Journalism : ‘ದೇವರ ಹೆಸರಿನಲ್ಲಿ ನನ್ನ ಅಮ್ಮನ ಕುತ್ತಿಗೆಯಲ್ಲಿ ಜೋತಾಡುವ ಆ ಮುತ್ತುಗಳಿಗಾಗಿ…’

Know The Truth : ‘ಪ್ರತಿಬಾರಿಯೂ ಊರಿಗೆ ಹೋದಾಗ ಒಂದೊಂದು ಯಕ್ಷ ಪ್ರಶ್ನೆಗಳು, ಯಾವುದಕ್ಕೂ ಉತ್ತರವಿಲ್ಲ. ಓದುವ ಆಸೆ ಹೊತ್ತ ಬಾಲ್ಯ ಗೆಳತಿ ಆಡುವ ವಯಸ್ಸಿನಲ್ಲೇ ಎರಡು ಮಕ್ಕಳ ತಾಯಿಯಾಗಿದ್ದು, ಊರಿನ ಸ್ವಾಮಿಯೊಬ್ಬನ ಮಾತನ್ನು ಜನ ಕಣ್ಣು ಮುಚ್ಚಿ ನಂಬುತ್ತಿದ್ದುದು, ಕೊತ-ಕೊತ ಕುದಿಯುವ ಅಡಿಗೆಯಿಂದಲೇ ದೇವರಿಗೆ ನೈವೇದ್ಯ ತೆಗೆಯುವ ಅಜ್ಜನ ಕೈಗಳು... ಎಲ್ಲವೂ ಈಗಲೂ ಬೆಂಬಿಡದೆ ಕಾಡುತ್ತಿರುವ ಪ್ರಶ್ನೆಗಳು. ಯಾವುದು ಶಕ್ತಿ ಯಾವುದು ಮೌಢ್ಯ?’ ಸುಷ್ಮಾ ಸವಸುದ್ದಿ

Journalism : ‘ದೇವರ ಹೆಸರಿನಲ್ಲಿ ನನ್ನ ಅಮ್ಮನ ಕುತ್ತಿಗೆಯಲ್ಲಿ ಜೋತಾಡುವ ಆ ಮುತ್ತುಗಳಿಗಾಗಿ...’
ಸುಷ್ಮಾ ಸವಸುದ್ದಿ
Follow us
ಶ್ರೀದೇವಿ ಕಳಸದ
|

