New Book : ಅಚ್ಚಿಗೂ ಮೊದಲು ; ‘ಆಲಿವ್ ಗಿಡದಿಂದ ಮೊಳಕೆಯೊಡೆದು ವ್ಯಾಪಾರಿಗಳು ರಸ್ತೆಯಲ್ಲಿ ಬಿಸಾಕಿದ ಬೀಜ ನಾನು’

Pay No Heed to the Rockets : ‘ಅದು ಪ್ರತಿರೋಧದ ಕವಿತೆಗಳಲ್ಲಿನ ‘ಪ್ರೀತಿಯ ವಸ್ತುವಾಗಿ’ಯೋ ಅಥವಾ ರಾಜಕೀಯ ಪಕ್ಷದ ಪ್ರಣಾಳಿಕೆಯ ವಿಷಯವಾಗಿಯೋ ಉಳಿದಿಲ್ಲ. ಅದು ಚರ್ಚೆಯ ವಸ್ತುವಲ್ಲ, ರೂಪಕವಲ್ಲ. ಅದು ಮುಟ್ಟಬಹುದಾದ ಚೇಳಾಗಿ, ಹಕ್ಕಿಯಾಗಿ, ಬಾವಿಯಾಗಿ, ಬಳಪದ ಹೊಲವಾಗಿ, ಹೆಜ್ಜೆಗುರುತುಗಳಾಗಿ ನನ್ನ ಕಣ್ಣೆದುರೇ ಗೋಚರಿಸುತ್ತಿದೆ. ಅದನ್ನು ಕಳೆದುಕೊಂಡಿದ್ದೇವೆ ಎನ್ನುವುದರ ಹೊರತು ಅದರ ವಿಶೇಷತೆಯಾದರೂ ಏನು?' ನನ್ನನ್ನು ನಾನೇ ಕೇಳಿಕೊಂಡೆ.’

New Book : ಅಚ್ಚಿಗೂ ಮೊದಲು ; ‘ಆಲಿವ್ ಗಿಡದಿಂದ ಮೊಳಕೆಯೊಡೆದು ವ್ಯಾಪಾರಿಗಳು ರಸ್ತೆಯಲ್ಲಿ ಬಿಸಾಕಿದ ಬೀಜ ನಾನು’
ಕೆನಡಾದ ಲೇಖಕ ಮಾರ್ಸೆಲ್ಲೊ ಡಿ. ಸಿಂಟಿಯೋ ಮತ್ತು ಕನ್ನಡ ಅನುವಾದಕ ಆಕರ್ಷ ರಮೇಶ ಕಮಲ
Follow us
ಶ್ರೀದೇವಿ ಕಳಸದ
|

Updated on:Aug 06, 2021 | 1:47 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಬರಿಯ ನೆನಪಲ್ಲ- ಪ್ಯಾಲೆಸ್ತೀನ್ ಭಾವುಕ ಕಥನ (Pay No Heed to the Rockets) ಇಂಗ್ಲಿಷ್ ಮೂಲ : Marcello Di Cintio ಕನ್ನಡಕ್ಕೆ : ಆಕರ್ಷ ರಮೇಶ ಕಮಲ  ಪುಟ : ರೂ. 225 ಮುಖಪುಟ ವಿನ್ಯಾಸ : ಗುರುಪ್ರಸಾದ ಪ್ರಕಾಶನ : ಕಥನ, ಬೆಂಗಳೂರು

*

ಈ ಕೃತಿಯ ಆಯ್ದ ಭಾಗ ಮತ್ತು ಇದನ್ನು ಅನುವಾದಿಸಲು ಪ್ರೇರೇಪಿಸಿದ ಸಂಗತಿಗಳ ಬಗ್ಗೆ ಕವಿ, ಅನುವಾದಕ ಆಕರ್ಷ ರಮೇಶ ಕಮಲ ಅವರು ಬರೆದಿರುವುದು ಇಲ್ಲಿದೆ.

*

‘L Auberge Espagnole’ ಎಂಬ ಫ್ರೆಂಚ್ ಚಿತ್ರದ ನಾಯಕ ಬಾರ್ಸಿಲೋನಾ ದೇಶಕ್ಕೆ ಓದಲು ಹೋಗಿದ್ದಾಗ ಇದ್ದಕ್ಕಿದಂತೆ ತಾನು ಒಂಟಿ ಎಂಬ ಭಾವನೆ ಮೂಡಿ, ಭಾವುಕನಾಗುತ್ತಾನೆ. ತನ್ನ ಮಾತೃಭಾಷೆಯನ್ನು ಮರೆತು, ಬೇರುಗಳನ್ನು ಕತ್ತರಿಸಿಕೊಂಡು, ಅಸ್ಮಿತೆಯನ್ನೇ ಕಳೆದುಕೊಂಡು, ಯಾವುದನ್ನು ಮನೆಯೆಂದು ಕರೆಯಬೇಕೆಂದು ಗೊತ್ತಾಗದೆ ಹುಚ್ಚನಂತೆ ಅಲೆಯುವ ಕೆಟ್ಟ ಕನಸು ಬಿದ್ದು ಭಯದಿಂದ ಎಚ್ಚರಗೊಳ್ಳುತ್ತಾನೆ. ಚಿಕ್ಕವಯಸ್ಸಿನಿಂದಲೂ ಬರಹಗಾರನಾಗಬೇಕೆಂಬ ಆಸೆ ಈ ವಿದೇಶಿ ಸಂತೆಯಲ್ಲಿ ಬಿಕರಿಗೊಳ್ಳಬಹುದೆಂಬ ಭಯದಿಂದ ತಾಯ್ನಾಡಿಗೆ ಮರಳುತ್ತಾನೆ. ಈ ಚಿತ್ರ ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು.

