Art and Entertainment : ಯಾವುದು ಶೃಂಗಾರ ಯಾವುದು ಅಶ್ಲೀಲ, ನಿರ್ಧರಿಸುವವರು ಯಾರು?

Complex : ‘ಪ್ರೊತಿಮಾ ಬೇಡಿ ಜುಹೂ ಮರಳ ದಂಡೆಯಲ್ಲಿ ನಗ್ನರಾಗಿ ಓಡಿದ್ದರು. ಸಿಲ್ಕ್ ಸ್ಮಿತಾ ರಜತಪರದೆಯ ಮೇಲೆ ಕೂಡಾ ಎಂದೂ ಪ್ರೊತಿಮಾರಂತೆ ಪೂರ್ಣ ನಗ್ನರಾಗಲಿಲ್ಲ. ಸುಡಾನಿನ ಹೆಣ್ಣುಮಗು ಕುಸಿದು ಬೀಳುವಾಗ ಹಿಂದೆ ಹದ್ದು ಕಾದು ಕುಳಿತಿತ್ತು. ವಿಯೆಟ್ನಾಮ್ ಯುದ್ಧದಲ್ಲಿ ಬಾಂಬ್ ದಾಳಿಯ ನಂತರ "ನಾಪಾಲ್ಮ್" ಬಾಲಕಿ ನಗ್ನಳಾಗಿ ಓಡಿದ್ದಳು.’ ಜಯಶ್ರೀ ಜಗನ್ನಾಥ

Art and Entertainment : ಯಾವುದು ಶೃಂಗಾರ ಯಾವುದು ಅಶ್ಲೀಲ, ನಿರ್ಧರಿಸುವವರು ಯಾರು?
ನಟಿ ಸಿಲ್ಕ್ ಸ್ಮಿತಾ ಮತ್ತು ನೃತ್ಯಗಾತಿ ಪ್ರೊತಿಮಾ ಬೇಡಿ
Follow us
ಶ್ರೀದೇವಿ ಕಳಸದ
|

Updated on:Aug 05, 2021 | 6:41 PM

ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್​ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ಈ ವಿಚಾರವಾಗಿ ಇಂದಿನಿಂದ ಶುರುವಾಗಲಿದೆ ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಹೊಸ ಸರಣಿ. ಇದರಲ್ಲಿ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸುತ್ತಾರೆ. 

*

ವರ್ತಮಾನದ ಆಗುಹೋಗುಗಳನ್ನು ಬಲು ಸೂಕ್ಷ್ಮವಾಗಿ ಗಮನಿಸಿ ಸ್ಪಂದಿಸುವ ಮನೋಭಾವ ಮೈಸೂರಿನ ಲೇಖಕಿ, ಅನುವಾದಕಿ ಜಯಶ್ರೀ ಜಗನ್ನಾಥ ಅವರದು. ಸಾಮಾಜಿಕ ಮತ್ತು ಮಾನವೀಯ ಆಯಾಮಗಳಿಂದ ಈ ವಿಷಯವನ್ನು ಈಗಿಲ್ಲಿ ವಿಶ್ಲೇಷಿಸಿದ್ದಾರೆ.

*

ಇಸವಿ 1974. ಪ್ರೊತಿಮಾ ಬೇಡಿ ಜುಹೂ ಮರಳ ದಂಡೆಯಲ್ಲಿ ನಗ್ನರಾಗಿ ಓಡಿದ್ದರು. ಆದರೆ, ಆ ಓಟ ಅವರಿಗೆಂದೂ “ಅಶ್ಲೀಲತೆಯ” ಪಟ್ಟ ಕಟ್ಟಿ ಬಿಡಲಿಲ್ಲ. ಬದಲಾಗಿ ಕೆಚ್ಚೆದೆಯ ಹೆಣ್ಣು, ಅಬ್ಬಾ! ಧೈರ್ಯವೇ ! ಎಂಥಾ ನವೀನ ದೃಷ್ಟಿಕೋನದ ಕಲಾ ಅಭಿವ್ಯಕ್ತಿ! ಎಂದೆಲ್ಲಾ ಜನತೆಯ ಮನದಲ್ಲಿ ವಾಹ್! ಅನ್ನಿಸಿಕೊಂಡರು. ಮುಂದೆ ಒಡಿಸ್ಸಿ ನೃತ್ಯ ಕಲಿತು ಬೆಂಗಳೂರಿನ ಸಮೀಪದಲ್ಲಿ “ನೃತ್ಯಗ್ರಾಮ”ವನ್ನು ಸ್ಥಾಪಿಸಿ, ಒಡಿಸ್ಸಿ ನೃತ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಕೆಲವು ವರ್ಷಗಳ ನಂತರ ಕೈಲಾಸ ಮಾನಸ ಸರೋವರದ ಯಾತ್ರೆಯಲ್ಲಿ ನಡೆದ ಭೂಕುಸಿತದ ಅಪಘಾತದಲ್ಲಿ ಅವರು ಮೃತಪಟ್ಟರು.

