Art and Entertainment : ‘ಪ್ರಿಯತಮನಿಗಾಗಿ ಚಡಪಡಿಸುತ್ತಿರುವ ನನ್ನ ದುಃಖವನ್ನು ಹೇಗೆ ಹೇಳಲಿ’

Tumri Singing : ‘ಠುಮ್ರಿ ಸಂಗೀತದಲ್ಲಿ ಪ್ರೀತಿ-ಪ್ರೇಮ, ಪ್ರಣಯ, ವಿರಹ, ವಿವಾಹ ಬಾಹಿರ ಸಂಬಂಧ, ಅತ್ತೆ-ಸೊಸೆ ವೈಮನಸ್ಯ ಮುಂತಾದ ಮಾನವ ವ್ಯವಹಾರ ಸಂಬಂಧಿತ ವಿಷಯಗಳು ಪ್ರಕಟವಾಗುವುದನ್ನು ನೋಡಬಹುದು. ಬಹುಪಾಲು ಠುಮ್ರಿಗಳೆಲ್ಲಾ ನಾಯಿಕೆಯ ಒಳತೋಟಿಯಂತೆ ಅಭಿವ್ಯಕ್ತವಾಗುತ್ತವೆ.’ ಶ್ರೀಮತಿ ದೇವಿ

Art and Entertainment : ‘ಪ್ರಿಯತಮನಿಗಾಗಿ ಚಡಪಡಿಸುತ್ತಿರುವ ನನ್ನ ದುಃಖವನ್ನು ಹೇಗೆ ಹೇಳಲಿ’
ಠುಮ್ರಿ ಗಾಯನದ ಸಾಮ್ರಾಜ್ಞಿಯರು
Follow us
|

Updated on:Aug 05, 2021 | 6:42 PM

ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್​ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ಈ ವಿಚಾರವಾಗಿ ಇಂದಿನಿಂದ ಶುರುವಾಗಲಿದೆ ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಹೊಸ ಸರಣಿ. ಇದರಲ್ಲಿ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸುತ್ತಾರೆ. 

*

ಮೈಸೂರಿನಲ್ಲಿ ವಾಸಿಸುತ್ತಿರುವ ಶ್ರೀಮತಿ ದೇವಿ ಅವರು ಹಿಂದೂಸ್ತಾನಿ ಗಾಯಕಿ ಮತ್ತು ಲೇಖಕಿ. ಲಘು ಶಾಸ್ತ್ರೀಯ ಸಂಗೀತ ಪ್ರಕಾರವಾದ ಠುಮ್ರಿಯಲ್ಲಿ ಶೃಂಗಾರ ವ್ಯಕ್ತವಾಗುವ ಬಗೆಯನ್ನು ಮತ್ತದರ ಪರಂಪರೆಯ ಝಲಕ್​ ಅನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

*

‘ಅಬ್ ಕೆ ಸಾವನ್ ಘರ್ ಆಜಾ ಹೋ ಬಿದೇಸಿ ಸಯ್ಯಾ ಖಗವಾ ಲೇಗಯ್ಯೋ ಸಂದೇಸವಾ, ಪಿಯಾ ಕೆ ಪಾಸ ಲೆಜಾ’

ಬೇಗಂ ಅಖ್ತರ್ ಅವರು ಮಧುರ ಧ್ವನಿಯಲ್ಲಿ ಈ ಠುಮ್ರಿಯನ್ನು ಹಲವು ಏರಿಳಿತಗಳೊಂದಿಗೆ ವಿಸ್ತರಿಸುತ್ತಿದ್ದರೆ, ಶ್ರಾವಣ ಮಾಸದ ಮಳೆ, ಕೋಗಿಲೆಯ ಗಾನ, ನವಿಲಿನ ನಲಿವಿನ ನರ್ತನ ಇವುಗಳ ಮಧ್ಯೆ ವಿವಶವಾಗಿ ತನ್ನ ಪ್ರಿಯತಮ ಇನ್ನೂ ಬಂದಿಲ್ಲವೆಂದು ಪರಿತಪಿಸುವ ಹೆಣ್ಣಿನ ಚಿತ್ರ ಮನಸ್ಸಿನೊಳಗೆ ಮೂಡುತ್ತದೆ. ಪದಗಳನ್ನು ಹಲವು ಭಾವಗಳಲ್ಲಿ ಕುಣಿಸುತ್ತಾ, ಶೃಂಗರಿಸುತ್ತಾ ಸಾಗುವ ಠುಮ್ರಿಯ ಸರಳ, ಸುಂದರ ರಚನೆ ಎಲ್ಲರನ್ನೂ ತಲುಪುತ್ತದೆ. ಇದರಲ್ಲಿನ ಜೀವೋನ್ಮುಖಿಯಾದ ಭಾವವು ಮನಸ್ಸನ್ನು ತಟ್ಟುತ್ತದೆ.

