Meeting Point : ‘ನಾವು ಜಾಗಗಳಿಗೆ ಒಂದೊಂದು ಲೇಬಲ್ ಕೊಟ್ಟುಬಿಟ್ಟಿದ್ದೇವೆ’

Let Them Live Their Life : ‘ನೋಡು, ಅಲ್ಲಿಗೆ ಹೋಗೋ ಬಹುಪಾಲು ಜನರಲ್ಲಿ ಸಮಾಜದ ಯಾವುದೋ ಒತ್ತಡಕ್ಕೆ ಸಿಲುಕಿ ಒಲ್ಲದ ಮದುವೆಯಾಗೋ ಕೆಳವರ್ಗದ ಲೈಂಗಿಕ ಅಲ್ಪಸಂಖ್ಯಾತರು, ಟ್ರಾನ್ಸ್ ಸಮುದಾಯದವರು, ಅನಕ್ಷರಸ್ಥರಾಗಿರುವ ಕೆಳವರ್ಗದ ಕ್ವೀರ್ ಸಮುದಾಯಕ್ಕೆ ಸೇರಿದ ಜನಗಳೆ ಇರ್ತಾರೆ. ಆ ಜಾಗ ಅವರಿಗೆ ಕೆಲವು ಕ್ಷಣಗಳವರೆಗಾದರೂ ಅವರು ಅವರಾಗಿರುವ ಅವಕಾಶ ಕೊಡತ್ತೆ.‘

Meeting Point : ‘ನಾವು ಜಾಗಗಳಿಗೆ ಒಂದೊಂದು ಲೇಬಲ್ ಕೊಟ್ಟುಬಿಟ್ಟಿದ್ದೇವೆ’
ಲೇಖಕ ದಾದಾಪೀರ್ ಜೈಮನ್
Follow us
ಶ್ರೀದೇವಿ ಕಳಸದ
|

Updated on:Sep 09, 2021 | 10:50 AM

Meeting Point : ಮೈಸೂರಿನಲ್ಲಿ ನಡೆದ ಅತ್ಯಾಚಾರದ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’.

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಅದೆಷ್ಟು ಜಟಿಲವಲ್ಲವೆ? ಈ ಸರಣಿಯಲ್ಲಿ ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರು ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಯಾರೂ ಈ ಸಂವಾದದಲ್ಲಿ ಬರಹ ಮತ್ತು ಪ್ರತಿಕ್ರಿಯೆಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ದಾದಾಪೀರ್ ಜೈಮನ್ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನಲ್ಲಿ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯಮಟ್ಟದ ಹಲವಾರು ಕಥಾಸ್ಪರ್ಧೆಗಳಲ್ಲಿ ಇವರ ಕಥೆಗಳು ಬಹುಮಾನ ಪಡೆದುಕೊಂಡಿವೆ. ಇತ್ತೀಚಿಗೆ ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ಮೊದಲ ಕಥಾಸಂಕಲನದ ಪ್ರಕಟಣೆಯ ತಯಾರಿಯಲ್ಲಿದ್ದಾರೆ. ಅವರ ಬರಹ ನಿಮ್ಮ ಓದಿಗೆ.

ಒಂದಿಷ್ಟು ತಿಂಗಳುಗಳ ಹಿಂದೆ ನಾನು ಕಾದಂಬರಿ ಬರೆಯುವುದಕ್ಕಾಗಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಅದರ ನಿಮಿತ್ತವಾಗಿ ಗೆಳೆಯನೊಬ್ಬನಿಗೆ ಕರೆ ಮಾಡಿ ಇಬ್ಬರಿಗೂ ಗೊತ್ತಿರುವ ಮಹಾನಗರವೊಂದರ ಟಾಕೀಸಿನ ಬಗ್ಗೆ ಪ್ರಸ್ತಾಪಿಸಿ ಖಚಿತತೆಗಾಗಿ ನಿಜದ ಹೆಸರುಗಳನ್ನೇ ಇಡಬಹುದೆ ಎನ್ನುವ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕೆ ಕಾರಣವಿತ್ತು. ನಾನು ಪ್ರಸ್ತಾಪಿಸಿದ್ದ ಆ ಟಾಕೀಸಿನಲ್ಲಿ ಬಿ ಗ್ರೇಡ್ ಸಿನಿಮಾಗಳು ಎನ್ನಬಹುದಾದ ಕಾಮೋತ್ತೇಜಕ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದರು ಮತ್ತು ಅಲ್ಲಿ ಸಿನಿಮಾ ನೋಡುವುದಕ್ಕಿಂತ ಹೆಚ್ಚಾಗಿ ಜನರು ಲೈಂಗಿಕ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲು ಹೋಗುತ್ತಿದ್ದರು. ಮುಖ್ಯವಾಗಿ ಲೈಂಗಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಜನರು ಹೆಚ್ಚಿರುತ್ತಿದ್ದರು.

