National Broadcasting Day 2021 : ’ಕಾರಂತ. ಬರೆದಿದ್ದೇ ಕನ್ನಡ’ ಆ ದಿನ ಆಕಾಶವಾಣಿಯಲ್ಲಿ

National Broadcasting Day 2021 : ’ಕಾರಂತ. ಬರೆದಿದ್ದೇ ಕನ್ನಡ’ ಆ ದಿನ ಆಕಾಶವಾಣಿಯಲ್ಲಿ
ಶಿವರಾಮ ಕಾರಂತರು ಮತ್ತು ಸಾಯಿಲಕ್ಷ್ಮೀ ಎಸ್.

AIR : ‘ಹಾ‌. ಮಾ‌. ನಾಯಕರಿಗೂ ಕಾರಂತರಿಗೂ ಅಷ್ಟಕ್ಕಷ್ಟೇ. ನೀವು ಬೇರೆ‌ ಲೇಖಕರ ಬಗ್ಗೆ ಹೇಳಬಹುದಿತ್ತು. ಈ ಹುದ್ದೆಗೆ ನಿಮ್ಮ ಆಯ್ಕೆ ಅಸಂಭವ ಎಂದು ಭವಿಷ್ಯ ನುಡಿದರು.’ ಸಾಯೀಲಕ್ಷ್ಮೀ ಎಸ್.

ಶ್ರೀದೇವಿ ಕಳಸದ | Shridevi Kalasad

|

Jul 23, 2021 | 4:27 PM

National Broadcasting Day 2021 : ಇಂದು ‘ರಾಷ್ಟ್ರೀಯ ಪ್ರಸಾರ ದಿನ’ ಎಂದ‌ ಮೇಲೆ ರೇಡಿಯೋ ಕೇಳ್ಮೆಯ ಪ್ರಭಾವ, ಪರಿಣಾಮ, ನೆನೆಯುವ ಶುಭಸಮಯ. ಮೊದಲು ರೇಡಿಯೋ ರೂಪಗೊಂಡ ಉದ್ದೇಶ‌ ಸುದ್ದಿಪ್ರಸಾರಕ್ಕಾಗಿ. ನಂತರ ಅದರ‌ ಪಾತ್ರ ಹಿರಿದಾಯಿತು. ಹಿಗ್ಗಿತು. ಈಗ Infotainment ಕಾಲಘಟ್ಟ. ಸುದ್ದಿ, ಮಾಹಿತಿ‌ ಮತ್ತು‌ ಮನರಂಜನೆ ಇದೆಲ್ಲದರ‌ ಮೊತ್ತವಾಗಿ ರೇಡಿಯೋ ತನ್ನ ಕಾಯಕ ನಿರ್ವಹಿಸುತ್ತಿದೆ. ಎಷ್ಟೇ ಬಗೆಯ ಖಾಸಗಿ ರೇಡಿಯೋಗಳು ಚಾಲ್ತಿಯಲ್ಲಿದ್ದರೂ ಆಕಾಶವಾಣಿಗೆ ಮಾತೃಸ್ಥಾನ. ಭಾಷೆಯ ಬಳಕೆ, ಉಚ್ಚಾರ, ವಿಚಾರ ಪ್ರಸ್ತುತಿಯಲ್ಲಿ ನಿಷ್ಪಕ್ಷಪಾತ ನಿಲುವು, ನೀತಿಸಂಹಿತೆಗೆ ಬದ್ಧವಾದ ಕರ್ತವ್ಯ ಶ್ರದ್ಧೆ ಹಾಗೂ ಸರ್ವಜನರ ಹಿತವನ್ನೊಳಗೊಂಡ ಕಾರ್ಯ ವೈಖರಿ ಇವೆಲ್ಲದರಿಂದ ಆಕಾಶವಾಣಿ ಒಂದು ಭಿನ್ನ, ಅನನ್ಯ ಸಂಸ್ಥೆ. ಎಲ್ಲ ಧ್ಯೇಯ ಧೋರಣೆಗಳು ಸಾರ್ವಜನಿಕ ಒಳಿತಿನ ಪರವಾಗಿಯೇ. ಅಂದ‌ಮೇಲೆ ಪ್ರಸಾರಕರಾಗಿ ಆಯ್ಕೆಯಾದ ನಮ್ಮ ಜವಾಬ್ದಾರಿ ದೊಡ್ಡದು. ನಮ್ಮ‌ ಕಣಕಣದಲ್ಲೂ ನೀತಿಸಂಹಿತೆ ಪ್ರವಹಿಸಿ ಸದಾ ಎಚ್ಚರಿಸಿ ಕಾಯುತ್ತಿರುತ್ತದೆ. ನನ್ನ‌ ಪಾಲಿಗಿಂತೂ ಬಾನುಲಿಯ ವೃತ್ತಿಯ ಘನತೆಯ ಹಿರಿಮೆ ವಿಶೇಷವಾದದು. ಸಾಯಿಲಕ್ಷ್ಮೀ ಎಸ್. ಬೆಂಗಳೂರು.

