮುಗಿಸಲು ಲೆಕ್ಕವಿಲ್ಲದಷ್ಟು ಮಾರ್ಗಗಳಿವೆ.
ಆಲ್ಬರ್ಟೋ ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ. ‘ಬ್ರೇಸ್‍ಲೆಟ್, ಅಥವಾ ನೀನು ಯಾರೆಂದುಕೊಳ್ಳುತ್ತಿರುವಿಯೋ ಆ ವ್ಯಕ್ತಿ ನೀನಾಗಿರುವುದಿಲ್ಲ.’
ಚಿಚಿನಾ ನನ್ನ ಕೈಗಳಲ್ಲಿ ಕರಗಿ ಹೋದಳು. ‘ಚಿಚಿನಾ ನಿನ್ನ ಬ್ರೇಸ್‍ಲೆಟ್ ನಾನು ತೆಗೆದುಕೊಳ್ಳಬಹುದೇ? ಅದು ಸದಾ ನನ್ನೊಂದಿಗಿದ್ದು ನನ್ನನ್ನು ನಡೆಸುತ್ತದೆ.’ ಪಾಪ ಅಮಾಯಕಳು ಅವಳಿಗೆ ಚಿನ್ನ ಮುಖ್ಯವಲ್ಲ. ಹಿಡಿದುಕೊಂಡ ಆಕೆಯ ಬೆರಳುಗಳಲ್ಲಿನ ಪ್ರೀತಿಯ ಕಾರಣದಿಂದಲೇ ಕೇಳಿದೆ. ನಾನದನ್ನು ಕೇಳುವಂತೆ ಮಾಡಿದ ಪ್ರೀತಿಯನ್ನು ಅಳೆಯುತ್ತಿದ್ದಳು. ನಾನು ಅದನ್ನೇ ಯೋಚಿಸುತ್ತಿದ್ದೆ. ಆಲ್ಬರ್ಟೋ 29 ಕ್ಯಾರೆಟ್‍ಗಳ ನನ್ನ ಪ್ರೀತಿಯನ್ನು ಅಳೆಯಲು ಮೃದುವಾದ ಬೆರಳುಗಳ ಅವಶ್ಯಕತೆ ಇಲ್ಲವೆಂದು ಸ್ವಲ್ಪ ತುಂಟತನದಿಂದ ಹೇಳಿದ್ದ.
*
ಪರಿಚಯ : ಸೃಜನ್ ಅವರು ಸಂಡೂರಿನವರು. ಬಳ್ಳಾರಿಯಲ್ಲಿ ವಿದ್ಯಾಭ್ಯಾಸ. ಕಳೆದ ಮೂರು ದಶಕಗಳಿಂದ ಕನ್ನಡ ಹಲವಾರು ಪತ್ರಿಕೆಗಳಿಗೆ ಇಲಸ್ಟ್ರೆಷನ್ ಮಾಡುತ್ತಿದ್ದಾರೆ. ರಾಮ್ ಗೋಪಾಲ್ ವರ್ಮ ಸಿನೆಮಾಯಾನ ‘ನನ್ನಿಷ್ಟ ‘ ಮೊದಲ ಅನುವಾದ. ನಂತರ ಸಿರಶ್ರೀ ‘ವೋಡ್ಕಾ ವಿತ್ ವರ್ಮಾ, ಡಾ. ಚಂದ್ರಶೇಖರ್ ರಾವ್ ‘ ಕರಿಮೆಣಸಿನ ಗಿಡ, ವೆಂಪಲ್ಲಿ ಷರೀಫ್ ‘ಜುಮ್ಮಾ’ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಗ್ನಿ ಶ್ರೀಧರ್ ಅವರ ‘ಎದೆಗಾರಿಕೆ ‘, ಜಿ. ಎನ್. ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’, ಪ್ರಕಾಶ್ ರೈ ಅವರ ‘ಇರುವುದೆಲ್ಲವ ಬಿಟ್ಟು ‘ ಕೃತಿಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ. ‘ಮೋಟಾರ್ ಸೈಕಲ್ ಡೈರೀಸ್ ‘ ಇವರ ಎಂಟನೆಯ ಅನುವಾದ.
ಪುಸ್ತಕ ಖರೀದಿಗೆ ಸಂಪರ್ಕಿಸಿ : ವೈಷ್ಣವಿ ಪ್ರಕಾಶನ, 9620170027
ಇದನ್ನೂ ಓದಿ : Shantinath Desai‘s Birthday : ಸಾಹಿತ್ಯಪ್ರಿಯರಿಗೆ ಇಂದೇ ‘ದೇಸಾಯಿ ಕಥನ’ ಉಡುಗೊರೆ