Rain : ಮಳೆ ಬಂತು ಮಳೆ : ನಾ ಹೋತೆ ಒಡೆಯಾ, ಕಮಲೀನಾ ನಾ ಕರಕಂಡೇ ಬತ್ತೆ

Letter : ನಿನ್ನ ಅತಿಯಾದ ಪ್ರೀತಿ ಕೆಲವೊಮ್ಮೆ ಅತೀರೇಕ ಅನಿಸುವುದು ಉಂಟು ಮಾರಾಯ್ತಿ. ಇಡೀ ಜಗತ್ತನ್ನೆ ಪ್ರೀತಿಸುವವಳು ನೀನು. ನಿನ್ನ ಧಿಕ್ಕರಿಸಿ ಯಾರೂ, ಯಾರೂ ಯಾಕೆ ಒಂದು ಹುಲ್ಲು ಕೂಡಾ ಬೆಳೆಯದು ಎನ್ನೋದಂತೂ ಸತ್ಯ. ಅದು ನಿನ್ನತನ ಅಲ್ಲವೇನೆ?

Rain : ಮಳೆ ಬಂತು ಮಳೆ : ನಾ ಹೋತೆ ಒಡೆಯಾ, ಕಮಲೀನಾ ನಾ ಕರಕಂಡೇ ಬತ್ತೆ
ಕವಿಗಳಾದ ಸವಿತಾ ನಾಗಭೂಷಣ ಮತ್ತು ನಾಗರೇಖಾ ಗಾಂವಕರ
Follow us
ಶ್ರೀದೇವಿ ಕಳಸದ
|

Updated on:Aug 07, 2021 | 11:18 AM

ಟಿವಿ9 ಕನ್ನಡ ಡಿಜಿಟಲ್ ; ಮಳೆ ಬಂತು ಮಳೆ (Rain) ಇಂದಿನಿಂದ ಶುರುವಾಗುವ ಹೊಸ ಸರಣಿ. ಚಿತ್ತಬಂದಂತೆ ಸುರಿಯುತ್ತಿರುವ ಮಳೆಗೆ ಸೃಜನಶೀಲ ಆವರಣ ತೊಡಿಸುತ್ತಾರೆ ಅಕ್ಷರ ಪ್ರಿಯರು. ಅವರವರ ಸ್ಮೃತಿಗೆ ಲಹರಿಗೆ ಧಾರೆಗೆ ಮೌನಕ್ಕೆ ಮುರಿಯುವಿಕೆಗೆ ‘ಮಳೆ’ ಇಲ್ಲಿ ಯಾವ ರೂಪದಲ್ಲಿಯೂ ಹರಿಯುವ ಸಾಧ್ಯತೆ ಇರುತ್ತದೆ. ಕಡಿಮೆ ಶಬ್ದಗಳಲ್ಲಿ ಅಗಾಧ ಭಾವಜಾಲವನ್ನು ಬೀಸಿ ಛಕ್ಕನೆ ಇನ್ನೇನನ್ನೋ ಹೊಳೆಯಿಸಿಬಿಡುವ ಅಪರೂಪದ ಕವಿ ಸವಿತಾ ನಾಗಭೂಷಣ, ಸೀಳಿದಷ್ಟೂ ಸುತ್ತುವರೆಯುವ ಚೌಕಟ್ಟುಗಳನ್ನು ಅಷ್ಟೇ ಹರಿತವಾಗಿ ಛೇದಿಸಿ ಕಾವ್ಯಶಿಲ್ಪ ಅನಾವರಣಗೊಳಿಸುವ ಕವಿ, ಅನುವಾದಕಿ ನಾಗರೇಖಾ ಗಾಂವಕರ. ಇವರ ಭಾವಸಂವಾದದೊಂದಿಗೆ ಈ ಸರಣಿ ಆರಂಭಗೊಳ್ಳುತ್ತಿಲಿದೆ. ಶಿವಮೊಗ್ಗದಿಂದ ಹೊರಟ ಸವಿತಾ ಅವರ ‘ಹೊಳೆ ಮಗಳಿಗೆ’ ದಾಂಡೇಲಿಯೆಡೆ ಕೈದೋರಲಾಗಿ, ನಾಗರೇಖಾ ಈಕೆಯನ್ನು ಆಪ್ತ ಗೆಳತಿಯಂತೆ ಬರಮಾಡಿಕೊಳ್ಳುತ್ತಾರೆ.  

ನೀವೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕೆ? ಖಂಡಿತ ಬರೆಯಿರಿ. ಇ-ಮೇಲ್ tv9kannadadigital@gmail.com 

*

‘ಏನೆಲ್ಲಾ ಬದಲಾಗಿದ್ದರೂ ಹೊಳೆ ನೀರು ನೋಡಲು ಹೋಗುವುದನ್ನು ಮಾತ್ರ ವ್ರತದಂತೆ ಪಾಲಿಸುತ್ತಲೇ ಇರುವೆ. ನಾಕು ವರುಷದ ಹಿಂದೆ ಒಬ್ಬಳೇ ಹೋಗಿ ಸೇತುವೆಯ ಮೇಲೆ ನಿಂತು ರಭಸದಿಂದ ಹರಿಯುವ ನದಿಯನ್ನು ನೋಡುತ್ತಾ ಅದೆಷ್ಟು ಹೊತ್ತು ನಿಂತಿದ್ದೆನೋ… ಇಬ್ಬರು ಮೂವರು ಬಂದು ಏನು? ಎತ್ತ? ಒಬ್ಬರೇ ಯಾಕೆ ನಿಂತಿರುವಿರಿ? ಎಂದು ವಿಚಾರಿಸಲು ಬೇಗನೇ ಜಾಗ ಖಾಲಿ ಮಾಡಬೇಕಾಯಿತು. ಅಂತೆಯೇ ಈಗ ಹೊಳೆ ನೋಡಲು ಗೆಳತಿಯರ ಜತೆ ಹೋಗುವೆ. ಹಿಂದಿನಂತೆಯೇ ಬೆರಗಿನಿಂದ ನೀರು ಹರಿಯುವುದನ್ನು ನೋಡುವೆ. ಅದೇ ಕಣ್ಣು! ಅದೇ ಮಣ್ಣು! ನದಿಯ ಆಯಸ್ಸು ಎಷ್ಟು ಹಿರಿದು ನಮ್ಮದೋ ಎಷ್ಟು ಕಿರಿದು… ನೀರೊಳಗಣ ಒಂದು ಬಿಂದು!’ ಹೀಗೆ ಹೇಳುತ್ತಲೇ 1993ರಲ್ಲಿ ತಾವು ಬರೆದ ಕವನವೊಂದನ್ನು ಕಳಿಸಿಕೊಟ್ಟಿದ್ದಾರೆ ಸವಿತಾ ನಾಗಭೂಷಣ.

ಹೊಳೆ ಮಗಳು

ಅವಳು ಹಳ್ಳ ಇವಳು ಹೊಳೆ ಹಳ್ಳದ ಬಳ್ಳಿಯಲಿ ಹರಿದು ಬಂದವಳು ಹೊಳೆ ಮಗಳು

ತಾಯಿ- ಹೊಳೆ ಮಗಳ ಹುಬ್ಬನು ತೀಡುವಳು ಸುಳಿ ಮುಂಗುರುಳ ಬಾಚುವಳು ದಿಟ್ಟಿಯ ಬೊಟ್ಟಿಟ್ಟು ಅಕ್ಕರೆಯ ಮುತ್ತಿಟ್ಟು ಮುನ್ನಡೆಸುವಳು….

