New Book : ಅಚ್ಚಿಗೂ ಮೊದಲು ; ದಾವಣಗೆರೆಯಿಂದ ಆಸ್ಟ್ರೇಲಿಯಾದ ತನಕ ‘ಉದಕ ಉರಿದು’

Short Story : ‘ಮನುಷ್ಯ ಉಳಿದ ಪ್ರಾಣಿಗಳಿಗಿಂತ ಮೇಲು ಅಂತ ತೋರಿಸಿಕೊಳ್ಳೋಕೆ ಇಲ್ಲದ ಭಾರಗಳನ್ನೆಲ್ಲ ಮೈಮೇಲೆಳೆದುಕೊಳ್ಳಬೇಕಾ? ಜಗತ್ತನ್ನೇ ಒಂದು ಜೈಲಾಗಿ ಮಾಡಿಕೊಂಡು ಬದುಕಬೇಕಾ? ಸಿಂಪಿಗನೊಬ್ಬನಿಗೆ ಬದುಕು ಕೊಡಲು ಇಷ್ಟೂ ಜನ ಪರದಾಡಬೇಕಾ? ಇದ್ದಕ್ಕಿದ್ದಂತೆ ಸಿಂಪಿಗದವರ ಮೇಲೆ ಸಿಟ್ಟುಬಂತಾಕೆಗೆ. ಇದೊಂದು ಜಾತಿ ಮಾಡಿದ ಅನಾಹುತದಿಂದಲೇ ತನ್ನ ಒದ್ದಾಟ ಎಂದು ಶಾಪ ಹಾಕಿದಳು.’

New Book : ಅಚ್ಚಿಗೂ ಮೊದಲು ; ದಾವಣಗೆರೆಯಿಂದ ಆಸ್ಟ್ರೇಲಿಯಾದ ತನಕ ‘ಉದಕ ಉರಿದು’
ಲೇಖಕ ಶ್ರೀಹರ್ಷ ಸಾಲಿಮಠ
Follow us
ಶ್ರೀದೇವಿ ಕಳಸದ
|

Updated on:Aug 20, 2021 | 3:45 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಉದಕ ಉರಿದು (ಕಥಾಸಂಕಲನ) ಲೇಖಕ : ಶ್ರೀಹರ್ಷ ಸಾಲಿಮಠ ಪುಟ : 144 ಬೆಲೆ : ರೂ. 150 ಮುಖಪುಟ ವಿನ್ಯಾಸ : ಡಿ. ಕೆ. ರಮೇಶ ಪ್ರಕಾಶನ : ಆಲಿಸಿರಿ ಪ್ರಕಾಶನ, ಬೆಂಗಳೂರು *

ಈ ತನಕ ಅಂಕಣ, ಬಿಡಿ ಬರಹಗಳಿಂದ ಕನ್ನಡಿಗರ ಗಮನ ಸೆಳೆದ ಶ್ರೀಹರ್ಷ ಸಾಲಿಮಠ ಅವರ ಮೊದಲ ಕಥಾ ಸಂಕಲನ ವಾರದ ನಂತರ ಓದುಗರನ್ನು ಸೇರಲಿದೆ. ಅಲ್ಲದೆ, ಇದೇ ಭಾನುವಾರದಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಹದಿನೈದು ದಿನಕ್ಕೊಮ್ಮೆ ಅವರು ಬರೆಯುವ ಸಿಡ್ನಿ ಡೈರಿ ಅಂಕಣ ಆರಂಭವಾಗಲಿದೆ.