Updated on:Aug 25, 2021 | 5:41 PM

Future Journalists : ಜೀವನೋಪಾಯಕ್ಕೆಂದು ಮಾಡುವ ಕೆಲಸದ ವಿಧಾನ ಬೇರೆ. ಇಷ್ಟಪಟ್ಟು ತೊಡಗಿಕೊಳ್ಳುವ ಕೆಲಸದ ಗತಿಯೇ ಬೇರೆ. ಎರಡನೇ ಆಯ್ಕೆ ತುಸು ಕಷ್ಟದ್ದು, ನಿರಂತರ ಸವಾಲಿನದು. ಅಲ್ಲಿ ತನ್ನ ಹೊಟ್ಟೆ, ಬಟ್ಟೆ, ನೆತ್ತಿಗೂ ಮೀರಿದ ಆಲೋಚನೆಗಳು, ಆಶಯಗಳು ಸದಾ ಮಿಸುಕಾಡುತ್ತಿರುತ್ತವೆ. ಅಂಥ ಕ್ಷೇತ್ರಗಳಲ್ಲಿ ಪ್ರಮುಖವಾದುದು ಪತ್ರಿಕೋದ್ಯಮ. ಪತ್ರಕರ್ತರು ತಮ್ಮನ್ನು ಆವರಿಸುವ ಅಣುಅಣುವಿನ ಬಗ್ಗೆಯೂ ಸದಾ ಜಾಗೃತರಾಗಿರಲು ತಮ್ಮೊಳಗೊಂದು ತಿದಿಯನ್ನು ಹಗಲು ರಾತ್ರಿಯೂ ಒತ್ತಿಕೊಳ್ಳುತ್ತಲೇ ಇರಬೇಕಾಗುತ್ತದೆ. ಆಗುಹೋಗುಗಳನ್ನು ಯಾವೆಲ್ಲ ರೀತಿಯಲ್ಲಿ ತೆರೆದಿಡಬೇಕು, ಯಾವೆಲ್ಲ ದೃಷ್ಟಿಕೋನದಿಂದ ಗಮನಿಸಬೇಕು, ಹೇಗೆಲ್ಲ ಚಿಕಿತ್ಸಕ ನೋಟದಿಂದ ವಿಷಯವನ್ನು ಪರಾಮರ್ಶಿಸಬೇಕು ಮತ್ತು ಪ್ರಸ್ತುತಪಡಿಸಬೇಕು ಎಂಬ ತಯಾರಿಗೆ ಕೊನೆಮೊದಲಿಲ್ಲ. ಮುದ್ರಣ, ಎಲೆಕ್ಟ್ರಾನಿಕ್ ಜೊತೆಗೆ ಡಿಜಿಟಲ್ ಮಾಧ್ಯಮ​ ಇಂದು ಅತಿ ವೇಗದಲ್ಲಿ ಹಲವಾರು ಸಾಧ್ಯತೆಗಳ ಮೂಲಕ ಚಾಚಿಕೊಳ್ಳುತ್ತಿರುವಂಥ ಈ ಸಂದರ್ಭದಲ್ಲಿ ತಾಂತ್ರಿಕ ಸ್ವರೂಪದಲ್ಲಷ್ಟೇ ಬದಲಾವಣೆ, ಉಳಿದಂತೆ ಪತ್ರಕರ್ತರಿಗಿರಬೇಕಾದ ಒಳಗಣ್ಣು, ಆಸ್ಥೆ, ತುಡಿತ, ಪ್ರಾಮಾಣಿಕತೆ, ಸಾಮಾಜಿಕ ಕಾಳಜಿಯನ್ನೇ ಈ ಕ್ಷೇತ್ರ ಬೇಡುತ್ತದೆ. ಹಾಗಾಗಿ ಈ ವೃತ್ತಿ ಅಂಕಪಟ್ಟಿ, ಪದಕಗಳನ್ನು ಮೀರಿದ ಚಲನಶೀಲ, ವಿಶೇಷ ಪ್ರಜ್ಞೆಯುಳ್ಳ ವ್ಯಕ್ತಿತ್ವವನ್ನು ನಿರೀಕ್ಷಿಸುತ್ತದೆ. ಜೀವಪರತೆಯೇ ಇದಕ್ಕೆ ಮೂಲಾಧಾರ. 

ಈ ಹಿನ್ನೆಲೆಯಲ್ಲಿ ರೂಪಿಸುತ್ತಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಭವಿಷ್ಯದ ಪತ್ರಕರ್ತರು’ ಇದರಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಪತ್ರಿಕೋದ್ಯಮ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವರನ್ನು ಪ್ರೇರೇಪಿಸಿದ ವಿಚಾರಗಳು ಯಾವುವು ಎನ್ನುವುದನ್ನು ಆಗಾಗ ಇಲ್ಲಿ ಹಂಚಿಕೊಳ್ಳಲಿದ್ದಾರೆ. ಪ್ರತಿಕ್ರಿಯೆಗಾಗಿ : tv9kannadadigital@gmail.com

*

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿನಿ ಸುಷ್ಮಾ ಸವಸುದ್ದಿ ಅವರ ಬರಹ ನಿಮ್ಮ ಓದಿಗೆ.