ಇದು ಬೆಟ್ಟ ಇದು ಗಾಳಿ ಇದು ಹೂವು ಇದು ಎಲೆ ಎಂದು ಮಗಳಿಗೆ ಪರಿಚಯಿಸುವಳು

ಮಗಳು- ಕಲಿಯುವಳು ಗಿಡ ಮರಗಳ ಅಡಿಯಲಿ ಬಾಗಿ ಕಣಿವೆ ಕೊರಕಲು ಬಂಡೆ ಹಾದಿಯಲಿ ಬಳುಕಿ ಸಾಗುವಳು

ಅವ್ವನಿಗೆ ತೋರುವಳು ಸಂಭ್ರಮಿಸಿ ಹೇಳುವಳು ನಕ್ಷತ್ರ ಗಣವಿರುವುದು ನನ್ನೊಳಗೆ ಚಂದಿರನಿರುವನು ತಳಗೆ

ತಾಯಿ ನಸುನಕ್ಕು- ಸಣ್ಣನೆಯ ದನಿಯವಳೆ ನುಣ್ಣನೆಯ ನಡೆಯವಳೆ ನನ್ನ ಕರುಳಿನ ಕುಡಿಯೆ ನನ್ನ ಆಶೆಯ ಕಿಡಿಯೆ ಎಂದು ಮಗಳ ಮುದ್ದಾಡುವಳು

ತಾಯಿ ಎಚ್ಚರಿಸುವಳು: ಚಿಣ್ಣರನು ಮುಳುಗಿಸದಿರು ಮೀನುಗಳ ಒಣಗಿಸದಿರು ಕಲ್ಲುಗಳ ಮಿದುಗೊಳಿಸಿ ಸಹನೆಯಲಿ ನೀರುಣಿಸಿ ಹರಿವ ಹಾದಿಯಲ್ಲೆಲ್ಲ ಜೀವ ದೀಪವನುರಿಸು

ವಿಷಕಂಠನನುಸರಿಸಿ ಕೊಳೆ ಕಳಂಕವ ಧರಿಸಿ ಕಾಳಿಯಾವೇಶವ ತಾಳಿ ಕೇಡಿನೆದೆಗೂಡ ಸೆಳೆದು ಮಡುವಿನಲಿ ಮುಳುಗಿಸು

ಸೂರ್ಯನ ಕರುಣೆ ನೆಲದ ಋಣ ತಾಯ ಹರಕೆ ಕೊನೆವರೆಗೆ ಕಾಯುವುದು

ತಾಯಿ ನಿಂತಲ್ಲೆ ನಿಲ್ಲುವಳು ತಪಸ್ವಿನಿ ‘ತಾವರೆ’ ಈಗವಳು ಹಳ್ಳದ ಬಳ್ಳಿಯನು ಕಡಿದು ಕಣ್ಣೀರ ತಡೆ ತಡೆದು ಮುಂದೆ ಸಾಗುವಳು ಹಿಂದೆ ನೋಡುವಳು ಹೊಳೆ ಮಗಳು. *

2021ರ ಈ ಹೊತ್ತಿನಲ್ಲಿ ನಾಗರೇಖಾ ಮಳೆಗೆಳತಿಗೆ ಏನೆಂದು ಪತ್ರಿಸಿರಬಹುದು?

ಪ್ರಿಯ ವರ್ಷಾ,

ಹೇಗಿರುವೆ? ವರ್ಷದಲ್ಲಿ ಸರಿಸುಮಾರು ನಾಲ್ಕು ತಿಂಗಳು ಕೆಲವೊಮ್ಮೆ ಇನ್ನೂ ಹೆಚ್ಚು ನಮ್ಮೊಂದಿಗೆ ಇರುವ ಅತಿಥಿ ನೀನು. ನಿನ್ನೊಡನೆ ಮಾತನಾಡದೇ ಇರುವುದಾದರೂ ಹೇಗೆ ಹೇಳು? ನನ್ನಿಂದಂತೂ ಸಾಧ್ಯವೇ ಇಲ್ಲ. ನೀನು ಜೊತೆ ಇರುವಷ್ಟು ದಿನವೂ ನನಗೆ ನಿನ್ನೊಂದಿಗಿನ ಸ್ನೇಹ, ಮೋಹ, ವಿರಸ ಇವೆಲ್ಲ ಬೇಕೇ ಬೇಕೆನಿಸುತ್ತವೆ. ಹಾಗಾಗೇ ಈ ಪತ್ರ. ನಿನ್ನ ಅತಿಯಾದ ಪ್ರೀತಿ ಕೆಲವೊಮ್ಮೆ ಅತೀರೇಕ ಅನಿಸುವುದು ಉಂಟು ಮಾರಾಯ್ತಿ. ಇಡೀ ಜಗತ್ತನ್ನೆ ಪ್ರೀತಿಸುವವಳು ನೀನು. ನಿನ್ನ ಧಿಕ್ಕರಿಸಿ ಯಾರೂ, ಯಾರೂ ಯಾಕೆ ಒಂದು ಹುಲ್ಲು ಕೂಡಾ ಬೆಳೆಯದು ಎನ್ನೋದಂತೂ ಸತ್ಯ . ಅದು ನಿನ್ನತನ ಅಲ್ಲವೇನೆ? ಇರಲಿ ಈಗ ನಾನು ನಿನಗೆ ಹೇಳ ಹೊರಟಿದ್ದೇನು ಗೊತ್ತಾ?

“ಮಳೆ ಬಂತು ಮಳೆ, ಕೊಡೆ ಹಿಡಿದು ನಡೆ, ಕೆಸರಿನಲ್ಲಿ ಜಾರಿ ಬಿದ್ದು, ಬಟ್ಟೆಯೆಲ್ಲಾ ಕೊಳೆ”

ಪೂರ್ವ ಪ್ರಾಥಮಿಕ ಹಂತದಲ್ಲಿ ಕಲಿತ ಈ ಮಕ್ಕಳ ಪದ್ಯ ಇತ್ತಲ್ಲ. ನಿನ್ನ ಬಗ್ಗೆನೇ ಬರೆದಿದ್ದು. ಈ ಹಾಡು ಹೇಳ್ತಾ ನಾವು ಶಾಲೆಗೆ ಹೋಗ್ತಿದ್ವಿ. ಬೇಸಿಗೆ ಝಳಕ್ಕೆ ಬಳಲಿದ ಮೈಮನಕ್ಕೆ ನಿನ್ನ ಆಲಿಂಗನ ಎಷ್ಟು ಹಿತವಾಗರ‍್ತಿತ್ತು. “ಮಳೆ ಎಂಬ ಮಾಯಾವಿ” ಹಾಗೇ ನೀನು ಇದ್ದೆ. ಮತ್ತೆ ಈಗಲೂ ಹಾಗೇ ಇದ್ದಿ. ನೀನೊಂಥರಾ ಮಾಯಾವಿನೇ! ನಿಂಗೇ ಗೊತ್ತೇ ಇದೆ. ಜನರ ಸ್ವಭಾವ. ಮಳೆ ಶುರುವಾಗುತ್ತ ಕಳೆದ ವರ್ಷದ ಮಳೆಗಾಲದ ನೆನಪು ಅದನ್ನು ಈ ಮಳೆಗಾಲದೊಂದಿಗೆ ತಳಕು ಹಾಕುವುದು ಮನುಷ್ಯನ ಸರ್ವೇಸಾಮಾನ್ಯ ಗುಣ. ಮಳೆ ಎಂದೊಡನೆ ಮೊದಲ ನೆನಪು ಕೊಡೆ. ‘ಕೊಡೆ ಮತ್ತು ಮಳೆ’ಅದರೊಂದಿಗೆ ನಮ್ಮ ಒಡನಾಟ ಅಬಾಲವೃದ್ದರಾಗಿ ಭಿನ್ನವಾಗಿತ್ತು ಬಾಲ್ಯದ ಮಳೆಗಾಲದ ಅನುಭವ ಒಂದಾದರೆ ಯೌವನದ ಮಾದಕತೆಯಲ್ಲಿ ಪಡೆದ ಮಳೆಯ ಅನುಭವವೇ ಇನ್ನೊಂದು ಥರವಾಗಿತ್ತು.