ಈಗಲೂ ಆಶ್ಚರ್ಯವೆನಿಸುವುದು ನಮ್ಮ ಬಾಲ್ಯದ ಅನುಭವಗಳನ್ನೆಲ್ಲ ಕಟ್ಟಿಕೊಟ್ಟ ಸುವಾಸನೆ, ನೆನಪುಗಳು , ಗೆಳೆಯರು ನನ್ನನ್ನು ರೂಪಿಸಿದ ಪ್ರತಿಯೊಂದು ನೆನಪು ಸಣ್ಣ ನೆಲದ ತುಣುಕೊಂದು ಮನೆಯಾಗಿ ಬಿಡುವ ಮಾಂತ್ರಿಕತೆ. ಬೆಂಗಳೂರಿನ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬೆಚ್ಚಗೆ ಕೂತಿದ್ದಾಗ , ಇಸ್ರೇಲ್ ಪ್ಯಾಲೆಸ್ಟೈನ್ ಸಂಘರ್ಷವು ನೋವಿನ ಕಥೆಗಳನ್ನು, ನಿರಾಶ್ರಿತರ ಕಣ್ಣೀರುಗಳನ್ನು ಹೊತ್ತು ತರುವ ಸುದ್ಧಿ ಮಾತ್ರವೇ ಆಗಿತ್ತು. ಅಮೆರಿಕೆಯಲ್ಲಿ ವ್ಯಾಸಂಗ ಮಾಡುವಾಗ ಇದ್ದಕ್ಕಿದ್ದ ಹಾಗೆ ಎಲ್ಲವನ್ನು ಕಳೆದುಕೊಂಡಂತೆ, ಅನಾಥವಾಗಿ ಗೊತ್ತಿಲ್ಲದ ರಸ್ತೆಯ ಸಿಗ್ನಲ್ಲಿನಲ್ಲಿ ಅಪರಿಚಿತರ ಮಧ್ಯೆ ಅಪರಿಚಿತನಾಗಿ, ಅನಾಥ ಭಾವ ಮೂಡಿಸಿದಂತಾಯಿತು. ಅವಮಾನ, ಒಂಟಿತನ, ಹತಾಶೆ, ನೋವು, ಎಲ್ಲವೂ ಒಟ್ಟೊಟ್ಟಿಗೆ ನನ್ನನ್ನು ಕುಗ್ಗಿಸಿದಂತೆನಿಸಿ ‘L Auberge Espagnole’ ಚಿತ್ರದ ನಾಯಕನಂತೆ ಭಾರತಕ್ಕೆ ಓಡಿ ಬಂದಮೇಲೆಯೇ ಅಲ್ಲಿಯ ಕಥೆಗಳು ಹೆಚ್ಚಿನ ಅರ್ಥ ನೀಡಿದ್ದು

ಮನುಷ್ಯತ್ವದ ಸಂದೇಶ ಸಾರುವ, ಶಾಂತಿಯ ಮಂತ್ರವನ್ನು ಎತ್ತಿ ಹಿಡಿಯುವ , ಸಮಾಜದ ಮುಖವನ್ನು ಕನ್ನಡಿಯ ಬಿಂಬವಾಗಿಸುವ ಛಾಯಾಚಿತ್ರಗಳು ಯಾವಾಗಲಾದರೊಮ್ಮೆ ಕಣ್ಣಿಗೆ ಬೀಳುತ್ತವೆ. ಅಂತಹ ಒಂದು ಚಿತ್ರ ಮರಾಮ್ ಳದ್ದು . ಒಂಭತ್ತು ಮಕ್ಕಳಲ್ಲಿ ಕಿರಿಯಳಾಗಿದ್ದ ಹನ್ನೆರಡು ವರುಷದ ಮುಗ್ಧ ಹುಡುಗಿ. ಅವಳದೇ ವಯಸ್ಸಿನ ಬಹುತೇಕ ಗಾಜ ಹುಡುಗಿಯರಂತೆ ಮರಾಮ್ ಕೂಡ ಮೂರನೇ ಪೀಳಿಗೆಯ ನಿರಾಶ್ರಿತಳು. ಇಂಟರ್​ನೆಟ್​ನಲ್ಲಿ ವೈರಲ್ ಆಗಿದ್ದ , ಹಸಿರು ಬಟ್ಟೆ ತೊಟ್ಟ ಪುಟ್ಟ ಹುಡುಗಿ ಬಾಂಬುಗಳ ಧಾಳಿಯಿಂದ ನೆಲಸಮವಾಗಿದ್ದ ಕಟ್ಟಡದ ಇಟ್ಟಿಗೆಗಳಲ್ಲಿ, ಧೂಳಿನಲ್ಲಿ ಸುಟ್ಟು, ಹರಿದುಹೋಗಿದ್ದ ಪುಸ್ತಕದ ಹಾಳೆಗಳನ್ನು ಹುಡುಕುತ್ತಿದ್ದ ದಿಟ್ಟ ಹುಡುಗಿ.

1948ರಲ್ಲಿ ನಡೆದ ಪ್ಯಾಲೆಸ್ತೇನ್ ದುರಂತ ಅಥವಾ ‘ನಕ್ಬ’ ಬಹುಶಃ ಇಡೀ ಜಗತ್ತನ್ನೇ ಅವಮಾನದಲ್ಲಿ ಕುಗ್ಗಿಹೋಗಿಸುವಂತಹ ದಾರುಣ ಕಥೆ. ಲಕ್ಷಗಟ್ಟಲೆ ಪ್ಯಾಲೇಸ್ತೇನಿಯರನ್ನು ಹೊರಗಟ್ಟಿ ಅವರ ಅಸ್ಮಿತೆಯನ್ನೇ ಕಳಚಿ, ನೆಲೆಯಿಲ್ಲದೆ , ಬಾಂಧವ್ಯಗಳಿಲ್ಲದೆ, ಹೆಣ್ಣುಮಕ್ಕಳು, ಮಕ್ಕಳು, ವೃಧ್ಹರಾದಿಯಾಗಿ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿ, ರೆಫ್ಯೂಜಿ ಕ್ಯಾಂಪ್ ಗಳಿಗೆ ನೂಕಿತು.

