Vinayaka Krishna Gokak: ವಿ.ಕೃ.ಗೋಕಾಕ ಜನ್ಮದಿನ ವಿಶೇಷ: ಕಾದಂಬರಿಗಳ ಪಾತ್ರ ಪ್ರಪಂಚದ ಸುತ್ತ ಒಂದು ನೋಟ

ಭಾರತ ಸಿಂಧು ರಶ್ಮಿ ಎಂಬ ದೀರ್ಘ ಕಾವ್ಯಕ್ಕೆ ಕನ್ನಡಕ್ಕೆ ಐದನೇ ಜ್ಞಾನಪೀಠ ದೊರಕಿಸಿಕೊಟ್ಟ ವಿನಾಯಕ ಕೃಷ್ಣ ಗೋಕಾಕರದ್ದು ಅಪರೂಪದ ವ್ಯಕ್ತಿತ್ವ. ಅರವಿಂದ ಘೋಷ್​ ಅವರಿಂದ ಅಗಾಧ ಪ್ರಭಾವಕ್ಕೆ ಒಳಗಾಗಿದ್ದ ಗೋಕಾಕರ ಬದುಕಿನಂತೆ ಸಾಹಿತ್ಯ ಕೂಡ ಅಪರೂಪದ್ದು.

Vinayaka Krishna Gokak: ವಿ.ಕೃ.ಗೋಕಾಕ ಜನ್ಮದಿನ ವಿಶೇಷ: ಕಾದಂಬರಿಗಳ ಪಾತ್ರ ಪ್ರಪಂಚದ ಸುತ್ತ ಒಂದು ನೋಟ
ವಿ.ಕೃ.ಗೋಕಾಕ
Follow us
TV9 Web
| Updated By: Skanda

Updated on:Aug 09, 2021 | 3:22 PM

ಭಾರತ ಸಿಂಧು ರಶ್ಮಿ ಎಂಬ ದೀರ್ಘ ಕಾವ್ಯಕ್ಕೆ ಕನ್ನಡಕ್ಕೆ ಐದನೇ ಜ್ಞಾನಪೀಠ ದೊರಕಿಸಿಕೊಟ್ಟ ವಿನಾಯಕ ಕೃಷ್ಣ ಗೋಕಾಕರದ್ದು ಅಪರೂಪದ ವ್ಯಕ್ತಿತ್ವ. ಅರವಿಂದ ಘೋಷ್​ ಅವರಿಂದ ಅಗಾಧ ಪ್ರಭಾವಕ್ಕೆ ಒಳಗಾಗಿದ್ದ ಗೋಕಾಕರ ಬದುಕಿನಂತೆ ಸಾಹಿತ್ಯ ಕೂಡ ಅಪರೂಪದ್ದು. ಗೋಕಾಕರ ಕಾದಂಬರಿ ಪ್ರಯಾಣವೆಂದರೆ ಪಾತ್ರಗಳ ಅಗಾಧ ಅನುಭವದ ಸಂತೆ. ದುರಂತಗಳ ಬಗ್ಗೆ ತೆಗೆದುಕೊಳ್ಳಬಹುದಾದ ವ್ಯಾವಹಾರಿಕ ಎಚ್ಚರ. ಜೀವನದ ಅರ್ಥಪೂರ್ಣತೆಯೆಡೆಗಿನ ‘ಗಮನ’ಕ್ಕೆ ಮಾರ್ಗದರ್ಶನ. ತಮ್ಮ ರೂಪುಗೊಳ್ಳುವ ಕ್ರಿಯೆಯಲ್ಲಿ ಸಂವೇದನಾತ್ಮಕವಾಗುವ ಪಾತ್ರಗಳು ಗೋಕಾಕರ ಅದ್ಭುತ. ಇಂದು ಅವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಅವರ ಕಾದಂಬರಿಗಳ ಮತ್ತು ಸಾಹಿತ್ಯ ಲೋಕದ ಬಗ್ಗೆ ವಿಶೇಷ ಲೇಖನ ಇಲ್ಲಿದೆ.

ಪ್ರಸ್ತುತ ಪಡಿಸಿದವರು: ಸಂಧ್ಯಾ‌ಹೆಗಡೆ ದೊಡ್ಡಹೊಂಡ, ಪ್ರಾಧ್ಯಾಪಕರು, ಕನ್ನಡ ವಿಭಾಗ ಎಮ್​ಎಂ‌ಕೆ‌ಆರ್‌ವಿ ಮಹಿಳಾ‌ ಕಾಲೇಜು‌ ಜಯನಗರ‌, ಬೆಂಗಳೂರು‌

ಸಮರಸವೇ ಜೀವನ ಎಂಬ ಮಹಾನ್‌ ಕಾದಂಬರಿಯನ್ನು ಗೋಕಾಕರು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದ್ದು ಇಂದು ಇತಿಹಾಸ. ಅಚ್ಚರಿಯ ಸಂಗತಿಯೆಂದರೆ ಈ ಮಹಾ ಕಾದಂಬರಿಯನ್ನು ಇಜ್ಜೋಡು, ಏರಿಳಿತ, ಸಮುದ್ರಯಾನ, ನಿರ್ವಹಣ, ನರಹರಿ- ನೂತನ ಯುಗದ ಪ್ರವಾದಿ ಎಂಬ ಹೆಸರುಗಳಿಂದ ಬಿಡಿಬಿಡಿಯಾದ 5 ಕಾದಂಬರಿಗಳಾಗಿಯೂ ಇಲ್ಲವೇ ‘ಸಮರಸವೇ ಜೀವನ’ ಎಂಬ ಇಡಿ ಕಾದಂಬರಿಯಾಗಿಯೂ ಓದಿಕೊಳ್ಳಬಹುದು. ಕಾದಂಬರಿ ಕ್ಷೇತ್ರದಲ್ಲಿ ಇದೊಂದು ವಿಶಿಷ್ಟ ಪ್ರಯೋಗ. ಗೋಕಾಕರನ್ನು ಒಬ್ಬ ಸಮರ್ಥ ಕವಿಯಾಗಿ ಅನೇಕ ಜನ ಗುರುತಿಸಿದರು. ಆದರೆ ಕಾದಂಬರಿಕಾರರಾಗಿ ಗೋಕಾಕರು ಎಂತಹ ಅದ್ಭುತ ಕೆಲಸ ಮಾಡಿದರು ಎಂಬುದು ಹೆಚ್ಚು ಚರ್ಚೆಗೆ ಬರದೇ ಹೋಯಿತು. ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳ ಬಗ್ಗೆ ಮಾತನಾಡುವ ಉದ್ದೇಶ ಈ ಲೇಖನಕ್ಕಿದೆಯಾದರೂ ಎರಡು, ಮೂರು ಪಿ.ಹೆಚ್​ಡಿಗಾಗುವಷ್ಟು ಸರಕನ್ನು ಹೊಂದಿರುವ ಅದರ ವಿಸ್ತಾರದ ಒಂದಂಶವನ್ನು ಮಾತ್ರ ಇಲ್ಲಿ ಹೇಳಲು ಸಾಧ್ಯವಾದೀತು! ‘ಸಮರಸವೇ ಜೀವನ’ ಎಂಬ ಇಡೀ 5 ಕಾದಂಬರಿಯನ್ನು ಓದಿದ ಯಾರೇ ಆದರೂ ಅಲ್ಲಿಯ ಸನ್ನಿವೇಶಗಳ ಹರಹಿಗೆ, ಪಾತ್ರಗಳ ಜೀವಂತಿಕೆಗೆ, ಕೊಡುವ ಸಂದೇಶಕ್ಕೆ, ಘಟನೆಗಳ ವಿಸ್ತಾರಕ್ಕೆ, ಅನುಭವಗಳ ಅರಿವಿಗೆ ಮಾರು ಹೋಗದೇ ಇರಲಾರರು.

