AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಕುಟುಂಬದ ಆಗುಹೋಗುಗಳಲ್ಲೆಲ್ಲ ನಿನ್ನ ಗುರುತುಂಟು ಮೇಘರಾಜ’

‘ಹೊರಗಿನಿಂದ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ಕಿವಿ ಕೊರೆಯಿತು. ಹೋಗಿ ನೋಡಿದರೇ ಮನೆಯವರೆಲ್ಲ ಸ್ಟೆಟರ್ ಹಾಕಿಕೊಂಡು, ಕಿಟಕಿ ಬಾಗಿಲು ಮುಚ್ಚಿ, ತುಂಬಾ ಗಂಭಿರವಾಗಿ ಟಿವಿ ಮುಂದೆ ಕುಳಿತಿದ್ದಾರೆ. ಇವರದ್ದೇನು ಬ್ರೇಕಿಂಗ್ ನ್ಯೂಸ್ ಅಂತ ನೋಡಿದರೇ ಒಂದು ಕ್ಷಣ ಹಾರ್ಟ್ ಬ್ರೇಕ್ ಆಯ್ತು. ಇದು ನಮ್ದೇ ಏರಿಯಾ ಅಲ್ವಾ? ಇದು ಫಾಲ್ಸ್ ರೋಡ್...’

‘ನನ್ನ ಕುಟುಂಬದ ಆಗುಹೋಗುಗಳಲ್ಲೆಲ್ಲ ನಿನ್ನ ಗುರುತುಂಟು ಮೇಘರಾಜ’
ಸುಷ್ಮಾ ಸವಸುದ್ದಿ
TV9 Web
| Edited By: |

Updated on: Aug 18, 2021 | 4:20 PM

Share

Rain : ಆಕಡೆಯಿಂದ ಆಶ್ಚರ್ಯ, ಆತಂಕದ ಧ್ವನಿ. “ಎಲ್ಲಿದಿರಿ? ಎಲ್ಲ ಪ್ಯಾಕ್ ಮಾಡಿದ್ರಾ? ನಿಮ್ಮ ಮನೆಗೂ ಬಂತಾ?” ದಿಢೀರನೇ ಕೊಸರಿಕೊಂಡು ಮೇಲೆದ್ದೆ. ಎಲ್ಲಿ, ಏನು? ಏನು ಬರಬೇಕು? ನನ್ನ ಆತಂಕದ ಮರು ಪ್ರಶ್ನೆಗಳು. ಒಂದು ಕ್ಷಣ ಪೊನ್ ಮಿಸ್ಸಾಗಿ ನನಗೆ ಬಂದಿರಬೇಕು ಎಂದು ಭಾವಿಸುವುದರಲ್ಲೇ ಆಕಡೆಯಿಂದ ಆಕೆ “ಹೇ ಸುಷ್ಮಾ ನೀರು ಎಲ್ಲಿಗೆ ಬಂತು? ನಿಮ್ಗೂ ಮನೆ ಖಾಲಿ ಮಾಡೋಕೆ ಹೇಳಿದ್ರಾ?” ನನಗೆ ಯಾವುದೊಂದು ಅರ್ಥವಾಗುತ್ತಿಲ್ಲ. “ಏನು ಹೇಳ್ತಾ ಇದ್ದೀಯಾ? ನನಗ ಏನು ಅರ್ಥ ಆಗ್ತಿಲ್ಲ” ಎಂದೆ. “ಎದ್ದು ಹೊರಗ ಹೋಗಿ ನೋಡ್, ಸುದ್ದಿ ಗೊತ್ತಾಗತೈತಿ. ಲೋಕ ಎಲ್ಲಾ ಮುಳಗಿ ಹೋಗ್ತಾಯಿದ್ರ ಇವಳಿನ್ನು ನಿದ್ದೆಲಿ ತೇಲಾತಾಳ. ನಾವ ಎಲ್ಲ ಪ್ಯಾಕ್ ಮಾಡ್ಕೊಂಡು ಅಜ್ಜಿ ಊರಿಗೆ ಹೋಗ್ತಾಯಿದೀವಿ ನಿನಗ ಆಮೇಲೆ ಕಾಲ್ ಮಾಡ್ತಿನಿ, ಬಾಯ್.” ಎಂದವಳೇ ಕಾಲ್ ಕಟ್ ಮಾಡಿದಳು.

ವಿಜಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿ ಸುಷ್ಮಾ ಸವಸುದ್ದಿ ಬರೆದ ಕವನ ಮತ್ತು ಪ್ರಬಂಧ ನಿಮ್ಮ ಓದಿಗೆ. 

*

ಕೊಳಲ ಎದೆಗೊತ್ತಿ ಕೃಷ್ಣನ ವಿರಹದಲಿ ಮಿಂದ ರಾಧೆಯ ಕಣ್ಣೀರು ಒರೆಸಲೆಂದೆ ಧಾರೆಯಾಗಿ ಇಳಿದವನೇ, ಶಕುಂತಲೆಯ ಎದೆ ಜ್ವಾಲೆಯನು ಶಾಂತಗೊಳಿಸಲೆಂದೆ ನೀರಾಗಿ ಹರಿದು ಬಂದವನೇ, ಅಶೋಕವನದಲ್ಲಿ ಸೀತೆ ರಾಮನ ನೆನೆದು ಬಿಕ್ಕುತಲಿರುವಾಗ ಅವಳ ಸಂತೈಸಲೆಂದೆ ಭೋರ್ಗರೆದವನೇ, ಅವರ ಪ್ರೀತಿ-ವಿರಹದಲ್ಲೂ ನಿನ್ನ ಗುರುತುಂಟು ಮೇಘರಾಜ.

ಬಿತ್ತಿದ ಬೀಜ ಮೇಲೆಳದಿದ್ದಾಗ ಹಣೆಗೆ ಕೈಯಿಟ್ಟು ಅಪ್ಪ ನಿನ್ನ ದಾರಿ ಕಾದಾಗ ಬರದೇ ಸತಾಯಿಸಿದವನೇ, ಅಮ್ಮ ಬರಲೇ ಬೇಡ ಎಂದು ಬೇಡಿಕೊಂಡಾಗ ಬಂದು ಕಾಡಿದವನೇ, ದಿನವೂ ಬೆನ್ನಿಗೆ ಹೊರೆಹೊತ್ತು ಶಾಲೆಯ ಹೆಸರಲ್ಲಿ ಕೈದಿಯಾಗಿ ಬೇಸರಗೊಂಡ ತಂಗಿಯೊಟ್ಟಿಗೆ ಆಡಿದವನೇ, ನನ್ನ ಕುಟುಂಬದ ಆಗು-ಹೋಗುಗಳಲ್ಲಿ ನಿನ್ನ ಗುರುತುಂಟು ಮೇಘರಾಜ.

ಹಸುಗುಸನ್ನು ಹೊತ್ತು ಬೀದಿಗಿಳಿದ ತಾಯಿ ಕಣ್ಣಿರು ಸುರಿಸುವಾಗ ಆಕೆಯ ಮನೆಹೊಕ್ಕು ತಾಂಡವವಾಡಿದವನೇ, ನಿನ್ನ ಅಂದ ಸವಿಯಲೆಂದು ಹೊರಬಂದ ಮುಗ್ಧರನ್ನೆ ನಿನ್ನ ಒಡಲೊಳಗೆ ಸೇರಿಸಿಕೊಂಡು ಅಟ್ಟಹಾಸ ಮೆರೆದವನೇ, ನಾಕ್ಹೊತ್ತು ದುಡಿದು ಎರಡೊತ್ತು ತಿನ್ನೊ ಬಡ ಅಮಾಯಕರ ಜೀವನವನ್ನೆ ಕೊಚ್ಚಿಕೊಂಡು ಹೋದವನೇ, ಅವರ ನೋವು-ಆರ್ತನಾದದಲ್ಲೂ ನಿನ್ನ ಗುರುತುಂಟು ಮೇಘರಾಜ.

