ಡೇವಿಡ್ ವಾರ್ನರ್ಗೆ ಸಿನಿಮಾದಲ್ಲೂ ಅವಮಾನ, ಅಭಿಮಾನಿಗಳ ಅಸಮಾಧಾನ
David Warner: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ತೆಲುಗು ಸಿನಿಮಾ ‘ರಾಬಿನ್ಹುಡ್’ ನಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವರು ನಟಿಸಿರುವ ಬಗ್ಗೆ ಭರ್ಜರಿ ಪ್ರಚಾರ ಮಾಡಲಾಗಿತ್ತು. ಅವರಿಗಾಗಿ ಸಿನಿಮಾಕ್ಕೆ ಹೋಗಿ ನೋಡಿದವರಿಗೆ ನಿರಾಸೆ ಮೂಡಿದೆ. ಡೇವಿಡ್ ವಾರ್ನರ್ ಪಾತ್ರವನ್ನು ವಿಲನ್ ಆಗಿ ಅಲ್ಲದೆ ಕಮಿಡಿಯನ್ ಆಗಿ ಪ್ರೆಸೆಂಟ್ ಮಾಡಲಾಗಿದೆಯಂತೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಐಪಿಎಲ್ ಟೂರ್ನಿಯಲ್ಲಿ ಹಲವು ವರ್ಷ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ ಡೇವಿಡ್ ವಾರ್ನರ್ ತೆಲುಗು ಪ್ರೇಕ್ಷಕರ ನೆಚ್ಚಿನ ಕ್ರಿಕೆಟಿಗ. ತೆಲುಗು ಸಿನಿಮಾಗಳ ಅಭಿಮಾನಿ ಆಗಿರುವ ಡೇವಿಡ್ ವಾರ್ನರ್ ಕೋವಿಡ್ ಸಮಯದಲ್ಲಿ ತೆಲುಗು ಸಿನಿಮಾಗಳ ಹಾಡುಗಳಿಗೆ ಡ್ಯಾನ್ಸ್ ಮಾಡಿ, ಡೈಲಾಗ್ ಹೇಳಿ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದರು. ಕ್ರಿಕೆಟ್ ಮತ್ತು ಸೋಷಿಯಲ್ ಮೀಡಿಯಾ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಡೇವಿಡ್ ವಾರ್ನರ್ ಅನ್ನು ಇದೀಗ ಸಿನಿಮಾಕ್ಕೆ ಕರೆತರಲಾಗಿದೆ. ಆದರೆ ಇದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ.
ನಿತಿನ್ ಮತ್ತು ‘ಶ್ರೀಲೀಲಾ’ ನಟನೆಯ ‘ರಾಬಿನ್ಹುಡ್’ ಸಿನಿಮಾನಲ್ಲಿ ಡೇವಿಡ್ ವಾರ್ನರ್ ವಿಲನ್ ಆಗಿ ನಟಿಸಿದ್ದಾರೆ. ಡೇವಿಡ್ ವಾರ್ನರ್ ಸಿನಿಮಾದಲ್ಲಿ ನಟಿಸಿರುವುದನ್ನು ಅಬ್ಬರದ ಪ್ರಚಾರ ಮಾಡಲಾಯ್ತು. ಸಿನಿಮಾದ ಪ್ರೀ ರಿಲೀಸ್ ಇವೆಂಟ್ಗೆ ಸಹ ಡೇವಿಡ್ ವಾರ್ನರ್ ಅನ್ನು ಕರೆತರಲಾಯ್ತು. ಪ್ರೀ ರಿಲೀಸ್ ಇವೆಂಟ್ನಲ್ಲಿಯೂ ಸಹ ಹಿರಿಯ ನಟರೊಬ್ಬರು ಡೇವಿಡ್ ವಾರ್ನರ್ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಬಲು ದೊಡ್ಡ ಸುದ್ದಿಯಾಗಿತ್ತು. ಇದೀಗ ಸಿನಿಮಾದಲ್ಲಿಯೂ ವಾರ್ನರ್ಗೆ ಅವಮಾನ ಮಾಡಲಾಗಿದೆ ಎನ್ನಲಾಗುತ್ತಿದೆ.