* ಶ್ರೀಹರ್ಷರಿಗೆ ಬರವಣಿಗೆ ಹೊಸದೇನೂ ಅಲ್ಲ. ವಿಜ್ಞಾನ ಲೇಖನ ಮತ್ತು ಅಂಕಣಗಳನ್ನು ಬರೆದ ಅನುಭವ ಹೊಂದಿದವರು. ಜೀವಪರ ಧೋರಣೆ ಮತ್ತು ಜನಮುಖಿ ಆಶಯಗಳನ್ನು ಹೊಂದಿರುವವರು. ಅವರ ಕತೆಗಳ ಬರವಣಿಗೆ ಬಗ್ಗೆ ನನಗೆ ಮೆಚ್ಚುಗೆ ಹುಟ್ಟಿದೆ. ಕಥನ ಕಲೆ ಅವರಿಗೆ ಚೆನ್ನಾಗಿಯೇ ಒಲಿದಿದೆ. ಅದಕ್ಕೆ ಈ ಸಂಕಲನದ ಬಹುಪಾಲು ಕತೆಗಳು ನಿದರ್ಶನವಾಗಿವೆ. ಅವರ ಸಾಹಿತ್ಯಾಸಕ್ತಿ ಮತ್ತು ಜೀವನಾನುಭವಗಳ ವಿಸ್ತಾರ ಕನ್ನಡಕ್ಕೆ ಒಬ್ಬ ಒಳ್ಳೆಯ ಕತೆಗಾರರನ್ನು ಕೊಡಲು ಸಜ್ಜಾಗಿದೆ. ಕಥನ ಶೈಲಿಯೂ ಚೇತೋಹಾರಿಯಾಗಿದೆ. ಅವರಿಂದ ಕನ್ನಡ ಕಥಾಸಾಹಿತ್ಯ ಸಮೃದ್ಧಗೊಳ್ಳಲಿ ಎಂದು ಹಾರೈಸುತ್ತಿದ್ದೇನೆ. ಡಾ. ಬಂಜಗೆರೆ ಜಯಪ್ರಕಾಶ, ಹಿರಿಯ ವಿಮರ್ಶಕರು

ಈ ಕತೆಗಳು ಯೋಚಿಸಿ ಬರೆದವುಗಳಲ್ಲ. ಪ್ರತಿ ಶಬ್ದಗಳೂ ಸಹ ಒಳಗಿನಿಂದ ಅಕ್ಷರಷಃ ಸ್ಪೋಟಗೊಂಡಂಥವು. ಎಲ್ಲೋ ಕೆಲವು ಕಡೆ ವ್ಯಾಕರಣ ತಿದ್ದಿರುವುದನ್ನು ಬಿಟ್ಟರೆ ಮೆದುಳಿಗೆ ಕೆಲಸ ಕೊಟ್ಟದ್ದು ಕಡಿಮೆ. ಕಥೆಗಳೆಲ್ಲ ಸಂದರ್ಭಕ್ಕೆ ತಕ್ಕಂತೆ ಹುಟ್ಟಿ ಬೆಳೆದು ಕಳೆತು ಕೊಳೆಯತೊಡಗಿ ಬೇರೆ ಕೆಲಸಗಳನ್ನು ಮಾಡಲೂ ಸಹ ಬಿಡದೇ ಒಳಗಿನಿಂದ ಹೊರಬರಲು ತುಡಿಯತೊಡಗಿದಾಗ ಸ್ಪೋಟಗೊಂಡ ವಾಕ್ಯಗಳಿವು. ಕೆಲವು ಕಡೆ ಅತಿಯಾದ ಥಿಯರಿ, ಪ್ರಬಂಧ ಮಾದರಿ ಕತೆಯೊಳಗೆ ಹುದುಗಿದ್ದು ನನ್ನ ತಪ್ಪಲ್ಲ ಯಾಕೆಂದರೆ ನನ್ನ ಸಹಜ ಬರಹ ಶೈಲಿ ಲಲಿತ ಪ್ರಬಂಧವೇ! ಬಹುಷಃ ಇದಕ್ಕೆ ನನ್ನ ಶಿಕ್ಷಣ, ಸಂಶೋಧನೆಯ ಹಿನ್ನೆಲೆಯೂ ಕಾರಣವಿರಬಹುದು. ಎಲ್ಲಾ ಕಥೆಗಳು ಸಮಾಜಕ್ಕೆ ಸಂದೇಶವನ್ನು ಕೊಡಬೆಕೆಂದೋ ಓದುಗರಿಗೆ ಮನರಂಜನೆ ಕೊಡಬೇಕು ಎಂಬ ಉದ್ದೇಶದಿಂದಲೋ ಬರೆದವಲ್ಲ. ಒಳಗೆ ಕುಳಿತಿರಲಾರದೇ ಅಂತರಂಗದ ಒತ್ತಡದಿಂದ ಸಿಡಿದು ಜಗತ್ತಿಗೆ ಬಂದ ಅಮಾಯಕ ಭಾವಗಳು ಅವು. ಶ್ರೀಹರ್ಷ ಸಾಲಿಮಠ, ಲೇಖಕರು

(‘ಉಡಾಳ ಬಸ್ಯಾನ ಖೂನಿ’ ಕಥೆಯಿಂದ ಆಯ್ದ ಭಾಗ)

