Happy Birthday Kalpana : ಬೆಳ್ಳಿ ಮೋಡದ ಅಂಚಿನಲ್ಲೇ ಉಳಿದುಕೊಂಡ ‘ಮಿನುಗು ತಾರೆ’

Theatre : ನಾಟಕದಲ್ಲಿ ಕುಮಾರರಾಮ ತನಗೆ ‘ಹಸಿವಾಗಿದೆ' ಎಂದಾಗ ಕಲ್ಪನಾ, ‘ರೊಟ್ಟಿ ತಿನ್ನು' ಎಂದು ಹೇಳುವ ಬದಲು ‘ಹುಲ್ಲು ತಿನ್ನು' ಎಂದು ಹೇಳಿದ್ದರು. ಜನ ಬಿದ್ದು ಬಿದ್ದು ನಕ್ಕರು. ಅವಮಾನಿತರಾದ ಗುಡಗೇರಿ ಬಸವರಾಜ ‘ಹೌದು ನಾನು ಹಸು, ಹುಲ್ಲು ಕೊಡು' ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದರು.

Happy Birthday Kalpana : ಬೆಳ್ಳಿ ಮೋಡದ ಅಂಚಿನಲ್ಲೇ ಉಳಿದುಕೊಂಡ ‘ಮಿನುಗು ತಾರೆ’
ಮಿನುಗುತಾರೆ ಕಲ್ಪನಾ. ಸೌಜನ್ಯ : ಎನ್​.ಎಫ್​.ಎ.ಐ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jul 18, 2021 | 1:02 PM

ಕಲ್ಪನಾ ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇಬ್ಬರೂ ರಂಗಭೂಮಿಯ ನಂಟಿನವರೇ. ಇದು ಕಲೆಯತ್ತ ಆಸಕ್ತಿ ಮೂಡಲು ಕಾರಣವಾಯಿತು. ಆದರೆ ಕಲ್ಪನಾ ಅವರಿಗೆ ಎಂದಿಗೂ ಕಲಾವಿದೆಯಾಗಬೇಕು, ಚಿತ್ರರಂಗದ ಕಡೆಗೆ ಬರಬೇಕು ಎನ್ನುವ ಒಲವು ಆ ದಿನಗಳಲ್ಲಿ ಇರಲಿಲ್ಲ. ನಾಲ್ಕನೇ ತರಗತಿಯಲ್ಲಿ ಓದುವಾಗ ಗೀತ ನಾಟಕದಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಯನ್ನು ಪಡೆದರು. ನೃತ್ಯದೆಡೆಗೆ ಗಮನ ಹರಿಯಿತು. ಭರತನಾಟ್ಯ ಕಲಾವಿದೆಯಾಗಬೇಕು ಎನ್ನುವ ಹಂಬಲದಿಂದ ಮುಂದುವರೆಯುತ್ತಿದ್ದ ಕಲ್ಪನಾ ಅವರನ್ನು ಚಿತ್ರರಂಗದ ಕಡೆಗೆ ಕರೆದುಕೊಂಡು ಬಂದಿದ್ದು ‘ರತ್ನಗಿರಿ ರಹಸ್ಯ’ ಚಿತ್ರ. ಆಕಸ್ಮಿಕವಾಗಿ ಆ ಚಿತ್ರವನ್ನು ನೋಡಿದ ಅವರು ಸಾಹುಕಾರ್ ಜಾನಕಿಯವರ ನಂದಿನಿ ಪಾತ್ರದಿಂದ ಪ್ರಭಾವಿತರಾಗಿ ಚಿತ್ರನಟಿಯಾಗುವುದೇ ತಮ್ಮ ಜೀವನದ ಗುರಿ ಎಂದು ತೀರ್ಮಾನಿಸಿಕೊಂಡರು. ಹಿರಿಯ ಪತ್ರಕರ್ತ, ಲೇಖಕ ಎನ್​. ಎಸ್. ಶ್ರೀಧರಮೂರ್ತಿ ಅವರು ಬರೆದ ಲೇಖನ ನಿಮ್ಮ ಓದಿಗೆ.

