Mohammed Rafi‘s Death Anniversary : ಫಕೀರರ ಪ್ರಭಾವಕ್ಕೊಳಗಾಗಿದ್ದ ರಫಿ ; ‘ಸಂಗೀತದಿಂದ ಹಣ ಸಂಪಾದಿಸುವುದು ತಪ್ಪು’
Indian Playback Singer : ‘ವೈಯಕ್ತಿಕವಾಗಿ ಧಾರ್ಮಿಕ ಮನೋಭಾವದ ವ್ಯಕ್ತಿಯಾಗಿದ್ದ ಮೊಹಮದ್ ರಫಿ ಗಾಯನಕ್ಕೆ ನಿಂತಾಗ ಕಲ್ಲೂ ಕರಗುವಂತಹ ಪ್ರಣಯಗೀತೆಗಳನ್ನು ಹೇಳಬಲ್ಲವರಾಗಿದ್ದರು. ಅವರನ್ನು ನಿಕಟವಾಗಿ ಬಲ್ಲ ಓ.ಪಿ.ನಯ್ಯರ್ ಹೇಳುವಂತೆ ‘ಐ ಲವ್ ಯು’ ಎಂದು ಹೇಳಲು ಇಪ್ಪತ್ತು ಮಾದರಿಗಳಿದ್ದರೆ ಜಗತ್ತಿನಲ್ಲಿ ಆ ಇಪ್ಪತ್ತೂ ಮಾದರಿಗಳನ್ನು ಹಾಡಬಲ್ಲ ಏಕೈಕ ಗಾಯಕರೆಂದರೆ ಮೊಹಮದ್ ರಫಿ ಮಾತ್ರ’ ಎನ್. ಎಸ್. ಶ್ರೀಧರಮೂರ್ತಿ
Mohammed Rafi‘s Death Anniversary : ಮೊಹಮದ್ ರಫಿಯವರು ಲತಾ ಮಂಗೇಶ್ಕರ್ ಅವರ ಜೊತೆಗೂ ವಿವಾದವನ್ನು ಮಾಡಿಕೊಂಡರು. ಚಿತ್ರಗೀತೆಗಳ ಹಕ್ಕುಗಳು ಗೀತ ರಚನೆಕಾರ ಮತ್ತು ಸಂಗೀತ ನಿರ್ದೇಶಕರಿಗೆ ಮಾತ್ರ ಸೇರುತ್ತದೆ ಎನ್ನುವ ನೌಷಾದ್ ವಾದವನ್ನು ರಫಿ ಬೆಂಬಲಿಸಿದ್ದರು. ಲತಾ ಗಾಯಕರಿಗೂ ಹಕ್ಕುಗಳು ಬೇಕು ಎಂದು ವಾದಿಸಿದರು. ವಾದ-ವಿವಾದದ ಹಂತ ದಾಟಿ ಇದು ವಿಕೋಪಕ್ಕೆ ಹೋಗಿ ಇಬ್ಬರು ಪರಸ್ಪರ ಜೊತೆಗೆ ಹಾಡದಂತಹ ಸ್ಥಿತಿ ನಿರ್ಮಾಣವಾಯಿತು. 1977ರ ಜೂನ್ 11ರಂದು ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ಲತಾ ಮಂಗೇಶ್ಕರ್ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎಂದು ದಾಖಲಿಸಿದಾಗ ಅದನ್ನು ರಫಿ ಪ್ರಶ್ನಿಸಿದರು. ಲತಾ ಪ್ರತಿಪಾದಿಸಿದ 25,000ಕ್ಕಿಂತ ಹೆಚ್ಚಿನ ಗೀತೆಗಳನ್ನು ತಾವು ಹಾಡಿರುವುದಾಗಿ ಅವರು ವಾದಿಸಿದರು. ಎಂದಿನಿಂದಲೂ ಚಿತ್ರಗೀತೆಗಳ ಕುರಿತು ಸರಿಯಾದ ದಾಖಲೆಗಳು ಇರದಿದ್ದರಿಂದ ಈ ವಿವಾದ ತಾರ್ಕಿಕ ಅಂತ್ಯವನ್ನು ಕಾಣಲೇ ಇಲ್ಲ. ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತರು
*
1964ರಲ್ಲಿ ರಾಜಶ್ರೀ ಸಂಸ್ಥೆಯವರು ನಿರ್ಮಾಣ ಮಾಡಿದ್ದ ‘ದೋಸ್ತಿ’ ಚಿತ್ರಕ್ಕೆ ಸಂಗೀತ ನೀಡಬೇಕಾಗಿದ್ದವರು ರೋಷನ್. ಆ ಸಂಸ್ಥೆ ಇದಕ್ಕಿಂತ ಮೊದಲು ನಿರ್ಮಿಸಿದ್ದ ‘ಆರತಿ’ ಚಿತ್ರಕ್ಕೂ ಅವರದೇ ಸಂಗೀತ. ಆದರೆ ದೃಷ್ಟಿಹೀನ ಮತ್ತು ವಿಕಲಾಂಗ ಹುಡುಗರಿಬ್ಬರ ಕಥೆ ಹೇಳುತ್ತಿದ್ದ ಈ ಚಿತ್ರದ ಕುರಿತು ‘ದುಡ್ಡು ಕೊಟ್ಟು ಅಳಲು ಯಾರು ಬರುತ್ತಾರೆ’ ಎಂದು ರೋಷನ್ ನಿರಾಕರಿಸಿ ಬಿಟ್ಟರು. ಆಗ ಮೊಹಮದ್ ರಫಿ ಸೂಚಿಸಿದ್ದು ಆಗಲೇ ಹಲವು ಸಂಗೀತ ನಿರ್ದೇಶಕರೊಡನೆ ಕೆಲಸ ಮಾಡಿದ್ದ ಲಕ್ಷ್ಮಿಕಾಂತ್ ಮತ್ತು ಪ್ಯಾರೆಲಾಲ್ ಎಂಬ ಇಬ್ಬರು ಹುಡುಗರನ್ನು. ಮಾತ್ರವಲ್ಲ ಚಿತ್ರದಲ್ಲಿ ತಮಗೆ ದೊರೆತ ಸಂಭಾವನೆಯನ್ನೂ ಕೂಡ ರಫಿ ಈ ಇಬ್ಬರು ಹುಡುಗರಿಗೇ ಹಂಚಿ ಬಿಟ್ಟಿದ್ದರು. ಮುಂದೆ ರಫಿಯವರ ಹೃದಯವಂತಿಕೆ ಫಲವಾಗಿ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಹಿಂದಿ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕರಾದರು. ರಫಿ ಅವರ ಬೆಳವಣಿಗೆಗೆ ಸದಾ ಬೆಂಬಲವಾದರು. ಈ ಜೋಡಿಯಿಂದ 369 ಗೀತೆಗಳು ಮೂಡಿ ಬಂದಿವೆ. ರಫಿ ಅತಿ ಹೆಚ್ಚು ಹಾಡಿರುವುದು ಈ ಜೋಡಿಯ ಸಂಗೀತ ನಿರ್ದೇಶನದಲ್ಲಿಯೇ! ‘ಪತ್ತರ್ ಕೆ ಸನಮ್’ ‘ಯೇ ರೇಷಮೆ ಜುಲಫೆ’ ‘ಕೋಯಿ ನಜರಾನ’ ಮೊದಲಾದ ಸುಂದರ ಗೀತೆಗಳು ಈ ಕಾಂಬಿನೇಷನ್‍ನಲ್ಲಿ ಬಂದಿವೆ.
