ಸಂಕಷ್ಟದಲ್ಲಿ ಚೈತ್ರಾ ಕುಂದಾಪುರ ವಿವಾಹ; ಮದುವೆ ಆದ ಕೆಲವೇ ದಿನಕ್ಕೆ ತಂದೆಯಿಂದಲೇ ಬಂತು ದೊಡ್ಡ ಆರೋಪ
ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ತಮ್ಮ ಮಗಳ ಮದುವೆ ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಗಳ ಮದುವೆಗೆ ಸರಿಯಾದ ಆಮಂತ್ರಣ ನೀಡಿರಲಿಲ್ಲ ಎಂದಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಮುನ್ನವೂ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಕುಂದಾಪುರ ಮೇ, 15: ಚೈತ್ರಾ ಕುಂದಾಪುರ (Chaitra Kundapura) ಅವರು ಇತ್ತೀಚೆಗೆ ಮದುವೆ ಆಗಿದ್ದರು. ಈ ವಿವಾಹ ಸರಳವಾಗಿ ನಡೆದಿತ್ತು. ಚೈತ್ರಾ ಅವರು ಶ್ರೀಕಾಂತ್ ಕಶ್ಯಪ್ ಹೆಸರಿನ ವ್ಯಕ್ತಿಯನ್ನು ವರಿಸಿದ್ದಾರೆ. ಇಬ್ಬರೂ ದೇವರಲ್ಲಿ ಸಾಕಷ್ಟು ನಂಬಿಕೆ ಇಟ್ಟವರು. ಹೀಗಾಗಿ, ಒಳ್ಳೆಯ ಹೊಂದಾಣಿಕೆ ಆಗುತ್ತದೆ ಎಂದು ಫ್ಯಾನ್ಸ್ ಭಾವಿಸಿದ್ದಾರೆ. ಹೀಗಿರುವಾಗಲೇ ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್ ದೊಡ್ಡ ಆರೋಪ ಒಂದನ್ನು ಮಾಡಿದ್ದಾರೆ. ‘ನನ್ನ ಮಗಳು ವಿವಾಹಕ್ಕೆ ನನಗೆ ಸರಿಯಾದ ಆಮಂತ್ರಣ ಕೊಟ್ಟಿಲ್ಲ’ ಎಂದು ಅವರು ಆರೋಪಿಸಿದ್ದಾರೆ.
‘ಮಗಳ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ’ ಎಂದು ಬಾಲಕೃಷ್ಣ ಹೇಳಿದ್ದಾರೆ.
ಚೈತ್ರಾ ಬಿಗ್ ಬಾಸ್ಗೆ ಹೋಗುವ ವಿಚಾರವನ್ನು ಬಾಲಕೃಷ್ಣ ಅವರಿಗೆ ಹೇಳಿರಲೇ ಇಲ್ಲವಂತೆ. ‘ಚೈತ್ರಾ ಬಿಗ್ ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಿಲ್ಲ. ನನ್ನನ್ನು ಮನೆಯಲ್ಲಿ ಬಿಟ್ಟು ಅಮ್ಮ-ಮಗಳು ಬೀಗ ಹಾಕಿ ಹೋಗಿದ್ದರು. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥ. ಚೈತ್ರಾ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ’ ಎಂದು ಬಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.
‘ಚೈತ್ರಾಗೆ ಯಾರೂ ದೊಡ್ಡ ಸ್ಥಾನಮಾನ ಕೊಡುವ ಅಗತ್ಯವಿಲ್ಲ. ತಂದೆಯನ್ನೇ ದೂರವಿಟ್ಟವರು ಸಂಸ್ಕೃತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ? ಆಕೆ ಸೈನಿಕರಿಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಅದು ಹೆಮ್ಮೆಯ ವಿಷಯ ಆಗುತ್ತಿತ್ತು. ಮೋಸದ ಹಣದಲ್ಲಿ ಆಕೆ ಕೊಟ್ಟು ಪ್ರಯೋಜನ ಏನು’ ಎಂಬುದು ಬಾಲಕೃಷ್ಣ ಅವರ ಪ್ರಶ್ನೆ.