ಇಂತಹದ್ದೊಂದು ದುರಂತ ಅಂತ್ಯವನ್ನು ನಮ್ಮ ಜೊತೆಗೆ ಆಡಿ ಬೆಳೆದಿದ್ದ ಉಡಾಳ ಬಸ್ಯಾ ಕಾಣುತ್ತಾನೆಂದು ನಾವು ಕನಸಲ್ಲೂ ಊಹಿಸಿಸರಲಿಲ್ಲ. ಹೆಚ್ಚೆಂದರೆ ನನಗಿಂತ ಒಂದು ವರ್ಷ ದೊಡ್ಡವನಿರಬಹುದು. ಉಡಾಳತನವೇ ಉಂಡುಟ್ಟು ಬೆಳೆದಿದ್ದ ಬಸ್ಯನಿಗೆ ಪ್ರತೀ ಜೀವಕೋಶದಲ್ಲೂ ತುಂಟತನ ಮನೆಮಾಡಿತ್ತು. ಬಸ್ಯಾ ಬಹಳ ವೇಗವಾಗಿ ಓಡುತ್ತಿದ್ದ. ತೀರಾ ಆರು ವರ್ಷದವನಿದ್ದಾಗಲೇ ಮನೆಯಲ್ಲಿ ಅಪ್ಪನ ಜೇಬಿನಿಂದ ದುಡ್ಡು ಕದಿಯುತ್ತಿದ್ದ. ತಂಬಾಕು ಕದ್ದು ತಿನ್ನುತ್ತಿದ್ದ. ಕಂಡವರ ಮನೆಯ ಸಾಮಾನು ಕದಿಯುತ್ತಿದ್ದ. ಜೊತೆಗೆ ಆಡುತ್ತಿದ್ದ ಹುಡುಗರ ಚಡ್ಡಿಯನ್ನು ಟಪ್ಪನೆ ಕೆಳಗೆಳೆದು ಯಾರ ಕೈಗೂ ಸಿಗದಂತೆ ಓಡಿ ಹೋಗುತ್ತಿದ್ದ. ಓರಗೆಯ ಹುಡುಗಿಯರ ಲಂಗ ಮೇಲೆತ್ತಿ “ಯಾ ಕಲರ್ ಚಡ್ಡಿ” ಅಂತ ಕೇಳಿ “ಥೂ ಚಡ್ಡಿನೇ ಹಾಕಿಲ್ಲ” ಅಂತ ಬೀದಿಲಿ ಎಲ್ಲರಿಗೂ ಕೇಳುವಂತೆ ಕೂಗಿ ಓಡಿ ಹೋಗುತ್ತಿದ್ದ. ಎಲ್ಲಾ ಬೀದಿಲೂ ಆ ಹುಡುಗಿ ಚಡ್ಡಿ ಹಾಕಿಲ್ಲ ಅಂತ ಕೂಗಿ ಹೇಳಿಕೊಂಡು ಬರುತ್ತಿದ್ದ. ಹುಡುಗಿಯರು ಕೇವಲ ಮತ್ತು ಕೇವಲ ಬಸ್ಯಾನಿಗಾಗಿ ಅಪ್ಪನ ಜೊತೆ ಜಗಳ ಮಾಡಿ ಚಡ್ಡಿಯನ್ನು ಕೊಡಿಸಿಕೊಳ್ಳುತ್ತಿದ್ದರು. ಬಡ ರೈತರು ಒಂದೊತ್ತು ಉಪವಾಸ ಇದ್ದು ಮಕ್ಕಳಿಗೆ ಚಡ್ಡಿ ಕೊಡಿಸುತ್ತಿದ್ದರು. ಹತ್ತನೆಯ ವಯಸ್ಸಿಗೆ ಬರುತ್ತಿದ್ದಂತೆ ಬಸ್ಯಾನ ಸಾಹಸಗಳು ಮೇಲ್ತುದಿಯನ್ನು ತಲುಪಿದವು. ಹೆಂಗಸರು ಜಳಕ ಮಾಡುವಾಗ ಕದ್ದು ಕದ್ದು ನೋಡುವನು. ನಟ್ಟಿರುಳು ಒಬ್ಬನೇ ತಿರುಗಾಡುತ್ತಾ ಗುಡಿಸಲುಗಳೊಳಗೆ ಯಾರಾದಾದರೂ ಮಿಲನ ನಡೆಯುತ್ತಿದೆಯೇ ಎಂದು ಹುಡುಕುವನು.