‘ಜೀವನವನ್ನು ನಿಜವಾಗಿಯೂ ಜೀವಿಸುವವರು ತುಂಬ ವಿರಳ, ಎಲ್ಲರೂ ಸುಮ್ಮನೆ ಬದುಕುತ್ತಾರೆ’ ಎಂದೋ  ಎಲ್ಲಿಯೋ ಓದಿದ್ದು. ನನಗೆ ನಾನೇ ಸೋಮಾರಿ ಎಂದೆನಿಸಿದಾಗ ನನ್ನ ಅಂತರಾಳವೊಂದು ನನ್ನನ್ನೇ ಆಡಿಕೊಂಡಾಗಲೆಲ್ಲ, ನನಗೆ ಥಟ್ ಅಂತ ಜ್ಞಾಪಕಕ್ಕೆ ಬರುವುದು ಇದೇ ಸಾಲು. ಎಲ್ಲರೂ ನಿರ್ಲಕ್ಷಿಸಿದ ಸತ್ಯವೊಂದನ್ನು ಅದೆಷ್ಟು ಸರಳವಾಗಿ ಹೇಳಿಬಿಡುತ್ತದಲ್ಲಾ ಈ ಸಾಲು?! ಆ ವಿರಳರಲ್ಲೇ ನಾನು ಒಬ್ಬಳಾಗಿರಬೇಕೆಂಬ ತುಡಿತ ನನ್ನದು. ಜೀವನದ ಪ್ರತಿ ಹೆಜ್ಜೆಯ ಭಾವವನ್ನೂ ಸವಿಯಬೇಕೆನ್ನುವ ಹುಚ್ಚು ನನಗೆ.

ತೀರ ಅಸಹನೀಯ ಘಟನೆಗಳು ನನ್ನ ಬದುಕಿನ ಬಾಗಿಲನ್ನು ತಟ್ಟುವಾಗಲೂ, ನನ್ನ ಬದುಕಲ್ಲೇ ಏಕೆ ಇಂತಹ ಅಸಹಜ ಘಟನೆಗಳು ಎಂದೆನಿಸಿದಾಗಲೂ, ನಾನು ಏನೋ ವಿಶೇಷ ಎಂದೆನಿಸಿದಾಗಲೂ, ನನಗೆ ನಾನೇ ತೀರ ಸಣ್ಣವಳು ಎಂದು ಕೊರುಗುವಾಗಲೂ ನನ್ನನ್ನು ನಾನೇ ಸಮಾಧಾನಿಸಿಕೊಳ್ಳುವ ಮಾತಿದು; ಇರಲಿ ಬಿಡು ಎಲ್ಲ ತರಹದ ಅನುಭವವೂ ಬರಲಿ, ಎಲ್ಲ ತರಹದ ಭಾವಗಳೂ ಇರಲಿ. ಈ ದಿನದ ನೋವು ನಾಳೆಗೆ ಪಾಠವಾದೀತು ಎಂದು.

