Vinayaka Krishna Gokak: ಗೋಕಾಕರ ಕಾದಂಬರಿ ಲೋಕ, ಪಾತ್ರಗಳ ಅಗಾಧ ಅನುಭವದ ಸಂತೆ

ಗೋಕಾಕರ ಕಾದಂಬರಿ ಪ್ರಯಾಣವೆಂದರೆ ಪಾತ್ರಗಳ ಅಗಾಧ ಅನುಭವದ ಸಂತೆ. ದುರಂತಗಳ ಬಗ್ಗೆ ತೆಗೆದುಕೊಳ್ಳಬಹುದಾದ ವ್ಯಾವಹಾರಿಕ ಎಚ್ಚರ. ಜೀವನದ ಅರ್ಥಪೂರ್ಣತೆಯೆಡೆಗಿನ ‘ಗಮನ’ಕ್ಕೆ ಮಾರ್ಗದರ್ಶನ. ತಮ್ಮ ರೂಪುಗೊಳ್ಳುವ ಕ್ರಿಯೆಯಲ್ಲಿ ಸಂವೇದನಾತ್ಮಕವಾಗುವ ಪಾತ್ರಗಳು ಗೋಕಾಕ್‍ರ ಅದ್ಭುತ, ಅನ್ಯಾದೃಶ ಪ್ರತಿಭೆಯನ್ನು ಬೆಳಗುತ್ತವೆ ಎಂಬುದು ಒಪ್ಪಬೇಕಾದ ಮಾತು.

Vinayaka Krishna Gokak: ಗೋಕಾಕರ ಕಾದಂಬರಿ ಲೋಕ, ಪಾತ್ರಗಳ ಅಗಾಧ ಅನುಭವದ ಸಂತೆ
ವಿ.ಕೃ.ಗೋಕಾಕ
Follow us
| Updated By: Skanda

Updated on:Aug 09, 2021 | 3:24 PM

ಭಾರತ ಸಿಂಧು ರಶ್ಮಿ ಎಂಬ ದೀರ್ಘ ಕಾವ್ಯಕ್ಕೆ ಕನ್ನಡಕ್ಕೆ ಐದನೇ ಜ್ಞಾನಪೀಠ ದೊರಕಿಸಿಕೊಟ್ಟ ವಿನಾಯಕ ಕೃಷ್ಣ ಗೋಕಾಕರದ್ದು ಅಪರೂಪದ ವ್ಯಕ್ತಿತ್ವ. ಅರವಿಂದ ಘೋಷ್​ ಅವರಿಂದ ಅಗಾಧ ಪ್ರಭಾವಕ್ಕೆ ಒಳಗಾಗಿದ್ದ ಗೋಕಾಕರ ಬದುಕಿನಂತೆ ಸಾಹಿತ್ಯ ಕೂಡ ಅಪರೂಪದ್ದು. ಗೋಕಾಕರ ಕಾದಂಬರಿ ಪ್ರಯಾಣವೆಂದರೆ ಪಾತ್ರಗಳ ಅಗಾಧ ಅನುಭವದ ಸಂತೆ. ದುರಂತಗಳ ಬಗ್ಗೆ ತೆಗೆದುಕೊಳ್ಳಬಹುದಾದ ವ್ಯಾವಹಾರಿಕ ಎಚ್ಚರ. ಜೀವನದ ಅರ್ಥಪೂರ್ಣತೆಯೆಡೆಗಿನ ‘ಗಮನ’ಕ್ಕೆ ಮಾರ್ಗದರ್ಶನ. ತಮ್ಮ ರೂಪುಗೊಳ್ಳುವ ಕ್ರಿಯೆಯಲ್ಲಿ ಸಂವೇದನಾತ್ಮಕವಾಗುವ ಪಾತ್ರಗಳು ಗೋಕಾಕರ ಅದ್ಭುತ. ಇಂದು ಅವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಅವರ ಕಾದಂಬರಿಗಳ ಮತ್ತು ಸಾಹಿತ್ಯ ಲೋಕದ ಬಗ್ಗೆ ವಿಶೇಷ ಲೇಖನ ಇಲ್ಲಿದೆ. ಈ ಲೇಖನ ಮಾಲೆಯ ಮೊದಲ ಭಾಗದಲ್ಲಿ ಗೋಕಾಕ (Vinayak Krishna Gokak) ಬರೆದ ಕೆಲವು ಕೃತಿಗಳ ಬಗ್ಗೆ ಚರ್ಚಿಸಿದ್ದೆವು.ಈಗ ಇನ್ನು ಕೆಲವು ಕೃತಿಗಳ ಬಗ್ಗೆ ನೋಡೋಣ.

ಪ್ರಸ್ತುತ ಪಡಿಸಿದವರು: ಸಂಧ್ಯಾ‌ಹೆಗಡೆ ದೊಡ್ಡಹೊಂಡ, ಪ್ರಾಧ್ಯಾಪಕರು, ಕನ್ನಡ ವಿಭಾಗ ಎಮ್​ಎಂ‌ಕೆ‌ಆರ್‌ವಿ ಮಹಿಳಾ‌ ಕಾಲೇಜು‌ ಜಯನಗರ‌, ಬೆಂಗಳೂರು‌

‘ನಿರ್ವಹಣ’ ಇನ್ನೊಂದು ಕಾದಂಬರಿ. ಸಮುದ್ರಯಾನದ ಮುಂದುವರೆದ ಭಾಗವಿದು. ‘ನಿರ್ವಹಣೆ’ ಯಾರ್ಯಾರ ಜೀವನದಲ್ಲಿ ಏನೇನು ಬದಲಾವಣೆ ತರುವುದೋ ತರಬಲ್ಲದ್ದಾಗಿತ್ತು. ಈ ಹಂತದಲ್ಲಿ ಅನೇಕ ವಿದೇಶೀ ಜನರ ಪಾತ್ರಗಳನ್ನು ತರುತ್ತಾರೆ ಗೋಕಾಕ್. ಎಮರ್ಸನ್, ಆ್ಯಲಿಸ್‍ ಮುಂತಾದ ಪಾತ್ರಗಳು ತಮ್ಮ ಜೀವಿತಾವಧಿಯ ತನಕವೂ ತಮ್ಮ ವ್ಯಕ್ತಿತ್ವವನ್ನು ಮಾಧುರ್ಯವಾಗಿಯೇ ಕಾಪಿಟುಕೊಳ್ಳುತ್ತವೆ. ಕೆಲವು ಪಾತ್ರಗಳು ತಮ್ಮ ಪಥವನ್ನೂ, ವ್ಯಕ್ತಿತ್ವವನ್ನೂ ಕಳೆದುಕೊಳ್ಳುತ್ತವೆ. ಕೆಲವು ಸಾಯುತ್ತವೆ. ಕೆಲವು ಹೊಸದಾಗಿ ಉದಯಿಸುತ್ತವೆ. ಇಂಗ್ಲೆಂಡಿನ ಜನರ ಪ್ರತಿನಿಧಿಗಳಾಗಿ ಹಲವು ಪಾತ್ರಗಳು ತಮ್ಮ ಅಭಿವ್ಯಕ್ತಿಯನ್ನು ಪಡೆಯುತ್ತವೆ. ಶೀನು, ಪಂಡಿತ್, ಕಾಮತ್, ನಿಯೋಗಿಯಂತಹ ಭಾರತೀಯ ವಿದ್ಯಾರ್ಥಿಗಳು ಅವರವರ ಸಂಸ್ಕಾರಕ್ಕನುಸಾರವಾಗಿ ತಮ್ಮ ಅಂತಃಸತ್ವವನ್ನು ಪ್ರದರ್ಶಿಸುವ ಸನ್ನಿವೇಶಗಳು ಒದಗಿ ಬರುತ್ತವೆ.