*

ಕೆಲವು‌ ಮಹನೀಯರು ನಾನಾ ಬಗೆಯಲ್ಲಿ ಅವರು ಉಳಿದಾಗಲೂ ಅಳಿದ‌ ಮೇಲೂ ಬೇರೆಯವರ ಜೀವನ‌ ಹಸನುಗೊಳಿಸುತ್ತ ಬದುಕಿರುತ್ತಾರೆ. ನನ್ನ‌ ಜೀವನದಲ್ಲಿ‌ ಸಾಹಿತಿ ಶಿವರಾಮ ಕಾರಂತರ‌ ಪಾತ್ರ ಅಂತಹುದು.

ಆಕಾಶವಾಣಿಯ ವೃತ್ತಿಗೆ‌ ನನ್ನ‌ ಆಯ್ಕೆ ಆಗಿದ್ದು‌ ಕೇಂದ್ರ ಲೋಕ ಸೇವಾ ಆಯೋಗದ‌ ಸಂದರ್ಶನದ ಮೂಲಕ. ಆ ಆಯ್ಕೆ ಸಮಿತಿಯಲ್ಲಿ ಆಯಾಯ ಪ್ರಾದೇಶಿಕ ಭಾಷಾ ತಜ್ಞರನ್ನು ಬರಮಾಡಿಕೊಂಡಿರುತ್ತಾರೆ. ನಮ್ಮ‌ಒಡನಾಟ ಭಾಷೆಯ‌ ಜೊತೆಯೇ ಅಲ್ಲವೇ? ನನ್ನ ಸರದಿ‌ ಬಂದಾಗ ನಾನು ಇಂಗ್ಲೀಷ್ ಭಾಷಾ ವಿಭಾಗದಲ್ಲಿ‌ ಪ್ರವೇಶ‌ ಪಡೆದವಳು “Indian writing in English” ಅದನ್ನು ಲೀಲಾಜಾಲವಾಗಿ ನಿರ್ವಹಿಸಿದೆ. ಅನಂತರ ಕನ್ನಡ ಭಾಷಾ ಸರದಿ. ವಿಷಯತಜ್ಞರಾಗಿ ಅಲ್ಲಿದ್ದವರು ನಿಜದ ಅರ್ಥದಲ್ಲಿ ಕನ್ನಡ ನಾಯಕರೇ ಆಗಿದ್ದ ಹಾ ಮಾ ನಾಯಕರು.

“ನಿಮ್ಮ ಇಷ್ಟದ ಲೇಖಕರು ಯಾರು? ನಿಮ್ಮ ಮೆಚ್ಚಿನ ಕೃತಿಗಳು ಯಾವುವು?”

ಕಣ್ಣ ಮುಂದೆ ಕಂಡ ಬಿಂಬವೇ ಕಾರಂತರದ್ದು. ಉದುರಿತು ಅವರ ಅಮೂಲ್ಯ‌ ಕೃತಿಗಳ ಸರಮಾಲೆ ಹಾಗು‌ ಅವುಗಳ ಅಮೋಘ ವಿವರಣೆ. ಅದರಲ್ಲೂ ವಿಶೇಷವಾಗಿ ನನ್ನ ಅತಿ‌ಮೆಚ್ಚಿನ ಕೃತಿ ‘ಮರಳಿ ಮಣ್ಣಿಗೆ’. ಮರಳಿ‌ಮಣ್ಣಿಗೆ ನೆಲ ಸಂ‌ಸ್ಕೃತಿಯನ್ನು ಸಮರ್ಥವಾಗಿ ಪರಿಮೂಡಿಸುವ ಅದ್ಭುತ ಪಾತ್ರಗಳನ್ನು‌ ಜೀವಂತವಾಗಿಯೆ ಕಂಗೊಳಿಸುವಂತೆ ಭಾಸವಾಗಿಸುವ ಗಟ್ಟಿತನದ ಕಥಾವಸ್ತುವುಳ್ಳ ಕೃತಿ. ಇದು ಭಾವುಕ ಓದುಗರ ತನ್ಮಯ ಜಗತ್ತನ್ನು ಆವರಿಸಿಕೊಂಡು ಅವರ ಬದುಕನ್ನು ಸಹನೀಯಗೊಳಿಸುವ ವಿಶಿಷ್ಟ ಪರಿಯ ಬಗ್ಗೆ ಮಾತನಾಡಿದೆ‌. ನಾಯಕರು ಬಹಳ‌ ಪ್ರೀತಿಯಿಂದ ಆಲಿಸುತ್ತಿದ್ದದು ಪ್ರೋತ್ಸಾಹಕರವಾಗಿತ್ತು. ಸಂತೋಷದಿಂದ ವಿಜೃಂಭಿಸುತ್ತ ಹೊರಬಂದಾಗ ಇತರರು “ಯಾವ‌ ಲೇಖಕರ ಬಗ್ಗೆ ವಿವರಣೆ ಕೇಳಿದರು?”