‘ಸಮರಸವೇ ಜೀವನ’ದ ಮೊದಲ ಕಾದಂಬರಿ ಇಜ್ಜೋಡು. ಪದ್ಮಾವತಿ – ನರಹರಿಯರ ಕಥಾನಕದಿಂದ ಆರಂಭವಾಗುವ ಈ ಕಾದಂಬರಿ, ಜೀವನವೆಂಬ ಬೃಹನ್ನಾಟಕದ ಪ್ರಥಮ ಪರಿಚಯ ಮಾಡುತ್ತದೆ. ಇಜ್ಜೋಡಿನಿಂದ ಆರಂಭವಾಗುವ ಪಾತ್ರಗಳ ಜೀವನ ಪ್ರಯಾಣ ಅನೇಕ ಘಟ್ಟಗಳಲ್ಲಿ ಕ್ರಮಿಸಿ, ಬೆಳೆದು ವಿಸ್ತರಿಸಿ, ಕೊನೆಗೆ ಕಾಲನ ಕಾಲಧೂಳಿಯಲ್ಲಿ ಸಿಕ್ಕು ನಿಷ್ಕ್ರಮಿಸುತ್ತವೆ. ‘ಸಮರಸವೇ ಜೀವನ’ವೆಂಬ ಬೃಹತ್ ಕಾದಂಬರಿ ಅನೇಕ ಪಾತ್ರಗಳನ್ನು ಹುಟ್ಟುಹಾಕುತ್ತದೆ. ಅನೇಕ ಪಾತ್ರಗಳನ್ನು ಪೋಷಿಸುತ್ತದೆ. ಮನುಷ್ಯರ ನಾನಾ ಮುಖಗಳ, ನಾನಾ ಗುಣಗಳನ್ನು ಪ್ರದರ್ಶಿಸುವ ಪ್ರತಿನಿಧಿಗಳನ್ನು ಸೃಷ್ಟಿಸುತ್ತದೆ. ಪ್ರತಿಯೊಂದು ಪಾತ್ರವೂ ತನ್ನ ಸ್ವಭಾವಕ್ಕನುಗುಣವಾಗಿ ವರ್ತಿಸುತ್ತದೆ. ಜೀವನ ಸಾಗಿಸುತ್ತದೆ. ತನ್ನ ಸ್ವಭಾವದ ಮೂಲಕವೇ ಜೀವನದ ಸತ್ಯಗಳನ್ನು ಕಂಡುಕೊಳ್ಳುತ್ತದೆ. ಪ್ರತಿಪಾತ್ರವೂ ತನ್ನ ತಿಳುವಳಿಕೆಯ ಆಧಾರದ ಮೇಲೆಯೇ ಜೀವನವನ್ನು ಅರ್ಥೈಸಿಕೊಳ್ಳುತ್ತದೆ. ಸವಾಲುಗಳನ್ನು ಸ್ವೀಕರಿಸುತ್ತದೆ. ಕೊನೆಗೆ ಕಾಲಕ್ಕೆ ಶರಣಾಗುತ್ತದೆ. ಆ ಮೂಲಕ ಬದುಕಿದ ಬಗೆಗಿನ ಭವ್ಯವಾದ ಸಂದೇಶವೊಂದನ್ನು ರವಾನಿಸುತ್ತದೆ. ಇದಕ್ಕೆಂದೇ ಪ್ರತಿಪಾತ್ರವೂ ಮಹತ್ವವೆನಿಸುತ್ತದೆ. ಅಮೋಘವಾದ ಈ ಕಾದಂಬರಿಯ ಪಾತ್ರ ಪ್ರಪಂಚವನ್ನು ಗಮನಿಸಿದರೆ ಗೋಕಾಕರ ಸಮಗ್ರ ಮತ್ತು ವಿಶಾಲವಾದ ಜೀವನಾನುಭವ ಮನ ಮುಟ್ಟುತ್ತದೆ. ಓದುಗನ ಅಂತಃಪಟಲದಲ್ಲಿ ಶಾಶ್ವತವಾದ ಸ್ಥಾನ ಗಿಟ್ಟಿಸುತ್ತದೆ. ಕಾದಂಬರಿಯಲ್ಲಿ ಇಂತಹ ಅನೇಕ ಉದಾಹರಣೆಗಳನ್ನು ಗಮನಿಸಬಹುದು.

ಹಯಗ್ರೀವಾಚಾರ್ಯರ ಮೂರನೇ ಹೆಂಡತಿಯ ಮಕ್ಕಳು ಪದ್ಮಾವಾತಿ – ನರಹರಿಯರು. ಆಚಾರ್ಯರ ನಾಲ್ಕನೆಯ ಹೆಂಡತಿ ರಮಾಬಾಯಿ. ಪದ್ಮಾವತಿ- ನರಹರಿಯನ್ನು ಮಲತಾಯಿಯಾಗಿ ಕ್ರೂರವಾಗಿ ನಡೆಸಿಕೊಂಡವರು. ನರಹರಿಯ ಅಕ್ಕನಾದ ಪದ್ಮಾವತಿಯ ಕುರಿತಾದ ತೀವ್ರತರ ಸಂತಾಪದ ಭಾವನೆ ಕಾದಂಬರಿಯನ್ನೋದಿದ ಯಾರನ್ನೇ ಆದರೂ ತಟ್ಟುತ್ತದೆ. ಮುಗ್ಧ, ಮನೋಹರ ವ್ಯಕ್ತಿತ್ವ ಅವಳದು. ತಾಯಿಯ ಪ್ರೀತಿಯನ್ನೇ ಕಾಣದೇ ಬೆಳೆದ ಪದ್ಮಾವತಿ, ತನ್ನ ಸುತ್ತಲಿದ್ದವರಿಗೆ ಪ್ರೀತಿಯನ್ನು ಮಾತ್ರ ಹಂಚಿದವಳು. ಜಾನಕೀಬಾಯಿಯವರ ಮಗ ಒರಟುತನದ ಪರಮಾವಧಿ ಎನಿಸಿದ್ದ ಕೇಶವನನ್ನು ಮದುವೆಯಾಗಿ ಪಡಬಾರದ ಪಾಡು ಪಟ್ಟವಳು. ಕೊನೆಗೆ ಅವನ ಸಿಟ್ಟಿಗೆ ಆಹುತಿಯಾಗಿ ತನ್ನ ಜೀವವನ್ನೇ ತೆತ್ತವಳು! ಈ ಪಾತ್ರ ಕೆಲವು ಪುಟಗಳಷ್ಟೇ ಹರಡಿಕೊಂಡಿದೆ. ಕಾದಂಬರಿಯ ಹರಹಿಗೆ ಹೋಲಿಸಿ ನೋಡಿದರೆ ಆರಂಭದಲ್ಲೇ ಪದ್ಮಾವತಿಯ ಪಾತ್ರ ಇಹಲೋಕವನ್ನು ತ್ಯಜಿಸಿ ಕಾಲನ ಅನಂತತೆಯಲ್ಲಿ ದೇವತಾಸ್ವರೂಪವಾಗಿ ಲೀನವಾಗುತ್ತದೆ. ಆದರೆ ಆ ಪಾತ್ರ ಕೊಡುವ ಭಾವಪೂರ್ಣ ಅಸ್ಮಿತೆ, ಓದುಗನನ್ನು ತನ್ನ ಅತಿಶಯವಾಗ ಅಂತಃಕರಣದಲ್ಲಿ ಅದ್ದಿ ಒದ್ದೆ ಮಾಡುತ್ತದೆ. ಪದ್ಮಾವತಿಯ ವ್ಯಕ್ತಿತ್ವದ ಚಿತ್ರಣವನ್ನು ಸ್ವತಃ ಗೋಕಾಕರೇ ಆಸ್ಥೆಯಿಂದ ಮಾಡಿಕೊಡುತ್ತಾರೆ: “ಪದ್ಮಾವತಿ! ಪದ್ಮಾವತಿಯಂತಹ ಹೆಂಗಳೆಯರಿದ್ದ ಮನೆತನದ ಕುಲಕೋಟಿಯ ಉದ್ಧಾರವಾಗಬೇಕು. ಅಲ್ಲಿ ಗಂಗೆಯ ಅವತರಣವಾಗಬೇಕು. ದೇವತೆಗಳ ಅವತಾರವಾಗಬೇಕು.” ಆದರೆ ವಾಸ್ತವದಲ್ಲಿ ಈ ಗಂಗೆಯನ್ನು, ಅವಳ ಶ್ರೇಷ್ಠತೆಯನ್ನು, ಅವಳ ಸುಮನೋಹರವಾದ ವ್ಯಕ್ತಿತ್ವವನ್ನು ಪರಿಗಣಿಸಲಾಗದ ಸಾಮಾನ್ಯರಲ್ಲಿ ಅತಿಸಾಮಾನ್ಯ ಮನುಷ್ಯರು ಅವಳ ಸುತ್ತಲಿದ್ದವರು. ಸುಂದರ ಹಾಗೂ ಸುಕೋಮಲವಾದ ಹೂವೊಂದನ್ನು ಅದರ ಸೌಂದರ್ಯ ಹಾಗೂ ಕೋಮತೆಯ ಅರಿವೇ ಇಲ್ಲದ ನಿರ್ಲಜ್ಜ ಕೈಯೊಂದು ಹೊಸಕಿ ಹಾಕುವ ಹಾಗೆ ಅವಳನ್ನು ಅಕ್ಷರಶಃ ಹೊಸಕಿ ಹಾಕಲಾಯಿತು. ಅವಳ ಸಾವಿನ ಕೊನೆಯ ಕ್ಷಣಗಳಲ್ಲಿ ಅವಳ ಗಂಡ, ಅತ್ತೆ ಇವರಿಗೆಲ್ಲ ಮರುಕ ಹುಟ್ಟುತ್ತದಾದರೂ ಪದ್ಮಾವತಿಯನ್ನು ಉಳಿಸುವಲ್ಲಿ ಅದಾವುದೂ ಸಹಾಯ ಮಾಡುವುದಿಲ್ಲ. ಓದುಗರ ತೀವ್ರತರದ ವಿಷಾದವನ್ನು ಹಾಗೇ ಉಳಿಸಿ ಕಾದಂಬರಿಯ ಪಾತ್ರಪುಷ್ಪವೊಂದು ಕೈಜಾರುತ್ತದೆ. ಗೋಕಾಕರ ಅನುಪಮವಾದ ಈ ಪಾತ್ರಸೃಷ್ಟಿ ಕನ್ನಡ ಕಾದಂಬರಿ ಕ್ಷೇತ್ರದಲ್ಲೊಂದು ಶಾಶ್ವತ ಸ್ಥಾನ ಪಡೆದು ಸಾಫಲ್ಯ ಹೊಂದುತ್ತದೆ.