*

ಕಲ್ಪನಾ ಎಂದರೆ ಇಂದಿಗೂ ಸಿನಿ ರಸಿಕರ ಕಣ್ಣು ಮಿನುಗುತ್ತದೆ. ನಾಯಕಿ ಎಂದರೆ ತಲೆ ತಗ್ಗಿಸಿ, ಕಣ್ಣನ್ನು ಪುಟುಕಿಸುತ್ತಾ, ಉಗುರಿನಿಂದ ನೆಲ ಕರೆಯುತ್ತಾ ಮಾತನಾಡಬೇಕು ಎಂಬ ನಂಬಿಕೆ ಇದ್ದ ಕಾಲದಲ್ಲಿ ಅವರು ತಲೆ ಎತ್ತಿ ಮಾನಾಡಿದರು. ಸವಾಲು ಎನ್ನುವಂತೆ ಕುದುರೆ ಸವಾರಿ ಮಾಡಿದರು, ಜೀನ್ಸ್ ಪ್ಯಾಂಟ್ ಧರಿಸಿ ಫೈಟ್ ಮಾಡಿದರು. ಹಾಗೆ ನಾಯಕಿಯ ಅಂತರಾಳದ ನೋವನ್ನು ಮನಕ್ಕೆ ತಾಕುವಂತೆ ಅಭಿನಯಿಸಿದರು. ಹಾಗೇ ದುರಂತ ಕಥೆಯಾಗಿ ಹೋದರು.

ಕಲ್ಪನಾ ಹುಟ್ಟಿದ್ದು 1943ರ ಜುಲೈ 18ರಂದು. ಅವರ ತಂದೆ ಎನ್.ಎಸ್.ಕೃಷ್ಣಮೂರ್ತಿ ಲಾಲ್ವಾನಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್. ತಾಯಿ ಎಂ.ಜಾನಕಮ್ಮ. ತಂದೆ ತಾಯಿಯರು ಇಟ್ಟ ಹೆಸರು ಶರದ್ ಲತಾ. ತಂದೆಯದು ಊರಿಂದ ಊರಿಗೆ ತಿರುಗುವ ವೃತ್ತಿ. ಕಲ್ಪನಾ ಅವರಿಗೆ ಮೂರು ವರ್ಷವಾಗಿದ್ದಾಗಲೇ ತಂದೆಗೆ ಬೆಂಗಳೂರಿಗೆ ವರ್ಗವಾಯಿತು. ಆದರೆ ಇಲ್ಲಿನ ಹವಾಮಾನ ಬಾಲಕಿಗೆ ಒಗ್ಗಲೇ ಇಲ್ಲ. ಈ ವೇಳೆಗೆ ದಿವಾಕರ ಎನ್ನುವ ತಮ್ಮನೂ ಕಲ್ಪನಾಗೆ ಜನಿಸಿದ್ದ. ಮಗನನ್ನು ತಮ್ಮ ಬಳಿ ಇಟ್ಟು ಕೊಂಡು ಹೆತ್ತವರು ಕಲ್ಪನಾಳನ್ನು ಮಂಗಳೂರಿನಲ್ಲಿಯೇ ಇದ್ದ ಚಿಕ್ಕಮ್ಮ ಸೀತಮ್ಮನವರ ಮನೆಗೆ ಕಳುಹಿಸಿದರು. ಮುಂದೆ ಕಲ್ಪನಾ ಬೆಳೆದಿದ್ದಲ್ಲವೂ ಚಿಕ್ಕಮ್ಮನ ಮನೆಯಲ್ಲಿಯೇ. ಮಂಗಳೂರಿನ ಸೆಂಟ್ ಆಗ್ನೆಸ್ ಕಾನ್ವೆಂಟ್​ನಲ್ಲಿ ಕಲ್ಪನಾ ಶಿಕ್ಷಣ ಆರಂಭವಾಯಿತು.

ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇಬ್ಬರೂ ರಂಗಭೂಮಿಯ ನಂಟಿನವರೇ. ಇದು ಕಲೆಯತ್ತ ಆಸಕ್ತಿ ಮೂಡಲು ಕಾರಣವಾಯಿತು. ಆದರೆ ಕಲ್ಪನಾ ಅವರಿಗೆ ಎಂದಿಗೂ ಕಲಾವಿದೆಯಾಗಬೇಕು, ಚಿತ್ರರಂಗದ ಕಡೆಗೆ ಬರಬೇಕು ಎನ್ನುವ ಒಲವು ಈ ದಿನಗಳಲ್ಲಿ ಇರಲಿಲ್ಲ. ನಾಲ್ಕನೇ ತರಗತಿಯಲ್ಲಿ ಓದುವಾಗ ಗೀತ ನಾಟಕದಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಯನ್ನು ಪಡೆದರು. ನೃತ್ಯದೆಡೆಗೆ ಗಮನ ಹರಿಯಿತು. ಭರತನಾಟ್ಯ ಕಲಾವಿದೆಯಾಗಬೇಕು ಎನ್ನುವ ಹಂಬಲದಿಂದ ಮುಂದುವರೆಯುತ್ತಿದ್ದ ಕಲ್ಪನಾ ಅವರನ್ನು ಚಿತ್ರರಂಗದ ಕಡೆಗೆ ಕರೆದುಕೊಂಡು ಬಂದಿದ್ದು ‘ರತ್ನಗಿರಿ ರಹಸ್ಯ’ ಚಿತ್ರ. ಆಕಸ್ಮಿಕವಾಗಿ ಆ ಚಿತ್ರವನ್ನು ನೋಡಿದ ಅವರು ಸಾಹುಕಾರ್ ಜಾನಕಿಯವರ ನಂದಿನಿ ಪಾತ್ರದಿಂದ ಪ್ರಭಾವಿತರಾಗಿ ಚಿತ್ರನಟಿಯಾಗುವುದೇ ತಮ್ಮ ಜೀವನದ ಗುರಿ ಎಂದು ತೀರ್ಮಾನಿಸಿ ಕೊಂಡರು.

ಯಾವಾಗ ಚಿತ್ರರಂಗದೆಡೆಗೆ ಬರಬೇಕು ಎಂದು ತೀರ್ಮಾನಿಸಿ ಕೊಂಡರೂ ಆಗ ಕಲ್ಪನಾ ಓದಿನಲ್ಲಿ ಆಸಕ್ತಿಯನ್ನು ಕಳೆದು ಕೊಂಡರು. ಅಂಕಗಳು ಪಾತಾಳಕ್ಕಿಳಿದವು. ಈ ಸಮಯದಲ್ಲಿ ಚಿಕ್ಕಪ್ಪನ ಸ್ನೇಹಿತ ಶಿವಕುಮಾರ್ ಅವರ ಮನೆಗೆ ಬಂದರು. ಅವರು ವೃತ್ತಿಯಲ್ಲಿ ಚಿಂದೋಡಿ ಲೀಲಾ ಅವರ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರು. ಅವರಿಗೆ ನರಸಿಂಹರಾಜು ಪರಿಚಿತರಾಗಿದ್ದರು. ಕಲ್ಪನಾ ಅವರ ಚಿತ್ರನಟಿಯಾಗಬೇಕು ಎನ್ನುವ ಅಭಿಲಾಷೆಯನ್ನು ತಿಳಿದುಕೊಂಡು ನರಸಿಂಹರಾಜು ಅವರ ಭೇಟಿ ಮಾಡಿಸಿದರು. ನರಸಿಂಹ ರಾಜು ‘ಚಲನಚಿತ್ರಗಳಲ್ಲಿ ಅಭಿನಯಿಸಬೇಕಾದರೆ ಮೊದಲು ನಾಟಕಗಳಲ್ಲಿ ಅಭಿನಯಿಸಿ ಅಲ್ಲಿ ಅಭಿನಯವನ್ನು ಕಲಿತು ಅನುಭವ ಪಡೆದು ಚಿತ್ರರಂಗಕ್ಕೆ ಬಾ’ ಎಂಬ ಸಲಹೆಯನ್ನು ನೀಡಿದರು. ಶಿವಕುಮಾರ್ ಅವರ ಸ್ನೇಹಿತರಾದ ಶ್ರೀಕಂಠಯ್ಯನವರು ‘ಬಳ್ಳಾರಿ ಲಲಿತಮ್ಮ’ನವರ ನಾಟಕ ಕಂಪನಿಗೆ ಸೇರಿಸಿದರು. ಆದರೆ ಇಲ್ಲೇನು ಉತ್ತಮ ಪಾತ್ರಗಳು ಸಿಗಲಿಲ್ಲ. ಕಲ್ಪನಾ ಅವರಿಗೆ ನೃತ್ಯದಲ್ಲಿ ಅಪಾರ ಪರಿಶ್ರಮ ಇದ್ದಿದ್ದರಿಂದ ನೃತ್ಯದ ಪಾತ್ರಗಳೇ ಸಿಕ್ಕುತ್ತಿದ್ದವು. ಇದರಿಂದ ಬೇಸತ್ತ ಕಲ್ಪನಾ ನಾಟಕ ಕಂಪನಿ ಬಿಟ್ಟು ಮಂಗಳೂರಿಗೆ ಹಿಂದಿರುಗಿದರು.