ಗೋಕಾಕರಿಗೆ ಒಂದು ಪಾತ್ರವನ್ನು ತಾವೇಕೆ ಸೃಷ್ಟಿಸುತ್ತಿದ್ದೇನೆ ಎಂಬ ಅರಿವು ಚೆನ್ನಾಗಿದೆ. ಪ್ರತಿ ಪಾತ್ರಕ್ಕೂ ಒಂದು ಮೂಲ ಸ್ವಭಾವ ಅನ್ನೋದು ಇದೆ. ಮತ್ತು ಮನುಷ್ಯನ ಆ ಮೂಲ ಸ್ವಭಾವ ಯಾವ ಯಾವ ಸನ್ನಿವೇಶಗಳಲ್ಲಿ ಹೇಗೆ ಪ್ರತಿಕ್ರಿಯೆ ತೋರಬಲ್ಲುದು? ಹೇಗೆ ವರ್ತಿಸಬಲ್ಲದು ಎಂಬ ಸೂಕ್ಷ್ಮ ಅನುಭವ ಜ್ಞಾನ ಗೋಕಾಕ್‍ರ ಕಾದಂಬರಿ ಸೃಷ್ಟಿಯ ಬಹುದೊಡ್ಡ ಶಕ್ತಿ. ಅವರ ಐದೂ ಕಾದಂಬರಿಗಳಲ್ಲಿನ ಪಾತ್ರಗಳು ಕರಾರುವಕ್ಕಾಗಿ ಹೀಗೆ ವರ್ತಿಸುತ್ತವೆ, ಹೀಗೆ ವರ್ತಿಸಬೇಕು ಎಂದು ಅವರು ಅಂದುಕೊಂಡಂತೆ ಪಾತ್ರ ಪೋಷಣೆ ಸಾಗಿದೆ. ಗೋಕಾಕ್‍ರು ಮನುಷ್ಯ ವರ್ತನೆಗಳ ಹಾಗೂ ಸನ್ನಿವೇಶಗಳ ಅತಿಸೂಕ್ಷ್ಮ ಜ್ಞಾನ ಉಳ್ಳವರು ಎಂಬ ಮಾತನ್ನು ಕಾದಂಬರಿಯನ್ನೋದಿದ ಯಾರೇ ಆದರೂ ಅಂದುಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ ಶೀನು, ವಿಷ್ಣು, ನರಹರಿಯರನ್ನೇ ತೆಗೆದುಕೊಳ್ಳೋಣ. ಮೂರೂ ಜನ ಒಂದೇ ಮನಸ್ಸಿನವರು. ಮೂರೂ ಜನರಿಗೆ ವಿದ್ಯಾಭ್ಯಾಸ ಮಾಡುವ ಅವಕಾಶ ಸಿಕ್ಕಿದೆ. ಮೂರೂ ಜನ ಉತ್ತಮ ಸಂಸ್ಕಾರ ಹೊಂದಿದ ಮನಸ್ಸುಳ್ಳವರು! ಆದರೆ ಅವರ ಸ್ವಭಾವಗಳು ಬೇರೆ. ಶೀನು- ಜೀವನವನ್ನು ಲವಲವಿಕೆಯಿಂದ ಅನುಭವಿಸಬೇಕೆಂಬ ಆಕಾಂಕ್ಷೆ ಉಳ್ಳವನು. ಆದರೆ ದೇಶಭಕ್ತಿಯ ವಿಷಯದಲ್ಲಿ ನರಹರಿಯಷ್ಟು ಗಟ್ಟಿತನವಾಗಲೀ, ಧಾರಣಾ ಸಾಮರ್ಥ್ಯವಾಗಲೀ ಶೀನುವಿನಲ್ಲಿಲ್ಲ. ವಿಷ್ಣು ಓದಿನ ವಿಷಯದಲ್ಲಿ ನರಹರಿಗೆ ಹೆಚ್ಚು- ಕಡಿಮೆ ಸರಿಸಮಾನ. ಸಂಯಮಿ. ಬದುಕನ್ನು ಸ್ವೀಕರಿಸುವ ವಿಷಯದಲ್ಲಿ ವಿಷ್ಣು, ನರಹರಿ ಇಬ್ಬರದೂ ಮೆಚ್ಚಿಕೊಳ್ಳುವ ಗುಣವೇ ಆದರೂ ನರಹರಿಯ ಆದರ್ಶದ ಭಾವೋದ್ರೇಕ ವಿಷ್ಣುವಿಗಿಲ್ಲ. ನರಹರಿ ಈ ಎಲ್ಲ ಜನರಿಗಿಂತ ತಾನು ಒಂದು ಹೆಜ್ಜೆ ಮುಂದೆ ನಿಲ್ಲುತ್ತಾನೆ. ಬದುಕಿನ ಏರಿಳಿತಗಳೂ ಕೂಡಾ ಒಬ್ಬರಿಂದ ಒಬ್ಬರಿಗೆ ಭಿನ್ನ. ಹೆಚ್ಚು ಕಷ್ಟ ಉಂಡವನು ನರಹರಿ. ಹೆಚ್ಚು ಪರಿತಾಪವೂ ಅವನಿಗೇ, ಅವನ ದಾರಿ ಉಳಿದವರಷ್ಟು ಸುಗಮವಲ್ಲ. ಮನಸ್ಸೂ ಹಾಗೇ. ಎಲ್ಲರಿಗಿಂತ ಆತ ತ್ಯಾಗಿ, ಆದರ್ಶಗಳ ಮೂರ್ತಿ. ಮನಸ್ಸು ಹೇಗೆ ಹೇಳುತ್ತೋ ಪ್ರಾಮಾಣಿಕವಾಗಿ ಹಾಗೇ ಕೇಳುವವನು. ಸ್ವಾತಂತ್ರ್ಯ ಹೋರಾಟದ ಕೂಗಿಗೆ ತನ್ನನ್ನು ಕೊಟ್ಟುಕೊಂಡವನು ನರಹರಿ. ಆ ಕಾರಣಕ್ಕಾಗಿಯೇ ಅವನು, ಜೈಲು ಸೇರುವ ಪ್ರಸಂಗ ಕೂಡಾ ಬರುತ್ತದೆ. ಅಂತೆಯೇ ನರಹರಿಯ ಪಾತ್ರಕ್ಕಿರುವಷ್ಟು ಸ್ವಭಾವ ಸೂಕ್ಷ್ಮತೆಗಳಾಗಲಿ; ವಿಸ್ತಾರ, ಬಾಹುಳ್ಯಗಳಾಗಲೀ, ಅಭಿಮಾನ ಅಂತಃಸತ್ವಗಳಾಗಲೀ, ಇತರ ಪಾತ್ರಗಳಿಗಿಲ್ಲ. ಈ ಜೀವನ ಉತ್ತಮ ಗುಣಗಳ ಮೇಲೆ ಕಟ್ಟುವ ಮಹಾಸೌಧ ಎಂದುಕೊಳ್ಳುವುದಾದರೆ ಅದಕ್ಕೆ ಯಜಮಾನ ನರಹರಿಯಾಗುತ್ತಾನೆ. ಹಾಗಾಗಿಯೇ ಐದೂ ಕಾದಂಬರಿಗಳಲ್ಲಿ ಅವನ ಪಾತ್ರ ಪೋಷಣೆ ಅನುಪಮವಾಗಿ ಸಾಗಿದೆ.

ಗೋಕಾಕರು ‘ನಿರ್ವಹಣ’ದಲ್ಲಿ ಪ್ರಾಸಂಗಿಕವಾಗಿ ಈ ಮೂವರ ಬಗ್ಗೆ ಮಾತನಾಡುತ್ತಾರೆ. “ರಸಿಕತೆ- ಬುದ್ಧಿವಂತಿಕೆಗಳಿದ್ದ ಶೀನೂನಲ್ಲಿ ಒಂದು ಆದರ್ಶದ ಪ್ರೇರಕ ಇಲ್ಲವೆ ನಿರ್ಮಾಣಶಕ್ತಿಯಿರಲಿಲ್ಲ. ಕವಿಯೂ, ಕಾರ್ಯೋತ್ಸಾಹಿಯೂ ಆದ ವಿಷ್ಣು ಕಾವ್ಯ ಕಾರ್ಯೋತ್ಸಾಹಗಳ ನಡುವೆ ಹೊಯ್ದಾಡುತ್ತಿದ್ದ.. ಕಾವ್ಯದ ಅಗಾಧ ಆಳವನ್ನು ಕಾರ್ಯಕ್ಷಮತೆಯ ಅಪೂರ್ವ ವಿಸ್ತಾರವನ್ನು ಕೂಡಿಯೇ ಸಾಧಿಸಲು ನರಹರಿಯು ಹವಣಿಸುತ್ತಿದ್ದ’ʼ (ಪುಟ- 448) ಈ ಕಾರಣಕ್ಕಾಗಿ ನರಹರಿಯಲ್ಲಿ ಒಬ್ಬ ಮನುಷ್ಯ ಆಂತರಂಗಿಕ ಹಾಗೂ ಸಾಮಾಜಿಕವಾಗಿ ಸಾಧಿಸಬಹುದಾದ ಸಾಧನೆಗಳನ್ನು ಸೂಚಿಸುವ ಅದ್ಭುತ ಶಕ್ತಿ ಗೋಚರವಾಗುತ್ತದೆ. ಮತ್ತು ಇದೇ ಸಫಲ ಜೀವನದ ಸಂಕೇತವಾಗುತ್ತದೆ. ನರಹರಿ ಆ ಸಫಲತೆಯನ್ನು ಸಾರುವ ಅಂತಃಸತ್ತ್ವದ ಧ್ವನಿಯಾಗುತ್ತಾನೆ. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋದ ನರಹರಿಯಲ್ಲಿ ಜೊತೆಯಾದ ಅಂಬಾದಾಸನ ಕಾರಣಕ್ಕೆ ಇನ್ನಷ್ಟು ಸೂಕ್ಷ್ಮಗಳು ದಕ್ಕುತ್ತಾ ಸಾಗುತ್ತವೆ.