‘ಮಗಳ ಮದುವೆಯನ್ನು ನಾನು ಒಪ್ಪುವುದಿಲ್ಲ. ನನಗೆ ಸರಿಯಾಗಿ ಆಮಂತ್ರಣ ಕೂಡ ನೀಡಿಲ್ಲ. ಮದುವೆ ಸಂದರ್ಭ ಆಕೆ ನನ್ನಲ್ಲಿ ಹಣ ಕೇಳಿದಳು. ನಾನು ಹೋಟೆಲ್ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಚೈತ್ರಾ ಮತ್ತು ಆಕೆಯ ತಾಯಿ ಹಣಕ್ಕಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರ ಪತಿ ನಮ್ಮ ಮನೆಯಲ್ಲಿ ಇದ್ದವನು. ಅವನು ಕೂಡ ಕಳ್ಳ. ಅವರಿಗೆ ಮಾನ ಮರ್ಯಾದೆ ಇಲ್ಲ. ಈಗ ನನ್ನ ಕುಟುಂಬದ ಮಾನ ಮರ್ಯಾದೆ ಕೂಡ ತೆಗೆದರು’ ಎಂದು ಬೇಸರ ಹೊರಹಾಕಿದ್ದಾರೆ ಬಾಲಕೃಷ್ಣ.
‘ನಾನು ಸತ್ಯ, ನ್ಯಾಯ, ಧರ್ಮದಲ್ಲಿರುವ ವ್ಯಕ್ತಿ. ನನ್ನ ದೊಡ್ಡ ಮಗಳು ಶಾಲೆ ಕೆಲಸ ಮಾಡಿಕೊಂಡು, ಹೊಲಿಗೆ ಮಾಡಿಕೊಂಡು ಗೌರವಾನ್ವಿತ ರೀತಿಯಲ್ಲಿ ಬದುಕುತ್ತಿದ್ದಾಳೆ. ನನ್ನ ದೊಡ್ಡ ಮಗಳ ಮೇಲೆ ಚೈತ್ರಾ ಸುಳ್ಳು ಅಪವಾದ ಹಾಕಿದ್ದಳು. ನಾನೇ ಮನೆ ನಡೆಸುವವಳು ಎಂದು ಬಿಂಬಿಸಿಕೊಂಡಿದ್ದಾಳೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಈಕೆ ಹಣ ಹೊಡೆದಿದ್ದಾಳೆ. ಆ ಹಣವನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟಿದ್ದಾಳೆ. ಪಡ್ಡೆ ಹುಡುಗರ ಹೆಸರಿನಲ್ಲೆಲ್ಲ ಡೆಪಾಸಿಟ್ ಮಾಡಿ, ಬಾಂಡ್ ಮೇಲೆ ಸಾಲ ಪಡೆದಿದ್ದಾಳೆ. ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ’ ಎಂದು ಚೈತ್ರಾ ಅವರ ಇತಿಹಾಸ ತೆರೆದಿಟ್ಟಿದ್ದಾರೆ ಅವರ ತಂದೆ.
ಇದನ್ನೂ ಓದಿ: ಶ್ರೀಕಾಂತ್ ಕಶ್ಯಪ್ ತಾಳಿ ಕಟ್ಟುವಾಗ ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ; ಇಲ್ಲಿದೆ ವಿಡಿಯೋ
‘ಆಕೆ ನನ್ನ ಜೀವನದಲ್ಲಿ ಬರಲೇಬಾರದು. ಜನ ಆಕೆಗೆ ಮನ್ನಣೆ ಕೊಡಬಾರದು. ತಂದೆ ಇಲ್ಲದ ಮಗಳು ಎಂದು ಹೇಳಿಕೊಂಡು ಬರುತ್ತಾಳೆ. ನನ್ನ ತಂದೆ ಬಾಲ ನಾಯ್ಕ್ ಗೌರವಾನ್ವಿತ ವ್ಯಕ್ತಿಯಾಗಿದ್ದರು. ತಂದೆಗೆ ಅನ್ನ ಹಾಕದವಳು ಏನು ದೇಶ ಸೇವೆ ಮಾಡುತ್ತಾಳೆ’ ಎಂಬುದು ಅವರ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Thu, 15 May 25