happy birthday kalpana

ಕಲ್ಪನಾ ಮತ್ತು ನರಸಿಂಹರಾಜು

ಆ ವೇಳೆಗೆ ಮಂಗಳೂರಿನಲ್ಲಿ ಆರ್. ನಾಗರತ್ನಮ್ಮ ಅವರ ‘ಸ್ತ್ರೀ ನಾಟಕ ಮಂಡಳಿ’ ಮೊಕ್ಕಾಂ ಮಾಡಿತ್ತು. ಅವರಿಗೆ ಕಲಾವಿದರ ಅವಶ್ಯಕತೆ ಇರುವುದನ್ನು ಇರುವದನ್ನು ಅರಿತ ಕಲ್ಪನಾ ಅವರ ಚಿಕ್ಕಮ್ಮ ಸಂಪರ್ಕಿಸಿದರು. ಇಲ್ಲಿ ಅವರಿಗೆ ಉತ್ತಮ ತರಬೇತಿ ದೊರಕಿತು. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗಲೇ ಕೂಡಲೇ ಹೊರಟು ಬರುವಂತೆ ನರಸಿಂಹರಾಜು ಅವರಿಂದ ಪತ್ರ ಬಂದಿತು. ತಾಯಿ ಜಾನಕಮ್ಮನವರನ್ನೂ ಕರೆದುಕೊಂಡು ಕಲ್ಪನಾ ಮದ್ರಾಸಿಗೆ ಬಂದರು. ಅಲ್ಲಿ ನರಸಿಂಹರಾಜು ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟರು. ನರಸಿಂಹ ರಾಜು ಅವರು ಬಿ.ಆರ್.ಪಂತಲು ಅವರ ಬಳಿ ಕರೆದುಕೊಂಡು ಹೋದರು. ಒಂದು ಚಿಕ್ಕ ಪಾತ್ರಕ್ಕೆ ಎಂದು ಪಂತಲು ಉದ್ದೇಶಿಸಿದ್ದರೂ ಕಲ್ಪನಾ ಅವರನ್ನು ನೋಡಿ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡು ನಾಯಕಿಯ ಪಾತ್ರವನ್ನೇ ನೀಡಿದರು.

ಹೀಗೆ ‘ಸಾಕು ಮಗಳು’ ಚಿತ್ರದ ಮೂಲಕ ಕಲ್ಪನಾ ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿದರು. ಇಲ್ಲಿ ಕೂಡ ಅವರ ಅಭಿನಯ ಚೆನ್ನಾಗಿದ್ದರೂ ಅವರ ಧ್ವನಿ ಸರಿ ಹೊಂದುತ್ತಿಲ್ಲ ಎಂದು ಬೇರೆ ಕಲಾವಿದೆಯಿಂದ ಡಬ್ ಮಾಡಿಸಲಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿ ಕಲ್ಪನಾ ಆಗ ಸಾಕಷ್ಟು ಹೆಸರು ಮಾಡಿದ್ದ ‘ಚಿಂದೂಡಿ ಲೀಲಾ’ ಅವರ ದಾವಣಗೆರೆ ನಾಟಕ ಮಂಡಳಿಗೆ ಹೋಗಿ ತಮ್ಮ ಧ್ವನಿಯನ್ನು ಉತ್ತಮ ಪಡಿಸಿಕೊಂಡು ಪಂತಲು ಅವರ ಮುಂದಿನ ಸಿನಿಮಾ ‘ಚಿನ್ನದ ಗೊಂಬೆ’ಯಲ್ಲಿ ತಾವೇ ಧ್ವನಿ ನೀಡಿ ಸೈ ಎನ್ನಿಸಿ ಕೊಂಡರು.