ಸಿಲ್ಕ್ ಸ್ಮಿತಾ ರಜತಪರದೆಯ ಮೇಲೆ ಕೂಡಾ ಎಂದೂ ಪ್ರೊತಿಮಾರಂತೆ ಪೂರ್ಣ ನಗ್ನರಾಗಲಿಲ್ಲ. ಆದರೆ ಅವರ ಮುಖವಷ್ಟೇ ಪರದೆಯ ಮೇಲೆ ಬಂದರೇ ಸಾಕು ಪ್ರೇಕ್ಷಕರ ಸೀಟಿಗಳಿಂದ ತುಂಬಿ ಹೋಗಿ ಅವರನ್ನು ಅಶ್ಲೀಲ ನೃತ್ಯಗಳ ಸಾಮ್ರಾಜ್ಞಿಯಂತೆ ಪರಿಗಣಿಸಲಾಗುತ್ತಿತ್ತು. ಅವರ ಕಣ್ಣುಗಳನ್ನಷ್ಟೇ ತೋರಿಸಿದರೂ ಉನ್ಮಾದಕ್ಕೊಳಗಾಗುತ್ತಿದ್ದ ಪ್ರೇಕ್ಷಕರು ಆಕೆಯನ್ನು ಲೈಂಗಿಕ ಪ್ರಚೋದನೆಯ ಸಂಕೇತದಂತೆ ಬಳಸಿಕೊಂಡರು. ಮಾನಸಿಕವಾಗಿ ತಪಿಸಿದ ಅವರು ಮುಂದೊಮ್ಮೆ ಆತ್ಮಹತ್ಯೆ ಮಾಡಿಕೊಂಡರು.

ಎರಡು ಜೀವಗಾಥೆಗಳು; ಇಬ್ಬರು ಮಹಿಳೆಯರು. ಯಾವುದು ಅಶ್ಲೀಲ ಎಂದು ನಿರ್ಧರಿಸುವರು ಯಾರು?