ನಾನೆತ್ತಿದ ಪ್ರಶ್ನೆಗೆ ಸ್ನೇಹಿತ ಸ್ಪಷ್ಟ ದನಿಯಲ್ಲಿ ಉತ್ತರಿಸಿದ್ದ; “ನೋಡು, ಅಲ್ಲಿಗೆ ಹೋಗೋ ಬಹುಪಾಲು ಜನರಲ್ಲಿ ಸಮಾಜದ ಯಾವುದೋ ಒತ್ತಡಕ್ಕೆ ಸಿಲುಕಿ ಒಲ್ಲದ ಮದುವೆಯಾಗೋ ಕೆಳವರ್ಗದ ಲೈಂಗಿಕ ಅಲ್ಪಸಂಖ್ಯಾತರು, ಟ್ರಾನ್ಸ್ ಸಮುದಾಯದವರು, ಅನಕ್ಷರಸ್ಥರಾಗಿರುವ ಕೆಳವರ್ಗದ ಕ್ವೀರ್ ಸಮುದಾಯಕ್ಕೆ ಸೇರಿದ ಜನಗಳೆ ಇರ್ತಾರೆ. ಆ ಜಾಗ ಅವರಿಗೆ ಕೆಲವು ಕ್ಷಣಗಳವರೆಗಾದರೂ ಅವರು ಅವರಾಗಿರುವ ಅವಕಾಶ ಕೊಡತ್ತೆ. ಅಂತಹ ಜಾಗಗಳ ಬಗ್ಗೆ ನಿಖರವಾದ ಉಲ್ಲೇಖ ಮಾಡಿ ಅದನ್ನ ಅವರಿಂದ ಕಿತ್ತುಕೊಳ್ಳಬಾರದು. ನಿನ್ನ ಕಾದಂಬರಿಯಲ್ಲಿ ಆ ವಿವರಗಳು ಬೇಕೇಬೇಕಿದ್ದಲ್ಲಿ ಹೆಸರು ಬದಲಾಯಿಸು… ನಿನ್ನ ಕಾದಂಬರಿಗಿಂತ ಅವರ ಬದುಕು ಬಹಳ ಮುಖ್ಯ.” ಅವನು ಕೊಟ್ಟ ಉತ್ತರ ಇತರೆ ವಿಷಯಗಳ ಬಗ್ಗೆಯೂ ಯೋಚಿಸುವಂತೆ ಮಾಡಿತು.

