Vidya Murthy : ಆಗ ಮದುವೆಯಾಗುವುದೇ ನನ್ನ ಪರಮಗುರಿಯಾಗಿತ್ತು!

Happy Birthday : ‘ನೃತ್ಯಪಟು ಅಣ್ಣನಿಂದ ಭರತನಾಟ್ಯದ ಬೋಧನೆ ನಡೆಯುತ್ತಿತ್ತು. ಒಂದು ದಿನ ಕಾಲಿನ ಗಿಣ್ಣಿಗೆ ತಾಳ ತಟ್ಟುವ ಕೋಲಿನಿಂದ ಹೊಡೆದೇಬಿಟ್ಟ. ನಾನ್ಯಾಕೆ ಬಿಡಲಿ? ಅದೇ ಕೋಲಿನಿಂದ ವಾಪಾಸು ಹೊಡೆದೆ. ನಂತರ ನೃತ್ಯದಿಂದಲೇ ವಿಮುಖಳಾದೆನಾದರೂ ಅಭಿನಯದ ಒಲವು ಅರಿವಿಲ್ಲದಂತೆ ಬೆಳೆಯಲಾರಂಭಿಸಿತು.‘ ವಿದ್ಯಾ ಮೂರ್ತಿ

Vidya Murthy : ಆಗ ಮದುವೆಯಾಗುವುದೇ ನನ್ನ ಪರಮಗುರಿಯಾಗಿತ್ತು!
ಶ್ರೀದೇವಿ ಕಳಸದ | Shridevi Kalasad

|

Jul 18, 2021 | 10:14 AM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ರಂಗಭೂಮಿ, ಕಿರುತೆರೆ ನಟಿ ವಿದ್ಯಾ ಮೂರ್ತಿ ಅವರ ಪರದೆಯ ಹಿಂದಿನ ಮಾತು ನಿಮ್ಮ ಓದಿಗೆ…

ಯಾವುದನ್ನಾದರೂ ಸಾಧಿಸಬೇಕೆಂದರೆ ಕಷ್ಟ ಪಡಬೇಕಂತೆ. ಆಗಲೇ ಅದು ಸಾಧನೆ ಎನಿಸಿಕೊಳ್ಳುವುದಂತೆ. ಕಷ್ಟ ಪಡದೆ ದೊರೆತ ಯಶಸ್ಸಿಗೆ ಅಷ್ಟು ಬೆಲೆಯಿಲ್ಲವಂತೆ.ಈ ಮಾತು ಅಕ್ಷರಶಃ ನಿಜವೆಂದು ನನಗೂ ಅನಿಸಿದ್ದು,ಈ ಸರಣಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಹಲವು ಸಾಧಕಿಯರ ಸಾಧನೆಯ ಮಾರ್ಗಗಳನ್ನು ಓದಿದಾಗ. ಅಬ್ಬ, ಒಬ್ಬೊಬ್ಬರೂ ಎಂಥ ಛಲಗಾತಿಯರು! ಆಶ್ಚರ್ಯವೆನಿಸುತ್ತೆ. ಈ ನಿಟ್ಟಿನಲ್ಲಿ, ನನ್ನ ಅಭಿನಯ ಕ್ಷೇತ್ರದ ಪಯಣವನ್ನು ತುಲನೆ ಮಾಡಿದರೆ ನಾನಿನ್ನೂ ಏನೂ ಸಾಧಿಸಿಯೇ ಇಲ್ಲವೆಂಬುದೂ ಗೋಚರವಾಗುತ್ತದೆ.

ತಮಾಷೆಯೆಂದರೆ, ಮೊದಲಿಗೆ ಸಾಧನೆಯೆಂದರೆ ಏನೆಂಬ ಕಲ್ಪನೆಯೇ ನನಗಿರಲಿಲ್ಲ. ಏಕೆಂದರೆ ನನಗೆ ಯಾವುದರ ಬಗ್ಗೆಯೂ ಉತ್ಕಟವಾದ ವಾಂಛೆಯೇ ಇರಲಿಲ್ಲ. ಓದಿನಲ್ಲಾಗಲೀ, ಕ್ರೀಡೆ ಕಲೆಗಳಲ್ಲಾಗಲೀ ಭಯಂಕರ ಯಶಸ್ಸು ಗಳಿಸಬೇಕೆಂದೂ ನನಗನಿಸಿರಲೇ ಇಲ್ಲ. ಆದರೆ ನನಗೆ ಬುದ್ಧಿ ಬಂದಂದಿನಿಂದ (ಬುದ್ದಿ ಬಂದಿದೆ ಎಂದು ನಾನು ತಿಳಿದುಕೊಂಡಾಗಿನಿಂದ) ನನಗಿದ್ದ ಒಂದೇ ಆಸೆಯೆಂದರೆ, ಬಂಧುಮಿತ್ರರೊಂದಿಗೆ ನನ್ನ ಸಂಬಂಧವು ಯಾವತ್ತೂ ಕೆಡಬಾರದು, ಅದಕ್ಕಾಗಿ ಎಷ್ಟೋ ಬಾರಿ ನಾನು ಮಾಡದ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ಧೂ ಉಂಟು. ಕಾರಣ, ನನ್ನ ಮನೋವೇಗವನ್ನೂ ಮೀರಿಸುವ ನನ್ನ ಮಾತುಗಳು, ಆಡಿದ ಮಾತನ್ನು ಅಷ್ಟೇ ಶೀಘ್ರವಾಗಿ ಮರೆತೇಬಿಡುವ, ಸುಟ್ಟರೂ ಹೋಗದ ನನ್ನ ಹುಟ್ಟು ಗುಣ. ಹಾಗಾಗಿ ಯಾರಾದರೂ ನನ್ನ ಮೇಲೆ ಮುನಿಸಿಕೊಂಡು ನನ್ನ ಜೊತೆ ಮಾತುಬಿಟ್ಟರೆ, ಹಿಂದೆಮುಂದೆ ಯೋಚಿಸದೆ ಅದಕ್ಕೆ ನಾನೇ ಕಾರಣವಿರಬೇಕೆಂದು ನಾನೇ ನಿರ್ಧರಿಸಿ, ಕ್ಷಮೆಯನ್ನೂ ಕೇಳಿಬಿಡುತ್ತಿದ್ದೆ. ಗೊತ್ತಿಲ್ಲ, ಒಟ್ಟಿನಲ್ಲಿ ನನ್ನ ಎಳವೆಯ ಗೆಳತಿಯರಿಂದ ಹಿಡಿದು ಈಗಿನವರವರೆಗೂ ಯಾರೂ (ಎಲ್ಲೋ ಒಂದಿಬ್ಬರನ್ನು ಬಿಟ್ಟರೆ) ನನ್ನನ್ನು ದ್ವೇಷಿಸಿದ್ದು ನನ್ನ ಗಮನಕ್ಕೆ ಬಂದಿಲ್ಲ. ಸದ್ಯ ಬರುವುದೂ ಬೇಡ.