ಬಾಲ್ಯದಲಿ ಮಳೆಗಾಲ ಪ್ರಾರಂಭವಾಗುತ್ತಲೇ ನಮಗೆಲ್ಲಾ ಇರುಸು ಮುರುಸಾಗುತ್ತಿತ್ತು. ಆಟವಾಡಲು ಬೇಸಿಗೆಯಂತೆ ಅವಕಾಶವಿಲ್ಲವಲ್ಲ ಅಂತಾ ಬೇಸರ ಆಗತಿತ್ತು. ಆದರೆ “ಧೋ…” ಎಂದು ಎಡಬಿಡದೇ ನಮ್ಮ ಕರಾವಳಿಯಲ್ಲಿ ನಿನ್ನ ಬಗ್ಗೆ ಬರಬರುತ್ತ ದಿನಗಳೆಯುತ್ತಿದ್ದಂತೆ ಆಪ್ತತೆ ಶುರುವಾಗಿ ಬಿಡತಿತ್ತು. ಆ ಸ್ನೇಹ ಅದೆಷ್ಟು ಮಧುರವಾಗಿರುತ್ತಿತ್ತು. ಗದ್ದೆಯಲ್ಲಿ ನಿಂತ ನೀರಿನಲ್ಲಿ ಆಗತಾನೆ ಹೊರ ಬಿದ್ದ ಗುಳ್ಳೆ (ಮುಂಗಾರು ಪ್ರಾರಂಭವಾಗುತ್ತಲೇ ಗದ್ದೆಗಳಲ್ಲಿ ಒಂದು ರೀತಿಯ ಶಂಖದ ಹುಳುವಿನಂತಹ ಹೊರಭಾಗದಲ್ಲಿ ಗಟ್ಟಿ ಚಿಪ್ಪುಹೊಂದಿದ ಮೃದ್ವಂಗಿಯಂತಹ ಹುಳುಗಳು ಏಳುತ್ತವೆ. ಕರಾವಳಿಯ ಭಾಗಗಳಲ್ಲಿ ಮಾಂಸಾಹಾರಿ ಜನಾಂಗದವರು ಈ ಹುಳುಗಳನ್ನು ಆಯ್ದು ಆಹಾರಕ್ಕೆ ಬಳಸುವುದಿದೆ. ಇದು ದೇಹಕ್ಕೆ ತಂಪು ಎಂಬ ಕಾರಣಕ್ಕೆ ವರ್ಷಕ್ಕೊಮ್ಮೆ ತಿನ್ನುವುದು ಆರೋಗ್ಯಕ್ಕೆ ಹಿತಕರ ಎಂಬ ವಾಡಿಕೆ ಕೂಡಾ ಇದೆ) ಆಯಲು ಅಜ್ಜನ ಕಟ್ಟಿಗೆ ಹಿಡಿಕೆಯ ಕೊಡೆ ಇಲ್ಲವೇ ಗದ್ದೆ ಕೆಲಸಕ್ಕೆ ಬರುತ್ತಿದ್ದ ಹೆಣ್ಣಾಳುಗಳು ತರುತ್ತಿದ್ದ ಮಂಡಗೊಡೆ (ಗೊರಬು) ಹಿಡಿದು ನನ್ನಕ್ಕ ಮತ್ತು ನಾನು ನಾ ಮುಂದು ನೀ ಮುಂದು ಎಂದು ಹೋಗುತ್ತಿದ್ದ ನೆನಪು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಮತ್ತಲ್ಲಿಯೇ ಇಬ್ಬರಿಗೂ ಕೊಡೆಯ ಸಲುವಾಗಿಯೋ, ಇಲ್ಲ ಗುಳ್ಳೆ ಸಂಗ್ರಹಿಸುವಲ್ಲಿ ಹೆಚ್ಚು ಕಡಿಮೆ ಎಂದೋ ಭಿನ್ನಾಭಿಪ್ರಾಯ ಬಂದು ಜಗಳ ಮಾಡಿಕೊಂಡು ಮಳೆಯಲ್ಲಿಯೇ ಒಬ್ಬರೂ ಒದ್ದೆಯಾಗುತ್ತ ತಕರಾರು ಪಟ್ಟಿ ಹಿಡಿದು ಮನೆ ದಾರಿ ಹಿಡಿಯುತ್ತಿದ್ದೆವು. ನನ್ನಕ್ಕನನ್ನಾದರೆ ಅಮ್ಮ ಕರೆದು ತಲೆ ಒರೆಸಿ, ಶಾಂತಳನ್ನಾಗಿಸಿದರೆ, ನನ್ನನ್ನು ತಂದೆ ಪುಸಲಾಯಿಸುತ್ತಿದ್ದರು. ಅದೆಲ್ಲ ಈಗ ನೆನಪಾದರೆ ನಿನಗೊಂದು ಪತ್ರ ಬರೆಯಲಾಗದೇ ಇರಲಾಗುತ್ತಿಲ್ಲ.

ನೀನಂತೂ ದಬಾದಬಾ… ಸುರಿತಾನೇ ಇರ‍್ತಿದ್ದೆ. ಮಂಡಗೊಡೆ (ಗೊರಬು) ಹಿಡಿದು ಅಂಗಳದಲ್ಲಿ ಗುಳ್ಳೆಗಳನ್ನೆಲ್ಲಾ ಹರಡಿ ಮಾಂಸ ತೆಗೆದು, ಉಪ್ಪು ನೀರಲ್ಲಿ ಮೂರ‍್ನಾಲ್ಕು ಬಾರಿ ತೊಳೆದರೆ ಅದರ ಕೊಳೆಯಲ್ಲಾ ಹೋಗಿ ಮಸಾಲೆ ಬೆರೆಸಲು ಸಿದ್ಧವಾಗುತ್ತಿತ್ತು. ಮಾಡಿದ ಜಗಳ, ತಿಂದ ಪೆಟ್ಟು ಎಲ್ಲಾ ಮರೆತು ಊಟಕ್ಕೆ ಕುಳಿತರೆ ಗಮ್ಮತ್ತು ಗಡದ್ದಾಗಿರುತ್ತಿತ್ತು. ಇನ್ನು ಕೆಲವೊಮ್ಮೆ ಅಣ್ಣಂದಿರು ಗದ್ದೆಗೆ ಹಳ್ಳದಿಂದ ಬರಮಾಡಿದ ಸಣ್ಣ ಬೆಲಗಿಗೆ ತೆಂಗಿನ ಗರಿಯ ಕಡ್ಡಿಗಳಿಂದ ಮಾಡಿದ ಕೂಳಿಯನ್ನು ಇಟ್ಟುಬರುತ್ತಿದ್ದರು. ಎರಡೆರಡು ಬೆಳೆ ತೆಗೆಯುವ ಕಾರ ಗದ್ದೆಗಳಿಗೆ ನೀರು ಹನಿಸಲು ಸಣ್ಣ ಬೆಲಗಿಗೋ ಹೀಗೆ ಇಟ್ಟು ಬಂದ ಒಂದೆರಡು ತಾಸುಗಳಲ್ಲಿ ದಿಣಸಿ ಮೀನುಗಳ (ಉತ್ತರ ಕನ್ನಡದಲ್ಲಿ ಸಿಹಿನೀರಿನ ಚಿಕ್ಕ ಚಿಕ್ಕ ಮೀನುಗಳಿಗೆ ದಿಣಸಿ ಮೀನು ಎನ್ನುವರು) ಭರ್ಜರಿ ಬೇಟೆಯಾಗಿರುತ್ತಿತ್ತು. ಆ ದಿನದ ಮಟ್ಟಿಗೆ ದಿಣಸಿ ಮೀನುಗಳಿಂದ ಮಾಡಿದ ಸಾರು ನಿನ್ನ ಮುಸಲ ಧಾರೆಯಿಂದ ಚಳಿ ಹತ್ತಿದ ರಾತ್ರಿಗೆ ಮೃಷ್ಟಾನ್ನದಂತಿರುತ್ತಿತ್ತು. ಈಗ ನೆನಪಾದರೆ ಬಾಯಲ್ಲಿ ನೀರೂರುತ್ತೆ.