ನಾವು ಜಾಗಗಳಿಗೆ ಒಂದೊಂದು ಲೇಬಲ್ ಕೊಟ್ಟುಬಿಟ್ಟಿದ್ದೇವೆ. ನಮ್ಮ ಮಹಾನಗರದ ಬೀದಿಗಳಲ್ಲಿ, ಉದ್ಯಾನವನಗಳಲ್ಲಿ ಪ್ರೇಮಿಗಳು ಯಾವುದೇ ಭಯವಿಲ್ಲದೆ ಕೈಕೈ ಹಿಡಿದು ಓಡಾಡಲು, ಕನಸುಗಳನ್ನು ಪಿಸುಗುಟ್ಟಿಕೊಳ್ಳಲು, ಮುತ್ತು ಕೊಟ್ಟುಕೊಳ್ಳಲು, ಪರಸ್ಪರರ ಪ್ರೀತಿ ತುಂಬಿದ ಪೋಲಿ ಮಾತುಗಳಿಗೆ ಕೆನ್ನೆ ಕೆಂಪೇರಿಸಿಕೊಳ್ಳಲು ನಿಜಕ್ಕೂ ಮುಕ್ತವಾಗಿವೆಯೇ? ಆ ಜಾಗಗಳಲ್ಲಿ ನಡೆಯುವ ನೈತಿಕ ಪೊಲೀಸ್​ಗಿರಿ ಮತ್ತದೇ ತಪ್ಪು ಸರಿಗಳ ಪೂರ್ವಯೋಜಿತ ಸಂಯೋಜನೆಗಳನ್ನೇ ಗಟ್ಟಿಗೊಳಿಸುತ್ತಿವೆಯೇ? ಹೀಗೆ ಸಾಲು ಸಾಲು ಪ್ರಶ್ನೆಗಳು ಕಣ್ಣಮುಂದೆ ಬರುತ್ತವೆ.

ಬಹುಶಃ ನಾವೆಲ್ಲರೂ ಹಾಗೇ. ಮೊದಲ ನೋಟದಲ್ಲಿಯೇ ನಿರ್ಧರಿಸಿಬಿಡುತ್ತೇವೆ. ಇವರು ಹೀಗೆಯೇ! ಇದು ಹೀಗೆಯೇ! ನಾವು ಕಂಡದ್ದಕ್ಕೆಲ್ಲ ಲೇಬಲ್ ಮಾಡುವುದಕ್ಕೆ ಕಾಯುತ್ತಿರುತ್ತೇವೆ. ಉಡುವ ಬಟ್ಟೆಗಳ ಮೇಲೆ, ಮಾತನಾಡುವ ಧ್ವನಿಯ ಮೇಲೆ, ನಡೆವ ಲಾಲಿತ್ಯದ ಮೇಲೆ, ಯಾರೋ ಇಬ್ಬರು ಕೈಕೈ ಹಿಡಿದು ನಡೆಯುತ್ತಿರುವುದನ್ನು ನೋಡಿ, ಜೊತೆಗೆ ಯಾರಿದ್ದಾರೆ ಎಂಬುದರ ಮೇಲೆ, ವಯಸ್ಸಿನ ಅಂತರಗಳ ಆಧಾರದ ಮೇಲೆ… ಹೀಗೆ ಕಂಡ ಕೂಡಲೇ ಹಚ್ಚಲು ಒಂದು ಲೇಬಲ್ ಸಿದ್ಧವಾಗಿಬಿಟ್ಟಿರುತ್ತದೆ. ಅದು ಯಾಕೆ ಹಾಗೆ ಎಂದೊಮ್ಮೆ ಪ್ರಶ್ನೆ ಮಾಡಿಕೊಂಡರೆ ಅಲ್ಲೆಲ್ಲಾ ನಮ್ಮೊಳಗಿರುವ ಪೂರ್ವಗ್ರಹಗಳೇ ಕೆಲಸ ಮಾಡುತ್ತವೆ ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ನಮ್ಮನ್ನು ರೂಪಿಸಿದ ಸಮಾಜದ ಸಂಯೋಜನೆಗಳು ಕಾರಣವಾಗಿರುತ್ತವೆ ಎನಿಸುತ್ತದೆ. ಹೀಗೆ ಬರೆಯುವಾಗ ನನ್ನ ತಲೆಯಲ್ಲಿ ಇದೆಲ್ಲಾ ಯುಟೋಪಿಯನ್ ಅಷ್ಟೇ ಎನ್ನುವ ಯೋಚನೆ ಬರುತ್ತಿರುವುದು ನಿಜ. ಅದನ್ನು ಮೀರಿ ಹೇಳುವುದಾದರೆ ನಾವು ಸ್ವಾತಂತ್ರ್ಯಕ್ಕೆ ಅಂಜುತ್ತೇವೆ. ಅದಕ್ಕಾಗಿಯೇ ನಾವು ಬೇರೆ ಬೇರೆ ಹೆಸರುಗಳ ಮುಸುಕಿನಲ್ಲಿ ಅಡಗಿಕೊಳ್ಳುತ್ತೇವೆ ಎನಿಸುತ್ತದೆ.