rain stories

ಸೌಜನ್ಯ : ಅಂತರ್ಜಾಲ

ಹೇ ಮಳೆರಾಯ ನಿನ್ನ ದಾರಿ ಕಾದವರು ಯಾರಿಲ್ಲ ಹೇಳು? ನೀನಿರದ ಜಗತ್ತಿಗೆ, ನಿಬ್ಬರದ ಬದುಕಿಗೆ, ನಿನ್ನ ನೆನಪಿರದ ಮನಸ್ಸಿಗೆ ಏನಾದರೂ ಅರ್ಥವುಂಟಾ? ಎಲ್ಲರ ಬಾಲ್ಯದ ನೆನಪಿನಲ್ಲಿ ನಿನ್ನದೇ ಬಹುಪಾಲಿನ ಪಾತ್ರ. ನಿನ್ನನ್ನು ಇವರೆಲ್ಲ ನೆನಸುವುದಕ್ಕೆ ನೂರಾರು ಕಾರಣ. ಇನಿಯನನ್ನು ನೆನೆಯಲು, ಕಾಡುವವರನ್ನು ಮರೆಯಲು, ನಿನ್ನೊಡನೆ ಕುಣಿಯಲು, ಬಿತ್ತಿದ ಬೀಜ ನಿನ್ನಿಂದ ಮೇಲೆದ್ದೆರೆ ತುಸು ಕಾಸು ಮಾಡಿಕೊಳ್ಳಲು, ಇನ್ನೂ ಕೆಲವರಿಗೆ ನಿನ್ನ ನೆಪದಿಂದ ಬಜ್ಜಿ ಚಹಾ ಸವಿಯಲು ಹೀಗೆ ನೂರಾರು ಬಯಕೆಗೆ ನೆಪ ನೀನು! ನನ್ನ ಬದುಕಿನ ದಾರಿಯಲ್ಲೂ ನಿನ್ನ ಸವಿ ನೆನಪಿನ ಮೂಟೆಯಿದೆ. ಅದರೊಳಗೆ ಕಹಿಯೂ ಇದೆ. ನಿನ್ನನ್ನು ಪ್ರೀತಿಸಿದ, ಆರಾಧಿಸಿದ, ನಿನಗಾಗಿ ಕಾದ, ನಿನ್ನಿಂದ ಗೋಳಾಡಿದ, ನಿನ್ನನ್ನು ಶಪಿಸಿದ ಅಸಂಖ್ಯಾತರಲ್ಲಿ ನಾನೂ ಒಬ್ಬಳು. ಬೆಳಗಾವಿ ಜಿಲ್ಲೆ ಅಂದ್ರೆ ಬಿಸಿಲು ನಾಡು ಎಂದು ಭಾವಿಸುವವರಿಗೆ ಗೊತ್ತಿರಲಿಲ್ಲ ಮಳೆಗಾಳದಲ್ಲಿ ಬೆಳಗಾವಿ ನಗರ ಮಲೆನಾಡನ್ನು ಮೀರಿಸುವ ಸೊಗಸನ್ನು ಹೊಂದಿರುತ್ತದೆಂದು. ಕಳೆದ ಎರಡು ವರ್ಷದ ಹಿಂದೆ ನ್ಯೂಸ್ ಚಾನೆಲ್​ಗಳು ಫ್ಲ್ಯಾಶ್ ಕೊಟ್ಟು ಕೊಟ್ಟು ತೋರಿಸಿದಾಗಲೇ ಗೊತ್ತಾಗಿದ್ದು ಬೆಳಗಾವಿಗೂ ಮಳೆಗೂ ಇರುವ ಅವಿನಾಭಾವ ಸಂಬಂಧ.