ಭಾರಿ ಪ್ರಚಾರದ ಮೂಲಕ ಡೇವಿಡ್ ವಾರ್ನರ್ ಪಾತ್ರದ ಬಗ್ಗೆ ಬಹಳ ನಿರೀಕ್ಷೆಗಳನ್ನು ಹುಟ್ಟಿಸಲಾಗಿತ್ತು. ಆದರೆ ಸಿನಿಮಾದಲ್ಲಿ ಅವರ ಪಾತ್ರ ವಿಲನ್ ರೀತಿ ಅಲ್ಲ ಬದಲಿಗೆ ಕಮಿಡಿಯನ್ ರೀತಿ ಇದೆ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೇವಿಡ್ ವಾರ್ನರ್ ಅಂಥಹಾ ಅಂತರಾಷ್ಟ್ರೀಯ ಆಟಗಾರನನ್ನು ಕರೆದುಕೊಂಡು ಬಂದು ಕಮಿಡಿಯನ್ ಮಾಡಲಾಗಿದೆ. ‘ರಾಬಿನ್ಹುಡ್’ ಸಿನಿಮಾದಲ್ಲಿ ಅವರ ಪಾತ್ರಕ್ಕಿಂತಲೂ ರಾಜಮೌಳಿ ಜೊತೆ ಅವರು ನಟಿಸಿದ್ದ ಜಾಹೀರಾತು ಇನ್ನೂ ಚೆನ್ನಾಗಿತ್ತು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರೀ ರಿಲೀಸ್ ಇವೆಂಟ್ನಲ್ಲಿಯೂ ಸಹ ವಾರ್ನರ್ಗೆ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವಮಾನ ಮಾಡಿದ್ದರು. ವಾರ್ನರ್ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಆ ಬಳಿಕ ರಾಜೇಂದ್ರ ಪ್ರಸಾದ್ ಅವರು ಮತ್ತೊಂದು ವಿಡಿಯೋ ಮಾಡಿ ಡೇವಿಡ್ ವಾರ್ನರ್ಗೆ ಕ್ಷಮೆ ಸಹ ಕೇಳಿದರು.
ಇದನ್ನೂ ಓದಿ:ಡೇವಿಡ್ ವಾರ್ನರ್ ಜೊತೆಗೆ ಡ್ಯಾನ್ಸ್ ಮಾಡಿದ ಶ್ರೀಲೀಲಾ
ಈ ಹಿಂದೆ ದಿಗ್ಗಜ ಬಾಕ್ಸರ್ ಮೈಕ್ ಟೈಸನ್ ಅನ್ನು ‘ಲೈಗರ್’ ಸಿನಿಮಾದ ವಿಲನ್ ಪಾತ್ರಕ್ಕೆ ಕರೆತರಾಗಿತ್ತು. ಆ ಸಿನಿಮಾದಲ್ಲಿಯೂ ಸಹ ಟೈಸನ್ ನಟಿಸುತ್ತಿರುವುದನ್ನು ಹೈಲೆಟ್ ಮಾಡಲಾಗಿತ್ತು. ಆದರೆ ಸಿನಿಮಾಕ್ಕೆ ಹೋಗಿ ನೋಡಿದವರಿಗೆ ನಿರಾಸೆ ಕಾದಿತ್ತು. ಏಕೆಂದರೆ ಟೈಸನ್ ಪಾತ್ರವನ್ನು ಸರಿಯಾಗಿ ಪ್ರೆಸೆಂಟ್ ಮಾಡಲಾಗಿರಲಿಲ್ಲ. ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿರಲಿಲ್ಲ. ಈಗ ಡೇವಿಡ್ ವಾರ್ನರ್ ವಿಷಯದಲ್ಲಿಯೂ ಹಾಗೆಯೇ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