ರಮಾಬಾಯಿ! ಪದ್ಮಾವತಿ – ನರಹರಿಯರ ಮಲತಾಯಿಯಾಗಿ ಗುರುತಿಸಿಕೊಂಡ ಸ್ತ್ರೀ ಪಾತ್ರ. ತನ್ನ ತಂದೆಗಿಂತಲೂ ಹೆಚ್ಚು ವಯಸ್ಸಾದ ಹಯಗ್ರೀವಾಚಾರ್ಯರನ್ನು ಮದುವೆ ಮಾಡಿಕೊಂಡು ಬಂದು ತನ್ನೆಲ್ಲ ದೈಹಿಕ ಕಾಮನೆಗಳನ್ನು ಗಂಡನಿರುವ ತನಕ ನಿಯಂತ್ರಿಸಿಕೊಂಡ ಹೆಣ್ಣು. ಪದ್ಮಾವತಿ, ನರಹರಿಯರಿಗೆ ಮಲತಾಯಿಯಾಗಿಯೇ ನಡೆದುಕೊಂಡ ಸಾಮಾನ್ಯ ಸ್ತ್ರೀ. ಪದ್ಮಾವತಿ ಮದುವೆಯಾಗಿ ಹೋದಾಗ ಅವಳ ಪಡಿಪಾಟಲೆಗೆ ಹೆಣ್ಣಾಗಿ ನೊಂದುಕೊಂಡು ಕಣ್ಣೀರು ಕರೆದವರು. ಮದುವೆಯ ಮನೆಯಲ್ಲಿ ಅರಿವಿಗೆ ಬರದೇ ಸುಬ್ಬಣ್ಣಾಚಾರ್ಯರ ಜೊತೆ ನಡೆದ ಘಟನೆಯಲ್ಲಿ ಗಂಡು ಮಗುವನ್ನು ಪಡೆದರು. ಹಯಗ್ರೀವಾಚಾರ್ಯರು ಸತ್ತಾಗ ಮಲಮಗನಾದ ನರಹರಿಯನ್ನು ಮನೆಯಲ್ಲಿಯೇ ನಿಲ್ಲಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಆದರೆ ನರಹರಿಯನ್ನು ಅವರು ನಡೆಸಿಕೊಂಡ ರೀತಿ ಮಾತ್ರ ಈ ಸಮಾಜ, ಸಂಸ್ಕೃತಿ ಎರಡೂ ಒಪ್ಪುವಂತದ್ದಾಗಿರಲಿಲ್ಲ. ನರಹರಿಯ ಬಗ್ಗೆ ರಮಾಬಾಯಿ ಬೇರೆಯ ರೀತಿಯ ಯೋಚನೆಯನ್ನು ತಳೆಯುತ್ತಾ ಸಾಗುತ್ತಾರೆ. ನರಹರಿಯನ್ನು ಮಗನೆಂದು ಒಪ್ಪಿಕೊಳ್ಳಲು ರಮಾಬಾಯಿಯವರ ತುಂಬಿದ ಯೌವನ ಸಿದ್ಧವಿರುವುದಿಲ್ಲ. ಮಗನನ್ನು ತನ್ನ ಕಣ್ಣ ಮುಂದೇ ಇರುವ, ತನ್ನ ಕೈಯ ಸನಿಹದಲ್ಲೇ ಇರುವ ಉಕ್ಕುವ ಪ್ರಾಯದ ‘ಗಂಡು’ ಎಂದು ಭಾವಿಸುತ್ತಾರೆ. ಅವನ ಸಾಮೀಪ್ಯಕ್ಕಾಗಿ ಓದಲು ತೊಡಗುತ್ತಾರೆ. ಅವನ ಸನಿಹಕ್ಕಾಗಿ ಇಂಗ್ಲೀಷ್ ಕಲಿಯಲು ತಯಾರಾಗುತ್ತಾರೆ. ತನ್ನ ತಾಯಿಯ ಹವಣರಿಯದ ನಿಷ್ಕಲ್ಮಶ ಹೃದಯದ ನರಹರಿ ಓದುವುದರಿಂದಲಾದರೂ ಅವರ ದುಃಖ ಕಡಿಮೆಯಾದೀತೆಂದು ಭಾವಿಸುತ್ತಾನೆ. ಆದರೆ ರಮಾಬಾಯಿಯವರ ಚಿತ್ತ ಪಕ್ಕ ಬಿಚ್ಚಿದ ಪತಂಗವಾಗುತ್ತದೆ. ನರಹರಿ ತನ್ನ ಎದುರು ಮನೆಯ ದೇಸಾಯರ ಮಗಳು, ಅಂದರೆ ಅಕ್ಕ ಪದ್ಮಾವತಿಯ ಗಂಡನ ತಂಗಿ – ನಾದಿನಿ ಕುಸುಮಾಳನ್ನು ಮನಸ್ಸಿನಲ್ಲಿಯೇ ಪ್ರೀತಿಸಿ, ಆರಾಧಿಸಲು ಶುರು ಮಾಡುತ್ತಾನೆ. ರಮಾಬಾಯಿಯವರಿಗೆ ಇದರ ಸುಳಿವು ಹತ್ತುತ್ತದೆ. ನರಹರಿಯನ್ನು ತಮ್ಮ ಅಂಗೈಯಿಂದ ಸರಿದು ಕೊಡಲು ಸಿದ್ಧರಿರದ ರಮಾಬಾಯಿ ಒಂದು ರಾತ್ರಿ ತಮ್ಮ ಹೂಟಹೂಡುತ್ತಾರೆ. ಮೂರು ವರ್ಷದ ಮಗ ಕಿಟ್ಟೂ, ಸುಬ್ಬಣಾಚಾರ್ಯರ ಮಗ ತಿಪ್ಪ ಇಬ್ಬರೂ ರಾತ್ರಿ ಮಲಗಿದ ಹೊತ್ತು ಸಾಧಿಸಿ ಸಿಂಗರಿಸಿಕೊಂಡು ನರಹರಿಯ ಮಲಗುವ ಕೋಣೆ ಪ್ರವೇಶಿಸುತ್ತಾರೆ. ಅಲ್ಲಿ ನರಹರಿಯನ್ನು ತನ್ನ ದೇಹದ ಆಸೆ ಪೂರೈಸಲು ಕೇಳುತ್ತಾರೆ. ನರಹರಿ ಈ ಅಕಾರ್ಯಕ್ಕೆ ಬೆಚ್ಚುತ್ತಾನೆ. ತಾಯಿ – ಮಗನಲ್ಲಿ ವಾದ- ವಿವಾದಗಳು ನಡೆಯುತ್ತವೆ. ನರಹರಿ ಕೋಪಾವಿಷ್ಟನಾಗಿ ಬಸವಳಿಯುತ್ತಾನೆ. ‘ತಾಯಿಯ ಜೊತೆ ಹೀಗೆ ನಡೆಯುವುದು ಪಾಪಕಾರ್ಯ; ನನ್ನನ್ನು ಬದುಕಲು ಬಿಟ್ಟು ನೀನು ಪುಣ್ಯ ಕಟ್ಟಿಕೊ’ ಎಂದು ಅಂಗಲಾಚಿ ಬೇಡುತ್ತಾನೆ. ರಮಾಬಾಯಿ ಕಾಮಾತುರದ ಸ್ಥಿತಿಯಲ್ಲಿ ನರಹರಿಯನ್ನು ಬಿಡಲು ಸಿದ್ಧರಿರುವುದಿಲ್ಲ. ನರಹರಿ ತಪ್ಪಿಸಿಕೊಂಡು ದೂರ ಹೋಗಲು ಪ್ರಯತ್ನಿಸಿದಾಗ ಬಾಗಿಲಿಗೆ ಅಡ್ಡಲಾಗಿ ನಿಲ್ಲುತ್ತಾರೆ. ನರಹರಿ ಮನೆಬಿಟ್ಟು ಹೊರಡಲು ಸಿದ್ಧನಾದಾಗ ಅವನ ಬಗ್ಗೆ ಹಾವಿನಂತಹ ದ್ವೇಷ ತಳೆಯುತ್ತಾರೆ. ತನ್ನ ಕೈಗೆ ಅವನಿನ್ನು ಸಿಗುವುದಿಲ್ಲ ಎಂಬುದು ಅರಿವಾದಾಗ ಅತ್ತಿತ್ತ ನೆರೆಮನೆಯವರಿಗೆ ಕೇಳುವ ಹಾಗೆ, ‘ಗಂಡ ಸತ್ತಾಕೆಗೆ ಮಗಾ ಸುದ್ದಾ ಮುಳುವು ಆಗ್ಯಾನ್ರೇʼ ಎಂದು ಚೀರಿಕೊಳ್ಳುತ್ತಾರೆ. ಜಗತ್ತಿಗೆ ಬೇರೆ ಸಂದೇಶ ಹೋಯಿತು. ‘ರಮಾಬಾಯಿಯವರನ್ನು ನರಹರಿ ದೇಹಕ್ಕಾಗಿ ಪೀಡಿಸಿದ ಎಂದೇ ಜನ ಅರ್ಥ ಮಾಡಿಕೊಂಡರು. ನರಹರಿಗೆ ಸಾಯುವಷ್ಟು ಆಘಾತವಾಯಿತು. ಮಾತೃಗಾಮಿ, ತಾಯ್ಗಂಡ ಎಂಬ ನೆರೆಹೊರೆಯವರ ಹೃದಯಭೇದಕ ಮಾತುಗಳೊಂದಿಗೆ ನರಹರಿ ಮನೆಬಿಟ್ಟು ಹೊರಡುವ ಸ್ಥಿತಿಯನ್ನು ರಮಾಬಾಯಿಯವರು ತಂದರು. ಜಗತ್ತಿನಲ್ಲಿ ಇಂತಹ ಸ್ತ್ರೀಯರೂ ಇದ್ದಾರೆಯೇ? ಇಂತಹ ಸನ್ನಿವೇಶವನ್ನು ಗಂಡಸರ ಬಾಳಿನಲ್ಲಿ ತರುವ ತಾಕತ್ತು ಇಂತಹ ಸ್ತ್ರೀಯರಿಗಿದೆಯಲ್ಲ ಎಂಬ ಉದ್ಗಾರವನ್ನು ತೆಗೆಯುವಂತೆ ಮಾಡಬಲ್ಲ ಪಾತ್ರವಿದು. ಕೊನೆಯಲ್ಲಿ ಮನೆಗೆ ಬಂದು, ಹೋಗಿ ಮಾಡುವ ಸುಬ್ಬಣಾಚಾರ್ಯರ ಜೊತೆಯಲ್ಲಿ ರಮಿಸುವ ಮನಸ್ಸು ಮಾಡುವ ಮೂಲಕ ವಿಚಿತ್ರ ಮನಃಸ್ಥಿತಿಯ ಪಾತ್ರವಾಗುತ್ತಾರೆ. ನರಹರಿಯ ಶಾಂತ ಸ್ವನದಂತಹ ಜೀವನದ ನದಿಯನ್ನು ಅಲ್ಲೋಲ ಕಲ್ಲೋಲ ಮಾಡಿ ಅವನ ಜೀವನದ ದಿಕ್ಕನ್ನೇ ದಿಕ್ಕುಗೆಡುವ ಹಾಗೆ ಮಾಡುವ ಆಟ ಹೂಡಿದ ರಮಾಬಾಯಿಯವರ ಪಾತ್ರ ತನ್ನದೇ ಕ್ರೌರ್ಯದ ಮೂಲಕ ವಿಶಿಷ್ಟ ಅನುಭವವಾಗಿ ಕಾದಂಬರಿಯ ನೆನಪಾಗುತ್ತದೆ!