ಸುಮ್ಮನೆ ಬೇಸರವಾದಾಗ ಜೀವನ ಅಂದರೆ ಏನು ಎಂಬ ಮನಸ್ಸಿನ ವಿಚಿತ್ರ ಪ್ರಶ್ನೆಗೆ ನನ್ನ ಲೇಖನಿ ಅಂದು ಹೀಗೆ ಉತ್ತರಿಸುವ ಪ್ರಯತ್ನ ಮಾಡಿತ್ತು. “ಜೀವನದ ವ್ಯಾಖ್ಯೆ ನನಗೆಂದೂ ಸ್ಪಷ್ಟವಾಗಿ ತಿಳಿದಿಲ್ಲ. ಪ್ರತಿಬಾರಿಯೂ ದೊರೆಯುವ ಹೊಸ ಅನುಭವಗಳ ಸಾರಕ್ಕೆ ತಕ್ಕಂತೆ ನನ್ನ ಜೀವನದ ವ್ಯಾಖ್ಯೆ ಬದಲಾಗುತ್ತ ಹೋಗುತ್ತದೆ. ಆ ಬದಲಾವಣೆ ಎಷ್ಟೋ ಸಾರಿ ನನ್ನ ಊಹೆಗೂ ನಿಲುಕದ ಸ್ಥಿತಿಯಲ್ಲಿರುವುದು ನನ್ನ ಪಾಲಿಗೆ ಅದ್ಭುತವೇ ಸರಿ.  ಅದನ್ನು ಬದಲಾಯಿಸುವಷ್ಟು ಸಾಮರ್ಥ್ಯ ನನಗಂತೂ ಇಲ್ಲ. ಏಕೆಂದರೆ ಬದಲಾವಣೆಯು ಬದಲಾಗದ ಜಗದ ನಿಯಮ. ಆ ಬದಲಾವಣೆಯ ಗಾಳಿಯೇ ಅಂತಹದ್ದು, ಯಾವ ಮೂಲೆಯಿಂದ ಯಾವ ಮೋಡ ಹೊತ್ತು ಯಾರ ಭರವಸೆಯನ್ನು ತೂರಿ ಬಿಡುವಂತೆ ಬರುತ್ತದೊ ಹೇಳಲಾಗದು. ಪೂರ್ವದೆಡೆಗೆ ಕೈ ಮುಗಿದು ತಂಗಾಳಿಯನ್ನು ಸ್ವಾಗತಿಸಿ ನಿಂತರೇ… ಪಶ್ಚಿಮದಿಂದ ಬಿರುಗಾಳಿಯೊಂದು ಎಲ್ಲವನ್ನೂ ನುಂಗಿಬಿಡುವ ಆತುರದಲ್ಲಿ ಬಂದೇ ಬಿಡುವುದು. ಜೀವನವೇ ಹಾಗೇ ಸಿಹಿ ಕನಸು ಹೊತ್ತು ಒಳ್ಳೇಯದೇನನ್ನೋ ಆಶಿಸುತಲಿರುವಾಗ ಊಹಿಸದಿರುವ ಬೇರೊಂದು ಮಾರ್ಗದಿಂದ ದೊಡ್ಡ ಸಮಸ್ಯೆಯೊಂದು ದೈತ್ಯಾಕಾರದ ರಾಕ್ಷಸನಂತೆ ಮುಂದೆ ಬಂದಾಗ ಜೀವನವೇ ಮುಗಿಯಿತೆಂಬ ಭಾವ ಮೂಡುವುದು ಸುಳ್ಳಲ್ಲ. ವರ್ಷಗಟ್ಟಲೇ ಕಷ್ಟವಾದರೂ ಬಹು ಇಷ್ಟದಿಂದ ಕಟ್ಟಿಟ್ಟ ನಂಬಿಕೆಯೆಂಬ ಮಡಿಕೆಯೊಂದು ಒಂದೇ ಕ್ಷಣದಲ್ಲಿ ಮುರಿದು ಬಿದ್ದಾಗ ಬದುಕಿನ ಆಧಾರವೇ ಕಳಚಿ ಹೋದಂತಾಗುವದು ಅಕ್ಷರಶಃ ಸತ್ಯ. ಆ ಸತ್ಯದ ಹಿಂದಿರುವ ನೋವು ಅದೆಷ್ಟೇ ಕಹಿಯಾಗಿದ್ದರೂ ಸತ್ಯ ಸತ್ಯವೇ!”