ನಿರ್ವಹಣ ಕಾದಂಬರಿ ಪಾಶ್ಚಿಮಾತ್ಯ ಮತ್ತು ಪೌರಾತ್ಯ ಸಂಸ್ಕೃತಿಗಳೆರಡರ ಅಂತಃಸ್ಸತ್ವವನ್ನು ಪಾತ್ರಗಳ ಪೋಷಣೆಯಲ್ಲಿ ಮತ್ತು ಸನ್ನಿವೇಶಗಳಲ್ಲಿ ಮುಖಾಮುಖಿಯಾಗಿಸುತ್ತದೆ. ವಿಷ್ಣುವಿನ ವಿಲಾಯಿತಿ ಜೀವನದ ಅನೇಕ ಸನ್ನಿವೇಶಗಳನ್ನು ಚಿತ್ರಿಸುವಾಗ ಇದನ್ನು ದಾಖಲಿಸುತ್ತಾರೆ ಗೋಕಾಕ್. ಭಾರತೀಯತೆಯ ಆಂತರಿಕ ಶಕ್ತಿಯನ್ನು ನರಹರಿ, ಸ್ವಾಮಿದಾಸರು, ಕುಸುಮಾ, ದೇಸಾಯರ ವ್ಯಕ್ತಿತ್ವಗಳಲ್ಲಿ; ಅವರ ಜೀವನದ ಗೊಂದಲಗಳಲ್ಲಿ; ಕಷ್ಟವಾದರೂ ಅದನ್ನು ಮೆಟ್ಟಿ ನಿಂತು ತಮ್ಮ ಆತ್ಮವನ್ನು ಬೆಳಗಿಕೊಳ್ಳುವ ಅವರ ಕ್ರಿಯಾಶೀಲತೆಯಲ್ಲಿ; ಸಂಯಮಪೂರ್ಣವಾದ ಧಾರಣಾಸಾಮರ್ಥ್ಯದಲ್ಲಿ, ಅಭೂತಪೂರ್ವವಾದ, ಭೋಗವನ್ನು ಮೀರಿದ ಬೆಳಕಿನ ಹುಡುಕಾಟದ ಧ್ಯಾನದಲ್ಲಿ ಚಿತ್ರಿಸುತ್ತಾರೆ ಗೋಕಾಕ್. ಜೈಲು ಸೇರಿ ಅಲ್ಲಿಯ ನಾಯಿಗೂಳನ್ನು ತಿನ್ನುವಾಗ, ಅಲ್ಲಿಯ ಮುಗಿಲೆತ್ತರದ ಗೋಡೆಯನ್ನು, ಅದರಡಿಯ ಕತ್ತಲು ಮತ್ತು ಏಕಾಂತವನ್ನು ಸಂಕಟದ ಸ್ಥಿತಿಯನ್ನು ಅನುಭವಿಸುವಾಗ ಎಂತಹ ಕಲ್ಲೆದೆಯವನೂ ತಾನು ಮಾಡಿದ್ದು, ಮೂರ್ಖತನದ ಕೆಲಸವಾಯಿತೇನೋ ಎಂದು ಹಪಹಪಿಸುವಾಗ ನರಹರಿಗೂ ಆತ್ಮಹತ್ಯೆಯ ವಿಚಾರ ಬಂತು. ಅವನ ಜೀವನದ ಎಲ್ಲ ವಿಲಕ್ಷಣ ಸಂದರ್ಭಗಳಲ್ಲಿ ಅವನ ತಾಯಿಯ ವಿಶಿಷ್ಟ ಮಂಜಿನಂತಹ ರೂಪು ಅವನನ್ನು ಬದುಕಿಸಿತ್ತು. ಈಗಲೂ ಹಾಗೇ ಆಯಿತು. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ವಿಚಾರ ಮನಸ್ಸಿಗೆ ಬರುತ್ತಿದ್ದಂತೆ ತಾಯಿಯ ಆಶೀರ್ವಾದ ಪೂರ್ವಕ ಮುಗುಳ್ನಗೆ ಅವನನ್ನು ಆ ವಿಚಾರದಿಂದ ಹಿಂದೆ ಸರಿಯುವಂತೆ ಮಾಡಿತು. ಈ ತರದ ಸನ್ನಿವೇಶಗಳನ್ನು ಗೋಕಾಕ್‍ರು ಅನೇಕ ಸಲ ನಮ್ಮ ಮುಂದಿಡುತ್ತಾರೆ. ಮನುಷ್ಯನಿಗೆ ಮೀರಿದ ಶಕ್ತಿಯೊಂದರ ಉಪಾಸನೆ ಮನುಷ್ಯನನ್ನು ಯಾವ ಎತ್ತರಕ್ಕೆ ಏರಿಸಬಲ್ಲುದು ಮತ್ತು ಬದುಕಿಗೆ ಯಾವೆಲ್ಲ ಸೂಕ್ಷ್ಮ ಒಳನೋಟಗಳನ್ನು ಕೊಡಬಲ್ಲುದು ಎಂಬುದನ್ನು ನರಹರಿಯ ಬದುಕಿನ ಘಟನೆಗಳ ಮೂಲಕ ಸಾದರಪಡಿಸುತ್ತಾ ಸಾಗುತ್ತಾರೆ. ನರಹರಿಗೆ ಜೈಲು ತನ್ನ ಜೀವನ ಪಥದ ಆಂತರಿಕ ಹಾಗೂ ಬಾಹ್ಯ ಹೋರಾಟವಾಗುತ್ತದೆ. ತಾನು ತೆಗೆದುಕೊಳ್ಳಬೇಕಾದ ನಿರ್ಧಾರದ ವ್ರತವಾಗುತ್ತದೆ. ಬುದ್ಧಿ- ಭಾವಗಳ ಪಕ್ವತೆಯ ದಾರಿಯಾಗುತ್ತದೆ. ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವ, ಜೊತೆಗೆ ವಿಸ್ತರಿಸಿಕೊಳ್ಳುವ ಸಾಧನವಾಗುತ್ತದೆ. ನರಹರಿ ಜೈಲಿನಲ್ಲಿ ಒಂಭತ್ತು ಸೂತ್ರಗಳನ್ನು ಉಪಾಸಿಸುತ್ತಾನೆ. ಅದು ಬುದ್ಧಿಯಿಂದಲೂ, ಭಾವದಿಂದಲೂ ಎಲ್ಲರೂ ಸ್ವೀಕರಿಸಬಹುದಾದ, ಸ್ವೀಕರಿಸಬೇಕಾದ, ಸ್ವೀಕರಿಸಿದರೆ ಔನ್ನಾತ್ಯಕ್ಕೆ ಏರಬಹುದಾದ ವಿಚಾರ ಪ್ರವಾಹ. ಈ ಸೂತ್ರದ ಮೂಲಕವೇ ನರಹರಿ ತನ್ನ ಅಂತರಂಗ ವಿಕಾಸದ ಒಂದೊಂದು ಮೆಟ್ಟಿಲುಗಳನ್ನು ಏರುತ್ತಾ ಸಾಗುತ್ತಾನೆ. ಬೇರೆಯದೇ ರೀತಿಯ ಅಧ್ಯಾತ್ಮದ ಅನುಭವ ಅವನಿಗಾಗುತ್ತದೆ. ಜೈಲಿನಲ್ಲಿ ಅವನ ಅಂತರಂಗದ ವಿಕಾಸವಾಗುತ್ತದೆ.