ಇಜ್ಜೋಡು ಎಂಬ ಮೊದಲನೆಯ ಕಾದಂಬರಿಯಲ್ಲಿ ದೇಸಾಯರು, ಕುಸುಮಾ, ಕೇಶವ, ಜಾನಕೀಬಾಯಿ, ಶೀನು, ಗಣಪತಿರಾಯರು, ಸಾನಿ- ಮುಂತಾದ ಪಾತ್ರಗಳು ತಮ್ಮ ತಮ್ಮ ಪೋಷಣೆಗೆ ತಕ್ಕಂತೆ ಮೈದುಂಬಿ ಸೈ ಎನಿಸಿಕೊಳ್ಳುತ್ತವೆ. ಪದ್ಮಾವತಿಯಂತಹ ಒಂದೆರಡು ಪಾತ್ರಗಳನ್ನು ಬಿಟ್ಟರೆ ಉಳಿದ ಎಲ್ಲ ಪಾತ್ರಗಳ ತಾತ್ತ್ವಿಕ ವಿಕಾಸಕ್ಕೆ ಈ ಕಾದಂಬರಿ ವೇದಿಕೆ ನಿರ್ಮಾಣ ಮಾಡುತ್ತದೆ. ಪದ್ಮಾವತಿಗೆ ತಾತ್ವಿಕತೆಯ ಹಂಗಿಲ್ಲ. ಹಾಗೆ ನೋಡಿದರೆ ಅವಳೇ ಒಂದು ತತ್ತ್ವ. ಕುಸುಮಾ ಮತ್ತು ನರಹರಿಯ ಪಾತ್ರಗಳು ತಮ್ಮ ಮುಂದಿನ ಜೀವನದ ವಿಕಾಸದ ಪಥದಲ್ಲಿ ಸಾಗಬೇಕಾದ ಗುರಿಯನ್ನು ಅರಿತುಕೊಂಡು ಪ್ರೀತಿಯ ದೈವಿಕತೆಯನ್ನು ಕಾಣುವ ಕನಸು ಕಟ್ಟುತ್ತಾರೆ. ಕಾಲದ ಹೊಡೆತಕ್ಕೆ ಸಿಕ್ಕು ನರಳುವ ಪರಿಸ್ಥಿತಿ ನರಹರಿಯದ್ದಾಗುತ್ತದೆ. ಕಾದಂಬರಿಯ ಹೆಸರೇ ಇಜ್ಜೋಡು. ಇಜ್ಜೊಡು ಅನ್ನುವುದಕ್ಕೆ ʼಸರಿಯಾಗಿಲ್ಲದ ಜೋಡಿʼ ಎಂಬ ಅರ್ಥವೂ ಲೋಕಾರೂಢಿಯಲ್ಲಿದೆ. ಕಾದಂಬರಿಯಲ್ಲಿ ಬರುವ ಎಲ್ಲ ಗಂಡು ಹೆಣ್ಣಿನ ಜೋಡಿಯೂ ವಿಷಮ ದಾಂಪತ್ಯಕ್ಕೆ ಉದಾಹರಣೆಗಳಾಗುತ್ತವೆ. ಕೋಮಲ ಹೃದಯದ ದೇಸಾಯರು ಮತ್ತು ಜೋರು ಬಾಯಿಯ ಹಠ ಹಿಡಿಯುವ ಚಂಡಿ ಜಾನಕಿಬಾಯಿ; ಎಳೆ ಹರೆಯದ ರಮಾಬಾಯಿ ಹಾಗೂ ಮುದುಕ ಹಯಗ್ರೀವಾಚಾರ್ಯರು; ಮನೋಹರ ಗಂಗೆ ಪದ್ಮಾವತಿ ಹಾಗೂ ಮೊದ್ದು ಗೂಳಿಯಂತಹ ಕೇಶವ- ಎಲ್ಲ ಸಂಸಾರಗಳೂ ಇಜ್ಜೋಡೇ. ಜೀವನ ಬೃಹನ್ನಾಟಕದ ಎಲ್ಲಾ ತರದ ಸ್ವಭಾವದ ಪಾತ್ರಗಳನ್ನೂ ಗೋಕಾಕರು ಕಾದಂಬರಿಯಲ್ಲಿ ತರುವಲ್ಲಿ ಗೆದ್ದಿದ್ದಾರೆ. ಕೊನೆತನಕ ಮುಂದುವರೆಯುವ ಪಾತ್ರಗಳಾಗಿ ನರಹರಿ – ಕುಸುಮಾ ಮನತಟ್ಟುತ್ತಾರೆ.