ರಫಿ ಕುರಿತು ಸಿಗುವುದೆಲ್ಲವೂ ಇಂತಹ ಹೃದಯವಂತಿಕೆಯ ಕಥೆಗಳೇ, ಚಿತ್ರರಂಗದಲ್ಲಿದ್ದರೂ ಅವರೆಂದೂ ಅದರ ಬೆಡಗಿಗೆ ಮರುಳಾದವರಲ್ಲ. ಒಂದೇ ಒಂದು ಸಿನಿಮಾ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿಲ್ಲ. ಅದರ ಯಶಸ್ಸು ಮತ್ತು ಕೀರ್ತಿಗೆ ಮರುಳಾದವರಲ್ಲ. ಅವರ ಮತ್ತು ಸಿನಿಮಾ ಸಂಬಂಧ ಏನಿದ್ದರೂ ರೆಕಾರ್ಡಿಂಗ್ ಸ್ಟುಡಿಯೋಕ್ಕೆ ಮಾತ್ರ ಸಂಬಂಧಿಸಿದ್ದು. ವೈಯಕ್ತಿಕವಾಗಿ ಧಾರ್ಮಿಕ ಮನೋಭಾವದ ವ್ಯಕ್ತಿಯಾಗಿದ್ದ ಮೊಹಮದ್ ರಫಿ ಗಾಯನಕ್ಕೆ ನಿಂತಾಗ ಕಲ್ಲೂ ಕರಗುವಂತಹ ಪ್ರಣಯ ಗೀತೆಗಳನ್ನು ಹೇಳಬಲ್ಲವರಾಗಿದ್ದರು. ಅವರನ್ನು ನಿಕಟವಾಗಿ ಬಲ್ಲ ಓ.ಪಿ.ನಯ್ಯರ್ ಹೇಳುವಂತೆ ‘ಐ ಲವ್ ಯು’ ಎಂದು ಹೇಳಲು ಇಪ್ಪತ್ತು ಮಾದರಿಗಳಿದ್ದರೆ ಜಗತ್ತಿನಲ್ಲಿ ಆ ಇಪ್ಪತ್ತೂ ಮಾದರಿಗಳನ್ನು ಹಾಡಬಲ್ಲ ಏಕೈಕ ಗಾಯಕರೆಂದರೆ ಮೊಹಮದ್ ರಫಿ ಮಾತ್ರ.
1924ರ ಡಿಸಂಬರ್ 24ರಂದು ಜನಿಸಿದ ಮೊಹಮದ್ ರಫಿ, ಹಜ್ ಆಲಿ ಮೊಹಮದ್ ಅವರ ಆರು ಮಕ್ಕಳ ಪೈಕಿ ಎರಡನೆಯವರು. ರಫಿ ಬಾಲ್ಯದಲ್ಲಿಯೇ ಫಕೀರನೊಬ್ಬನಿಂದ ಸಂಗೀತದ ಹುಚ್ಚನ್ನು ಹಿಡಿಸಿಕೊಂಡವರು. ಸೈಗಲ್ ಅವರನ್ನು ಏಕಲವ್ಯನಂತೆ ಆರಾಧಿಸಿ ಗಾನಯಾನ ಮುಂದುವರಿಸಿದವರು. ಹದಿಮೂರನೇ ವಯಸ್ಸಿನಲ್ಲಿಯೇ ಸಾರ್ವಜನಿಕ ಕಾರ್ಯಕ್ರಮವನ್ನು ಲಾಹೋರ್ನಲ್ಲಿ ನೀಡಿದಾಗ ಅವರ ಆರಾಧ್ಯ ದೈವ ಸೈಗಲ್ ಕೂಡ ವೇದಿಕೆಯಲ್ಲಿದ್ದರು. ಹದಿನೇಳನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದ ಅವರು ಬಹುಬೇಗ ಇಲ್ಲಿನ ಅಗತ್ಯವನ್ನು ಅರಿತರು. ಸೈಗಲ್ ಅವರನ್ನು ಆರಾಧಿಸಿದರೂ ಅನುಕರಿಸಲಿಲ್ಲ. 1941ರಲ್ಲಿ ಪಂಜಾಬಿ ಚಿತ್ರ ‘ಗುಲ್ ಬಲೂಚ್’ ಮೂಲಕ ಅವರು ಚಿತ್ರರಂಗಕ್ಕೆ ಬಂದರು. ಸೈಗಲ್ ಅವರ ಸಲಹೆಯಂತೆಯೇ ಮುಂಬೈಗೆ ಬಂದ ಅವರಿಗೆ 10 ಅಡಿ ಅಗಲ ಮತ್ತು 10 ಅಡಿ ಉದ್ದದ ಚಿಕ್ಕ ಕೋಣೆ ಸಂಗೀತದ ಪಯಣಕ್ಕೆ ನಾಂದಿ ಹಾಡಿತು. ‘ಗಾವ್ ಕಿ ಗೋರಿ’ ಅವರು ಹಾಡಿದ ಮೊದಲ ಹಿಂದಿ ಚಿತ್ರ. ಬೆಳ್ಳಿತೆರೆಯಲ್ಲಿ ಮೂಡಿ ಬರುವ ಕಲಾವಿದರ ಬಾಡಿ ಲ್ಯಾಂಗ್ವೇಜ್ಗೆ ಅನುಗುಣವಾಗಿ ತಮ್ಮ ಕಂಠವನ್ನು ಹೊಂದಿಸಿ ಚಿತ್ರಗೀತೆಗೆ ಮಾದರಿಯನ್ನು ಸೃಷ್ಟಿಸಿದರು. ಬಹುಬೇಗ ಅವರ ಬೇಡಿಕೆಯೂ ಹೆಚ್ಚಾಯಿತು. ಓ.ಪಿ.ನಯ್ಯರ್ ಅವರ ಜೊತೆಗಿನ ಚಿತ್ರಗಳು ಇದಕ್ಕೆ ಅಗತ್ಯವಾದ ಓಟವನ್ನು ತಂದವು. ನಯಾದೌರ್, ಕಾಶ್ಮೀರ್ ಕೀ ಕಲಿ ಸೂಪರ್ ಹಿಟ್ ಎನ್ನಿಸಿಕೊಂಡವು.
ರಫಿಯವರ ಜೊತೆಗೆ ಯಶಸ್ವಿ ಕಾಂಬಿನೇಷನ್ ಎಂದು ಕರೆಸಿಕೊಂಡಿರುವುದು ಶಂಕರ್ ಜೈಕಿಷನ್ ಜೋಡಿ. 341 ಗೀತೆಗಳು ಮೂಡಿ ಬಂದಿವೆ. ಅದರಲ್ಲಿ 216 ಸೋಲೋಗಳೇ! ರಫಿ ಅತಿ ಹೆಚ್ಚು ಹಾಡಿರುವುದು ಈ ಜೋಡಿಯ ಸಂಗೀತ ನಿರ್ದೇಶನದಲ್ಲಿಯೇ, ಅಷ್ಟೇ ಅಲ್ಲ ರಫಿಯವರಿಗೆ ಬಂದ ಆರು ಫಿಲಂಫೇರ್ ಬಹುಮಾನಗಳಲ್ಲಿ ಮೂರು ಶಂಕರ್ ಜೈಕಿಷನ್ ಜೋಡಿಯ ಸಂಗೀತ ನಿರ್ದೇಶನದ ಗೀತೆಗಳಿಗೇ ಬಂದಿವೆ. ‘ತೇರಿ ಪ್ಯಾರಿ ಪ್ಯಾರಿ ಸೂರತ್ ಕೋ’(ಸಸುರಾಲ್), ‘ಬಹಾರೋ ಫೂಲು ಬರಸಾವೋ’ (ಸೂರಜ್) ಮತ್ತು ‘ದಿಲ್ ಕೆ ಜರೂಕೆ ಮೆ’ (ಬ್ರಹ್ಮಚಾರಿ) ಈ ಮೂರು ಬಹುಮಾನದ ಗಡಿ ದಾಟಿ ಅಮರ ಗೀತೆಗಳು ಎನ್ನಿಸಿ ಕೊಂಡಿವೆ ಎನ್ನುವುದನ್ನೂ ಗಮನಿಸಬೇಕು. ಈ ಕಾಂಬಿನೇಷನ್‍ನಲ್ಲಿ ಗೀತರಚನೆಕಾರ ಶೈಲೇಂದ್ರ ಕೂಡ ಸೇರಿದ್ದರು. ಅಷ್ಟೇ ಅಲ್ಲ ಹೆಚ್ಚಿನ ಜನಪ್ರಿಯ ಗೀತೆಗಳು ಶಮ್ಮಿ ಕಪೂರ್ ಅಭಿನಯದವು. ಅದರಲ್ಲೂ ‘ಆವಾಜ್ ದೇಖೆ ಹಮೆ ತುಮ್’ ಬಹಳ ವಿಶಿಷ್ಟ ರೋಮ್ಯಾಂಟಿಕ್ ಗೀತೆ ಎನ್ನಿಸಿಕೊಂಡಿದೆ.