ಇಂಥ ನಿರ್ಲಿಪ್ತ ಚಿತ್ತೆಗೆ, ಕಿಂಚಿತ್ತಾದರೂ ಪ್ರತಿಭೆ ಇದೆ ಎಂಬುದನ್ನು ಗುರುತಿಸಿ, ಪ್ರತಿಭೆಯ ಬೀಜ ಒಡೆದು ಸಸಿಯಾಗುವಂತೆ ಮಾಡಿದವರು ನನ್ನ ಮಿಡ್ಲ್ ಸ್ಕೂಲ್ ಟೀಚರಾಗಿದ್ದ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಟೀಚರ್ ರತ್ನಮ್ಮ ಮಿಸ್ (ಈಗ ಅಮೆರಿಕೆಯಲ್ಲಿ ಮಕ್ಕಳೊಂದಿಗೆ ನೆಲೆಸಿರುವ ಅವರಿಗೆ ೮೪ ವರ್ಷಗಳು). ಶಾಲಾಸಮಾರಂಭಗಳ ಪ್ರತಿಯೊಂದು ಕಾರ್ಯಕ್ರಮದಲ್ಲೂ, ಸಂಗೀತ, ನೃತ್ಯ, ನಾಟಕ, ಚರ್ಚಾಸ್ಪರ್ಧೆ, ಭಾಷಣ, ಹೀಗೆ ಎಲ್ಲದರಲ್ಲೂ ನನಗೊಂದು ಅವಕಾಶವನ್ನು ಮೀಸಲಾಗಿಡುತ್ತಿದ್ದರು. ಮನೆಯಲ್ಲೂ ಒಂದು ರೀತಿಯ ಸಾಂಸ್ಕೃತಿಕ ವಾತಾವರಣವೇ. ಅಣ್ಣ ಭರತನಾಟ್ಯ ಪಟು, ಒಳ್ಳೆಯ ನಟ, ಮತ್ತೊಬ್ಬ ಅಣ್ಣ ಹಾಡುಗಾರ, ತಂದೆ ಕನ್ನಡ ಪಂಡಿತರು, ಕಾವ್ಯವಾಚನ ಮಾಡುತ್ತಿದ್ದರು. ಆಗ ನಮ್ಮ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಕಡ್ಡಾಯವೆಂಬಂತೆ ಸಂಗೀತಪಾಠಕ್ಕೆ ಕಳಿಸುತ್ತಿದ್ದರು. ನಾನೂ ಇದಕ್ಕೆ ಹೊರತಾಗಿರಲಿಲ್ಲ. ಜೊತೆಗೆ ಮನೆಯಲ್ಲೇ ಇದ್ದ ನೃತ್ಯಪಟುವಿನಿಂದ ಭರತನಾಟ್ಯದ ಬೋಧನೆ. ಸಂಗೀತವೇನೋ ಕಲಿತೆ. ನನ್ನಣ್ಣ ಕಲಿಸುವಾಗ ಕಾಲಿನ ಗಿಣ್ಣಿಗೆ, ತಾಳ ತಟ್ಟುವ ಕೋಲಿನಿಂದ ಹೊಡೆದಿದ್ದಕ್ಕೆ ನಾನೂ ವಾಪಸ್ ಅದೇ ಕೋಲಿನಿಂದ ಅವನಿಗೆ ಹೊಡೆದು ನೃತ್ಯದಿಂದಲೇ ವಿಮುಖಳಾದೆ.

ಆದರೆ ಅಭಿನಯದ ಬಗ್ಗೆ ಹುಟ್ಟಿದ್ದ ಒಲವು ಮೆಲ್ಲಗೆ ಅರಿವಿಲ್ಲದಂತೆ ಬೆಳೆಯುತ್ತಲೇ ಇತ್ತು. ನೃತ್ಯ ಗುರುವಿಗೆ ಗುಲಾಮಳಾಗದಿದ್ದುದಕ್ಕೆ ಶಾಸ್ತ್ರೀಯ ನೃತ್ಯ ಒಲಿಯದಿದ್ದರೂ ಶಾಲಾಟೀಚರ್ ರತ್ನಮ್ಮ ಮಿಸ್ ದೆಸೆಯಿಂದ ನನ್ನೊಳಗೆ ಹುದುಗಿದ್ದ ಕಲಾವತಿ, ಸ್ವಲ್ಪ ಸ್ವಲ್ಪವೇ ಬೆಳಕು ಕಾಣುತ್ತಿದ್ದಳಾದರೂ, ಅವಳನ್ನು ಒಲಿಸಿಕೊಂಡೇ ತೀರಬೇಕೆಂಬ ಹಂಬಲ ಆಗ ನನಗೆ ತೀವ್ರವಾಗಿ ಕಾಡಿರಲೇ ಇಲ್ಲ. ಏಳನೇ ತರಗತಿಯಲ್ಲಿದ್ದ ನನ್ನನ್ನು ನೆಂಟರೊಬ್ಬರು, ದೊಡ್ಡವಳಾದ ಮೇಲೆ ಏನು ಮಾಡುತ್ತೀಯಾ ಎಂದು ಕೇಳಿದಾಗ… ಐದು ಗಂಡುಮಕ್ಕಳ ನಂತರ ಹುಟ್ಟಿದ ಏಕೈಕ ಪುತ್ರಿಯಾದ ನಾನು,  ಓದಿ ಏನೋ ಸಾಧಿಸಿಬಿಡುತ್ತಾಳೆಂಬ ನಿರೀಕ್ಷೆಯಲ್ಲಿ ಹೆತ್ತವರಿಂದ ‘ವಿದ್ಯಾ’ ಎಂದು ನಾಮಕರಣ ಮಾಡಿಸಿಕೊಂಡಿದ್ದ ನಾನು ಕೊಟ್ಟ ಉತ್ತರ ‘ಮದುವೆಯಾಗುತ್ತೇನೆ’! ‘ಆ’ ಎಂದು ಅವರು ಬಿಟ್ಟ ಬಾಯಿ, ಅದನ್ನು ನಿಧಾನವಾಗಿ ಮರೆಯಾಗಿಸಿದ ಅವರ ಕೈ, ಸ್ವಲ್ಪ ಹೊತ್ತು ಅದೇ ಸ್ಥಿತಿಯಲ್ಲಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ‘ಏನು ಕಮಲಮ್ಮ ನಿಮ್ಮ ಮಗಳು ಇಷ್ಟು ಚಿಕ್ಕ ವಯಸ್ಸಲ್ಲೇ ಓದಿನ ಬಗ್ಗೆ ಬಿಟ್ಟು ಮದುವೆ ಗಿದುವೆ ಅಂತಾಳಲ್ಲ’ ಎಂದಾಗ, ನಿರಾಸೆಯಿಂದ ಏನೂ ಉತ್ತರಿಸಲಾಗದೆ ಪೆಚ್ಚು ಪೆಚ್ಚಾಗಿ ನಕ್ಕ ನನ್ನ ಅಮ್ಮನ ಮುಖವೂ ನೆನಪಿದೆ. ಪಾಪದ ಅಮ್ಮ.

ಕಲಾವಿದೆ ಸುಧಾ ಬೆಳವಾಡಿಯವರೊಂದಿಗೆ ವಿದ್ಯಾ ಮೂರ್ತಿ.

