ಸಿಕಂದರ್ ಸೋಲು: ಅಭಿಮಾನಿಗಳ ಮಾತು ಕೇಳಲು ಒಪ್ಪಿದ ಸಲ್ಮಾನ್ ಖಾನ್
ಸೋಲಿನ ಸುಳಿಯಿಂದ ಹೊರಬರಲು ಸಲ್ಮಾನ್ ಖಾನ್ ಅವರು ದಾರಿ ಹುಡುಕುತ್ತಿದ್ದಾರೆ. ಹಾಗಾಗಿ ಅವರು ಅಭಿಮಾನಿಗಳನ್ನೇ ಭೇಟಿ ಮಾಡಿ ಸಲಹೆ ಕೇಳಿದ್ದಾರೆ. ಇನ್ಮುಂದೆ ಯಾವ ರೀತಿ ಸಿನಿಮಾ ಮಾಡುವುದು ಸೂಕ್ತ ಎಂಬ ವಿಚಾರವನ್ನು ಫ್ಯಾನ್ಸ್ ಜೊತೆ ಸಲ್ಮಾನ್ ಖಾನ್ ಚರ್ಚಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ‘ಸಿಕಂದರ್’ (Sikandar) ಸಿನಿಮಾದ ಸೋಲಿನಿಂದ ಸಲ್ಮಾನ್ ಖಾನ್ (Salman Khan) ಅವರ ವೃತ್ತಿ ಜೀವನಕ್ಕೆ ಕೊಂಚ ಹಿನ್ನಡೆ ಆಗಿದೆ. ಬಹುಕೋಟಿ ರೂಪಾಯಿ ಬಂಡವಾಳ ಹೂಡಿದ ಈ ಸಿನಿಮಾದಿಂದ ನಿರ್ಮಾಪಕರಿಗೆ ನಷ್ಟ ಆಗಿದೆ. ಅಲ್ಲದೇ, ಸಿನಿಮಾ ಚೆನ್ನಾಗಿಲ್ಲ ಎಂದು ಫ್ಯಾನ್ಸ್ ಕೂಡ ಬೇಸರ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಹಿನ್ನಡೆ ಆದ ಬಳಿಕ ಸಲ್ಮಾನ್ ಖಾನ್ ಅವರು ಅಭಿಮಾನಿಗಳ (Salman Khan Fans) ಮಾತು ಕೇಳಲು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ ಸಲ್ಮಾನ್ ಖಾನ್ ಅವರು ಈಗಾಗಲೇ ತಮ್ಮ ಕೆಲವು ಅಭಿಮಾನಿಗಳನ್ನು ಭೇಟಿ ಮಾಡಿ ಒಂದಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮುಂದಿನ ಸಿನಿಮಾಗಳನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಮಾತುಕತೆ ಮಾಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟರು ಈ ರೀತಿ ಮಾಡುವುದು ಕಡಿಮೆ. ಆದರೆ ಸಲ್ಮಾನ್ ಖಾನ್ ಅವರಿಗೆ ಬೇರೆ ದಾರಿ ಕಾಣದಂತಾಗಿದೆ. ಹಾಗಾಗಿ ಅಭಿಮಾನಿಗಳ ಬಳಿಯೇ ಸಲಹೆ ಕೇಳಲು ಅವರು ಮುಂದಾಗಿದ್ದಾರೆ. ಕೆಲವು ಅಪ್ಪಟ ಅಭಿಮಾನಿಗಳು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಒಂದಷ್ಟು ಸಲಹೆಗಳನ್ನು ಕೊಟ್ಟಿದ್ದಾರೆ. ಅಲಿ ಅಬ್ಬಾಸ್ ಜಾಫರ್, ಕಬೀರ್ ಖಾನ್ ರೀತಿಯ ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ. ಅದನ್ನು ಸಲ್ಮಾನ್ ಖಾನ್ ಅವರು ಒಪ್ಪಿದ್ದಾರೆ.
‘ಸಿಕಂದರ್’ ಸಿನಿಮಾ ಚೆನ್ನಾಗಿಲ್ಲದಿದ್ದರೂ ಕೂಡ ಅಭಿಮಾನಿಗಳು ಸಾಧ್ಯವಾದಷ್ಟು ಪ್ರಚಾರ ಮಾಡಲು ಪ್ರಯತ್ನಿಸಿದ್ದರು. ತಮ್ಮ ಶ್ರಮ ಹೇಗಿತ್ತು ಎಂಬುದನ್ನು ಕೂಡ ಅಭಿಮಾನಿಗಳು ಸಲ್ಮಾನ್ ಖಾನ್ಗೆ ತೋರಿಸಿದ್ದಾರೆ. ಅಲ್ಲದೇ, ಸಲ್ಮಾನ್ ಹಾಗೂ ಫ್ಯಾನ್ಸ್ ನಡುವೆ ಸಂವಹನ ಸರಿಯಾಗಿ ಇರಬೇಕು, ಅದಕ್ಕೆ ಅವರ ಮ್ಯಾನೇಜರ್ ಸೂಕ್ತ ರೀತಿಯಲ್ಲಿ ಸಹಕರಿಸಬೇಕು ಎಂದು ಕೂಡ ಫ್ಯಾನ್ಸ್ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಕೂಡ ಗಂಭೀರವಾಗಿ ಪರಿಗಣಿಸುವುದಾಗಿ ಸಲ್ಮಾನ್ ಖಾನ್ ಭರವಸೆ ನೀಡಿದ್ದಾರೆ.
ಅಂದಾಜು ಒಂದು ಗಂಟೆ ಸಮಯ ಸಲ್ಮಾನ್ ಖಾನ್ ಮತ್ತು ಅಭಿಮಾನಿಗಳ ನಡುವೆ ಮಾತುಕಥೆ ನಡೆದಿದೆ. ಇನ್ಮುಂದೆ ಅಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲೇ ಸಿನಿಮಾ ಮಾಡುವುದಾಗಿ ಸಲ್ಲು ಹೇಳಿಕಳಿಸಿದ್ದಾರಂತೆ. ‘ಸಿಕಂದರ್’ ಸಿನಿಮಾಗೆ ಎ.ಆರ್. ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ನೂರು ಕೋಟಿ ರೂಪಾಯಿ ಗಳಿಸಲು ಪ್ರಯಾಸಪಟ್ಟಿದೆ. ರಶ್ಮಿಕಾ ಮಂದಣ್ಣ ಅವರ ಯಶಸ್ಸಿನ ಓಡಕ್ಕೂ ಈ ಚಿತ್ರದಿಂದ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ: ಸಲ್ಮಾನ್ ಸಿನಿಮಾಗೆ ಚಿಲ್ಲರೆ ಗಳಿಕೆ; ಇನ್ನೂ ನೂರು ಕೋಟಿ ತಲುಪಿಲ್ಲ ‘ಸಿಕಂದರ್’ ಕಲೆಕ್ಷನ್
ಸಲ್ಮಾನ್ ಖಾನ್ ಅವರು ಸೋಲಿನ ಸುಳಿಯಿಂದ ಹೊರಗೆ ಬರಲು ದಾರಿ ಹುಡುಕುತ್ತಿದ್ದಾರೆ. ಉತ್ತಮ ಕಥೆ ಮತ್ತು ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳದೇ ಬೇರೆ ದಾರಿ ಇಲ್ಲ. ಶಾರುಖ್ ಖಾನ್ ರೀತಿ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುವತ್ತ ಸಲ್ಮಾನ್ ಖಾನ್ ಆಲೋಚಿಸಬೇಕಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.