ನಾನು ಕಾರಂತರು ಎಂದಾಗ ಅವರೆಲ್ಲ

“ಹಾ‌ ಮಾ‌ ನಾಯಕರಿಗೂ ಕಾರಂತರಿಗೂ ಅಷ್ಟಕ್ಕಷ್ಟೇ. ನೀವು ಬೇರೆ‌ ಲೇಖಕರ ಬಗ್ಗೆ ಹೇಳಬಹುದಿತ್ತು. ಈ ಹುದ್ದೆಗೆ ನಿಮ್ಮ ಆಯ್ಕೆ ಅಸಂಭವ” ಎಂದು ಭವಿಷ್ಯ ನುಡಿದರು.

ಈ ಯಾವ ಅರಮನೆ ರಾಜಕಾರಣವು ನನಗೆ ತಿಳಿಯದು. ಕಾರಂತರ ಬರಹಗಳಿಂದ ವಸ್ತುನಿಷ್ಠ ಬದುಕನ್ನು‌ ಕಟ್ಟಿಕೊಳ್ಳಲು ಪ್ರಯತ್ನಿಸಿದವಳು ನಾನು. ಅವರ‌ ಮಹಿಳಾ ಪಾತ್ರಗಳ ಗಟ್ಟಿತನವೇ ನನ್ನನ್ನು ರೂಪಿಸಿರುವುದು. ಹೀಗಿರುವಾಗ ಮೊದಲೇ ಈ ವಿರೋಧ ತಿಳಿದಿದ್ದರೂ‌ ನಾನು ಕಾರಂತರ‌ ಕೃತಿಗಳ ಬಗ್ಗೆಯೇ ಮಾತನಾಡುತ್ತಿದ್ದೆ ಆದರೆ ವಿಧಿಯ ಕೃಪೆಯೇ ಬೇರೆಯಿತ್ತು. ಆ ಇಬ್ಬರು ಮಹಾನುಭಾವರು ಆಕಾಶವಾಣಿ ಎಂಬ ಮಹಿಮಾನ್ವಿತ ದೇವಸ್ಥಾನಕ್ಕೆ ಪ್ರವೇಶ‌ ಕೊಡಿಸಿದರು.

ಮೊದಲ ಪೋಸ್ಟಿಂಗ್ ಆಗಿದ್ದು ಆಕಾಶವಾಣಿ ಮಂಗಳೂರು ಕೇಂದ್ರಕ್ಕೆ. ಆಮಂತ್ರಿತ ಅತಿಥಿಗಳಾಗಿ ರೆಕಾರ್ಡಿಂಗ್ ಗೆ ಬರುತ್ತಿದ್ದವರು ಸಾಕ್ಷಾತ್ ಸರಸ್ವತಿಪುತ್ರ ಕಾರಂತರೇ. ಅವರು ಹತ್ತಿರವಾದರು. ಅರ್ಧ ಗಂಟೆ‌ ಮುಂಚಿತವಾಗಿ ಬಾಡಿಗೆ ಟ್ಯಾಕ್ಸಿ ಗೊತ್ತು ಮಾಡಿಕೊಂಡು ಬರುತ್ತಿದ್ದ ಕಾರಂತರು ಎಂದೂ ಅವಸರಿಸುತ್ತಿರಲಿಲ್ಲ. ಬದಲಿಗೆ “ನನಗಂತೂ ಕೆಲಸವಿಲ್ಲ ಬೇಗ ಬಂದೆ.‌ ನಿಮ್ಮ ಕೆಲಸ ಗಮನಿಸಿಕೊಂಡು ನೀವು ಕೊಟ್ಟ ಸಮಯಕ್ಕೆ ರೆಕಾರ್ಡ‌ ಮಾಡಿ” ಎನ್ನುವರು ಆ ಹಿರಿಯ ಚಿಂತಕ ಮಹಾಶಯರು.