ಇಂಥ ನನಗೆ ಅಭಿನಯದ ಬಗ್ಗೆ ಒಲವು ಮೂಡಿದ್ದು, ಓದಿನಲ್ಲಿ ಅಷ್ಟೇನೂ ಚುರುಕಿಲ್ಲದ್ದ ನನಗೆ ಅಭಿನಯದ ದೆಸೆಯಿಂದಲೇ ನಗರದ ಅತ್ಯುತ್ತಮ ಕಾಲೇಜಾದ ಎನ್.ಎಮ್.ಕೆ.ಆರ್.ವಿ. ಮಹಿಳಾ ಕಾಲೇಜಿನಲ್ಲಿ ಸೀಟು ದೊರಕಿದಾಗ ಆ ಒಲವು, ಭಕ್ತಿ, ಶ್ರದ್ಧೆಯಾಗಿ, ಬದುಕಿನ ಧ್ಯಾನವೇ ಆಗಿ ಮಾರ್ಪಾಡಾಗಿದ್ದು ಸೋಜಿಗವೇ ಸರಿ. ಆಗಲೂ ಅಭಿನಯದಲ್ಲಿ ಏನು ಸಾಧಿಸಬೇಕು ಎಂಬ ಕಲ್ಪನೆ ಬರದಿದ್ದರೂ, ಅದನ್ನು ಬಿಟ್ಟು ನಾನು ಬದುಕಲಾರೆನೆಂದು ಅನಿಸತೊಡಗಿದ್ದಂತೂ ನಿಜ. ಅದಕ್ಕೆ ಪೂರಕವಾಗಿ ನಮ್ಮ ಕಾಲೇಜಿನ ಪ್ರಾಂಶುಪಾಲೆ ಚಿ.ನ.ಮಂಗಳಾ, ನಮ್ಮ ಸೈಕಾಲಜಿ ಲೆಕ್ಚರರ್, ಬಿ. ಜೆ. ಸುವರ್ಣ, ನಮ್ಮ ಕನ್ನಡ ಲೆಕ್ಚರರ್ ವಸಂತಕುಮಾರಿ ಇವರೆಲ್ಲರೂ ಅಂತರ್ ವರ್ಗ, ಅಂತರ್ ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ನನಗೆ ಪ್ರಮುಖ ಪಾತ್ರಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ನಾನು ಬಹುಮಾನಗಳನ್ನು ಪಡೆದಾಗ ನನಗಿಂತ ಹೆಚ್ಚಾಗಿ ಸಂಭ್ರಮಿಸುತ್ತಿದ್ದರು. ಇದೆಲ್ಲ ನನ್ನಲ್ಲಿ ಅಭಿನಯದ ಕುರಿತು ಧನ್ಯತಾಭಾವ ಮೂಡುವಂತೆ ಮಾಡುತ್ತಿತ್ತು. ಆದರೆ ವಿಪರ್ಯಾಸ ವೆಂದರೆ, ನಮ್ಮ ಮನೆಯಲ್ಲಿ ಅಷ್ಟೆಲ್ಲಾ, ಸಾಂಸ್ಕೃತಿಕ ವಾತಾವರಣವಿದ್ದರೂ, ಅಣ್ಣ ಸ್ವತಃ ನೃತ್ಯ ನಾಟಕವೆಂದು ಅಂದಿನ ಕಾಲದ ಖ್ಯಾತ ರಂಗತಂಡಗಳಾದ, ಕೆ.ವಿ.ಅಯ್ಯರ್ ಅವರ ರವಿ ಆರ್ಟ್ಸ್, ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ ಕ್ಲಬ್, ‘ನಟರಂಗ’ ಮುಂತಾದ ಪ್ರಖ್ಯಾತ ರಂಗತಂಡದಲ್ಲಿ ಪ್ರಮುಖಪಾತ್ರ ವಹಿಸುತ್ತಿದ್ದರೂ ನಾನೂ ಆ ರಂಗತಂಡಗಳಲ್ಲಿ ಅಭಿನಯಿಸಲು ಅನುಮತಿ ಕೇಳಿದಾಗ, ಅಪ್ಪ ಅಣ್ಣ ಇಬ್ಬರೂ ಖಡಾಖಂಡಿತವಾಗಿ ಬೇಡವೆಂದು ಬಿಟ್ಟರು. ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಒಪ್ಪಿದರೆ ನಟಿಸೆಂದುಬಿಟ್ಟರು. ಬರೀ ಗಂಡು ಪಾಳ್ಯದ ಏಕೈಕ ಹೆಣ್ಣಾದ ನನಗೆ, ನನ್ನ ಏಕಮಾತ್ರ ಪ್ರೀತಿಪಾತ್ರಳಾದ ನನ್ನಮ್ಮನಿಗೂ, ನನ್ನನ್ನು ಬೆಂಬಲಿಸಿ ಗಂಡ ಮಗನನ್ನು ವಿರೋಧಿಸುವಷ್ಟು ಧೈರ್ಯವೂ ಇರಲಿಲ್ಲ. ಹಾಗಾಗಿ ಈ ನಟಿಸುವ ಹಂಬಲ ಸಾಧನೆಯಾಗುವ ಹಾದಿ ಹಿಡಿಯಲೇ ಇಲ್ಲ.

ನನ್ನ ಕಾಲೇಜು ಓದು ಮುಗಿದು ಪದವೀಧರೆಯಾದಮೇಲೆ ನನ್ನ ಚಿಕ್ಕಂದಿನ ಕನಸು ‘ಮದುವೆ’ ಎಂಬುದು ನನಗೆ ಈಗ ಇನ್ನೂ ಆಕರ್ಷಕವಾಗಿ ಕಂಡಿತು. ಮದುವೆಯಾದಮೇಲೆ ಗಂಡನ ಮನೆಯವರ ಅನುಮತಿ ಪಡೆದು ಅಭಿನಯ ಕ್ಷೇತ್ರಕ್ಕೆ ಕಾಲಿಡಬಹುದು ಎಂಬ ಆಸೆಯಲ್ಲಿದ್ದ ನನಗೆ ಅಲ್ಲೂ ನಿರಾಸೆಯೇ. ಆ ನಿರಾಸೆ ನನ್ನನ್ನು ಆ ಕಲೆಯಿಂದ ಎಷ್ಟೊಂದು ವಿಮುಖಳಾಗಿಸಿತೆಂದರೆ, ಆ ಥರದ್ದೊಂದು ಕ್ಷೇತ್ರವಿದೆ ಎಂಬುದನ್ನೇ ನಾನು ಮರೆಯತೊಡಗಿದೆ. ವರ್ಷಗಳುರುಳಿದವು. ಮಗರಾಯ ಬಂದ. ಅದೇ ವರ್ಷ ಬೆಂಗಳೂರಿನಲ್ಲಿ ದೂರದರ್ಶನದ ದರ್ಶನವೂ ಆಗತೊಡಗಿತ್ತು. ಅದರಲ್ಲಿ ಮೂಡಿಬರುತ್ತಿದ್ದ ಧಾರಾವಾಹಿಗಳು ಆ ಕಲಾವಿದರ ಪ್ರಬುದ್ಧ ನಟನೆ ಎಲ್ಲ ಮತ್ತೆ ನನ್ನನ್ನು ಸೆಳೆಯತೊಡಗಿತು. ಆ ಪಾತ್ರಗಳಲ್ಲಿ ನನ್ನನ್ನು ನಾನು ಕಲ್ಪಿಸಿಕೊಂಡು ಮನದಲ್ಲೇ ನಟಿಸತೊಡಗಿದ್ದೆ, ಅಷ್ಟೇ. ತಪ್ಪಿಯೂ ಸಾರ್ವಜನಿಕವಾಗಿ ರಂಗದ ಮೇಲೆ ನಟಿಸುವುದನ್ನು ಕಲ್ಪಿಸಿಕೊಳ್ಳುವ ದುಸ್ಸಾಹಸ ಮಾಡಲಿಲ್ಲ. ಏಕೆಂದರೆ ತಾಯಿ ಆದಮೇಲೆ ಬದಲಾಗುವ ಶರೀರಸ್ಥಿತಿ, ಹೊಣೆಗಾರಿಕೆ, ಅದಕ್ಕೆ ಎಡೆಗೊಡಲಿಲ್ಲ.