ನಾನೊಬ್ಬ ಸಾಮಾನ್ಯ ರೈತನ ಮಗಳು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಿಡಕನಹಟ್ಟಿ ಎಂಬುದು ನನ್ನ ಮೂಲ ಗ್ರಾಮ. ಆದರೆ ನಾನು ಬೆಳೆದದ್ದು, ಕಲಿತಿದ್ದು ಎಲ್ಲಾ ಬೆಳಗಾವಿ, ಗೋಕಾಕನಲ್ಲಿಯೇ. ಹೀಗಾಗಿ ನನಗೆ ಹಳ್ಳಿ -ನಗರ ಎರಡರ ಬದುಕೂ ಗೊತ್ತು. ನಮ್ಮೂರು ಅಂದರೆ ಅದೆಂತಹದ್ದೋ ಆಕರ್ಷಣೆ ನನಗೆ. ರಜೆ ಬಂತೆಂದರೆ ಊರಿನಲ್ಲಿ ನಮ್ಮ ಹಾಜರಾತಿ. ಮೊದಲಿನಿಂದಲೂ ಶಾಲೆಯಲ್ಲಿ ಕೊಂಚ ಜಾಣೆ ಎಂಬ ಬಿರುದನ್ನು ಗಿಟ್ಟಿಸಿಕೊಂಡೇ ಇದ್ದೆ. ಶಾಲಾ ಶಿಕ್ಷಕರ ಪ್ರೇರಣೆಯಿಂದ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡೆ ಹಾಗೇ ಮಾತನಾಡಲು ಕಲಿತೆ. ವಿಚಾರ, ವಿಮರ್ಶೆಗಳು ನನ್ನೊಳಗೆ ನುಸುಳುತ್ತಿದ್ದಂತೆ ಕೊಂಚ ಬರೆಯಲೂ ಕಲಿತೆ. ಅದನ್ನೇ ಇಷ್ಟಪಟ್ಟೆ. ನನ್ನ ಸುತ್ತಲಿರುವವರು ನನ್ನ ಭಾಷಣಕ್ಕೆ, ನನ್ನ ಬರವಣಿಗೆಗೆ ಬೆನ್ನು ತಟ್ಟತ್ತಲೇ ಬಂದರು.

Future Journalists Sushma Savasuddi

ಸೌಜನ್ಯ : ಅಂತರ್ಜಾಲ

ಅಂದು 10ನೇ ತರಗತಿಯ ವೆಕೇಶನ್ ಕ್ಲಾಸಿನ ಕೊನೆಯ ದಿನ. ಅಭಿಪ್ರಾಯ ಹೇಳುವಂತೆ ಶಿಕ್ಷಕರು ಕೇಳಿದಾಗ ವೇದಿಕೆಯ ಮೇಲೆ ನಿಂತು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದೆ. ಕೊನೆಗೊಂದು ಆಶುಕವಿತೆ ಹೇಳಿದ್ದೆ. ಅದು ಎಲ್ಲರನ್ನೂ ಆಕರ್ಷಿಸಿತ್ತು. ವೇದಿಕೆಯ ಕೆಳಗಿಳಿಯುತ್ತಿದ್ದಂತೆ ಸರ್ ಹೇಳಿದ್ದರು, “ನೀನೊಬ್ಬ ಒಳ್ಳೆ ಜರ್ನಲಿಸ್ಟ್ ಆಗ್ತಿಯಾ ಅಂತ”. ನನಗೋ ಆ ಪದ ಕೇಳಿ ಗೊತ್ತು, ಹಾಗಂದ್ರೆ ಏನು ಅಂತಲೇ ಗೊತ್ತಿಲ್ಲ. ಧೈರ್ಯ ಮಾಡಿ ಹಾಗಂದ್ರೆ ಏನು ಸರ್ ಅಂದೆ. ನನ್ನ ಸಹಪಾಠಿಯರಿಗೂ ಇದರ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ ಎಂಬುದು ಅವರ ಮೌನದಿಂದ ಗೊತ್ತಾದಾಗ ಸ್ವಲ್ಪ ಸಮಾಧಾನವಾಯಿತು. ಸರ್ ಆ ಕುರಿತು ವಿವರಿಸಿದರು. ನಂತರದ ದಿನಗಳಲ್ಲಿ ಕಾರ್ಯಕ್ರಮದ ನಿರೂಪಣೆಯಲ್ಲಿಯೂ ಶಹಭಾಷ್​ಗಿರಿ ಪಡೆದುಕೊಂಡೆ. ಯಾರು ಎಷ್ಟೇ ಗೋಗರೆದರೂ ಪಿಯುಸಿಯಲ್ಲಿ ಕಲಾ ವಿಭಾಗವನ್ನೇ ಆಯ್ಕೆ ಮಾಡಿಕೊಂಡೆ. ಪಿಯುಸಿ ಮುಗಿಯುತ್ತಿದ್ದಂತೆ ಪತ್ರಿಕೋದ್ಯಮದಲ್ಲಿಯೇ ಪದವಿ ಮಾಡಬೇಕೆಂದುಕೊಂಡಿದ್ದೆ. ಆದರೆ ಗೋಕಾಕಿನಲ್ಲಾಗಲಿ ಬೆಳಗಾವಿಯಲ್ಲಾಗಲಿ ಆ ಸೌಲಭ್ಯವಿರಲಿಲ್ಲ. ಮೇಲಾಗಿ ಅದು ನನ್ನ ತಂದೆ-ತಾಯಿಗೂ ಇಷ್ಟವಿರಲಿಲ್ಲ, ನನಗೂ ನಾನಿರುವ ಸ್ಥಳ ಬಿಟ್ಟು ದೂರ ಹೋಗುವ ಮನಸ್ಸಿರಲಿಲ್ಲ.