ಒಮ್ಮೆ ನಾವು ಹಿಂದಿದ್ದ ಕ್ಯಾಂಟೀನ್ಗೆ ಟೀ ಕುಡಿಯಲು ಹೋಗಿದ್ದೇವೆ. ಅದು ಕಾರಂತರ ರೆಕಾರ್ಡಿಂಗ್ ದಿನ. ಅವರ ಬಗ್ಗೆ ಗೊತ್ತಲ್ಲ, ನಮ್ಮ ಒಪ್ಪಂದದ‌ ಮೇಲಿನ ಸಹಾಯಕಿ ಕಾರಂತರನ್ನು ಕರೆದೊಯ್ದಿದ್ದಾಳೆ. ಸ್ಟುಡಿಯೋದಲ್ಲಿ ಕೂರಿಸಿದ್ದಾಳೆ. ಸ್ಕ್ರಿಪ್ಟ್ ಕೇಳಿ ಪಡೆದುಕೊಂಡು ಅದನ್ನು ಕರೆಕ್ಷನ್​ ಗೆ ಒಡ್ಡಿ ಅವರಿಗೆ ತೋರಿದ್ದಾಳೆ. ಅಗ ಅಲ್ಲಿದ್ದದ್ದು ಒಂದೇ ಸ್ಟುಡಿಯೋ. ನಾವೆಲ್ಲ ಆತುರಾತುರವಾಗಿ ಸ್ಟುಡಿಯೋದೊಳಕ್ಕೆ ಹೊಕ್ಕೆವು. ಮೈಕ್ ಟೆಸ್ಟ್ ಮುಗಿದು ಆನ್ ನಲ್ಲಿತ್ತು. ನಮ್ಮ ಕಿವಿಗೆ ಬಿತ್ತು ಕಂಚಿನ ಕಂಠದ‌ ಕಾರಂತರ ಆತ್ಮವಿಶ್ವಾಸ ಪ್ರಜ್ವಲಿಸುವ ದನಿ “ಕಾರಂತ. ಬರೆದಿದ್ದೇ ಕನ್ನಡ”

ನಂತರದ ಅನೇಕ ಸಂದರ್ಭಗಳಲ್ಲಿ ಪುತ್ತೂರಿನ ಅವರ ಕನಸಿನ ಬಾಲವನದಲ್ಲೂ ಅವರನ್ನು‌ ಮಾತನಾಡಿಸಿರುವೆ. ದೈವದ ಕರುಣೆ ಈ ಮಹಾನುಭಾವರ ರೂಪದಲ್ಲಿ ಆಕಾಶವಾಣಿಯ ವೃತ್ತಿ ನೀಡಿ ಹರಸಿದೆ. ಧನ್ಯರಲ್ಲವೇ ನಾವು ಉಪಕೃತರಾದವರು.

ಕಾರಂತರಂತಹ ಮಹಿಮಾನ್ವಿತ ಧೀಮಂತರ ಸಾಹಿತ್ಯ ಓದಿ ಬದುಕು ಅರಳಿಸಿಕೊಂಡ ಸಾರ್ಥಕತೆ ಅವರ ಸಾನಿಧ್ಯದಲ್ಲಿ ಮತ್ತಷ್ಟು ಸಮೃದ್ಧಗೊಳ್ಳಲು ಆಕಾಶವಾಣಿಯ ವೃತ್ತಿ ಕಾರಣವಾಗಿದ್ದು ಸೌಭಾಗ್ಯವೇ. ಬಾನುಲಿಯ ನೆನಪಿನಲೆಯಲ್ಲಿ ತೋಯುತ್ತಿರುವ ನಾನು ನಿಜಕ್ಕೂ ಧನ್ಯೆ‌.

ಇದನ್ನೂ ಓದಿ :New Book : ಅಚ್ಚಿಗೂ ಮೊದಲು ; ಆಕೆಯ ಕಣ್ಣಿಂದ ತೋಳುಗಳಿಂದ ಬಿಡಿಸಿಕೊಳ್ಳುವ ಶಕ್ತಿ ಎಲ್ಲಿಂದ ಪಡೆದೆ ನಾನು?

Follow us on

Most Read Stories

Click on your DTH Provider to Add TV9 Kannada