‘ಆಲಿವ್ ಗಿಡದಿಂದ ಮೊಳಕೆಯೊಡೆದು ವ್ಯಾಪಾರಿಗಳು ರಸ್ತೆಯಲ್ಲಿ ಬಿಸಾಕಿದ ಬೀಜ ನಾನು’

ಎಂಬ ಕವಿತೆಯ ಸಾಲುಗಳು ಪ್ಯಾಲೆಸ್ತೇನ್ ನಿರಾಶ್ರಿತರ ಈಗಿನ ಪರಿಸ್ಥಿತಿಯನ್ನೇ ಬಿಂಬಿಸುತ್ತದೆ. ಇಸ್ರೇಲ್, ವೆಸ್ಟ್ ಬ್ಯಾಂಕ್, ಗಾಝಾಗಳಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿರುವ ಇವರು ಈಗಲೂ ಮಾನಸಿಕ, ದೈಹಿಕ, ಭಾವನಾತ್ಮಕ ಗಡಿಗಳನ್ನು ಮೀರಲಾಗದೆ, ಚೆಕ್​ಪಾಯಿಂಟ್, ಝೋನ್, ಹಸಿರು ಲೈನ್​ಗಳಲ್ಲಿ ಪಾಸ್​ಪೋರ್ಟ್​ಗಳಿದ್ದರೂ ತಾವು ಯಾರೆಂದು ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ.

‘ಬಹುಶಃ ಇದಕ್ಕಿಂತ ಕ್ರೂರ ಸನ್ನಿವೇಶವೊಂದು ಹುಟ್ಟಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತದೆ. ದೂರದ ಸಾಗರವನ್ನು ನೋಡಲಾಗದೆ ಅದರ ಬಗ್ಗೆ ಯಾವಾಗಲೂ ಕನಸು ಕಾಣುವುದೋ ಅಥವಾ ಹತ್ತಿರದ ಸಾಗರವನ್ನು ನೋಡದ ಹಾಗೆ ನಮ್ಮನ್ನು ನಿರ್ಬಂಧಿಸಿರುವುದೋ? ಈ ವಿಪರ್ಯಾಸದ ಸತ್ಯದ ಮಧ್ಯೆಯೇ ಪ್ಯಾಲೇಸ್ತೀನಿಯೊಬ್ಬನ ಜೀವನ ಬಿತ್ತರಗೊಳ್ಳುತ್ತದೆ’ ಎಂದು ಕವಿ ನಥಾಲಿ ಹಂದಾಲ್ ಹೇಳುತ್ತಾರೆ. ಈ ಎಲ್ಲದರ ಬಗ್ಗೆ ಯೋಚಿಸುತ್ತಿದ್ದಾಗಲೇ ಮಾರ್ಸೆಲ್ಲೊ ಡಿ ಸಿಂಟಿಯೋ ಅವರ ಪುಸ್ತಕ ಕಣ್ಣಿಗೆ ಬಿದ್ದು ಓದಲಾರಂಭಿಸಿದೆ. ಪ್ಯಾಲೆಸ್ತೀನಿನ ಸ್ಥಿತಿಯನ್ನು ಚೆಲುವಿನ ವಿರುದ್ಧದ ದಿಕ್ಕಿನಲ್ಲೇ ಬಿಂಬಿಸುತ್ತಿದ್ದರೂ, ಅದನ್ನು ಮೀರಿದ ವಿಭಿನ್ನ ಕತೆಗಳನ್ನು ಹೇಳುವ ಕಾರಣಕ್ಕಾಗಿಯೇ ಈ ಪುಸ್ತಕ ನನ್ನನ್ನು ಆಕರ್ಷಿಸಿ, ಅನುವಾದಿಸುವಂತೆ ಪ್ರೇರೇಪಿಸಿತು. ಆಕರ್ಷ ರಮೇಶ ಕಮಲ, ಕವಿ, ಅನುವಾದಕ

*

ಈ ಸ್ಥಳದ ಪ್ರತಿಯೊಂದು ಬಿರುಕಿನಲ್ಲೂ ಒಂದು ಕತೆ ಹುದುಗಿದೆ. ರಮಲ್ಲಾ-ಜೆರಿಕೊ ರಸ್ತೆಯಲ್ಲಿ ಟ್ಯಾಕ್ಸಿ ಓಡಿಸುವ ಚಾಲಕರು ಚಿಕ್ಕ ವಯಸ್ಸಿನಲ್ಲಿ ಸಾಯುವ ರೀತಿ, ಪ್ಯಾಲೆಸ್ತೀನ್ ಬೆಟ್ಟಗಳ ಎತ್ತರದಿಂದ ಡೆಡ್ ಸೀ ಬಳಿಯ ಜೋರ್ಡಾನ್ ರಿಫ್ಟ್ ಕಣಿವೆಯ ಆಳಕ್ಕೆ ವರುಷಗಳ ನಿರಂತರ ಪ್ರಯಾಣದಿಂದಾಗುವ ಹೃದಯದ ಮೇಲಿನ ಒತ್ತಡದ ಕತೆ, ವಿದ್ಯಾರ್ಥಿಗಳು ತಮ್ಮ ಅಂಗರಚನಾಶಾಸ್ತ್ರ ತರಗತಿಗಳಿಗೆ ಒದಗಿಸಿದ ಶವಗಳನ್ನು ಗುರುತಿಸುವುದರ ಬಗ್ಗೆ ಚಿಂತಿಸುವ ಗಾಝಾ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು, ಕಾಲೇಜು ವಿದ್ಯಾರ್ಥಿಗಳನ್ನು ಅಂಗರಚನಾ ಶಾಸ್ತ್ರ ಅಧ್ಯಯನ ಮಾಡಲು ಕೈರೋದಲ್ಲಿನ ಶಾಲೆಗಳಿಗೆ ಕಳಿಸುವ ಅವರ ಏರ್ಪಾಡು, ಅಲ್ಲವರು ತಮ್ಮ ಸಂಬಂಧಿಕರನ್ನು ಮೇಜಿನ ಮೇಲೆ ಎದುರಿಸುವ ಸಾಧ್ಯತೆ ಕಡಿಮೆ ಎಂಬ ನಂಬಿಕೆಯ ಕತೆ, ಗ್ರಾಹಕರು ಎಲ್ಲಿಗೆ ಹೋದರೂ, ಅವರು ತಮ್ಮ ತಾಯಿ ನಾಡಿನ ಮಣ್ಣಿನ ಮೇಲೆ ನಡೆಯುತ್ತಾರೆ ಎಂದು ಹತ್ತಿರದ ಬೆಟ್ಟಗಳಿಂದ ಒಂದು ಹಿಡಿ ಕೊಳೆ ಮಣ್ಣನ್ನು ತಂದು ತಾನು ತಯಾರು ಮಾಡುವ ಬೂಟುಗಳ ಅಡಿಭಾಗಕ್ಕೆ ಸೇರಿಸುವ ಹೆಬ್ರಾನಿನ ಚಮ್ಮಾರನ ಕತೆ… ಹೀಗೆ ಎಲ್ಲ ಕಡೆಯೂ ಒಂದು ಕತೆಯಿದೆ. ಮರ್ಸೆಲ್ಲೊ ಡಿ. ಸಿಂಟಿಯೋ, ಕೆನಡಾದ ಲೇಖಕ 