ಜಾನಕಿಬಾಯಿ ಹಾಗೂ ದೇಸಾಯರ ಸಾವು, ತಾನು ಮದುವೆಯಾದ ಹೊಸ ಹೆಂಡತಿ ಆ್ಯಲಿಸ್‍ಳ ಹಾಗೂ ಮಗು ಅರುಣನ ಜೊತೆಗೆ ಶೀನುವಿನ ಭಾರತ ಪ್ರಯಾಣ, ಶೀನುವಿನ ಮೊದನೆಯ ಹೆಂಡತಿ ಸುಶೀಲಾಬಾಯಿಯ ಸಾವು, ವಿಷ್ಣುವಿನ ಭ್ರಮನಿರಸನ, ಪ್ರಮಿಳೆಯ ಪ್ರಾಮಾಣಿಕ ನಡವಳಿಕೆ- ಇವೆಲ್ಲವೂ ನಿರ್ವಹಣ ಕಾದಂಬರಿಯಲ್ಲಿ ತೀವ್ರವಾಗಿ ಮನಸ್ಸಿಗೆ ತಟ್ಟುತ್ತವೆ. ಮೊದಲಿನಿಂದ ಬೆಳೆದು ಬಂದ ಪಾತ್ರಗಳೆಲ್ಲ ಈ ಕಾದಂಬರಿಯಲ್ಲಿ ಒಂದು ನಿರ್ಣಾಯಕ ಹಂತ ಮುಟ್ಟುತ್ತವೆ. ಪಾಶ್ಚಾತ್ಯ ಸಂಸ್ಕೃತಿಯ ಕ್ರಿಯಾಶೀಲತೆಯನ್ನೂ, ಆಳ ಮತ್ತು ಸೂಕ್ಷ್ಮತೆಯ ಕೊರತೆಯನ್ನೂ ಸಮಾನವಾಗಿ ಚಿತ್ರಿಸುವ ಪಾತ್ರಗಳು ಅದರ ಮೋಹಕ್ಕೆ ಸಿಲುಕುವ ಭಾರತೀಯ ತರುಣ- ತರುಣಿಯರನ್ನು ಪ್ರತಿನಿಧಿಸುತ್ತವೆ. ನರಹರಿಯಂತವರು ಸಾಮಾಜಿಕವಾಗಿ ಹೋರಾಟದ ಹಾದಿ ತುಳಿದರೂ ಅಂತರಂಗದ ವಿಕಾಸಕ್ಕೂ ಮುಂದಾಗುವುದು ಬಹುದೊಡ್ಡ ಸಮಾಧಾನದ ಸಂಗತಿಯಾಗುತ್ತದೆ.

ಸುಶೀಲೆ! ಶೀನುವಿನ ಮೊದಲ ಹೆಂಡತಿ. ಶೀನುವಿನ ಪ್ರೇಮವನ್ನೆಲ್ಲ ಸೂರೆಗೊಂಡ ಶಾಂತಿಯ ಪುತ್ಥಳಿ. ಈಗ ಅವನ ಸ್ಮೃತಿಪಟಲದಿಂದ ಮರೆಯಾಗಿ ಹೋಗಿ ಕ್ಷಯರೋಗ ಪೀಡಿತಳಾದವಳು! ಸಾಯುವ ಕೊನೆಯಲ್ಲಿ ಶೀನೂವನ್ನು ಅವನ ಎರಡನೆಯ ವಿದೇಶೀ ಹೆಂಡತಿ ಆ್ಯಲಿಸ್‍ಳನ್ನು ಕಣ್ತುಂಬ ನೋಡಿ ಅವನನ್ನು ಕ್ಷಮಿಸುವ ಅನಂತ ಔದಾರ್ಯ ತೋರಿದವಳು. ಆ ಮೂಲಕ ತನ್ನ ಉಜ್ವಲ ವ್ಯಕ್ತಿತ್ವದ ಕಾಂತಿಯಿಂದ ಶೀನೂವಿನ ಹೃದಯದಲ್ಲಿ ಧ್ರುವ ತಾರೆಯಾಗಿ, ಬೆಳಕಾಗಿ ಬೆಳಗುತ್ತಿರುವಳು! ಅನಂತ ಕ್ಷಮಾಶೀಲತೆ ಮತ್ತು ಸಾಮಾನ್ಯ ಮನುಷ್ಯರಾರೂ ಅನುಭವಿಸಲಾಗದ ಅನುಮಪವಾದ ಶಾಂತಿ ಇವಳ ವ್ಯಕ್ತಿತ್ವದ ಹಿರಿಮೆ! ಅವಳ ಸಾವು ಅದೆಷ್ಟು ಶಾಂತವಾಗಿತ್ತು! ಗೋಕಾಕ್ ರು ಭಾರತೀಯ ಮಹಿಳೆಯ ಕ್ಷಮಾಗುಣವನ್ನೆಲ್ಲ ಸುಶೀಲೆಯಲ್ಲಿ ಸಾರವತ್ತಾಗಿ ನಿರೂಪಿಸಿದ್ದಾರೆ.

ಸ್ವಾಮಿದಾಸರ ತಪಸ್ಸಿನ ಹಿರಿಮೆಯೆಲ್ಲ ಇಡೀ ‘ನಿರ್ವಹಣ’ ಕಾದಂಬರಿಯನ್ನು ಆವರಿಸಿಬಿಟ್ಟಿದೆ. ಜೈಲಿಗೆ ಹೋದ ನರಹರಿಯ ಹೃದಯದೇವತೆ ಕುಸುಮಾಳನ್ನು ಅಂತಃಕರಣದಿಂದ ನೋಡಿಕೊಂಡವರು ಸ್ವಾಮಿದಾಸರು! ಅವರ ಪಾಲಿಗೆ ಕುಸುಮಾ ಲಲಿತಾಂಬಿಕೆಯ ಪ್ರತಿರೂಪ. ಕುಸುಮಾಳಿಗೆ ಸ್ವಾಮಿದಾಸರು ಸಾಕ್ಷಾತ್ ದೈವಸ್ವರೂಪಿ! ಸ್ವಾಮಿದಾಸರ ಹಿರಿಮೆ ಯಾರ್ಯಾರ ದಾರಿಗೆ ಬೆಳಕಾಯಿತು! ನರಹರಿಯ ವ್ಯಕ್ತಿತ್ವದ ಸಿದ್ಧಿ ಸ್ವಾಮಿದಾಸರು ತೋರಿದ ಅಂತರ್ಜ್ಞಾನದಲ್ಲಿತ್ತು. ಅವರು ನೀಡಿದ ಬೆಳಕಿನಿಂದ ವಿಷ್ಣು ತನ್ನ ಭ್ರಾಮಕತೆಯನ್ನು ಕಳೆದುಕೊಂಡ. ಶೀನು ತನ್ನ ಪ್ರಾಪಂಚಿಕತೆಗೆ ಹೊಸ ಸಿದ್ಧಿಯ ಪಥವನ್ನು ಕಂಡುಕೊಂಡ. ಮೊದಲೇ ತನಗಿದ್ದ ಅಮೋಘ ವ್ಯಕ್ತಿತ್ವದ ಅಂತರ್ಶಿಸ್ತನ್ನು ಇವರ ಸಾಮೀಪ್ಯದಲ್ಲಿ ಸಾಣೆ ಹಿಡಿದು ತಪಸ್ವಿನಿಯಾದಳು ಕುಸುಮಾ. ಸ್ವಾಮಿದಾಸರ ಪಾತ್ರವೆಂದರೆ ಗೋಕಾಕರು ಚಿತ್ರಿಸಿದ ಭಾರತೀಯ ಅಂತಃಸ್ಸತ್ವ. ಯಾವ ಋಷಿಮುನಿಗಳು ಸ್ವತಃ ಆಚರಿಸಿ ಕಂಡುಕೊಂಡರೋ ಯಾವ ಉಪನಿಷತ್ತುಗಳು ಒಂದು ಅನುಭವ ಕೇಂದ್ರವನ್ನು ದಾಖಲಿಸಿದವೋ ಅಂತಹ ಅನುಭವವನ್ನು ಬದುಕಿ ತೋರಿದ ಸಂತ! ಸ್ವಾಮಿದಾಸರ ಅಂತ್ಯವನ್ನು ಚಿತ್ರಿಸುವಾಗ ಗೋಕಾಕ್‍ರು ಬರೆಯುತ್ತಾರೆ- “ಭಾರತದ ಪ್ರಜ್ಞೆಯೇ ಅವರಲ್ಲಿ ಮೂರ್ತಿವಂತವಾಗಿತ್ತು. ಕನ್ಯಾಕುಮಾರಿಯೇ ಅವರ ಪಾದಗಳಾಗಿ ಹಿಮಾಲಯವೇ ಅವರ ಉತ್ತಮಾಂಗವಾಗಿತ್ತು. ಅವರ ಕೂದಲುಗಳಿಂದ ಭಾಗೀರಥಿಯು ಹರಿಯುತ್ತಿದ್ದಳು. ಅವರ ಮಸ್ತಕದಿಂದ ಬ್ರಹ್ಮಪುತ್ರಾ ಹಾಗೂ ಸಿಂಧೂ ನದಿಗಳು ಉಗಮಿಸಿದ್ದವು. ಆಕಾಶದ ತುಂಬೆಲ್ಲ ಅವರ ದೃಷ್ಟಿಯು ಆಡುತ್ತಿತ್ತು. ಅವರ ಪ್ರೇಮವೇ ವಿಶ್ವವ್ಯಾಪಿಯಾಗಿತ್ತು. ಅವರ ಆತ್ಮವೇ ಎಲ್ಲರ ಅಂತರಾತ್ಮವಾಗಿತ್ತು. ಅವರ ಕ್ರಿಯೆಗಳೇ ಭಾರತದ ಕ್ರಿಯೆಗಳಾಗಿದ್ದವು… ವಿಶ್ವಾತ್ಮದೊಡನೆ ಒಂದಾದ ಅವರ ಮಹಾಪ್ರಜ್ಞೆಗೆ ಅವರ ದೇಹವು ಬರಿ ಒಂದು ವಾಹನವಾಗಿತ್ತು…….” (ಪುಟ- 628) ಗಂಗೋತ್ರಿಯ ಪ್ರವಾಹದಲ್ಲಿ ಗೌರಿಕುಂಡದಲ್ಲಿ ಅವರ ದೇಹ ಜೀವನ್ಮುಕ್ತವಾಗಿತ್ತು! ಇವರ ಪಾತ್ರ ಪೋಷಣೆ ಯಾವ ಋಷಿಗೂ ಕಡಿಮೆಯಿಲ್ಲದಂತೆ ಅನ್ಯಾದೃಶವಾಗಿ ಸಾಗಿದೆ. ಭಾರತದ ತಪಸ್ಸಿನ ಸಾರವತ್ತಾದ ಭಾಗದ ಪ್ರತಿನಿಧಿಯಾಗುತ್ತಾರೆ ಸ್ವಾಮಿದಾಸರು.

ಪದ್ಮಾವತಿ- ಸುಶೀಲಾ- ಕುಸುಮಾ! ಎಂತಹ ಅದ್ಭುತ ಸ್ತ್ರೀ ಪಾತ್ರಗಳನ್ನು ಕಟೆದಿದ್ದಾರೆ ಗೋಕಾಕ್. ಒಂದಕ್ಕಿಂತ ಒಂದು, ಒಂದಕ್ಕಿಂತ ಒಂದು ಸತ್ವಶಾಲೀ ಸ್ತ್ರೀಪಾತ್ರಗಳು! ಇವನ್ನು ಓದುವುದೇ ಒಂದು ಆನಂದ. ಸಹೃದಯನ ಅನುಪಮ ಶಾಂತಿಯನ್ನು ಹೆಚ್ಚಿಸುವ ಹಿಗ್ಗುಗಳಿವು. ‘ಮನಸ್ಸನ್ನು ಕೆರಳಿಸುವುದಲ್ಲ, ಅರಳಿಸುವುದು- ಕಲೆ’ ಎಂದು ತಿಳಿಯಬಹುದಾದರೆ ಅಂತಹ ಸುಕೋಮಲ ಶಾಂತಿಯನ್ನು ಮನಸ್ಸಿನಲ್ಲಿ ತುಂಬಿ ಅದನ್ನು ಅರಳಿಸುವ ಕೆಲಸವನ್ನು ಮಾಡುತ್ತವೆ, ಈ ಸ್ತ್ರೀಪಾತ್ರಗಳು. ಈ ಪಾತ್ರಗಳ ಮೂಲಕ ಗೋಕಾಕ್‍ರು ಕಾದಂಬರಿಗಳಲ್ಲಿ ತಮ್ಮ ಅದ್ಭುತ ವಿಜಯವನ್ನು ಸಾಧಿಸಿ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಾರೆ.

ಪ್ರಮೀಲೆಯಂತಹ ಉನ್ಮತ್ತ ಪಾತ್ರಗಳೂ ಸಹಜ ಶಾಂತಿಯ ಮಾರ್ಗ ತುಳಿಯುತ್ತವೆ. ಒಮ್ಮೆ ಜೀವನದಲ್ಲಿ ಎಡವಿದ ಪಾತ್ರವದು ಪ್ರಮೀಲೆ! ಆದರೆ ವಿಷ್ಣುವಿನ ಮೇಲಿನ ಅಖಂಡವಾದ, ಅನನ್ಯವಾದ ಪ್ರೀತಿ ಅವಳನ್ನು ಬದುಕಿಸಿತು. ಪ್ರೀತಿಯೆಂಬ ಪುಣ್ಯ ಜಲದಲ್ಲಿ ಮಿಂದ ಅವಳು ಆನಂದದ ತವರಾದಳು. ಬಾಹ್ಯವಾದ ಅವಳ ನೋಟವೆಲ್ಲವೂ ಪುಣ್ಯಮಯವಾಗಿ ಅಂತರಂಗಕ್ಕೆ ಸಂದಿತು. ಇಂತಹ ಅದೆಷ್ಟೋ ಹೆಣ್ಣುಮಕ್ಕಳ ವ್ಯಕ್ತಿತ್ವವನ್ನು, ಸ್ವಭಾವವನ್ನು ಗೋಕಾಕ್‍ರು ಕಡೆದು ಸುಂದರ ಶಿಲ್ಪವಾಗಿಸಿದ್ದಾರೆ!

ಕೊನೆಯ ಕಾದಂಬರಿ- ‘ನರಹರಿ- ನೂತನ ಯುಗದ ಪ್ರವಾದಿʼ. ‘ಪೂರ್ಣ ಜೀವನ ಕೇಂದ್ರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಮುಂದೆ ನಡೆಸುವ ಚುಕ್ಕಾಣಿಯಾಗುತ್ತಾನೆ ನರಹರಿ. ‘ನರಹರಿ’ ಈಗ ಮೊದಲಿನ ನರಹರಿಯಲ್ಲ. ಅವನಿಗೆ ಅಧ್ಯಾತ್ಮದ ಹಾದಿ ನಿಚ್ಚಳವಾಗಿತ್ತು. “ನರಹರಿಯು ತನ್ನ ಭಾವೋದ್ರೇಕವನ್ನು ಮನೋವಿಕಾರವನ್ನು ಎಲ್ಲಿ ಇಲ್ಲದಂತೆ ಮಾಡಿದನೆಂಬುದು ಯಾರಿಗೂ ತಿಳಿಯುವಂತಿರಲಿಲ್ಲ. ಅವನ ವ್ಯಕ್ತಿತ್ವದಲ್ಲಿ ಅದರ ಲವಲೇಶವೂ ಇರಲಿಲ್ಲ. ಅಂದರೆ ಅವನ ಪ್ರಶಾಂತಿಯನ್ನು ಯಾರೂ ಅನುಭವಿಸಬಹುದಾಗಿತ್ತು. ಕಡಲಾಳಗಳ ಪ್ರಶಾಂತ ಭಾವ ಅದರಲ್ಲಿತ್ತು. ಸಾಮಾನ್ಯವಾಗಿ ಕಡಲಿನ ಮೇಲ್ಮೈಯಲ್ಲಾದರೂ ಅಲ್ಲೋಲ ಕಲ್ಲೋಲವಿರುತ್ತದೆ. ಆದರೆ ನರಹರಿಯ ಒಳ- ಹೊರಗುಗಳಲ್ಲಿ ಒಂದೇ ವಿಧದ ಶಾಂತಿ ನೆಲೆಸಿತ್ತು.” ಎಂಬುದು ಗೋಕಾಕ್‌ರ ಮಾತು. ಈ ಶಾಂತಿಯ ಕುರುಹುಗಳು ಅವನ ಬಾಲ್ಯ ಹಾಗೂ ಯೌವನದ ಹೋರಾಟಗಳಲ್ಲಿಯೇ ರೂಪು ತಳೆದಿತ್ತು. ಆತನ ʼಪೂರ್ಣ ಜೀವನ ಕೇಂದ್ರʼದಲ್ಲಿ ಅವನ ವ್ಯಕ್ತಿತ್ವದ ಶಾಂತಿಯನ್ನು ಅನುಭವಿಸಿದವರೆಷ್ಟೋ ಮಂದಿ. ಅವನಿಂದ ಪ್ರೇರಣೆ ಹೊಂದಿದವರೆಷ್ಟೋ ಮಂದಿ. ಅವನನಾತ್ಮವೆಂದರೆ ಅರಳಿ ನಳನಳಿಸಿದ ಹೂವು. ಅಧ್ಯಾತ್ಮದ ದಾರಿಯಲ್ಲಿ ಅವನು ತೀಕ್ಷ್ಣ. ಆದರೆ ಇದು ಒರಟುತನದ ಸಂಪ್ರದಾಯವಾಗಲಿಲ್ಲ. ಬದಲಾಗಿ ಮೃದುಮಧುರತಮ ಅಂತಃಕರಣದ ಹಾದಿಯಾಯಿತು. ಗುರಿ ಸಾಧಿಸುವಲ್ಲಿ ಕಾಠಿಣ್ಯ ಎಷ್ಟು ಮುಖ್ಯವೋ ವಿನಯತಮ ತ್ಯಾಗವೂ ಅಷ್ಟೇ ಮುಖ್ಯವಾಗುತ್ತದೆ. ನರಹರಿಯ ಪಾತ್ರ ಈ ವಿಷಯದಲ್ಲಿ ಪರಿಪೂರ್ಣವಾದುದು! ಗೋಕಾಕ್‍ರು ಪೂರ್ಣ ಜೀವನ ಕೇಂದ್ರದ ಯೋಚನೆ, ಗುರಿ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಹೇಳುವಾಗ ಅನೇಕ ಪಾತ್ರಗಳನ್ನು ತರುತ್ತಾರೆ. ತ್ಯಾಗಿಗಳು, ಭೋಗಿಗಳು, ಆತ್ಮೋದ್ಧಾರದ ಬೆಳಕನ್ನರಸುವವರು, ಕವಿಗಳು, ತತ್ತ್ವಜ್ಞಾನಿಗಳು, ಸಾಹಸಿಗಳು, ತಂತ್ರಜ್ಞರು, ಕಲಾವಿದರು… ಹೀಗೆ ಎಷ್ಟೋ ಜನ. ಗೋಕಾಕ್‍ರು ಸಣ್ಣ ಸಣ್ಣ ವಿವರಗಳಲ್ಲಿ ಅವರ ಸ್ವಭಾವ ಚಿತ್ರಣವನ್ನು ಕೊಡುತ್ತಾ ಸಾಗುತ್ತಾರೆ. ಒಂದು ಬೃಹತ್ ಸಮಾಜದಲ್ಲಿ ಯಾವೆಲ್ಲ ತರದ ಮನುಷ್ಯರಿರಬಹುದೋ, ಯಾವೆಲ್ಲ ತರದ ಗುಣಗಳಿರಬಹುದೋ ಆ ಎಲ್ಲ ತರದ ಪಾತ್ರಗಳನ್ನೂ ತಮ್ಮ ಕಾದಂಬರಿಯಲ್ಲಿ ತರುತ್ತಾರೆ.