*

ಬಸ್ಯಾನ ಪೂರ್ವಾಶ್ರಮದಲ್ಲಿ ಪೀಡೆಗೊಳಗಾಗಿದ್ದವಳಲ್ಲೊಬ್ಬಳು ಚಂದ್ರಿ. ಚಂದ್ರಿ ಬಸ್ಯಾನಿಗಿಂತ ವಾರಗೆಯಲ್ಲಿ ಒಂದೋ ಒಂದೂವರೆ ವರಷಕ್ಕೋ ಚಿಕ್ಕವಳು. ಹಳ್ಳಿಯಲ್ಲಿದ್ದ ನೂರು ಚಿಲ್ಲರೆ ಕುಟುಂಬಗಳಲ್ಲಿ ಕೊಂಚ ಹೆಚ್ಚೇ ಸ್ಥಿತಿವಂತ ಎನ್ನಬಹುದಾಗಿದ್ದ ರುದ್ರೇಗೌಡನ ಮಗಳು. ಚಂದ್ರಿ ಚಿಕ್ಕಂದಿನಲ್ಲೆ ಸುತ್ತಲಿನ ಗುಡಿಸಲುಗಳ ನಡುವೆ ತನ್ನದೊಂದೇ ಗಟ್ಟಿಮನೆ ಇದ್ದುದರ ಬಗ್ಗೆ ಜಂಬ ಪಟ್ಟವಳಲ್ಲ. ತನ್ನ ಜೊತೆಗೆ ಇರಬೇಕಾದವರು ಈ ಗುಡಿಸಲಿನಲ್ಲಿರುವ ಹುಡುಗಿಯರೇ. ಮತ್ತೊಂದಷ್ಟು ಪಕ್ಕಾ ಮನೆಗಳು ಅಂತ ಆಗಿ ಅವರ ಮಕ್ಕಳ ಗೆಳೆತನ ಮಾಡಿಕೊಳ್ಳುವಷ್ಟು ವೈಭೋಗ ಆ ಊರಲ್ಲಿ ಇರಲಿಲ್ಲ. ಪಕ್ಕಾ ಮನೆ ಮತ್ತು ಗೆಳತಿಯರ ನಡುವೆ ಗೆಳತಿಯರನ್ನೇ ಹೆಚ್ಚು ಹಚ್ಚಿಕೊಂಡಿದ್ದ ಅನಿವಾರ್ಯ ಸಮಾಜವಾದಿಯಾಗಿದ್ದವಳು. ಅವಳ ಅಪ್ಪನಿಗೆ ಆಕೆಗೆ ಹತ್ತು ಚಡ್ಡಿಗಳನ್ನು ತಂದುಕೊಡುವ ಅನುಕೂಲವಿದ್ದರೂ ಗೆಳತಿಯರಿಲಿಲ್ಲದ ವೈಭೋಗ ತನಗೇಕೆ ಎಂಬಂತೆ ಆಕೆಯೂ ಚಡ್ಡಿಯಲ್ಲದಂತೆ ಅಡ್ಡಾಡುತ್ತಿದ್ದಳು.