ಇವುಗಳೊಟ್ಟಿಗೆ ಮಹಾನಗರದ ನಿರ್ಜನ ಬೀದಿಗಳಲ್ಲಿ, ಉದ್ಯಾನವನಗಳಲ್ಲಿ ನಡೆಯುವ ಅತ್ಯಾಚಾರಗಳಿಗೆ ಯಾರು ಹೊಣೆ? ಉತ್ತರ ಹುಡುಕಿ ಹೊರಟಾಗಲೆಲ್ಲಾ ಬಹುಪಾಲು ಉತ್ತರಗಳು ‘ಆ ಹೆಂಗಸು ಅಷ್ಟೊತ್ತಿನಲ್ಲಿ ಅಲ್ಲೇನು ಮಾಡುತ್ತಿದ್ದಳು? ಅವಳು ಯಾಕೆ ಅಂತಹ ಬಟ್ಟೆಗಳನ್ನು ತೊಡಬೇಕಿತ್ತು? ಯಾವನೋ ಲವರ್ ಜೊತೆಯಲ್ಲಿ ಲಲ್ಲೆ ಹೊಡಿತಿರಬೇಕು… ಸರಿನೇ ಆಗಿದೆ’ ಎನ್ನುವ ಕರ್ಕಶ ಸಾಲುಗಳು ಕಿವಿಗೆ ಬೀಳುತ್ತವೆ. ಹಲವು ಪ್ರಸಂಗಗಳಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ತೆಗೆದುಕೊಳ್ಳಲು ತುಂಬಾ ಸಮಯ ತೆಗೆದುಕೊಂಡರು ಎಂಬ ಪತ್ರಿಕಾವರದಿಗಳನ್ನು ಕಾಣುತ್ತೇವೆ. ಇವೆಲ್ಲಾ ನಮಗೆ ಏನು ಹೇಳುತ್ತಿವೆ?

ಉತ್ತರ ಹುಡುಕುವ ಮುನ್ನ ಮತ್ತೊಂದು ಮಗ್ಗುಲಲ್ಲಿ ನಿಂತು ಮತ್ತೊಂದಿಷ್ಟು ಪ್ರಶ್ನೆಗಳನ್ನು ಸೇರಿಸಿಕೊಳ್ಳೋಣ. ಅತ್ಯಾಚಾರ ಮಾಡುವ ಆ ವ್ಯಕ್ತಿಗಳು ಎಲ್ಲಿಂದ ಬಂದವರು, ಅವರು ಬೆಳೆದು ಬಂದ ಪರಿಸರ, ಹಿನ್ನಲೆ ಏನು? ಅವರೇಕೆ ಹಾಗೆ ಮಾಡಿದರು? ಅವರ ತಲೆಯಲ್ಲಿ ಆ ವಿಕೃತ ಯೋಚನೆ ಬಂದಿದ್ದಾದರೂ ಹೇಗೆ? ಅದನ್ನು ಕಾರ್ಯಗತಗೊಳಿಸಿಯೇ ಬಿಡುವ ಧೈರ್ಯವಾದರೂ ಹೇಗೆ ಬಂತು? ಇದೆಲ್ಲಾ ಎಲ್ಲೋ ಒಂದು ಕಡೆಯಿಂದ ಆರಂಭವಾಗಿರಬೇಕಲ್ಲ! ಅದು ಎಲ್ಲಿ? ಯಾವುದರ ಕಡೆಗೆ ಬೊಟ್ಟು ಮಾಡಿ ತೋರಿಸುವುದು?