*

acchigoo modhalu akarsha ramesh kamala

ಗಾಝಾದ ಆ ಪುಟ್ಟ ಹುಡುಗಿ. ಸೌಜನ್ಯ : ಮೊಮೆನ್ ಫೈಝ್

(ಆಯ್ದ ಭಾಗ)

1996, ಮೂರಿದ್ ಬಗ್ರ್ಹೋಟಿ ಅಲೆನ್ಬಿ ಸೇತುವೆಯ ಜೋರ್ಡಾನ್ ಬದಿಯ, ನಿರೀಕ್ಷಣಾ ಕೊಠಡಿಯಲ್ಲಿ ಮೌನವಾಗಿ ಕುಳಿತು, ತಮ್ಮ ಒಂಬತ್ತನೆಯ ಕವನ ಸಂಕಲನದ ಹಸ್ತಪ್ರತಿಯ ಪುಟಗಳನ್ನು ತಿರುವುತ್ತ ಸಮಯ ಕಳೆಯುತ್ತಿದ್ದರು. ಎಲ್ಲ ಕವಿಗಳಂತೆ ಇವರಿಗೂ ತಾವು ಬರೆದ ಕವಿತೆಗಳ ಗುಣಮಟ್ಟದ ಬಗ್ಗೆ ಆತಂಕ ಮೂಡಿದ್ದರಿಂದ ಅಲ್ಲೇ ಇದ್ದ ಚೀಲದಲ್ಲಿ ಹಸ್ತಪ್ರತಿಯನ್ನು ಮರಳಿ ಇಟ್ಟುಬಿಟ್ಟರು. 1967ರ ‘ಆರು ದಿನಗಳ ಯುದ್ಧ’ದ ಮೊದಲ ದಿನವೇ, ತಾವು ಬರೆದ ಮೊದಲ ಕವಿತೆ ‘ಅಪಾಲಜಿ ಟು ಎ ಫಾರ್ ಅವೇ ಸೋಲ್ಜರ್’ ಪ್ರಕಟಗೊಂಡಿದ್ದನ್ನು, ಯುದ್ಧದ ಆರನೇ ದಿನ ಅರಬ್ ಸೇನೆ ಇಸ್ರೇಲಿ ಸೇನೆಯ ವಿರುದ್ಧ ಸೋಲನ್ನಪ್ಪಿ, ಈಗ ತಾವು ದಾಟಲು ಕಾಯುತ್ತಿರುವ ನದಿಯೇ ಸರಹದ್ದಾಗಿದ್ದನ್ನು ನೆನೆದರು. ‘ಬಹುಶಃ ನಾನು ಕವಿತೆ ಬರೆದದ್ದಕ್ಕೋ ಏನೋ ಅರಬ್ಬರು ಸೋತು ಪ್ಯಾಲೆಸ್ತೀನ್ ಕಳೆದುಕೊಂಡರು’ ಎಂದು ಬಗ್ರ್ಹೋಟಿ ಹಾಸ್ಯ ಮಾಡುತ್ತಿದ್ದರು. ತಮ್ಮ ಆತ್ಮಚರಿತ್ರೆ ‘ಐ ಸಾ ರಮಲ್ಲಾ’ದಲ್ಲಿ ಬಗ್ರ್ಹೋಟಿ ಅವರು, ಮೂರು ದಶಕಗಳ ಕಾಲದ ಗಡೀಪಾರಿನ ನಂತರ ತಾವು ಕುಳಿತುಕೊಂಡಿದ್ದ ನಿರೀಕ್ಷಣಾ ಕೊಠಡಿಯಿಂದ ಹೊರಬಂದು ಸೇತುವೆಯ ಪಶ್ಚಿಮಕ್ಕಿರುವ ಪ್ಯಾಲೆಸ್ತೀನ್ ನೆಲದ ಮೇಲೆ ಕಣ್ಣು ಹಾಯಿಸಿದ್ದನ್ನು ಹೀಗೆ ವಿವರಿಸುತ್ತಾರೆ.

‘ಇಂದ್ರಿಯಗಳಿಗೆ ತನ್ನ ಇರುವಿಕೆಯನ್ನು ಘೋಷಿಸಿರುವ ಅದನ್ನು ಈಗ ಅಮೂರ್ತವಾಗಿಸಲು ಯಾರಿಗೆ ಧೈರ್ಯವಿದೆ?’

‘ಅದು ಪ್ರತಿರೋಧದ ಕವಿತೆಗಳಲ್ಲಿನ ‘ಪ್ರೀತಿಯ ವಸ್ತುವಾಗಿ’ಯೋ ಅಥವಾ ರಾಜಕೀಯ ಪಕ್ಷದ ಪ್ರಣಾಳಿಕೆಯ ವಿಷಯವಾಗಿಯೋ ಉಳಿದಿಲ್ಲ. ಅದು ಚರ್ಚೆಯ ವಸ್ತುವಲ್ಲ, ರೂಪಕವಲ್ಲ. ಅದು ಮುಟ್ಟಬಹುದಾದ ಚೇಳಾಗಿ, ಹಕ್ಕಿಯಾಗಿ, ಬಾವಿಯಾಗಿ, ಬಳಪದ ಹೊಲವಾಗಿ, ಹೆಜ್ಜೆಗುರುತುಗಳಾಗಿ ನನ್ನ ಕಣ್ಣೆದುರೇ ಗೋಚರಿಸುತ್ತಿದೆ. ಅದನ್ನು ಕಳೆದುಕೊಂಡಿದ್ದೇವೆ ಎನ್ನುವುದರ ಹೊರತು ಅದರ ವಿಶೇಷತೆಯಾದರೂ ಏನು?’ ನನ್ನನ್ನು ನಾನೇ ಕೇಳಿಕೊಂಡೆ.

ಕೊನೆಗೂ ಜೋರ್ಡಾನಿನ ಸೈನಿಕನೊಬ್ಬ ಸೇತುವೆಯನ್ನು ದಾಟಬಹುದು ಎಂಬ ಸೂಚನೆಯನ್ನು ಬಗ್ರ್ಹೋಟಿಯವರಿಗೆ ನೀಡಿದ. ಎಡ ಭುಜದ ಮೇಲೊಂದು ಸಣ್ಣ ಚೀಲ, ಕಾಲುಗಳ ಕೆಳಗೆ ಸೇತುವೆಯ ಕಿರುಗುಟ್ಟುವ ‘ನಿಷೇಧಿತ ಮರಗಳ ಹಲಗೆ’ ‘ನನ್ನ ಹಿಂದೆ ಜಗತ್ತು, ನನ್ನ ಮುಂದೆ ನನ್ನ ಜಗತ್ತು’ ಎಂದು ಬಗ್ರ್ಹೋಟಿ ಬರೆದರು. ಹತ್ತೊಂಬತ್ತು ವರುಷಗಳ ನಂತರ ಬಗ್ರ್ಹೋಟಿ ಅವರು ಕುಳಿತಿದ್ದ ಅಥವಾ ಅದೇ ರೀತಿಯ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತು ಗಡಿಯಾಚೆಗಿನ ಅವರ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಪ್ಯಾಲೆಸ್ತೀನಿ ಕುಟುಂಬಗಳ ಗುಂಪಿನೊಂದಿಗೆ ಜೋರ್ಡಾನಿನ ನಿರೀಕ್ಷಣಾ ಕೊಠಡಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾದ ನಂತರ ಗಡಿ ಸೈನಿಕನೊಬ್ಬ ಬಂದು ನಮ್ಮ ಪಾಸ್​ಪೋರ್ಟ್​ಗಳನ್ನು ಹಿಂದಿರುಗಿಸಿ ಹೊರಗೆ ಕರೆದೊಯ್ದ. ಬಗ್ರ್ಹೋಟಿ ನಡೆದ ಆ ಮರದ ಸೇತುವೆ ಈಗ ಬಳಕೆಯಲ್ಲಿರಲಿಲ್ಲ. ಇದು ನನ್ನನ್ನು ನಿರಾಶೆಗೊಳಿಸಿತು. ಅಲೆನ್ಬಿ ಸೇತುವೆಯ ‘ನಿಷೇಧಿತ ಮರದ ಹಲಗೆಗಳ’ ಮೇಲೆ ಬಗ್ರ್ಹೋಟಿಯವರ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಲು ನಾನು ಬಯಸಿದ್ದೆ.

ಹೊಸದಾಗಿ ನಿರ್ಮಿಸಿದ್ದ ‘ಕ್ರಾಸಿಂಗ್’ ಪಾದಚಾರಿಗಳ ಕಾವ್ಯಾತ್ಮಕ ಜಗತ್ತನ್ನೇ ಕಸಿದುಕೊಂಡಿತ್ತು. ಬದಲಾಗಿ, ನಾವು ಈಗಾಗಲೇ ಇತರ ನಿರೀಕ್ಷಣಾ ಕೊಠಡಿಗಳಿಂದ ಹೊರಬಂದ ಪ್ರಯಾಣಿಕರಿಂದ ತುಂಬಿರುವ ಬಸ್ಸಿಗೆ ಹತ್ತಿದೆವು. ಸ್ವಲ್ಪ ದೂರ ಹೋದ ಮೇಲೆ, ಜೋರ್ಡಾನಿನ ಗಡಿಯಿಂದ ಇನ್ನೊಂದು ಬದಿಯ ಕಸ್ಟಮ್ಸ್ ಪೋಸ್ಟ್​ವರೆಗೂ ವಿಸ್ತರಿಸಿರುವ, ಒಂದೇ ತರಹ ಕಾಣುತ್ತಿದ್ದ ಬಸ್ಸುಗಳ ಹಿಂದೆ ನಮ್ಮ ಬಸ್ಸು ನಿಲ್ಲಬೇಕಾಯಿತು. ಸರದಿಯಲ್ಲಿ ನಿಂತಿದ್ದ ವಾಹನಗಳು ಮುಂದೆ ಹೋಗುವುದಿಲ್ಲವೆಂದು ತಿಳಿದ ಡ್ರೈವರ್ ಲೇನ್ ಬದಲಿಸಿ ಮುನ್ನಡೆಸಿ ಚೆಕ್‍ಪಾಯಿಂಟ್‍ನಲ್ಲಿದ್ದ ಅಧಿಕಾರಿಯೊಂದಿಗೆ ಮಾತನಾಡಿದ. ಕೊನೆಗೂ ಇಸ್ರೇಲಿನ ‘ಬಾರ್ಡರ್ ಪೋಸ್ಟ್’ ಮುಂಭಾಗದಲ್ಲಿ ಬಸ್ಸು ನಿಂತಿತು. ನಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಚಾಲಕನನ್ನು ಕೊಂಡಾಡಿದರು. ಅರ್ಧದಷ್ಟು ಜನರು ಜೋರ್ಡಾನಿನ ನೋಟುಗಳನ್ನು ಇನಾಮಿನಂತೆ ನೀಡಿದರು. ಚೆಕ್‍ಪಾಯಿಂಟ್‍ನ ಅವ್ಯವಸ್ಥೆಯಲ್ಲಿ ಸಿಲುಕುವ ಮುನ್ನ, ಅನುಮತಿ ಸಿಗುವವರೆಗೂ, ಕಾಲು ಗಂಟೆಗೂ ಹೆಚ್ಚು ಹೊತ್ತು ಬಸ್ಸಿನಲ್ಲೇ ಕಾದು ಕುಳಿತೆವು. ನೂರಾರು ಜನರು, ಹೆಚ್ಚಾಗಿ ಪ್ಯಾಲೆಸ್ತೇನಿ ಕುಟುಂಬಗಳು ಇಸ್ರೇಲಿನ ಬಿಗಿ ಭದ್ರತೆಯ ಸರಪಳಿಯನ್ನು ದಾಟಲು ಹೆಣಗಾಡಿದರು. ಬಹಳಷ್ಟು ಪ್ಯಾಲೆಸ್ತೇನಿಗಳು ಉಮ್ರಾ ಯಾತ್ರೆಯಿಂದ ಮೆಕ್ಕಾಗೆ ಹಿಂದಿರುಗಿ ‘ಗ್ರೇಟ್ ಮಾಸ್ಕ್​’ನ ಝುಮ್ ಝುಮ್ ಬಾವಿಯ ಪವಿತ್ರ ನೀರನ್ನು ಪ್ಲಾಸ್ಟಿಕ್ ಶೀಷೆಗಳಲ್ಲಿ  ತುಂಬಿಕೊಂಡು ಒಯ್ಯುತ್ತಿದ್ದರು.

ಹೀಗೆ ರಾಶಿರಾಶಿ ಜನರ ಹಿಂಡು, ಇಸ್ರೇಲಿ ರಕ್ಷಣಾ ಪಡೆಯ ಸೈನಿಕರ ಅನಾಸಕ್ತಿಯ ನೋಟದಡಿಯಲ್ಲಿ ಸಾಗುತ್ತಿತ್ತು. ನನಗಂತೂ ಇಲ್ಲಿನ ಸೇತುವೆಯ ಬಳಿಯಲ್ಲಾಗಲಿ, ಬೆನ್ ಗುರಿಯಾನ್ ವಿಮಾನ ನಿಲ್ದಾಣದ ನುಣುಪಾದ ನೆಲದ ಹಾಸುಗಲ್ಲುಗಳ ಮೇಲಾಗಲಿ ಅಥವಾ ವೆಸ್ಟ್ ಬ್ಯಾಂಕ್‍ನ ಚೆಕ್‍ಪಾಯಿಂಟ್‍ಗಳಲ್ಲಾಗಲಿ ಈ ಗಡಿ ಸೈನಿಕರ ಹ್ಯಾಪು ಮೋರೆಗಳು ಒಂದೇ ತರಹ ಕಾಣುತ್ತಿದ್ದವು. ಬಗ್ರ್ಹೋಟಿ ಕೂಡ ಇಲ್ಲಿ ಹಾದು ಹೋದಾಗ ಈ ವಿಷಯವನ್ನು ಗಮನಿಸಿದ್ದರು. ಸೈನಿಕನೊಬ್ಬನ ಮುಖವನ್ನು ಅವರು ಹೀಗೆ ವರ್ಣಿಸುತ್ತಾರೆ. ‘ಒಂದು ಕ್ಷಣ ನನಗವನು ಬರಿಯ ನೌಕರನಂತೆ ಕಂಡ. ಸದ್ಯ, ಅವನ ಬಂದೂಕಾದರೂ ಹೊಳೆಯುತ್ತಿದೆ! ಅವನ ಬಂದೂಕೆಂದರೆ ನನ್ನ ವೈಯಕ್ತಿಕ ಇತಿಹಾಸ. ಅಗಲಿಕೆಯ ಇತಿಹಾಸ. ಅವನ ಬಂದೂಕು ನಮ್ಮಿಂದ ‘ಕವಿತೆಯ ನೆಲ’ವೊಂದನ್ನು ಕಿತ್ತುಕೊಂಡು ‘ನೆಲದ ಕವಿತೆ’ಯನ್ನು ನಮಗೆ ಬಿಟ್ಟುಹೋಯಿತು.’

ಮುಂದೆ ನುಗ್ಗುತ್ತಿದ್ದ ಪ್ಯಾಲೆಸ್ತೀನಿ ಕುಟುಂಬಗಳ ಪ್ರವಾಹದಲ್ಲಿ ಕೊಚ್ಚಿ ಹೋಗಿ, ಕೌಂಟರ್ ಬಳಿ ಬಂದು, ಇಸ್ರೇಲಿ ಸೈನಿಕನೊಬ್ಬನಿಗೆ ನನ್ನ ಪಾಸ್​ಪೋರ್ಟ್ ತೋರಿಸಿದೆ. ನಂತರ ಅವರು ಕೊಟ್ಟ ಟ್ಯಾಗನ್ನು ‘ಬೆನ್ನು ಚೀಲ’ಕ್ಕೆ ಹಾಕಿಕೊಂಡೆ. ನನ್ನ ಬ್ಯಾಗನ್ನು ಕಟ್ಟಡದೊಳಗೆ ಹೊತ್ತೊಯ್ದ ಕನ್ವೇಯರ್ ಬೆಲ್ಟ್ ಕಡೆಗೆ ಬಂದೆ. ಅಂತಿಮವಾಗಿ, ನನ್ನ ದಾಖಲೆಗಳನ್ನು ಮೂವರು ಬೇರೆ ಬೇರೆ ಅಧಿಕಾರಿಗಳಿಗೆ ತೋರಿಸಲು, ಮೂರು ಗಾಜಿನ ಬೂತ್‍ಗಳ ಮುಂದೆ ನೆರೆದಿದ್ದ ಜನರ ಸಾಲುಗಳನ್ನು ಒಂದಾದ ಮೇಲೊಂದರಂತೆ ಸೇರಿಕೊಂಡೆ. ಕೊನೆಗೆ, ಸುಮಾರು ಇಪ್ಪತ್ತು ವರುಷದ ಹೆಣ್ಣುಮಗಳೊಬ್ಬಳು ನಾನು ಉಳಿದುಕೊಳ್ಳುವ ಹೋಟೆಲ್ ಬಗ್ಗೆ, ಬಂದ ಕಾರಣದ ಬಗ್ಗೆ ಪ್ರಶ್ನಿಸಿದಳು. ನಾನು ಭೇಟಿ ಮಾಡಬೇಕೆಂದಿದ್ದ ಪ್ಯಾಲೆಸ್ತೀನ್ ಬರಹಗಾರರ ಹೆಸರನ್ನು ಹೇಳುತ್ತಿರಬೇಕಾದರೆ ಅರ್ಧದಲ್ಲೇ ನಿಲ್ಲಿಸಿ, ‘ಇದು ಇಸ್ರೇಲ್. ಪ್ಯಾಲೆಸ್ತೀನ್ ಅಲ್ಲ, ಪ್ಯಾಲೆಸ್ತೀನ್ ಅಂತ ಹೇಳುವುದನ್ನು ಮೊದಲು ನಿಲ್ಲಿಸಿ’ ಎಂದಳು.