ಮಂಡಗೊಡೆಯಲ್ಲಿ ಮಳೆಯಲ್ಲಿ ಆಡಿದ ಆಟಗಳಿಗೆ ಕೊನೆಯಿಲ್ಲ. ಈಗೀನ ಟಿ.ವಿ.ಕೊಡೆಯಂತೆ ಕಾಣುವ ಆ ಕೊಡೆಗಳು ಸರಿಯಾಗಿ ಹಿಡಿದರೆ ದೇಹದ ಯಾವ ಭಾಗವನ್ನು ಪಾದವನ್ನುಳಿದು ಒದ್ದೆಮಾಡುತ್ತಿರಲಿಲ್ಲ. ಕೊಡೆ ಮಳೆಗಷ್ಟೇ ಅಲ್ಲದೆ ಕಣ್ಣುಮುಚ್ಚಾಲೆಯಾಡಲು ಸಕತ್ತು ಸಾಧನವಾಗಿತ್ತು ಅಲ್ಲವೇ? ಯಾಕೋ ಏನೋ ಈ ಕೊಡೆಯ ವಿಚಾರ ಬಿಚ್ಚಿಕೊಂಡಂತೆ ನೆನಪುಗಳ ಸಾಲು ಕೊಡೆಯ ಕಡ್ಡಿಗಳಂತೆ ಎಲ್ಲಾ ದಿಕ್ಕಿನಿಂದಲೂ ಏಕಕಾಲದಲ್ಲಿ ಬಿಚ್ಚಿಕೊಳ್ಳುತ್ತಿದೆ. ಜೂನ ತಿಂಗಳಲ್ಲಿ ಗದ್ದೆಯ ಉಳುಮೆ ಶುರುವಾಗುತ್ತಿದ್ದಂತೆ ಪ್ರಾಥಮಿಕ ಹಂತದಲ್ಲಿ ಕಲಿಯುತ್ತಿದ್ದ ನಾವು ಸಂಜೆ ಮನೆಗೆ ಬಂದಂತೆ ಕೆಲಸಕ್ಕೆ ಬರುವ ಹೆಂಗಸರ ನಕಲು ಮಾಡುತ್ತಿದ್ದೆವು. ಅವರಂತೆ ಪ್ಲಾಸ್ಟಿಕ್ಕಿನ ಸೂಡಿಯಲ್ಲಿ ಅರ್ಧಮರ್ಧ ಮೈ ಮುಚ್ಚಿಕೊಂಡು ಅರ್ಧ ನೆನೆಯುತ್ತ ನಾಟಿ ಮಾಡಲು ಹೋಗಿ ಸ್ವಚ್ಛಂದ ಆನಂದ ಅನುಭವಿಸುತ್ತಿದ್ದೆವು. ನಿನಗೆ ನೆನಪಿದೆಯಾ? ಆಗೆಲ್ಲ ನಾವು ಬಣ್ಣದ ಕೊಡೆ ಹಿಡಿತಿರಲಿಲ್ಲ. ನಮ್ಮಲ್ಲಿ ಇರಲೂ ಇಲ್ಲ. ಆಗೆಲ್ಲ ಕೆಲಸದಾಳುಗಳು ಮಂಡಗೊಡೆ ಇಲ್ಲ ಪ್ಲಾಸ್ಟಿಕ್ಕಿನ ಸೂಡಿ ಬಳಸಿದರೆ, ಹಿರಿಯರು ಕಟ್ಟಿಗೆಯ ಹಿಡಿಯ ಕೊಡೆ ಹಿಡಿಯುತ್ತಿದ್ದರು. ಸ್ವಲ್ಪ ಫ್ಯಾಶನ್ ಪ್ರಿಯರು ಈಗಿನಂತಹ ಕೊಡೆ ಬಳಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವರ್ಷಕ್ಕೊಂದು ಹೊಸ ಕೊಡೆ ಈಗ ಬೇಕು. ಬಾಳಿಕೆ ಕೂಡ ಕಡಿಮೆ.

series on rain

ಸೌಜನ್ಯ : ಅಂತರ್ಜಾಲ

ಇನ್ನು ಒಂದು ಸ್ವಾರಸ್ಯಕರವಾದ ಅನುಭವ ಇತ್ತಲ್ಲ. ನಿನಗೆ ನೆನಪಿಸಲೇಬೇಕು. ಗದ್ದೆಗೆ ಬಿತ್ತನೆ ಮಾಡಿದ ಮೇಲೆ ಚಿಕ್ಕವರಾದ ನಮ್ಮ ಕೆಲಸ ಏನಾಗಿತ್ತು ಹೇಳು? ಶಾಲೆಯಿಂದ ಬಂದೊಡನೆ ಹಕ್ಕಿ ಕಾಯುವುದಾಗಿತ್ತು. ಆಗೆಲ್ಲ ಹೊಲದ ಮಧ್ಯೆ ಇರುವ ಗದ್ದೆಯ ಹಾಳೆಯ ಅಗಲ ಜಾಗದಲ್ಲಿ ಕೊಡೆ ಬಿಚ್ಚಿ ಕೂತು ಬತ್ತ ತಿನ್ನಲು ಬರುತ್ತಿದ್ದ ಗುಬ್ಬಿಗಳನ್ನು ಹಾರಿಸುತ್ತಿದ್ದೆವು. ಆಲೆಮನೆ ಬೆಲ್ಲ ಮತ್ತು ಶೇಂಗಾ ಕೊಂಡೊಯ್ದು ಕದ್ದು ಮರೆಯಲ್ಲಿ ತಿನ್ನುತ್ತಿದ್ದೆವು. ಆ ಕಾಲ ಮತ್ತೆ ಬರ‍್ತಾ ಇಲ್ಲ. ಬೇಸರವಾಗುತ್ತೆ ನೆನಪಾದರೆ. ನೀನು ಮಾತ್ರ ಮೊದಲಿಗಿಂತ ಇನ್ನೂ ಹೆಚ್ಚು ಆಕರ್ಷಕ ಕೆಲವೊಮ್ಮೆ, ಕೆಲವೊಮ್ಮೆ ರೌದ್ರ ಅವತಾರ ತಾಳುತ್ತಿರುವೆ. ಈ ಪರಿ ಹೇಗೆ ಬದಲಾದೆ? ಬಹುಶಃ ನೀನು ಬದಲಾಗಿಲ್ಲ. ನಾವುಗಳೇ ನಿನ್ನ ಬದಲಾಯಿಸಿರಬೇಕು. ನಿನ್ನ ಅತಿವೃಷ್ಟಿ ಅನಾವೃಷ್ಟಿಗೆ ನಮ್ಮ ಕಾಡು ನಾಶವೇ ಕಾರಣ ಅಂತಾರಲ್ಲ ತಜ್ಞರು. ಅದೂ ಸತ್ಯವೇ ಅಂತಾ ನನಗನ್ನಿಸುತ್ತಿದೆ.