ನವರಸಗಳಲ್ಲಿ ಒಂದಾದ ಶೃಂಗಾರವು ನೃತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವ್ಯಕ್ತಿ ಪಡೆದಿದೆ. ಕಥಕ್ ನೃತ್ಯದೊಂದಿಗೆ ಜನ್ಮ ತಳೆದ ಠುಮ್ರಿ, ದಾದ್ರಾ ಪ್ರಕಾರಗಳಲ್ಲಿ ಶೃಂಗಾರದ ಅಭಿವ್ಯಕ್ತಿಯನ್ನು ಕಾಣಬಹುದು. ದೈವಿಕವಾದ, ಗಂಭೀರವಾದ ಧ್ರುಪದ್ ಗಾಯನದ ನಂತರದ ಕಾಲದಲ್ಲಿ ಹಿಂದೂಸ್ತಾನಿ ಸಂಗೀತವು ಪರ್ಷಿಯನ್, ಅರೇಬಿಕ್ ಸಂಗೀತಗಳ ಪ್ರಭಾವವನ್ನೂ ಪಡೆದು ತನ್ನ ಚೌಕಟ್ಟನ್ನು ವಿಸ್ತರಿಸಿಕೊಳ್ಳುತ್ತಾ ಹೆಚ್ಚು ಸಂವೇದನಾಶೀಲವಾಗಿ ಮುಂದುವರಿಯಿತು. ಖ್ಯಾಲ್, ಠುಮ್ರಿ, ಟಪ್ಪಾ ಮೊದಲಾದ ಪ್ರಕಾರಗಳನ್ನು ಅಳವಡಿಸಿಕೊಂಡಿತು. ಇವುಗಳನ್ನು ಹಾಡುವ ಶೈಲಿ, ಒಳಗೊಂಡ ಸಾಹಿತ್ಯಗಳು ಮನುಷ್ಯನ ಭಾವನೆಗಳಿಗೆ ಹತ್ತಿರವಾದದ್ದಾಗಿತ್ತು.

ಶೃಂಗಾರಭರಿತ ರಚನೆಗಳಾದ ಠುಮ್ರಿಗಳನ್ನು ಹಾಡುತ್ತಿದ್ದ ಕಲಾವಂತ ಕುಟುಂಬದ ಸ್ತ್ರೀಯರಿಗೆ ನೃತ್ಯ, ಗಾಯನವೆರಡರಲ್ಲೂ ಶಿಕ್ಷಣವಿರುತ್ತಿದ್ದ ಕಾರಣ ಇವರು ಅಭಿನಯ ಸಹಿತವಾಗಿ ಗಾಯನವನ್ನು ಮಾಡುತ್ತಿದ್ದರು. ತಮಗಾಗಿ ಬರುವ ಶ್ರೋತೃಗಳನ್ನು ರಂಜಿಸುವುದು ಇವರ ಗುರಿಯಾಗಿರುತ್ತಿತ್ತು. ಹಾಡುತ್ತಾ ‘ಮುಜರಾ’ ಮಾಡುತ್ತಾ ಹಾಡಿನ ಶಬ್ದ ಹಾಗೂ ತಮ್ಮ ಹಾವ ಭಾವಗಳ ಮೂಲಕ ಪ್ರಣಯದ ಇಂಗಿತಗಳನ್ನು ವ್ಯಕ್ತಪಡಿಸುತ್ತಿದ್ದ ಈ ಗಾಯನ ಐಹಿಕವೆಂಬ ಹಣೆಪಟ್ಟಿಯನ್ನು ಹೊಂದಿದ್ದ ಕಾರಣ ಇದರ ಹಿಂದಿನ ಸಾಂಸ್ಕೃತಿಕ, ಸಾಮಾಜಿಕ, ಸಾಂಗೀತಿಕ ಮೌಲ್ಯಗಳು ಬಹುಕಾಲ ಗಮನಕ್ಕೆ ಬಾರದೇ ಹೋದವು. ಇದೇ ಕಾರಣದಿಂದ ಠುಮ್ರಿ ಪ್ರಕಾರವು ಬಹಳ ಕಾಲ ವೇದಿಕೆಯಲ್ಲಿ ಹಾಡುವಂಥಹ ಸಂಗೀತವೆನಿಸಿರಲಿಲ್ಲ ಮತ್ತು ಠುಮ್ರಿ ಗಾಯನವು ಆಕಾಶವಾಣಿಯಲ್ಲಿ ಮಾನ್ಯತೆ ಪಡೆಯಲೂ ತುಂಬಾ ಸಮಯ ಕಾಯಬೇಕಾಗಿ ಬಂದಿತು.