ಹೀಗೊಂದು ದಿನ ಕುಂಟಾಪಿಲ್ಲೆಯ ಸಮಯದಲ್ಲಿ ಎಲ್ಲ ಹುಡುಗಿಯರ ನಡುವಿನಿಂದ ಅದ್ಯಾವ ಮಾಯದಲ್ಲಿ ಬಂದನೋ ಬಸ್ಯಾ ಆಕೆಯ ಫ್ರಾಕಿನ ಲಂಗ ಎತ್ತಿ ಎಂದಿನಂತೆ ಚಡ್ಡಿಯಿಲ್ಲದೇ ಅಡ್ಡಾಡುತ್ತಿದ್ದ ಹುಡುಗಿಯ ವಾರ್ತೆಯನ್ನು ಊರ ತುಂಬೆಲ್ಲ ಪ್ರಸಾರ ಮಾಡಿಕೊಂಡು ಬಂದಿದ್ದ. ಗುಡಿಸಲಲ್ಲಿ ಬೆಳೆದ ಉಳಿದ ಹುಡುಗಿಯರಂತೆ ಇಂತಹ ಅವಮಾನಗಳಿಗೆ ಯಾವತ್ತೂ ಈಡಾದವಳಲ್ಲ ಚಂದ್ರಿ! ಯಾವ ಆಳು ಕಾಳೂ ಸಹ ಚಂದ್ರಿಯನ್ನು ಏಕವಚನದಲ್ಲಿ ಮಾತನಾಡಿಸಿದವನಲ್ಲ. ಆಕೆಯ ಗೆಳತಿಯರ ಇರುವಿನ ಬಗ್ಗೆ ಹೆಣ್ತನದ ಬಗ್ಗೆ ಅವರ ತಾಯ್ತಂದೆಯರ ಜೀವನಶೈಲಿಯ ಬಗ್ಗೆ ಬಡತನದ ಬಗ್ಗೆ ನೂರು ದನಿಗಳು ಸ್ವತಃ ಅವರುಗಳ ಕಿವಿಗಳಿಗೆ ಬಡಿದೇ ಇಲ್ಲವೆನ್ನುವಷ್ಟು ಮಟ್ಟಿಗೆ ನಿರ್ಲಿಪ್ತವಾಗಿ ಗಾಳಿಗೆ ವಾಪಸು ಪುಟಿದು ಮಾಯವಾಗಿ ಬಿಡುತ್ತಿದ್ದವು. ಚಂದ್ರಿಯ ಕಿವಿಗೆ ಇಂತಹ ಸ್ಥಿತಿಸ್ಥಾಪಕತ್ವ ಪ್ರಾಪ್ತವಾಗುವ ಸಾಧ್ಯತೆಗಳಿರಲಿಲ್ಲ. ಇದೊಂದು ಘಟನೆ ನಡೆದ ಮೇಲೆ ಚಂದ್ರಿ ಮೂರು ದಿನ ಮುಖ ಕೆಂಪಗೆ ಮಾಡಿಕೊಂಡು ಮನೆ ಬಿಟ್ಟು ಹೊರಗೆ ಬಂದಿರಲೇ ಇಲ್ಲ. ರುದ್ರೇಗೌಡನೇ ಅಲ್ಲಿಲ್ಲಿ ವಿಚಾರಿಸಿ ಆಕೆಯ ಗೆಳತಿಯರ ಬಳಿಗೆ ಕೇಳಿ ತಿಳಿದುಕೊಂಡು ಈರಣ್ಣನಿಗೆ ಹೇಳಿಕಳಿಸಿ ತನ್ನ ಮನೆಯ ಅಂಗಳದಲ್ಲಿ ಬಿಸಿಲಲ್ಲಿ ನಿಲ್ಲಿಸಿಕೊಂಡು ಮಕಾಮಕಾ ಸೊಂಟದ ಕೆಳಗಿನ ಭಾಷೆ ಬಳಸಿ ಬೈದ. ತನಗಿಂತ ಮೇಲ್ಜಾತಿಯವನಾದ ಕಾರಣ ತನ್ನ ಶಿಕ್ಷೆ ಬರೀ ಬೈಗುಳಕ್ಕೆ ಸೀಮಿತವಾಗಿದ್ದು ಒಂದೇ ಒಂದು ಹಂತದಷ್ಟು ಕೆಳಜಾತಿಯಾಗಿದ್ದರೆ ಬಾರುಕೋಲು ಮೈಯ ಹಿಂದುಗಡೆಯೆಲ್ಲ ಬಾಸುಂಡೆ ಬೀಳಿಸುತ್ತಿದ್ದವು ಅಂತ ತಾನು ಕರುಣೆದೋರಿದ ಕಾರಣವನ್ನು ಅರುಹಿ ಕಳುಹಿಸಿದ.

acchigoo modhalu uriva udaka sriharsha salimata

ಕಲೆ : ಸಿ.ಪಿ. ಮದನ

ಬಸ್ಯಾ ಊರುಬಿಟ್ಟು ಐದು ವರ್ಷಕ್ಕೆ ಚಂದ್ರಿ ಮೈನೆರೆದಳು. ಆಕೆ ಮೈನೆರೆದು ವರ್ಷದೊಳಗೆ ಬಸ್ಯಾ ವಾಪಸು ಊರಿಗೆ ಬಂದ.