2014ರ ಬೇಸಿಗೆಯಲ್ಲಿ, ಗಾಝಾ ಪಟ್ಟಿಯಲ್ಲಿ ಉಗ್ರರ ವಿರುದ್ಧ ಇಸ್ರೇಲ್ ‘ಆಪರೇಷನ್ ಪ್ರೊಟೆಕ್ಟಿವ್ ಎಡ್ಜ್’ ಪ್ರಾರಂಭಿಸಿತು. ಬಾಂಬ್ ದಾಳಿಯನ್ನು ಕೆಲವು ದಿನಗಳ ಕಾಲ ನಿಲ್ಲಿಸಿದ್ದ ಸಮಯದಲ್ಲಿ ಗಾಝಾದ ಹುಡುಗಿಯೊಬ್ಬಳು ಕುಸಿದು ಬಿದ್ದ ಕಟ್ಟಡದ ಅವಶೇಷದಲ್ಲಿ ಏನನ್ನೋ ಹುಡುಕುತ್ತಿರುವ ನಾಲ್ಕು ಸರಣಿ ಫೋಟೋಗಳು ಕಾಣಿಸಿಕೊಂಡವು. ಹಸಿರು ಕಮೀಜಿಗೆ ಗುಲಾಬಿ ಬಣ್ಣದ ಲೆಗ್ಗಿಂಗ್ ತೊಟ್ಟ, ಉದ್ದದ ಕೂದಲನ್ನು ಅಚ್ಚುಕಟ್ಟಾಗಿ ಬಾಚಿಕೊಂಡು ‘ಪೋನಿ ಟೈಲ್’ ಕಟ್ಟಿಕೊಂಡ ಹತ್ತು ವರುಷದ ಹುಡುಗಿಯ ಚಿತ್ರಗಳು ಅವು. ತೆಗೆದಿದ್ದ ಫೋಟೋಗಳಲ್ಲಿ, ಚೂರುಚೂರಾದ ಕಾಂಕ್ರೀಟ್ ಮತ್ತು ಸಿಂಡರ್​ಬ್ಲಾಕ್​ಗಳ ಒಳಗಿದ್ದ ಪುಸ್ತಕಗಳನ್ನು ಹೊರತೆಗೆದು ಅವಳು ತೋಳುಗಳಲ್ಲಿ ಜೋಡಿಸಿಟ್ಟುಕೊಂಡಿದ್ದಾಳೆ. ಹರಿದ ಪುಸ್ತಕಗಳಿಗೆ ಧೂಳು ಮೆತ್ತಿಕೊಂಡಿವೆ. ಮುಖಪುಟಗಳು ಹರಿದು ನೇತಾಡುತ್ತಿವೆ. ಆದರೆ ಕೊನೆಯ ಚಿತ್ರದಲ್ಲಿ ಆ ಹುಡುಗಿ ನಗುತ್ತ ಹೊರ ನಡೆಯುತ್ತಾಳೆ.

ಗಾಝಾದ ಯಾವ ಫೋಟೋಗಳು ಕೂಡ ಈ ಪುಟ್ಟ ಹುಡುಗಿಯ ನಾಲ್ಕು ಫೋಟೋಗಳಷ್ಟು ಪರಿಣಾಮ ಬೀರಿರಲಿಲ್ಲ. ಯುದ್ಧದ ಅಸಂಖ್ಯಾತ ಚಿತ್ರಗಳನ್ನು ನೋಡಿದ್ದೇನೆ. ಪ್ಯಾಲೆಸ್ತೀನ್‍ನನ್ನು ನೋವು ಮತ್ತು ಕೊಳಕು ತುಂಬಿದ ನೆಲವೆಂದೇ ಹೆಚ್ಚಿನವು ಚಿತ್ರಿಸಿವೆ. ಗಾಝಾದ ಆ ಪುಟ್ಟ ಹುಡುಗಿ ತನ್ನ ವಯಸ್ಸಿನ ಎಲ್ಲ ಹುಡುಗಿಯರಂತೆ ಸುಂದರ. ಅದರಲ್ಲೂ ಆ ಬೂದು ಬಣ್ಣದ ಅವಶೇಷಗಳ ನಡುವೆ ಅವಳು ಧರಿಸಿದ್ದ ಹಸಿರುಡುಗೆಯಿಂದ ಮತ್ತಷ್ಟು ಸುಂದರವಾಗಿ ಕಾಣಿಸುತ್ತಿದ್ದಳು. ಅವಳ ಕೈಯಲ್ಲಿದ್ದ ಹರಿದುಹೋದ ಪುಸ್ತಕಗಳು, ‘ಕತೆಯೊಂದಕ್ಕಿಂತ ಈ ಪ್ರಪಂಚದಲ್ಲಿ ಬೇರೆ ಯಾವುದೇ ವಸ್ತುವಿಗೆ ಇಷ್ಟು ಚೆಲುವು ಹಾಗೂ ಮಾನವೀಯತೆ’ ಇರುವುದಿಲ್ಲವೆಂಬುದನ್ನು ನೆನಪಿಸಿತು. ವಾಸ್ತವವೋ ಕಲ್ಪನೆಯೋ ಒಟ್ಟಿನಲ್ಲಿ ಜೀವನದ ಜಟಿಲ ಎಳೆಗಳನ್ನು ಸಾಹಿತ್ಯದಲ್ಲಿ ಹೆಣೆಯುವುದು ಒಂದು ‘ರಸಸಿದ್ಧಿ’ಯ ವರವೇ ಸರಿ. ಕತೆಗಳಲ್ಲಿನ ರೋಚಕ ತಿರುವುಗಳು, ಜಾಣ್ಣುಡಿಗಳೆಲ್ಲವೂ ಮಾನವನ ಅಸ್ತಿತ್ವದ ಅವ್ಯವಸ್ಥೆಯ ವಿವರಗಳನ್ನು ಕನ್ನಡಿಯಂತೆ ಬಿಂಬಿಸುತ್ತವೆ. ನಾವು ಹೇಳುವ ಕತೆಗಳಂತೆ ನಾವೂ, ಹೆಚ್ಚಲ್ಲ ಕಮ್ಮಿಯಲ್ಲ. ಆದರೆ ಹೊರಗಿನವರು ಪ್ಯಾಲೆಸ್ತೀನಿನ ಕತೆಗಳನ್ನು ಕೇಳಿದಾಗಲೆಲ್ಲ ಅಲ್ಲಿರುವ ನಿರಂತರ ಸಂಘರ್ಷದ ಸಣ್ಣ ಎಳೆಯನ್ನು ಮಾತ್ರ ಗಮನಿಸುತ್ತಾರೆ. ಪ್ಯಾಲೆಸ್ತೀನಿನ ಪಾತ್ರಗಳೆಂದರೆ ಮುಸುಕು ಧರಿಸಿ ಕಲ್ಲುಗಳನ್ನೆಸೆಯುತ್ತಿರುವ ಒಬ್ಬ ಉಗ್ರಗಾಮಿ, ನೆಲಸಮವಾದ ಮನೆಯುದುರು ಕೂತು ಅಳುತ್ತಿರುವ ಹಿಜಾಬ್ ತೊಟ್ಟ ಮುದುಕಿ ಅಷ್ಟೇ. ಕೋಪ ಮತ್ತು ನಷ್ಟದ ಈ ಪಕ್ಷಪಾತಿ ನಿರೂಪಣೆ ಪ್ಯಾಲೆಸ್ತೀನಿಯರನ್ನು ಒತ್ತೆಯಾಳುಗಳಾಗಿಸಿದೆ. ಅಂತಹ ಕಥಾವಸ್ತುವಿನಲ್ಲಿ ಕಲಾತ್ಮಕತೆಯ ಕೊರತೆಯಿದೆ.