ಆದರೆ ಕಾಲೇಜು ಮೇಟ್ಟಿಲೇರಿದ ನನ್ನ ಭಾವಗಳು ಬೇರೆಡೆಯೇ ಕೇಂದ್ರೀಕೃತಗೊಂಡಿದ್ದವು. ನನ್ನ ಓದುವ ಹವ್ಯಾಸ ಕುಸಿದಿತ್ತು, ಲೇಖನಿ ವಿಶ್ರಾಂತಿ ಪಡೆಯುತ್ತಿತ್ತು. ಜರ್ನಲಿಸಂ ಎಂಬ ಪದ ಸ್ಮೃತಿಪಟಲದಿಂದ ದೂರ ಸರಿಯುತ್ತಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಬರಿ ಎಂದು ಸರ್. ಇಂಗ್ಲಿಷನಲ್ಲಿ ಸ್ನಾತಕೋತ್ತರ ಪದವಿ ಮಾಡು ಎಂದು ಅಪ್ಪ. ಆದರೆ ಇವುಗಳಾವುವೂ ನನ್ನ ಇಚ್ಛೆಯಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಿತ್ತು. ಆದರೆ ಯಾವುದನ್ನೂ ನಿರ್ಧರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಸರ್, ಯುಪಿಎಸ್ಸಿ ತಯಾರಿಗೆ ಒಳ್ಳೆಯ ಕೋಚಿಂಗ್ ಸೆಂಟರ್, ಅಪ್ಪ ಇಂಗ್ಲಿಷ್ ಎಂಎ ಗೆ ವಿಶ್ವವಿದ್ಯಾಲಯ ಹುಡುಕುತ್ತಿದ್ದರು. ನನ್ನ ವಿಚಾರ ಏನೆಂದು ಯಾರೂ ಕೇಳಲೇ ಇಲ್ಲ. ಇನ್ನೂ ನಮ್ಮ ಡಿಗ್ರಿ ಪರೀಕ್ಷೆಗಳು ನಿಗದಿಯಾಗಿರಲಿಲ್ಲ ಅಷ್ಟರಲ್ಲೇ ಕೋವಿಡ್ ಸಾಂಕ್ರಾಮಿಕದಿಂದ ಎಲ್ಲವೂ ಸ್ಥಗಿತಗೊಂಡಿತು.