ಎರಡನೆಯ ಕಾದಂಬರಿ ‘ಏರಿಳಿತ’. ನರಹರಿಯ ಓಟದಿಂದ ಆರಂಭವಾಗುವ ಕಾದಂಬರಿ. ಎಲ್ಲರ ಅವಹೇಳನದ ಮಾತುಗಳನ್ನೂ ಯಾರಿಗೂ ಒದಗಬಾರದ ಅಪಮಾನವನ್ನೂ ‘ಮಾತೃಗಾಮಿ’ ಎಂಬ ಕಳಂಕವನ್ನು ಹೊತ್ತುಕೊಂಡು ಮೊಗ್ಗಾಂವಿಯನ್ನು ಬಿಟ್ಟು ಓಡುವ ನರಹರಿ ಖಾಸ್‍ಗಾಂವಿ ಸೇರುತ್ತಾನೆ. ಅಲ್ಲಿ ಸ್ವಾಮಿದಾಸರ ಪರಿಚಯ ಪಡೆದು ತನ್ನ ಅನಂತ ದುಃಖಕ್ಕೆ ಸಾಂತ್ವನ ಕಾಣುತ್ತಾನೆ. ಆತ್ಮಹತ್ಯೆಯ ಅವನ ಪ್ರಯತ್ನ ಯಾವುದೋ ಅಲೌಕಿಕ ಶಕ್ತಿಯಿಂದ ಕೊನೆಗಾಣುತ್ತದೆ. ನರಹರಿಯು ಖಾಸಗಾಂವಿಗೆ ಹೊರಡಲು ತೀರ್ಮಾನಿಸಿದ್ದು ಅವನ ಜೀವನದ ಬಹುದೊಡ್ಡ ಘಟ್ಟವಾಗುತ್ತದೆ. ಕಾದಂಬರಿಯಲ್ಲಿ ಸ್ವಾಮಿದಾಸರ ಪಾತ್ರ ನರಹರಿಯ ಬದುಕಿಗೆ ಅರ್ಥವನ್ನೂ ಸಮತ್ವದ ದೃಷ್ಟಿಯನ್ನೂ ಕೊಟ್ಟಂತಹ ಪಾತ್ರ. ‘ಗೋಕಾಕರ ಕಾದಂಬರಿಯ ಪಾತ್ರಗಳ ವಿಶೇಷತೆ ಏನೆಂದರೆ ಅವರೆಲ್ಲರೂ ಜೀವಂತ ವ್ಯಕ್ತಿಗಳೇ ಎನಿಸುವುದು. ನಮ್ಮ ಸುತ್ತಮುತ್ತಲಿನ ಜನರೇ ಕಾದಂಬರಿಯ ವ್ಯಕ್ತಿಗಳಾಗಿಬಿಟ್ಟಿದ್ದಾವೇನೋ ಎಂಬಂತಹ ಭ್ರಮೆ ಹುಟ್ಟಿಸುವ ಪಾತ್ರಗಳು. ನರಹರಿಯಂತವರು ವಾಸ್ತವ ಜೀವನದಲ್ಲಿ ಕೇವಲ ಕೆಲವೇ ಕೆಲವು ಮಂದಿ. ಗೋಕಾಕ್ ಇಂತಹ ಅದ್ಭುತ ಪಾತ್ರವನ್ನು ಕಟೆದು ಕನ್ನಡ ಸಾಹಿತ್ಯಕ್ಕೆ ಒಂದು ಅಮರವಾದ ವ್ಯಕ್ತಿಸೃಷ್ಟಿಯ ಕೊಡುಗೆ ನೀಡಿದ್ದಾರೆ.

ನರಹರಿಯ ಜೀವನ ಖಾಸಗಾಂವಿಯಲ್ಲಿ ಹೊಸದಾಗಿ ಶುರುವಾಗುತ್ತದೆ. ಆಪಾದನೆಯನ್ನು ಒಪ್ಪದಿದ್ದ ಗಣಪತಿರಾಯರು ನರಹರಿಗೆ ಎಷ್ಟೋ ಸಾಂತ್ವನ ನೀಡುತ್ತಾರೆ. ಮೊಗ್ಗಾಮಿಯ ಅವಮಾನ ತಡೆಯಲಾರದೇ ಖಾಸಗಾಂವಿಗೆ ಮೂರು ರೂಪಾಯಿ ಟಿಕೇಟು ಪಡೆದು ಹೊರಟ ನರಹರಿಯ ಬಗ್ಗೆ ನಿಲ್ಮನೆಯ ರಾತ್ರಿಪಾಳಿಯ ಮಾಸ್ತರನು ಸೂಚನೆ ಕೊಟ್ಟಿದ್ದನ್ನು ಅವಲಂಬಿಸಿ ಅವನನ್ನು ಹುಡುಕುವ ಪ್ರಯತ್ನ ಮಾಡಿ ಯಶಸ್ವಿಯಾಗುತ್ತಾರೆ. ಪಂಡಿತರು ಮತ್ತು ಪ್ರಮೀಲೆಯ ಪರಿಚಯದೊಂದಿಗೆ ಪುಣೆಯಲ್ಲಿ ಮತ್ತೆ ವಿದ್ಯಾಭ್ಯಾಸ ಮುಂದುವರೆಸುವ ತೀರ್ಮಾನ ತೆಗೆದುಕೊಳ್ಳುತ್ತಾನೆ ನರಹರಿ. ದೇಸಾಯರಿಗೆ ನರಹರಿ ಪುಣೆಯಲ್ಲಿ ಹಾಸ್ಟೆಲ್ ಸೇರಿರುವ ಸುದ್ದಿ ಗೊತ್ತಾಗುತ್ತದೆ. ದೇಸಾಯಿಯವರು ಲೋಕ ತಿಳಿದವರು, ನರಹರಿಯ ಮೇಲೆ ಅನಗತ್ಯ ತಪ್ಪನ್ನು ಹೊರಿಸಿದ ಮಲತಾಯಿ ರಮಾಬಾಯಿಯ ವಿಷಯವನ್ನು ಹೂಬೇ ಹೂವು ಊಹಿಸಬಲ್ಲವರು! ತಮ್ಮ ಮಗಳು ಕುಸುಮಾಳನ್ನು ಕೊಟ್ಟು ನರಹರಿಯ ಮದುವೆ ಮಾಡಬೇಕೆಂದು ಬಯಸಿದ್ದ ದೇಸಾಯಿಯವರು ತಾವೂ ಕೂಡಾ ಹೆಂಡತಿ ಜಾನಕೀಬಾಯಿಯ ಹತ್ತಿರ ರಾಣಾರಂಪಾಟದ ಜಗಳವಾಡಿ ಸಾನಿಯನ್ನೂ, ಕುಸುಮೆಯನ್ನೂ ಪುಣೆಗೆ ಕರೆತಂದರು. ಮಗಳನ್ನು ಮುಂದೆ ಓದಿಸಿ, ನರಹರಿಯ ಜೊತೆ ಮದುವೆ ಮಾಡಿಸುವುದು ದೇಸಾಯಿಯವರ ಜೀವನದ ಪರಮ ಉದ್ದೇಶವಾಗಿತ್ತು. ದಾಂಪತ್ಯದ ಅಗಾಧ ಕಹಿ ಉಂಡವರು ದೇಸಾಯಿಯವರು. ತಮ್ಮ ಮಗಳಾದರೂ ಅನುರೂಪ ದಾಂಪತ್ಯ ನಡೆಸಲಿ, ಬದುಕಿನ ಚೆಲುವನ್ನು ಅನುಭವಿಸಲಿ ಎಂಬುದು ದೇಸಾಯಿಯವರ ನಿಲುವಾಗಿತ್ತು. ಮಗಳ ಮನವನ್ನರಿತ ಶೃದ್ಧಾವಂತ ತಂದೆಯಾಗಿ ದೇಸಾಯಿಯವರು ಕಾದಂಬರಿಯನ್ನೋದಿದವರ ಮನದಲ್ಲುಳಿಯುತ್ತಾರೆ. ತಮಗೆ ಸರಿ ಅನಿಸಿದ್ದನ್ನು ನಿರ್ಭಿಡೆಯಿಂದ ಮಾಡುವ ಧೈರ್ಯ ಹೊಂದಿದ ದೇಸಾಯಿಯವರು ಪುಣೆಯಲ್ಲಿ ನರಹರಿಯನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗುತ್ತಾರೆ. ನರಹರಿಯ ವಿದ್ಯಾಭ್ಯಾಸವೂ ಮುಂದುವರೆಯುತ್ತದೆ. ದೇಸಾಯಿಯವರು ತಮ್ಮ ಪ್ರೀತಿಯ ಸಾನಿ, ಮುದ್ದಿನ ಮಗಳು ಕುಸುಮಾನ ಒಟ್ಟಿಗೆ ಜೀವನದ ಉತ್ತಮವಾದ ರಸಮಯ ಸಮಯವನ್ನು ಕಳೆಯತೊಡಗುತ್ತಾರೆ. ನರಹರಿಗೇ ತಮ್ಮ ಮಗಳನ್ನು ಕೊಟ್ಟು ವಿವಾಹ ಮಾಡುವ ಕನಸು ಕಾಣುತ್ತಾರೆ. ಈ ನಡುವೆ ನರಹರಿ ಮತ್ತು ಕುಸುಮಾರ ಪ್ರೀತಿ ದಟ್ಟವಾಗುತ್ತದೆ. ಪರಸ್ಪರರು ಸುಂದರವಾದ ಪ್ರೀತಿಯಲ್ಲಿ ಬಂಧಿತರಾಗುತ್ತಾರೆ. ನಡುವೆ ನರಹರಿಯ ಗೆಳೆಯ ಶೀನು, ನರಹರಿಯ ಕುಸುಮಾಳನ್ನು ಮದುವೆಯಾಗುವ ಆಸೆ ಹೊಂದಿ ಈ ಬಗ್ಗೆ ಅವಳಲ್ಲಿ ವಿಚಾರಿಸುತ್ತಾನೆ. ಕುಸುಮಾ ತನ್ನ ಸ್ಪಷ್ಟ ನಿಲುವು ಹೇಳುತ್ತಾಳೆ. ತನ್ನ ಮನಸ್ಸಿನಲ್ಲಿ ನರಹರಿಗಲ್ಲದೇ ಬೇರಾರಿಗೂ ಜಾಗವಿಲ್ಲ ಎಂದು. ಒಂದು ಮಧುರ ಪ್ರೇಮ ಹೇಗೆ ಬೆಳೆಯಬೇಕೋ ಹಾಗೆ ನರಹರಿ- ಕುಸುಮಾರ ಪ್ರೇಮ ಬೆಳೆಯ ತೊಡಗುತ್ತದೆ. ಇತ್ತ ಪ್ರಮೀಲೆಯು ನರಹರಿಯನ್ನು ಪ್ರೀತಿಸತೊಡಗುತ್ತಾಳೆ. ನರಹರಿ ನಿರಾಕರಿಸುತ್ತಾನೆ. ಪ್ರಮೀಳೆ ಕಾತುರಗಳಾಗುತ್ತಾಳೆ.