ಕನ್ನಡ ಚಿತ್ರರಂಗ ನಿಧಾನವಾಗಿ ಕಲ್ಪನಾ ಅವರ ಪ್ರತಿಭೆಯನ್ನು ಗುರುತಿಸಲು ಆರಂಭಿಸಿತು. ‘ನಾಂದಿ’ ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರ ಸಿಕ್ಕಿತು. ಕಲ್ಪನಾ ಬದುಕಿಗೆ ತಿರುವು ನೀಡಿದ ಚಿತ್ರ ‘ಬೆಳ್ಳಿ ಮೋಡ’. ಇದಕ್ಕೆ ಕಾರಣ ಕರ್ತರಾದವರು ಪುಟ್ಟಣ್ಣ ಕಣಗಾಲ್. ಕಲ್ಪನಾ ಪುಟ್ಟಣ್ಣ ಅವರನ್ನು ಮೊದಲು ಸೆಳೆದಿದ್ದು ‘ಚಿನ್ನದ ಗೊಂಬೆ’ ಚಿತ್ರದಲ್ಲಿ. ಅದಕ್ಕೆ ಪುಟ್ಟಣ್ಣ ಸಹಾಯಕರಾಗಿದ್ದರು. ಅಭಿನಯದಲ್ಲಿ ತಲ್ಲೀನಳಾಗುವ ಆಕೆಯ ಶೈಲಿ ಅವರಿಗೆ ಇಷ್ಟವಾಗಿತ್ತು. ತಮ್ಮ ಮಲೆಯಾಳಂ ಚಿತ್ರಗಳಾದ ‘ಸ್ಕೂಲ್ ಮಾಸ್ಟರ್’ ‘ಮೇಯರ್ ನಾಯರ್’ಗಳಲ್ಲಿ ಅವಕಾಶ ನೀಡಿದ್ದರು. ‘ಬೆಳ್ಳಿ ಮೋಡ’ ನಾಯಕಿ ಪ್ರಧಾನ ಚಿತ್ರ ಅಭಿನಯಕ್ಕೆ ಇಲ್ಲಿ ತುಂಬು ಅವಕಾಶಗಳಿದ್ದವು. ಮೂಡಣ ಮನೆಯ ಮುತ್ತಿನ ನೀರಿನ ಎರಕ ಹೊಯ್ದದಂತಹ ಅಭಿನಯ ನೀಡಿದ ಕಲ್ಪನಾ ಆ ಸವಾಲಿನಲ್ಲಿ ಗೆದ್ದರು. ‘ಮಣ್ಣಿನ ಮಗ’ ನಾಯಕ ಪ್ರಧಾನ ಚಿತ್ರ. ಅಲ್ಲಿ ನಾಯಕಿಗೆ ಮಹತ್ವ ಇರಲಿಲ್ಲ. ಆದರೆ ಸೀಮಿತ ಅವಕಾಶದಲ್ಲೇ ಕಲ್ಪನಾ ತಮ್ಮ ಛಾಪನ್ನು ಮೂಡಿಸಿದರು. ‘ಇದೇನು ಸಭ್ಯತೆ’ ಗೀತೆಯಂತೂ ಮೌಲ್ಯಗಳ ಪ್ರತಿನಿಧಿಯಾಗಿ ಅವರನ್ನು ನೋಡುವಷ್ಟರ ಮಟ್ಟಿಗೆ ಪ್ರಭಾವಿಯಾಗಿ ಮೂಡಿ ಬಂದಿತ್ತು. ಕಲ್ಪನಾ ಅಭಿನಯದ ವ್ಯಾಪ್ತಿ ಇದರಿಂದ ಸಾಬೀತಾಯಿತು.