ಅದರಂತೆ ದೇವಾನಂದ್-ರಫಿ-ಎಸ್.ಡಿ.ಬರ್ಮನ್ ಅವರದ್ದು ಬಾಲಿವುಡ್ ಕಂಡ ಅಮರ ಜೋಡಿಗಳಲ್ಲಿ ಒಂದು. ‘ದಿಲ್ಕ ಬನಾವರ್ ಕರೆ ಪುಕಾರ್’ ‘ದಿವಾನಾ ಹು ಬಾದಲ್’ ‘ಅಚ್ಛಾಜೀ ಮೇ’ ‘ಕೋಯಾ ಕೋಯಾ ಚಾಂದ್’ ಮೊದಲಾದ ಅಮರ ಗೀತೆಗಳು ಮೂಡಿ ಬಂದವು. ಹೀಗಿರುವಾಗಲೇ ರಫಿಯವರಲ್ಲಿ ಧಾರ್ಮಿಕ ಮನೋಭಾವ ಹಜ್ ಯಾತ್ರೆಯ ನಂತರ ವಿಪರೀತ ಜಾಗೃತವಾಗಿ ಗಾಯನದ ಕುರಿತು ಅನಾಸಕ್ತಿ ತಳೆದರು. ಸಂಗೀತದಿಂದ ಹಣ ಸಂಪಾದಿಸುವುದು ತಪ್ಪು ಎಂದು ಉಪದೇಶಿಸಿದ್ದ ಫಕೀರನೊಬ್ಬ ಅದಕ್ಕೆ ಕಾರಣ ಎಂಬ ಕಥೆಯೂ ಇದೆ. ‘ಆರಾಧನಾ’ ಮೂಡಿ ಬಂದಾಗ ಹೊಸ ನಾಯಕ ನಟ ರಾಜೇಶ್ ಖನ್ನಾನಿಗೆ ಹೊಂದುತ್ತದೆ ಎನ್ನುವ ಕಾರಣಕ್ಕೆ ಕಿಶೋರ್ ಕುಮಾರ್ ಅವರಿಂದ ಹಾಡಿಸಿದರು. ಈ ಚಿತ್ರದಲ್ಲಿ ರಫಿ ಹಾಡಿದ ಗೀತೆ ಇದ್ದರೂ ಕಿಶೋರ್ ಸೆನ್ಸೇಷನ್ ಎನ್ನಿಸಿಕೊಂಡುಬಿಟ್ಟರು. ಇದರ ಜೊತೆಗೆ ಎಸ್.ಡಿ.ಬರ್ಮನ್ ಕ್ರಮೇಣ ಹಿಂದೆ ಸರಿದು ಅವರ ಮಗ ಆರ್.ಡಿ.ಬರ್ಮನ್ ಮುನ್ನೆಲೆಗೆ ಬಂದಾಗ ರಾಜೇಶ್ ಖನ್ನಾ-ಕಿಶೋರ್-ಬರ್ಮನ್ ಅವರದು ಇನ್ನೊಂದು ಯಶಸ್ವಿ ಕಾಂಬಿನೇಷನ್ ಆಯಿತು. ರಫಿಗೆ ಹಾಡುಗಳು ಕಮ್ಮಿಯಾದವು. ಆದರೆ ಇದು ಚಿಕ್ಕ ಹಿನ್ನಡೆ ಮಾತ್ರ ಆರ್.ಡಿ.ಬರ್ಮನ್ ಅವರ ಸಂಗೀತ ನಿರ್ದೇಶನದಲ್ಲಿಯೇ ಅವರು ‘ಹಮ್ ಕಿಸೀಸೆ ಕಮ್ ನಹಿ’ ಚಿತ್ರಕ್ಕೆ ಹಾಡಿದ ‘ಕ್ಯಾ ಹುವಾ ತೇರ ವಾದಾ’ ರಾಷ್ಟ್ರಪ್ರಶಸ್ತಿ ಮತ್ತು ಫಿಲಂಫೇರ್ ಬಹುಮಾನಗಳನ್ನು ಪಡೆದುಕೊಂಡಿತು. ‘ಅಮರ್ ಅಕ್ಬರ್ ಅಂಥೋನಿ’ ಚಿತ್ರಕ್ಕೆ ಹಾಡಿದ ಖವ್ವಾಲಿ ಶೈಲಿಯ ‘ಪರ್ದಾ ಹೆ ಪರ್ದಾ’ ಅಪಾರ ಜನಪ್ರಿಯತೆ ಪಡೆಯಿತು. ರಫಿಯವರ ಚಿನ್ನದ ಕಂಠಕ್ಕೆ ಮತ್ತೆ ಬೇಡಿಕೆ ಬಂದಿತು.