ಈ ಸಮಯದಲ್ಲೇ ನನ್ನನ್ನು ದೊಡ್ಡ ಆಘಾತಕ್ಕೆ ನೂಕಿದ್ದು ನನ್ನ ಏಕೈಕ ಪ್ರಾಣಸಖಿ ನನ್ನಮ್ಮನ ಮರಣ. ಅಮ್ಮನ ಸಾವು ಇನ್ನಿಲ್ಲದಂತೆ ನನ್ನಲ್ಲಿ ಅನಾಥ ಭಾವ ಮೂಡಿಸಿಬಿಟ್ಟಿತ್ತು. ನಾನೇನು ಬಾಯಿಬಿಟ್ಟು ಹೇಳದೆಯೇ ನನ್ನ ಭಾವನೆಗಳನ್ನು ಅರಿಯುತ್ತಿದ್ದ ಇಂಗಿತಜ್ಞೆ ಅವಳು. ಅವಳೇ ಇಲ್ಲದಿದ್ದರೆ ನನ್ನ ಭವಿಷ್ಯದ ಗತಿ ಏನು ಎಂದು ಚಿಂತಿಸುತ್ತಲೇ ನನ್ನ ಮಗ ಹದಿಮೂರರ ಕಿಶೋರಾವಸ್ಥೆಗೆ ಕಾಲಿಟ್ಟಿದ್ದನ್ನೂ ಗಮನಿಸಿದ್ದೆ. ಜೊತೆಯಲ್ಲೇ ಒಂದು ತೆರನಾದ ಮಂಕು ಬಡಿದ ಅನುಭವ. ಅಂದಿನಿಂದಲೂ ನನ್ನನ್ನು ಗಮನಿಸುತ್ತಲೇ ಬಂದಿದ್ದ ನನ್ನ ಪತಿ, ಒಂದು ಪ್ರಶಾಂತ ಬೆಳಗು ನನ್ನ ಬಳಿಬಂದು ‘ವಿದ್ಯಾ, ನೀನು ಮತ್ತೆ ಮೊದಲಿನಂತೆ ಲವಲವಿಕೆ ಯಿಂದಿರಲು ನನ್ನ ಬಳಿ ಒಂದು ಉಪಾಯವಿದೆ’ ಎಂದರು. ನನಗೆ ಅಚ್ಚರಿ, ಇಷ್ಟು ದಿನವಿಲ್ಲದಿದ್ದ ಉಪಾಯ ಈಗ ತೋಚಿದ್ದಾದರೂ ಹೇಗೆ ಎಂದುಕೊಂಡು ನಿರುತ್ಸಾಹದಲ್ಲೇ ಪ್ರತಿಕ್ರಿಯಿಸಿದ್ದೆ. ಆದರೆ ಅವರು ಹೇಳಿದ ಉಪಾಯ ಕೇಳಿದ ನನಗೆ ನಾನೆಲ್ಲೋ ಸ್ವರ್ಗದಂಚಿನಲ್ಲಿ ತೇಲುತ್ತಿರುವಂತೆ ಮಾಡಿಯೇಬಿಟ್ಟಿತು. ಅವರು ನನಗೆ ಅಭಿನಯದಲ್ಲಿ ತೊಡಗಿಸಿಕೊಳ್ಳಲು ಸಲಹೆ ಮಾಡಿದ್ದರು. ಓಹ್, ನನಗೆ ಇದು ಕನಸೋ ನನಸೋ ತಿಳಿಯದಾಗಿತ್ತು. ಆದರೆ ಆ ರೋಮಾಂಚನವೆಲ್ಲ ಜರ್ರನೆ ಇಳಿಯಲು ಒಂದು ಘಳಿಗೆಯೂ ಆಗಲಿಲ್ಲ. ಅಯ್ಯೋ, ನಾನು ಅಭಿನಯಿಸಲು ಇವರು ಸಮ್ಮತಿಸಿಬಿಟ್ಟರೆ, ಯಾರಾದರೂ ನನಗಾಗಿ ಪಾತ್ರಗಳನ್ನು ವೀಳ್ಯದಲಿಟ್ಟು ಕೊಡಲು ಕಾದಿರುವರೇ? ಅಂತಹ ಎಲ್ಲಾ ಸಂಪರ್ಕಗಳೂ ತಪ್ಪಿಹೋಗಿ ಎಷ್ಟೋ ವರ್ಷಗಳೇ ಕಳೆದು ಹೋಗಿದ್ದವು. ರಂಗಭೂಮಿ ಎಷ್ಟೋ ಬದಲಾವಣೆಗಳನ್ನು ಕಂಡಿತ್ತು. ಇಂದಿನ ರಂಗಭೂಮಿಯಲ್ಲಿ ಯಾರ ಪರಿಚಯವೂ ಇರದ, ಹದಿಮೂರು ವರ್ಷದ ಕಿಶೋರನ ತಾಯಿಯಾದ, ಮೂವತ್ತೇಳು ವರ್ಷಗಳ ಕೊಂಟೆಕೋಣವಾಗಿದ್ದ ನಾನು, ಯಾರನ್ನು ಅವಕಾಶ ಕೊಡಿರೆಂದು ಕೇಳಲಿ, ಅಂಥವರನ್ನು ಎಲ್ಲಿ ಹುಡುಕಲಿ? ದಾಹವಿದ್ದಾಗ ನೀರು ಸಿಗಲಿಲ್ಲ ನೀರು ದೊರಕಿದಾಗ ದಾಹವೇ ಇರದ ಸ್ಥಿತಿ ನನ್ನನ್ನು ಅಣಕಿಸಿತು. ಆದರೆ ಆ ಹತಾಶೆಯ ಸ್ಥಿತಿಯಲ್ಲೂ ನನ್ನಲ್ಲಿ ಅದುವರೆಗೂ ಎಂದೂ ಮೂಡದ ಛಲದ ಭಾವ ಆ ಕ್ಷಣದಲ್ಲೇ ಮೂಡಿತು. ಶತಾಯಗತಾಯ ನನ್ನನ್ನು ನಾನು ಈ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿಕೊಳ್ಳಲೇಬೇಕೆಂದು ನಿರ್ಧರಿಸಿದೆ.

ಪಾತ್ರವೊಂದರಲ್ಲಿ

ಹಿಂದಿಯಲ್ಲಿ ಒಂದು ಹೇಳಿಕೆಯಿದೆ, ನಮ್ಮದು ಸದುದ್ದೇಶದಿಂದ ಕೂಡಿದ ಸದಾಶಯವಾಗಿದ್ದರೆ ಅದನ್ನು ನೆರವೇರಿಸಲು ಇಡೀ ನಿಸರ್ಗವೇ ನಮಗೆ ಜೊತೆ ಕೊಡುವುದು. ನನ್ನ ವಿಷಯದಲ್ಲೂ ಈ ಮಾತು ನಿಜವೇ ಆಯಿತು. ರಂಗಭೂಮಿಯ ಸಂಪರ್ಕ ಹೇಗೆ ಸಾಧಿಸುವುದೆಂದು ಚಿಂತಿಸುತ್ತಿದ್ದವಳಿಗೆ ಅದು ಹೇಗೋ ಕರ್ನಾಟಕ ಲೇಖಕಿಯರ ಸಂಘದ ಸದಸ್ಯತ್ವ ದೊರಕಿತು. ಅದುವರೆಗೂ ಎಲ್ಲೋ ಏನೋ ಬೇಸರವಾದಾಗ, ಸುಮ್ಮನೆ ಕವನವೆಂದುಕೊಂಡು ಸಾಲುಗಳನ್ನು ಗೀಚುತ್ತಿದ್ದೆನೇ ವಿನಾ ಅದರಲ್ಲಿ ಅಂಥ ಒಲವೇನೂ ಇರಲಿಲ್ಲ. ಆದರೆ ಕ .ಲೇ.ಸಂ. ಉದಯೋನ್ಮುಖ ಕವಯಿತ್ರಿಯರಿಗಾಗಿ ಕಮ್ಮಟವೊಂದನ್ನು ಆಯೋಜಿಸಿದಾಗ ನಾನೂ ಅದರಲ್ಲಿ ಭಾಗವಹಿಸಿದ್ದೆ. ಅಲ್ಲೇ ನನಗೆ ರೇಡಿಯೋ ನಾಟಕ ಮತ್ತು ರಂಗಭೂಮಿಯಲ್ಲಿ ಪ್ರಸಿದ್ದರಾಗಿದ್ದ ಯಮುನಾ ಮೂರ್ತಿ, ಕಮಲಾ ಬಾಲು, ನಾಗಮಣಿ ಎಸ್.ರಾವ್, ಶಾಂತಾ ನಾಗರಾಜ್ ಮುಂತಾದವರ ಪರಿಚಯವಾಯಿತು. ಆದರೂ ಪರಿಚಯವಾದೊಡನೆ ಪ್ರವರ ಹೇಳಿಕೊಳ್ಳಲು ಹಿಂಜರಿದೆ. ಅವರ ದೂರವಾಣಿ ಸಂಖ್ಯೆಗಳನ್ನು ಪಡೆದು, ಮನೆಗೆ ಹಿಂದಿರುಗಿ ನನ್ನವರಿಗೆ ವರದಿ ಒಪ್ಪಿಸಿದೆ. ಸಿಕ್ಕ ಸದವಕಾಶವನ್ನು ಸದುಪಯೋಗ ಪಡಿಸಿಕೊಳ್ಳದ್ದಕ್ಕೆ ಸಿಕ್ಕಾಪಟ್ಟೆ ಬೈಸಿಕೊಂಡೆ.

