Gangubai Hangal‘s Death Anniversary : ‘ಗಂಗವ್ವ’ನೆಂಬ ರಾಗದೊಂದಿಗೆ ಮುಂದುವರೆದ ‘ಅವಳ’ ಆಲಾಪ
Hindusthani Music : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜೆ, ಕಿರಾಣಾ ಘರಾಣಾದ ಮೇರು ಕಲಾವಿದೆ ಡಾ. ಗಂಗೂಬಾಯಿ ಹಾನಗಲ್ ಅವರು ಸ್ವರೈಕ್ಯವಾದ ದಿನ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ವಾಸಿಸುತ್ತಿರುವ ಹಿಂದೂಸ್ತಾನಿ ಕಲಾವಿದೆ ಶ್ರೀಮತಿದೇವಿ ಅವರ ವಿಚಾರಸ್ಮರಣ ನಿಮ್ಮ ಓದಿಗೆ.
Gangubai Hangal‘s Death Anniversary : ಗಂಗೂಬಾಯಿಯವರು 1913ರ ಮಾರ್ಚ್ 5ರಂದು ಧಾರವಾಡದಲ್ಲಿ ಜನಿಸಿದರು. ಅವರ ತಾಯಿ ಅಂಬಾಬಾಯಿ ಕರ್ನಾಟಕಿ ಹಾಡುಗಾರ್ತಿಯಾಗಿದ್ದರು. ಮಗಳ ಪ್ರತಿಭೆಯನ್ನು ಗುರುತಿಸಿ, ಸಂಗೀತ ಕಲಿಯಲು ಪ್ರೋತ್ಸಾಹಿಸಿದರು ಮಾತ್ರವಲ್ಲ ತಾವು ಹಾಡುತ್ತಿರುವ ಕರ್ನಾಟಕಿ ಸಂಗೀತದಿಂದ ಮಗಳ ಸಂಗೀತಕ್ಕೆ ತೊಂದರೆಯಾಗಬಾರದೆಂದು ತಾವು ಹಾಡುವುದನ್ನು ನಿಲ್ಲಿಸಿದ್ದರು. ಮುಂದೆ ಗಂಗೂಬಾಯಿ ತುಂಬಾ ಪ್ರಯಾಸ ಪಟ್ಟು ಕಿರಾನಾ ಘರಾಣೆಯ ಮೇರು ಕಲಾವಿದರಾದ ಸವಾಯಿ ಗಂಧರ್ವರ ಶಿಷ್ಯೆಯಾದರು. ಕುಟುಂಬದ ಆಧಾರವಾಗಿದ್ದ ತಾಯಿಯನ್ನು ಬಹು ಬೇಗ ಕಳೆದುಕೊಂಡ ಗಂಗೂಬಾಯಿಯವರಿಗೆ ಕುಟುಂಬದ ಪೋಷಣೆಗಾಗಿ ನಿಗದಿತವಾದ ಆದಾಯದ ಅವಶ್ಯಕತೆ ಇತ್ತು. ಇದಕ್ಕಾಗಿ ಆಕಾಶವಾಣಿಗಳಲ್ಲಿ ಹಾಗೂ ಸಭಾಗಳಲ್ಲಿ ಕಾರ್ಯಕ್ರಮ ನೀಡುವ ಸಲುವಾಗಿ ದೇಶದೆಲ್ಲೆಡೆ ಪ್ರಯಾಣಿಸಬೇಕಾಗುತ್ತಿತ್ತು. ಓರ್ವ ಸ್ತ್ರೀಯಾಗಿ, ಪುರುಷರ ಭದ್ರ ಕೋಟೆಯೊಳಗೆ ಹೊಕ್ಕು, ಸರಿ ಸಮಾನವಾಗಿ ನಿಂತು ತಮ್ಮ ಗಾಯನದಿಂದ ಎಲ್ಲಾ ಕಡೆಯಿಂದಲೂ ಪ್ರಶಂಸೆಯನ್ನು ಹೊತ್ತುಕೊಂಡು ಬಂದು, ಗಳಿಸಿದ ಆದಾಯದಿಂದ ಮಕ್ಕಳನ್ನು-ಮನೆಯವರನ್ನು ಜತನ ಮಾಡಿದವರು ಗಂಗೂಬಾಯಿ. ಶ್ರೀಮತಿದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು, ಮೈಸೂರು
*