ಶಿಲ್ಪಾ ಶೆಟ್ಟಿ ನುಡಿದ ಎರಡು ಪದಗಳು, ಶೃಂಗಾರ ಮತ್ತು ಅಶ್ಲೀಲತೆ. ಇವೆರಡಕ್ಕೂ ಎಲ್ಲಿಯ ಹೋಲಿಕೆ? ಶೃಂಗಾರಕ್ಕಿಂತ ಅಶ್ಲೀಲತೆಯ ವ್ಯಾಪ್ತಿ ಅಗಾಧವಾದುದು. ಶೃಂಗಾರ ಇಬ್ಬರು ವಯಸ್ಕರರಿಗೆ ಸಂಬಂಧಿಸಿದ್ದು. ಶೃಂಗಾರ ಮುದ ತರುವ ನುಡಿ, ಮಾದಕ ಮೋಹದ ಭಾವನೆ. ಚಂದ್ರ, ಹುಣ್ಣಿಮೆ, ಜೇನು, ಭೃಂಗ, ರಾಸಲೀಲೆ, ಕವನ, ಕಾವ್ಯ, ಸಂಗೀತ, ನೃತ್ಯ, ತಾವರೆ ನೈದಿಲೆ ಮಂದಾನಿಲ, ವಿರಹ… ಹೀಗೇ ಏನೇನೋ ಚರ್ವಿತಚರ್ವಣವಾಗಿಬಿಟ್ಟಿರುವ, ಆದರೆ ಪ್ರತಿ ಹೊಸಜೋಡಿಗೂ ನವೀನವೆನಿಸುವ ರಸಧಾರೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶೃಂಗಾರ ಎಂಬ ಶಬ್ದದಲ್ಲಿ ಒಪ್ಪಿಗೆಯ ಸಂಜ್ಞೆಯಿದೆ. ಸುಖದ ನಿರೀಕ್ಷೆಯಿದೆ. ಅಪರಾಧೀಭಾವದ ಹೊರೆಯಿಲ್ಲ. ಇದರ ವ್ಯಾಪ್ತಿ ಇಷ್ಟೇ ಆದರೂ ಇದೇನೂ ನಮ್ಮ ಸಾಹಿತ್ಯ ಸಂಸ್ಕೃತಿಗಳಲ್ಲಿ ಕಡಿಮೆ ಸ್ಥಳವನ್ನು ಆಕ್ರಮಿಸಿಕೊಂಡಿಲ್ಲ. ಶಿಲ್ಪಗಳಲ್ಲಿ, ಕಾವ್ಯಗಳಲ್ಲಿ ಪುರಾಣಪುಣ್ಯಕತೆಗಳಲ್ಲಿ ನಾಟ್ಯ ಚಿತ್ರಕಲೆಗಳೆಲ್ಲದರಲ್ಲೂ ಶೃಂಗಾರವಿದೆ. ಇಬ್ಬರು ವಯಸ್ಕರ ನಡುವೆ ಖಾಸಗಿಯಾಗಿ ನಡೆಯುವ ವ್ಯವಹಾರವನ್ನು ಸಾರ್ವಜನಿಕವಾಗಿಸಿ ಸಂಸ್ಕೃತಿಯಲ್ಲಿ ಬಿಂಬಿಸಲಾಗಿದೆ.

ಅಶ್ಲೀಲತೆ ಎಂಬ ಪದದ ವ್ಯಾಪ್ತಿ ಇದಕ್ಕಿಂತ ಬಹಳ ದೊಡ್ಡದು. ಕಸದ ರಾಶಿಯಿಂದ ರೊಟ್ಟಿ ಆರಿಸಿ ತಿನ್ನುವ ಮಕ್ಕಳ ಚಿತ್ರ ಮಕ್ಕಳ ಆ ಸ್ಥಿತಿಗೆ ಕಾರಣರಾದ ಸಮಾಜದ ಶೀಲಹಾನಿಯನ್ನು ಬಿಂಬಿಸುತ್ತದೆ. ಅಲ್ಲಿ ಅಶ್ಲೀಲತೆಯ ಡಂಗುರವಿಲ್ಲವೇ? ಜಗತ್ತಿನ ಸಪನ್ಮೂಲಗಳೆಲ್ಲಾ ಸುಮಾರು ಶೇ 10 ರಷ್ಟು ಜನರ ಬಳಿ ಸೇರಿಕೊಂಡು ಮಿಕ್ಕ ಶೇ 95 ರಷ್ಟು ಜನರು ತಳಮಟ್ಟದಲ್ಲಿ ತಪಿಸುತ್ತಿರುವುದಲ್ಲಿ ಅಶ್ಲೀಲತೆಯಿಲ್ಲವೇ? ತಮ್ಮ ಮುಂದಿನ 4 ಸಂತತಿಗಳಿಗಾಗಿ ಸಂಪತ್ತನ್ನು ಶೇಖರಿಸಿಡುವ ಹುನ್ನಾರದಲ್ಲಿ ಕಾಡುಗಳನ್ನು ಕಡಿದು ಗಣಿಗಳನ್ನು ಬರಿದುಮಾಡುವ ಆತುರದಲ್ಲಿ ಅಶ್ಲೀಲತೆಯಿಲ್ಲವೇ? ನೀನು ಕನಿಷ್ಟ, ನೀನು ಹುಟ್ಟಿನಿಂದ ಇದಕ್ಕೆ ತಕ್ಕವನಲ್ಲಾ ಎಂದೋ, ನೀನು ಹೆಣ್ಣಾದುದರಿಂದ ಅಶುದ್ಧಳು, ನಿನಗೆ ಇಲ್ಲಿ ಪ್ರವೇಶವಿಲ್ಲ ಎನ್ನುವ ಮನಃಸ್ಥಿಯಲ್ಲಿ ಎಂತಹ ಶೀಲವಿದೆ? ಚಿಕ್ಕಮಕ್ಕಳನ್ನು ಕಾರ್ಮಿಕರನ್ನಾಗಿಸಿ ಅವರೆದುರೇ ಕೂತು ತಿನ್ನುವ ಸಾಮಾಜಿಕ ಸ್ಥಿತಿಯಲ್ಲೆಲ್ಲಿದೆ ಶೀಲ? ಅತ್ಯಾಚಾರದಲ್ಲಿ ಭ್ರಷ್ಟಾಚಾರದಲ್ಲಿ, ವೋಟಿಗಾಗಿ ನಡೆಸುವ ತಂತ್ರದಾಟಗಳಲ್ಲಿ ಬರೇ ಅಶ್ಲೀಲತೆ, ಅಸಹ್ಯ.