ರಾಮತೀರ್ಥನಗರ ಬಸ್ ಹತ್ತಿ ಬಸ್​ಸ್ಟಾಪ್​ಗೆ ಹೋಗಿ ಇನ್ನೊಂದು ಬಸ್ ಹಿಡಿದು ಶಾಲೆ ತಲುಪುವ ಹೊತ್ತಿಗೆ ಬಿಳಿ ಸಮವಸ್ತ್ರ ಕಂದುಬಣ್ಣಕ್ಕೆ ಬದಲಾಗಿರುತ್ತಿತ್ತು. ಬ್ಯಾಗ್ ಮತ್ತೆ ಶ್ಯೂಸ್ ಕಥೆಯಂತೂ ವರ್ಣಿಸೋಕೇ ಆಗದೇ ಇರೋವಂಥದ್ದು. ಸಂಜೆ ಅದೇ ಮಳೇಲಿ ಒಂದು ಕೈಯಲ್ಲಿ ಐಸ್‍ಕ್ರೀಮ್ ತಿನ್ನುತ್ತಾ, ಇನ್ನೊಂದು ಕೈಯಲಿ ಛತ್ರಿ ಏರಿಸ್ಕೊಂಡು ಮೊಳಕಾಲುದ್ದದ ನೀರಲ್ಲಿ ಕಾಲಕಿಲ್ತಾ ರಸ್ತೆ ಉದ್ದಕ್ಕೂ ಎರಡು ಜಡೆ ಹಾಕೊಂಡಿರೊ ಹುಡ್ಗಿರ ಗ್ಯಾಂಗ ಹೊಗ್ತಾಯಿದ್ರೆ, ಜನ ಕಿಟಕಿಲಿ ನಿಂತು ನೋಡ್ತಾ ತಮ್ಮ ಬಾಲ್ಯ ದಿನಗಳನ್ನ ಮೆಲಕು ಹಾಕ್ತಾಯಿದ್ರು. ಮನೆಗೆ ಹೋಗೊವಷ್ಟರಲ್ಲಿ ಬಿಸಿ-ಬಿಸಿ ಬಜ್ಜಿ, ಚಹಾ ತಯಾರಾಗಿ ನಮ್ಮದೇ ದಾರಿ ಕಾಯ್ತಾ ಇರ್ತಿತ್ತು. ನೀನಂದ್ರೆ ಒಂದು ಸುಂದರ ಭಾವಗಳ ಸಂಗಮ ಅದು ಪದಗಳಿಗೆ ನಿಲುಕಲ್ಲ ಅದಕ್ಕೆ ನೀನಂದ್ರೆ ಎಲ್ಲರಿಗೂ ಅಷ್ಟ ಇಷ್ಟ ಅನಿಸುತ್ತೆ. ಹೇ ನೀನಂದ್ರೆ ನನಗೂ ಇಷ್ಟ. ಎಷ್ಟು ಅಂತೆಲ್ಲ ಕೇಳಬೇಡ. ನನಗೆ ವರ್ಣಿಸೋಕೆ ಆಗಲ್ಲ. ಇಷ್ಟ ಅಂದ್ರೆ ಇಷ್ಟ ಅಷ್ಟೆ. ನನಗೆ ಮಾತ್ರ ಅಲ್ಲ, ನನ್ನ ಸೋದರಿಗೂ, ಗೆಳತಿಯರಿಗೂ ನೀನಂದ್ರೆ ಅಷ್ಟೇ ಇಷ್ಟ. ನಿನ್ನ ಜೊತೆ ಆಡಲು ಹೋಗಿ ಅಮ್ಮನ ಹತ್ರ ಒದೆ ತಿಂದಿದ್ದೀವಿ, ನಿನ್ನೊಟ್ಟಿಗೆ ಆಡಿದ ಮರುದಿನ ಎರಡೆರಡು ಹಾಸಿಗೆ ಮುಸುಕಾಕಿ ಮಲಗಿದ್ದೇನೆ, ನನ್ನ ಇಸ್ತ್ರಿ ಮಾಡಿದ ಯೂನಿಫಾರ್ಮ್, ಶ್ಯೂಗಳ ಬಣ್ಣಗಳನ್ನೆ ಬದಲಿಸಿದ್ದೆ ನೀನು, ಅಂದು ಚರ್ಚಾಕೂಟದಲ್ಲಿ ಗೆದ್ದ ಖುಷಿಗೂ, ಅದೇ ಸಮಯಕ್ಕೆ ನೀನು ದೊಯ್ ಎಂದು ಸುರಿಯಲು ನಿನ್ನ ಜೊತೆ ಹೆಜ್ಜೆಹಾಕಿ ಮನೆ ಸೇರುವಷ್ಟರಲ್ಲಿ ನಾ ಗೆದ್ದ ಸರ್ಟಿಫಿಕೇಟ್‍ನ ಆಕಾರವನ್ನೆ ವಿಕಾರಗೊಳಿಸಿದ್ದೆ ನೀನು. ಅಪ್ಪ ಅಂದು ಹಿತ್ತಲಲ್ಲಿ ಜಾರಿ ಕಾಲು ಮುರಿದುಕೊಳ್ಳಲು ನೀನೇ ಕಾರಣ. ಆದರೂ ನಾನು ಯಾವತ್ತು ನಿನ್ನ ದೂರಿರಲಿಲ್ಲ. ಆದರೆ ಆ ದಿನ ಮಾತ್ರ ನಿನ್ನನ್ನು ದೂಷಿಸಿದ್ದೆ. ಅಸಹನೀಯ, ಅಸಹಾಯಕತೆಯನ್ನು ತಾಳಲಾರದೇ ಶಪಿಸಿದ್ದೆ. ತುಂಬಾ.. ತುಂಬಾ ದ್ವೇಷಿಸಿದ್ದೆ.