ಇನ್ನು ನಿನ್ನ ಆರ್ಭಟ ನಿಂತ ದಿನಗಳಲ್ಲಿ ತೋಟದಲ್ಲಿ ಬಿದ್ದ ಅಡಿಕೆಗಳ ಆರಿಸಲು ಹೋದಾಗಲೆಲ್ಲಾ ಗಿಡದ ಬುಡದಲ್ಲಿ ನೀರಲ್ಲಿ ತೇಲುತ್ತ ಮುಳುಗುತ್ತ ಬರುತ್ತಿದ್ದ ಚಿತ್ರವಿಚಿತ್ರ ಕೆರೆಟ, ಕಂಬಳಿ ಹುಳು ಹುಪ್ಪಡಿಗಳ ಮೇಲೆಲ್ಲಾ ನಮ್ಮ ಪ್ರಯೋಗವಾಗುತ್ತಿತ್ತು. ಹೆಣ್ಣು ಮಕ್ಕಳಿಗೆ ಕನಿಕರ ಜಾಸ್ತಿಯಂತೆ. ಹಾಗಾಗಿ ಅಡಿಕೆ ಹೆಕ್ಕುವ ಬದಲು ಹುಳಗಳ ಬದುಕಿಸುವ ಕೈಂಕರ್ಯವೇ ಪವಿತ್ರವೆಂದು ಮಾಡುವ ಕೆಲಸ ಬಿಟ್ಟು ಆ ಕೆಲಸದಲ್ಲೆ ತಲ್ಲಿನರಾಗಿಬಿಡುತ್ತಿದ್ದೆವು. ಕೊನೆಯಲ್ಲಿ ಸಣ್ಣಗಿನ ಮಳೆಯಲ್ಲಿ ತೋಯ್ದು ಅಲ್ಲೆ ಆಟವಾಡಿ ಜಗಳವೂ ಆಡಿ ಮನೆಗೆ ಬಂದು ಅರ್ಧಮರ್ಧ ಕೆಲಸ ಮಾಡಿದ್ದಕ್ಕೆ ತಂದೆ ತಾಯಿಯಿಂದ ಬೈಸಿಕೊಳ್ಳುತ್ತಿದ್ದೆವು. ಆದರೆ ನೋಡು!

ಅದೇ ನಮ್ಮ ಮಕ್ಕಳು ರೇಡಿಮೇಡು ಬ್ರಾಂಡುಗಳು. ಮಳೆಗಾಲಕ್ಕೆ ಊರಿಗೆ ಹೋದಾಗ ತೋಟಕ್ಕೆ ಕರೆದೊಯ್ದರೆ ಹುಳಗಳ ಹಿಡಿಯುವುದು ಹೋಗಲಿ ಹುಳವಿದೆ ಎಂದು ತಿಳಿದರೆ ನೀರಲ್ಲಿ ಕಾಲಿಡಲೇ ಒಲ್ಲರು. ಆ ಚಿಕ್ಕ ಹುಳಗಳನ್ನು ಎದುರಿಸುವ ತಾಕತ್ತಿಲ್ಲದ ನವ ಪೀಳಿಗೆ ಇದು. ಅಲ್ವಾ? ನಿನ್ನ ನಾವು ಎದುರಿಸಿದ ಹಾಗೇ ಈಗಿನ ಮಕ್ಕಳು ಎದುರಿಬಲ್ಲವೇ? ಏನನ್ನಿಸುತ್ತೆ ನಿನಗೆ?

ನೀ ಏನೇ ಹೇಳು? ಮನಸ್ಸಿನ ಕಡಲಿಗೆ ಅಲೆಅಲೆಯಾಗಿ ತಾಕುವ ಸುಂದರ ನೆನಪುಗಳೆಂದರೆ ಅದು ಬಾಲ್ಯದ ಅನುಭವಗಳ ತೆರೆಗಳೇ. ಎಷ್ಟೋ ಉಬ್ಬರ ಇಳಿತಗಳ ಹೊದ್ದ ಬದುಕು ನಿತ್ಯ ರೂಪಾಂತರದ ಪ್ರಪಂಚದಲ್ಲಿ ಹೊಡೆಮರಳಿ ಮಗುಚಿ ಎದ್ದು ಪುಟಿಯುತ್ತ ಮತ್ತೆ ಚಿಲುಮೆಯಾಗುತ್ತ ಸಾಗುತ್ತಲೇ ಇರುತ್ತದೆ. ಬಾಲ್ಯದ ಚಿಗುರು ತೆರೆಗಳು ಕೂಡಾ ವಿಸ್ಮಯಕಾರಿ. ಒಳಹರಿವಿನಲ್ಲಿ ಕಲ್ಪನೆಯ ಮೂಸೆಯಲ್ಲಿ ಸಾರಾಸಗಾಟ ಸಾಗಿ ಬರುತ್ತಲೇ ಇರುತ್ತದೆ.