ಆದರೆ ಲಾಕ್​ಡೌನ್ ಸಂದರ್ಭದಲ್ಲೇ ನನ್ನ ಮೈಂಡ್ ಮತ್ತೆ ಸ್ವಿಚ್ ಆನ್ ಆಗಿದ್ದು. ಓದುವ ಹವ್ಯಾಸ ಮತ್ತೆ ಚಿಗುರೊಡೆಯಿತು. ನನ್ನ ಲೇಖನಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಿಂಚಿತು. ನನ್ನೊಳಗೆ ಮರೆಯಾದ ನಾನು ಮತ್ತೆ ಎಚ್ಚರಗೊಂಡ ಭಾವವೊಂದು ಹೊಸ ಶಕ್ತಿ ತುಂಬಿದಂತಾಯಿತು. ಕಷ್ಟವಾದರೂ ಸರಿ ಇಷ್ಟಪಟ್ಟ ದಾರಿಯಲ್ಲೇ ನಡೆಯಬೇಕೆಂಬ ನಿರ್ಧಾರ ಮಾಡಿದೆ. ಅಂತೂ ಹಟಮಾಡಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸದಸ್ಯಳಾದೆ. ದೈಹಿಕವಾಗಿ ಅಷ್ಟೇನು ಬಲಾಢ್ಯಳಲ್ಲದ ನಿನಗೆ ಪತ್ರಿಕೋದ್ಯಮ ಸರಿಯಲ್ಲ ಎಂಬ ಅಪ್ಪನ ಮಾತಿಗೂ, ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲದ ಕ್ಷೇತ್ರ ನಿನಗೆ ಬೇಡ ಎಂಬ ಅಮ್ಮನ ಭಯಕ್ಕೂ, ಅಧಿಕಾರಿಯಾಗುವ ಜ್ಞಾನವಿದ್ದರೂ ಲೇಖನಿ, ಮೈಕ್​ಗಳಿಗೆ ಆಸೆ ಪಟ್ಟಿರುವೆ ಎಂಬ ಸರ್ ಮತ್ತು ಸ್ನೇಹಿತರ ಪ್ರಶ್ನೆಗೆ ಅಂದು ನನ್ನ ಬಳಿ ಉತ್ತರವಿರಲಿಲ್ಲ. ಆದರೆ ಮುಂದೊಂದು ದಿನ ಇವರಿಗೆಲ್ಲ ಸೂಕ್ತ ಉತ್ತರ ಕೊಡುವುದೇ ಜೀವನದ ಮಹದಾಸೆ.

ನನಗೆ ಎಲ್ಲವನ್ನೂ ವಿಮರ್ಶಿಸುವ ಹುಚ್ಚು. ಪ್ರತಿಬಾರಿಯೂ ಊರಿಗೆ ಹೋದಾಗ ಒಂದೊಂದು ಯಕ್ಷ ಪ್ರಶ್ನೆಗಳು ತಲೆಯೊಳಗೆ ನುಸುಳುತ್ತವೆ. ಆದರೆ ಯಾವುದಕ್ಕೂ ಉತ್ತರವಿಲ್ಲ. ಓದುವ ಆಸೆ ಹೊತ್ತ ಬಾಲ್ಯ ಗೆಳತಿ ಆಡುವ ವಯಸ್ಸಿನಲ್ಲೇ ಎರಡು ಮಕ್ಕಳ ತಾಯಿಯಾಗಿದ್ದು, ಊರಿನ ಸ್ವಾಮಿಯೊಬ್ಬನ ಮಾತನ್ನು ಜನ ಕಣ್ಣು ಮುಚ್ಚಿ ನಂಬುತ್ತಿದ್ದುದು, ಬಸವನ ಗುಡಿಯೊಳಗೆ ಗಡಿಗೆಯೊಂದು ತಾನಾಗೇ ಸುತ್ತಿ ಆಯಾ ವರ್ಷದ ಮಳೆಯ ಪ್ರಮಾಣವನ್ನು ತಿಳಿಸುತ್ತಿದ್ದುದು, ತನಗೆ ಇಷ್ಟ ಬಂದಂತೆ ಊರ ತುಂಬೆಲ್ಲ ಓಡಾಡುವ ಪಲ್ಲಕ್ಕಿಗಳು, ದೇವರ ಹೆಸರಿನಲ್ಲಿ ನನ್ನ ಅಮ್ಮನ ಕುತ್ತಿಗೆಯಲ್ಲಿ ಜೋತಾಡುವ ಮುತ್ತುಗಳು, ಕೊತ-ಕೊತ ಕುದಿಯುವ  ಅಡಿಗೆಯಿಂದಲೇ ದೇವರಿಗೆ ನೈವೇದ್ಯ ತೆಗೆಯುವ ಅಜ್ಜನ ಕೈಗಳು… ಎಲ್ಲವೂ ಈಗಲೂ ಬೆಂಬಿಡದೆ ಕಾಡುತ್ತಿರುವ ಪ್ರಶ್ನೆಗಳು!