ಶೃಂಗಾರ ಮತ್ತು ಅದರ ಅಭಿವ್ಯಕ್ತಿ ಎಂಬುದು ಕಲೆಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಮೂಡುವಂಥವು ಮತ್ತು ಈ ಸೂಕ್ಷ್ಮತೆಯೇ ಕಲೆಯ ಶಕ್ತಿಯೂ ಹೌದು. ಮನುಷ್ಯನ ಮೂಲಭೂತ ಪ್ರವೃತ್ತಿಗಳಾದ ಹಸಿವು, ನಿದ್ರೆ ಮತ್ತು ಮೈಥುನಗಳ ಜೊತೆಯಲ್ಲಿ ಬದುಕುವ ದಾರಿಯನ್ನು ಕಂಡುಕೊಂಡ ಮನುಷ್ಯ, ತನ್ನಲ್ಲಿನ ವಿಚಾರಗಳ ಹಾಗೂ ಭಾವನೆಗಳ ಅಭಿವ್ಯಕ್ತಿಗಾಗಿ ಅರಸಿ-ಕಂಡುಕೊಂಡ ದಾರಿಯೇ ಕಲೆ. ಶಾಸ್ತ್ರೀಯ ಸಂಗೀತವು ಹಲವು ಬಗೆಯ ನೀತಿ ನಿಯಮಗಳ ಬಂಧನದೊಳಗೇ ಅರಳುವ ಬಿಂಬವಾದದ್ದರಿಂದ ದೇಶೀಯ ಹಾಗೂ ಜಾನಪದ ಪ್ರಕಾರಗಳಲ್ಲಿರುವ ಮುಕ್ತತೆ ಅಥವಾ ಅಭಿವ್ಯಕ್ತಿಗಿರುವ ಸಾತಂತ್ರ್ಯ ಇಲ್ಲಿ ದೊರಕಲಾರದು. ಹಾಗೆಯೇ ಕಲಾ ಪ್ರಕಾರವೊಂದು ಶಾಸ್ತ್ರೀಯ ಎನಿಸಿಕೊಳ್ಳಬೇಕಾದರೆ ಅದು ನಿಯಮಗಳ ಚೌಕಟ್ಟಿನೊಳಗೆ ಬರಬೇಕಾಗುತ್ತದೆ. ಮತ್ತು ಹಾಗಾಗುವ ಹಾದಿಯಲ್ಲಿ ಢಾಳಾಗಿ (ಲೌಡ್) ಹೊರಹೊಮ್ಮುತ್ತಿರುವ ಹಲವು ಸಹಜ ಭಾವಗಳ ಅಭಿವ್ಯಕ್ತಿ ಸೂಕ್ಷ್ಮವಾಗಬೇಕಾಗುತ್ತದೆ. ಈ ಪಲ್ಲಟವನ್ನು ಠುಮ್ರಿ ಸಂಗೀತ ಪ್ರಕಾರದ ಬೆಳವಣಿಗೆಯಲ್ಲಿ ಕಾಣಬಹುದಾಗಿದೆ.