ಊರಿಗೆಲ್ಲ ತನ್ನ ಮಗಳು ದೊಡ್ಡವಳಾದ ವಿಷಯವನ್ನು ಸಾರುವುದಕ್ಕೆ ಜೋರು ಶಾಮಿಯಾನ ಹಾಕಿಸಿ ಊರಿಂದ ಬಣ್ಣಬಣ್ಣದ ಕುರ್ಚಿ ಟೇಬಲ್ ತರಿಸಿ ರೆಕಾರ್ಡ್ ಹಾಕಿಸಿ ಊರವರಿಗೆಲ್ಲಾ ಊಟ ಹಾಕಿಸಿ ಕಳಿಸಿದ ರುದ್ರೇಗೌಡ. ಹದಿನೈದು ದಿನಗಳಲ್ಲಿ ಚಂದ್ರಿ ತನ್ನ ಸಹಜ ಬದುಕಿಗೆ ಹಿಂದಿರುಗಿದಳು. ಆದರೆ ಈ ಸಂಭ್ರಮದ ನಂತರ ತನ್ನ ಸುತ್ತಲಿನ ಸಮಾಜ ಅದೇ ಸಮಾಜವಾಗಿ ಉಳಿದಿಲ್ಲ, ತನ್ನ ದೇಹ ತನ್ನ ದೇಹವಾಗಿ ಉಳಿದಿಲ್ಲ, ತನ್ನ ಮನಸ್ಸು ತನ್ನದಾಗಿ ಉಳಿದಿಲ್ಲ ಎಂಬುದು ನಿಧಾನಕ್ಕೆ ಅರಿವಿಗೆ ಬರತೊಡಗಿತು, ಮನೆಗೋಡೆ ಸಮಾಜದಕ್ಕೆ ತಡೆಯಾಯಿತು, ಬಟ್ಟೆ ತನ್ನ ದೇಹಕ್ಕೆ ಒಡ್ಡಾಯಿತು. ಆದರೆ ತನ್ನ ಮನಸ್ಸಿಗೆ? ಒಡ್ಡು ಹಾಕಲು ಮನಸ್ಸೇ ಆಗಬೇಕು. ತನ್ನದಾದರೂ ಸರಿ, ಮತ್ತೊಬ್ಬನದಾದರೂ ಸರಿ! ದೇಹವಾದರೂ ಮನಕ್ಕೆ ತಕ್ಕಂತೆ ಒಮ್ಮೊಮ್ಮೆ ಹಿಡಿತ ದಾಟಿ ಆಡಿಬಿಡುವುದು. ಇದ್ದಕ್ಕಿದ್ದಂತೆ ಎದೆಯಳಗೆ ಹೆದರಿಕೆಯೊಂದು ನಾಭಿರಂಧ್ರದಿಂದ ಮೊಳಕೆಯೊಡೆದು ಹರಡುವುದು, ಗುಂಡಿಗೆ ಕುರುಳಿನ ನಡುವೆ ಹುದುಗಿದ್ದ ಕಿವಿಗೆ ನೇರವಾಗಿ ಕೇಳಿಸುವಂತೆ ಹೊಡೆದುಕೊಳ್ಳಲಾರಂಭಿಸುವುದು. ದೇಹವೆಂಬುದು ತಾನೀಗ ನರಮನುಷ್ಯ ಸಂತತಿಯನ್ನು ಮುಂದುವರಿಸಲು ಸಿದ್ಧ ಅಂತ ಘೋಷಿಸುತ್ತಿದ್ದಂತೆ ತನ್ನ ಸುತ್ತಲಿನ ಸಮಾಜ ಇದ್ದಕ್ಕಿದ್ದಂತೆ ತೋರುತ್ತಿರುವ ಕ್ರೌರ್ಯ ಅರಿವಿಗೆ ಬಾರದಷ್ಟು ಆಕೆಯ ಮನಸ್ಸು ದೇಹಗಳು ಮಾತುಕತೆಯಲ್ಲಿ ನಿರತವಾಗಿದ್ದವು. ಗೆಳತಿಯರೊಡನೆ ಮಾತಾಡುವಾಗ ಅವರು ಕೊಡುವ ಅರೆಬರೆ ಜ್ಞಾನವೋ, ತಾಯಿಯೊಂದಿಗೆ ಹೇಳಲು ಆಕೆ ಬರೀ ಸಮಾಜ ತನಗೆ ಒಡ್ಡಿರುವ ಬೇಲಿಯ ಗಟ್ಟಿತನವನ್ನೇ ತನಗೆ ಮನನ ಮಾಡಿಸಲು ಯತ್ನಿಸುವುದು ಆಕೆಗೆ ತೃಪ್ತಿ ಕೊಡುತ್ತಿರಲಿಲ್ಲ.