ಬೈಸಿಕೊಂಡ ನನ್ನನ್ನು ಸಾಂತ್ವನಗೊಳಿಸಲೋ ಏನೋ ನನಗೆ ಮತ್ತೊಂದು ಅವಕಾಶ ದೊರೆಯಿತು. ಕನ್ನಡದ ಮೊದಲ ಬರಹಗಾರ್ತಿ ತಿರುಮಲಾಂಬ ಅವರ ಜನ್ಮಶತಮಾನೋತ್ಸವದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ, ತಿರುಮಲಾಂಬ ವಿರಚಿತ ನಾಟಕ ‘ಬ್ಯಾರಿಸ್ಟರ್ ರಾಮಚಂದ್ರ’ ನಾಟಕ ಪ್ರದರ್ಶನವಿತ್ತು. ನಾನು ನನ್ನ ಮಗ ಮತ್ತು ಪತಿಯೊಡನೆ ಆ ನಾಟಕ ನೋಡಲು ಹೋಗಿದ್ದೆ. ನ್ಯಾಷನಲ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದ ಗೀತಾ ರಾಮಾನುಜಂ ಅವರು ಅದರ ನಿರ್ದೇಶನ ಮಾಡಿದ್ದರು. ನಾಟಕ ಬಹಳ ಸುಂದರವಾಗಿ ಮೂಡಿಬಂದಿತ್ತು. ಗೀತಾ ರಾಮಾನುಜಂ ಅವರನ್ನು ಭೇಟಿಯಾಗಿ ನನ್ನ ಇಂಗಿತವನ್ನು ಅವರಲ್ಲಿ ಹೇಳಿಕೊಳ್ಳುವ ಆಸೆಯನ್ನು ನನ್ನವರೊಡನೆ ಹೇಳಿಕೊಂಡಾಗ ಅವರು ತಡಮಾಡದೆ ಗೀತಾ ಅವರನ್ನು ಭೇಟಿಯಾಗಲು ಒತ್ತಾಯಿಸಿದರು. ನಾನು ಹಿಂಜರಿಯುತ್ತಲೇ ಗ್ರೀನ್ ರೂಂನಲ್ಲಿ ಅವರನ್ನು ಭೇಟಿಯಾದೆ, ಮುಂದೆ ನಾನು ಎದುರಿಸಬಹುದಾದ ನಿರಾಸೆಯನ್ನು ಎದುರಿಸುವ ಸಿದ್ಧತೆಯೊಂದಿಗೆಯೇ.

‘ಮೇಡಂ, ನಾಟಕ ಬಹಳ ಚೆನ್ನಾಗಿತ್ತು. ನೀವು ತಪ್ಪು ತಿಳಿಯದಿದ್ದರೆ ನಿಮ್ಮಲ್ಲಿ ನನ್ನದೊಂದು ಮಾತು. ನಿಮಗೆ ಸರಿಯಿಲ್ಲವೆನಸಿದರೆ ಬೇಡವೆನ್ನಿ ನನಗೆ ಬೇಜಾರಿಲ್ಲ’ ಎಂದು ನಿವೇದಿಸಿಕೊಂಡೆ. ಅವರು ‘ಏನು ಬೇಕು ಹೇಳು’ ಎಂದರು. ನಾನು ತಡಮಾಡದೆ ನಾಟಕದಲ್ಲಿ ಅಭಿನಯಿಸುವ ನನ್ನಿಚ್ಛೆ, ಅದಕ್ಕೆ ತೊಡಕಾಗಿರುವ ನನ್ನ ವಯಸ್ಸು, ನನ್ನ ಜವಾಬ್ದಾರಿ, ಕುಟುಂಬದ ಹಿನ್ನೆಲೆ ಎಲ್ಲವನ್ನು ಒಂದೇ ಉಸುರಿಗೆ ಒದರಿಬಿಟ್ಟೆ. ಎಲ್ಲವನ್ನೂ ಸಹನೆಯಿಂದ ಕೇಳಿಸಿಕೊಂಡ ಅವರು ‘ನಿನ್ನಂಥವರೇ ನನಗೆ ಬೇಕು, ಇಷ್ಟೆಲ್ಲಾ ಅಡೆತಡೆಗಳಿದ್ದೂ ನಟನೆಯ ಬಗ್ಗೆ ನಿನಗೆ ಇಷ್ಟು ಆಸಕ್ತಿ ಇದೆಯಲ್ಲ ಇದೇ ನನಗೆ ಬಹಳ ಇಷ್ಟವಾಗಿದ್ದು, ನಿನ್ನ ಫೋನ್ ನಂಬರ್ ಕೊಟ್ಟು ಹೋಗು ಅವಕಾಶವಿದ್ದಾಗ ತಿಳಿಸುತ್ತೇನೆ’ ಎಂದರು. ಆ ಕ್ಷಣ ನನಗೆ ಇದರಿಂದ ಅತೀವ ಸಂತಸವಾಗಿದ್ದರೂ, ಅದನ್ನು ಹತ್ತಿಕ್ಕಿ ಮತ್ತೊಂದು ನಿರಾಸೆಯ ನಿರೀಕ್ಷೆಯಲ್ಲೇ ದಿನದೂಡಿದೆ.