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪುರುಷ ನಿರ್ಮಿತ ಕೋಟೆಯನ್ನು ಪ್ರವೇಶಿಸಿದ ಕರ್ನಾಟಕ ಮೊದಲ ಗಾಯಕಿ ಗಂಗೂಬಾಯಿ ಹಾನಗಲ್. ಕುಲೀನ ಮನೆತನದ ಸ್ತ್ರೀಯರಿಗೆ ಸಂಗೀತ ಕಲಿಯಲು ಅವಕಾಶವಿಲ್ಲದೆ ಇದ್ದ ಕಾಲದಲ್ಲಿ ದಿಟ್ಟ ಹೆಜ್ಜೆಯಿಂದ ಸಂಗೀತ ಕ್ಷೇತ್ರವನ್ನು ಪ್ರವೇಶಿಸಿ, ಅದನ್ನು ತಮ್ಮ ಜೀವನದ ದಾರಿಯಾಗಿಸಿಕೊಂಡವರು ಅವರು. ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರನ್ನು ನಾನು ನೇರವಾಗಿ ಭೇಟಿಯಾದದ್ದು, ಮಾತನಾಡಿಸಿದ್ದು ಕೆಲವೇ ಬಾರಿ. ಧಾರವಾಡದಲ್ಲಿ ಚಂದ್ರಶೇಖರ ಪುರಾಣಿಕಮಠ ಅವರ ಬಳಿ ಸಂಗೀತ ಕಲಿಯುತ್ತಿದ್ದ ಸಂದರ್ಭದಲ್ಲಿ ನಮ್ಮ ಗುರುಗಳು ಹಾಡಿದ ಸಿಡಿಯನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದ ಗಂಗೂಬಾಯಿಯವರು ಇಳಿ ವಯಸ್ಸಿನ ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲು ಆಗಿರಲಿಲ್ಲ.
ಮುಂದೆ ಅವರ ಮನೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಗುರುಗಳೊಂದಿಗೆ ನಾವು ಕೆಲವು ಶಿಷ್ಯರು ಹಾಗೂ ಆಯೋಜಕರೊಂದಿಗೆ ಅವರ ಮನೆ ‘ಗಂಗಾಲಹರಿ’ಗೆ ಹೋಗಿದ್ದೆವು. ಅಲ್ಲಿ ಕಾರ್ಯಕ್ರಮದ ಬಗ್ಗೆ, ಸಿಡಿಯ ಬಗ್ಗೆ ನಾನು ಮಾತನಾಡಿದಾಗ ಮಗುತನದ ಮುಗ್ಧತೆಯಿಂದ ಕಣ್ಣರಳಿಸಿ ನೋಡಿದ ಗಂಗಜ್ಜಿಯ ನೋಟ ನನ್ನಲ್ಲಿ ಇನ್ನೂ ಹಸಿರಾಗಿದೆ. ಇನ್ನೊಮ್ಮೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭಕ್ಕೆ ಖ್ಯಾಲ್ ರೂಪದ ಪ್ರಾರ್ಥನೆಯನ್ನು 15 ನಿಮಿಷಗಳ ಕಾಲ ಹಾಡುವ ಭಾಗ್ಯ ನನಗೆ ದೊರಕಿತ್ತು. ಧಾರವಾಡದ ಕಲಾಭವನದಲ್ಲಿ, ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಉದ್ಘಾಟಕರಾಗಿ, ಮುಖ್ಯ ಅತಿಥಿಯಾಗಿ ಬಂದು ಮಾತುಗಳನ್ನಾಡಿ ಹರಸುತ್ತಿದ್ದ ಗಂಗೂಬಾಯಿಯವರನ್ನು ನಾನು ಕಂಡಿದ್ದೇನೆ. ಕೊನೆಯಲ್ಲಿ ಅವರ ಅಂತಿಮ ದರ್ಶನವನ್ನೂ ನನ್ನ ಗುರುಗಳ ಜೊತೆಯಲ್ಲಿ ಹೋಗಿ ಮಾಡಿದ್ದೆ.
ಧಾರವಾಡದಲ್ಲಿ ನಾನು ವಾಸವಾಗಿದ್ದ ಮನೆಯೊಡತಿ ಸಾಹಿತಿ ದಮಯಂತಿ ನರೇಗಲ್ ಅವರು ಅದೇ ಸಂದರ್ಭದಲ್ಲಿ ಗಂಗೂಬಾಯಿಯವರ ಕುರಿತ ‘ಗಂಗಾವತರಣ’ ಎಂಬ ಪುಸ್ತಕವನ್ನು ಬರೆಯುತ್ತಿದ್ದು, ಅದಕ್ಕಾಗಿ ಅವರು ಹಲವಾರು ಬಾರಿ ಧಾರವಾಡದಿಂದ ಹುಬ್ಬಳ್ಳಿಗೆ ಗಂಗೂಬಾಯಿಯವರನ್ನು ಮಾತನಾಡಿಸುವ ಸಲುವಾಗಿ ಹೋಗಿ ಬರುತ್ತಿದ್ದರು ಮತ್ತು ಮನೆಗೆ ಹಿಂತಿರುಗಿದ ಬಳಿಕ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಸಂಗೀತ ಕ್ಷೇತ್ರದಲ್ಲಿನ ಅನೇಕ ಹಿರಿಯರಿಂದ ಹಿಡಿದು ಸ್ನೇಹಿತರವರೆಗೆ ಎಲ್ಲರೂ ಗಂಗೂಬಾಯಿಯವರ ಬಗ್ಗೆ ಮಾತನಾಡುವ ಹಲವು ಬಗೆಯ ಮಾತುಗಳನ್ನು ಕೇಳುತ್ತಿದ್ದೆ. ಆದರೆ ಆಗ ಗಂಗೂಬಾಯಿಯವರ ಸಂಗೀತ ಮತ್ತು ಜೀವನವನ್ನು ಹೇಗೆ ಗ್ರಹಿಸಿದ್ದೆನೆಂಬುದು ನನಗೆ ಸ್ಪಷ್ಟವಿಲ್ಲ. ಇಂದು ಒಬ್ಬ ಸಂಗೀತದ ವಿದ್ಯಾರ್ಥಿನಿಯಾಗಿ, ಕಲಾವಿದೆಯಾಗಿ, ಸಾಹಿತ್ಯ-ಸಂಸ್ಕೃತಿಗಳ ಅಭ್ಯಾಸಿಗಳಾಗಿ ನನಗೆ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಕಲಾವಿದೆಯಾಗಿ ಗಂಗೂಬಾಯಿಯವರ ಸ್ಥಾನ ಎಷ್ಟು ಪ್ರಮುಖವಾದದ್ದು ಎಂಬುವುದರ ಅರಿವಾಗುತ್ತದೆ.
ಇಂದಿನ ಸಮಾಜ, ಬದುಕಿನ ನಡೆ ಹಲವು ರೀತಿಯಲ್ಲಿ ಮೊದಲಿಗಿಂತ ಬದಲಾವಣೆಯನ್ನು ಪಡೆದುಕೊಂಡಿದ್ದರೂ ಅದೆಷ್ಟೋ ಬಾರಿ ದಿನನಿತ್ಯದ ಜಂಜಡದಲ್ಲಿ ನಮ್ಮನ್ನು ನಾವು ಕಳೆದುಕೊಂಡುಬಿಟ್ಟಂತೆ ಕಾಣುತ್ತಿರುತ್ತದೆ. ಆದರೆ ಪೂರಕವಾದ ಕೌಟುಂಬಿಕ-ಸಾಮಾಜಿಕ ವಾತಾವರಣವಿಲ್ಲದೇ ಇದ್ದ ಸಂದರ್ಭದಲ್ಲಿ ನಿರಂತರವಾಗಿ ಎದುರಾದ ಹಲವು ಬಗೆಯ ಅಭದ್ರತೆಗಳ ಮಧ್ಯದಲ್ಲೇ ಬದುಕಿ, ಎತ್ತರಕ್ಕೆ ಬೆಳೆದು ಮುಂದಿನವರಿಗೆ ದಾರಿದೀಪವೆನಿಸಿದವರು ಗಂಗೂಬಾಯಿಯವರಂಥವರು.
ಗಂಗೂಬಾಯಿಯವರು 1913ರ ಮಾರ್ಚ್ 5ರಂದು ಧಾರವಾಡದಲ್ಲಿ ಜನಿಸಿದರು. ಅವರ ತಾಯಿ ಅಂಬಾಬಾಯಿ ಕರ್ನಾಟಕಿ ಹಾಡುಗಾರ್ತಿಯಾಗಿದ್ದರು. ಮಗಳ ಪ್ರತಿಭೆಯನ್ನು ಗುರುತಿಸಿ, ಸಂಗೀತ ಕಲಿಯಲು ಪ್ರೋತ್ಸಾಹಿಸಿದರು ಮಾತ್ರವಲ್ಲ ತಾವು ಹಾಡುತ್ತಿರುವ ಕರ್ನಾಟಕಿ ಸಂಗೀತದಿಂದ ಮಗಳ ಸಂಗೀತಕ್ಕೆ ತೊಂದರೆಯಾಗಬಾರದೆಂದು ತಾವು ಹಾಡುವುದನ್ನು ನಿಲ್ಲಿಸಿದ್ದರು. ಮುಂದೆ ಗಂಗೂಬಾಯಿ ತುಂಬಾ ಪ್ರಯಾಸ ಪಟ್ಟು ಕಿರಾನಾ ಘರಾಣೆಯ ಮೇರು ಕಲಾವಿದರಾದ ಸವಾಯಿ ಗಂಧರ್ವರ ಶಿಷ್ಯೆಯಾದರು. ಗುರುಗಳು ವಾಸವಾಗಿದ್ದ ಕುಂದಗೋಳಕ್ಕೆ ರೈಲಿನಲ್ಲಿ ಓಡಾಡುತ್ತಾ, ಗುರು ಸೇವೆ ಮಾಡುತ್ತಾ ಸಂಗೀತ ಕಲಿತರು. ಕುಟುಂಬದ ಆಧಾರವಾಗಿದ್ದ ತಾಯಿಯನ್ನು ಬಹು ಬೇಗ ಕಳೆದುಕೊಂಡ ಗಂಗೂಬಾಯಿಯವರಿಗೆ ಕುಟುಂಬದ ಪೋಷಣೆಗಾಗಿ ನಿಗದಿತವಾದ ಆದಾಯದ ಅವಶ್ಯಕತೆ ಇತ್ತು. ಇದಕ್ಕಾಗಿ ಆಕಾಶವಾಣಿಗಳಲ್ಲಿ ಹಾಗೂ ಸಭಾಗಳಲ್ಲಿ ಕಾರ್ಯಕ್ರಮ ನೀಡುವ ಸಲುವಾಗಿ ದೇಶದೆಲ್ಲೆಡೆ ಪ್ರಯಾಣಿಸಬೇಕಾಗುತ್ತಿತ್ತು. ಓರ್ವ ಸ್ತ್ರೀಯಾಗಿ, ಪುರುಷರ ಭದ್ರ ಕೋಟೆಯೊಳಗೆ ಹೊಕ್ಕು, ಸರಿ ಸಮಾನವಾಗಿ ನಿಂತು ತಮ್ಮ ಗಾಯನದಿಂದ ಎಲ್ಲಾ ಕಡೆಯಿಂದಲೂ ಪ್ರಶಂಸೆಯನ್ನು ಹೊತ್ತುಕೊಂಡು ಬಂದು, ಗಳಿಸಿದ ಆದಾಯದಿಂದ ಮಕ್ಕಳನ್ನು-ಮನೆಯವರನ್ನು ಜತನ ಮಾಡಿದವರು ಗಂಗೂಬಾಯಿ. ಇವರಿಗೆ 16 ವರ್ಷವಿದ್ದಾಗ ವಕೀಲರಾದ ಗುರುರಾವ್ ಕೌಲಗಿ ಅವರೊಂದಿಗೆ ವಿವಾಹವಾಗಿತ್ತು. ಅದೆಷ್ಟೋ ಬಾರಿ ಪಕ್ಕದ ಖೋಲಿಯಿಂದ ಮಕ್ಕಳು ಅಳುತ್ತಿರುವ ಸದ್ದನ್ನು ಕೇಳಿಕೊಂಡೂ ಕಾರ್ಯಕ್ರಮ ಕೊಟ್ಟಿದ್ದೇನೆ ಎಂಬ ಅವರ ಮಾತು ‘ಗಂಗಾವತರಣ’ ಪುಸ್ತಕದಲ್ಲಿ ದಾಖಲಾಗಿದೆ. ಅವರ ಮಗಳು ಕೃಷ್ಣಾ ಹಾನಗಲ್ ಸಮರ್ಥ ಗಾಯಕಿಯಾಗಿದ್ದು, ಬಹಳ ಕಾಲ ತಾಯಿಯೊಂದಿಗೆ ಸಹಗಾಯನ ಮಾಡಿದ್ದರು. ಕ್ಯಾನ್ಸರ್‍ಗೆ ತುತ್ತಾಗಿ ಕೃಷ್ಣಾ ಅವರು ವಿಧಿವಶರಾದ ನಂತರ ಗಂಗೂಬಾಯಿಯವರು ತುಂಬಾ ಕುಗ್ಗಿ ಹೋಗಿದ್ದರು.
ಗಂಗೂಬಾಯಿಯವರ ಸಂಗೀತ ತುಂಬಾ ವಿಶಿಷ್ಟವಾದದ್ದು ಎಂದು ನನಗನಿಸುತ್ತದೆ. ಉತ್ತರದ ಹರಿಯಾಣಾದ ‘ಕಿರಾನಾ’ ಎಂಬ ಊರಿನ ಹೆಸರಿನೊಂದಿಗೆ ಗುರುತಿಸಿಕೊಂಡ ಕಿರಾಣಾ ಘರಾಣೆಯ ವಾರಸುದಾರ ಎನಿಸಿದವರು ಮಧುರ ಕಂಠದ ಉಸ್ತಾದ್ ಅಬ್ದುಲ್ ಕರೀಂ ಖಾನ್‍ರವರು. ಕುಂದಗೋಳದ ಸವಾಯಿ ಗಂಧರ್ವರು ಕರೀಂ ಖಾನರ ಶಿಷ್ಯರು. ಭೀಮಸೇನ ಜೋಶಿ ಹಾಗೂ ಗಂಗೂಬಾಯಿಯವರು ಸವಾಯಿ ಗಂಧರ್ವರ ಶಿಷ್ಯರಾಗಿ ಕಿರಾನಾ ಶೈಲಿಯ ಗಾಯನದ ಸಂಪೂರ್ಣ ಗುಟ್ಟನ್ನು ಪಡೆದುಕೊಂಡವರು. ಕಿರಾಣಾ ಘರಾಣೆಯ ಪರಂಪರೆಯನ್ನು ಕರ್ನಾಟಕದಲ್ಲಿ ಪ್ರಸಿದ್ಧಗೊಳಿಸಿದ ಕಾರ್ಯದಲ್ಲಿ ಗಂಗೂಬಾಯಿಯವರದ್ದು ದೊಡ್ಡ ಪಾಲಿದೆ. ಅವರ ಪೂರಿಯಾ, ಶಂಕರಾ ಇವೆಲ್ಲಾ ರಾಗಗಳ ಪ್ರಸ್ತುತಿ ತುಂಬಾ ವಿಶೇಷವಾದದ್ದಾಗಿತ್ತು ಎನ್ನಲಾಗುತ್ತದೆ. ಅವರ ಗಾಯನದಲ್ಲಿ ವಿಭಿನ್ನವೆನಿಸುವ ಅಂಶವೆಂದರೆ ಅವರ ಕಂಠ. ಸಂಗೀತ ಕ್ಷೇತ್ರದಲ್ಲಿ ಬೇರೆ ಯಾರಲ್ಲೂ ಇಲ್ಲದಂಥಹ ಅಪರೂಪದ ಗುಣ ಇದಾಗಿತ್ತು.
ಗಂಗೂಬಾಯಿಯವರು ಹಾಡಲು ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಟಿಬಿ ಖಾಯಿಲೆಗೆ ತುತ್ತಾಗಿ ತಮ್ಮ ಸ್ತ್ರಿ ಸಹಜ ಮಧುರ ಕಂಠವನ್ನು ಕಳೆದುಕೊಂಡಿದ್ದರು. ಆದರೆ ಅವರು ತಮ್ಮಲ್ಲಿನ ಈ ‘ನ್ಯೂನತೆ’ಯನ್ನು ತಮ್ಮ ‘ಶಕ್ತಿ’ಯನ್ನಾಗಿ ಮಾಡಿಕೊಂಡರು ಮಾತ್ರವಲ್ಲ ಈ ವಿಶಿಷ್ಟತೆಯ ಮೂಲಕವೇ ಸಂಗೀತ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದರು. ಇದೊಂದು ಕೇವಲ ಗಂಗೂಬಾಯಿಯವರ ವೈಯಕ್ತಿಕ ಹೋರಾಟವಾಗಿ ಕಾಣದೆ, ಸ್ತ್ರೀಯರ ಕಂಠ ಕುರಿತ ಸಮಾಜದಲ್ಲಿನ ‘ಸಿದ್ಧ’ ಹಾಗೂ ‘ಸ್ಥಾಪಿತ’ ಮೌಲ್ಯವೊಂದರ ವಿರುದ್ಧದ ತಣ್ಣನೆಯ ಹೋರಾಟವೂ ಎಂದೆನಿಸುತ್ತದೆ. ಮೊದಲ ಬಾರಿಗೆ ಸ್ತ್ರೀ ಕಂಠದ ಈ ಹೊಸ ಮಾದರಿ ಅಖಿಲ ಭಾರತ ಮಟ್ಟದಲ್ಲಿ ವಿದ್ವಾಂಸರನ್ನೂ-ಜನ ಸಾಮಾನ್ಯರನ್ನೂ ತಲುಪಿತ್ತು ಮತ್ತು ಗೆದ್ದಿತ್ತು.
ಹಲವು ಬಗೆಯ ಸಾಂಸಾರಿಕ, ಸಾಮಾಜಿಕ, ಆರ್ಥಿಕ ಒತ್ತಡಗಳನ್ನು ದಿನನಿತ್ಯ ಎದುರಿಸುವ ಮಹಿಳೆಯರಿಗೆ ತಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿ, ಅದರಲ್ಲಿ ತೊಡಗುವ ಸ್ವಾತಂತ್ರ್ಯ ಇವತ್ತಿಗೂ ಸ್ವಲ್ಪ ದುಬಾರಿಯೇ. ಒಂದು ವೇಳೆ ಹಠದಿಂದಲೋ ಸಾಧನೆಯಿಂದಲೋ ತಮ್ಮ ಮೆಚ್ಚುಗೆಯ ಕ್ಷೇತ್ರವನ್ನು ಪ್ರವೇಶಿಸುವುದು ಸಾಧ್ಯವಾದರೂ ಅಲ್ಲಿನ ಸವಾಲುಗಳನ್ನು ಆಕೆಯು ಎದುರಿಸಬೇಕಾಗುತ್ತದೆ. ಹಲವಾರು ಬಾರಿ ‘ಮಹಿಳೆ’ಎಂಬ ಕಾರಣದಿಂದ ಎದುರಾಗುವ ತೊಡಕುಗಳು ಆಕೆಯ ಕೆಲಸದ ದಕ್ಷತೆಯನ್ನು, ಮಾನಸಿಕ ಸ್ಥೈರ್ಯವನ್ನೂ ಕುಗ್ಗಿಸಿ ಬಿಡುತ್ತವೆ. ಆಕೆಯು ತೋರಿದ ಧೈರ್ಯ, ಮಾಡಿದ ಸಾಧನೆ ಇವು ಯಾವುವೂ ಆಕೆಯ ‘ಸ್ತ್ರೀತನ’ವನ್ನು ದಾಟಿ ಆಚೆಗೆ ಹೋಗಲಾರದ ಅಸಹಾಯಕತೆ ನಮ್ಮನ್ನು ತುಂಬಾ ಕಾಡುತ್ತದೆ. ನಮ್ಮ ನಮ್ಮ ಸಾಧನೆ, ಗುರುತು ಮೂಡಿಸುವುದು, ಹಣಗಳಿಸುವುದು, ಪ್ರಸಿದ್ಧರಾಗುವುದು ಇವೆಲ್ಲಾ ಮಹತ್ವಾಕಾಂಕ್ಷೆಗಳ ಮೂಲದಲ್ಲಿ ನಮ್ಮಂಥಹ (ನಮ್ಮಂಥವಳೇ ಆದ) ಹೆಣ್ಣೊಬ್ಬಳಿಗೆ ಸಂಸಾರಕ್ಕಾಗಿ, ಸಾಮಾಜಿಕ ಗೌರವಕ್ಕಾಗಿ ಹೋರಾಡುವ ಅಗತ್ಯತೆ ಎದುರಾಗಿತ್ತು ಎಂಬುವುದನ್ನು ನೆನಪಿಸಿಕೊಳ್ಳುವುದು ಮುಖ್ಯವೆನ್ನಿಸುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ತುಂಬ ಅವಮಾನ, ನಿಂದನೆ, ಬೇಸರಗಳನ್ನು ಹಾದು ಬಂದ ಈ ಸಾಧಕಿಯರಿಗೆ ತಾವು ದಾಟಿ ಬಂದ ದಿನಗಳನ್ನು-ನೋವನ್ನು ನೆನಪಿಸಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮ ಹಳೆಯದನ್ನು ಮರೆಯುವ ಪ್ರಯತ್ನದಲ್ಲಿರುತ್ತಾರಾದ ಕಾರಣ ಅವರ ಜೀವನದ ನಿಜ ಪುಟಗಳು ಎಲ್ಲೂ ದಾಖಲಾಗದೇ ಹೋಗಿಬಿಡುತ್ತವೆ.
ಇವೆಲ್ಲದರ ನಡುವೆ ಯಾವ ಚರ್ಚೆ, ಜಿಜ್ಞಾಸೆಗಳಿಗೂ ನಿಲುಕದಂತೆ ನಿಷ್ಕಳಂಕ ನಗು ಹೊತ್ತುಕೊಂಡು ಎದುರಾದ ಬದುಕನ್ನು ಅಂತೆಯೇ ನಿಭಾಯಿಸಿಕೊಂಡು ಹೋದ ಸರಳ, ನಿಗರ್ವಿಯಾದ ಗಂಗೂಬಾಯಿಯಂಥವರು ಅಚ್ಚರಿ ಹುಟ್ಟಿಸುತ್ತಾರೆ. ಅವರು ತಮ್ಮ ಭಾಷಣಗಳಲ್ಲಿ ಶಾಸ್ತ್ರೀಯ ಸಂಗೀತದ ಭವಿಷ್ಯದ ಕುರಿತು ಯಾವಾಗಲೂ ಹೇಳುತ್ತಿದ್ದ ಮಾತು ‘ತೊಟ್ಟಿಲು ಯಾವಾಗಲೂ ನಿಲ್ಲುವುದಿಲ್ಲ. ತೂಗುತ್ತಿದ್ದವರು ಒಬ್ಬರು ಹೋದರೆ, ಮತ್ಯಾರೋ ಒಬ್ಬರು ಬಂದು ಕೈ ಹಚ್ಚೇ ಹಚ್ಚುತ್ತಾರೆ’. ಅವರ ಈ ಭರವಸೆ, ಧನಾತ್ಮಕ ಚಿಂತನೆಯೇ ಅವರ ಸುದೀರ್ಘ ಜೀವನದ ಹಿಂದಿನ ಗುಟ್ಟಾಗಿದ್ದಿರಬಹುದು.
ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ : ಹಡಗು ದಡ ಮುಟ್ಟಿತೇ ಎಂದು ಕೇಳುವವರು ದಾರಿಯ ಬಗ್ಗೆ ಯೋಚಿಸಲಾರರು
Published On - 11:28 am, Wed, 21 July 21