ಶೀನು ಮತ್ತೆ ಸುಶೀಲೆಯ ಮಗಳು ಪುಟ್ಟ ಉಷಾಳಿಗೆ ಕೂಡ ತನ್ನ ಅಭಿವ್ಯಕ್ತಿ ಪಡೆಯಲಿಕ್ಕೆ ಅಲ್ಲಿ ಜಾಗವಿದೆ. ಆರು ತಿಂಗಳ ಮುದ್ದು ಕೂಸು ಅರುಣನ ನಗೆ ಓದುಗನ ಮನದಲ್ಲುಳಿಯುತ್ತದೆ. ಅಂಬಾದಾಸನಂತಹ ಅದ್ಭುತ ಪಾತ್ರಗಳು ಗೌರವ ಗಳಿಸುತ್ತವೆ. ಕುಸುಮಾ ಸುಗಂಧ ಭರಿತವಾಗಿ ಬೀಸುತ್ತಿರುವ ಮಂದಾನಿಲ! ಕಣ್ಣಿಗೆ ಕಾಣುವಷ್ಟು ಗೋಚರವಲ್ಲ ಅವಳ ವ್ಯಕ್ತಿತ್ವ. ಆದರೆ ಅದು ಎಲ್ಲರಿಗೂ ಬೇಕಾಗಿರುವ ಜೀವದಾಯೀ ಆಮ್ಲಜನಕ. ಪ್ರಮೀಳೆ ಪ್ರೇಮವೆಂಬ ‘ಅಗ್ನಿದಿವ್ಯ’ವನ್ನು ಹಿಡಿದವಳು! ದೇಹದಿಂದ ನೊಂದು, ಭಾವದಿಂದ ಬೆಂದು, ಪ್ರೇಮವನ್ನು ಪಾವಿತ್ರ್ಯತೆಗೇರಿಸಿ ಪರಿಶುದ್ಧಳಾದವಳು. ವಿಷ್ಣು ಬುದ್ಧಿಯಿಂದ ನೊಂದವನು. ಭಾವದಲ್ಲಿ ಗೆದ್ದವನು. ಕ್ಷಮೆಯಲ್ಲಿ ತನ್ನ ಶಾಂತಿಯನ್ನು, ಅಂತಃಸ್ವತ್ಪವನ್ನು, ಕಂಡುಕೊಂಡವನು! ಶೀನು – ಆ್ಯಲೀಸ್‍ರು ‘ಪೂರ್ಣ ಜೀವನ ಕೇಂದ್ರ’ದಲ್ಲಿ ತಮ್ಮ ಜೀವನದ ಪೂರ್ಣತೆಯನ್ನು ಕಂಡುಕೊಂಡರು. ಅಂಬಾದಾಸನ ದೃಷ್ಟಿಗೆ ಇನ್ನೂ ಹೆಚ್ಚಿನ ತೀಕ್ಷ್ಣತೆಯನ್ನು, ಸೂಕ್ಷ್ಮತೆಯನ್ನೂ, ಅವನ ಗೊಂದಲಗಳಿಗೆ ಪರಿಹಾರವನ್ನು ಕೊಟ್ಟ ಅದ್ಭುತ ಪಾತ್ರ ಮರಿಯಮ್ ಅವರದು. ದೃಷ್ಟಿಸಿ ನೋಡಿದರೆ ಹತ್ತು- ಹನ್ನೆರಡು ಪುಟಗಳಲ್ಲಿ ಅಂಬಾದಾಸನಿಗೂ, ಮರಿಯಂರಿಗೂ ನಡೆದ ಸಂಭಾಷಣೆಯಲ್ಲಿ ತೆರೆದುಕೊಂಡ ವ್ಯಕ್ತಿತ್ವದ ಅನಾರವಣವದು. ಆಳವಾದ, ವಿಸ್ತಾರವಾದ, ಯಾವ ‘ಇಸಂ’ನ ತೆಕ್ಕೆಗೂ ಒಳಗಾಗದ ಅಧ್ಯಾತ್ಮವನ್ನು ಕೆಲವೇ ಕೆಲವು ಮಾತುಗಳಲ್ಲಿ ಹೊಳೆಯಿಸುವ ಪರಿ ಅನ್ಯಾದೃಶವಾದುದು! ರೈಲಿನಲ್ಲಿ ಅಂಬಾದಾಸನಿಗೆ ಸಿಗುವ ಈ ಅಪರಿಚಿತ ವ್ಯಕ್ತಿಯ ಪಾತ್ರ ಅದೇಷ್ಟೋ ಸತ್ಯಗಳನ್ನು ಹೇಳ ಹೊರಡುತ್ತದೆ. ಗೋಕಾಕ್‍ರು ಮಣಿಯಮ್‍ನ ಹತ್ತಿರ ಒಂದು ಮಾತನ್ನು ನುಡಿಸುತ್ತಾರೆ. ಸತ್ಯ ದರ್ಶನದ ಸಾಲುಗಳಿವು! “ನೀವು ಸತ್ಯವೆಂದು ತಿಳಿದುಕೊಂಡಿರುವುದನ್ನೇ- ಅದು ಹಿಂದೂ ಧರ್ಮವಾಗಲೀ, ಕ್ರೈಸ್ತ ಧರ್ಮವಾಗಲಿ ಮಾರ್ಕ್ಸಿಸಂ ಆಗಲಿ, ಏನೇ ಆಗಿರಲಿ- ಅನುಸರಿಸುವ ಹವಣಿಕೆಯಲ್ಲಿ ನೀವಿರದಾರದು. ಆಗ ಸತ್ಯವು ತನ್ನದೇ ಆದ ನಾಗರಿಕತೆಯನ್ನು ನಿರ್ಮಿಸಿಕೊಂಡು ಬರುವುದನ್ನು ನೀವು ಕಾಣುವಿರಿ! (ಪುಟ-೧೦೮). ಇದು ಕಾದಂಬರಿಯಲ್ಲಿ ಮಣಿಯಂರ ಪಾತ್ರಕ್ಕೆಸಿಕ್ಕ ದರ್ಶನ! ಆ ಮೂಲಕ ಓದುಗರಿಗೂ.

