Rain : ಮಳೆ ಬಂತು ಮಳೆ : ‘ಚೋಳರಾಜ್ಯದ ಬೀದಿಯಲ್ಲಿ, ಸುರಿವ ಮಳೆಯಲ್ಲಿ ಸರಿದು ಹೋದರು ಕನ್ನಗಿ ಕೋವಲರು’

Death : ‘ಬಿದ್ದ ಮರಗಳ ತುಂಡುಗಳ ನಡುವೆ ನಾರಾಯಣ ತೇಲುತ್ತಾ ಹೋಗಿ ಕೊನೆಗೊಮ್ಮೆ ಕೈಯೆತ್ತಿ ಜೋರಾಗಿ ಕೂಗಿದ್ದಷ್ಟೇ ನೆನಪು. ‘ಹೋಗಿ ಬರುತ್ತೇನೆ ಮಕ್ಕಳೇ’ ಅನ್ನುವಂತೆ ಬೀಸಿದ ಕೈ ಊರಿನವರನ್ನು ಕಂಗೆಡಿಸಿತ್ತು. ಏನಂದನೋ...! ನಾರಾಯಣನ ದೇಹ, ಅಷ್ಟು ದೂರದ ಬಂಟ್ವಾಳದ ನೇತ್ರಾವತಿಯ ತೀರದಲ್ಲಿ ಹುಡುಕಿದರೂ ಸಿಗದೇ ಇಡೀ ನನ್ನೂರು ಆಘಾತಕ್ಕೊಳಗಾಗಿದ್ದು ಇನ್ನೂ ಹಸಿಯಾಗಿದೆ.’

Rain : ಮಳೆ ಬಂತು ಮಳೆ : ‘ಚೋಳರಾಜ್ಯದ ಬೀದಿಯಲ್ಲಿ, ಸುರಿವ ಮಳೆಯಲ್ಲಿ ಸರಿದು ಹೋದರು ಕನ್ನಗಿ ಕೋವಲರು’
ಹಿರಿಯ ಕವಿ, ವಿಮರ್ಶಕಿ ಡಾ. ಎಚ್. ಎಲ್. ಪುಷ್ಪಾ ಮತ್ತು ಲೇಖಕಿ ಡಾ. ದೀಪಾ ಫಡ್ಕೆ
Follow us
|

Updated on:Aug 08, 2021 | 5:33 PM

ಟಿವಿ9 ಕನ್ನಡ ಡಿಜಿಟಲ್ ; ಮಳೆ ಬಂತು ಮಳೆ (Rain) ಇಂದಿನಿಂದ ಶುರುವಾಗುವ ಹೊಸ ಸರಣಿ. ಚಿತ್ತಬಂದಂತೆ ಸುರಿಯುತ್ತಿರುವ ಮಳೆಗೆ ಸೃಜನಶೀಲ ಆವರಣ ತೊಡಿಸುತ್ತಾರೆ ಅಕ್ಷರ ಪ್ರಿಯರು. ಅವರವರ ಸ್ಮೃತಿಗೆ ಲಹರಿಗೆ ಧಾರೆಗೆ ಮೌನಕ್ಕೆ ಮುರಿಯುವಿಕೆಗೆ ‘ಮಳೆ’ ಇಲ್ಲಿ ಯಾವ ರೂಪದಲ್ಲಿಯೂ ಹರಿಯುವ ಸಾಧ್ಯತೆ ಇರುತ್ತದೆ. ಖ್ಯಾತ ಕವಿ, ವಿಮರ್ಶಕಿ ಕವಿ ಡಾ. ಎಚ್. ಎಲ್. ಪುಷ್ಪ ಕಾವ್ಯ ಮತ್ತು ನಾಟಕದ ಕಡುವ್ಯಾಮೋಹಿ. ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ, ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ಮುಂತಾದ ಕೃತಿಗಳ ಕರ್ತೃ. ನೃತ್ಯಗಾತಿ, ನಿರೂಪಕಿ, ಲೇಖಕಿ ಡಾ. ದೀಪಾ ಫಡ್ಕೆ ಋತ, ಹರಪನಹಳ್ಳಿ ಭೀಮವ್ವ, ಡಾ. ಪ್ರದೀಪಕುಮಾರ ಹೆಬ್ರಿ-ಮಹಾಕಾವ್ಯಗಳ ಕವಿ, ಲೋಕಸಂವಾದಿ (ಮೊಗಸಾಲೆಯವರ ಬದುಕು ಬರಹ), ಕವಿ ಸುಬ್ರಾಯ ಚೊಕ್ಕಾಡಿ, ಶಿಕ್ಷಣತಜ್ಞ ಡಾ. ಚಂದ್ರಶೇಖರ ದಾಮ್ಲೆಯವರ ಕುರಿತು ಕೃತಿಗಳನ್ನು ತಂದವರು. ಬೆಂಗಳೂರಿನಲ್ಲಿ 2006ರಲ್ಲಿ ಬಿದ್ದ ಮಳೆಗೆ ತಳೆದ ಪುಷ್ಟ ಅವರ ಕವನವೂ ಇಲ್ಲಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿಯ ಬಾಲ್ಯಕಾಲದ ಮಳೆಯನ್ನು ನಿನ್ನೆ ಬೆಂಗಳೂರಿನಲ್ಲಿ ಕುಳಿತು ನೆನೆದು ಬರೆದ ದೀಪಾ ಅವರ ಪ್ರಬಂಧವೂ ಇಲ್ಲಿದೆ.    

*      

ಮಳೆಯ ಜಾಡಿನಲ್ಲಿ ಡಾಂಟೆ ಇತ್ಯಾದಿ

ಮಳೆ ನಿರೀಕ್ಷೆ ಇರದ ಆ ಸಂಜೆಯಲ್ಲಿ ನೆಂದು ತೊಪ್ಪೆಯಾಗಿ ನಡುಗಿ ಸೀರೆ ಜಾಡಿಸುತ್ತಾ ಮೆಟ್ಟಿಲೇರಿ ಹಗುರಾಗಿ ನಿದ್ರಿಸಿದ ಆ ರಾತ್ರಿ

ಆ ರಾತ್ರಿ ಎಲ್ಲ ರಾತ್ರಿಗಳ ಹಾಗಲ್ಲ ಎಲ್ಲ ಕಡೆ ತೊಳಗಿ ಬಳಗುವ ನಿಶ್ಯಬ್ದ ನಿದ್ರೆಯ ಕರಿ ಇರುಳ ನಡುವೆ ತೂರಿಹೋದ ಅಸಂಖ್ಯಾತ ಬಿಳಿಮೋಡಗಳು.