Manoranjana Vruttanta

ನಾಪಾಲ್ಮ್ ಬಾಲಕಿ ಅಂದು ಇಂದು

ದೃಶ್ಯ 1; ಸುಡಾನಿನಲ್ಲಿ ಕಿತ್ತು ತಿನ್ನುವ ಕ್ಷಾಮವಿತ್ತು. ಮೂಳೆಚಕ್ಕಳವಾಗಿದ್ದ ಹೆಣ್ಣುಮಗುವೊಂದು ಆಹಾರ ಸರಬರಾಜು ಶಿಬಿರದವರೆಗೂ ನಡೆಯಲಾರದೆ ದಾರಿಯಲ್ಲೇ ಕುಸಿದು ಬಿತ್ತು. ಹಿಂದೆಯೇ ರಣಹದ್ದೊಂದು ಕಾಯುತ್ತಿತ್ತು. ಕೆವಿನ್ ಕಾರ್ಟರನ ಕ್ಯಾಮೆರಾ ಈ ದಾರುಣ ದೃಶ್ಯವನ್ನು ಸೆರೆಹಿಡಿದಿತ್ತು.

ದೃಶ್ಯ 2; ವಿಯೆಟ್ನಾಮ್ ಯುದ್ಧದಲ್ಲಿ ಬಾಂಬ್ ದಾಳಿಯ ನಂತರ ಓಡಿ ಬರುತ್ತಿರುವ “ನಾಪಾಲ್ಮ್” ಬಾಲಕಿಯ ಛಾಯಾಚಿತ್ರ. ಎರಡೂ ಅತ್ಯಂತ ಪ್ರಸಿದ್ಧಿ ಪಡೆದ ಛಾಯಚಿತ್ರಗಳು. ಆ ಸ್ಥಿತಿಗೆ ಕಾರಣರಾದ ಮಾನವರು, ಅದನ್ನು ಚಿತ್ರದಲ್ಲಿ ಸೆರೆ ಹಿಡಿಯಲೆಂದೂ ಅದನ್ನು ಹೆಚ್ಚಿನ ಹಣಕಾಗಿ ಮಾರಲೆಂದೂ ಎಡೆತಾಕುತ್ತಿರುವ ಪತ್ರಕರ್ತರು, ಅಂಥಹ ಚಿತ್ರಗಳನ್ನು ಆಹಾ! ಕಲೆ! ಎಂದು ಖರೀದಿಸಿ ತಮ್ಮ ಸಂಗ್ರಹದಲ್ಲಿ ತಗುಲಿ ಹಾಕುವ ಶ್ರೀಮಂತರು…. ಇವೆಲ್ಲವುಗಳಲ್ಲೆಲ್ಲೋ ಮಾನವ ಸಮಾಜದ ಅಶ್ಲೀಲ ಲೋಭಾಕಾಂಕ್ಷೆಯ ತವಕ ಕಾಣುವುದಿಲ್ಲವೇ?

