ದೊಡ್ಡ ಸಿಗ್ನಲ್ ಕೊಟ್ಟ ಜೂ ಎನ್ಟಿಆರ್ ಅಣ್ಣ, ಎಲ್ಲವೂ ಸರಿಹೋಯ್ತಾ?
Jr NTR-Kalyan Ram: ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಲ್ಲ ಎಂಬುದು ಗುಟ್ಟೇನೂ ಅಲ್ಲ. ಕುಟುಂಬ ಹಾಗೂ ಟಿಡಿಪಿ ಪಕ್ಷದಿಂದ ಜೂ ಎನ್ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಅನ್ನು ದೂರ ಇಡಲಾಗಿದೆ. ಆದರೆ ಇದೀಗ ಜೂ ಎನ್ಟಿಆರ್ ಸಹೋದರ ಕಲ್ಯಾಣ್ ರಾಮ್, ಟಿಡಿಪಿ ಪಕ್ಷದ ಬಗ್ಗೆ ದೊಡ್ಡ ಸಿಗ್ನಲ್ ಒಂದನ್ನು ನೀಡಿದ್ದಾರೆ.

ತೆಲುಗು ರಾಜ್ಯಗಳ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಗಟ್ಟಿ ಹಿಡಿತ ಇರುವ ಕುಟುಂಬವೆಂದರೆ ನಂದಮೂರಿ ಕುಟುಂಬ (Nandamuri Family). ಈಗ ಕೋನಿಡೆಲ ಕುಟುಂಬ (ಮೆಗಾಸ್ಟಾರ್ ಚಿರಂಜೀವಿ) ಕುಟುಂಬದ ಹಿಡಿತವೂ ಗಟ್ಟಿಯಾಗಿದೆ. ಆದರೂ ಸುಮಾರು 40 ವರ್ಷಗಳಿಂದಲೂ ರಾಜಕೀಯ ಹಾಗೂ ಸುಮಾರು 70 ವರ್ಷಗಳಿಂದಲೂ ತೆಲುಗು ಚಿತ್ರರಂಗದ ಮೇಲೆ ಹಿಡಿತ ಹೊಂದಿದ್ದಾರೆ. ದೊಡ್ಡ ಕುಟುಂಬವಾದ ನಂದಮೂರಿ ಕುಟುಂಬದ ಪ್ರಸ್ತುತ ಪ್ರಮುಖರೆಂದರೆ ಬಾಲಕೃಷ್ಣ ಮತ್ತು ಅವರ ಮಕ್ಕಳು, ಜೂ ಎನ್ಟಿಆರ್, ಅವರ ಸಹೋದರ ಕಲ್ಯಾಣ್ ರಾಮ್, ನಂದಮೂರಿ ಕುಟುಂಬದ ಅಳಿಯ ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬ.
ಜೂ ಎನ್ಟಿಆರ್ ಹಾಗೂ ಕಲ್ಯಾಣ್ ರಾಮ್ ಅವರನ್ನು ನಂದಮೂರಿ ಕುಟುಂಬದಿಂದ ದೂರ ಇಡಲಾಗಿದೆ. ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಹಾಗೂ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಅವರುಗಳಿಗೆ ರಾಜಕೀಯದಲ್ಲಿ ಪ್ರತಿಸ್ಪರ್ಧಿ ಇರಬಾರದು ಎಂಬ ಕಾರಣಕ್ಕೆ ಜೂ ಎನ್ಟಿಆರ್ ಹಾಗೂ ಕಲ್ಯಾಣ್ ರಾಮ್ ಅವರನ್ನು ದೂರ ಇಡಲಾಗಿದೆ ಎನ್ನಲಾಗುತ್ತಿದೆ. ಆದರೆ ಇತ್ತೀಚೆಗೆ ನಡೆದಿರುವ ಘಟನೆಯೊಂದು ನಂದಮೂರಿ ಕುಟುಂಬದ ಅಭಿಮಾನಿಗಳಲ್ಲಿ ಹೊಸ ಆಸೆಯೊಂದನ್ನು ಚಿಗುರಿಸಿವೆ. ಎಲ್ಲವೂ ಮತ್ತೆ ಸರಿ ಹೋಗಿದೆಯೇ ಎಂಬ ಅನುಮಾನವನ್ನೂ ಮೂಡಿಸಿದೆ.