ಅದು 2019ನೇ ಜುಲೈ ತಿಂಗಳು, ರವಿವಾರ. ಕಾಲೇಜು ರಜೆಯಿದ್ದ ಕಾರಣ, ನೀನಿನ್ನೂ ದೊಯ್ ಎಂದು ಸುರಿಯುತ್ತಿದ್ದಿದ್ದರಿಂದ ನಾನಿನ್ನು ಹಾಸಿಗೆ ಬಿಟ್ಟು ಎದ್ದೇ ಇರಲಿಲ್ಲ. ಗಂಟೆ ಎಂಟರ ಗಡಿ ದಾಟಿತ್ತು. ಕಿಟಕಿ ಪಕ್ಕದ ಮಂಚದ ಮೇಲೆ ಮಲಗಿ ನಿದ್ರೆಯಲ್ಲಿ ತೇಲಿದ್ದ ನನ್ನ ಕಿವಿಗೆ ನಿನ್ನ ರೊಪ್ ರೊಪ್ ಶಬ್ದ ತಾಗುತ್ತಿತ್ತು. ತಿಂಗಳುಗಳಿಂದಲೂ ಅದೇ ಶಬ್ದ ಕೇಳಿ ಅಭ್ಯಾಸವಾಗಿತ್ತಲ್ಲಾ ಹೀಗಾಗಿ ಆ ಸದ್ದು ನನ್ನ ನಿದ್ದೆಗೇನು ತೊಂದರೆ ಮಾಡಿರಲಿಲ್ಲ. ಆದರೆ ಪಕ್ಕದಲ್ಲಿದ್ದ ಪೋನ್ ಗುಯ್‍ಗುಟ್ಟಿದ್ದು ಕಿರಿಕಿರಿ ಆಯ್ತು. ಥೂ.. ಸಂಡೇನೂ ಮಲಗೋಕೆ ಬಿಡಲ್ಲ ಯಾರಪ್ಪಾ ಇದು ಇಷ್ಟ ಬೆಳಗ್ಗೆ ಬೆಳಗ್ಗೆ ಅಂತಾ ನೋಡಲು, ಅದು ಆತ್ಮೀಯ ಗೆಳತಿಯ ಕರೆಯಾಗಿತ್ತು. ಏನೋ ಅಸೈನ್​ಮೆಂಟ್​ಗಳ ಬಗ್ಗೆ ಕೇಳೋಕೆ ಇರಬೇಕು ಅನ್ನೊ ನಿರೀಕ್ಷೆಯಲ್ಲಿ ಫೋನ್ ಕಿವಿಗಿಟ್ಟೆ. ಆಕಡೆಯಿಂದ ಆಶ್ಚರ್ಯ, ಆತಂಕದ ಧ್ವನಿ. “ಎಲ್ಲಿದಿರಿ? ಎಲ್ಲ ಪ್ಯಾಕ್ ಮಾಡಿದ್ರಾ? ನಿಮ್ಮ ಮನೆಗೂ ಬಂತಾ?” ದಿಢೀರನೇ ಕೊಸರಿಕೊಂಡು ಮೇಲೆದ್ದೆ. ಎಲ್ಲಿ, ಏನು? ಏನು ಬರಬೇಕು? ನನ್ನ ಆತಂಕದ ಮರು ಪ್ರಶ್ನೆಗಳು. ಒಂದು ಕ್ಷಣ ಫೋನ್ ಮಿಸ್ಸಾಗಿ ನನಗೆ ಬಂದಿರಬೇಕು ಎಂದು ಭಾವಿಸುವುದರಲ್ಲೇ ಆಕಡೆಯಿಂದ ಆಕೆ “ಹೇ ಸುಷ್ಮಾ ನೀರು ಎಲ್ಲಿಗೆ ಬಂತು? ನಿಮ್ಗೂ ಮನೆ ಖಾಲಿ ಮಾಡೋಕೆ ಹೇಳಿದ್ರಾ?” ನನಗೆ ಯಾವುದೊಂದು ಅರ್ಥವಾಗುತ್ತಿಲ್ಲ. “ಏನು ಹೇಳ್ತಾ ಇದ್ದೀಯಾ? ನನಗ ಏನು ಅರ್ಥ ಆಗ್ತಿಲ್ಲ” ಎಂದೆ. “ಎದ್ದು ಹೊರಗ ಹೋಗಿ ನೋಡ್, ಸುದ್ದಿ ಗೊತ್ತಾಗತೈತಿ. ಲೋಕ ಎಲ್ಲಾ ಮುಳಗಿ ಹೋಗ್ತಾಯಿದ್ರ ಇವಳಿನ್ನು ನಿದ್ದೆಲಿ ತೇಲಾತಾಳ. ನಾವ ಎಲ್ಲ ಪ್ಯಾಕ್ ಮಾಡ್ಕೊಂಡು ಅಜ್ಜಿ ಊರಿಗೆ ಹೋಗ್ತಾಯಿದೀವಿ ನಿನಗ ಆಮೇಲೆ ಕಾಲ್ ಮಾಡ್ತಿನಿ, ಬಾಯ್.” ಎಂದವಳೇ ಕಾಲ್ ಕಟ್ ಮಾಡಿದಳು.