ಠುಮ್ರಿ ಎಂಬ ಶಬ್ದವು ಹುಟ್ಟಿದ್ದೇ ‘ಕುಣಿಯುವುದು’ ಎಂಬ ಅರ್ಥ ಹೊಂದಿದ ‘ಠುಮಕ’ ಎಂಬ ಶಬ್ದದಿಂದ. ‘ಠುಮಕ ಚಲತ ರಾಮಚಂದ್ರ, ಬಾಜತ ಪೈಂಜನಿಯಾ’ ಎಂಬ ತುಲಸಿ ದಾಸರ ಪ್ರಸಿದ್ಧ ಭಜನ್​ನಲ್ಲಿ ಕಾಲ್ಗೆಜ್ಜೆಗಳನ್ನು ಕುಣಿಸುತ್ತಾ ಬರುವ ಬಾಲಕ ರಾಮನ ವರ್ಣನೆ ಇರುವುದನ್ನು ನೋಡಬಹುದು. ಠುಮ್ರಿಯನ್ನು ಪೂರಬ್ ಅಂಗದ ಠುಮ್ರಿ ಮತ್ತು ಪಂಜಾಬ್ ಅಂಗದ ಠುಮ್ರಿ ಎಂಬ ಎರಡು ಪ್ರಧಾನ ವಿಭಾಗಗಳಲ್ಲಿ ನೋಡಲಾಗಿದೆ. ಠುಮ್ರಿ ಹಾಗೂ ಕಥಕ್ ನೃತ್ಯಗಳೆರಡು ಮೈದಳೆದ ಊರಾದ ಲಖ್ನೋ ಹೆಸರಿನಲ್ಲಿನ ‘ಲಖ್ನೋ ಶೈಲಿ’ ಮತ್ತು ಸಮೃದ್ಧ ಗಾಯನ ಪರಂಪರೆ ಹೊಂದಿದ ‘ಬನಾರಸ್’ ಶೈಲಿ ಇವೆರಡೂ ಪೂರಬ್ ಅಂಗದಲ್ಲಿ ಸೇರುವಂಥವು. ಪಂಜಾಬ್ ಶೈಲಿಯ ಠುಮ್ರಿಯನ್ನು ಪ್ರಸಿದ್ಧಗೊಳಿಸಿದವರು ಉಸ್ತಾದ್ ಬಡೆ ಗುಲಾಂ ಅಲಿ ಖಾನ್. ಇದು ಅತ್ಯಂತ ಚಂಚಲ-ಚಪಲ ಸಂಚಾರ ಹೊಂದಿರುವುದನ್ನು ಗುರುತಿಸಬಹುದು. ಠುಮ್ರಿಯನ್ನು ಬೋಲ್ ಬನಾವ್ ಕಿ ಠುಮ್ರಿ ಮತ್ತು ಬೋಲ್ ಬಾಂಟ್ ಕಿ ಠುಮ್ರಿ ಎಂಬ ಎರಡು ಪ್ರಕಾರಗಳಲ್ಲೂ ವಿಭಾಗಿಸಲಾಗಿದೆ. ಬೋಲ್ ಬನಾವ್ ಕಿ ಠುಮ್ರಿಯಲ್ಲಿ ಶಬ್ದವನ್ನು ಅರ್ಥಪೂರ್ಣವಾಗಿ ಭಾವ ಸ್ಫುರಿಸುವಂತೆ ವಿವರವಾಗಿ ಹಾಡಲಾಗುತ್ತದೆ. ಇದು ಶೃಂಗಾರ ರಸದ ಹಲವು ಮಗ್ಗುಲುಗಳನ್ನು ಮುಂದಿಡುತ್ತದೆ. ಬೋಲ್ ಬಾಂಟ್ ಕಿ ಠುಮ್ರಿಯು ವೇಗದ ಲಯದಲ್ಲಿದ್ದು, ಶಬ್ದಗಳನ್ನು ಛೇದಿಸುತ್ತಾ ರಭಸದಿಂದ ಸಾಗುತ್ತದೆ.