ಜೂ ಎನ್ಟಿಆರ್ ಸಹೋದರ ಕಲ್ಯಾಣ್ ರಾಮ್ ‘ಅರ್ಜುನ್ s/o ವೈಜಯಂತಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಿನಿಮಾದ ಪ್ರಚಾರಕ್ಕೆಂದು ಇತ್ತೀಚೆಗೆ ನರಸಾರಾವ್ ಪೇಟೆಗೆ ಕಲ್ಯಾಣ್ ರಾಮ್ ಬಂದಿದ್ದರು. ಈ ವೇಳೆ ಕಲ್ಯಾಣ್ ಅವರನ್ನು ನೋಡಲು ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಅಭಿಮಾನಿಯೊಬ್ಬ ನಂದಮೂರಿ ಕುಟುಂಬದ ಪಕ್ಷವಾಗಿರುವ ಟಿಡಿಪಿಯ ಬಾವುಟವೊಂದನ್ನು ತೆಗೆದುಕೊಂಡು ಬಂದರು. ಅದನ್ನು ಗಮನಿಸಿದ ಕಲ್ಯಾಣ್ ರಾಮ್ ತಾವೇ ಆ ವ್ಯಕ್ತಿಯನ್ನು ಮುಂದಕ್ಕೆ ಕರೆಸಿ, ಅವರು ಹಿಡಿದುಕೊಂಡಿದ್ದ ಬಾವುಟನ್ನು ಪಡೆದುಕೊಂಡು ಹಾರಾಡಿಸಿ ಅದನ್ನು ಆ ವ್ಯಕ್ತಿಗೆ ಮರಳಿಸಿದರು.
ಇದನ್ನೂ ಓದಿ:ಜೂ ಎನ್ಟಿಆರ್ಗಾಗಿ ತೆಲುಗು ಕಲಿತ ಜಪಾನಿ ಮಹಿಳೆ, ವಿಡಿಯೋ ಹಂಚಿಕೊಂಡ ನಟ
ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಕಲ್ಯಾಣ್ ರಾಮ್, ಟಿಡಿಪಿ ಪಕ್ಷದ ಬಾವುಟ ಹಿಡಿಯುವ ಮೂಲಕ ತಾವಿನ್ನೂ ಟಿಡಿಪಿ ಜೊತೆಗೆ ಇದ್ದೀವಿ ಆ ಮೂಲಕ ನಂದಮೂರಿ ಕುಟುಂಬದ ಜೊತೆಗೆ ಇದ್ದೀವಿ ಎಂಬುದನ್ನು ತೋರಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಕಲ್ಯಾಣ್ ರಾಮ್ ಮತ್ತು ಜೂ ಎನ್ಟಿಆರ್ ಮತ್ತೆ ಟಿಡಿಪಿಯ ಸಕ್ರಿಯ ರಾಜಕೀಯಕ್ಕೆ ಬರುವ ಬಗ್ಗೆ ನೀಡಿರುವ ಸೂಚನೆ ಇದು ಎಂದು ಸಹ ವಿಶ್ಲೇಷಣೆಗಳು ನಡೆದಿವೆ.
ಜೂ ಎನ್ಟಿಆರ್, ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಈ ಹಿಂದೆ ಅವರು ಟಿಡಿಪಿ ಪರವಾಗಿ ಪ್ರಚಾರಕ್ಕೆ ಬಂದಾಗ ಅವರು ಹೋದಲ್ಲೆಲ್ಲ ಜನಸಾಗರವೇ ಸೇರಿತ್ತು. ಪಕ್ಷದಲ್ಲಿ ಅವರ ಪರವಾದ ದೊಡ್ಡ ಅಲೆ ಸೃಷ್ಟಿಯಾಗಿತ್ತು. ಇದನ್ನು ಗಮನಿಸಿ ಜೂ ಎನ್ಟಿಆರ್ ಅನ್ನು ಚಂದ್ರಬಾಬು ನಾಯ್ಡು, ಬಾಲಕೃಷ್ಣ ಅವರುಗಳು ಪಕ್ಷದಿಂದ ದೂರ ಇರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗ ನಡೆದಿರುವ ಬೆಳವಣಿಗೆ ಜೂ ಎನ್ಟಿಆರ್ ಅಭಿಮಾನಿಗಳು ಹಾಗೂ ಟಿಡಿಪಿ ಕಾರ್ಯಕರ್ತರಲ್ಲಿ ಹೊಸ ಆಸೆ ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