ಬೇಸಿಗೆಯಲ್ಲಿ ಸ್ನಾನಕ್ಕೆ ಬಿಸಿ ನೀರನ್ನೇ ಆಯ್ಕೆ ಮಾಡಿಕೊಳ್ತೀರಾ? ಇದಕ್ಕಿಂತ ಅಪಾಯ ಮತ್ತೊಂದಿಲ್ಲ
ಬಿಸಿಲಿನ ಝಳ ಹೆಚ್ಚಾಗಿದೆ, ಹೊರಗೆ ಹೋಗಿ ಬಂದರೆ ತಣ್ಣನೆಯದು ಏನಾದರೂ ಕುಡಿಯುವ, ತಣ್ಣೀರಿಗೆ ಮೈಯೊಡ್ದುವ ಎಂದೇನಿಸುತ್ತದೆ. ಈ ಸುಡುವ ಬಿಸಿಲಿನಲ್ಲಿ ಹೆಚ್ಚಿನವರು ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ, ಇನ್ನು ಕೆಲವರು ಎಷ್ಟೇ ಬಿಸಿಲು ಇರಲಿ, ಬಿಸಿ ವಾತಾವರಣವಿರಲಿ, ಸ್ನಾನಕ್ಕೆ ಬಿಸಿ ನೀರು ಇಲ್ಲದೇ ಹೋದರೆ ಆಗುವುದಿಲ್ಲ. ಬೇಸಿಗೆಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ? ಉರಿ ಉರಿ ಸೆಕೆಯ ನಡುವೆ ಈ ರೀತಿ ಸ್ನಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಚಳಿಗಾಲ (winter) ದಲ್ಲಿ ಬಿಸಿ ಅಥವಾ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುತ್ತಾರೆ,ಇದು ದೇಹವನ್ನು ಶೀತದಿಂದ ರಕ್ಷಿಸುವುದಲ್ಲದೆ, ಮನಸ್ಸು ಹಾಗೂ ದೇಹಕ್ಕೆ ತಾಜಾತನದ ಭಾವನೆಯನ್ನು ನೀಡುತ್ತದೆ. ಆದರೆ ಕೆಲವರಂತೂ ಎಷ್ಟೇ ಬಿಸಿಲು ಇರಲಿ, ಬೇಸಿಗೆ (summer)ಯಲ್ಲಿಯೂ ಸ್ನಾನಕ್ಕೆ ಬಿಸಿ ನೀರು (hot water) ಬೇಕೇ ಬೇಕು. ಈ ಬೇಸಿಗೆಯಲ್ಲೂ ಬಿಸಿ ನೀರಿನಿಂದ ಸ್ನಾನ ಮಾಡಬೇಕೇ? ಎನ್ನುವ ಗೊಂದಲ ಹಲವರಲ್ಲಿದೆ. ಇನ್ನು ಅನೇಕರು ಈ ಬಿಸಿ ನೀರಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿದ್ದಾರೆ. ಆದರೆ ಈ ಋತುವಿನಲ್ಲಿ ಈ ರೀತಿಯ ಅಭ್ಯಾಸದಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳೇ ಹೆಚ್ಚು. ನೀವೇನಾದ್ರು ಬೇಸಿಗೆಯ ಬಿಸಿ ವಾತಾವರಣದಲ್ಲಿ ಬೆಚ್ಚಗಿನ ನೀರಿನಿಂದಲೇ ಸ್ನಾನ ಮಾಡ್ತೀರಾ ಅಂತಾದ್ರೆ ಈ ಕೆಲವು ವಿಷಯಗಳು ತಿಳಿದಿರುವುದು ಒಳ್ಳೆಯದು.
ಬೇಸಿಗೆಯಲ್ಲಿ ಬಿಸಿ ನೀರಿನ ಸ್ನಾನದಿಂದ ಆಗುವ ಅಡ್ಡಪರಿಣಾಮಗಳಿವು
- ರಕ್ತದೊತ್ತಡ ಸಮಸ್ಯೆ ಉಲ್ಬಣ : ಬೇಸಿಗೆಯಲ್ಲಿ ಬಿಸಿನೀರಿನ ಸ್ನಾನ ಮಾಡುವುದು ಅಧಿಕ ರಕ್ತದೊತ್ತಡ ರೋಗಿಗಳಿಗೆ ಹಾನಿಕಾರಕವಾಗಿದೆ. ಇದು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಬಿಸಿ ನೀರಿನ ಸ್ನಾನವು ರಕ್ತ ಪರಿಚಲನೆಗೆ ಅಡ್ಡಿ ಪಡಿಸುತ್ತದೆ. ಈ ರೀತಿ ಅಭ್ಯಾಸದಿಂದ ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು.