manoranjana vruttanta

ಕಲೆ : ಸುಧಾ ಬರೆಗಾರ

ಹಳೆಯ ಪ್ರಸಿದ್ಧ ಠುಮ್ರಿ ಗಾಯಕಿಯರ ಹೆಸರಿನಲ್ಲಿ ‘ಬಾಯಿ’ ಹಾಗೂ ‘ಜಾನ್’ ಎಂಬ ಶಬ್ದ ಜೊತೆಯಾಗಿರುತ್ತಿದ್ದುದ್ದನ್ನು ನೋಡಬಹುದು, ಗೋಹರ್ ಜಾನ್, ಮಲ್ಕಾ ಜಾನ್, ರಸೂಲನ್ ಬಾಯಿ, ಕಾಶಿ ಬಾಯಿ, ಬದಿ ಮೋತಿ ಬಾಯಿ, ಜಾನ್ಕಿ ಬಾಯಿ, ಜದ್ದನ್ ಬಾಯಿ ಇತ್ಯಾದಿ. ಇವರಲ್ಲದೆ ಬೇಗಂ ಅಖ್ತರ್, ಸಿದ್ಧೇಶ್ವರಿ ದೇವಿ, ಶೋಭಾ ಗುರ್ಟು ನಂತರದಲ್ಲಿ ಬಂದ ಗಾಯಕಿ ಗಿರಿಜಾ ದೇವಿ ಇವರೆಲ್ಲರೂ ಠುಮ್ರಿ ಗಾಯನಕ್ಕೆ ಹೊಸ ಆಯಾಮವನ್ನು ಕೊಟ್ಟವರು.

ದಿನದ ಬೇರೆ ಬೇರೆ ಸಮಯಗಳಿಗೆ ಸರಿಯಾಗಿ ನಿಗದಿತವಾದ ಬೇರೆ ಬೇರೆ ರಾಗಗಳು, ಬದಲಾಗುವ ಋತುಗಳಾದ ಗ್ರೀಷ್ಮ, ವಸಂತ, ಶಿಶಿರ, ವರ್ಷಾ ಮೊದಲಾದವುಗಳೊಂದಿಗೆ ಬದಲಾಗುವ ನಿಸರ್ಗಕ್ಕೆ ಸ್ಪಂದಿಸುವಂಥ ಸ್ವರ ಸಮೂಹಗಳುಳ್ಳ ರಾಗಗಳು, ಅವುಗಳನ್ನು ವರ್ಣಿಸುವ ಬಂದಿಶ್(ರಚನೆ)ಗಳನ್ನು ಹೊಂದಿರುವ ನಮ್ಮ ಸಂಗೀತದಲ್ಲಿ ಸಹಜ ಜೀವನದ ಒಡನಾಡಿಗಳಾದ ಸಂತೋಷ, ಬೇಸರ, ಪ್ರೀತಿ, ಪ್ರೇಮ, ಕಾಮ, ಮುನಿಸು, ಭಯ, ನಿರಾಸೆ ಇವೆಲ್ಲವೂ ಅಭಿವ್ಯಕ್ತಿ ಪಡೆದಿವೆ. ಠುಮ್ರಿ ಸಂಗೀತದಲ್ಲಿ ಪ್ರೀತಿ-ಪ್ರೇಮ, ಪ್ರಣಯ, ವಿರಹ, ವಿವಾಹ ಬಾಹಿರ ಸಂಬಂಧ, ಅತ್ತೆ-ಸೊಸೆ ವೈಮನಸ್ಯ ಮುಂತಾದ ಮಾನವ ವ್ಯವಹಾರ ಸಂಬಂಧಿತ ವಿಷಯಗಳು ಪ್ರಕಟವಾಗುವುದನ್ನು ನೋಡಬಹುದು. ಬಹುಪಾಲು ಠುಮ್ರಿಗಳೆಲ್ಲಾ ನಾಯಿಕೆಯ ಒಳತೋಟಿಯಂತೆ ಅಭಿವ್ಯಕ್ತವಾಗುತ್ತವೆ.