ಇದೇ ಕಾಲದಲ್ಲಿ ರಫಿ ಲತಾ ಮಂಗೇಶ್ಕರ್ ಅವರ ಜೊತೆಗೂ ವಿವಾದವನ್ನು ಮಾಡಿಕೊಂಡರು. ಚಿತ್ರಗೀತೆಗಳ ಹಕ್ಕುಗಳು ಗೀತ ರಚನೆಕಾರ ಮತ್ತು ಸಂಗೀತ ನಿರ್ದೇಶಕರಿಗೆ ಮಾತ್ರ ಸೇರುತ್ತದೆ ಎನ್ನುವ ನೌಷಾದ್ ವಾದವನ್ನು ರಫಿ ಬೆಂಬಲಿಸಿದ್ದರು. ಲತಾ ಗಾಯಕರಿಗೂ ಹಕ್ಕುಗಳು ಬೇಕು ಎಂದು ವಾದಿಸಿದರು. ವಾದ-ವಿವಾದದ ಹಂತ ದಾಟಿ ಇದು ವಿಕೋಪಕ್ಕೆ ಹೋಗಿ ಇಬ್ಬರು ಪರಸ್ಪರ ಜೊತೆಗೆ ಹಾಡದಂತಹ ಸ್ಥಿತಿ ನಿರ್ಮಾಣವಾಯಿತು. 1977ರ ಜೂನ್ 11ರಂದು ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ಲತಾ ಮಂಗೇಶ್ಕರ್ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎಂದು ದಾಖಲಿಸಿದಾಗ ಅದನ್ನು ರಫಿ ಪ್ರಶ್ನಿಸಿದರು. ಲತಾ ಪ್ರತಿಪಾದಿಸಿದ 25,000ಕ್ಕಿಂತ ಹೆಚ್ಚಿನ ಗೀತೆಗಳನ್ನು ತಾವು ಹಾಡಿರುವುದಾಗಿ ಅವರು ವಾದಿಸಿದರು. ಎಂದಿನಿಂದಲೂ ಚಿತ್ರಗೀತೆಗಳ ಕುರಿತು ಸರಿಯಾದ ದಾಖಲೆಗಳು ಇರದಿದ್ದರಿಂದ ಈ ವಿವಾದ ತಾರ್ಕಿಕ ಅಂತ್ಯವನ್ನು ಕಾಣಲೇ ಇಲ್ಲ.