ಸರಿಯುವ ಕಾಲ ಸರಿದ ಜಾಗವನ್ನು ಬದಲಾಯಿಸುತ್ತದೆ. ಹಾಗೆಯೇ ನರಹರಿ ಮತ್ತು ಕುಸುಮಾರ ವಿವಾಹ ನಿಶ್ಚಯವನ್ನು ದೇಸಾಯಿಯವರು ಮಾಡುತ್ತಾರೆ. ಶೀನು ಸುಶೀಲಾಳನ್ನೂ, ಪ್ರಾಮೀಳೆ ವಿಷ್ಣುವನ್ನೂ ಮದುವೆಯಾಗುತ್ತಾರೆ. ಗೋಕಾಕರು ಇವರೆಲ್ಲರ ದಾಂಪತ್ಯದ ಸವಿಯವನ್ನು ಬೇರೆ ಬೇರೆ ವ್ಯಕ್ತಿತ್ವವನ್ನು ನಿರೂಪಿಸುವುದರ ಮೂಲಕ ವಿವರಿಸುತ್ತಾರೆ. ಶೀನು ಸುಶೀಲೆಯಲ್ಲಿ ಶಾಂತಿಯನ್ನು ಕಾಣುತ್ತಾನೆ. ಕುಸುಮಾಳನ್ನು ಪ್ರೀತಿಸಿ ಬೆಂದ ಹೃದಯ ಸುಶೀಲೆಯಲ್ಲಿ ಮಿಶ್ರಮಿಸುತ್ತದೆ. ಆದರೆ ‘ಬಾಯಾರಿದರೂ ದೇವಕಂಠ ಆರಿಲ್ಲ’ ಎಂಬ ಸ್ಥಿತಿಯನ್ನು ಶೀನು ಹೊಂದುತ್ತಾನೆ. ಸುಶೀಲೆಯಂಥ ಹೆಂಡತಿ ಅವನ ಮನಸ್ಸನ್ನು, ಬಾಳನ್ನು ಬೆಳಗುವ ದೀಪವಾಗುತ್ತಾಳೆ. ನರಹರಿ- ಕುಸುಮೆಯರ ವಿವಾಹ ದೇಸಾಯಿಯವರ ಇಚ್ಛೆಯಂತೆ ಸಾಂಗವಾಗಿ ನೆರವೇರುತ್ತದೆ. ಕುಸುಮೆಯ ಬಾಳಿನ ಕಲ್ಪದ್ರುಮವಾಗಿ ಬೆಳಗತೊಡಗುತ್ತಾನೆ ನರಹರಿ. ಕುಸಮೆ ನರಹರಿಯ ಹೃದಯಸಿಂಹಾಸನದ ಆನಂದದಾಯೀ ದೇವತೆಯಾಗುತ್ತಾಳೆ. ನರಹರಿ ಮತ್ತು ಕುಸುಮೆಯರ ದಾಂಪತ್ಯ ಜೀವನವನ್ನು ಚಿತ್ರಿಸುವ ಮೂಲಕ, ಒಂದು ದಾಂಪತ್ಯ ಯಾವ ಸರ್ವೋತ್ಕೃಷ್ಟ ಎತ್ತರವನ್ನು ಮುಟ್ಟಲು ಈ ಭೂಮಿಯಲ್ಲಿ ಸಾಧ್ಯವಿದೆಯೋ ಆ ಎತ್ತರವನ್ನು ತೋರಿಸಲು ಗೋಕಾಕರು ಹೊರಡುತ್ತಾರೆ. ಕಾದಂಬರಿಯಲ್ಲಿ ಬರುವ ಎಲ್ಲ ದಾಂಪತ್ಯಕ್ಕಿಂತ ನರಹರಿ- ಕುಸಮೆಯರ ದಾಂಪತ್ಯ ಹಿರಿದಾದದ್ದು. ದಾಂಪತ್ಯದಲ್ಲಿ ಗಂಡು ಹೆಣ್ಣಿನ ಸೆಳೆತ ಕೇವಲ ದೈಹಿಕವಾಗಿರಬಹುದು, ಅದಕ್ಕಿಂತ ಮುಂದಕ್ಕೆ ಹೋಗಿ ಮಾನಸಿಕ ಅವಲಂಬನೆಯ ಮೇಲೆ ಕಟ್ಟಿದ ಗಟ್ಟಿ ಪ್ರೀತಿಯೂ ಆಗಿರಬಹುದು. ಆದರೆ ಒಬ್ಬರಿಗೊಬ್ಬರು ಆತ್ಮದ ಬೆಳಕಾಗಿ, ಪರಸ್ಪರ ಸ್ಫೂರ್ತಿ ಹೊಂದಿ ಅಧ್ಯಾತ್ಮದ ವಿಕಾಸದ ಹಾದಿಯ ಪಯಣಿಗರಾಗಿ ಬೆಳಕನ್ನು ಕಾಣುವ ದಾಂಪತ್ಯದ ಅನುಭವ ಕೆಲವೇ ಕೆಲವು ಜನರದ್ದು. ನರಹರಿ- ಕುಸುಮೆಯರ ಬದುಕು ಮೂರನೆಯ ಹಾದಿಯ ಪ್ರಯಾಣವಾಗುವುದನ್ನು ಗೋಕಾಕರು ಬಹು ವಿವೇಕ ಹಾಗೂ ತನ್ಮಯತೆಯಿಂದ ಚಿತ್ರಿಸುತ್ತಾರೆ. ನರಹರಿಯಂತಹ ಪಾತ್ರ ಕನ್ನಡ ಸಾಹಿತ್ಯದಲ್ಲಿಯೇ ಅಮೋಘ ಸೃಷ್ಟಿ! ಗೋಕಾಕರು ಅವನ ವ್ಯಕ್ತಿತ್ವದ ಪರಿಪೋಷಣೆಯನ್ನು ತಾವೇ ಅನುಭವಿಸಿ ಮಾಡಿರಬಹುದಾದ ಸೂಕ್ಷ್ಮತೆ, ಸ್ಪಂದನೆಯುಳ್ಳ ಸಹೃದಯನಿಗೆ ದಕ್ಕುತ್ತಾ ಸಾಗುತ್ತದೆ.