ಒಂದು ದಿನ ಬೆಳ್ಳಂಬೆಳಗ್ಗೆ ಮನೆಯ ಫೋನ್ ಕರೆಯತೊಡಗಿತು. ನಾನು ಯಾರಪ್ಪ ಇಷ್ಟು ಬೆಳಿಗ್ಗೆ ಫೋನ್ ಮಾಡಿದ್ದಾರೆ ಇನ್ನೊಂದು ಸ್ವಲ್ಪ ಹೊತ್ತಾದ ಮೇಲೆ ಮಾಡಬಾರದಿತ್ತಾ ಎಂದು ಗೊಣಗುತ್ತಲೇ ಫೋನ್ ತೆಗೆದುಕೊಂಡೆ. ಅತ್ತಲಿಂದ ಕೇಳಿದ ಧ್ವನಿಗೆ ಮೂಕಳಾದೆ, ‘ಹಲೋ ವಿದ್ಯಾ, ನಾನು ಗೀತಾ ರಾಮಾನುಜಂ. ನಿನಗೆ ಒಂದು ಅವಕಾಶ ಒದಗಿ ಬಂದಿದೆ. ಜಿ.ವಿ.ಅಯ್ಯರ್ ಅವರು ನಿರ್ದೇಶಿಸುತ್ತಿರುವ ‘ಭಗವದ್ಗೀತೆ’ ಎಂಬ ಚಲನಚಿತ್ರದಲ್ಲಿ ಸಣ್ಣ ಪಾತ್ರ ಒಂದಿದೆ. ನಿನಗೆ ಒಪ್ಪಿಗೆ ಇದ್ದರೆ ಇವರಿಗೆ ಫೋನ್ ಮಾಡು’ ಎಂದು ಹೇಳಿ ಫೋನ್ ನಂಬರ್ ಕೊಟ್ಟರು. ಅದು ನನ್ನ, ಸಾರ್ವಜನಿಕ ಅಭಿನಯದ ಪ್ರಪ್ರಥಮ ಹೆಜ್ಜೆಯಾಗಿತ್ತು. ಆ ಚಿತ್ರದಲ್ಲಿ ನನಗೆ ಅಂಥದ್ದೇನೂ ಅವಕಾಶವಿರದಿದ್ದರೂ, ಗೀತಾ ರಾಮಾನುಜಂ ಎಂಬ ಅಪೂರ್ವ ಗುರುವಿನ ಸಾನಿಧ್ಯ, ಮಾರ್ಗದರ್ಶನ, ನಿರ್ದೇಶನ ಎಲ್ಲವೂ ಒಂದೇ ಬಾರಿಗೆ ದೊರಕಿತು. ಅವರ ನಿರ್ದೇಶನದಲ್ಲಿ, ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ‘ಯಶೋಧರಾ’ ನಾಟಕದ ಎರಡನೆಯ ಪ್ರದರ್ಶನದಲ್ಲಿ ನಾನೇ ಯಶೋಧರೆ. ಕ್ಲಿಷ್ಟವಾದ ಕನ್ನಡದಲ್ಲಿ ರಚಿತವಾದ ಆ ನಾಟಕದ ಮುಖ್ಯ ಪಾತ್ರವನ್ನು ಹೊಸಬಳಾದ ನನಗೆ, ಯಾವ ನಂಬಿಕೆ, ವಿಶ್ವಾಸದಿಂದ ಕೊಟ್ಟರೋ, ಆ ನಂಬಿಕೆಯನ್ನು ನಾನು ಹುಸಿಗೊಳಿಸಲಿಲ್ಲವೆಂಬ ಧನ್ಯಭಾವ, ನಾಟಕ ಮುಗಿದ ಮೇಲೆ ಆರಂಭವಾದ ಕರತಾಡನ ಎಷ್ಟೋ ನಿಮಿಷಗಳವರೆಗೂ ನಿಲ್ಲದಿದ್ದಾಗ ನನ್ನಲ್ಲಿ ಮೂಡಿತು. ಮುಂದೆ ಅವರೇ ರಚಿಸಿ ನಿರ್ದೇಶಿಸಿದ ನಾಟಕಗಳಲ್ಲದೆ ಅಂದಿನ ಮೇರು ಪೋಷಕ ನಟರಾದ ಉಪಾಸನೆ ಸೀತಾರಾಂ, ಬಿ.ಆರ್.ಜಯರಾಂ, ಎಸ್.ಕೆ.ಮಾಧವರಾವ್, ವಾಸುದೇವರಾವ್, ಮೊದಲಾದ ದಿಗ್ಗಜರ ಜತೆಯಲ್ಲಿ ನಿರ್ದೇಶನದಲ್ಲಿ ಮಾರ್ಗದರ್ಶನದಲ್ಲಿ ನಟಿಸಿ ಸೈ ಎನಿಸಿಕೊಳ್ಳುವ ಭಾಗ್ಯ ನನ್ನದಾಗಿತ್ತು. ಒಂದೊಂದು ಪ್ರದರ್ಶನದಲ್ಲೂ ಕಿವಿಗಡಚಿಕ್ಕುವ ಕರತಾಡನದಿಂದ, ನನ್ನಲ್ಲಿ ಹೆಚ್ಚುಹೆಚ್ಚು ಆತ್ಮವಿಶ್ವಾಸ, ಧನ್ಯತಾಭಾವ ಉಂಟುಮಾಡುತ್ತಿತ್ತು.

ಪ್ರಸಾಧನ ಸಮಯ

ಆದರೆ ನಾಟಕದ ತಾಲೀಮಿಗಾಗಿ ನಾನು ಬಳೇಪೇಟೆಯ ನಮ್ಮ ಮನೆಯಿಂದ ಮೆಜೆಸ್ಟಿಕ್​ನ ಬಸ್ ನಿಲ್ದಾಣದವರೆಗೂ ನಡೆದುಕೊಂಡು ಹೋಗಿ, ಅಲ್ಲಿಂದ ಬಸ್ ಹಿಡಿದು ಜಯನಗರ್ ನ್ಯಾಶನಲ್ ಕಾಲೇಜಿಗೋ, ಜೆ.ಪಿ.ನಗರದಲ್ಲಿದ್ದ ಗೀತಾ ಮೇಡಂ ಅವರು ಮನೆಗೋ, ಇಲ್ಲಾ ಉಪಾಸನೆ ಸೀತಾರಾಂ ಅವರ ಮನೆಗೋ ಹೋಗಬೇಕಾಗುತ್ತಿತ್ತು. ನಾಟಕದ ತಾಲೀಮು ಹೆಚ್ಚಿನಂಶ ಸಂಜೆ ಆರು ಗಂಟೆಗೆ ಆರಂಭವಾಗುತ್ತಿದ್ದರಿಂದ ನಾನು ಸಂಜೆ ನಾಲ್ಕು ಗಂಟೆಗೇ ಮನೆ ಬಿಡುತ್ತಿದ್ದೆ. ಅಲ್ಲಿ ಹನುಮಂತನ ಬಾಲದಂತೆ ಇರುತ್ತಿದ್ದ ಸರದಿ ಸಾಲಿನಲ್ಲಿ ಅರ್ಧ ಮುಕ್ಕಾಲು ಗಂಟೆ ನಿಂತಮೇಲೆ ಬರುತ್ತಿದ್ದ ಬಸ್ಸಿಗೆ ನೂಕುನುಗ್ಗಲಿನಲ್ಲಿ ಹತ್ತಿ, ಅಲ್ಲೂ ಕೂರಲು ಜಾಗ ಸಿಗದೆ ನಿಂತೇ ಪ್ರಯಾಣ ಮಾಡಿ ನನ್ನ ನಿಲ್ದಾಣ ಬಂದಾಗ ಇಳಿದು ಮತ್ತೆ ತಾಲೀಮು ನಡೆಯುವ ಜಾಗಕ್ಕೆ ನಡೆದುಕೊಂಡು ಹೋಗಿ, ನಾಟಕದಲ್ಲೂ ನಿಂತೇ ಅಭಿನಯಿಸಿ ರಾತ್ರಿ ಎಂಟು ಗಂಟೆಗೆ ತಾಲೀಮು ಮುಗಿಸಿ ಮತ್ತೆ ಬಸ್ ಹಿಡಿದು ಕೂರಲು ಅಲ್ಲಿ ಜಾಗ ಸಿಗದಿದ್ದರೆ, ಸೋತುಹೋದ ಕಾಲುಗಳ ಮೇಲೆ ಮತ್ತೆ ಭಾರ ಹಾಕಿ ನಿಂತು ಮೆಜೆಸ್ಟಿಕ್​ನಲ್ಲಿ ಇಳಿದು, ಬಳೇಪೇಟೆಗೆ ನಡೆದು ಬಂದು ಮನೆ ಸೇರುವ ವೇಳೆಗೆ ಉಸ್ಸಪ್ಪಾ! ನಂಗಿದೆಲ್ಲಾ ಬೇಕಿತ್ತಾ? ಲಕ್ಷಣವಾಗಿ ಎಲ್ಲರ ಥರ, ಮನೆಯಲ್ಲಿದ್ದು ಮಜ ಮಾಡಬಹುದಿತ್ತಲ್ಲವಾ ಎಂದೂ ಅನಿಸುತ್ತಿತ್ತು.

