IPL 2025: RCB ತಂಡಕ್ಕೆ ಕೆರಿಬಿಯನ್ ದೈತ್ಯ ಎಂಟ್ರಿ
IPL 2025 RCB: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ 11 ಪಂದ್ಯಗಳನ್ನಾಡಿದೆ. ಈ 11 ಮ್ಯಾಚ್ಗಳಲ್ಲಿ ಆರ್ಸಿಬಿ 8 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಒಟ್ಟು 16 ಅಂಕಗಳನ್ನು ಹೊಂದಿರುವ ರಾಯಲ್ ಪಡೆಯು ಮುಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ.
Updated on: May 15, 2025 | 8:32 AM

IPL 2025: ಐಪಿಎಲ್ ಸೀಸನ್-18ರ ದ್ವಿತೀಯಾರ್ಧದ ಪಂದ್ಯವು ಮೇ 17 ರಿಂದ ಶುರುವಾಗಲಿದೆ. ಶನಿವಾರ ಆರಂಭವಾಗಲಿರುವ ಪಂದ್ಯಾವಳಿಯ ಮೊದಲ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಆರ್ಸಿಬಿ ತಂಡದ ಮೂವರು ವಿದೇಶಿ ಆಟಗಾರರು ಆಗಮಿಸಿದ್ದಾರೆ.

ಭಾರತ ಮತ್ತು ಪಾಕ್ ನಡುವಣ ಯುದ್ಧ ಭೀತಿ ಹಿನ್ನಲೆಯಲ್ಲಿ ತವರಿಗೆ ತೆರಳಿದ್ದ ವೆಸ್ಟ್ ಇಂಡೀಸ್ನ ಸ್ಪೋಟಕ ದಾಂಡಿಗ ರೊಮಾರಿಯೊ ಶೆಫರ್ಡ್ ಬುಧವಾರ ಭಾರತಕ್ಕೆ ಹಿಂತಿರುಗಿದ್ದಾರೆ. ಹೀಗಾಗಿ ಆರ್ಸಿಬಿ ತಂಡದ ಮುಂದಿನ ಪಂದ್ಯದಲ್ಲಿ ಕೆರಿಬಿಯನ್ ದೈತ್ಯ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

ಇನ್ನು ಇಂಗ್ಲೆಂಡ್ ಆಟಗಾರರಾದ ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಜೇಕಬ್ ಬೆಥೆಲ್ ಕೂಡ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಲಭ್ಯರಿರಲಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧ ಆರ್ಸಿಬಿ ಪರ ಬೆಥೆಲ್ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.

ಇದಾಗ್ಯೂ ಎರಡು ಪಂದ್ಯಗಳ ಬಳಿಕ ಜೇಕಬ್ ಬೆಥೆಲ್ ಹಾಗೂ ರೊಮಾರಿಯೊ ಶೆಫರ್ಡ್ ತವರಿಗೆ ಹಿಂತಿರುವ ಸಾಧ್ಯತೆಯಿದೆ. ಏಕೆಂದರೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಮೇ 29 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಬೆಥೆಲ್ ಹಾಗೂ ಶೆಫರ್ಡ್ ಮೇ 25ರ ಬಳಿಕ ಇಂಗ್ಲೆಂಡ್ಗೆ ತೆರಳುವ ಸಾಧ್ಯತೆಯಿದೆ.

ಇನ್ನು ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿ ತಂಡದಲ್ಲೇ ಉಳಿಯಲಿದ್ದಾರೆ. ಏಕೆಂದರೆ ಈ ಬಾರಿ ಲಿವಿಂಗ್ಸ್ಟೋನ್ಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಹೀಗಾಗಿ ಆವರು ಆರ್ಸಿಬಿ ತಂಡದ ಜೊತೆ ಟೂರ್ನಿ ಮುಕ್ತಾಯದವರೆಗೆ ಕಾಣಿಸಿಕೊಳ್ಳಲಿದ್ದಾರೆ. ಇದಾಗ್ಯೂ ಫಿಲ್ ಸಾಲ್ಟ್ ಅವರ ಲಭ್ಯತೆಯ ಬಗ್ಗೆ ಯಾವುದೇ ಖಚಿತತೆ ಇಲ್ಲ.

ಏಕೆಂದರೆ ಸಾಲ್ಟ್ ಅನಾರೋಗ್ಯದ ಕಾರಣ ಐಪಿಎಲ್ನ ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಇಂಗ್ಲೆಂಡ್ಗೆ ತೆರಳಿರುವ ಅವರು ವಾಪಾಸಾಗಲಿದ್ದಾರಾ ಎಂಬುದೇ ಪ್ರಶ್ನೆ. ಒಂದು ವೇಳೆ ಸಾಲ್ಟ್ ಮರಳಿದರೆ, ಆರ್ಸಿಬಿ ತಂಡದ ಎಲ್ಲಾ ಪಂದ್ಯಗಳಿಗೂ ಲಭ್ಯರಿರಲಿದ್ದಾರೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಫಿಲ್ ಸಾಲ್ಟ್ ಕೂಡ ಆಯ್ಕೆಯಾಗಿಲ್ಲ.