ಇದೇ ನಿಟ್ಟಿನಲ್ಲಿ ಮತ್ತೊಂದು ವಿಷಯವನ್ನು ಸೇರಿಸಿಬಿಡುತ್ತೇನೆ. ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಸಮಾಜ ಸೇವಾ ಸಂಸ್ಥೆಯೊಂದು ಸಮಸ್ಯೆಯನ್ನು ಬೇರುಸಹಿತ  ಕಿತ್ತುಹಾಕುವುದಕ್ಕಾಗಿ ಶಾಲಾಮಟ್ಟದಲ್ಲಿ ಅಂದರೆ ಶಾಲೆಗಳಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು. ಅವರ ಒಂದು ಮೀಟಿಂಗಿನಲ್ಲಿ ಅವರು ಶಾಲೆಗಳಿಗೆ ಹೋಗಿ ಅಲ್ಲಿನ ಹುಡುಗರಿಗೆ ನೀವು ಪೋರ್ನ್ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿಬಿಡಿ ಎಂದೂ ಹುಡುಗಿಯರಿಗೆ ಇಂದ್ರಿಯನಿಗ್ರಹದ ಪಾಠಗಳನ್ನು ಹೇಳಿಕೊಡುತ್ತಾ ಎಲ್ಲಾ ಹುಡುಗರು ಅತ್ಯಾಚಾರಿಗಳೇ ಎನ್ನುವ ಅನುಮಾನವನ್ನು ಅವರಿಗೆ ಗೊತ್ತಿಲ್ಲದೆಯೇ ತುಂಬಿ ಬರುತ್ತಿದ್ದರು. ನಾನು ಹೇಳಹೊರಟಿರುವುದು ಅವರು ಅನುಸರಿಸುತ್ತಿದ್ದ ವಿಧಾನ ಅದೆಷ್ಟು ಅವೈಜ್ಞಾನಿಕವಾಗಿದೆ ಎನ್ನುವುದರ ಬಗ್ಗೆ. ಇದೇ ಹೊತ್ತಿಗೆ ನಮ್ಮಲ್ಲಿ ಲೈಂಗಿಕ ಶಿಕ್ಷಣ ಎಂದರೆ ಮೂಗು ಮುರಿಯುತ್ತಾರೆ. ಸರಿ, ಲೈಂಗಿಕ ಶಿಕ್ಷಣ ಇದೆ ಎಂದೇ ಇಟ್ಟುಕೊಳ್ಳೋಣ… ಶಾಲೆಯ ಹೊಸ್ತಿಲನ್ನೇ ತುಳಿಯದವರಿಗೇನು ಮಾಡುವುದು? ಎನ್ನುವುದು ಮತ್ತೊಂದು ಪ್ರಶ್ನೆ.

ನನ್ನ ಶಾಲೆಯ ಸ್ನೇಹಿತೆಯೊಬ್ಬಳು ಕೆಲವು ದಿನಗಳ ಹಿಂದೆ ಕರೆ ಮಾಡಿ ”ನನಗೆ ಪ್ರತಿದಿನವೂ ಕೆಟ್ಟ ಕನಸುಗಳು ಬೀಳ್ತವೆ. ಅದು ನನ್ನನ್ನ ಭಯ ಬೀಳಿಸತ್ತೆ. ಚಿಕ್ಕ ವಯಸ್ಸಲ್ಲಿ ನಮ್ಮ ಸಂಬಂಧಿಕರಿಂದಲೇ ಲೈಂಗಿಕ ಕಿರುಕುಳಕ್ಕೊಳಗಾದೆ. ಅದು ನನ್ನನ್ನ ಈಗಲೂ ಬೆಚ್ಚಿಬೀಳಿಸತ್ತೆ. ಅಮ್ಮನಿಗೆ ಹೇಳಿದ್ರೆ ಮರ್ಯಾದೆ ಪ್ರಶ್ನೆ ಮುಂದಿಟ್ಟು ನಿರ್ಲಕ್ಷಿಸಿಬಿಟ್ರು. ಮಧ್ಯೆ ಒಂದಿಷ್ಟು ದಿನ ಸರಿ ಹೋಗಿತ್ತು. ಈಗ ಮತ್ತೆ ಕೆಟ್ಟ ಕನಸುಗಳು ಬೀಳ್ತಾ ಇದಾವೆ. ನಿಂಗೆ ಯಾರಾದ್ರು ಕೌನ್ಸೆಲರ್ ಗೊತ್ತಿದ್ರೆ ದಯವಿಟ್ಟು ರೆಫರ್ ಮಾಡು. ನನ್ನ ಕೈಯಿಂದ ಆಗ್ತಿಲ್ಲ…” ಎಂದು ಗೋಗರೆದಿದ್ದಳು. ಇಂತಹ ಹಲವಾರು ಘಟನೆಗಳು ನಮ್ಮ ನಡುವೆಯೇ ಆಗುತ್ತವೆ. ನಮ್ಮ ಮನೆಗಳೇ ನಮ್ಮ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲದ ಜಾಗಗಳಾಗಿ ಹೋದರೆ ಏನು ಮಾಡುವುದು?

