IPL 2025: ಮುಂಬೈ ತಂಡದಲ್ಲಿ 2 ಬದಲಾವಣೆ ಖಚಿತ; ಆರ್‌ಸಿಬಿ ತಂಡದಲ್ಲೂ ಆಗುತ್ತಾ ಸರ್ಜರಿ?
MI vs RCB: ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಐಪಿಎಲ್ 2025 ರ 20ನೇ ಪಂದ್ಯ ಏಪ್ರಿಲ್ 7 ರಂದು ನಡೆಯಲಿದೆ. ಎರಡೂ ತಂಡಗಳು ಕಳೆದ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಕಾರಣ ಈ ಪಂದ್ಯ ಪ್ರಾಮುಖ್ಯತೆ ಪಡೆದಿದೆ. ರೋಹಿತ್ ಶರ್ಮಾ ಹಾಗೂ ಬುಮ್ರಾ ಅವರ ಆಗಮನ ಮುಂಬೈ ತಂಡವನ್ನು ಬಲಪಡಿಸಿದೆ. ಆರ್‌ಸಿಬಿ ಕೊಹ್ಲಿ ಮತ್ತು ಪಾಟಿದಾರ್ ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 20 ನೇ ಪಂದ್ಯವು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ನಡುವೆ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಒಂದೆಡೆ ಆರ್‌ಸಿಬಿ ಈ ಸೀಸನ್ನ ಮೂರನೇ ಗೆಲುವಿನ ಮೇಲೆ ಕಣಿಟ್ಟಿದ್ದರೆ, ಮುಂಬೈ ಇಂಡಿಯನ್ಸ್ ಈ ಸೀಸನ್ನ ಎರಡನೇ ಪಂದ್ಯವನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಸೋಲನ್ನು ಎದುರಿಸಿದರೆ, ಇತ್ತ ಮುಂಬೈ ಕೂಡ ಕಳೆದ ಪಂದ್ಯವನ್ನು ಸೋತಿತ್ತು. ಇದೀಗ ಸೋಲಿನೊಂದಿಗೆ ಬರುತ್ತಿರುವ ಈ ಎರಡು ತಂಡಗಳ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳು ಹೆಚ್ಚಿವೆ.
ಮುಂಬೈ ಬ್ಯಾಟಿಂಗ್ ವೈಫಲ್ಯ
ಐದು ಬಾರಿಯ ಚಾಂಪಿಯನ್ ಮುಂಬೈ ತಂಡ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲು ಕಂಡಿದೆ. ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ ಇರುವುದು ಮುಂಬೈ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ರಯಾನ್ ರಿಕಲ್ಟನ್ ಬಿಟ್ಟರೆ ತಂಡದಿಂದ ಮತ್ತ್ಯಾರು ಅರ್ಧಶತಕ ಸಿಡಿಸಿಲ್ಲ. ಇದು ತಂಡದ ಕಳಪೆ ಬ್ಯಾಟಿಂಗ್ಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಗಾಯದಿಂದ ಹೊರಗಿದ್ದ ನಾಯಕ ರೋಹಿತ್ ಶರ್ಮಾ ಆರ್‌ಸಿಬಿ ವಿರುದ್ಧ ಆಡುವುದು ಖಚಿತವಾಗಿದೆ. ಆದಾಗ್ಯೂ ಅವರ ಕಳಪೆ ಬ್ಯಾಟಿಂಗ್ ಕೂಡ ತಂಡಕ್ಕೆ ತಲೆನೋವಾಗಿದೆ.
ಬುಮ್ರಾ ಆಗಮನ
ಇನ್ನು ಬೌಲಿಂಗ್ ಬಗ್ಗೆ ಮಾತನಾಡುವುದಾದರೆ.. ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಂಡಿರುವುದು ಒಳ್ಳೆಯ ಸುದ್ದಿಯಾಗಿದೆ. ಅಲ್ಲದೆ ಅವರು ಆರ್‌ಸಿಬಿ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಮುಖ್ಯ ಕೋಚ್ ಖಚಿತಪಡಿಸಿದ್ದಾರೆ. ಹೀಗಾಗಿ ಬೋಲ್ಟ್ ಜೊತೆಗೆ ಬುಮ್ರಾ ಸೇರಿಕೊಂಡರೆ ಮುಂಬೈ ಬೌಲಿಂಗ್ ಬಲಿಷ್ಠವಾಗಿ ಕಾಣಿಸಿಕೊಳ್ಳಲಿದೆ.
ಮಿಂಚಬೇಕಿದೆ ಕೊಹ್ಲಿ
ಆರ್‌ಸಿಬಿ ವಿಷಯದಲ್ಲಿ ಹೇಳುವುದಾದರೆ, ಮುಂಬೈ ತಂಡದ ಬ್ಯಾಟಿಂಗ್‌ನಲ್ಲಿರುವ ದೌರ್ಬಲ್ಯದ ಲಾಭ ಪಡೆಯಲು ಆರ್‌ಸಿಬಿ ಪ್ರಯತ್ನಿಸುತ್ತದೆ. ಕೆಕೆಆರ್ ವಿರುದ್ಧ 59 ರನ್ ಗಳಿಸಿದ್ದನ್ನು ಬಿಟ್ಟರೆ ವಿರಾಟ್ ಕೊಹ್ಲಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಕೊಹ್ಲಿಯಿಂದ ತಂಡವು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ಆರ್‌ಸಿಬಿ ತಂಡವು ಬೃಹತ್ ರನ್ ಗಳಿಸಲು ಸಮರ್ಥ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಫಿಲ್ ಸಾಲ್ಟ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರೆ, ನಾಯಕ ರಜತ್ ಪಾಟಿದಾರ್ ಕೂಡ ದೊಡ್ಡ ಹೊಡೆತಗಳನ್ನು ಆಡುವಲ್ಲಿ ನಿಪುಣರು. ಆಸ್ಟ್ರೇಲಿಯಾದ ಟಿಮ್ ಡೇವಿಡ್ ಕೊನೆಯ ಓವರ್‌ಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು ತಂಡಕ್ಕೆ ಒಳ್ಳೆಯ ಸೂಚನೆಯಾಗಿದೆ.
ಆರ್‌ಸಿಬಿಯ ಬೌಲಿಂಗ್ ದಾಳಿ ಬಲಿಷ್ಠ
ಆರ್‌ಸಿಬಿ ತಂಡ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಬಲಿಷ್ಠ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದ್ದರೂ, ಸ್ಪಿನ್ನರ್‌ಗಳು ಇನ್ನೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆರ್‌ಸಿಬಿ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಗುಜರಾತ್ ಟೈಟನ್ಸ್ ವಿರುದ್ಧದ ಹಿಂದಿನ ಪಂದ್ಯದ ಸೋಲಿನಿಂದ ಚೇತರಿಸಿಕೊಳ್ಳಲು ಪ್ರಯತ್ನಿಸಲಿದೆ.
IPL 2025: ಆರ್‌ಸಿಬಿ- ಮುಂಬೈ ನಡುವೆ ಹೈವೋಲ್ಟೇಜ್ ಫೈಟ್; ಪಂದ್ಯ ಯಾವಾಗ ಎಲ್ಲಿ ಎಷ್ಟು ಗಂಟೆಗೆ ಆರಂಭ?
ಸಂಭಾವ್ಯ ಪ್ಲೇಯಿಂಗ್ 11
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ವಿಲ್ ಜ್ಯಾಕ್ಸ್, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ವಿಘ್ನೇಶ್ ಪುತ್ತೂರ್, ಟ್ರೆಂಟ್ ಬೌಲ್ಟ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