ಹೀಗಿದ್ದಾಗ ಬಸ್ಯಾ ವಾಪಸ್ಸು ಬಂದ. ಪ್ರಕೃತಿಯು ತನ್ನ ಉಳಿಕೆಗೆ ಮತ್ತೊಂದು ಹೆಣ್ಣನ್ನು ಸಿದ್ದಗೊಳಿಸಿ ನಿರ್ಲಿಪ್ತವಾಗಿ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದರ ಪರಿವೆಯಿಲ್ಲದೆ ದೇಹದ ಆವರ್ತನಗಳು ಗಂಡಿನ ಸೆಳೆತಕ್ಕೆ ಪೂರಕವಾಗುವಂತೆ ತಯಾರಾಗುತ್ತಿರಲು ಇವೆಲ್ಲ ಬದಲಾವಣೇಗಳನ್ನು ಗಮನಿಸುವವರಿಲ್ಲವಲ್ಲಾ ಎಂದು ಹಲುಬುತ್ತಿದ್ದಳು. ತಾಯಿಯೊಬ್ಬಳೆ ತನ್ನನ್ನು ಬೆತ್ತಲಾಗಿ ಕಂಡವಳು. ಚಿಕ್ಕಂದಿನಿಂದ ಕಂಡಿದ್ದಾಳೆ. ನನ್ನಂತೆ ನೂರು ಕಂಡಿದ್ದಾಳೆ. ತನ್ನದನ್ನೂ ನೋಡಿಕೊಂಡಿದ್ದಾಳೆ. ಆದರೆ ತನ್ನ ದೇಹ ತಯಾರಾಗುತ್ತಿರುವುದು ಯಾರಿಗಾಗಿ? ಈ ಸಂಬ್ರಮ ಆಕೆಗಾಗಿ ಕೈಗೊಂಡಿಲ್ಲವಲ್ಲ ? ಚಿಗುರು ಮೀಸೆಯ ಬಸ್ಯಾನ ನೋಡಿದಾಗ ಇದ್ದಕ್ಕಿದ್ದಂತೆ ಎಲ್ಲೊ ಮನದಾಳದಲ್ಲಿ ಹುದುಗಿಕೊಂಡಿದ್ದ ನೆನಪೊಂದು ಸುಳಿಯೊಳಗಿಂದ ನದಿ ತಳಗಿನ ಗಾಳಿಯನ್ನು ಗುಳ್ಳೆಯ ಮೂಲಕ ಸಣ್ಣಗಿನ ನೀರಿನ ಹೊದಿಕೆ ಹೊದಿಸಿ ಮೇಲೆ ತರುವಂತೆ ಹೊಕ್ಕಳದ ಸುತ್ತಲಿನ ತಲ್ಲಣವೊಂದು ಹೊರತಂದಿತು. ತನ್ನ ಅಂಗವನ್ನು ನೋಡಿರುವ ಇನ್ನೊಬ್ಬ ಗಂಡಸು ಇವನೇ ಎಂದು ರೋಮಾಂಚಿತಳಾದಳು. ತನ್ನಲ್ಲಿನ ಬದಲಾವಣೆಗಳು ಇವನಿಗಾಗಿಯೇ ಅಂತ ಅವಳಿಗೆ ಆಕ್ಷಣದಲ್ಲಿ ಅನಿಸಿತು. ಮೈಮೇಲಿನ ಬಟ್ಟೆಯೊಂದು ಮಣಭಾರವಾದ ತೀರದ ಋಣ ಎಂಬ ಭಾವ ತುಂಬಿಕೊಂಡಿತು. ಎರಡು ದಿನ ಬಸ್ಯಾ ಆಕೆಯ ಕಣ್ಣ ಮುಂದಿನಿಂದ ಮರೆಯಾಗಲಿಲ್ಲ.

ಇದ್ದಕ್ಕಿದ್ದಂತೆ ಹೋಗಿ ಬಸ್ಯಾನ ಮುಂದೆ ಬತ್ತಲಾಗಿ ನಿಂತುಬಿಡಬೇಕೆನಿಸುವುದು. ಮರಗಳಿಗಿಲ್ಲದ ಬಟ್ಟೆ, ಪ್ರಾಣಿಗಳಿಗಿಲ್ಲದ ಬಟ್ಟೆ ಪಕ್ಷಿಗಳಿಗಿಲ್ಲದ ಬಟ್ಟೆ ತನಗೇಕೆ? ಅದರಲ್ಲೂ ಗಂಡಸು ಹೆಂಗಸು ಅಂತ ಇರ್ತಾವೆ. ಮನುಷ್ಯ ಉಳಿದ ಪ್ರಾಣಿಗಳಿಗಿಂತ ಮೇಲು ಅಂತ ತೋರಿಸಿಕೊಳ್ಳೋಕೆ ಇಲ್ಲದ ಭಾರಗಳನ್ನೆಲ್ಲ ಮೈಮೇಲೆಳೆದುಕೊಳ್ಳಬೇಕಾ? ಜಗತ್ತನ್ನೇ ಒಂದು ಜೈಲಾಗಿ ಮಾಡಿಕೊಂಡು ಬದುಕಬೇಕಾ? ಸಿಂಪಿಗನೊಬ್ಬನಿಗೆ ಬದುಕು ಕೊಡಲು ಇಷ್ಟೂ ಜನ ಪರದಾಡಬೇಕಾ? ಇದ್ದಕ್ಕಿದ್ದಂತೆ ಸಿಂಪಿಗದವರ ಮೇಲೆ ಸಿಟ್ಟುಬಂತಾಕೆಗೆ. ಇದೊಂದು ಜಾತಿ ಮಾಡಿದ ಅನಾಹುತದಿಂದಲೇ ತನ್ನ ಒದ್ದಾಟ ಎಂದು ಶಾಪ ಹಾಕಿದಳು.