ಆದರೆ ಅದೊಂದೇ ಕ್ಷಣವಷ್ಟೇ. ಮರುಕ್ಷಣವೇ ಕಿವಿಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ನಿಲ್ಲದ ಕರತಾಡನ ಗುಂಯ್​ಗುಟ್ಟಿ ತಾಲೀಮಿನ ನಡುವಿನಲ್ಲಿ ನಡೆಯುತ್ತಿದ್ದ ಕಾಫಿ ತಿಂಡಿ ಸಮಾರಾಧನೆ, ನಗೆಚಾಟಿಕೆ ನಮ್ಮಿಂದಾಗುತ್ತಿದ್ದ ಸರಿತಪ್ಪುಗಳ ಪರಾಮರ್ಶೆ ಸಹಕಲಾವಿದರ ಪ್ರಾಂಜಲ ಸ್ನೇಹ, ಇದೆಲ್ಲಾ ನೆನಪುಗಳೂ ನವಚೈತನ್ಯ ನೀಡುವ ಟಾನಿಕ್​ನಂತೆ ಪರಿವರ್ತಿತವಾಗಿ ಮನಸ್ಸು ಮತ್ತೆ ಮತ್ತೆ ನಾಟಕದೆಡೆಗೆ ಸೆಳೆಯುತ್ತಿತ್ತು. ಆದರೆ ಈ ರೀತಿ ಬಸ್ ಪ್ರಯಾಣದಲ್ಲಿ ಒದ್ದಾಡಿ ಕೊಂಡು ಹೋಗುತ್ತಿದ್ದವಳು ನಾನೊಬ್ಬಳೇ. ಏಕೆಂದರೆ ನನಗೆ ಯಾವ ವಾಹನ ಚಾಲನೆಯೂ ಗೊತ್ತಿರಲಿಲ್ಲ, ನನ್ನನ್ನು ಕರೆದುಕೊಂಡು ಹೋಗುವಂಥವರು ನಮ್ಮ ಮನೆಯ ಬಳಿ ಇರಲಿಲ್ಲ. ಪಾತ್ರಧಾರಿಗಳಲ್ಲಿ ಹೆಚ್ಚಿನವರು ತಾಲೀಮು ನಡೆಯುವ ಜಾಗದ ಹತ್ತಿರದಲ್ಲೇ ಇದ್ದು ಅವರಿಗೆ ಪರಸ್ಪರ ಜೊತೆಯೂ ಇದ್ದಿದ್ದರಿಂದ, ಅವರಿಗೆ ನನಗಿದ್ದಂಥ ತಾಪತ್ರಯ ವಿರುತ್ತಿರಲಿಲ್ಲ. ಜೊತೆಗೆ ಪತಿಯೊಬ್ಬರೇ ಸಂಪಾದಿಸುತ್ತಿದ್ದರಿಂದ ನನ್ನ ಈ ಹವ್ಯಾಸ ಮಧ್ಯಮವರ್ಗದ ನಮಗೆ ಸ್ವಲ್ಪ ದುಬಾರಿ ಎನಿಸುತ್ತಿತ್ತು. ಹಾಗಾಗಿ ಧಾರಾವಾಹಿ ನಟನೆಯಲ್ಲಿ ನಾನು ತೊಡಗಿಕೊಂಡರೆ ಅದರಿಂದ ಬರುವ ಗಳಿಕೆಯಿಂದ ಗಂಡನಿಗೂ ಸ್ವಲ್ಪ ಆರ್ಥಿಕ ಸಹಕಾರ ನೀಡುತ್ತಾ ನನ್ನ ಹವ್ಯಾಸದ ಖರ್ಚು ವೆಚ್ಚವನ್ನು ನಾನೇ ಭರಿಸಬೇಕೆಂದು ನಿರ್ಧರಿಸಿ ಆ ಅವಕಾಶಕ್ಕಾಗಿ ಕಾಯುತ್ತಿದ್ದಾಗ ನನ್ನ ಭಾಗ್ಯದ ಬಾಗಿಲು ತೆರೆದುಕೊಂಡಿತ್ತು. ಆ ಬಾಗಿಲಿಂದ ಒಳಹೊಕ್ಕ ನನಗೆ ಕಿರುತೆರೆ ಹಿರಿತೆರೆಯ ಬಾಗಿಲುಗಳೂ ತನ್ನಿಂತಾನೇ ತೆರೆದುಕೊಂಡವು.

ನಿರ್ದೇಶಕ ಟಿ ಎನ್​ ಸೀತಾರಾಮ್ ಮತ್ತು ಸಹಕಲಾವಿದರೊಂದಿಗೆ ವಿದ್ಯಾ.

ಆದರೆ ಕಿರುತೆರೆಯಲ್ಲಿ ಪ್ರವೇಶ ಪಡೆದಷ್ಟು ಸುಲಭವಾಗಿರಲಿಲ್ಲ ಅಲ್ಲಿ ನೆಲೆಯೂರುವುದು. ಜೆ.ಪಿ, ಬಿ.ಎನ್.ಚಂದ್ರಕಾಂತ, ಮುಂತಾದವರ ಪ್ರೋತ್ಸಾಹದಿಂದ ಮೊದಮೊದಲು ನನಗೆ ಅವಕಾಶಗಳು ಸಿಕ್ಕವಾದರೂ ನಂತರದ ದಿನಗಳಲ್ಲಿ ಕೆಲಸ ಕೊಟ್ಟವರು ಬಹಳ ಕಡಿಮೆ ಸಂಭಾವನೆ ಕೊಡುತ್ತಿದ್ದರು ಅಥವಾ ಕೊಡುತ್ತಲೇ ಇರಲಿಲ್ಲ. ಎಷ್ಟೋ ಬಾರಿ ನಾನೇ ಕೈಯಿಂದ ಖರ್ಚು ಮಾಡಬೇಕಾಗತ್ತಿತ್ತು. ಸಿಗುತ್ತಿದ್ದ ಪಾತ್ರಗಳೂ ಅಷ್ಟೇನೂ ಗಟ್ಟಿಯಾಗಿರದೇ ಇದ್ದುದರಿಂದ ನಾನು ತೆಗೆದುಕೊಂಡು ನಿರ್ಧಾರದ ಬಗ್ಗೆ ನನಗೇ ಒಂದು ತೆರನಾದ ಒದ್ದಾಟ ಆರಂಭವಾಗಿತ್ತು. ಈ ಸಮಯದಲ್ಲೇ ಟಿ.ಎನ್​. ಸೀತಾರಾಂ ಅವರ ಧಾರಾವಾಹಿಗಳಲ್ಲಿ ಅಭಿನಯಿಸುವ ಸದವಕಾಶ ಒದಗಿ ಬಂತು. ಅವರ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತೆಂದರೆ ಅದಕ್ಕೆ ಬೇರೆಯದೇ ಖದರು. ಅವರು ನನ್ನಲ್ಲಿ ನಂಬಿಕೆಯಿಟ್ಟು, ನನಗೆ ಅವಿಸ್ಮರಣೀಯ ಪಾತ್ರಗಳನ್ನು ಕೊಟ್ಟು, ನನ್ನ ಅಭಿನಯವನ್ನು ತಿದ್ದಿತೀಡಿ ಸುರೂಪ ಕೊಟ್ಟರು. ಫಣಿ ರಾಮಚಂದ್ರ, ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಸೇತುರಾಂ, ಲಿಂಗದೇವರು, ರವಿಕಿರಣ್, ವಿನು ಬಳಂಜ ಅವರಂತಹ ನಿರ್ದೇಶಕರು ಕಿರುತೆರೆಯಲ್ಲಿ ಸತ್ವಯುತ ಪಾತ್ರಗಳನ್ನು ನೀಡಿ ಜನರ ಆದರಾಭಿಮಾನಗಳಿಗೆ ನಾನು ಪಾತ್ರಳಾಗುವಂತೆ ಮಾಡಿದ್ದಾರೆ.