ಬಾಷ್ಯಂ ಸರ್ಕಲ್ಲಿನ ತಿರುವಿನಲ್ಲಿ ಇದ್ದಕ್ಕಿದ್ದಂತೆ ಎದುರಾದ ಡಾಂಟೆ ಕಳಕೊಂಡ ಅವಳ ಬಗ್ಗೆ ಕಳವಳಗೊಂಡಿದ್ದ ಬಿಳಿತೊಗಲಿನಲಿ ಪ್ರಣಯಗಾಥೆ ಮೂಡಿಸಿದಾಕೆ ಬೇಲಿಯ ಮುಳ್ಳು ಕಂಟಿಗೆ ಸಿಲುಕಿ ನರಳುತ್ತಿದ್ದಳು ತರಚುಗಾಯಗಳಿಂದ ಸ್ವರ್ಗ ನರಕಗಳ ನಡುವೆ ನೆನಪಾದರು ಒಂದೇ ಕ್ಷಣ ಚಿರ ಪ್ರಣಯವ ಹಾಡುವ ನಮ್ಮ ನಾಡಿಗರು.

ರೋಮಾಂಚನಗೊಂಡು ಆ ಮುದುಕಿಯ ಹಣ್ಣಿನ ಬುಟ್ಟಿಯ ನೋಡಿದೆ ಅಲ್ಲಿ ಮಿಲ್ಟನ್ ಕಣ್ಣು ಹೊಡೆಯುತ್ತಿದ್ದ ತಿನ್ನಬಾರದ ಹಣ್ಣ ಗಂಡನಿಗೆ ತಿನ್ನಿಸುವ ಈವ್ ಹಣ್ಣಿನ ಸವಿಯಲ್ಲಿ ಮುಳುಗಿ ಹೋದ ಆ್ಯಡಂ ಪ್ಯಾರಡೈಸ್ ಲಾಸ್ಟ್​ನಲ್ಲಿ ಪ್ರತ್ಯಕ್ಷವಾದರು.

ಕಣ್ಣ ರೆಪ್ಪೆಯಲ್ಲಿ ವೇಗವಾಗಿ ಮೂಡಿ ಕರಗುವ ಕನಸುಗಳ ದಾಖಲಾಗುವುದಿಲ್ಲ ಎಲ್ಲೋ ಸುರಿದ ಈ ಮಳೆಸಂಜೆಯಲಿ ಕೈಯಲಿ ಕುರಿಮರಿ, ಕಣ್ಣಲ್ಲಿ ಕಂಡಿರದ ಹುಲಿ ಪುಟಗಳ ಸರಸರನೆ ತೆರೆಯುತ್ತಾ ಬ್ಲೇಕ್ ಗುಡುಗಿದ ಪದ್ಯದ ಲಯದಲ್ಲಿ

ಮಿಂಚು ಗುಡುಗುಗಳ ನಡುವೆ ಮುಖ ತೋರಿ ಮರೆಯಾದವರು ಹಾಗೆ ಡಿ.ಆರ್.ಎನ್​ ಪಾಬ್ಲೋ ನೆರೂದ ಮರಗುತ್ತಿದ್ದ ತಾನು ವರ್ಣಿಸಲ ಚಿಲಿಯ ಲಿಲ್ಲಿ, ಲೈಲಾಕ್. ರೋಜಾ ಮೇಲಿರುವ ರಕ್ತದ ಬಗ್ಗೆ.

ಚೋಳರಾಜ್ಯದ ಬೀದಿಯಲ್ಲಿ, ಸುರಿವ ಮಳೆಯಲ್ಲಿ ಸರಿದು ಹೋದರು ಕನ್ನಗಿ ಕೋವಲರು ನೂಪುರವ ಹಿಡಿದು ಹತಾಶರಾಗಿ ಶಿಲಪ್ಪದಿಕಾರಂ ಹಿಡಿದು ನಿಟ್ಟುಸಿರುಬಿಟ್ಟರು ಕಾರ್ಲೋಸ್ ಬೇಗುದಿಯಲ್ಲಿ.

ಬೋದಿಲೇರನ ಲೋಕದೊಳಗಿಂದ ಮೈ ಕೊಡವಿ ಗೊಣಗಿದರು ಲಂಕೇಶ್ ಆ್ಯಶ್ ಟ್ರೇ ಹುಡುಕುತ್ತಾ ತುಂಬಿ ಹೊರ ಚೆಲ್ಲುವ ವೈನ್, ಮುದಿಸೂಳೆಯರು, ತಲೆಹಿಡುಕರು ಪದಗಳು ಸಿಗದೆ ತಡವರಿಸುತ್ತಾ ವಾಚಿಸಿದರು ಕವಿತೆಯ ಮೈ ಜುಮ್ ಎನ್ನುವಂತೆ ಕ್ಯಾಮರಾ ಮಲಗಿತ್ತು ಮೇಜಿನ ಮೇಲೆ ಅಪಾರ ನೆನಪುಗಳ ಅವಿತಿಟ್ಟು ಒಳಗೆ.

ಪತರಗುಟ್ಟುವ ಎಲೆಗಳು ಜಾರುತಿವೆ ಒಂದೊಂದು ಬಿರುಮಳೆಯಲ್ಲಿ ನಿಧಾನ ನೊಗ ಹೊತ್ತ ಮುದಿ ಎತ್ತಿನಂತೆ. ತರುಲತೆಗಳ ನಡುವೆ ಪಿಸುನುಡಿದಳು ಅಕ್ಕ ಎಲ್ಲ ಗಂಡರ ಶೃಂಗಾರದ ಪರಿಯಲ್ಲ ಎನ್ನ ನಲ್ಲನ ಶೃಂಗಾರದ ಪರಿ ಬೇರೆ ಕಾಯದ ಕಳವಳದಲ್ಲಿ ಕನವರಿಸಿತು ಅನುಭಾವದಲ್ಲಿ ಒದ್ದೆಯಾದ ಮೈ.

ಇರದೆ ನಾರಿಯರು ಬಿಚ್ಚೊಗೆದ ರೇಷ್ಮೆಯ ದುಕೂಲಗಳಂತೆ ರಂಜಿಸಿದವು ಕೈಗಳ ತೊರೆವೆಣ್ಗಳಿರದೆ ನದಿಯನು ಅಪ್ಪಿ ಬರಸೆಳೆವಂತೆ.

ಅಲೆಯುತ್ತಿದ್ದಾಳೆ ಲೇಡಿ ಮ್ಯಾಕಬತ್ ಮೇಣದ ಬತ್ತಿಯ ಬೆಳಕಲ್ಲಿ ರಕ್ತಸಿಕ್ತ ಕೈಯ ತೊಳೆಯಲು ಕರಿನೆರಳ ಮುಸ್ಸಂಜೆ ಮಳೆಯಲ್ಲಿ ಅಬ್ಬರಿಸಿದರು ಮಂತ್ರವಾದಿನಿಯರು ರಕ್ತ, ಮಾಂಸ, ಕರುಳಗಳ ತಳ ಹತ್ತದಂತೆ ಬೇಯಿಸುತ್ತ.