ನಿಂಗೇ ಗೊತ್ತಿದೆ. ಆಗ ತಂದೆ ಹೊರ ಊರಲ್ಲಿ ನೌಕರಿಯಲ್ಲಿದ್ದರು. ತಾಯಿ ಮಕ್ಕಳ ಕಟ್ಟಿಕೊಂಡು ಜಮೀನಿನ ಉಸ್ತುವಾರಿ ಹೊತ್ತು ಪಟ್ಟಣದಿಂದ ಹಳ್ಳಿಗೆ ಬಂದೇಬಿಟ್ಟರು. ಪಟ್ಟಣದಲ್ಲಿ ಶಾಲೆ ಕಲಿಯುತ್ತಿದ್ದ ಮಕ್ಕಳು ಆ ಹಳ್ಳಿಯ ಶಾಲೆಯ ಸ್ವಚ್ಛಂದ ಪರಿಸರದಲ್ಲಿ ಸರಕಾರಿ ಶಾಲೆಯಲ್ಲಿ ಶ್ರೀಮಂತ ಜೀವನಾನುಭವ ಪಡೆಯುತ್ತ ಬೆಳೆದಿದ್ದು ನಮ್ಮ ಪುಣ್ಯ. ಬದುಕಿನ ಜ್ಞಾನೋದಯದ ಕಾಲ. ಎಲ್ಲವೂ ವಿಚಿತ್ರವಾಗಿ ಆಕರ್ಷಕವಾಗಿ ಕಾಣುವ ಕಾಲ. ಮನೆಯ ತೋಟದ ಕೆಲಸಗಳಿಗೆಲ್ಲ ಮನೆಯಲ್ಲಿ ಖಾಯಂ ಆಗಿ ಒಂದು ಹೆಣ್ಣಾಳು ಹಾಗೂ ಒಂದು ಗಂಡಾಳು ಇದ್ದರು. ನಿನಪಿರಬೇಕು ನಿನಗೆ. ಆತ ಸೊಣಸೊಣ ನಾಗಪ್ಪ. ಮೂಗಿನಲ್ಲೆ ಮಾತಾಡಿದಂತೆ ಮಾತಾಡುವ ಅವನ ನಾವೆಲ್ಲ ಸೊಣಸೊಣ ನಾಗಪ್ಪ ಅಂತಲೇ ಕರೆಯುತ್ತಿದ್ದೆವು. ಆಗ ಸುಮಾರು ಮೂವತ್ತರ ಹರೆಯದ ಆತ ಅವಿವಾಹಿತ. ನಮಗೆಲ್ಲಾ ತುಂಬಾ ಅಪ್ತ. ಅವನ ಅಣಕಿಸುವುದೆಂದರೆ ನಮಗೇನೋ ತುಂಬಾ ಖುಷಿ. ಆತ ಬಹಳ ಒಳ್ಳೆಯವನಾಗಿದ್ದ. ಅಣ್ಣಂದಿರು ಆತನಿಗೆ ತೊಂದರೆ ಕೊಟ್ಟು ಸತಾಯಿಸುತ್ತಿದ್ದರೆ ಒಮ್ಮೊಮ್ಮೆ ಹೊಡೆಯಲು ಬರುತ್ತಿದ್ದ. ಆಗೆಲ್ಲಾ ನಾವು ಆತನ ಕೈಗೆ ಸಿಗದೆ ಓಡಿಹೋಗುತ್ತಿದ್ದೆವು. ಕೆಲವೊಮ್ಮೆ ಆತ ಚಾಡಿ ಹೇಳಲು ಚಿಕ್ಕಮಕ್ಕಳು ಕರೆದಂತೆ ಅಮ್ಮಾ… ಎಂದು ನನ್ನಮ್ಮನಿಗೆ ಕರೆಯುತ್ತಿದ್ದ. ಆತ ಕೂಗಿ ಕರೆವ ಲಯ ಗತಿ ವಿಭಿನ್ನವಾಗಿದ್ದು ನಮಗೋ ಮತ್ತಷ್ಟೂ ಹುಚ್ಚು ನಗೆಗೆ ಬೆಂಕಿ ಹಚ್ಚಿದಂತೆ ಮಜವಾಗುತ್ತಿತ್ತು.

ಅವನ ಅನುಕರಿಸಿ ನಾವು ಹೇಳುವುದು ಅದಕ್ಕಾತ ಕೆಂಡಾಮಂಡಲವಾಗುವುದು ಸರ್ವೇಸಾಮಾನ್ಯವಾಗಿತ್ತು. ಬುದ್ದಿಯಲ್ಲೂ ತೀಕ್ಷ್ಣಮತಿಯಲ್ಲವಾದರೂ ಆತ ಮನೆಯವರಲ್ಲಿ ಒಬ್ಬನಾಗಿದ್ದ. ಅವನೊಂದಿಗೆ ಮನೆಗೆಲಸಕ್ಕೆ ಇದ್ದ ಹೆಣ್ಣಾಳು ಕೂಡಾ ಮದುವೆಯಾಗಿ ಗಂಡ ಬಿಟ್ಟು ಹೋಗಿದ್ದ. ಆದರೂ ನಾಗಪ್ಪ ಆಕೆಯೆಂದರೆ ಪಂಚಪ್ರಾಣದಂತೆ ವರ್ತಿಸುತ್ತಿದ್ದ. ಆದರೆ ಆಕೆಗೆ ಆತನೆಂದರೆ ಇಷ್ಟವಿರಲಿಲ್ಲ. ಆತನ ಹುಂಬ ಹುಚ್ಚು ವರ್ತನೆ ಆಕೆಗೆ ಸೇರುತ್ತಿರಲಿಲ್ಲ. ಆಕೆ ಮಿತಭಾಷಿಯಾಗಿದ್ದಳು. ಕೆಲಸಗಾರ್ತಿಯಾಗಿದ್ದಳು. ಆಕೆ ಹೆಸರು ಕಮಲಿ ಎಂದಾಗಿತ್ತು ಬೆಳ್ಳಗೆ ತೆಳ್ಗಗೆ ಇದ್ದ ಆಕೆಗೆ ಒಬ್ಬ ಮಗನೂ ಇದ್ದ. ಹಾಗಾಗಿ ಆಕೆ ಮಗನ ತನ್ನ ಭವಿಷ್ಯ ಯೋಚಿಸುತ್ತಿದ್ದಳು ಈ ಮಳ್ಳನನ್ನು ಕಟ್ಟಿಕೊಂಡು ಅವನನ್ನು ತಾನೇ ಸಾಕುವ ಪರಿಸ್ಥಿತಿ ಬಂದರೆ ಎಂಬ ಚಿಂತೆಯೂ ಅದು ತನ್ನಿಂದಾಗದು ಎಂಬ ಪ್ರಜ್ಞೆಯೂ ಆಕೆಯದಾಗಿತ್ತು.

ಅದೊಂದು ದಿನ ನಿನ್ನ ಆರ್ಭಟ ಹೇಳತೀರದು. ಸಿಕ್ಕಾಪಟ್ಟೆ ಸುರಿದು ರಸ್ತೆ ಗದ್ದೆ ಹಳ್ಳ ಯಾವುದೆಂದೂ ಗುರುತಿಸಲಾಗದಂತೆ ಒಂದೇ ಸಮನೇ ನೆಲದ ಮೇಲಿನ ಸಿಟ್ಟಿಗೆ ಆಕೆಯ ಸಂಪೂರ್ಣ ತೋಯಿಸಿ ತುಪ್ಪೆಯಾಗಿಸುವ ಹಠಕ್ಕೆ ಬಿದ್ದಂತೆ ಬೋರೆಂದು ಸುರಿಯುತ್ತಿದ್ದೆ. ನಾವೆಲ್ಲ ಮಕ್ಕಳು ಬೆಚ್ಚಗೆ ಅಡುಗೆ ಒಲೆಯ ಹತ್ತಿರ ನಾಣಿಗೆ ಒಲೆಯ ಹತ್ತಿರ ಬಿಸಿ ಕಾಯಿಸಿಕೊಳ್ಳುತ್ತ ಇದ್ದೆವು. ಅಣ್ಣಂದಿರು ನಾಗಪ್ಪ ಕಮಲಿ ಅಮ್ಮ ಅಪ್ಪ ಅವರೆಲ್ಲ ತುಂಬಾ ಗಹನವಾಗಿ ಗದ್ದೆ ಕೆಲಸ ಕಾರ್ಯಗಳಿಗೆ ಅಡಚಣೆಯಾದ್ದರ ಬಗ್ಗೆ ಮಾತಾನಾಡುತ್ತಿದ್ದರು. ಬಿತ್ತನೆ ಮುಗಿದು ಅದ ಕಿತ್ತು ನೆಟ್ಟಿ ಮಾಡುವ ಸಂಪ್ರದಾಯವಿತ್ತು ನಮ್ಮ ಕೃಷಿಯಲ್ಲಿ. ಹಾಗಾಗಿ ಜುಲೈ ತಿಂಗಳಿನಲ್ಲಿ ಇವೆಲ್ಲ ಭರಾಟೆಯಿಂದ ನಡೆಯುತ್ತಿದ್ದವು. ಆಳುಗಳು ಮಳೆಗೆ ಹೆದರಿ ಬಂದಿರಲಿಲ್ಲ. ನಿನ್ನೆಯಷ್ಟೇ ಗದ್ದೆಗೆ ನೀರು ಬಿಟ್ಟು ಹದಮಾಡಿ ಬಂದಿದ್ದ ನಾಗಪ್ಪ. ನೆಟ್ಟಿಗೆ ಅನುಕೂಲವಾಗುವಂತೆ. ಆದರೆ ಈಗ ಧಾರಾಕಾರ ಮಳೆಯಿಂದ ಗದ್ದೆಯಲ್ಲಿ ನೀರು ಉಕ್ಕಿ ಹರಿದರೂ ಅದು ಅಲ್ಲಿಯೇ ಸಂಗ್ರಹವಾಗಿ ನಾಳೆಗೆ ಅನಾನುಕೂಲವಾಗುವುದು. ಬೇಕಾದಷ್ಟೇ ನೀರಿದ್ದರೆ ಒಳಿತು ಎಂದು ಗದ್ದೆ ಹಾಳೆಗಳಲ್ಲಿ ಇರುವ ಹರಗಂಡಿ ಬಾಯಿ ತೆರೆದುಕೊಟ್ಟು ನೀರು ಸುರಿದುಹೋಗಲು ಅನುವು ಮಾಡಿಕೊಡುವ ಸಲುವಾಗಿ ನಾಗಪ್ಪ ಗದ್ದೆ ಕಡೆ ಹೊರಟ.