- ಚರ್ಮಕ್ಕೆ ಹಾನಿ : ಸುಡುವ ಬಿಸಿಲಿನಲ್ಲಿ ಚರ್ಮದ ಆರೈಕೆ ಮಾಡುವುದು ಕಷ್ಟಕರ. ಈ ನಡುವೆ ಬಿಸಿ ನೀರಿನಿಂದ ಸ್ನಾನ ಮಾಡುವುದು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ಬೇಸಿಗೆಯಲ್ಲಿ ಹೊರಗಿನ ತಾಪಮಾನ ಹೆಚ್ಚಿರುವುದರಿಂದ ಚರ್ಮದ ಉಷ್ಣತೆಯು ಹೆಚ್ಚಾಗಿರುತ್ತದೆ. ಹೀಗಾಗಿ ಈ ಋತುವಿನಲ್ಲಿ ಬಿಸಿ ನೀರಿನ ಸ್ನಾನದಿಂದ ಚರ್ಮದಲ್ಲಿರುವ ಕೆರಾಟಿನ್ ಕೋಶಗಳು ಹಾನಿಗೊಳಗಾಗಿ, ನೈಸರ್ಗಿಕ ತೇವಾಂಶವು ಕಡಿಮೆಯಾಗುತ್ತದೆ. ಕ್ರಮೇಣವಾಗಿ ಚರ್ಮವು ಹೊಳಪು ಕಡಿಮೆಯಾಗಿ ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ.
- ಚರ್ಮ ಶುಷ್ಕತೆಗೆ ದಾರಿ ಮಾಡುತ್ತದೆ : ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯ ಅಂಶವು ಚರ್ಮವನ್ನು ಇನ್ನಿತ್ತರ ಸಮಸ್ಯೆಗಳಿಂದ ರಕ್ಷಿಸಲು ಮತ್ತು ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಈ ಬೇಸಿಗೆಯಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ನೈಸರ್ಗಿಕ ಎಣ್ಣೆಯ ಮೇಲೆ ಪರಿಣಾಮ ಬೀರುತ್ತದೆ. ನೀರಿನಲ್ಲಿರುವ ಕ್ಲೋರಿನ್ ಚರ್ಮದ ನೈಸರ್ಗಿಕ ಎಣ್ಣೆ ಉತ್ಪಾದನೆಯ ಪ್ರಕ್ರಿಯೆಗೆ ಅಡ್ಡಿ ಪಡಿಸಿ ಚರ್ಮದ ಶುಷ್ಕತೆಗೆ ಹಾನಿಯಾಗುತ್ತದೆ.
- ಹೃದ್ರೋಗ ಸಮಸ್ಯೆ : ಹೃದಯ ಸಮಸ್ಯೆಯಿಂದ ಬಳಲುತ್ತಿರುವವರು ಬೇಸಿಗೆಯಲ್ಲೂ ಅಪ್ಪಿತಪ್ಪಿಯೂ ಬಿಸಿ ನೀರಿನಿಂದ ಸ್ನಾನ ಮಾಡುವುದು ಅಪಾಯಕಾರಿ. ಈ ಬಿಸಿ ವಾತಾವರಣದ ನಡುವೆ ಈ ಬಿಸಿ ನೀರಿನ ಸ್ನಾನವು ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ.
- ಕೂದಲಿನ ಸಮಸ್ಯೆ : ಬೇಸಿಗೆಯಲ್ಲಿ ಕೂದಲಿನ ಆರೈಕೆಗೆ ಹೆಚ್ಚು ಗಮನ ಕೊಡಬೇಕು. ಈ ಋತುವಿನಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಕೂದಲಿನ ತೇವಾಂಶ ಕಡಿಮೆಯಾಗಿ ಕೂದಲು ಒರಟಾಗಿ ಒಣಗುತ್ತದೆ. ಅತಿಯಾದ ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆಗೂ ಕಾರಣವಾಗಬಹುದು.
- ಚರ್ಮದ ಸಮಸ್ಯೆ ಹೆಚ್ಚಳ : ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಅಲರ್ಜಿ, ತುರಿಕೆಯಂತಹ ಸಮಸ್ಯೆಗಳು ಹೆಚ್ಚಾಗಬಹುದು. ಬಿಸಿನೀರಿನಲ್ಲಿ ಪದೇ ಪದೇ ಸ್ನಾನ ಮಾಡುವ ಜನರಲ್ಲಿ ದದ್ದುಗಳು, ಮೊಡವೆಗಳು ಮತ್ತು ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