ಭೂಗತ ಗರ್ಭದಲ್ಲಿ ಸೇರಿ ಹೋಗಿದೆ ಹೀಗೆ ಒಂದೊಂದೆ ಜೀವಂತ ಕಥೆ ಈ ಮುಸ್ಸಂಜೆ ಮಳೆಯಲ್ಲಿ ನಿಲುವಂಗಿಗಳಲ್ಲಿ ನಾಯಕರು ಮ್ಯೂಸಿಯಂ ಪೀಸುಗಳಂತೆ ಮಿಂಚು ಬೆಳಕಲ್ಲಿ ಕಾತರಿಸುತ್ತಿದ್ದಾರೆ ರಕ್ತ, ಮಾಂಸ ತೊಗಲಿಗಾಗಿ ಹೆಜ್ಜೆ ಗುರುತಗಳ ಅಳಿಸಿ ಮತ್ತೊಂದು ಇತಿಹಾಸದಲ್ಲಿ ಮೈದೋರಲು.

rain series

ಸೌಜನ್ಯ : ಅಂತರ್ಜಾಲ

ನಾರಾಯಣನ ನೆನೆಯುತ್ತಾ…

ನದಿ ತೀರದ ಮನೆ, ನೀರು, ಹರಿವು, ಒಳಹರಿವು, ಹೊರ ಹರಿವು, ತುಂಬು ಹರಿವು, ಸೊರಗಿದ ಹರಿವು, ಸೊರಗಿದ್ದಾಗ ಮಂದಾಕಿನಿಯಂತಿರುವ ಬಾಗು, ಬಳುಕು, ತುಂಬಿದ್ದಾಗಿನ ಗಂಗೆಯಂತಹ ರಭಸ. ಇಷ್ಟು ತುಂಬಿ ತುಳುಕುವ ಹೊತ್ತಲ್ಲೇ ಆದಷ್ಟು ವೇಗವಾಗಿ ಹರಿದು ಆ ಬಿಸಿಯಲ್ಲಿಯೇ ಸಾಗರನನ್ನು ಸೇರುವ ಉತ್ಕಟತೆ: ಮಳೆ ಹನಿಹನಿಯಿರಲಿ, ಮುಸಲಧಾರೆಯಿರಲಿ ಮನಸ್ಸು, ನೆನಪಿನ ಭಂಡಾರ ತೆರೆಯಲು ಸಂಚು ಹೂಡುತ್ತಿರುತ್ತದೆ. ಆ ಹೆಸರೇ ಇಲ್ಲದ ನದಿಯೂ ಮಂದಾಕಿನಿಯ ಮತ್ತು ಗಂಗೆಯ ಎರಡೂ ವೇಷಗಳನ್ನು ಪ್ರತೀವರ್ಷ ತೊಡುತ್ತಾ ತಾನೂ ಕುಣಿಯುತ್ತಾ ನಮ್ಮನ್ನೆಲ್ಲ ಗಿರಗಿಟ್ಲೆಯಂತೆ ಕುಣಿಸಿದ್ದು ಎಲ್ಲವೂ ಕಣ್ಣ ಮುಂದೆ!

ಮಳೆ ಶುರುವಾಗುತ್ತಿದ್ದಂತೇ ಈ ನನ್ನೂರು ಆಗ, ದ್ವೀಪದಂತಾಗುತ್ತಿತ್ತು. ಭವಸಾಗರ ದಾಟಲು ಹಲವು ದಾರಿಗಳಿದ್ದಂತೇ ಪೇಟೆ ಎಂಬ ಸ್ವರ್ಗಕ್ಕೆ ಹೋಗಲು ಈ ನದಿಗೆ ನೂರು ಮೀಟರ್ ಅಂತರದಲ್ಲಿ ಇದ್ದದ್ದು ಎರಡು ದಾರಿಗಳು. ಒಂದು, ಮರದ ಹಳೆಯ ಸೇತುವೆ, ಅದರ ನಡುನಡುವಿನ ಹಲಗೆಗಳು ಕಾಲದ ಹೊಡೆತಕ್ಕೆ ಸಿಲುಕಿ ಜೀರ್ಣವಾಗಿದ್ದು ಕೆಲ ಹಲಗೆಯ ತುಂಡುಗಳು ಪಾರಾಗ್ಲೇಡಿಂಗ್ ಮಾಡಿದಂತೆ ನೇತಾಡಿಕೊಂಡು ನಂತರ ಯಾರದೊ ಮನೆಯ ಉರಿಯೊಲೆ ಸೇರಿ ಮುಕ್ತಿ ಹೊಂದುತ್ತಿತ್ತು. ನಡುವೆ ತುಂಡಾದ ಸೇತುವೆ ಮೇಲೆ ನಮಗೆ ಮಕ್ಕಳಿಗೆ ಕಾಲಿಡಲೂ ಭಯವಾಗುತ್ತಿತ್ತು. ಇನ್ನೊಂದು, ಈ ಕಡೆಯ ಸ್ವರ್ಗದಿಂದ ಆ ಕಡೆಯ ಸ್ವರ್ಗಕ್ಕೆ ಕೊಂಡೊಯ್ಯುತ್ತಿದ್ದ ದಾರಿ ಎಂದರೆ, ಎರಡಡಿಯಷ್ಟೇ ಅಗಲದ ಮೇಲುದಾರಿ ಹೊಂದಿದ್ದ ವೆಂಟೆಡ್ ಡ್ಯಾಮ್. ಅದರ ಮೇಲೆ ನಡೆದುಕೊಂಡು ಹೋದ ನೆನಪುಗಳು ತುಂಬಾ ಕಮ್ಮಿ, ಓಡಿಕೊಂಡು ದಾಟುತ್ತಿದ್ದ ನೆನಪುಗಳೇ ಇನ್ನೂ ಹಸಿ.

