IPL 2025: RCB ಪರ ಕಣಕ್ಕಿಳಿಯಲು ಸೌತ್ ಆಫ್ರಿಕಾ ವೇಗಿಗೆ ಗ್ರೀನ್ ಸಿಗ್ನಲ್?
IPL 2025: ಐಪಿಎಲ್ನಲ್ಲಿರುವ ವಿದೇಶಿ ಆಟಗಾರರಿಗೆ ಸಂಪೂರ್ಣ ಟೂರ್ನಿ ಆಡಲು ಅನುವು ಮಾಡಿಕೊಡಬೇಕೆಂದು ಬಿಸಿಸಿಐ ಸೌತ್ ಆಫ್ರಿಕಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ಗಳಿಗೆ ಮನವಿ ಸಲ್ಲಿಸಿದೆ. ಈ ಮನವಿಯನ್ನು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಪುರಸ್ಕರಿಸಿದ್ದು, ಹೀಗಾಗಿ ಸೌತ್ ಆಫ್ರಿಕಾ ಆಟಗಾರರು ಜೂನ್ 3 ರವರೆಗೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Updated on:May 16, 2025 | 8:18 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಕೊನೆಯ 17 ಪಂದ್ಯಗಳಿಗೆ ಶನಿವಾರ ಚಾಲನೆ ಸಿಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 58ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಎದುರಿಸಲಿದೆ.

ಈ ಪಂದ್ಯಕ್ಕಾಗಿ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ಗಿ ಈಗಾಗಲೇ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಇದಾಗ್ಯೂ ಅವರು ಪ್ಲೇಆಫ್ ಹಂತದ ಪಂದ್ಯಗಳಿಗೆ ಅಲಭ್ಯರಗಾಲಿದ್ದಾರೆ ಎನ್ನಲಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಸಿದ್ಧತೆಗಾಗಿ ಸೌತ್ ಆಫ್ರಿಕಾ ಆಟಗಾರರು ಮೇ 26 ರಂದು ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಬೇಕು ಎಂದು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಸೂಚಿಸಿತ್ತು.

ಇದೀಗ ಬಿಸಿಸಿಐ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಡುವಣ ಮಾತುಕತೆ ಯಶಸ್ವಿಯಾಗಿದ್ದು, ಬಿಸಿಸಿಐನ ಮನವಿ ಬೆನ್ನಲ್ಲೇ ಸೌತ್ ಆಫ್ರಿಕಾ ಟೆಸ್ಟ್ ತಂಡದ ಅಭ್ಯಾಸ ಶಿಬಿರವನ್ನು ಮುಂದೂಡಲಾಗಿದೆ. ಅದರಂತೆ ಸೌತ್ ಆಫ್ರಿಕಾ ಟೆಸ್ಟ್ ತಂಡವು ಜೂನ್ 3 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಅಭ್ಯಾಸವನ್ನು ಆರಂಭಿಸಲು ನಿರ್ಧರಿಸಿದೆ ಎಂದು ದಿ ಏಜ್ ಪತ್ರಿಕೆ ವರದಿ ಮಾಡಿದೆ.

ಈ ಮೂಲಕ ಐಪಿಎಲ್ನಲ್ಲಿರುವ ಸೌತ್ ಆಫ್ರಿಕಾ ಆಟಗಾರರಿಗೆ ಸಂಪೂರ್ಣ ಟೂರ್ನಿ ಆಡಲು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಅನುವು ಮಾಡಿಕೊಟ್ಟಿದೆ. ಅದರಂತೆ ಆರ್ಸಿಬಿ ತಂಡದ ವೇಗಿ ಲುಂಗಿ ಎನ್ಗಿಡಿ ಲೀಗ್ ಹಂತದ ಮೂರು ಪಂದ್ಯಗಳಿಗೆ ಹಾಗೂ ಪ್ಲೇಆಫ್ ಹಂತದ ಪಂದ್ಯಗಳಿಗೆ ಲಭ್ಯರಿರಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಾಗೆಯೇ ಗುಜರಾತ್ ಟೈಟಾನ್ಸ್ ತಂಡದಲ್ಲಿರುವ ಕಗಿಸೊ ರಬಾಡ, ಪಂಜಾಬ್ ಕಿಂಗ್ಸ್ ತಂಡದ ಮಾರ್ಕೊ ಯಾನ್ಸೆನ್, ಮುಂಬೈ ಇಂಡಿಯನ್ಸ್ ತಂಡದ ರಯಾಲ್ ರಿಕೆಲ್ಟನ್ ಹಾಗೂ ಕಾರ್ಬಿನ್ ಬಾಷ್ ಕೂಡ ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಸೌತ್ ಆಫ್ರಿಕಾ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ದಿ ಏಜ್ ವರದಿಯಲ್ಲಿ ಹೇಳಲಾಗಿದೆ.
Published On - 11:55 am, Thu, 15 May 25