rain stories

ಸೌಜನ್ಯ : ಅಂತರ್ಜಾಲ

ಹೊರಗಿನಿಂದ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ಕಿವಿ ಕೊರೆಯಿತು. ಹೋಗಿ ನೋಡಿದರೇ ಮನೆಯವರೆಲ್ಲ ಸ್ಟೆಟರ್ ಹಾಕಿಕೊಂಡು, ಕಿಟಕಿ ಬಾಗಿಲು ಮುಚ್ಚಿ, ತುಂಬಾ ಗಂಭಿರವಾಗಿ ಟಿವಿ ಮುಂದೆ ಕುಳಿತಿದ್ದಾರೆ. ಇವರದ್ದೇನು ಬ್ರೇಕಿಂಗ್ ನ್ಯೂಸ್ ಅಂತ ನೋಡಿದರೇ ಒಂದು ಕ್ಷಣ ಹಾರ್ಟ್ ಬ್ರೇಕ್ ಆಯ್ತು. ಇದು ನಮ್ದೇ ಏರಿಯಾ ಅಲ್ವಾ? ಇದು ಫಾಲ್ಸ್ ರೋಡ್. ಮೊನ್ನೆ ತಾನೇ ಸುರಿಯೋ ಮಳೇಲಿ ಛತ್ರಿ ಹಿಡಿದು ಇದೇ ದಾರಿಲಿ ಹೆಜ್ಜೆ ಹಾಕಿದ್ದೀನಿ. ಇಂದು ರಸ್ತೆನೇ ಕಾಣ್ತಾಯಿಲ್ಲ. ಚರ್ಚ್, ಪಾಟೀಲ ಟೀಚರ್ ಮನೆ, ನಮ್ಮನೆಗೆ ತರಕಾರಿ ಹೊತ್ತು ತರುತ್ತಿರುವ ಶಾಂತಕ್ಕನ ಮನೆಗಳಲ್ಲಿ ನೀರೆಲ್ಲ ನಿಂತಿವೆ. ದಿನಾ ಬೈಕು, ಕಾರು, ಬಸ್ಸು ಓಡುತ್ತಿರುವ ರಸ್ತೆ ಮೇಲಿಂದ ದೋಣಿ ಓಡ್ತಾಯಿದೆ. ಚಿಕ್ಕ ಬೋಟ್ ಒಂದರಲ್ಲಿ ಮಧ್ಯ ಸಿಕ್ಕು ಹಾಕಿಕೊಂಡು ಮುದುಕನನ್ನು ತರುವ ಸಾಹಸ ನಡೆಯುತ್ತಿದೆ. ಇದೇನು ವಿಚಿತ್ರ. ರಾತ್ರೊ ರಾತ್ರಿ ಭೂಗೊಳವೆಲ್ಲ ಜಲಗೋಳ ಆಗಿ ಹೋಯ್ತಲ್ಲ? “ಯಾವುದಕ್ಕೂ ನಾವು ಎಲ್ಲ ಪ್ಯಾಕ್ ಮಾಡೋಣ ಏನ್ ರೀ?” ಅಮ್ಮ ಅಪ್ಪನನ್ನು ಕೇಳ್ತಾ ಇದ್ದಾಳೆ. “ಹೂಂ ಮಾಡಲೇಬೇಕು. ನಮಗೂ ಮನೆ ಖಾಲಿ ಮಾಡೋಕೆ ಹೇಳಬಹುದು. ಇನ್ನು ಒಂದರೆಡ ದಿನ ಹಿಂಗ ಮಳೆ ಬಿದ್ರೆ ಗ್ಯಾರಂಟಿ ಇಲ್ಲಿವರೆಗೂ ನೀರು ಬರತೈತಿ.” ಅಪ್ಪ – ಅಮ್ಮನ ಸಂಭಾಷಣೆ.  ಅಯ್ಯೋ ಅದ ನನ್ನ ಫ್ರೆಂಡ್ ಸುಮತಿ ಮನೆ. ಫಸ್ಟ್ ಫ್ಲೋರ್​ವರೆಗೂ ನೀರು ಬಂದೇತಿ. ಅವರ ಇರೋದು ಗ್ರೌಂಡ್ ಫ್ಲೋರ್​ನಲ್ಲಿ. ಎಲ್ಲಿಗೆ ಹೋದ್ರೊ ಎನೋ? ತಂಗಿಯ ಆತಂಕ..!