ಈ ಲೇಖನ ಬರೆಯುವ ಮುನ್ನ ಯೂಟ್ಯೂಬಿನಲ್ಲಿ ಕಲಾವಿದೆ ಮಾಯಾಕೃಷ್ಣ ರಾವ್ ಅವರ ‘ವಾಕ್’ ಎನ್ನುವ ಏಕವ್ಯಕ್ತಿ ಪ್ರದರ್ಶನವನ್ನು ಮತ್ತೊಮ್ಮೆ ನೋಡಿದೆ. ಅದರೊಳಗೆ ಮೇಲೆ ನಾವು ಎದುರುಗೊಂಡ ಹಲವು ಪ್ರಶ್ನೆಗಳಿಗೆ ಉತ್ತರವಿದೆ. ಇಲ್ಲಿ ಹೆಣ್ಣು ಧ್ವನಿಯಿದ್ದರೂ ಸಹ ಯಾವುದೇ ಅಲಕ್ಷಿತ ಮತ್ತು ಅಶಕ್ತವೆಂದು ನಂಬಿಸಲಾದ ಧ್ವನಿಯೆಂದು ಅಂದುಕೊಂಡು ಕೂಡ ಓದಿಕೊಳ್ಳಬಹುದು. ಅದರ ಭಾವನುವಾದವನ್ನು ಈ ಕೆಳಕಂಡಂತೆ  ಹಿಡಿಯಲು ಪ್ರಯತ್ನಿಸಿರುವೆ.

meeting point mayakrishna rao

ಸೌಜನ್ಯ : ಮೋನಿಕಾ ದವರ್

ನಡಿಗೆ

ನಾನು ನಡೆಯಬಯಸುತ್ತೇನೆ ಐದಲ್ಲ ಆರಲ್ಲ ಏಳು ಎಂಟು ಒಂಭತ್ತಲ್ಲ ರಾತ್ರಿ ಹನ್ನೆರಡನ್ನು ಮುಂಜಾವಿನ ಮೂರು ನಲವತ್ತೈದು ಮತ್ತು ನಾಲ್ಕೂವರೆ… ನಾನು ನಡೆಯುತ್ತಾ ಬೆಳಗಿನ ಸೂರ್ಯೋದಯವನ್ನು ನೋಡಬಯಸುತ್ತೇನೆ ನಾನು ಬಸ್ಸು ಹತ್ತಲು ಇಚ್ಛಿಸುತ್ತೇನೆ ರಸ್ತೆಯಲ್ಲಿ ನಡೆಯಲು ಪಾರ್ಕಿನಲ್ಲಿ ಕೂರಲು ಬಯಸುತ್ತೇನೆ ನನಗೆ ಕತ್ತಲೆಯ ಭಯವಿಲ್ಲ

ನನಗೆ ಯಾವಾಗ ಹೌದು ಎನ್ನಬೇಕೆನ್ನುವುದು ಯಾವಾಗ ಇಲ್ಲ ಎನ್ನಬೇಕೆನ್ನುವುದು ಗೊತ್ತಿದೆ

ಕೊಡಿ ನನಗೆ ಬೀದಿದೀಪಗಳನ್ನು ಕೊಡಿ ನನ್ನ ಮಾತುಗಳನ್ನು ಕೇಳಿಸಿಕೊಳ್ಳುವ ಪೊಲೀಸರನ್ನು ಕೊಡಿ ನನಗೆ ಕೊಡಿ ನನ್ನಿಚ್ಛೆಯಂತೆ ಬದುಕುವ ಕಾನೂನನ್ನು ಕೊಡಿ