ನನ್ನ ಉತ್ತರಪ್ರದೇಶದ ಎರಡು ಭೇಟಿಯಲ್ಲಿ ನನಗೆ ಕಂಡ ಎರಡು ದೃಶ್ಯಗಳು. ಮೊದಲನೆಯದು ದಸರೆಯ ರಾಮಲೀಲಾ ಸಂದರ್ಭದ್ದು. ರಾತ್ರಿ ಊಟವಾದ ಮೇಲೆ ಹತ್ತೂವರೆಯ ವೇಳೆಗೆ ಇಡೀ ಅಲಹಾಬಾದ್ ನಗರವೇ ರಾಮಲೀಲೆಯ ಸಂಭ್ರಮದಲ್ಲಿ ಮುಳುಗಿರುವುದನ್ನು ಆಸ್ವಾದಿಸುವ ಸಲುವಾಗಿ ಹೊರಟೆವು. ಆ ದಿನ. ಶೂರ್ಪನಖೀ ಪ್ರಕರಣದ ದಿನ. ಮೂಲೆಮೂಲೆಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ರಂಗಸ್ಥಲಗಳನ್ನು ಕಟ್ಟಿ ರಾಮಲೀಲೆಯನ್ನು ನಡೆಸುತ್ತಿದ್ದರು. ಪ್ರತಿಯೆಡೆಯಲ್ಲೂ ಸುತ್ತುವರೆದು ಕಾದಿದ್ದ ನೂರಾರು ಪ್ರೇಕ್ಷಕರು. ಶೂರ್ಪನಖಿಯ ನೆಪದಲ್ಲಿ ನಡೆಯುತ್ತಿದ್ದದ್ದು ಬಾಲಿವುಡ್ ಹಾಡುಗಳಿಗೆ ಲೈಂಗಿಕ ಪ್ರಚೋದನೆಯಂಥಾ ನೃತ್ಯಗಳು.

ಮತ್ತೊಂದು ಬಾರಿ ಉತ್ತರಪ್ರದೇಶದ ಒಳಪ್ರದೇಶದಲ್ಲಿನ ಒಂದು ಹಳ್ಳಿಗೆ ನನ್ನ ಗೆಳತಿಯ ಯುವ ಸಹೋದ್ಯೋಗಿಯ ಮದುವೆಗೆಂದು ತೆರಳಿದ್ದೆವು. ಹಳ್ಳಿಯ ಮದುವೆ. ಹೆಂಗಸರೆಲ್ಲಾ ಓಣಿಯಂತಹ ಮನೆಯ ಒಳಾಂತರ್ಗತಾಗಿ ಎಲ್ಲೋ ಹುದುಗಿದ್ದರು. ಹೊರಗಡೆ ಪೆಂಡಾಲಿನಲ್ಲಿ ಆರರಿಂದ ಎಂಭತ್ತರವರೆಗಿನ ಬರೇ ಗಂಡಸರ ಸಮೂಹ. ರಂಗಸ್ಥಲವೊಂದಿತ್ತು. ಅದರ ಮೇಲೆ ನಡೆಯುತ್ತಿದ್ದದ್ದು ಅವೇ ಶೂರ್ಪನಖಿ ನರ್ತಿಸುತ್ತಿದ್ದ ದ್ವಂದ್ವ ಅರ್ಥದ ಹಾಡುಗಳಿಗೆ ಹೆಣ್ಣು ಮಕ್ಕಳ ನೃತ್ಯ. ಕುಡಿಯುತ್ತಿದ್ದ ಮಧ್ಯವಯಸ್ಸಿನ ಗಂಡಸರು ಆಗಾಗ್ಗೆ ವೇದಿಕೆಯನ್ನು ಹತ್ತಿ ಆ ಎಳೆ ವಯಸ್ಸಿನ ಹುಡಿಯರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಲೂ ಅವರ ಮೇಲೆ ನೋಟುಗಳನ್ನು ಸುರಿಯಲೂ ತವಕಿಸುತ್ತಿದ್ದರು. ಆ ಹುಡುಗಿಯರ “ಆಂಟಿ” ಒಬ್ಬಳು ಚತುರತೆಯಿಂದ ಮಧ್ಯೆ ಮಧ್ಯೆ ಬೇರೆ ಹುಡುಗಿಯರನ್ನು ಕಳುಹಿಸುತ್ತಾ ಹೇಗೋ ಮ್ಯಾನೇಜ್ ಮಾಡುತ್ತಿದ್ದಳು. ಪರಿಸ್ಥಿತಿ ಕೈಮೀರಿ ಯಾರಾದರೂ ಚಾಕು ಚೂರಿ ತೆಗೆದರೇನು ಗತಿ ಎಂದು ಭಯವಾಗುತ್ತಿತ್ತು.