ಹುಡುಗಿ, ಮತ್ತವಳು ಯುದ್ಧದ ಅವಶೇಷಗಳಿಂದ ರಕ್ಷಿಸಿದ ಪುಸ್ತಕಗಳಿಂದ ಪ್ರೇರಿತನಾಗಿ, ಸೊಬಗಿನ ದಲ್ಲಾಳಿಗಳಾದ ಪ್ಯಾಲೆಸ್ತೀನಿನ ಕವಿಗಳು ಮತ್ತು ಬರಹಗಾರರನ್ನು ಹುಡುಕಿಕೊಂಡು ಹೊರಡಲು ನಿರ್ಧರಿಸಿದೆ. ಚೆಲುವಿನ ವಿರುದ್ಧದ ದಿಕ್ಕಿನಲ್ಲೇ ಬಿಂಬಿತವಾಗಿರುವ ನಾಡನ್ನು, ತಮ್ಮ ಅಸ್ತಿತ್ವದ ತುಣುಕುಗಳನ್ನು ಕವಿತೆಗಳಲ್ಲಿ, ಸಾಲು ಸಾಲುಗಳಲ್ಲಿ, ಪುಟಗಳ ಮೇಲೆ ಅವರೆಲ್ಲ ಹಿಡಿದಿಡುತ್ತಾರೆ. ನಿಸ್ಸಂಶಯವಾಗಿ ಬರಹಗಾರರು, ಮತ್ತು ಅವರ ಪುಸ್ತಕಗಳನ್ನು ಮಾರಾಟ ಮಾಡುವವರು ನಾನು ಕೇಳಿ ದಣಿದ ಮತ್ತು ನಿರಾಶೆಗೊಂಡ ಕತೆಗಳಿಗಿಂತ ವಿಭಿನ್ನ ಕತೆಗಳನ್ನು ಹೇಳುತ್ತಾರೆ. ‘ಪ್ಯಾಲೆಸ್ತೀನ್ ಕಳೆದುಹೋಗಿದೆ’ ಎಂಬ ಅಂಶವನ್ನು ಹೊರತುಪಡಿಸಿ ಅದರ ವಿಶೇಷತೆಗಳನ್ನು ಬಿಚ್ಚಿಡುತ್ತಾರೆ.

(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9739277750 )

*

ಪರಿಚಯ : ಆಕರ್ಷ ರಮೇಶ ಕಮಲ ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್​ನಲ್ಲಿ ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಕೆಲಕಾಲ ಅಮೆರಿಕಾ, ಸ್ವಿಝರ್​ಲ್ಯಾಂಡ್, ಫ್ರಾನ್ಸ್​ನಲ್ಲಿ ನೆಲೆಸಿದ್ದರು. ಸದ್ಯ ಬೆಂಗಳೂರಿನ ಖಾಸಗೀ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಕವಿ, ಅನುವಾದಕ, ಕಿರುಚಿತ್ರ ನಿರ್ದೇಶಕ ಕೂಡ. ಪ್ರೆಸೆಂಟ್ ಸರ್, ಮರೀಚಿ ಎಂಬ ಕಿರುಚಿತ್ರಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಕೆಂಪಿರ್ವೆ, ಬೀರಬಲ್ ಟ್ರೆಲಜಿ, ಉನರ್ ವು ಸಿನೆಮಾದೊಂದಿಗೆ ಮಗಳು ಜಾನಕಿ ಧಾರವಾಹಿಯಲ್ಲಿಯೂ ನಟಿಸಿದ್ದಾರೆ. ‘ಗ್ರಾಫಿಟಿಯ ಹೂವು’ ಕವಿತಾ ಸಂಕಲನ ಪ್ರಕಟವಾಗಿದೆ.

ಇದನ್ನೂ ಓದಿ : New Play : ಅಚ್ಚಿಗೂ ಮೊದಲು ; ‘ಮನಸಲ್ಲಿರೋ ಮನೆ ಹುಡುಕಬೇಡಿ ವಿಳಾಸ ಹಿಡಿದು ಹುಡುಕಿ’

Published On - 1:22 pm, Fri, 6 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