ಸುನಿಲ್ ಕುಮಾರ್ ದೇಸಾಯಿ, ಮಿಲನ ಪ್ರಕಾಶ್, ಆರ್.ಚಂದ್ರು, ಕಿಶೋರ್ ಮೂಡುಬಿದಿರೆ, ಆಕಾಶ್, ಶ್ರೀ ವತ್ಸ ಮೊದಲಾದ ಯಶಸ್ವೀ ನಿರ್ದೇಶಕರು, ಕನ್ನಡದ ಖ್ಯಾತ ನಾಯಕನಟರೊಡನೆ ಅಭಿನಯಿಸುವ ಅವಕಾಶ ಕೊಟ್ಟಿದ್ದಾರೆ. ನಾನು ಅಭಿನಯ ಕ್ಷೇತ್ರಕ್ಕೆ ಹೆಜ್ಜೆಯೂರಿದ್ದು ತಡವಾಗಿಯಾದರೂ ನೋಡುಗರ ಮನದಲ್ಲಿ ನನ್ನ ಅಭಿನಯ ನೆಲೆಯೂರುವಂತೆ  ಮಾಡಿದ ನನ್ನ ಎಲ್ಲ ನಿರ್ದೇಶಕರಿಗೂ ನಾನು ಚಿರಋಣಿ. ನಾವು ಕಲಾವಿದರು ಏನೇ ಮಾಡಿದರೂ ಎಷ್ಟೇ ಚೆನ್ನಾಗಿ ಮಾಡಿದರೂ ಅದನ್ನು ನೋಡುಗರು ಮೆಚ್ಚದಿದ್ದರೆ ನಾವು ಮಾಡಿದ್ದೆಲ್ಲ ವ್ಯರ್ಥ. ನನ್ನ ಶ್ರಮವನ್ನು ವ್ಯರ್ಥ ಗೊಳಿಸದೆ ಸಾರ್ಥಕ ಪಡಿಸಿದ ಎಲ್ಲಾ ನೋಡುಗರಿಗೂ ನನ್ನ ಧನ್ಯತೆಯ ನಮನಗಳು.

***

ಪರಿಚಯ: ಮನಶಾಸ್ತ್ರ, ಕನ್ನಡ, ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ವಿದ್ಯಾ ಮೂರ್ತಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.  ನಾದಜ್ಯೋತಿ ಮುತ್ತು ಸ್ವಾಮಿ ದೀಕ್ಷಿತರು ನಾಟಕ 55ಕ್ಕೂ ಹೆಚ್ಚು, ದಾಸ ಪುರಂದರ 75ಕ್ಕೂ ಹೆಚ್ಚು, ಹೋಂ ರೂಲ್ 25, ಹುತ್ತದಲ್ಲಿ ಸುತ್ತ 10, ಯಶೋಧರೆ 50ಕ್ಕೂ ಹೆಚ್ಚು, ಅಮ್ಮಾ ರಿಟೈರ್ ಆಗ್ತಾಳೆ 25, ತನುವು ನಿನ್ನದೆ, ಮನವು ನಿನ್ನದೇ 25, ನಿಜಗಲ್ಲಿನ ರಾಣಿ 15, ಆಷಾಢಭೂತಿ 30, ಸ್ಮಶಾನ ಕುರುಕ್ಷೇತ್ರ 5 ಪ್ರದರ್ಶನಗಳು ಕಂಡಿವೆ.  ಇನ್ನೂ ಬೇರೆ ಬೇರೆ ತಂಡಗಳ ಮೂಲಕ ನಟಿಸಿದ ನಾಟಕಗಳೂ ಸೇರಿ ಸುಮಾರು ೫೦೦ಕ್ಕೂ ಹೆಚ್ಚಿನ ರಂಗ ಪ್ರದರ್ಶನಗಳಲ್ಲಿ ಇವರು ಭಾಗಿಯಾಗಿದ್ದಾರೆ.

ಪ್ರಮುಖ ಧಾರಾವಾಹಿಗಳು:  ಶಕ್ತಿ, ಮುಕ್ತ, ದೇವ್ರು, ದಂಡಪಿಂಡಗಳು, ಕಲ್ಯಾಣಿ, ಮುಕ್ತಮುಕ್ತ, ಗೃಹಭಂಗ, ಬದುಕು, ಮೌನರಾಗ, ಪ್ರೀತಿ ಇಲ್ಲದ ಮೇಲೆ, ಉಯ್ಯಾಲೆ, ಚಿತ್ರಲೇಖ, ಮನ್ವಂತರ, ದಶಾವತಾರ, ಮೋಹಿನಿ ವರ್ಸಸ್ ಮಹಾಲಿಂಗ, ಪಾ.ಪ.ಪಾಂಡು, ಸಿಲ್ಲಿ ಲಲ್ಲಿ, ಅಡಚಣೆಗಾಗಿ ಕ್ಷಮಿಸಿ, ಮುಂಬೆಳಗು, ಸುಬ್ಬಣ್ಣ, ಕೃಷ್ಣ ತುಳಸಿ, ಜೋಗುಳ, ಚಿಟ್ಟೆಹೆಜ್ಜೆ, ಜೊತೆಜೊತೆಯಲಿ, ಜನುಮದ ಜೋಡಿ, ನಿಗೂಢ ರಾತ್ರಿ, ಮಗಳು ಜಾನಕಿ, ಶಾಂತಂ ಪಾಪಂ, ಆಕಾಶ ಗಂಗೆ, ಬೆಳದಿಂಗಳಾಗಿ ಬಾ, ಬಣ್ಣದ ಬುಗುರಿ, ಮನೆಯೊಂದು ಮೂರು ಬಾಗಿಲು, ಸ್ತ್ರೀ, ಇನ್ನೂ ಹಲವಾರು.

ಸಿನಿಮಾಗಳು: ಊರ್ವಶಿ, ಸ್ಪರ್ಷ, ಮತದಾನ, ಮೈಲಾರಿ, ವಂಶಿ, ಪೃಥ್ವಿ, ಚಾರ್ಮಿನಾರ್, ಕಿಚ್ಚ ಹುಚ್ಚ, ಚಂದ್ರು, ದಿಲ್ ಹೇಳಿದೆ ನೀ ಬೇಕಂತ, ಅಬ್ಬಾ ಆ ಹುಡುಗಿ, ದುಂಬಿ, ಬಾ ನನ್ನ ಪ್ರೀತಿಸು, ….ರೆ, ಬೇರು, ಪ್ರಪಾತ, ಮಾಲ್ಗುಡಿ ಡೇಸ್, ಶಿವಾಜಿ ಸೂರತ್ಕಲ್. ಅಣ್ಣಾಬಾಂಡ್ ಇತ್ಯಾದಿ.

ಬಿಡುಗಡೆಗೆ ಕಾದಿರುವ ಚಿತ್ರಗಳು: ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಧೀರನ್, ಆದ್ದರಿಂದ, ಲಂಕಾಸುರ ಇನ್ನೂ ಚಿತ್ರೀಕರಣ ನಡೆಯುತ್ತಿದೆ. ಹವ್ಯಾಸ: ಸಂಗೀತ, ಕವನ, ಲೇಖನಗಳನ್ನು ಬರೆಯುವುದು, ಓದುವುದು, ಜಾಹಿರಾತುಗಳಿಗೆ ರೂಪದರ್ಶಿ, ಯೋಗಾಭ್ಯಾಸ.

ಇದನ್ನೂ ಓದಿ : ಏಸೊಂದು ಮುದವಿತ್ತು : ‘ಮಡಿಗುಂಡಮ್ಮ‘ನ ಜಲಲ ಜಲಲಲ ಧಾರೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada