AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shakespeare‘s Plays : ಅಚ್ಚಿಗೂ ಮೊದಲು ; ‘ಇದು ನನ್ನ ಒತ್ತಾಯ ಮಗಳೆ, ನೀನು ಹಾಡುತ್ತಿರಬೇಕು’

Politics : ‘ಸುಮಾರು ಎರಡು ಸಹಸ್ರಮಾನ ಹಿಂದಿನ ಈ ನಾಟಕದ ರಾಜಕಾರಣವು ಇವತ್ತಿಗೂ ಎಷ್ಟು ಸಮೀಪ ಎಂಬ ಅಚ್ಚರಿ ಆವರಿಸಿತು, ಪ್ರಜೆಗಳನ್ನು ಎದುರಿಗೆ ತೋರಿಸಿ, ಪ್ರಭುಗಳು ಹೊಟ್ಟೆ ಬಿರಿಸಿಕೊಳ್ಳುವ ಜನಮರುಳು ರಾಜಕಾರಣದ ಈ ಕಥೆ ಅವತ್ತಿಗಿಂತ ಇವತ್ತೇ ಹೆಚ್ಚು ಪ್ರಸ್ತುತ ಎನ್ನಿಸಿ, ಅಡಿಗರ ಕಾವ್ಯದ ಈ ಸಾಲುಗಳು ನನಗೆ ನೆನಪಾದವು‘ ಅಕ್ಷರ ಕೆ.ವಿ.

Shakespeare‘s Plays : ಅಚ್ಚಿಗೂ ಮೊದಲು ; ‘ಇದು ನನ್ನ ಒತ್ತಾಯ ಮಗಳೆ, ನೀನು ಹಾಡುತ್ತಿರಬೇಕು’
ಲೇಖಕ ಕೆ. ವಿ. ಅಕ್ಷರ
ಶ್ರೀದೇವಿ ಕಳಸದ
|

Updated on:Jul 31, 2021 | 5:19 PM

Share

ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಕೋರಿಯೋಲೇನಸ್ ಮತ್ತು ಲಿಯರ್ ಲಹರಿ (ಶೇಕ್ಸ್​ಪಿಯರ್​ನ ಎರಡು ನಾಟಕಗಳು) ಕನ್ನಡ ರಂಗರೂಪ ಮತ್ತು ಮುಖಪುಟ ವಿನ್ಯಾಸ : ಅಕ್ಷರ ಕೆ.ವಿ. ಪುಟ : 152 ಬೆಲೆ : ರೂ 170 ಪ್ರಕಾಶನ : ಅಕ್ಷರ ಪ್ರಕಾಶನ, ಹೆಗ್ಗೋಡು * ಶೇಕ್‌ಸ್ಪಿಯರ್ ಕೃತಿಗಳೆಂದರೆ ಅವು ಆತನ ಮೂಲೋದ್ದಿಶ್ಯಗಳ ಸಿದ್ಧ-ನಿಶ್ಚಿತ ಪ್ರತಿಬಿಂಬಗಳೋ ಎನ್ನುವ ಹಾಗೆ ನಾವು ಮಾತಾಡುವುದಿದೆ. ಆದರೆ ಅವು ಇವತ್ತಿಗೂ ಜೀವಂತವಾಗಿ ಉಳಿದುಕೊಂಡಿರುವುದು ಸಂಪೂರ್ಣ ರೂಪ ಬದಲಾಯಿಸಿಕೊಳ್ಳಬಲ್ಲ ತಮ್ಮ ವಿಶಿಷ್ಟ ಶಕ್ತಿಯಿಂದಾಗಿಯೇ. ಆತನ ಕೃತಿಗಳೀಗ ಶೇಕ್‌ಸ್ಪಿಯರ್ ಲೋಕದಿಂದ ಹೊರಬಂದು ನಮ್ಮ ಲೋಕದೊಳಕ್ಕೆ ಪ್ರವೇಶಿಸಿ ನಮ್ಮವೇ ಆಗಿಹೋಗಿವೆ. ನಾವು ನಿರ್ಗಮಿಸಿದ ಮೇಲೂ – ಪ್ರಾಯಶಃ ನಮ್ಮ ಬಾಳ್ವೆ ಮತ್ತು ಹಣೆಬರಹಗಳ ಸೊಗಡನ್ನೂ ತುಸು ಸೇರಿಸಿಕೊಂಡು – ಅವು ಉಳಿಯಲಿಕ್ಕಿವೆ; ಅನೂಹ್ಯ ಮತ್ತು ಕಲ್ಪನಾತೀತ ರೀತಿಗಳಲ್ಲಿ ಮುಂದಿನವರ ಬದುಕುಗಳ ಭಾಗವೂ ಆಗಲಿಕ್ಕಿವೆ. ಸ್ಟೀಫನ್ ಗ್ರೀನ್‌ಬ್ಲಾಟ್, ಅಮೆರಿಕದ ಸಾಹಿತ್ಯ ಇತಿಹಾಸಕಾರ * ಈ ಸಂಕಲನದಲ್ಲಿ ಸೇರಿರುವ ಮೊದಲನೆಯ ನಾಟಕವು ಶೇಕ್‌ಸ್ಪಿಯರ್ ಪ್ರಾಯಶಃ 1608-09ರ ಕಾಲದಲ್ಲಿ ರಚಿಸಿದ ‘ದಿ ಟ್ರಾಜೆಡಿ ಅಫ್ ಕೋರಿಯೋಲೇನಸ್’. 2020ರ ಮಾರ್ಚ್ ತಿಂಗಳಲ್ಲಿ, ಸುಮಾರು 20 ದಿನಗಳ ಅವಧಿಯಲ್ಲಿ ಈ ಅನುವಾದವನ್ನು ಮಾಡಿದೆ. ಮಿತ್ರರಾದ ವೆಂಕಟರಮಣ ಐತಾಳರು ಇದನ್ನು ಪ್ರಯೋಗಿಸಬಹುದೆಂಬ ಸೂಚನೆ ತೋರಿಸಿದ್ದು ಈ ಕಾರ್ಯಕ್ಕೆ ಪ್ರೇರಕವಾಯಿತು. ಬಳಿಕ, ನೀನಾಸಮ್ ರಂಗಶಿಕ್ಷಣಕೇಂದ್ರದಲ್ಲಿ ಅಧ್ಯಾಪಕರಾಗಿದ್ದ ಎಚ್.ಕೆ. ಶ್ವೇತಾರಾಣಿಯವರು ಈ ನಾಟಕವನ್ನು ಪ್ರಯೋಗಿಸಲು ಸಿದ್ಧತೆ ಮಾಡಿಕೊಂಡರು. ಆದರೆ, ಅದೇ ಹೊತ್ತಿಗೆ ಆರಂಭವಾದ ಕೊರೊನಾ ಪಿಡುಗು ಈ ಯಾವುದಕ್ಕೂ ಅವಕಾಶ ಕೊಡದೆ ಈ ಅನುವಾದವನ್ನು ಹಾಗೇ ಉಳಿಸಿಬಿಟ್ಟಿತು. ಆದ್ದರಿಂದ, ಮುಂದೆ ನಾನೂ ಸೇರಿದಂತೆ ಯಾರಿಗಾದರೂ ಇದನ್ನು ಪ್ರಯೋಗಿಸುವ ಆಸಕ್ತಿ ಹುಟ್ಟಿದರೆ ಈ ಪಠ್ಯ ಲಭ್ಯವಿರಲಿ ಎಂಬ ಆಶಯದೊಡನೆ ಇದನ್ನು ಪ್ರಕಟಿಸುತ್ತಿದ್ದೇನೆ.

ಈ ಅನುವಾದ ಮಾಡುತ್ತಿದ್ದಾಗ ಆದ ಒಂದು ಅನುಭವವನ್ನು ನಾನಿಲ್ಲಿ ಉಲ್ಲೇಖಿಸಿಕೊಳ್ಳಬೇಕು. ಮೊದಮೊದಲಿಗೆ, ಸುಮಾರು ಎರಡು ಸಹಸ್ರಮಾನ ಹಿಂದಿನ ಈ ನಾಟಕದ ರಾಜಕಾರಣವು ಇವತ್ತಿಗೂ ಎಷ್ಟು ಸಮೀಪ ಎಂಬ ಅಚ್ಚರಿ ಆವರಿಸಿತು, ಪ್ರಜೆಗಳನ್ನು ಎದುರಿಗೆ ತೋರಿಸಿ, ಪ್ರಭುಗಳು ಹೊಟ್ಟೆ ಬಿರಿಸಿಕೊಳ್ಳುವ ಜನಮರುಳು ರಾಜಕಾರಣದ ಈ ಕಥೆ ಅವತ್ತಿಗಿಂತ ಇವತ್ತೇ ಹೆಚ್ಚು ಪ್ರಸ್ತುತ ಎನ್ನಿಸಿ, ಅಡಿಗರ ಕಾವ್ಯದ ಈ ಸಾಲುಗಳು ನನಗೆ ನೆನಪಾದವು – ‘ಸಾಲಮಾಡಿ ತುಪ್ಪ ತಿಂದು ನಮ್ಮ ಮೂತಿಗೊರಸುವವರು…’ ಮಾತ್ರವಲ್ಲ, ಇಂಥ ರಾಜಕಾರಣದ ದುಸ್ಥಿತಿಗೆ ಪ್ರಭುಗಳೆಷ್ಟೋ ಪ್ರಜೆಗಳೂ ಅಷ್ಟೇ ಜವಾಬ್ದಾರರೂ ಎಂಬುದನ್ನೂ ಈ ನಾಟಕ ಒತ್ತಿ ಹೇಳುವುದು ಈ ನಾಟಕದ ಸಮಕಾಲೀನತೆಯನ್ನು ವರ್ಧಿಸಿರುವಂತೆ ನನಗೆ ಕಾಣಿಸಿತು.

ಆದರೆ, ಮುನ್ನಡೆಯುತ್ತ ಹೋದಂತೆ, ಈ ನಾಟಕವು ತನ್ನ ಸಾರ್ವಕಾಲಿಕತೆಯನ್ನು ಇನ್ನೊಂದು ದಿಕ್ಕಿನಿಂದ ಸಮಸ್ಯಾತ್ಮಕಗೊಳಿಸುತ್ತದೆ – ಮೊದಮೊದಲು ಈ ನಾಟಕವು ಪ್ರಜಾಸತ್ತೆಯನ್ನು ಸರಿಯಾಗಿ ಅನುಸರಣೆ ಮಾಡದಿರುವುದರಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ಮಾತಾಡುತ್ತಿದೆ ಎನ್ನಿಸಿದ್ದರೆ, ನಾಟಕ ಮುನ್ನಡೆದಂತೆ ಹಾಗಲ್ಲವೆಂಬ ಅನುಭವ ಹುಟ್ಟಿಸುವಂತಿದೆ. ಪ್ರಜಾಸತ್ತೆ ಎನ್ನುವ ಪರಿಕಲ್ಪನೆಯೊಳಗೇ ಇರುವ ಹಲವು ವಿರೋಧಾಭಾಸಗಳು ಈ ಬಿಕ್ಕಟ್ಟಿಗೆ ಕಾರಣವಿದ್ದೀತು ಎಂಬುದನ್ನೂ ಈ ನಾಟಕ ತೋರಿಸುವಂತೆ ತೋರುತ್ತದೆ. ಅಕ್ಷರ ಕೆ.ವಿ. ಲೇಖಕ, ರಂಗನಿರ್ದೇಶಕ

* (ಆಯ್ದ ಭಾಗ 1)

ಅಂಕ 1 : ದೃಶ್ಯ 3

ರೋಮ್ ನಗರ. ಕಯಸ್ ಮಾರ್ಷಿಯಸ್‌ನ ಮನೆ. ಮಾರ್ಷಿಯಸ್‌ನ ತಾಯಿ ವಾಲುಮ್ನಿಯಾ ಮತ್ತು ಹೆಂಡತಿ ವರ್ಜೀಲಿಯಾರ ಪ್ರವೇಶ. ಅವರು ಕೂತು ಕಸೂತಿ ಹಾಕತೊಡಗುತ್ತಾರೆ.

ವಾಲುಮ್ನಿಯಾ: ಇದು ನನ್ನ ಒತ್ತಾಯ ಮಗಳೆ, ನೀನು ಹಾಡುತ್ತಿರಬೇಕು; ಕನಿಷ್ಠ ಹಾಡಿನಂಥ ಮಾತಾದರೂ ಆಡುತ್ತಿರು. ನನ್ನ ಮಗನೇ ನನ್ನ ಗಂಡನಾಗಿದ್ದ ಪಕ್ಷ, ಅವನು ಹಾಸಿಗೆಯಲ್ಲಿದ್ದು ಕೊಡುವ ಸುಖದ ಬಿಸಿಗಿಂತ ಅವನಿರದಿದ್ದರೂ ಬರುವ ಕೀರ್ತಿಯ ವಾರ್ತೆಯನ್ನೇ ಹೆಚ್ಚು ಖುಷಿಯೆಂದು ಭಾವಿಸುತ್ತಿದ್ದೆ. ನನ್ನ ಮೊದಲ ಹಸುಗೂಸು ಅವನಿದ್ದಾಗಲೇ, ಅವನ ಚೆಂದ ಎಲ್ಲರ ಕಣ್ಣುಗಳನ್ನು ಚುಚ್ಚುತ್ತಿದ್ದಾಗಲೇ, ಎಂಥ ರಾಜಾಜ್ಞೆಯೂ ಅವನನ್ನು ನನ್ನಿಂದ ಕಸಿಯಲು ಸಾಧ್ಯವಿಲ್ಲದಿದ್ದಾಗಲೇ, ನಾನವನನ್ನು ಕ್ರೂರ ಯುದ್ಧಕ್ಕೆ ಕಳಿಸಿಕೊಟ್ಟಿದ್ದೆ; ಅಪಾಯದಲ್ಲೇ ಪ್ರಸಿದ್ಧಿ ಪಡೆಯಲು ಅವನಿಗೆ ಅನುವು ಮಾಡಿಕೊಟ್ಟಿದ್ದೆ – ಆತ ವೀರನಾಗುವುದು ಕಾಣಲಿಕ್ಕೆ, ಆ ಶೌರ್ಯದ ಚಿತ್ರವನ್ನು ಗೋಡೆಗೆ ತೂಗು ಹಾಕಲಿಕ್ಕೆ. ಯುದ್ಧದಿಂದ ಮರಳುವಾಗ ಅವನ ಹುಬ್ಬುಗಳು ಕಬ್ಬಿಣದಂತಾಗಿದ್ದವು. ಆ ಮಗು ಹುಟ್ಟಿದಾಗ ಗಂಡೆಂದು ಕೇಳಿ ಸಂತಸಗೊಂಡಿದ್ದಕ್ಕಿಂತ ಹೆಚ್ಚು, ಆತ ಗಂಡಸೆಂದು ಸಾಬೀತು ಮಾಡಿದಾಗ ನನಗೆ ಹರ್ಷದ ಹೊನಲು ಹರಿದಿತ್ತು.

ವರ್ಜೀಲಿಯಾ: ಆದರೆ, ಆ ಅಪಾಯದಲ್ಲಿ ಆತ ಅಸು ನೀಗಿದ್ದರೆ, ಆಗ?

ವಾಲುಮ್ನಿಯಾ: ಆಗ, ಉಳಿದು ಬೆಳಗುವ ಅವನ ಶೌರ್ಯದ ಕಥೆಯನ್ನೇ ನನ್ನ ಮಗನೆಂದು ಭಾವಿಸುತ್ತಿದ್ದೆ. ನಿಜ ಹೇಳುತ್ತೇನೆ – ಒಂದೇ ಬಗೆಯಲ್ಲಿ ಪ್ರೀತಿಸುವ ಹನ್ನೆರಡು ಮಕ್ಕಳಿದ್ದರೂ ನನಗೆ, ಅವರೆಲ್ಲರೂ ನನ್ನ ಮತ್ತು ನಿನ್ನ ಮಾರ್ಷಿಯಸ್‌ನಷ್ಟೇ ನಲ್ಮೆಯವರಾಗಿದ್ದರೂ, ಉಪಯೋಗವಿಲ್ಲದೆ ಮನೆಯಲ್ಲಿ ಮಲಗುವ ಒಬ್ಬನಿಗಿಂತ, ದೇಶಕ್ಕಾಗಿ ಪ್ರಾಣಕೊಡುವ ಉಳಿದ ಹನ್ನೊಂದು ಜನರೇ ಯೋಗ್ಯರೆಂದು ಭಾವಿಸುತ್ತಿದ್ದೆ.

ದಾದಿಯ ಪ್ರವೇಶ.

(ಆಯ್ದ ಭಾಗ 2)

ಮಾರ್ಷಿಯಸ್: ಕಯಸ್ ಮಾರ್ಷಿಯಸ್ ನನ್ನ ನಾಮಧೇಯ; ನಿನಗೂ ಅದಕ್ಕಿಂತ ಹೆಚ್ಚಾಗಿ ನಿನ್ನ ಈ ನಾಡಿಗೂ ಘಾಸಿ ಮಾಡಿಯೇ ನಾನು ಕೋರಿಯೋಲೇನಸ್ ಎಂಬ ಅಡ್ಡಹೆಸರು ಹೊತ್ತೆ. ನಾಡಿಗಾಗಿ ಸುರಿಸಿದ ರಕ್ತಕ್ಕೆ ಹನಿ ಕೃತಜ್ಞತೆ ನನಗೆ ಸಿಗಲಿಲ್ಲ; ನೋವಿನ ಸೇವೆಗೂ ಎದುರಿಸಿದ ಅಪಾಯಕ್ಕೂ ಬೆಲೆ ಸಿಗಲಿಲ್ಲ, ಉಳಿದಿದ್ದು ಬರಿಯ ಈ ಬಿರುದು ಮಾತ್ರ – ನಿನ್ನ ಹಗೆತನಕ್ಕೆ ಆ ಬಿರುದೇ ನನ್ನೊಳಗೊಂದು ನೆನಪಿನ ಸ್ಮಾರಕ. ನನ್ನ ನಾಡಿನ ಜನಸಾಮಾನ್ಯರ ಕ್ರೌರ್ಯ ಮತ್ತು ಮಾತ್ಸರ್ಯ, ಮತ್ತದಕ್ಕೆ ಕುಮ್ಮಕ್ಕು ಕೊಟ್ಟ ಗಣ್ಯಜನಗಳ ಹೇಡಿತನ – ಇವು ನನಗೆ ಮೋಸ ಮಾಡಿದವು, ನಮ್ಮ ನಾಡನ್ನೇ ಹರಿದು ತಿಂದವು. ಅಂಥ ಗುಲಾಮಜನಗಳ ದನಿಗೆ ಬಾಗಿ ನಾನು ರೋಮಿನಿಂದ ಹೊರತಳ್ಳಿಸಿಕೊಳ್ಳಬೇಕಾಯಿತು. ಇಂಥ ಅತಿರೇಕದಿಂದಾಗಿಯೇ ಈಗ ನಿನ್ನ ಗೂಡಿನತ್ತ ಕಾಲೆಳೆದು ವಲಸೆ ಬರಬೇಕಾಯಿತು. ಹಾಗಂತ, ಆಸೆ ಬಿಟ್ಟು ಓಡಿದ್ದಲ್ಲ, ಬದುಕುಳಿಯಲಿಕ್ಕೆ ಬಂದಿದ್ದೂ ಅಲ್ಲ. ಸಾವಿಗೇ ಹೆದರುವುದಾಗಿದ್ದರೆ, ಲೋಕದ ಬೇರೆಲ್ಲ ತಾಣ ಬಿಟ್ಟು ನಿನ್ನ ಬಳಿಯೇ ಬಂದು ನಿಲ್ಲುವ ಅಗತ್ಯವಿರಲಿಲ್ಲ. ಬದಲು, ಸಿಟ್ಟಿನಿಂದ ಇತ್ತ ಬಂದಿದ್ದೇನೆ – ನನ್ನನ್ನು ಗಡಿಪಾರು ಮಾಡಿದ ಆ ಜನಗಳ ವಿರುದ್ಧ ಸೇಡು ಮಸೆಯಲು ಬಂದಿದ್ದೇನೆ. ನಿನ್ನ ಎದೆಯೊಳಗೂ ಅಂಥ ಸೇಡಿನ ಕಿಡಿ ಇನ್ನೂ ಆರಿಲ್ಲವಾದಲ್ಲಿ, ನಿನ್ನ ಅವಮಾನಕ್ಕೆ ತಕ್ಕ ಪ್ರತೀಕಾರಕ್ಕೆ ಇಂದೂ ಹವಣಿಸುತ್ತಿದ್ದಲ್ಲಿ, ಹಿಂದಾದ ನಾಚಿಕೆಯನ್ನು ಮರೆಯುವ ಇರಾದೆ ನಿನಗುಳಿದ ಪಕ್ಷದಲ್ಲಿ – ಇಗೋ, ನನ್ನ ಪ್ರತೀಕಾರವೂ ನಿನಗೆ ನೆರವಾಗಲಿಕ್ಕೆ ತಯ್ಯಾರಿದೆ, ಬಳಸಿಕೋ. ನನ್ನ ಸೇಡು ನಿನಗೂ ಲಾಭವನ್ನೇ ತಂದುಕೊಟ್ಟೀತು. ಕಾರಣ, ನನ್ನ ದೇಶದ ವಿರುದ್ಧವೇ ಗುದ್ದಾಡಿ ಅವರ ಎದೆಬಗೆದು ಚೆಲ್ಲುವ ಪೈಶಾಚ ಛಾತಿ ನನ್ನೊಳಗುಂಟು. ಅಥವಾ ಅಂಥ ಸಾಹಸಕ್ಕೆ ನೀನು ಧೈರ್ಯ ತೋರುವುದಿಲ್ಲವಾದರೆ, ಅಷ್ಟೆಲ್ಲ ಹೋರಾಟಕ್ಕಿಳಿಯಲಿಕ್ಕಾಗದ ಸುಸ್ತು ನಿನ್ನನ್ನು ಆವರಿಸಿದ್ದರೆ, ಆಗ ಉಳಿದಿದ್ದು ಒಂದೇ ಮಾತು – ನನಗೂ ಇನ್ನು ಬದುಕುವ ಆಶೆಯಿಲ್ಲ, ತಗೋ – ನಮ್ಮ ಹಳೆಯ ಹಗೆತನಕ್ಕೆ ಪ್ರತಿಯಾಗಿ ಕೊಯ್ಯಿಸಿಕೊಳ್ಳಲು ನನ್ನ ಕತ್ತು ನಿನ್ನೆದುರು ಎತ್ತಿ ಚಾಚುತ್ತಿದ್ದೇನೆ. ಎಂದೆಂದೂ ನಿನ್ನನ್ನು ದ್ವೇಷಿಸುತ್ತಲೇ ಬದುಕಿದ್ದ ನನಗೆ ಸುಮ್ಮನೇ ಕೂರುವ ಸೋಲಿಗಿಂತ, ನಿನ್ನ ಕೈಯಲ್ಲಿ ಸಂಭವಿಸುವ ಸಾವೇ ಲೇಸು. ಇನ್ನು ಸೇವೆ ಪಡೆವೆಯಾದರೆ, ಅದೂ ಸೊಗಸು.

ಔಫೀಡಿಯಸ್: ಓಹ್ ಮಾರ್ಷಿಯಸ್… ಮಾರ್ಷಿಯಸ್… ನಿನ್ನ ಒಂದೊಂದು ನುಡಿಯೂ ಒಳಹೊಕ್ಕು, ಎದೆಯೊಳಗೆ ಬೆಳೆದ ಹಳೆಯ ದ್ವೇಷದ ಕಳೆಯನ್ನು ಕೀಳಹತ್ತಿದೆ. ದೇವರೇ ಮೋಡದ ಮರೆಗೆ ನಿಂತು ‘ತಥಾಸ್ತು’ ಅಂದಹಾಗಿದೆ ನಿನ್ನ ಮಾತು, ಅಷ್ಟು ನಂಬಿಕೆ ನನ್ನೊಳಗೆ ಹುಟ್ಟಿದೆ. ಬಾ, ಸದಾ ಸೆಣಸಾಡಿದ್ದ ಈ ಎರಡು ತೋಳುಗಳನ್ನೊಮ್ಮೆ ಜೋಡಿಸಿ ತಬ್ಬಿಕೊಳ್ಳೋಣ. (ಆಲಂಗಿಸಿ) ಈ ತೋಳು ಬೀಸಿದ ಕತ್ತಿಯಲುಗು ಹಲವೊಮ್ಮೆ ತುಂಡಾಗಿ ಅದರಿಂದ ಹಾರಿದ ಕಿಡಿಗಳು ಚಂದ್ರನನ್ನೇ ಬೆಚ್ಚಿಬೀಳಿಸಿತ್ತಲ್ಲ – ಅಂಥ ಶತ್ರುಗಳಾಗಿ ಹಿಂದೆ ಹೋರಾಡಿದ್ದ ನಾವೀಗ ಮಿತ್ರರಾಗಿ ಸೆಣೆಸೋಣ. ತಿಳಿದುಕೋ ಗೆಳೆಯ – ನಾನು ಮದುವೆಯಾದ ಹೆಣ್ಣನ್ನು ನಾನು ನಿಜವಾಗಿ ಪ್ರೀತಿಸಿದ್ದೆ, ಆದರೆ, ಅವಳು ಮೊದಲ ಬಾರಿ ನನ್ನ ಹೊಸ್ತಿಲೊಳಗೆ ಬಂದಾಗ ಆಗಿದ್ದಕ್ಕಿಂತ ಹೆಚ್ಚಿನ ಸಂತೋಷ ಇಂದು ನನ್ನೊಳಗೆ ಮೂಡುತ್ತಿದೆ. ಬಾ… ನನ್ನ ಕನಸುಗಳಲ್ಲೂ ಬಂದು ಗುದ್ದಾಡುತ್ತ, ಕತ್ತಿಗೆ ಕತ್ತು ಕೊಟ್ಟು ಕಿತ್ತಾಡುತ್ತ, ಮುಷ್ಟಿಯನ್ನು ಮುಷ್ಟಿಗೆ ಬಡಿದು ಸುಸ್ತಾಗಿ ಕಡೆಗೆ ಹೆಣಗಳಂತೆ ಹಿಂದಿರುಗುತ್ತಿದ್ದ ನಾವೀಗ ನೇಹಿಗರು. ನೀನೀಗ ನನ್ನ ಗೆಳೆಯ; ರೋಮಿಗಾಗಿ ನೀನು ಹೋರಾಡಿದ್ದೆ, ಈಗ ರೋಮಿಗಾಗಿಯೇ ನಾವಿಬ್ಬರೂ ಕೂಡಿ ಹೋರಾಡೋಣ. ಬಾ ಒಳಗೆ…

acchigoo modhalau akshara KV

ಅಕ್ಷರ ಅವರ ಕೃತಿಗಳು

ಪರಿಚಯ : ದೆಹಲಿಯ ರಾಷ್ಟ್ರೀಯ ನಾಟಕಶಾಲೆ ಮತ್ತು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಅಕ್ಷರ ಕೆ.ವಿ., ನೀನಾಸಮ್ ಮತ್ತು ಅಕ್ಷರ ಪ್ರಕಾಶನ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ನೀನಾಸಮ್, ನೀನಾಸಮ್ ರಂಗ ಶಿಕ್ಷಣಕೇಂದ್ರ ಮತ್ತು ನೀನಾಸಮ್ ತಿರುಗಾಟ ತಂಡಗಳಿಗೆ ಇದುವರೆಗೆ ಐವತ್ತಕ್ಕೂ ಹೆಚ್ಚು ರಂಗಪ್ರಯೋಗಗಳನ್ನು ನಿರ್ದೇಶಿಸಿದ್ದಾರೆ. ರಂಗ ಇತಿಹಾಸದ ಬಗ್ಗೆ ಇವರು ರಚಿಸಿದ ‘ರಂಗ ಪ್ರಪಂಚ’ ಪುಸ್ತಕಕ್ಕೆ ಮತ್ತು ನಾಟಕ ‘ಸಹ್ಯಾದ್ರಿ ಕಾಂಡ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರಕಿದೆ. ‘ಮಾವಿನ ಮರದಲ್ಲಿ ಬಾಳೆಯ ಹಣ್ಣು’ ಎಂಬ ರಂಗವಿಮರ್ಶಾ ಸಂಕಲನ, ‘ಸಮ್ಮುಖದಲ್ಲಿ ಸ್ವಗತ’, ‘ರಂಗಭೂಮಿಯ ಮುಖಾಂತರ’, ‘ಅಂತಃಪಠ್ಯ ಮತ್ತು ಇತರ ಪ್ರಬಂಧಗಳು’, ‘ಚಿತ್ರದ ಕುದುರೆ’ ಎಂಬ ಲೇಖನ ಸಂಕಲನಗಳು, ‘ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ’, ‘ಸ್ವಯಂವರಲೋಕ’, ‘ಭಾರತಯಾತ್ರೆ’, ‘ಸೇತುಬಂಧನ’, ‘ಪರಮಪದಸೋಪಾನಪಟ’ ಎಂಬ ನಾಟಕಗಳು – ಇವರ ಇನ್ನಿತರ ಪ್ರಮುಖ ಕೃತಿಗಳು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ ಇವರಿಗೆ ಬಂದಿದೆ.

*

ಪುಸ್ತಕದ ಖರೀದಿಗೆ ಸಂಪರ್ಕಿಸಿ : ಅಕ್ಷರ ಪ್ರಕಾಶನ  

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು ; ‘ಕಾಮಾಟಿಪುರಕ್ಕೆ ನಾಲ್ಕೈದು ಸಲ ಭೇಟಿ ಕೊಟ್ಟು ಈ ಕಾದಂಬರಿ ಬರೆದೆ’

Published On - 4:43 pm, Sat, 31 July 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