ಮೇಲ್ನೋಟಕ್ಕೆ ಅತ್ಯಂತ ಗಂಭೀರ ಸ್ವಭಾವದವರು ಎನ್ನಿಸುತ್ತಿದ್ದ ರಫಿ ‘ಬೈಜುಬಾವ್ರ’ ಚಿತ್ರದ ಅಮರ ಗೀತೆ ‘ಓ ದುನಿಯಾಕೆ ರಖ್ವಾಲೆ’ ಹಾಡಿದ ಮೇಲಂತೂ ಸಂತರಂತೆ ಗುರುತಿಸಲ್ಪಟ್ಟಿದ್ದರು. ಆದರೆ ಅವರು ನಿಜವಾಗಿಯೂ ವಿನೋದ ಸ್ವಭಾವವನ್ನು ಹೊಂದಿದ್ದರು. ರೆಕಾರ್ಡಿಂಗ್‍ನಲ್ಲಿ ತಮ್ಮ ಹಾಡಿನ ಭಾಗ ಮುಗಿದು ಇನ್ನೊಂದು ಭಾಗ ಬರುವವರೆಗೂ ಅವರು ಮೈಕ್‍ನ ಮುಂದೆ ಇರುತ್ತಿರಲಿಲ್ಲ. ತಮ್ಮ ಹಾಡಿನ ಭಾಗ ಮುಗಿಸಿ ಹಾಡುತ್ತಿದ್ದ ಸಹ ಗಾಯಕರಿಗೆ ಮೆಚ್ಚಿಗೆ ಸೂಚಿಸಿ ಒಂದು ಸುತ್ತು ಸ್ಟುಡಿಯೋದಲ್ಲಿ ಆರ್ಕೆಸ್ಟ್ರಾದವರ ಬಳಿ ನಗೆ ಚಾಟಕಿ ಹಾರಿಸುತ್ತಾ ಮತ್ತೆ ತಮ್ಮ ಭಾಗ ಬರುವ ವೇಳೆಗೆ ಕರಾರುವಕ್ಕಾಗಿ ಮೈಕಿನ ಮುಂದೆ ಇರುತ್ತಿದ್ದರು. ಶಮ್ಮಿ ಕಪೂರ್ ಅವರ ‘ಜಂಗ್ಲಿ’ ಚಿತ್ರಕ್ಕೆ ರಫಿ ಹಾಡಿದ ಹಾಡುಗಳನ್ನು ಕೇಳಿ ಬಾಲಿವುಡ್ ಅಕ್ಷರಶಃ ಬೆಚ್ಚಿಬಿದ್ದಿತ್ತು. ಸಂತನಂತಹ ವ್ಯಕ್ತಿಯೊಳಗೆ ಈ ಜಂಗ್ಲಿ ಹೇಗೆ ಸೇರಿಕೊಂಡ ಎಂದು ಅಚ್ಚರಿಪಟ್ಟಿತ್ತು.
ಆದರೆ ಮುಂದೆ ಪ್ರೊಫೆಸರ್, ಈವ್ನಿಂಗ್ ಇನ್ ದಿ ಪ್ಯಾರಿಸ್, ಬ್ರಹ್ಮಚಾರಿಯಂತಹ ಚಿತ್ರಗಳಿಗೆ ರಫಿ ನಿರಂತರವಾಗಿ ಶಮ್ಮಿ ಕಪೂರ್ ಧ್ವನಿಯಾದರು. ಅವರು ತಂದ ಹೊಸ ಮಾದರಿ ಮ್ಯಾನರಿಸಂಗೆ ಸ್ಪೂರ್ತಿಯಾದರು. ರಫಿ ಹಾಡುವಾಗಲೆಲ್ಲಾ ಶಮ್ಮಿ ಕಪೂರ್ ಆ ಪಾತ್ರಕ್ಕೆ ತಾನು ತರುವ ಮ್ಯಾನರಿಸಂ ಸೂಚಿಸಿ ತನಗೆ ಬೇಕಾದಂತೆ ಹಾಡನ್ನು ಪಡೆಯುತ್ತಿದ್ದರು. ಬ್ರಹ್ಮಚಾರಿ ಚಿತ್ರದ ಗೀತೆಗಳ ಧ್ವನಿ ಮುದ್ರಣದಲ್ಲಿ ಶಮ್ಮಿ ಇರಲಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ಗೀತೆಗಳು ಮೂಡಿ ಬಂದ ಬಗ್ಗೆ ಅವರಿಗೆ ಅಸಮಧಾನವಿತ್ತು. ಆದರೆ ಗೀತೆಗಳನ್ನು ಕೇಳಿ ಅದರಲ್ಲಿಯೂ ‘ದಿಲ್ ಕೆ ಜರೂಕೆ ಮೆ’ ಕೇಳಿ ಅಚ್ಚರಿ ಪಟ್ಟರು. ತಾವು ಸೂಚಿಸಿದ್ದ ಮ್ಯಾನರಿಸಂ ಹೇಗೆ ಗೊತ್ತಾಯಿತು ಎಂದಾಗ ರಫಿ ‘ಇಷ್ಟು ದಿನ ನಿನ್ನ ಜೊತೆ ಕೆಲಸ ಮಾಡಿದ ಮೇಲೆ ಅದು ಕಷ್ಟವೇ’ ಎಂದು ನಕ್ಕು ಬಿಟ್ಟಿದ್ದರು. ವಾಸ್ತವವೆಂದರೆ ತಾನು ಹಾಡುವ ಗೀತೆ ಹೇಗೆ ರೂಪುಗೊಳ್ಳ ಬಹುದು ಅದಕ್ಕೆ ಕಲಾವಿದ ಹೇಗೆ ಅಭಿನಯಿಸ ಬಹುದು, ಅವನ ಮ್ಯಾನರಿಸಂ ಹೇಗಿರ ಬಹುದು ಎಂದು ಊಹಿಸಿ ಹಾಡುತ್ತಿದ್ದ ಅಪರೂಪದ ಗಾಯಕ ರಫಿ. ಹೀಗಾಗಿಯೇ ಒಂದು ಪರಂಪರೆಯನ್ನೇ ರೂಪಿಸುವುದು ಅವರಿಗೆ ಸಾಧ್ಯವಾಯಿತು.
1980ರ ಜುಲೈ 31ರಂದು ರಾತ್ರಿ 10.25ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾದಾಗ ರಫಿಯವರಿಗೆ ಕೇವಲ ಇನ್ನೂ ಐವತ್ತೈದು ವರ್ಷಗಳು. ಸಾವಿಗೆ ಕೆಲವು ಘಂಟೆಗಳ ಮೊದಲು ಕೂಡ ಅವರು ‘ಆಸ್ ಪಾಸ್’ ಚಿತ್ರದ ಗೀತೆಗಳನ್ನು ಧ್ವನಿಮುದ್ರಿಸಿದ್ದರು. ಆಗ ಮುಂಬೈನಲ್ಲಿ ಧಾರಾಕಾರ ಮಳೆ. ಪ್ರಕೃತಿಯೇ ರಫಿಯವರ ಸಾವಿಗೆ ಮರಗುತ್ತಿದೆಯೋ ಎನ್ನುವಂತೆ. ಮರುದಿನ ಆ ಮಳೆಯಲ್ಲಿಯೂ ದೇಶಾದ್ಯಂತ ಅಭಿಮಾನಿಗಳು ಹರಿದುಬಂದಿದ್ದರು. ಅವರ ಅಂತಿಮ ಯಾತ್ರೆಯಲ್ಲಿ ಸುಮಾರು ಹತ್ತು ಸಾವಿರ ಜನ ಸೇರಿದ್ದರು. ಸೋನು ನಿಗಮ್, ಶಬ್ಬೀರ್ ಕುಮಾರ್, ಉದಿತ್ ನಾರಾಯಣ್ ಸೇರಿದಂತೆ ಬಹುತೇಕ ಹೊಸ ಪೀಳಿಗೆಯ ಗಾಯಕರ ಆರಾಧ್ಯ ದೈವವಾಗಿರುವ ರಫಿ ತಮ್ಮ ಗೀತೆಗಳಿಂದ ಅಮರರಾಗಿದ್ದಾರೆ.
Happy Birthday Kalpana : ಬೆಳ್ಳಿ ಮೋಡದ ಅಂಚಿನಲ್ಲೇ ಉಳಿದುಕೊಂಡ ‘ಮಿನುಗು ತಾರೆ’
Published On - 9:11 am, Sat, 31 July 21