ಕೊನೆಯ ಕಾದಂಬರಿಯಲ್ಲಿ ಮಣಿಯಂರ ಮೂಲಕ ಗೋಕಾಕ್‍ರು ಮಾತನಾಡಿದ್ದನ್ನು ಒಮ್ಮೆ ಗಮನಿಸಬಹುದು- “ಪ್ರಯತ್ನವಿಲ್ಲದಾಗ ಕೃತುಶಕ್ತಿಯ ಕಿಲ್ಬಿಷದಿಂದ ಮನ ಮಲಿನವಾಗದಿದ್ದಾಗ ಮಾತ್ರ ಸೃಜನಶೀಲತೆ ಸಾಧ್ಯವಾಗುತ್ತದೆ” (ಪು- 109) ಬಹುಶಃ ಗೋಕಾಕ್‍ರ ಪ್ರತಿಭೆ ಬುದ್ಧಿಯ ವಿಶೇಷ ಪ್ರಯತ್ನವಿಲ್ಲದೇ ಸಾಧಿಸಿದ ಸಾಧನೆಯೇ ಕಾದಂಬರಿಯಾಗಿ ಮೈ ಪಡೆದಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ಕಾದಂಬರೀ ಅದ್ಭುತಗಳನ್ನು ಸೃಷ್ಟಿಸಲು ಖಂಡಿತಾ ಬುದ್ಧಿಗೆ ಸಾಧ್ಯವಿಲ್ಲ. ಅದು ಸಾಮಾನ್ಯ ಬುದ್ಧಿಯ ಪರಿವೇಷವನ್ನು ದಾಟಿ, ಭಾವಯಾನದ ಆಚೆಯ ದಡವನ್ನು ಗೃಹಿಸಬಲ್ಲುದಾದರೆ ಮಾತ್ರ ಈ ಅಸಾಮಾನ್ಯ ಕೆಲಸ ಮಾಡಲು ಸಾಧ್ಯ. ಸಾಮಾನ್ಯ ಪ್ರತಿಭೆ ಇಂತಹ ಒಂದು ವಿಷಯವನ್ನು ವಸ್ತುವನ್ನಾಗಿ ತೆಗೆದುಕೊಳ್ಳಲೂ ಸಾಧ್ಯವಾಗಲಿಕ್ಕಿಲ್ಲ. ಗೋಕಾಕ್‍ರನ್ನು ಕವಿಯಾಗಿ ಗುರುತಿಸಿ ಗೌರವಿಸಿದವರಿದ್ದಾರೆ. ಆದರೆ ಕಾದಂಬರಿಕಾರರಾಗಿಯೂ ಅವರು ಮೇರೆಯವರಿಯದ ಅದ್ಭುತಗಳನ್ನು ಸೃಷ್ಟಿಸಬಲ್ಲ ಅಗಾಧ ಪ್ರತಿಭೆಯುಳ್ಳವರು. ಅವರ ಕಾದಂಬರಿಯ ಪಾತ್ರಗಳ, ವಿಷಯಗಳ ಹರಹು ಬೆರಗುಗೊಳಿಸುವಂತದ್ದು. ಅಧ್ಯಾತ್ಮ, ಅನುಭಾವಗಳ ಬಗ್ಗೆ ಅವರ ಸಂವೇದನೆ ಬಹಳ ಸೂಕ್ಷ್ಮವಾದದ್ದು, ಆಳಕ್ಕಿಳಿಯಬಲ್ಲದ್ದು. ಸಾಮಾಜಿಕವಾಗಿ ಸ್ಪಷ್ಟ ನಿಲುವು ತಳೆದಿರುವಂತದ್ದು! ವಯಕ್ತಿಕವಾಗಿ ಬೆಳೆಯಬಲ್ಲಂತದ್ದು. ಪ್ರತಿಯೊಬ್ಬರ ದಾರಿಗೂ ಬೆಳಕಿನ ದಾರಿಯನ್ನು ಕರುಣಿಸಬಲ್ಲಂತದ್ದು. ಜೊಳ್ಳು ಯಾವುದು? ಗಟ್ಟಿ ಯಾವುದೆಂಬ ಸ್ಪಷ್ಟ ಅರಿವು ಹೊಂದಿರುವಂತದ್ದು.

ಅವರ ಕಾದಂಬರಿಯ ಪಾತ್ರಗಳಲ್ಲಿ ಕೆಲವು ತಮ್ಮ ಮೂಲ ಸ್ವಭಾವದ ಅತಿರೇಕದ ಮೂಲಕವೇ ಪಾಠ ಕಲಿಯುತ್ತಾ, ದುರಂತದಲ್ಲಿ ಅರಿವು ಪಡೆಯುತ್ತಾ ಸಾಗುವಂಥವು. ಸುಬ್ಬಣಾಚರ್ಯರು, ಜಾನಕಿಬಾಯಿ, ರಮಾಬಾಯಿ ಮುಂತಾದ ಪಾತ್ರಗಳು. ಕೆಲವು ತಮ್ಮ ಅನುಭವದ ಮೂಲಕ ಪಾಠ ಕಲಿಯುವಂತವರು. ಶೀನು, ಕೇಶವ, ಮೇನಕೆ ಮುಂತಾದ ಪಾತ್ರಗಳು. ಇನ್ನು ಕೆಲವರು ಧಾರಾಣಾ ಸಾಮರ್ಥ್ಯವನ್ನೂ, ಸಹನೆಯನ್ನೂ ತಮ್ಮ ಸ್ವಭಾವದಲ್ಲಿಯೇ ಪಡೆದವರು. ಪದ್ಮಾವತಿ, ಸುಶೀಲೆ, ಕುಸುಮಾ ಮೊದಲಾದದವರು! ಕೆಲವರು ತಮ್ಮೊಳಗನ್ನು ಹುಡುಕುತ್ತಾ ಹೊರಟವರು. ದೇಸಾಯರು ಮೊದಲಾದ ಪಾತ್ರಗಳು. ಕೆಲವೇ ಕೆಲವರು ಮಾತ್ರ ತಮ್ಮನ್ನೇ ತಾವು ನೋಡಿಕೊಳ್ಳುವ, ಧ್ಯಾನಸ್ಥವಾಗುವ, ಒಳನೋಟ ಹೊಂದುವ, ದೇವರ ಕೈಯ್ಯಲ್ಲಿನ ಅನಂತ ಸಾಧ್ಯತೆಯ ಸಾಧನವಾದವರು. ಸ್ವಾಮಿದಾಸ, ನರಹರಿಯಂತವರು, ಮರಿಯಂನಂತಹ ದೈವೀ ಸತ್ಯವನ್ನು ಅರಿತಂತಹ ಪಾತ್ರಗಳು! ಕೆಲವಕ್ಕೆ ಹಠ, ಕೆಲವಕ್ಕೆ ಸಟೆ; ಕೆಲವಕ್ಕೆ ಕಾಮ, ಕೆಲವಕ್ಕೆ ಪ್ರೇಮ; ಕೆಲವಕ್ಕೆ ಗೊಂದಲ, ಕೆಲವಕ್ಕೆ ಚಾಂಚಲ್ಯ, ಕೆಲವಕ್ಕೆ ಸೌಂದರ್ಯ, ಕೆಲವಕ್ಕೆ ಮಾಧುರ್ಯ; ಹಲವಕ್ಕೆ ಭೋಗ, ಕೆಲವಕ್ಕೆ ಯೋಗ; ಒಂದೇ? ಎರಡೇ? ಕೆಲವರು ಮಾತ್ರ ಪರಿಪೂರ್ಣ ವ್ಯಕ್ತಿತ್ವದವರು, ತಿಪ್ಪನಂತಹ ದಡ್ಡನಿಗೂ ಮರುಮದುವೆಯ ಹುಚ್ಚು. ರಮಬಾಯಿಯಂತವರಿಗೂ ಇಲ್ಲಿ ಕ್ಷಮೆಯ ದಾರಿಯಿದೆ. ದೇವರ ಸನ್ನಿಧಾನ ಎಲ್ಲವನ್ನು ಕ್ಷಮಿಸಿ ಬಿಡುಗಡೆ ನೀಡುತ್ತದೆ. ಮನುಷ್ಯ ಸ್ವಭಾವಗಳ ಬಗ್ಗೆ ಗೋಕಾಕ್‍ರ ಪ್ರಜ್ಞೆ ಅನಂತ ಮುಖವಾಗಿ ಹರಿದಿದೆ. ತಿಪ್ಪನ ಮೊದಲನೆಯ ಹಂಡತಿ ‘ಮೂಕಿ’ ಕೂಡಾ ಓದುಗನೊಡನೆ ಮಾತಿಗಿಳಿಯುತ್ತಾಳೆ. ಭೀಮೂವಿನ ಹೆಂಡತಿಯ ಬಯಕೆ ಸುಳ್ಳು ಗರ್ಭ ಕಟ್ಟುತ್ತದೆ. ಕಾಲವೇ ನಿಂತು ಮೋಸಕ್ಕೆ ಮದ್ದರೆಯುತ್ತದೆ. ಮನುಷ್ಯನ ನನಾ ಗುಣಗಳ, ನಾನಾ ಮುಖಗಳ, ನಾನಾ ಬಯಕೆಗಳ, ನನಾ ದಾರಿಗಳ, ನಾನಾ ಗುರಿಗಳ ಮೇರೆವರಿಯದ ಓಟ ನಿರಂತವಾಗಿ ಸಾಗುತ್ತದೆ. ಇದರ ಜೊತೆಯಲ್ಲಿಯೇ ನಮಗಿಂತ ಬೃಹತ್ ಆದದ್ದರ, ನಮಗಿಂತ ಮಹತ್ತ್ವದ್ದರ ದರ್ಶನವೂ ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ಗೋಕಾಕರ ಕಾದಂಬರಿ ಪ್ರಯಾಣವೆಂದರೆ ಪಾತ್ರಗಳ ಅಗಾಧ ಅನುಭವದ ಸಂತೆ. ದುರಂತಗಳ ಬಗ್ಗೆ ತೆಗೆದುಕೊಳ್ಳಬಹುದಾದ ವ್ಯಾವಹಾರಿಕ ಎಚ್ಚರ. ಜೀವನದ ಅರ್ಥಪೂರ್ಣತೆಯೆಡೆಗಿನ ‘ಗಮನ’ಕ್ಕೆ ಮಾರ್ಗದರ್ಶನ. ತಮ್ಮ ರೂಪುಗೊಳ್ಳುವ ಕ್ರಿಯೆಯಲ್ಲಿ ಸಂವೇದನಾತ್ಮಕವಾಗುವ ಪಾತ್ರಗಳು ಗೋಕಾಕ್‍ರ ಅದ್ಭುತ, ಅನ್ಯಾದೃಶ ಪ್ರತಿಭೆಯನ್ನು ಬೆಳಗುತ್ತವೆ ಎಂಬುದು ಒಪ್ಪಬೇಕಾದ ಮಾತು.