ಅದೂ ಸ್ವಲ್ಪ ಮಳೆ ನಿಂತ ಸಮಯ ನೋಡಿ ಹಳ್ಳ ದಾಟಿ ಆ ಕಡೆ ಇರುವ ಕಾರ ಗದ್ದೆಗೆ ಹೊರಟ. ಆತನ ಹಿಂಬಾಲಿಸಿ ಕಮಲಿಯೂ ಅವರ ಹಿಂದೆ ಅಣ್ಣ ಮತ್ತು ತಂದೆ ಎಲ್ಲರೂ ಹೊರಟರು. ನಾಗಪ್ಪ ಮುಂದೆ ಮುಂದೆ ಉಳಿದವರು ಹಿಂದೆ. ಹಳ್ಳ ಮದುಮಗಳಂತೆ ಮೈತುಂಬಿ ಕುಣಿಯುತ್ತ ಚಿಗರೆಯಂತೆ ಬಾಗಿ ಬಳಕುತ್ತ ಹರಿಯುತ್ತಿತ್ತು. ಹಳ್ಳದ ಲಯದ ಪರಿಚಯವಿದ್ದವರಿಷ್ಟೇ ಆ ಹೆಣ್ಣ ಒಳಗರ್ಭದ ಸುಳಿಯ ಅರಿವಿರಲು ಸಾಧ್ಯ. ಧಾರಾಕಾರ ಸುರಿದ ಮಳೆಯ ಎಲ್ಲ ನೀರು ಈಗ ಮಲೆಗಳಿಂದ ಇಳಿದು ಹಳ್ಳದ ಜಾಡು ಕಂಡು ಹಿಡಿದು ಸೇರಿಕೊಳ್ಳತೊಡಗಿತ್ತು. ಸಂದಿಗೊಂದಿಗಳಲ್ಲೆಲ್ಲಾ ಸೇರಿಕೊಂಡ ಎಲ್ಲ ಕಾಡು ಕಸ ಕಡ್ಡಿಗಳ ಜೊತೆಗೆ ಎಲ್ಲೆಲ್ಲಿಯ ಪಾತ್ರೆ ಸೀರೆಗಳು ಬಟ್ಟೆ ಚೂರುಗಳು ಎಲ್ಲವನ್ನು ಎಳೆದು ತರತೊಡಗಿತ್ತು. ಆಗಲೇ ಹಳ್ಳ ದಾಟುವ ಸಾಹಸಕ್ಕೆ ಇವರೆಲ್ಲ ಕೈ ಹಾಕಿದ್ದು. ಕಮಲಿಯ ಮುಂದೆ ತನ್ನ ಗಂಡಸ್ತನದ ಪ್ರದರ್ಶನಕ್ಕೆಂದೆ ಹಳ್ಳ ದಾಟತೊಡಗಿದ ನಾಗಪ್ಪ. ಒಂದೆರಡು ಬಾರಿ ಕಾಲು ಸರಿದಂತಾದರೂ ಅದು ಹೇಗೋ ಅಭ್ಯಾಸ ಬಲದಿಂದ ಸುಧಾರಿಸಿಕೊಂಡು ದಾಟೇಬಿಟ್ಟ. ಅವನ ಹಿಂದೆ ನನ್ನಪ್ಪ ಅಣ್ಣ ಕೂಡ ದಾಟಿದರು.

series on rain

ಸೌಜನ್ಯ : ಅಂತರ್ಜಾಲ

ಕಮಲಿ ಹಿಂದೆ ಮುಂದೆ ನೋಡತೊಡಗಿದಳು. ಆಕೆ ಬಂದರೆ ಮಾತ್ರ ಆತನ ಹುರುಪು. ಆಕೆ ಬರುವಳೋ ಇಲ್ಲವೋ ಎಂದು ಅವಳ ಬರುವನ್ನು ಎದುರು ನೋಡುತ್ತಿದ್ದ ಆತ “ನೀನು ಬಾರೆ ಹಂಗೇನೂ ರಾಶಿ ನೀರಿಲ್ಲ. ನೀಂಗೆ ಬರುಕಾಗುದು” ಎನ್ನುತ್ತಾ ಆಕೆಯ ಹುರಿದುಂಬಿಸುತ್ತಲೇ ಇದ್ದ. ಕಮಲಿ ಹೆದರುತ್ತಾ ಒಂದೆರಡು ಹೆಜ್ಜೆ ಹಾಕುತ್ತ ಮುಂದೆ ಮುಂದೆ ಸಾಗುತ್ತ ಇದ್ದಳು. ಗುಡ್ಡದ ಮೇಲಿನ ನೀರೆಲ್ಲ ಸುರಿದು ಬರುತ್ತಾ ಮೊದಲಿಗಿಂತ ನೀರಿನ ಸೆಳವು ಜಾಸ್ತಿಯಾಗತೊಡಗಿತು. ಹದ ತಪ್ಪಿ ಕಾಲು ಆಚೆ ಈಚೆ ಯಾಯಿತೋ ಹಳ್ಳದ ಪಾಲೆ. ಮೊದಲೆ ಹೆದರಿದ್ದ ಆಕೆಗೆ ಕಾಲು ನಡುಗಲು ಶುರುವಿಟ್ಟಿಕೊಂಡಿತೋ ಒಮ್ಮೇಲೆ ಜಾರಿ ಬಿಟ್ಟಳು. ಪ್ರಳಯೋಪಾದಿಯಲ್ಲಿ ಹರಿದು ಬರುತ್ತಿದ್ದ ಹಳ್ಳದ ಮಡಿಲಲ್ಲಿ ತರಗಲೆಯಂತೆ ತೇಲಿ ಹೋಗತೊಡಗಿದಳು. ತಂದೆ ಅಣ್ಣ ನಾಗಪ್ಪ ಎಲ್ಲ ನೋಡುನೋಡುತ್ತಿದ್ದಂತೆ ಆಕೆ ನಿನ್ನ ಪ್ರವಾಹದ ಸೆಳುವಿಗೆ ಸಿಕ್ಕೇ ಹೋದಳು. ನಾಗಪ್ಪ ಕಂಗಾಲಾದ. ನನ್ನ ತಂದೆಯ ಜಂಘಾಬಲವೇ ಉಡುಗಿಹೋಯಿತು. ಅಣ್ಣಂದಿರು ನಿಂತಲ್ಲಿಯೇ ಕಲ್ಲಾಗಿದ್ದರು. ನಾಗಪ್ಪ ಈಗ ತಡೆಯಲಾಗದೇ ಹಳ್ಳದ ಆ ಕಡೆಯಿಂದ ನನ್ನಮ್ಮನ ಕರೆದು ಕೂಗತೊಡಗಿದ. ಮನೆಗೆ ಕೇಳಿಸುವುದು ಅಸಾಧ್ಯವಾದರೂ ಆತನ ಒಳ ಹೊಯ್ದಾಟ ಅರಿತುಕೊಳ್ಳಲಾಗದಷ್ಟು ಪುಕ್ಕಲುಗೊಂಡಿದ್ದ. ‘‘ಅಯ್ಯೋ.. ಅಮ್ಮಾ.. ಅಯ್ಯೊ ಅಮ್ಮಾ.. ಕಮಲಿ ಹೋಯತ್ರಾ. ಕಮಲಿ ಹೋಯ್ತ. ಹಳ್ಳ ಕುಚ್ಚಕಂಡ ಹೋಯ್ತೋ..” ಮೂಗಿನಲ್ಲೇ ಅನ್ನುತ್ತ ಗಳಗಳ ಅಳತೊಡಗಿದ. ಪಾಪ ಕಮಲಿಯ ಚಿಕ್ಕ ಮಗ ಕೂಡ ಹೆದರಿಬಿಟ್ಟಿತ್ತು. ಅಳುವಿಟ್ಟುಕೊಂಡಿತ್ತು.

