‘ಕಣ್ಣಪ್ಪ’ ಸಿನಿಮಾ ಬಿಡುಗಡೆ ಮುಂದೂಡಿದ ಮಂಚು ಮನೋಜ್, ಯಾವುದರ ಭಯ?
Kannappa: ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಆಗಿತ್ತು. ಸಿನಿಮಾದ ಪ್ರಚಾರ ಕಾರ್ಯ ಈಗಾಗಲೇ ಚಾಲ್ತಿಯಲ್ಲಿತ್ತು. ಆದರೆ ಈಗ ಹಠಾತ್ತನೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸಿನಿಮಾ ಬಿಡುಗಡೆ ಮುಂದೂಡಿಕೆಗೆ ಕಾರಣ ಏನೆಂದು ಮಂಚು ವಿಷ್ಣು ವಿವರಿಸಿದ್ದಾರೆ.

ಪ್ರಭಾಸ್ (Prabhas), ಅಕ್ಷಯ್ ಕುಮಾರ್ (Akshay Kumar), ಮೋಹನ್ಲಾಲ್ ಇನ್ನೂ ಕೆಲವು ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟಿಸಿರುವ ‘ಕಣ್ಣಪ್ಪ’ ಸಿನಿಮಾ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದು. ಸಿನಿಮಾದ ಪ್ರಚಾರವನ್ನೂ ಸಹ ಚಿತ್ರತಂಡ ಆರಂಭ ಮಾಡಿ ಆಗಿದೆ. ಆದರೆ ಈಗ ಇದ್ದಕ್ಕಿದ್ದಂತೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಸಿನಿಮಾ ಸಿದ್ಧವಾಗಿ, ಪ್ರಚಾರ ನಡೆಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಈ ನಿರ್ಣಯ ಹೊರಬಿದ್ದಿರುವುದು ಸಿನಿಮಾಕ್ಕಾಗಿ ಕಾಯುತ್ತಿದ್ದವರಿಗೆ ಆಶ್ಚರ್ಯ ಮೂಡಿಸಿದೆ.
ಏಪ್ರಿಲ್ 25ಕ್ಕೆ ‘ಕಣ್ಣಪ್ಪ’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಇದೀಗ ಮಂಚು ವಿಷ್ಣು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ಸಿನಿಮಾದ ಬಿಡುಗಡೆ ವಿಳಂಬ ಆಗಲಿದೆ ಎಂದಿದ್ದಾರೆ. ಸಿನಿಮಾದ ಪ್ರಮುಖವಾದ ಭಾಗವೊಂದರ ವಿಎಫ್ಎಕ್ಸ್ ಸೂಕ್ತವಾಗಿ, ಪರಿಣಾಮಕಾರಿಯಾಗಿ ಮಾಡಬೇಕಿದ್ದು, ಇದು ಹೆಚ್ಚು ಸಮಯ ಹಿಡಿಯಲಿದೆ. ನಾವು ಪರಿಪೂರ್ಣವಾದ ಸಿನಿಮಾ ಅನ್ನು ಪ್ರೇಕ್ಷಕರಿಗೆ ನೀಡಬೇಕು ಎಂದುಕೊಂಡಿದ್ದೇವೆ ಹಾಗಾಗಿ ಇನ್ನಷ್ಟು ಸಮಯ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ ಮಂಚು ಮನೋಜ್.
ಸಿನಿಮಾದ ಕೆಲ ಭಾಗಗಳ ವಿಎಫ್ಎಕ್ಸ್ ಆಗಿದೆಯಾದರೂ ಚಿತ್ರತಂಡ ನಿರೀಕ್ಷಿತ ಮಟ್ಟದ ಫಲಿತಾಂಶ ಬಂದಿಲ್ಲವಂತೆ ಹಾಗಾಗಿ ಈಗ ವಿಎಫ್ಎಕ್ಸ್ ಅನ್ನು ಸರಿ ಮಾಡಲಾಗುತ್ತಿದ್ದು, ಇದಕ್ಕಾಗಿ ಹೆಚ್ಚಿನ ಸಮಯ ವ್ಯಯವಾಗುತ್ತಿದೆ. ಇದರ ಜೊತೆಗೆ ಪ್ರಸ್ತುತ ಐಪಿಎಲ್ ಸೀಸನ್ ಸಹ ನಡೆಯುತ್ತಿದ್ದು ಈ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ನಿರ್ಧರಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಕಡೆಗೂ ಮದುವೆಗೆ ಮನಸ್ಸು ಮಾಡಿದ ಟಾಲಿವುಡ್ ನಟ ಪ್ರಭಾಸ್
‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪನ ಕತೆಯುಳ್ಳ ಸಿನಿಮಾ ಆಗಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ‘ಬೇಡರ ಕಣ್ಣಪ್ಪ’ನ ಕತೆಯನ್ನು ಭಕ್ತಿಯ ಸಿನಿಮಾ ಆಗಿಸುವ ಬದಲಿಗೆ ಆಕ್ಷನ್ ಸಿನಿಮಾ ರೀತಿ ಪ್ರೆಸೆಂಟ್ ಮಾಡಿರುವುದು ತಿಳಿದು ಬರುತ್ತಿದೆ. ಸಿನಿಮಾದಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಮೋಹನ್ ಬಾಬು, ಕನ್ನಡದ ದೇವರಾಜ್, ಪ್ರೀತಿ ಮುಕುಂದನ್, ಜೋಸಿತಾ ಅನೋಲಾ, ಬ್ರಹ್ಮಾನಂದಂ, ಶರತ್ ಕುಮಾರ್ ಇನ್ನೂ ಹಲವಾರು ಜನಪ್ರಿಯ ನಟ-ನಟಿಯರು ನಟಿಸಿದ್ದಾರೆ. ಸಿನಿಮಾ ಮೇ ಅಂತ್ಯದ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.
‘ಕಣ್ಣಪ್ಪ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕೆಲ ದಿನಗಳ ಹಿಂದಷ್ಟೆ ಮೋಹನ್ ಬಾಬು, ಮಂಚು ವಿಷ್ಣು ಅವರುಗಳು ಬೆಂಗಳೂರಿಗೆ ಆಗಮಿಸಿ ಇಲ್ಲಿ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ಕಾರ್ಯಕ್ರಮಕ್ಕೆ ಸುಮಲತಾ, ರಾಕ್ಲೈನ್ ವೆಂಕಟೇಶ್, ಭಾರತಿ ವಿಷ್ಣುವರ್ಧನ್ ಅವರುಗಳು ಅತಿಥಿಗಳಾಗಿ ಆಗಮಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