ಮದುವೆಯಾದ ನರಹರಿ ಒಮ್ಮೆ ಗೆಳೆಯನ ಒತ್ತಾಯದ ಮೇರೆಗೆ ಪಂಡರಪುರಕ್ಕೆ ಹೊರಡುವ ಪ್ರಸಂಗ ಬಂದೊದಗಿತು. ಅಲ್ಲಿ ನರಹರಿ ತನ್ನ ಕನಸು- ಮನಸಿನಲ್ಲಿಯೂ ಅಂದುಕೊಳ್ಳದ ಪ್ರಸಂಗವೊಂದು ಜರುಗತ್ತದೆ. ಫಂಡರಿನಾಥನ – ಕ್ಷೇತ್ರದಲ್ಲಿ ಅವನಿಗೆ ಸುಬ್ಬಣಾಚಾರ್ಯರ ದರ್ಶನವಾಗುತ್ತದೆ. ಆಶ್ಚರ್ಯದಿಂದ ಸುಬ್ಬಣಾಚಾರ್ಯರನ್ನು ವಿಚಾರಿಸಲಾಗಿ ರಮಾಬಾಯಿಯವರೂ ಅವರ ಜೊತೆ ಬಂದಿದ್ದಾರೆನ್ನುವುದು ಗೊತ್ತಾಗುತ್ತದೆ. ತನ್ನ ಹೆಣ್ತತನದ ಕನಸನ್ನೆಲ್ಲ ಹೊತ್ತು ಅದು ಈಡೇರದಿದ್ದಾಗ ಮಲಮಗನನ್ನೇ ಬಯಸಿದ್ದ ರಮಾಬಾಯಿ! ನರಹರಿಯ ಜೀವನದ ದುರಂತವಾದ ಕ್ಷಣಗಳಿಗೆ ಸಾಕ್ಷಿಯಾಗಬಹುದಾದ ಅಪಾಯವನ್ನು ತಂದೊಡ್ಡಿದ ರಮಾಬಾಯಿ! ಇಂದು ಈ ಪುಣ್ಯ ಕ್ಷೇತ್ರದಲ್ಲಿ ತನ್ನೆಲ್ಲ ಪಾಪಗಳನ್ನು ಕಳೆಯುವ ಅವಕಾಶದೊಂದಿಗೆ ತನ್ನ ನೋವಿನಲ್ಲಿ ತಾನು ಮಾಡಿದ ಅಕಾರ್ಯದ ಪಶ್ಚಾತ್ತಾಪ ಹೊತ್ತು ನಿಂತು ಮರಣಶಯ್ಯೆಯಲ್ಲಿ ಮಲಗಿದ ರಮಾಬಾಯಿ! ನರಹರಿಯ ಮನಸ್ಸು ಅವರನ್ನು ನೋಡಲೋ ಬೇಡವೋ ಎಂದು ಒಂದು ಕ್ಷಣ ಹೊಯ್ದಾಡುತ್ತದೆ. ಮರುಕ್ಷಣ ಅವನ ಮಹೋನ್ನತ ಸಂಸ್ಕಾರ ಯೋಚಿಸುತ್ತದೆ. ‘ಆಕೆಯ ಪುಣ್ಯವನ್ನು ಕ್ಷಯಿಸಿದ ದುಷ್ಟನು ಮಾತ್ರ ಆಕೆಯನ್ನು ನೋಡಿಕೊಳ್ಳಬೇಕೆ?, ದೇವರು ಪಾಪಿಷ್ಟರ ಉದ್ಧಾರಕ, ಆ ಕರುಣೆ ಇರಬೇಕು’ (ಪುಟ- 472) ಎಂಬಂತಹ ತೀರ್ಮಾನಕ್ಕೆ ಬರುತ್ತಾನೆ. ರಮಾಬಾಯಿಯವರು ದೈನ್ಯ ಸ್ಥಿತಿಯಲ್ಲಿ ಸುಬ್ಬಣಾಚಾರ್ಯರಿಂದ ಹೊತ್ತ ಗರ್ಭವನ್ನು ಇಳಿಸಿಕೊಂಡು ಜ್ವರದಿಂದ ನರಳುತ್ತಾ ಬಿದ್ದಿರುವುದನ್ನು ನರಹರಿ ನೋಡುತ್ತಾನೆ. ಈಗೊಂದು ನಿಮಿಷಕ್ಕೋ, ಇನ್ನೊಂದು ನಿಮಿಷಕ್ಕೋ ಅವರ ಪ್ರಾಣಪಕ್ಷಿ ಹಾರಿ ಹೋಗುವ ಹಂತದಲ್ಲಿರುತ್ತದೆ. ನರಹರಿ ಬಂದ ಸುದ್ದಿಯನ್ನು ಸುಬ್ಬಣಾಚಾರ್ಯರು ರಮಾಬಾಯಿಗೆ ತಿಳಿಸುತ್ತಾರೆ. ಹೊರಸಿನ ಸ್ಥಿತಿಯಲ್ಲಿದ್ದ ರಮಾಬಾಯಿಯವರು ಚಟಕ್ಕನೆ ಎದ್ದು ಕೂರುತ್ತಾರೆ. ದೀನ ದೃಷ್ಟಿಯಿಂದ ನರಹರಿಯನ್ನು ನೋಡುತ್ತಾ ‘ಹೊತ್ತಿಗೆ ಬಂದೆಪ್ಪಾ ನರಹರಿ! ದೇವರು ಕಳಿಸಿದ್ಹಂಗ ಬಂದಿ! ಕೂಡು..ʼ ಎಂದು ಹೇಳಿ ಕಣ್ಣೀರು ತುಂಬಿಕೊಂಡು ಬೇನೆಯ ಆವೇಶದಿಂದೆಂಬಂತೆ ಮಾತನಾಡ ತೊಡಗುತ್ತಾರೆ. ‘ನರಹರಿ ಇನ್ನು ನಾ ಬದುಕಿರೋದು ಒಂದು ಘಳಿಗ್ಯೋ! ಎರಡು ಘಳಿನ್ಯೋ! ಸಾವಿಗೆ ನಾ ಹೆದರಿಲ್ಲಾ. ಆದರೆ ನಾ ನಿನಗೆ ಮಾಡಿದ ಅನ್ಯಾಯ ನನ್ನ ಎದೀಯೊಳಗ ಕುದೀತದ. ನೀ ನನ್ನ ಕ್ಷಮಿಸೀ ಅಂತ ಹೇಳಬಿಡು! ನಾ ಸಂತೋಷದಿಂದ ಸಾಯತೇನಿ”. ನರಹರಿ ಮೂಕನಾದ. ಹೃದಯ ಸಂಕಟಪಟ್ಟಿತು. ತನ್ನ ಹತ್ತಿರ ನಡೆದುಕೊಂಡ ತಪ್ಪೊಂದನ್ನು ಬಿಟ್ಟು ಆಕೆ ಹೆಣ್ಣಾಗಿ ಅನುಭವಿಸಿದ ಕಷ್ಟಗಳನ್ನೆಲ್ಲ ನೆನೆದ. ಸಂತಾಪ ಉಂಟಾಯಿತು. ಹೇಳಿದ: ‘ಅದರೊಳಗೇನದವಾ! ನಾ ಕ್ಷಮಿಸೇನಿ’ ಅಂತಃಕರಣ ಕರಗಿ ನುಡಿದ ಮಾತಷ್ಟೇ ರಮಾಬಾಯಿಯವರಿಗೆ ಸಾಕಾಗಿತ್ತು. ಅಖಂಡವಾದ ರಾಮನಾಮ ಅವರ ಬಾಯಿಂದ ಹೊರಬಂತು. ಉಸಿರು ಅಗಲೇ ತೇಕುಹತ್ತಿ ಮೇಲಕ್ಕೂ ಕೆಳಕ್ಕೂ ಆಯಿತು. ಮನೆಯ ಕೀಲಿಕೈಯನ್ನು ಅತಿಪ್ರಯಾಸದಿಂದ ನರಹರಿಯ ಕೈಗೆ ಕೊಡುತ್ತಾ, ‘ಮನೆಯ ದೀಪ ಹಚ್ಚೋವಾ ನೀನು!’ ಎಂದು ನುಡಿದು, ಅವನ ಕೈಯಿಂದಲೇ ಗಂಗೋದಕ ಬೀಳಿಸಿಕೊಂಡು ನಿಶ್ಚಿಂತೆಯಿಂದ ಮಡಿದರು. ತನ್ನ ಕೈಯಿಂದ ಗಂಗೋದಕ ನೀಡಿಸಿಕೊಂಡು ಶಾಂತಿಯಿಂದ ಸತ್ತ ರಮಾಬಾಯಿಯವರನ್ನು ನೆನೆಸಿ ‘ದೈವಸಂಕಲ್ಪ’ ಎಂದು ಬಗೆದು ಕಣ್ಣೀರು ತೆಗೆದ. ತಾನು ಇಲ್ಲಿ ಈ ಸಂದರ್ಭದಲ್ಲಿ ಹೀಗೆ ನಡೆದುಕೊಂಡುದರ ಬಗ್ಗೆ ಅವನಿಗೆ ಸಮಾಧಾನವಾಯಿತು.