ಅಷ್ಟೊತ್ತಿಗೆ ಈ ಕಡೆಯಿಂದ ನಾವು ಮನೆ ಮಂದಿಯೆಲ್ಲ ಸೇರಿಬಿಟ್ಟರೆ ಆ ಕಡೆ ಆ ಮೂವರು. ಹಳ್ಳದಲ್ಲಿ ಕಮಲಿ. ಅದ್ಯಾವ ಪವಾಡವೋ ಆಕೆಗೆ ಹಳ್ಳದ ಬದಿಯಲ್ಲಿ ಬೆಳೆಯುವ ಆ ಗಿಡದ ಗಟ್ಟಿ ತೊಪ್ಪಲು ಕೈಗೆ ಸಿಕ್ಕಿರಬೇಕು. ಕೆಂಪು ರಾಡಿ ನೀರಿನಲ್ಲಿ ಆಕೆ ನಮಗೆ ಕಾಣುತ್ತಿರಲಿಲ್ಲ. ಆದರೆ ಅಲ್ಲಿ ಗಿಡದ ಸಂದಿಯೊಂದರಲ್ಲಿ ಗಿಡವನ್ನೇ ಅಪ್ಪಿ ಗಟ್ಟಿಯಾಗಿ ಹಿಡಿದು ನಿಂತಿದ್ದಳು. ಅದ ಕಂಡವನೂ ಅವನೇ. ಒಮ್ಮೇಲೆ ಜೀವ ಬಂದವನಂತೆ ಚೀರತೊಡಗಿದ. “ಅಮ್ಮಾ ಅಮ್ಮಾ ಆದೇ ಅಲ್ಲೇ ಅಯ್ಯೋ ಕಮಲಿ ನಿಂತಿದು ಹಳ್ಳದಲ್ಲೇ. ಕಮಲಿ ಬಳಿ ಕಂಡೆ ಹೋಗ್ನಿಲ್ಲಾ. ನಾ ಹೋತೆ. ಓಡೆಯ.. ನಾ ಕರಕಂಡೆ ಬತ್ತೆ..” ಎನ್ನುತ್ತ ನೀರಿಗೆ ಜಿಗಿದೇ ಬಿಟ್ಟ. ಅದ್ಯಾವ ಭೀಮಬಲ ಬಂದಿತ್ತೋ ಅವನಿಗೆ. ಅಂತೂ ಹಳ್ಳದ ಸುಳಿಯೂ ಅತನ ಆತ್ಮಸ್ಥೈರ್ಯಕ್ಕೆ ಅಂಜಿದಂತೆ ಅವಳ ಹಾಗೋ ಹೀಗೋ ಮಾಡಿ ಸಮೀಪಿಸುತ್ತಲೇ ಅಣ್ಣಂದಿರು ಸಹಾಯಮಾಡಿ ಕೊನೆಗೂ “ಬದುಕಿದೆಯಾ ಬಡಜೀವವೇ” ಎನ್ನುತ್ತಾ ಕಮಲಿ ಮೇಲಕ್ಕೆ ಹತ್ತಿಬಂದಳು. ಮನೆಯವರಿಗೆಲ್ಲ ಸಮಾಧಾನವಾಯಿತು. ಅಪ್ಪ ಅಮ್ಮನಂತೂ ತಲೆಮೇಲಿನ ದೊಡ್ಡ ಚಿಂತೆ ಕಳೆದ ಸಮಾಧಾನ ಕಂಡರು. ನಾಗಪ್ಪನಿಗೋ ಮಹತ್ಸಾಧನೆ ಮಾಡಿದ ಹುಮ್ಮಸ್ಸು. ಅದರ ಬಗ್ಗೆ ಮಾತಾಡಿದ್ದೆ ಮಾತಾಡಿದ್ದು ಸುಮಾರು ತಿಂಗಳುಗಳ ಕಾಲ.

ಇವತ್ಯಾಕೋ ಇವೆಲ್ಲ ನೆನಪಾದವು. ಈ ಮೋಜು, ಮಜಾ, ಪ್ರಕೃತಿ ಜೊತೆ ಅನುಬಂಧ ಎಲ್ಲ ನನಗೆ ನನ್ನಿಂದ ದೂರವಾದಂತೆ ಅನಿಸ್ತಿದೆ. ನೀನೂ ಕೂಡಾ ಈಗೀಗ ಅದೆಷ್ಟು ಬದಲಾಗಿ ಬಿಟ್ಟೆ. ಇಳೆಯೊಂದಿಗಿನ ಆಗಿನ ನಿನ್ನ ಅನುಬಂಧಕ್ಕೂ ಈಗ ಕಾಣುತ್ತಿರುವುದಕ್ಕೂ ತುಂಬಾ ವ್ಯತ್ಯಾಸ ಕಾಣುತ್ತಿದೆ. ಆದರೆ ಇಲ್ಲಿ ಬದಲಾಗಬೇಕಾದವರು ನೀವಿಬ್ಬರೂ ಅಲ್ಲ. ಅದು ನಿನ್ನ ತೆಗಳ್ತಾ ಇರೋ ನಾವು ಅನ್ನೊದನ್ನ ನಾನು ಪ್ರತಿಶತ ಒಪ್ಪುತ್ತೇನೆ.

ಏನೇ ಇರಲಿ, ನಿನ್ನ ಒಲವು, ಪ್ರೀತಿ ನಮ್ಮ ಮೇಲೆ ಮೊದಲಿನ ಹಾಗೇ ಇರಲಿ ಅಂತಾ ಹಾರೈಸುತ್ತೇನೆ.

ವಂದನೆಗಳು

ಇಂದ ನಾಗರೇಖಾ * ಇದನ್ನೂ ಓದಿ : Poetry; ಅವಿತ ಕವಿತೆ : ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ ಕವಿತೆ ಹುಟ್ಟುತ್ತದೆ

Published On - 6:20 pm, Fri, 6 August 21

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