ಅವಳ ಪಕ್ಕ ಸರಿಯಾಗಿ ಕೂರಲು ಬಾರದ ಸರಿಯಾದ ರೀತಿಯಲ್ಲಿ ಸ್ಪರ್ಶಿಸಲು ಬಾರದ ಪತ್ನಿಯ ಪಕ್ಕ ಸರಿಯಾದ ರೀತಿಯಲ್ಲಿ ಅಡ್ಡಾಗಲು ಬಾರದ ಪ್ರತಿದಿನದ ಕಾಮಕೇಳಿಯಲ್ಲಿ ತೊಡಗುವ ಮುನ್ನ ಹೆಂಡತಿಯ ಅನುಮತಿಯನ್ನು ಕೇಳಲು ತಿಳಿಯದ ಗಂಡಸಿನ ಜೊತೆ ಮಾತನಾಡುವುದು ಬೇಡ ನಡೆಯುವುದು ಬೇಡ ನಾನು ನಿನ್ನ ಜೊತೆ ಮಾತನಾಡುವೆ ನಾನು ನಿನ್ನ ಮನಸ್ಸು ನಿನ್ನ ಜೊತೆ ಮಾತನಾಡುವೆ ಕೂತು ಯೋಚಿಸೋಣ

ಕೊಡಿ ನನಗೆ ಆ ತಾಯಿಯನ್ನು ಕೊಡಿ ನಾನು ತೋರಿಸಿದ ಚಾಚಾ, ಮಾಮಾ, ದೋಸ್ತನ ಎದುರಿಗೆ ಮಗಳ ಭುಜದ ಮೇಲೆ ಕೈಹಾಕಿ ಅವರನ್ನು ಎದುರಿಸುವ ಆ ತಾಯಿಯನ್ನು ಕೊಡಿ

ಹೆದರಬೇಡ ನಾನು ನಿನ್ನೊಂದಿಗೆ ಮಾತನಾಡುತ್ತೇನೆ ನಿನ್ನೊಂದಿಗೆ ನಡೆಯುತ್ತೇನೆ ಸುಮ್ಮನೆ ಕಲ್ಲುಬೆಂಚುಗಳ ಮೇಲೆ ಕೂರೋಣ ಇಬ್ಬರೂ ತಾರೆಗಳನ್ನು ದಿಟ್ಟಿಸೋಣ ಬಹುಶಃ ತಾರೆಗಳನ್ನು ನೋಡುತ್ತಾ ನೋಡುತ್ತಾ ಅವುಗಳ ಪಿಸುಮಾತು ಕೇಳಿಸಬಹುದು ಆ ಪಿಸುಮಾತು ನಿನಗೆ ಅವಳೊಂದಿಗೆ ಮಾತನಾಡಬೇಕೆಂದರೆ ಅವಳನ್ನು ಕೇಳು ಅವಳ ಕೈ ಹಿಡಿಯಬೇಕೆಂದರೆ ಅವಳನ್ನು ಕೇಳು ಅವಳನ್ನು ನೋಡಿ ನಿನಗೆ ಮನಸ್ಸಾದರೆ ಅವಳನ್ನು ಕೇಳು ಯಾರಾದರೂ ಅವಳನ್ನು ಮದುವೆಯಾಗು ಎಂದರೆ ಮೊದಲು ಅವಳನ್ನು ಕೇಳು ಒಮ್ಮೆ ಒಮ್ಮೆ ಕೇಳಿ ನೋಡು

ಹೆದರಬೇಡ ನಾವು ನಡೆಯೋಣ ನಡೆಯುತ್ತಲೇ ಇರೋಣ

(‘ವಾಕ್’ ಏಕವ್ಯಕ್ತಿ ಪ್ರದರ್ಶನದ ಭಾವಾನುವಾದ)

ಇದನ್ನೂ ಓದಿ : Journalism : ‘ದೇವರ ಹೆಸರಿನಲ್ಲಿ ನನ್ನ ಅಮ್ಮನ ಕುತ್ತಿಗೆಯಲ್ಲಿ ಜೋತಾಡುವ ಆ ಮುತ್ತುಗಳಿಗಾಗಿ’

Published On - 5:48 pm, Wed, 1 September 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