ಠುಮ್ರಿ ಹಾಗೂ ಖ್ಯಾಲ್ ಸಂಗೀತದ ಹೆಚ್ಚಿನ ಬಂದಿಶ್‌ಗಳು ರಚನೆಯಾಗಿರುವುದು ಬ್ರಿಜ್ ಭಾಷೆಯಲ್ಲಿ. ಠುಮ್ರಿಯಲ್ಲಿ ಖ್ಯಾಲ್‌ನಲ್ಲಿರುವಂತೆ ಸ್ಥಾಯಿ-ಅಂತರಾ ಎಂಬ ಎರಡು ಭಾಗಗಳಿರುತ್ತವೆ. ಠುಮ್ರಿಗಳನ್ನು ಹಾಡುವುದು ಉಪ ಶಾಸ್ತ್ರೀಯ ಗಾಯನಕ್ಕೇ ಮೀಸಲಾಗಿರುವ ಕಾಫಿ, ಖಮಾಜ್, ಪೀಲು, ಪಹಾಡಿ, ತಿಲಂಗ್, ಗಾರಾ, ದೇಸ್, ಜೋಗಿಯಾ ಮೊದಲಾದ ರಾಗಗಳಲ್ಲಿ. ಸಂಗೀತದಲ್ಲಿ ಈ ರಾಗಗಳಿಗೆ ಕ್ಷುದ್ರ ಪ್ರಕೃತಿಯ ರಾಗಗಳೆಂಬ ಹೆಸರಿದೆ. ಠುಮ್ರಿ ಗಾಯನದಲ್ಲಿ ವ್ಯಕ್ತವಾಗುವ ವಸ್ತು-ವಿಚಾರವಾದ ಶೃಂಗಾರವನ್ನು ಕೆಲವು ಪರಂಪರೆಯ ಹಾಗೂ ಆಧುನಿಕ ಬಂದಿಶ್‌ಗಳ ಉದಾಹರಣೆಯ ಮೂಲಕ ನೋಡಬಹುದು.

ಗಯೋರಿ ಮಾಧು ಸಯ್ಯಾ ಬಿದೇಸ ಗಯೆ ಲಿಖ ಲಿಖ ಪತಿಯಾ ಭೇಜೊ ಸಯ್ಯಾಕೊ ಆಪ ನ ಆಯೆ ಪತಿಯಾ ನ ಭೇಜೆ ಕೈಸಾ ಜೋಗಲಿಯೆ

ಎಂಬಲ್ಲಿ ‘ಪ್ರಿಯಕರ ಬೇರೆಡೆಗೆ ಹೋದ ನಂತರ ತನಗೆ ಪತ್ರವೂ ಬರೆದಿಲ್ಲ’ ಎಂಬ ನಾಯಕಿಯ ಬೇಸರ ಇದೆ.

ಸುಧ ಲಾಗ ರಹಿ ತೊರಿ ಭಾಟ ಪಹರ ತನ ಮನ ಕಿ ನಾಹಿ ಮೋಹೆ ಖಾಕ ಖಬರ

ಪ್ರಿಯತಮ ಇನ್ನೂ ಬಾರದೆ ತನ್ನ ಮನಸ್ಸು ದೇಹಕ್ಕೆ ಸಮಾಧಾನವಿಲ್ಲ ಎನ್ನುವ ಶಬ್ದಗಳು ಇಲ್ಲಿವೆ.

ಬೀತ ಗಯಿ ಸಾರಿ ರೈನ ಸಖೀ ರಿ ಮೋಹೆ ಪಿಯಾ ಬಿನ ಗಿನತ ತಾರೆ

ಪ್ರಿಯತಮನಿಲ್ಲದ ರಾತ್ರೆಯನ್ನು ಬೇಸರದಿಂದ ತಾರೆಗಳನ್ನು ಎಣಿಸುತ್ತಾ ಕಳೆದದ್ದನ್ನು ಈ ಬಂದಿಶ್ ಹೇಳುತ್ತದೆ.