SANDHYA HEGADE

ಲೇಖಕರು: ಸಂಧ್ಯಾ‌ ಹೆಗಡೆ ದೊಡ್ಡಹೊಂಡ

ಈ ಲೇಖನದ ಇನ್ನೊಂದು ಭಾಗವನ್ನು ಓದಿ: Vinayaka Krishna Gokak: ವಿ.ಕೃ.ಗೋಕಾಕ ಜನ್ಮದಿನ ವಿಶೇಷ: ಕಾದಂಬರಿಗಳ ಪಾತ್ರ ಪ್ರಪಂಚದ ಸುತ್ತ ಒಂದು ನೋಟ

Published On - 3:19 pm, Mon, 9 August 21

ತಾಜಾ ಸುದ್ದಿ
ಜೈಲಿಗೆ ಹೋದರೂ ಕಡಿಮೆಯಾಗದ ದರ್ಶನ್ ಜನಪ್ರಿಯತೆ, ಬಳ್ಳಾರಿಯಲ್ಲಿ ಜನಸಾಗರ
ಜೈಲಿಗೆ ಹೋದರೂ ಕಡಿಮೆಯಾಗದ ದರ್ಶನ್ ಜನಪ್ರಿಯತೆ, ಬಳ್ಳಾರಿಯಲ್ಲಿ ಜನಸಾಗರ
ದರ್ಶನ್ ಹೊತ್ತ ಪೊಲೀಸ್ ವ್ಯಾನ್ ಮಾರ್ಗ ಬದಲು, ತುಮಕೂರು ಫ್ಯಾನ್ಸ್​ಗೆ ನಿರಾಶೆ
ದರ್ಶನ್ ಹೊತ್ತ ಪೊಲೀಸ್ ವ್ಯಾನ್ ಮಾರ್ಗ ಬದಲು, ತುಮಕೂರು ಫ್ಯಾನ್ಸ್​ಗೆ ನಿರಾಶೆ
ಬಳ್ಳಾರಿ ಜೈಲಿಗೆ ಕೊಲೆ ಆರೋಪಿ ದರ್ಶನ್ ಎಂಟ್ರಿ ಹೇಗಿತ್ತು ನೋಡಿ
ಬಳ್ಳಾರಿ ಜೈಲಿಗೆ ಕೊಲೆ ಆರೋಪಿ ದರ್ಶನ್ ಎಂಟ್ರಿ ಹೇಗಿತ್ತು ನೋಡಿ
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹುಚ್ಚಾಟ ಮೆರೆದ ಖಾಸಗಿ ಬಸ್​ ಚಾಲಕರ ಬಂಧನ
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹುಚ್ಚಾಟ ಮೆರೆದ ಖಾಸಗಿ ಬಸ್​ ಚಾಲಕರ ಬಂಧನ
ಪೊಲೀಸ್​ ಠಾಣೆಯಲ್ಲಿ ಬಾಲಕ, ಆತನ ಅಜ್ಜಿಯನ್ನು ಮನಬಂದಂತೆ ಥಳಿಸಿದ ಪೊಲೀಸರು
ಪೊಲೀಸ್​ ಠಾಣೆಯಲ್ಲಿ ಬಾಲಕ, ಆತನ ಅಜ್ಜಿಯನ್ನು ಮನಬಂದಂತೆ ಥಳಿಸಿದ ಪೊಲೀಸರು
ಪ್ಯಾರಾಲಿಂಪಿಕ್ಸ್​ಗೆ ಅದ್ಧೂರಿ ಚಾಲನೆ: ಇಲ್ಲಿದೆ ವಿಡಿಯೋ
ಪ್ಯಾರಾಲಿಂಪಿಕ್ಸ್​ಗೆ ಅದ್ಧೂರಿ ಚಾಲನೆ: ಇಲ್ಲಿದೆ ವಿಡಿಯೋ
Vastu Tips: ದೇವರ ಮನೆಯಲ್ಲಿ ಇರಬೇಕಾದ ವಸ್ತುಗಳೇನು?
Vastu Tips: ದೇವರ ಮನೆಯಲ್ಲಿ ಇರಬೇಕಾದ ವಸ್ತುಗಳೇನು?
ದರ್ಶನ್​ನ ಹೇಗೆ ಶಿಫ್ಟ್ ಮಾಡಲಾಗುತ್ತಿದೆ? ಇಲ್ಲಿದೆ ವಿಡಿಯೋ
ದರ್ಶನ್​ನ ಹೇಗೆ ಶಿಫ್ಟ್ ಮಾಡಲಾಗುತ್ತಿದೆ? ಇಲ್ಲಿದೆ ವಿಡಿಯೋ
Nithya Bhavishya: ಈ ರಾಶಿಯ ಸಣ್ಣ ವ್ಯಾಪರಿಗಳಿಗೆ ಪ್ರೋತ್ಸಾಹವು ಸಿಗಲಿದೆ
Nithya Bhavishya: ಈ ರಾಶಿಯ ಸಣ್ಣ ವ್ಯಾಪರಿಗಳಿಗೆ ಪ್ರೋತ್ಸಾಹವು ಸಿಗಲಿದೆ
ನಾನು ನಂದಿನಿ ತಿರುಪತಿಗೆ ಹೊಂಟೀನಿ: ತಿಮ್ಮಪ್ಪನ ಲಡ್ಡುವಿನಲ್ಲಿ KMF ತುಪ್ಪ
ನಾನು ನಂದಿನಿ ತಿರುಪತಿಗೆ ಹೊಂಟೀನಿ: ತಿಮ್ಮಪ್ಪನ ಲಡ್ಡುವಿನಲ್ಲಿ KMF ತುಪ್ಪ