ನಾಳೆ ಅಮ್ಮನ ಕಣ್ಣ ತಪ್ಪಿಸಿ ಟೆರೇಸ್ ಮೇಲೆ ಹೋಗಿ ಈ ಮಳೇಲಿ ಒಂದೆರಡು ಫೋಟೋ ತೆಗೆದು ಸ್ಟೇಟಸ್ ಗೆ ಅಪ್​ಲೋಡ್ ಮಾಡಬೇಕು ಅಂತ ಯೋಚಿಸುತ್ತ ಮಲಗಿದ್ದ ನನಗೆ ಮರುದಿನ ಎದ್ದ ತಕ್ಷಣ ಇಂತಹದ್ದೊಂದು ಸುದ್ದಿ ತುಂಬಾ ಆಘಾತಕಾರಿ ಅನಿಸಿತ್ತು. ಅಂದು ಮಧ್ಯಾಹ್ನ ನಿನ್ನ ಆರ್ಭಟ ತುಸು ಕಡಿಮೆಯಾದ ನಂತರ ನೀನು ಮಾಡಿಟ್ಟ ಅವಾಂತರಗಳನ್ನೆಲ್ಲ ನೋಡಲೆಂದು ಛತ್ರಿ ಹಿಡಿದು ಹೊರಬಿದ್ದೆ. ಎಲ್ಲಿ ನೋಡಿದರೂ ನೀರೋ-ನೀರು. ಆನ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಹೋಗ್ತಾಯಿದ್ದಾರೆ. ಕೆಲವರು ಅಳುತ್ತಿದ್ದಾರೆ, ಗೋಗರೆಯುತ್ತಿದ್ದಾರೆ, ಇನ್ನು ಕೆಲವರು ಫೋಟೋ ಕ್ಲಿಕ್ಕಿಸುತ್ತಿದ್ದಾರೆ, ಖಾಕಿ ಹಾಕಿದ ಪೊಲೀಸನೊಬ್ಬ ಸುತ್ತ ಇರುವ ಮನೆಯವರಿಗೆಲ್ಲ ಮನೆ ಖಾಲಿ ಮಾಡಿ ಎಂದು ಆದೇಶಿಸುತ್ತಿದ್ದಾನೆ, ಈಗ ತಾನೇ ಹೆರಿಗೆಯಾದ ಮಗಳನ್ನು, ಹಸುಗುಸನ್ನು ಎತ್ತಿಕೊಂಡು ಎಲ್ಲಿಗೆ ಹೋಗಲಿ ಎಂದು ಹಣೆ ಬಡೆದುಕೊಳ್ಳುತ್ತಿದ್ದಾಳೆ. ಇವರೆಲ್ಲರ ನೋವು, ಕೂಗು, ಸಂಕಟ, ಆರ್ತನಾದ ನಿನಗೆ ಕೇಳಲೇ ಇಲ್ವಾ ಮೇಘರಾಜ..? ಅದೆಂತಹ ಅಸಹನೀಯ, ಅಸಹಾಯಕತೆಯ ಸಮಯ.