Manoranjana Vruttanta

ಸುಡಾನಿನ ದೃಶ್ಯ

ಇವೆಲ್ಲಾ ನಮ್ಮದೇ ಸಮಾಜದ ಸಂಸ್ಕೃತಿಯ ಭಾಗಗಳು. ಯಾವುದು ಯಾವಾಗ ಯಾರಿಗೆ ಎಷ್ಟರ ಮಟ್ಟಿಗೆ ಅಶ್ಲೀಲವಾಗುತ್ತದೆ, ಯಾವುದು ಶೃಂಗಾರವೆನಿಸಿಕೊಳ್ಳುತ್ತದೆ ಎನ್ನುವುದನ್ನು ಕಾಲ ದೇಶ ವರ್ತಮಾನಗಳಿಗೆ ತಕ್ಕ ಹಾಗೆ ಸಮಾಜವನ್ನು ನಿಯಂತ್ರಿಸುವ “ಬಲ”ಗಳು ನಿರ್ಧರಿಸುತ್ತಿರುತ್ತವೆ. ಅದು ಸದಾಕಾಲ ಸತತವಾಗಿ ಬದಲಾಗುತ್ತಿರುವ ಆಯಾಮ. ಕುಟುಂಬಗಳಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ನಿಯಂತ್ರಿಸುವ ದೊಡ್ಡವರೇ ಅದೇ ಹೆಣ್ಣು ಮಕ್ಕಳ ಮದುವೆಗಳಲ್ಲಿ ನಾನಾ ತರಹ ಪೋಸುಗಳಲ್ಲಿ ಫೋಟೋಗಳನ್ನು ತೆಗೆಸಿ ಆನಂದ ಪಡುವುದು ಹೊಸದೇನಲ್ಲ. ಅವರ ಮಟ್ಟಿಗೆ ಮದುವೆಗೆ ಮುಂಚೆ ಗೆಳೆಯರ ಜೊತೆಗೆ ಒಡನಾಡುವುದು ಅಶ್ಲೀಲವಾದ ತಪ್ಪು ಆದರೆ ಗಂಡನೊಡನೆ ಪೋಸುಕೊಟ್ಟು ಅವುಗಳನ್ನು ಜಗಜ್ಜಾಹೀರು ಮಾಡುವುದು ಶೃಂಗಾರ. ಒಂದು ಮದುವೆಯ ಊಟಕ್ಕೆ ನೂರಿಪ್ಪತ್ತು ಖಾದ್ಯಗಳನ್ನು ಮಾಡಿಸಿ ಚೆಲ್ಲಿಸುವುದು ಅಶ್ಲೀಲತೆಯಲ್ಲವೇ.

ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ನಿರ್ದಿಷ್ಟ ಸಮಾಜದಲ್ಲಿ ಬೇರೆಬೇರೆ ವರ್ಗದವರಿಗೆ ಬೇರೇಬೇರೆ ಸ್ಥಳಗಳಲ್ಲಿ ಒಂದೇ ವಿಷಯಗಳು ಶೃಂಗಾರವೂ ಆಗಬಲ್ಲುದು; ಅಶ್ಲೀಲವೂ ಆಗಬಲ್ಲುದು. ಉದಾಹರಣೆಗೆ, ಅಮೆರಿಕಾಗೆ ಹೊರಟ ಟೆಕ್ಕಿಗಳನ್ನೋ ಅವರ ತಾಯಿಯರನ್ನೋ ನೋಡಿ. ನಮ್ಮ ಊರಿನಲ್ಲಿ ಅಶ್ಲೀಲವೆನಿಸುವ ದಿರಿಸು ಅಟ್ಲಾಂಟಿಕ್ ಮಹಾಸಾಗರವನ್ನು ದಾಟುತ್ತಿದ್ದಂತೆ ಸಭ್ಯವಾಗಿಬಿಡುತ್ತದೆ.