ಅದು, ಬೇಸಿಗೆಯಲ್ಲಿ ನದಿಗೆ ಅಡ್ಡ ಕಟ್ಟ ಕಟ್ಟಿ ಅಡಿಕೆ ತೋಟಗಳಿಗೆ ನೀರು ಹಾಯಿಸಲು ಮಾಡಿದ್ದ ವೆಂಟೆಡ್ ಡ್ಯಾಮ್. ಮರದ ಸೇತುವೆಯ ಮೇಲೆ ಕನಿಷ್ಟ ನಂಬಿಕೆಯಿರದಿದ್ದ ನನ್ನೂರಿನ ಸಾಹಸಿ ಜನರು ಈ ಎರಡಡಿಯಷ್ಟೇ ಅಗಲವಿದ್ದ ಡ್ಯಾಮನ್ನು ತಮ್ಮ ನಿತ್ಯದ ಆಗುಹೋಗುಗಳಿಗೆ ಎಲ್ಲಾ ಕಾಲಗಳಲ್ಲೂ ಅಮಾವಾಸ್ಯೆಯ ಕತ್ತಲಿನಲ್ಲೂ ದಾಟಿ, ಇದನ್ನು ದಾಟಿದರೆ ಭವಸಾಗರ ದಾಟುವುದೂ ಅಷ್ಟೇನು ಕಷ್ಟವಾಗದು ಎನ್ನುವ ನಂಬಿಕೆಯಲ್ಲಿದ್ದರು. ನದಿ ದಾಟಲೆಂದೇ ಇದ್ದ ಮರದ ಸೇತುವೆಯನ್ನು ಈ ವೆಂಟೆಡ್ ಡ್ಯಾಮಿನ ಮೇಲೆ ನಿಂತು ‘ಛೆ! ಸೇತುವೆ ಪೂರಾ ಲಗಾಡಿ ಹೋಗಿದೆ..ತ್ಚು ತ್ಚು’ ಎಂದು ವಾಲುವ ಗೋಪುರವನ್ನು ಅಲ್ಲಿನವರು ನೋಡುವಂತೇ ನೋಡಿದ್ದೇ ಜಾಸ್ತಿ. ಈ ವೆಂಟೆಡ್ ಡ್ಯಾಮಿನ ದಾರಿ, ಮಳೆಗಾಲದಲ್ಲಿ ಎರಡೂ ಬದಿಯ ಅರ್ಧರ್ಧ ಅಡಿಗಳಷ್ಟು ಹಸಿರು ಪಾಚಿಯಿಂದ ಅಲಂಕಾರಗೊಂಡು ಜಾರುಬಂಡಿ ಆಗಿ ಬಿಡುತ್ತಿತ್ತು. ಉಳಿದ ಒಂದಡಿಯಲ್ಲೇ ನಮ್ಮ ಸ್ವರ್ಗಾರೋಹಣ. ಲೈನ್ ಮ್ಯಾನ್ ಬಾಬು ತನ್ನ ಸೈಕಲ್ಲಿನ ಜೊತೆಯಲ್ಲಿಯೇ ಹೆಜ್ಜೆ ಮೇಲೆ ಹೆಜ್ಜೆ ಇಟ್ಟುಕೊಂಡು ದಾಟಿದರೆ, ಶರೀರದ ಭಾರಕ್ಕಿಂತಲೂ ಹೆಚ್ಚು ಭಾರದ ಹೊರೆ ಹೊತ್ತುಕೊಂಡ ಜನ ಅದರ ಮೇಲೆ ಸಲೀಸಾಗಿ ರಾಜಮಾರ್ಗದಲ್ಲಿ ತೇರು ಹೋದಂತೆ ಹೋಗುತ್ತಿದ್ದರು.

ಈ ಬದಿಯಿಂದ ಆ ಬದಿಗೆ ಸೇರುವ ಮೊದಲೇ ಎದುರಿನಿಂದ ಯಾರಾದರೂ ಬಂದರೆ ಡ್ಯಾಮಿನ ಪ್ರತಿ ಗೇಟಿನ ಮೇಲಿದ್ದ ಸುಮಾರು ಮೂರಡಿಯಷ್ಟು ಅಗಲದ ಕಂಬಗಳ ಮೇಲೆ ನಾವು ಪ್ರತಿಷ್ಠಾಪನೆಯಾಗಿ ಬಿಡುತ್ತಿದ್ದೆವು. ಶಾಲೆಗೆ ಹೋಗುವ ನೂರಾರು ಮಕ್ಕಳು, ಕೆಲಸಕ್ಕೆ ಹೋಗುವವರು, ‘ಪೇಟೆ’ ಎಂದು ಕರೆಯುವ ತಾಲೂಕಿನ ಮುಖ್ಯ ಕೇಂದ್ರಸ್ಥಳಕ್ಕೆ ಇದೇ ಡ್ಯಾಮಿನ ಮೇಲೆ ಪಾದವೂರಿ ಹೋಗಿ ಜಯಿಸುತ್ತಿದ್ದರು. ಈ ಸೇತುವೆಗಳು ಒಂದು ತರಹದ ಪುಷ್ಟಕ ವಿಮಾನಗಳಂತೇ, ನಮ್ಮನ್ನು ಎಲ್ಲಿಂದಲೋ ಎಲ್ಲಿಗೋ ಸೇರಿಸುವ ಜಾದೂಚಾದರಗಳಂತೆ ಇವು. ಅದರಲ್ಲೂ ನನ್ನಜ್ಜಿ ಮನೆ ಬಳಿಯ ತೂಗುಸೇತುವೆಯಂತೂ ಸ್ವರ್ಗೀಯ, ಕಾಲಿಟ್ಟೊಡನೇ ಸ್ವಲ್ಪ ಸ್ವಲ್ಪ ಜೋಲಿ ಹೊಡೆಯುತ್ತಾ ತೂಗುತ್ತಾ ನಡೆಯುವ ಸುಖ ಅನುಭವಿಸಿಯೇ ತೀರಬೇಕು. ಸೇತುವೆಗಳು ದಡಗಳನ್ನು ಸೇರಿಸುವುದಲ್ಲದೇ ಜೊತೆಯಲ್ಲಿ ಈ ದಡದಲ್ಲಿದ್ದಾಗ ಆ ದಡವೇ ಸುಂದರವಾಗಿ ಕಾಣುವಂತೇ ಮಾಡಿ, ಆ ದಡದ ಮೇಲೆ ನಿಂತು ಸುಮ್ಮನೆ ಹಿಂತಿರುಗಿ ನೋಡಿದರೆ `ಓಹ್ ಆ ದಡವೂ ಅದ್ಭುತವಾಗಿತ್ತೆಂದೂ’ ಅನಿಸುವಂತೇ ಮಾಡುವ ಕೊಂಡಿಗಳು.

ಮಳೆಗಾಲ ಬಂತೆಂದರೆ ಸೇತುವೆಯ ಎರಡೂ ಬದಿಗಿದ್ದ ಬಂಡೆಗಲ್ಲುಗಳ ದಾರಿ ಅಕ್ಷರಶಃ ಜಾರುಬಂಡಿ. ಗುಂಪಲ್ಲಿ ಮಾತಾಡಿಕೊಂಡು ಶಾಲೆಗೆ ಹೋಗುತ್ತಿದ್ದ ಹೊತ್ತಲ್ಲಿ, ಈ ಜಾರುಬಂಡೆಗಳ ಮೇಲೆ ಆಟವಾಡಿಕೊಂಡು ಹೋಗುತ್ತಿದ್ದಾಗ ‘ಎಲ್ಲಿ ಮಕ್ಕಳು ಜಾರಿ ಬಿದ್ದು ಏನು ಅನಾಹುತವಾಗುತ್ತದೊ’ ಎನ್ನುವ ಅಮ್ಮಂದಿರ ಆತಂಕ ಆಗೆಲ್ಲಿ ಅರ್ಥವಾಗುತ್ತಿತ್ತು. ಆತಂಕವೂ ನೋಡಿಕೊಂಡು ಕೇಳಿಕೊಂಡು ಬರುತ್ತೇನು? ಇಡೀ ಊರಿಗೆ ಆತಂಕವನ್ನು ಈ ಮಳೆ ಮತ್ತು ಈ ನದಿ ಕೊಟ್ಟೇ ಬಿಟ್ಟಿತು. ನಮ್ಮ ಊರಲ್ಲಿ ಹಿರಿಯರು ಮಾತಾಡುವುದಿತ್ತು, ‘ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಭಾರೀ ಮಳೆ, ಪ್ರವಾಹ ಬರುತ್ತದೆ, ಮತ್ತೆ ಹನ್ನೆರಡು ವರ್ಷಕ್ಕೊಮ್ಮೆ ಬರವೂ ಬರುತ್ತದೆ, ಬರದ ಸೂಚನೆ ಬಿದಿರು ಹೂ ಬಿಟ್ಟಾಗ ಸಿಗುತ್ತದೆ’ ಎಂದು.