ಅದೇ ಮೊದಲ ಬಾರಿಗೆ ನಾ ನಿನ್ನ ದೂಷಿಸಿದ್ದು. ನಿನೇಷ್ಟು ಕ್ರೂರಿ ಎಂದು ಶಪಿಸಿದ್ದು. ಅದಾಗೀ ಈಗ ಮೂರು ವರ್ಷಗಳು ಕಳೆದವು. ಅದರ ನಂತರವೂ ನೀನು ಹೀಗೆ ದುಷ್ಟನಂತೆ ವರ್ತಿಸಿದ್ದಿಯಾ. ಅಲ್ಲಲ್ಲಿ ಈಗಲೂ ಅದೇ ವರ್ತನೆಯನ್ನೇ ತೋರುತ್ತಿದ್ದೀಯ.  ಆದರೆ ನಿನ್ನಿಂದಾದ ಎಲ್ಲ ದುರಂತಕ್ಕೂ ಕೇವಲ ನಿನ್ನದೇ ತಪ್ಪೆಂದು ನಾ ದೂರಲಾರೆ ಅದಕ್ಕೆ ನನ್ನ ಮನ ಒಪ್ಪದು. ಅದರಲ್ಲಿ ಮನುಕುಲದ ತಪ್ಪು ಉಂಟು. ನಿನ್ನನ್ನು ಪ್ರಿತಿಸುವ, ಆರಾಧಿಸುವ, ನಿನಗಾಗಿ ಕಾಯುವ ಸಹಸ್ರಾರು ಜನರ ಪ್ರತಿಯಾಗಿ ನಿನ್ನ ಬಳಿ ಒಂದು ಮನವಿ ಮಾಡ್ತಾಯಿದ್ದಿನಿ ಮೇಘರಾಜ- ನಿನ್ನಲ್ಲದೇ ನಾವು ಏನನ್ನೂ ಊಹಿಸಲಾರೆವು. ಜೀವ-ಜೀವನ ಎರೆಡು ಸಾಗಿದ್ದು ನಿನ್ನಿಂದಲೇ. ನಮ್ಮ ಮೇಲೆ ಮುನಿಸೇಕೆ? ಕೊಲ್ಲುವಷ್ಟು ಕ್ರೂರವೇಕೆ? ಕೆಡಿಸುವ ದುರ್ಬುದ್ಧಿ ನಿನಗೇಕೆ? ದುಷ್ಟನಂತೆ ಬರಬೇಡ. ಸೋತ ಮನಸ್ಸಿಗೆ ಹೊಸ ಚಿಲುಮೆ ತುಂಬುವಂತೆ ಬಾ… ನೊಂದವರ ಕಣ್ಣೀರು ಮರೆಯಾಗಿಸಲು ಬಾ.. ರೈತನ ಕಣ್ಣಿರು ವ್ಯರ್ಥವಾಗದಿರಲೆಂದು ಬಾ.. ಮಕ್ಕಳೊಟ್ಟಿಗೆ ಆಡಲು ಬಾ.

ಇದನ್ನೂ ಓದಿ : Rain : ಮಳೆ ಬಂತು ಮಳೆ ; ಅಲಲಲಲಾ ಎಂಥ ಆಟ ಅದೆಂಥ ಆವೇಶ ಈ ‘ಮನಬಂದ ರಾಯ’ನದು!