ಸದ್ಯಕ್ಕೆ ಒಲಂಪಿಕ್ ಕ್ರೀಡೆಗಳಲ್ಲಿ ವಿವಾದ ನಡೆಯುತ್ತಿದೆ. ನಾರ್ವೆಯ ಬೀಚ್ ವಾಲೀಬಾಲ್ ತಂಡದ ಯುವತಿಯರು ದಿರುಸಿನ ಕೋಡನ್ನು ವಿರೋಧಿಸಿ ಬಿಕಿನಿ ಗಾತ್ರದ ವೇಶವನ್ನು ಉಡಲು ವಿರೋಧಿಸಿದ್ದಾರೆ ಎಂದು ಅವರ ಮೇಲೆ ತಪ್ಪುಕಾಣಿಕೆ ಹೊರಿಸಲಾಗಿದೆ. ಜರ್ಮನಿಯ ಜಿಮ್ನ್ಯಾಸ್ಟಿಕ್ ತಂಡದ ಯುವತಿಯರು ಯಾವಾಗಲೂ ಎಲ್ಲಾರೂ ತೊಡುತ್ತಿದ ಕನಿಷ್ಟ ಉಡುಪನ್ನು ಬದಿಗೊತ್ತಿ ಮೈಮುಚ್ಚುವ ಬಾಡೀಸೂಟುಗಳನ್ನು ಧರಿಸಿದ್ದಾರೆ. ಟೀವಿಯ ವೀಕ್ಷಕರನ್ನು ಮಾದಕವಾಗಿ ಸೆಳೆಯಲು ಹೆಣ್ಣು ಸ್ಪರ್ಧಿಗಳಿಗೆ ಅಶ್ಲೀಲ ಉಡುಪನ್ನು ತೊಡಲು ನಿರ್ಬಂಧಿಸಿ  ಅಶ್ಲೀಲತೆಯಿಂದ ಒಲಂಪಿಕ್ ಕ್ರೀಡೆಗಳ ಟಿಆರ್​ಪಿ ಹೆಚ್ಚಿಸಿಕೊಳ್ಳುತ್ತಿದ್ದಾರೆನ್ನುವುದು ಯೂರೋಪಿನ ಆಟಗಾರ್ತಿಯ ಆಪಾದನೆ.

ಮೈಮುಚ್ಚಿಕೊಳ್ಳುವುದಕ್ಕೂ ಅಡಚಣೆಯೇ? ಹಾಗಿದ್ದರೆ, ಯಾವುದು ಅಶ್ಲೀಲ? ವಯಸ್ಕರ ಮೇಲೆ ನಿರ್ಬಂಧನೆ ಹೊರಿಸುವುದು ಅಶ್ಲೀಲ. ಅವರ ಇಚ್ಛೆಯಂತೆ ವ್ಯವಹರಿಸುವುದು ಶೃಂಗಾರ. ಬೇರೆಯವರ ಮನನೋಯಿಸಿ ಅವರ ಸ್ಥಿತಿಯಿಂದ ನಮ್ಮ ಲಾಭಗಳಿಸಿಕೊಳ್ಳುವುದು ಅಶ್ಲೀಲ. ಸ್ವೇಚ್ಚೆಯಿಂದ ಸ್ವತಂತ್ರವಾಗಿ ವ್ಯವಹರಿಸುವುದು ಶೃಂಗಾರ ಎಂದಿರಬಹುದು.

ಕುಂದ್ರಾ ಮಾಡಿದ್ದೇನು , ಹಾಗಾದರೆ?

ಇದನ್ನೂ ಓದಿ : Art and Entertainment : ಪುರುಷ ದೃಷ್ಟಿಕೋನದಿಂದಲೇ ಯಕ್ಷಗಾನದಲ್ಲಿ ಶೃಂಗಾರ ವ್ಯಕ್ತ

Published On - 11:07 am, Fri, 30 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