ಆಗಸ ಮಳೆ ಸುರಿವಾಗ ಮಾತ್ರ ಭೂರಮೆ ಬಟ್ಟೆ ತೆಗೆದು ನಿಂತಿರುತ್ತಾಳೆಯೇ ? ಇಲ್ಲವೆ ಜಗತ್ತಿಗೊಬ್ಬನೆ ಗಂಡಸು ಇನ್ನಾರಿಗೆ ಅಳಕು ಅಂತ ಉಡುಗೆಯ ಹಂಗು ತೊರೆದು ಮಲಗಿದ್ದಾಳೆಯೆ? ಕುರಿಯನ್ನು ಹೊತ್ತುಕೊಂಡು ಹೋದಾರೇನೊ ಎಂಬ ಅಂಜಿಕೆಯೊಂದಿಗೆ ಹಟ್ಟಿಯಲ್ಲಿ ಬೀಗ ಜಡಿದು ಸಾಕಲು ಪಳಗಿದ ನಾಯಿ ಬಿಟ್ಟಂತೆ ನಮಗೆ ಬಟ್ಟೆ ಸುತ್ತಿ ಕುರಿಯಾಗಿದ್ದ ಹೆಂಗಸರನ್ನೇ ಪಳಗಿಸಿ ನಾಯಿಗಳನ್ನಾಗಿಸಿ ಸಾಕಲು ಬಿಡುತ್ತಾರೆ. ಹೊತ್ತುಕೊಂಡು ಒಯ್ಯೋದು ಕಳ್ಳ ಮಾಡುವ ಪಾಪವಲ್ಲವೆ? ಆದರೆ ಜೈಲು ಶಿಕ್ಷೆ ಅನ್ನೊದು ಮಾತ್ರ ಕುರಿಗೆ! ಕುರಿಗೆ ನಾಯಿಯಾಗಿ ಬಡ್ತಿ ಸಿಗುವುದು ಹೆಂಗಸರಲ್ಲಿ ಮಾತ್ರ ಎನಿಸುತ್ತದೆ.

(ಈ ಕಥಾಸಂಕಲನದ ಖರೀದಿಗಾಗಿ ಸಂಪರ್ಕಿಸಿ : 9986302947)

* ಪರಿಚಯ : ಶ್ರೀಹರ್ಷ ಸಾಲಿಮಠರು ಬಾಲ್ಯದಿಂದ ಎಂಜಿನಿಯರಿಂಗ್ ಪದವಿತನಕ ದಾವಣಗೆರೆಯಲ್ಲಿ ವಾಸವಾಗಿದ್ದರು. ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಪೂರೈಸಿದ ನಂತರ ವೃತ್ತಿಗಾಗಿ ಚೆನ್ನೈ, ತ್ರಿವೇಂದ್ರಮ್, ಬೆಂಗಳೂರಿಗೆ ತೆರಳಿದರು. ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಕನ್ನಡದ ಅನೇಕ ತಾಂತ್ರಿಕ ಸಾಧನಗಳಿಗೆ ಇವರ ಕೊಡುಗೆ ಇದೆ. ಪತ್ರಿಕೆ, ವೆಬ್​ಗಳಲ್ಲಿ ಇವರ ಅಂಕಣ,  ಬರಹಗಳು ಪ್ರಕಟವಾಗಿವೆ. ‘ಉದಕ ಉರಿದು’ ಇವರ ಮೊದಲ ಕಥಾ ಸಂಕಲನ.

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು ; ‘ಎಲ್ಲೋ ಜೋಗಪ್ಪ ನಿನ್ನರಮನೆ‘ ಹೊಸ ಕಾದಂಬರಿಯೊಂದಿಗೆ ಕುಂವೀ ಬಂದರು ದಾರಿಬಿಡಿ 

Published On - 1:42 pm, Fri, 20 August 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್