‘ನಮ್ಮ ಮಕ್ಕಳು’ ಮತ್ತು ‘ಕಪ್ಪು-ಬಿಳುಪು’ ಮುಂದೆ ಕಲ್ಪನಾ ಅಭಿನಯಸಿದ ವಿಭಿನ್ನ ಚಿತ್ರಗಳು. ಎರಡೂ ಚಿತ್ರಗಳಲ್ಲಿ ಅವರದು ಸವಾಲಿನ ಪಾತ್ರಗಳು. ಅದರಲ್ಲೂ ‘ಕಪ್ಪು-ಬಿಳುಪು’ ಚಿತ್ರದಲ್ಲಿ ಅದರದು ದ್ವಿಪಾತ್ರ. ಅದರಲ್ಲಿ ಒಂದು ಖಳ ಪಾತ್ರ. ಜನಪ್ರಿಯತೆಯ ಮೆಟ್ಟಿಲುಗಳನ್ನು ಏರುತ್ತಿದ್ದ ಕಲಾವಿದೆ ಇಂತಹ ನೇತ್ಯಾತ್ಮಕ ಪಾತ್ರವನ್ನು ನಿರ್ವಹಿಸುವುದೇ ಸವಾಲಾಗಿತ್ತು. ಅದನ್ನು ಕಲ್ಪನಾ ಚೆನ್ನಾಗಿ ಎದುರಿಸಿದರು. ಎನ್. ಲಕ್ಷ್ಮೀನಾರಾಯಣ್ ಅವರ ‘ಉಯ್ಯಾಲೆ’ ಕಲ್ಪನಾ ಅವರ ಅಭಿನಯ ಸೂಕ್ಷಗಳನ್ನು ಹಿಡಿದಿಟ್ಟ ಇನ್ನೊಂದು ಚಿತ್ರ. ವಿವಾಹಿತೆಯೊಬ್ಬಳ ಮನಸ್ಸು ವಿವಾಹಬಾಹಿರ ಸಂಬಂಧಗಳತ್ತ ತುಡಿಯುವ ವಸ್ತು ಬಹುಬೇಗ ಸಾಂಪ್ರದಾಯಿಕ ಗ್ರಹಿಕೆಗೆ ತಪ್ಪು ಎನ್ನಿಸ ಬಲ್ಲದಾಗಿತ್ತು. ಇದನ್ನು ಭಾವಗಳ ನೆಲೆ ದಾಟದಂತೆ ದೈಹಿಕ ಅಭಿವ್ಯಕ್ತಿ ಸಾಧಿಸುವ ಮೂಲಕ ಕಲ್ಪನಾ ಅಭಿನಯಿಸಿದ ಕ್ರಮ ವಿಶಿಷ್ಟ ಎನ್ನಿಸಿತ್ತು.

ಕಲ್ಪನಾ ಮತ್ತು ಪುಟ್ಟಣ್ಣನವರ ಕಾಂಬಿನೇಷನ್‍ನಲ್ಲಿ ಬೆಳ್ಳಿಮೋಡ, ಕಪ್ಪು ಬಿಳುಪು, ‘ಗೆಜ್ಜೆಪೂಜೆ’ ಮತ್ತು ಶರಪಂಜರ ಚಿತ್ರಗಳನ್ನು. ಗೆಜ್ಜೆಪೂಜೆ ಕಲ್ಪನಾ ಅಭಿನಯದ ಮುಖ್ಯ ಚಿತ್ರ ಎನ್ನಿಸಿ ಕೊಂಡಿತು. ‘ಶರಪಂಜರ’ದ ಸಬ್ಜೆಕ್ಟ್ ಬಹಳ ಚಾಲೆಂಜಿಂಗ್ ಆಗಿತ್ತು. ಶರಪಂಜರದಲ್ಲಿ ಕಲ್ಪನಾ ಅಮೋಘ ಅಭಿನಯ ನೀಡಿದರು. ಆದರೆ ಇಂತಹ ಅಮೋಘ ಅಭಿನಯವೇ ಪುಟ್ಟಣ್ಣ ಮತ್ತು ಕಲ್ಪನಾ ಅವರ ನಡುವಿನ ಬಿರುಕಿಗೆ ಕಾರಣವಾಯಿತು. ಕಲ್ಪನಾ ಅವರ ಅಭಿನಯದ ಕುರಿತು ಬರೆಯುವಾಗ ‘ಶರಪಂಜರ’ವನ್ನು ಅತಿಯಾಗಿಸಿ ಉಲ್ಲೇಖಿಸುವವರು ಅದೇ ಕಾಲದಲ್ಲಿ ಬಂದ ಕೆಲವು ಮುಖ್ಯವಾದ ಚಿತ್ರಗಳನ್ನು ಮರೆತು ಬಿಡುತ್ತಾರೆ. ಅವೆಂದರೆ ‘ಉಯ್ಯಾಲೆ’ ‘ಮುಕ್ತಿ’ ‘ಕೆಸರಿನ ಕಮಲ’ ಈ ಚಿತ್ರಗಳು ಕಲ್ಪನಾ ಅವರೊಳಗಿನ ಕಲಾವಿದೆಯನ್ನು ಪುಟಕ್ಕೆ ಇಟ್ಟಿದ್ದವು. ‘ಭಲೇ ಅದೃಷ್ಟವೋ ಅದೃಷ್ಟ’ ‘ನಾ ಮೆಚ್ಚಿದ ಹುಡುಗ’ ಚಿತ್ರದ ಲವಲವಿಕೆಯ ಪಾತ್ರಗಳಲ್ಲಿಯೂ ಅವರು ಕಾಣಿಸಿಕೊಂಡರು. ‘ಎರಡು ಕನಸು’ ಚಿತ್ರದಲ್ಲಿ ಅವರದು ಸಾಕಷ್ಟು ಸವಾಲಿನ ಪಾತ್ರ. ತನ್ನನ್ನು ಒಪ್ಪಿಕೊಳ್ಳದ ಗಂಡನ ಕುರಿತ ನವವಿವಾಹಿತೆಯ ತಳಮಳಗಳನ್ನು ಹಿಡಿದಿದಡುವ ಪಾತ್ರವನ್ನು ಕಲ್ಪನಾ ಪರಿಣಾಮಕಾರಿಯಾಗಿಯೇ ಹಿಡಿದಿಟ್ಟಿದ್ದರು. ಚಿತ್ರದ ನಿರ್ವಹಣೆಯಲ್ಲಿ ಅವರ ಪಾತ್ರವನ್ನು ಅಮುಖ್ಯವಾಗಿಸುವ ಪ್ರಯತ್ನವಿತ್ತು. ಈ ಮಿತಿಯ ನಡುವೆಯೇ ಕಲ್ಪನಾ ಗೆದ್ದಿದ್ದರು ಎಂಬುದು ಈಗ ಮಹತ್ವದ ಅಂಶವಾಗಿ ಕಾಣಿಸುತ್ತದೆ. ‘ಬಯಲು ದಾರಿ’ ಅವರಿಗೆ ಸಿಕ್ಕ ಕೊನೆಯ ಉತ್ತಮ ಅವಕಾಶ. ಶಿವರಾಮ ಕಾರಂತರು ನಿರ್ದೇಶಿಸಿದ್ದ ‘ಮಲಯ ಮಕ್ಕಳು’ ಅವರಿಗೆ ಸಿಕ್ಕ ಕೊನೆಯ ಅವಕಾಶ. 1979ನೇ ಇಸವಿ ಮೇ 13ನೇ ತಾರೀಖಿನ ಮುಂಜಾವು.