ಅಂದು ಶುರುವಾದ ಮಳೆ ಮೂರು ದಿನಗಳವರೆಗೂ ಬಿಟ್ಟಿರಲಿಲ್ಲ. ಮಳೆ ಬಂದೊಡನೇ ಶಾಲೆಗೆ ರಜೆ ಘೋಷಿಸಿಬಿಡುತ್ತಿದ್ದರು. ರಜೆ ಎಂದರೆ, ಈ ಪುಡಿ ಮಳೆಗೆಲ್ಲ ಅಲ್ಲ, ಅದು ಭರ್ಜರಿಯಾಗಿ ಬಾನು ಸೋರಿದಂತೇ, ಬಕೆಟಿನಲ್ಲಿ ನೀರು ಸುರಿದಂತೆ (ಇದು, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಮಗಳ ದಿವ್ಯದೃಷ್ಟಿಗೆ ಕಂಡ ವ್ಯಾಖ್ಯಾನ) ಇಡೀ ದಿನ ಸುರಿದಾಗ ಮಾತ್ರ ರಜೆ! ಹೀಗೆ ಮೂರನೇ ದಿನವೂ ಸುರಿಯುತ್ತಿದ್ದ ಚಿಟಿಚಿಟಿ ಮಳೆಗೆ ನಾವು ಕೊಡೆ ಹಿಡಿದು, ನಾವೇ ಕೊಡೆಯಾಗಿ ಶಾಲೆಗೆ ಹೋಗುವಾಗಲೇ ಇವತ್ತು ರಜೆ ಗ್ಯಾರಂಟಿಯೆಂದೇ ನಂಬಿ ಸುಭಗರಂತೆ ಶಾಲೆಗೆ ಹೋಗಿದ್ದೆವು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ರಜೆ ಘೋಷಿಸಿದೊಡನೇ ನಿಧಾನಕ್ಕೆ ಹರಟೆ ಹೊಡೆಯುತ್ತಾ ಪೇಟೆಯ ಮುಖ್ಯರಸ್ತೆಯಿಂದ ನನ್ನೂರಿಗೆ ಹೋಗುವ ದಾರಿಯಲ್ಲಿ ಒಂದು ಫರ್ಲಾಂಗು ನಡೆದಾಗಲೇ ನಮಗೆ ಅರಿವಾಗಿದ್ದು ಮನೆಗೆ ಹೋಗುವ ದಾರಿ ಸಂಪೂರ್ಣ ಮುಳುಗಿದೆ ಎಂದು.

ನದಿ ದಾಟಿದೊಡನೇ ಸಿಗುವ ಸರ್ಕಾರಿ ಸೀಡ್ ಫಾರ್ಮಿನ ಗದ್ದೆಗಳು ಸಂಪೂರ್ಣ ಜಲಾವೃತ. ಗದ್ದೆ ಪುಣಿಯುದ್ದಕ್ಕೂ ಊರಿನ ಗಂಡಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸೈನಿಕರಂತೆ, ನಮ್ಮನ್ನು ಪಾರು ಮಾಡುವ ದೇವರಂತೆ ನಿಂತು ಕೈಯಿಂದ ಕೈಗೆ ಮಕ್ಕಳನ್ನು ಜನರನ್ನು ದಾಟಿಸುತ್ತಿದ್ದರು. ಅದರ ನಡುವೆ ನಿಂತು ನೋಡಿದರೆ ಸಮುದ್ರವನ್ನೇ ನೋಡಿದಂತೇ. ಸೀಡ್ ಫಾರ್ಮಿನ ಕೊನೆ ಗೇಟು, ಅಲ್ಲಿಂದ ನಡೆಯುವ ದಾರಿ, ಸುಮಾರು ಹನ್ನೆರಡು ಅಡಿಗಿಂತಲೂ ಎತ್ತರವಿದ್ದ ಡ್ಯಾಮಿನ ತುದಿಯೂ ಕಾಣದಂತೇ ನೀರು… ನೀರು…. ನೀರು. ನಮ್ಮ ತೋಟದಲ್ಲೂ ಸೊಂಟದವರೆಗೂ ನೀರು. ಎರಡಡಿಯ ಡ್ಯಾಮಿನ ದಾರಿಯಲ್ಲಿ ರಕ್ಷರಪಡೆಯ ಕೈ ಹಿಡಿದು ಆದಷ್ಟು ಗಟ್ಟಿಯಾಗಿ ಕಾಲೂರಿಕೊಂಡು ನದಿ ದಾಟಿದ ಮೇಲೆ ನಮಗೆಲ್ಲರಿಗೂ ದೊಡ್ಡ ಸಾಹಸ ಮಾಡಿ ಬಂದವರ ಹಮ್ಮಿತ್ತು. ಮನೆಗೆ ಹೋಗಿ ಶಾಲೆಯ ಚೀಲವನ್ನು ಮೂಲೆಗೆಸೆದು ಕೈಯಲ್ಲಿ ಕೊಡೆ ಹಿಡಿದು ನದಿತೀರದಲ್ಲಿ ನಿಂತಿದ್ದ ನೂರಾರು ಜನರೊಂದಿಗೆ ನಾವು ಮಕ್ಕಳೆಲ್ಲರೂ ಆದಷ್ಟು ದೃಶ್ಯ ಕಾಣುವಂತೆ ನುಸುಳಿ ನಿಂತಿದ್ದೆವು.