Future Journalists Sushma Savasuddi

ಸೌಜನ್ಯ : ಅಂತರ್ಜಾಲ

ಇವುಗಳಲ್ಲಿ ಯಾವುದು ಶಕ್ತಿ, ಯಾವುದು ಭಕ್ತಿ, ಯಾವುದು ಮೌಢ್ಯ!? ಎಷ್ಟು ಯೋಚಿಸಿದರೂ ನನ್ನ ಅರಿವಿಗೆ ಎಟುಕದ ಸಂಗತಿಗಳಾಗೇ ಉಳಿದ ಭಾರವಿದು. ಭವಿಷ್ಯ ನನ್ನ ಸುತ್ತಲಿರುವ ಇಂತಹ ಸಾಮಾಜಿಕ ಸ್ಥಿತಿಯೇ ನನ್ನ ಈ ದಾರಿಗೆ ಕಾರಣವಾಯಿತೇನೊ? ಇದೆಲ್ಲದಕ್ಕೂ ತಕ್ಕ ಉತ್ತರ ಹುಡುಕಬೇಕೆಂಬ ಛಲವೊಂದು ಆಗಾಗ ನನ್ನೊಳಗೆ ಕಿಚ್ಚು ಹಚ್ಚುತ್ತಲೇ ಇರುತ್ತದೆ.

ಇನ್ನು ಕನಸುಗಳು, ಆಸೆಗಳು, ನಿರೀಕ್ಷೆಗಳು ಬೇಡವೆಂದರೂ ನಮ್ಮೊಳಗೆ ಮೊಳಕೆಯೊಡೆಯುವ ಚಿಟ್ಟೆಗಳು. ಆದರೆ ನಮ್ಮ ಸುತ್ತಲಿನ ಪರಿಸರ ಆ ಚಿಟ್ಟೆಗಳ ಹಾರಾಟಕ್ಕೆ ಸೂಕ್ತವಾದ ವಾತಾವರಣವನ್ನು ಯಾವಾಗಲೂ ಕಾಯ್ದಿರಿಸಿರುತ್ತದೆ ಎಂಬ ನಮ್ಮ ಅಂದಾಜು ಶುದ್ಧ ತಪ್ಪು. ಚಿಟ್ಟೆಯ ರೆಕ್ಕೆಗಳನ್ನು ಕಟ್ಟಿಹಾಕುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇನ್ನೂ ಕೆಲವೆಡೆ ರೆಕ್ಕೆಗೆ ಸ್ವಾತಂತ್ರ್ಯ ಕೊಟ್ಟು ಆ ರೆಕ್ಕೆ ಹಾರುವ ಎಲ್ಲೆಯನ್ನು ತಾವೇ ನಿರ್ಧರಿಸುವ ಕಾರ್ಯವೂ ನಡೆಯುತ್ತದೆ. ಅದೇನೆಯಾದರೂ ಅಸ್ತಿತ್ವದ ಉಳಿವಿಗಾಗಿ ನಾವು ಗಿಡದಿಂದ ಗಿಡಕ್ಕೆ ಹಾರಿಯಾದರೂ  ಜೇನು ಸವಿಯುತ್ತಿರಲೇಬೇಕು.

ಇದನ್ನೂ ಓದಿ : ‘ನನ್ನ ಕುಟುಂಬದ ಆಗುಹೋಗುಗಳಲ್ಲೆಲ್ಲ ನಿನ್ನ ಗುರುತುಂಟು ಮೇಘರಾಜ’       

Published On - 5:20 pm, Wed, 25 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