happy birthday kalpana gudageri basavaraj

ಕಲ್ಪನಾ ಮತ್ತು ಗುಡಗೇರಿ ಬಸವರಾಜ

ಹಿಂದಿನ ದಿನ ರಾತ್ರಿ ಸುಮಾರು 2-30ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ ಬಿದ್ದು ಬಿದ್ದು ನಕ್ಕರು. ಇದರಿಂದ ಅವಮಾನಿತರಾದ ಬಸವರಾಜ ‘ಹೌದು ನಾನು ಹಸು, ಹುಲ್ಲು ಕೊಡು’ ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದರು. ಜನ ಇನ್ನಷ್ಟು ಕೇಕೆ ಹಾಕಲು ಆರಂಭಿಸಿದಾಗ ಅಪಮಾನಗೊಂಡ ಬಸವರಾಜ್ ನಾಟಕವನ್ನು ಅಲ್ಲಿಗೇ ನಿಲ್ಲಿಸಿದರು. ಪರದೆ ಬಿದ್ದ ನಂತರ ನೇರವಾಗಿ ಕಲ್ಪನಾರ ಕಡೆ ಧಾವಿಸಿ ಕೆನ್ನೆಗೆ ಹೊಡೆದರು. ಇದರಿಂದ ವಿಚಲಿತರಾದ ಅವರು ವೇಷ ಕೂಡ ಬದಲಾಯಿಸದೆ ನೇರವಾಗಿ ಗೋಟೂರು ಪ್ರವಾಸಿ ಧಾಮಕ್ಕೆ ಬಂದು ಬಿಟ್ಟರು. ಮರುದಿನ ಬೆಳಿಗ್ಗೆ ಕಂಡಿದ್ದು ಅವರ ಶವ.

ಕನ್ನಡ ಚಿತ್ರರಂಗಕ್ಕೆ ಇನ್ನೂ ದೊಡ್ಡ ಕೊಡುಗೆಯನ್ನು ನೀಡಬೇಕಾಗಿದ್ದ ಕಲ್ಪನಾ ಅಮೂರ್ತವಾಗಿಯೇ ನಮ್ಮನ್ನು ಬಿಟ್ಟು ಹೋದರು.

ಇದನ್ನೂ ಓದಿ : Vidya Murthy : ಆಗ ಮದುವೆಯಾಗುವುದೇ ನನ್ನ ಪರಮಗುರಿಯಾಗಿತ್ತು!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