ಅದೆಲ್ಲಿದ್ದನೊ ನಾರಾಯಣ! ಊರಿನ ಅತ್ಯಂತ ಸಜ್ಜನ, ಅತ್ಯಂತ ಕಡಿಮೆ ಮಾತಿನ, ನಮ್ಮ ವಠಾರದ ಎರಡು ಮೂರು ಮನೆಗಳ ಎಲ್ಲ ದನಕರುಗಳನ್ನು ಗುಡ್ಡೆಗೆ ಹೊಡೆದುಕೊಂಡು ಹೋಗಿ ಅಷ್ಟೇ ಜಾಗ್ರತೆಯಿಂದ ವಾಪಾಸು ಕರೆದುಕೊಂಡು ಬರುತ್ತಿದ್ದ ಪಾಪದ ಜೀವ. ಪ್ರತೀ ಸಾರಿ ಈ ಹೆಸರಿಲ್ಲದ ನದಿಗೆ ಭಾರೀ ಮಳೆ ಬಂದು ಪ್ರವಾಹ ಬಂದಾಗ ಊರಿನ ಎಲ್ಲಾ ಕೆಲದಾಳುಗಳು ಈ ಡ್ಯಾಮಿನ ಮೇಲೆ ಅಥವಾ ಬದಿಯಲ್ಲಿ ನಿಂತು ದೊಡ್ಡದೊಂದು ಕೊಕ್ಕೆ ತಯಾರು ಮಾಡಿ ನೀರಿನಲ್ಲಿ ತೇಲಿಕೊಂಡು ಬರುವ ತೆಂಗಿನಕಾಯಿಗಳನ್ನು ಹಿಡಿಯುತ್ತಿದ್ದುದು ಸಾಮಾನ್ಯ ಸಂಗತಿ. ಎಲ್ಲರಂತೇ ಅಂದೂ ನಾರಾಯಣ ಸುಮಾರು ತೆಂಗಿನಕಾಯಿಗಳನ್ನು ಹಿಡಿದಿದ್ದ. ನಮ್ಮೊಂದಿಗೆ ನಿಂತಿದ್ದ ಅವನ ಮಕ್ಕಳಿಗೆ ಕೊಟ್ಟು ‘ನೀರಿನತ್ರ ಬರಬೇಡಿ’ ಎಂದೂ ಹೇಳುತ್ತಿದ್ದ. ಅದೇನಾಯ್ತೋ, ಕೊಕ್ಕೆ ಎಳೆಯುವಾಗ ನೀರಿನ ರಭಸಕ್ಕೆ ಸಿಲುಕಿ ನೀರಿಗೆ ಬಿದ್ದದ್ದಷ್ಟೇ ಗೊತ್ತು! ನಾರಾಯಣ ಸುಳಿಗೆ ಸಿಕ್ಕಿದ್ದ… ಒಮ್ಮೆಲೇ ಜೋರಾದ ಬೊಬ್ಬೆ, ಕೂಗು. ಅವನ ಮಕ್ಕಳು ‘ಅಪ್ಪಾ..ಅಪ್ಪಾ’ ಎಂದು ಅಳುತ್ತಾ ಅಸಹಾಯಕರಾಗಿ ಇದ್ದರೆ ನೀರಿನ ರಭಸ ಕ್ಷಣದಲ್ಲಿ ನಾರಾಯಣನನ್ನು ತನ್ನ ತೆಕ್ಕೊಳಗೆ ಸೆಳೆದು ಅಷ್ಟು ದೂರಕ್ಕೆ ಕೊಂಡೊಯ್ದಾಗಿತ್ತು. ಮೇಲಿನ ಹಳ್ಳಿಗಳಿಂದ ಬರುತ್ತಿದ್ದ ಬಿದ್ದ ಮರಗಳ ತುಂಡುಗಳ ನಡುವೆ ನಾರಾಯಣ ತೇಲುತ್ತಾ ಹೋಗಿ ಕೊನೆಗೊಮ್ಮೆ ಕೈಯೆತ್ತಿ ಜೋರಾಗಿ ಕೂಗಿದ್ದಷ್ಟೇ ನೆನಪು. ‘ಹೋಗಿ ಬರುತ್ತೇನೆ ಮಕ್ಕಳೇ’ ಅನ್ನುವಂತೆ ಬೀಸಿದ ಕೈ ಊರಿನವರನ್ನು ಕಂಗೆಡಿಸಿತ್ತು. ಏನಂದನೋ…! ನಾರಾಯಣನ ದೇಹ, ಅಷ್ಟು ದೂರದ ಬಂಟ್ವಾಳದ ನೇತ್ರಾವತಿಯ ತೀರದಲ್ಲಿ ಹುಡುಕಿದರೂ ಸಿಗದೇ ಇಡೀ ನನ್ನೂರು ಆಘಾತಕ್ಕೊಳಗಾಗಿದ್ದು ಇನ್ನೂ ಹಸಿಯಾಗಿದೆ.

ಬೆಳಗಿನೊಂದಿಗೇ ಪ್ರವಾಹ ಇಳಿದು ಈ ನದಿ ಎಂಬ ಮಾಯಾಂಗನೆ ಏನೂ ಗೊತ್ತಿಲ್ಲದಂತೇ ಮತ್ತೆ ಮಂದಾಕಿನಿಯಂತೇ ಹರಿಯುತ್ತಿದ್ದಾಗ, ಕುತ್ತಿಗೆ ಪಟ್ಟಿ ಹಿಡಿದು ಕೇಳಬೇಕೆನಿಸುತ್ತಿತ್ತು. ‘ಹೇಳು ಎಲ್ಲಿ ಕಳಿಸಿದೆ ನಾರಾಯಣನನ್ನು, ಯಾಕೆ ಅಷ್ಟು ಸಜ್ಜನನನ್ನು ನುಂಗಿದೆ?’. ಪ್ರತಿವರ್ಷ ಚೌತಿಯ ಗಣಪನನ್ನು ಹೊಟ್ಟೆಗೆ ಸೇರಿಸಿಕೊಂಡವಳು ನಾರಾಯಣನನ್ನೂ ಹೊಟ್ಟೆಗೆ ಹಾಕಿಕೊಂಡಿದ್ದಳು. ಕಾಲ ಸರಿದು ಹೈಸ್ಕೂಲಿನ ಕೊನೆ ವರ್ಷದಲ್ಲಿ ಗೆಳತಿ ಸುಮನಾಳೊಂದಿಗೆ ಸಂಚಾರವೇ ಇಲ್ಲದಿದ್ದ ಮರದ ಸೇತುವೆಯ ಮೆಟ್ಟಿಲುಗಳ ಮೇಲೆ ಕೂತು ಕಂಬೈನ್ಡ್ ಸ್ಟಡಿ ಮಾಡುವಾಗ ಜುಳುಜುಳು ಹರಿಯುತ್ತಾ ನಮ್ಮ ಮನಸ್ಸಿಗೆ ನೆಮ್ಮದಿ ಕೊಡುವಂಥ ಸಂಗೀತ ಮೂಡಿಸುತ್ತಿದ್ದವಳೂ ಇವಳೇ, ಈ ಹೆಸರಿಲ್ಲದವಳು! ಬಂಡೆಗಲ್ಲುಗಳ ಮೇಲೆ ಕೂತು ಸುಮ್ಮನೇ ಅವಳ ಹರಿವು ನೋಡುತ್ತಾ ಕೂರುವ ಅಭ್ಯಾಸದ ನನಗೆ ಹೀಗೆ ಕ್ಷಣದಲ್ಲಿ ಬದಲಾಗುವ ಸ್ವರೂಪಗಳು ಅರ್ಥವೇ ಆಗದು. ಅಥವಾ ಈ ಬದಲಾವಣೆಯು, ಒಳಗಿಂದ ಮೂಡುತ್ತಿದ್ದುದರ ಕಂಪನಗಳನ್ನು ಗಮನಿಸುವಷ್ಟು ಸೂಕ್ಷ್ಮತೆಯನ್ನು ಬೇಕೂಂತಲೇ ಮರೆಯುತ್ತೆವೆಯೋ ಏನೋ! ಈ ಬದಲಾವಣೆಯ ಹೆಜ್ಜೆಗಳು ತುಂಬ ದಿನಗಳಿಂದ ನಡೆಯುತ್ತಿದ್ದು ನಾವು ಅದನ್ನು ಕಡೆಗಣಿಸಿ ಬಿಡುತ್ತೇವೆಯೊ! ಮಳೆ ಬರುವ ಮೊದಲೇ ಕಪ್ಪು ಮೋಡಗಳು ಢಾಳಾಗಿ ಗೋಚರಿಸುತ್ತವೆ… ಪ್ರತಿಯೊಂದರ ಅಂತ್ಯದ ಸೂಚನೆ ಮೊದಲೇ ಮಿಂಚಿರುತ್ತದೆ ಅಂದರೆ ಅದು ಸೂಚನೆಯನ್ನು ಮೊದಲೇ ಕೊಡುತ್ತದೆ. ಅದನ್ನು ಅರ್ಥೈಸುವ ಗೋಜಿಗೇ ಹೋಗದೇ ಏನೋ ಆತುರದಲ್ಲಿ ಇರುವಂತೇ ಓಡುತ್ತಿರುತ್ತೇವೆ.