ದುಖವಾ ಮೈ ಕಾಸೆ ಕಹೀ ಮೋರಿ ಸಜನಿ ತರಪ ತರಪ ನಿಕಸ ಜಾತ ಜಿಯಾ ಪಿಯಾ ಬಿನ ಕಲ ನಾಹಿ ಪರೆ, ಏಕ ಘರಿ ಪಲ ಛಿನ

ಪ್ರಿಯತಮನಿಗಾಗಿ ಚಡಪಡಿಸುತ್ತಿರುವ ನನ್ನ ದುಃಖವನ್ನು ಹೇಗೆ ಹೇಳಲಿ, ಅವನಿಲ್ಲದೆ ಒಂದು ಕ್ಷಣವನ್ನೂ ಕಳೆಯಲಾಗುತ್ತಿಲ್ಲ ಎಂಬುದು ಈ ಬಂದಿಶ್‌ನ ಅರ್ಥ.

ಮೋರೆ ಕರಮವಾ ಮೆ ಯಾಹಿ ಲಿಖಾ, ಹೋ ರಾಜಾ ಕರ ಲೆ ಸವತಿಯಾ ಸೆ ಪ್ರೀತ

ನೀನು ನನ್ನ ಸವತಿಯೊಂದಿಗೆ ಇರುವುದೇ ನನ್ನ ಹಣೆಯಲ್ಲಿ ಬರೆದಿರುವುದೇನೋ ಎನ್ನುತ್ತದೆ ಈ ಬಂದಿಶ್.

manoranjana vruttanta

ಕಲೆ : ಸುಧಾ ಬರೆಗಾರ

ಈ ಎಲ್ಲಾ ಠುಮ್ರಿಯ ಬಂದಿಶ್‌ಗಳಲ್ಲಿ ಗೆಜ್ಜೆಯ ಝಣಝುಣ ಶಬ್ದದಿಂದಾಗಿ ಗುಟ್ಟಾಗಿ ರಾತ್ರಿ ಪ್ರಿಯಕರನ ಬಳಿ ಹೋಗಲಾಗದ ದುಃಖ (ಪಾಯಲ್ ಮೋರಿ ಬಾಜೆ ಝನನ ಝನನ, ಕೈಸೆ ಕರ ಆವೂ ಬಲಮವಾ), ಪ್ರಿಯಕರನ ಬಳಿ ಹೋಗಲು ಅತ್ತೆ ಹಾಗೂ ನಾದಿನಿಯರಿಂದಾಗುವ ತೊಂದರೆ (ಸಾನ ನನದ್ ಮೋರಿ ಜನಮಕಿ ಬೈರನ), ಸವತಿಯ ಕುರಿತ ಕೋಪ (ಸೌತನ ಕೆ ಸಂಗ ರಾತ್ ಜಗೆ ಹೋ), ವಿರಹ (ಸೈಯಾ ಬಿದೇಸ್ ಗಯೆ, ನೀಂದ ನ ಆವತ ಆಜ), ನಿಸರ್ಗದಲ್ಲಿನ ಕಾಲಗಳ ಬದಲಾವಣೆಯೊಂದಿಗೆ ಹೆಚ್ಚುವ ಕಾತರತೆ (ಸಾವನ್ ಪಿಯಾ ಬಿನ್ ಬೀತಗಯೋ, ಕೈಸೆ ಮೋರಿ ಕಟೆ ದಿನ) ಇವುಗಳನ್ನು ಕಾಣಬಹುದು.

ಠುಮ್ರಿಯ ಈ ಭಾವೋತ್ಕಟತೆ, ರಾಗದ ಬಿಗಿ ಕಟ್ಟುಪಾಡುಗಳಿಲ್ಲದೆ ಅಭಿವ್ಯಕ್ತಿಗೆ ಪೂರಕವಾಗುವಂತೆ ಸ್ವರಗಳೊಡನೆ ಆಟವಾಡುವ ಮುಕ್ತತೆ, ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಗುರುತನ್ನು ತಂದುಕೊಟ್ಟಿದೆ.

ಇದನ್ನೂ ಓದಿ : Art and Entertainment : ಬೆದೆಯೊಳು ಕುರುಡಪ್ಪ ಪ್ರಕೃತಿ ಒಲವೊಳು ಕಣ್ತೆರೆವಳು

Published On - 2:52 pm, Sun, 1 August 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