rain series

ಸೌಜನ್ಯ : ಅಂತರ್ಜಾಲ

ಹೈಸ್ಕೂಲು ದಿನಗಳು. ಮನಸ್ಸು, ದೇಹ ಎಲ್ಲವೂ ಹಗುರವಾಗಿದ್ದ ದಿನಗಳವು. ಅಂಥದ್ದೇ ಮಳೆಗಾಲದ ದಿನಗಳ ಈ ನೆನಪು ಈಗಲೂ ನಗು ಮೂಡಿಸುತ್ತದೆ. ಸ್ವಲ್ಪ ಮಳೆ ಕಡಿಮೆಯಾದ ಹೊತ್ತಿನಲ್ಲಿ ಅಸೆಂಬ್ಲಿ ನಡೆಸುತ್ತಿದ್ದ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫ್ಲೇವಿಯಾ ಅವರು, ಮೂರ್ನಾಕು ಸಾಲುಗಳಲ್ಲಿ ಒಬ್ಬರ ಹಿಂದೆ ಒಬ್ಬರು ನಿಂತಿದ್ದ ಹುಡುಗಿಯರತ್ತ ನೋಡಿದರೆ ಹೆಚ್ಚಿನವರ ಯೂನಿಫಾರ್ಮಿನ ಸ್ಕರ್ಟ್ ಮಳೆಗೆ ಒದ್ದೆ. ಮಳೆಗಾಲದಲ್ಲಿ ಶಾಲೆಗೆ ಬರುವಾಗ ಒಂದು ಸ್ಕರ್ಟನ್ನು ಹೆಚ್ಚುವರಿಯಾಗಿ ತರಬೇಕೆಂದು, ಶಾಲೆಯ ಲೇಡಿಸ್ ರೂಮಿನಲ್ಲಿ ಒದ್ದೆಯಾದ ಬಟ್ಟೆ ಬದಲಾಯಿಸಿ ಬೆಚ್ಚಗಿನ ಸ್ಕರ್ಟನ್ನು ಧರಿಸಬೇಕೆನ್ನುವ ಆದೇಶ ನಮಗೆಲ್ಲ ಮೊದಲೇ ನೀಡಲಾಗಿತ್ತು. ಒದ್ದೆ ಬಟ್ಟೆಯಲ್ಲೇ ಕೂರುತ್ತಾ ಆಗೊಮ್ಮೆ ಈಗೊಮ್ಮೆ ಕೈಗಳನ್ನು ಒಂದಕ್ಕೊಂದು ಉಜ್ಜುತ್ತಾ ಬೆಚ್ಚಗಾಗಿಸುತ್ತಾ ದಿನ ಕಳೆಯುವ ನಮಗೆ ಸಿಸ್ಟರ್ ಫ್ಲೇವಿಯಾ ಅವರು ‘ಯಾರೆಲ್ಲ ಎಕ್ಸ್ಟ್ರಾ ಸ್ಕರ್ಟ್ ತಂದಿದ್ದೀರಿ. ಕೈಯೆತ್ತಿ’ ಎಂದು ಮೂಗಿನ ತುದಿಯಲ್ಲಿದ್ದ ಕನ್ನಡಕದಿಂದ ತೂರಿ ಬರುತ್ತಿದ್ದ ತಮ್ಮ ತೀಕ್ಷ್ಣ ಕಣ್ಣುಗಳಿಂದ ನೋಡುತ್ತಾ ಕೇಳಿದಾಗ ನಾವೆಲ್ಲ ಅಕ್ಕಪಕ್ಕದವರೊಂದಿಗೆ ಪಿಸುಮಾತಿನಲ್ಲಿ ‘ಯಾರು ತಂದಿರ‍್ತಾರೆ’ ಎನ್ನುವ ಉಡಾಫೆಯಿಂದ ಇರುತ್ತಿದ್ದೆವು.

ಹಿಂದೆ ಮುಂದೆ ನೋಡುತ್ತಾ ಯಾರೂ ತಂದಿಲ್ಲವೆನ್ನುವ ವಿಶ್ವಾಸದಿಂದ ನಿಂತಿದ್ದರೆ ಹಿಂದಿನಿಂದ ಒಂದೇ ಒಂದು ಕೈ ಮೇಲೆಕ್ಕೆತ್ತಿತ್ತು. ನಾವೆಲ್ಲರೂ ವಿಚಿತ್ರ ಪ್ರಾಣಿಯನ್ನು ನೋಡುವಂತೇ ಹಿಂತಿರುಗಿ ನೋಡಿದರೆ ಗೆಳತಿಯೊಬ್ಬಳು ಬೀಗುತ್ತಾ ನಿಂತಿರಬೇಕೆ! ನಮಗೆಲ್ಲ ನಿತ್ಯಾರ್ಚನೆ ಮುಗಿದ ಮೇಲೆ ‘ಹೊಂಗೇ ಕಾಮ್ಯಾಬ್ ಹಮ್ ಹೋಂಗೇ ಕಾಮ್ಯಾಬ್..’ ಹಾಡನ್ನು ಹಾಡುತ್ತಾ ಸರದಿಯಲ್ಲಿ ತರಗತಿಯೊಳಗೆ ಹೋಗುವಾಗಲು ನಮ್ಮ ಹೆಚ್ಚಿನವರ ಮನದಲ್ಲಿ ಒಂದು ಕ್ಷಣವೂ ಹೆಚ್ಚುವರಿ ಬಟ್ಟೆ ತರಬೇಕಿತ್ತು ಎನ್ನುವ ವಿಷಾದ ದೇವರಾಣೆಗೂ ಬಂದಿರಲಿಲ್ಲ. ಮತ್ತೆ ಮರುದಿನವೂ ಮಳೆ ಮುಂದುವರೆದು ಈ ಪ್ರಸಂಗ ಆಗೊಮ್ಮೆ ಈಗೊಮ್ಮೆ ಎದುರಾದರೂ ನಾವ್ಯಾರೂ ಬೆಚ್ಚಗಿನ ಬಟ್ಟೆಯ ಸುಳಿಗೆ ಸಿಗಲೇ ಇಲ್ಲ. ಒದ್ದೆ ಯುನಿಫಾರ್ಮ್ ನಂತರ ಮೈಬಿಸಿಗೆ ಸ್ವಲ್ಪ ಸ್ವಲ್ಪವೇ ಒಣಗುತ್ತಾ ಇನ್ನೇನು ಒಣಗಿತು ಎನ್ನುವಾಗ ಸಂಜೆ ಮತ್ತೆ ಮಳೆಗೆ ಒದ್ದೆಯಾಗುತ್ತಾ ಮನೆ ಸೇರುವ ನಮ್ಮ ಅಧ್ಯಾತ್ಮಿಕ ಯಾತ್ರೆಗೆ ಯಾವ ಆದೇಶವೂ ನಾಟದೇ ಹೋಗಿತ್ತು. ಏಕೆಂದರೆ, ಮಳೆ ನಮ್ಮ ಚರ್ಮದೊಳಕ್ಕೇ ಸೇರಿ ಹೋಗಿತ್ತು, ಮಳೆ ನಮ್ಮ ದಿನಗಳ, ಕ್ಷಣಕ್ಷಣಗಳ ನಿತ್ಯದ ಸಂಗಾತಿಯಾಗಿತ್ತು, ಒಂದು ರೀತಿಯಲ್ಲಿ ಮಳೆ ನಮ್ಮ ಧ್ಯಾನವೇ ಆಗಿತ್ತು.

ಮನಸ್ಸಿಗೇ ಆಯಾಸವಾಗುವಷ್ಟು ಮಳೆ ಸುರಿಯುವ ದಕ್ಷಿಣ ಕನ್ನಡದ ಊರು ನನ್ನದು. ‘ಬೊಡ್ದೊಯ್ತು ಈ ಸರ್ತಿ. ಎಂಥ ಮಳೆ ಇದು. ನಾ ಹುಟ್ಟಿದಾಗಿನಿಂದ ನೋಡ್ಲಿಲ್ಲ’ ಇದು ನಮ್ಮೂರಿನ ಪ್ರತೀ ವರ್ಷದ ಘೋಷ ವಾಕ್ಯ. ‘ಇಷ್ಟು ಕಟಕಟ ಬಿಸಿಲು ಇದುವರೆಗೂ ಇರಲಿಲ್ಲ ಮರ‍್ರೇ, ಈ ವರ್ಷದ್ದು ರೆಕಾರ್ಡ್ ಇರಬೇಕು. ಎಂತದಿದು ನೆತ್ತಿ ಸುಡ್ತದೆ, ಒಮ್ಮೆ ಮಳೆ ಶುರುವಾದ್ರೆ ಸಾಕಾಗಿದೆ’ ಇದೂ ಪ್ರತಿ ವರ್ಷದ ಮಾತೇ! ಹೀಗೆ ಬಿಸಿಲು ಮಳೆಗಳ ತೂಗುಯ್ಯಾಲೆಯ ನನ್ನೂರಿಗೆ ನಿಜಕ್ಕೂ ಬೇಸಿಗೆ ಮತ್ತು ಮಳೆಯ ಎರಡೇ ಕಾಲಗಳು. ಚಳಿಗಾಲ, ಅತಿಥಿಯಂತೆ ಡಿಸೆಂಬರಿನ ಸ್ವಲ್ಪ ದಿನಗಳು ಮತ್ತು ಜಾತ್ರೆಯ ಕೊಡಿಯೇರುವ ಜನವರಿಯ ಕೆಲವು ದಿನಗಳಲ್ಲಿ ಮಾತ್ರ . ಚುಮುಚುಮು ಬೆಳಗಿನಲ್ಲಿ ಈ ಚಳಿ ನಾಚಿಕೊಂಡು ಹೊದ್ದು ಮಲಗಿದ್ದ ನಮ್ಮನ್ನು ಹೂವಿನಂತೆ ನವಿರಾಗಿ ಮುಟ್ಟಿ ಆ ಕರಗಿಸುವ ಸ್ಪರ್ಶ ಇನ್ನೂ ಬೇಕಿತ್ತು ಎನ್ನುವಷ್ಟರಲ್ಲಿ ಜೊತೆಯಲ್ಲಿ ಬರುವ ತಂಗಾಳಿಯೊಂದಿಗೆ ಅಂತರ್ಧಾನವಾಗುತ್ತದೆ.

ಈಗ ಭಾರೀ ಚಳಿ, ಹಿತವಾದ ಚಳಿಯ ಬೆಂಗಳೂರಿನಲ್ಲಿ ಮಳೆಯಾದಾಗ, ಮಳೆ ತೊಟ್ಟಿಕ್ಕುವಾಗ, ತುರಿದ ಹಿಮದಂತೇ ಮಳೆ ತುಂತುರು ತುಂತುರಿನಲ್ಲಿ ಕಂಡಾಗ, ಜೋರಾಗಿ ಅಪ್ಪಳಿಸಿದಾಗೆಲ್ಲ ಮನಸ್ಸು ನನ್ನೂರಿನ ಮಳೆಯಲ್ಲೇ ತೊಯ್ಯಲಾರಂಭಿಸುತ್ತದೆ. ಕೆಂಪು ನೀರು ಸೇತುವೆ ಮೇಲೆ ಹರಿಯುವ ದೃಶ್ಯ ನೋಡಿದಾಗೆಲ್ಲ ಮತ್ತೆ ಯಾರಾದರು ನಾರಾಯಣರು ಕೈಯೆತ್ತಿ ಹೋಗಿ ಬರುತ್ತೇನೆ ಎನ್ನುತ್ತಾರೊ ಎನ್ನುವ ದಿಗಿಲು ಹುಟ್ಟುತ್ತದೆ. ಹೀಗೆ ಮಳೆ ಎಂದರೆ ದೈವಿಕವೂ ಸೂತಕವೂ ಹೌದು.

ಇದನ್ನೂ ಓದಿ : Rain : ಮಳೆ ಬಂತು ಮಳೆ ; ಅಲಲಲಲಾ ಎಂಥ ಆಟ ಅದೆಂಥ ಆವೇಶ ಈ ‘ಮನಬಂದ ರಾಯ’ನದು!

Published On - 5:26 pm, Sun, 8 August 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್