ಗೋಕಾಕರು ಈ ರೀತಿಯ ಸನ್ನಿವೇಶವೊಂದನ್ನು ಫಂಡರಪುರದಲ್ಲಿ ಘಟಿಸುವಂತೆ ಮಾಡಿದ್ದು ಕಾದಂಬರಿಯ ಯಶಸ್ವೀ ಕ್ಷಣವೆಂದೇ ಭಾಸವಾಗುತ್ತದೆ. ರಮಾಬಾಯಿಯವರ ವಿಷಯದಲ್ಲಿ ನರಹರಿ ನಡೆದುಕೊಂಡ ರೀತಿ ಮತ್ತು ರಮಾಬಾಯಿಯಂತಹ ಹೆಣ್ಣಿಗೂ ದೇವರ ಮುಂದೆ ಶಾಂತಿ, ಸಮಾಧಾನ ಹೊಂದುವ ಅವಕಾಶವಿದೆ ಎಂಬುದನ್ನು ನಿರೂಪಿಸಿದ ತಾತ್ತ್ವಿಕ ನೀತಿ- ಇವೆರಡೂ ಓದುಗರ ಮನಸ್ಸನ್ನು ಗೆಲ್ಲುತ್ತವೆ. ರಮಾಬಾಯಿಯವರು ಕಾಮ, ಪ್ರೇಮದ ನಡುವೆ ತೊಳಲಾಡಿದಂತಹ ಜೀವ. ಕೊನೆಗೆ ಅವರಿಗೆ ಕಾಮವೂ- ಪ್ರೇಮವೂ ಬಯಕೆಯ ಶಾಪವಾಗಿ ಬೆನ್ನು ಹತ್ತಿತೇ ವಿನಃ ಅದು ಅವರ ಜೀವನದಲ್ಲಿ ಸಾಫಲ್ಯ ಪಡೆಯಲಿಲ್ಲ. ದಾಂಪತ್ಯದಲ್ಲಿ ಈ ಅನುಭವ ಹೊಂದುವ ಅವಕಾಶವಿಲ್ಲದ ನತದೃಷ್ಟ ಹೆಣ್ಣಾದ ರಮಾಬಾಯಿ ಬಯಕೆಗೆ ಸುಬ್ಬಣಾಚಾರ್ಯರನ್ನು ಕೂಡಿದರೂ ಅವರ ಮನಸ್ಸು ಪರಿಶುದ್ಧ ಪ್ರೇಮವನ್ನುಣ್ಣುವ ತವಕದಲ್ಲಿತ್ತು. ಎದೆಯಲ್ಲಿ ನರಹರಿಗೆ ಮಾಡಿದ ಅನ್ಯಾಯದ ಕೊರಗು ಬೆಂಕಿಯಾಗಿ ಸುಡುತ್ತಿತ್ತು. ಸಾಯುವ ಕಾಲದ ಕೆಲವು ಕ್ಷಣಗಳಲ್ಲಿ ನರಹರಿಯ ಪುತ್ರವಾತ್ಸಲ್ಯದ ಅಮೃತವನ್ನು ಪಾನ ಮಾಡಿ ಸಾಯುವ ತಾಯಿಯಾಗಿಯೂ ಮಾಡಿದ ಪಾಪದ ಪ್ರಾಯಶ್ಚಿತ್ತ ಮಾಡಿಕೊಂಡ ಹೆಣ್ಣಾಗಿಯೂ ರಮಾಬಾಯಿ ಕಾಣುತ್ತಾರೆ. ಹೀಗೆ ಅವರ ಬದುಕಲ್ಲಿ ಪಾಪಕ್ಷಯ ಅನುಭೂತಿಯ ಸನ್ನಿವೇಶವೊಂದನ್ನು ಹೃದಯ ಸ್ಪರ್ಶಿಯಾಗಿ ಚಿತ್ರಿಸಿದ ಗೋಕಾಕ್‍ರ ಮಾನವೀಯತೆಯ ಉತ್ತುಂಗ ಪ್ರತಿಭೆ ತನ್ನ ಮೇರುತ್ಪಮವನ್ನು ಸಾಬೀತು ಪಡಿಸುತ್ತದೆ.

ರಮಾಬಾಯಿಯವರು ಸತ್ತ ಮೇಲೆ ನರಹರಿ ಮೊಗ್ಗಾವಿಗೆ ಹೊರಡುತ್ತಾನೆ. ಅಲ್ಲಿ ಕೇಶವ, ಮೇನಕಾ, ಜಾನಕಿಬಾಯಿ, ಗಣಪತಿರಾಯರು, ಶ್ರೀಪಾದರಾಯರು, ಶೀನು ಎಲ್ಲರನ್ನೂ ಭೇಟಿಯಾಗುತ್ತಾನೆ. ಇತ್ತ ಪಾಟಣ್ಕರ್ ಮತ್ತು ಶೀನು ವಿಲಾಯಿತಿಗೆ ಹೋಗುವ ಸಿದ್ಧತೆ ನಡೆಸುತ್ತಾರೆ. ರಂಗಾಸಾನಿ ಹಾಗೂ ದೇಸಾಯಿಯವರು ಕಾಶೀಯಾತ್ರೆಗೆ ಹೊರಡುತ್ತಾರೆ. ರಂಗಾಸಾನಿಯ ಪಾತ್ರ ಎಷ್ಟು ಮಧುರವಾಗಿ ಮೂಡಿಬಂದಿದೆ! ದೇಸಾಯಿಯವರ ಹೃದಯ ಸಿಂಹಾಸನದಲ್ಲಿ ಸ್ನಿಗ್ಧವಾಗಿ ವಿರಾಜಮಾನಳಾದ ರಂಗಾಸಾನಿ! ಹೆಂಡತಿಯ ಸ್ಥಾನವನ್ನು ದೇಸಾಯಿಯವರು ರಂಗಾಸಾನಿಗೆ ಕೊಟ್ಟರು. ರಂಗಾಸಾನಿ ದೇಸಾಯಿಯವರನ್ನು ತನ್ನ ದೇವರೆಂದು ಕಂಡಳು. ಇಡೀ ಜೀವನ ಪರಸ್ಪರ ಗೌರವ, ಪ್ರೀತಿ, ಕಾಳಜಿ ಇವುಗಳಲ್ಲಿ ಮಾಧುರ್ಯದ ಉತ್ತುಂಗವನ್ನು ಪಡೆಯಿತು. ರಂಗಾಸಾನಿ ಕಾಶೀ ವಿಶ್ವೇಶ್ವರನ ಎದುರಿಗೆ ನೃತ್ಯ ಮಾಡಿದಳು. ಆ ನೃತ್ಯ, ಚೈತನ್ಯದಾಯೀ ನೃತ್ಯಶಕ್ತಿಯೊಂದು; ತತ್ವವೊಂದು ಶಿವನಲ್ಲಿ ಲೀನವಾಗುವ ಹಂತದಂತೆ ಕಂಡಿತು. ನೃತ್ಯ ಮಾಡುತ್ತಾ ಮಾಡುತ್ತಾ ರಂಗಾಸಾನಿ ಭಕ್ತಿಯ ಪರಾಕಾಷ್ಠೆ ಮುಟ್ಟಿದಳು. ಕನಸಲ್ಲದ, ಎಚ್ಚರವೂ ಅಲ್ಲದ ಸ್ಥಿತಿಯಲ್ಲಿ ರಂಗಾಸಾನಿಯ ಮುಕ್ತಿಯ ಬಾಗಿಲು ತೆರೆಯಿತು. ಕಾಲರಾ ಬಂದು ಒಂದೇ ದಿನಕ್ಕೆ ರಂಗಸಾನಿ ದೈವದ ಹತ್ತಿರ ನಡೆದಳು. ಎಷ್ಟು ಶಾಂತವಾದ ಸಾವು ಅವಳದಾಯಿತು! ಸ್ವಾಮಿದಾಸರನ್ನು ಕಂಡಾಗಿಂದ ಒಂದು ರೀತಿಯ ಅಂತರ್ಮುಖತೆಯನ್ನು ಹೊಂದಿದ್ದ ರಂಗಾಸಾನಿ ಅದನ್ನು ತನ್ನ ಅಂತರಂಗದ ದೀಪವಾಗಿಸಿದ್ದಳು. ಕೊನೆಗೆ ದೇಸಾಯಿಯವರ ಎದುರಲ್ಲೇ ಶಾಂತವಾಗಿ ಇಹಜೀವನ ತ್ಯಜಿಸಿದಳು. ಓದುಗರ ಮನದಲ್ಲಿ ಮುಚ್ಚಟೆಯ ಒಂದು ಸ್ಥಾನವನ್ನು ಸಾನಿ ಗಳಿಸಿದಳು!

ವಿಷ್ಣು- ಶೀನರ ಸಮುದ್ರ ಪ್ರಯಾಣದೊಂದಿಗೆ ಆರಂಭವಾಗುವ ಕಾದಂಬರಿ ʼಸಮುದ್ರಯಾನʼ! ವಿಷ್ಣುವನ್ನು ಬಿಟ್ಟು ತವರಿನಲ್ಲೇ ಇರುವ ಚಿಂತೆಯಲ್ಲಿ ಪ್ರಮೀಲೆ! ಶೀನುವನ್ನು ಬಿಟ್ಟಿರಬೇಕಾದ ಸ್ಥಿತಿಯಲ್ಲಿ ಸುಶೀಲೆ! ಆದರೆ ಕಾಲಕ್ಕೆ ಕರುಣೆಯೆಲ್ಲಿ? ವಿಷ್ಣು, ಶೀನು ಮನಸ್ಸಿಲ್ಲದ ಮನಸ್ಸಿನಲ್ಲಿ ಹೊರಟು ನಿಂತಿದ್ದೇನೋ ನಿಜ. ವಿದೇಶೀ ಪ್ರಯಾಣ, ಅಲ್ಲಿಯ ಸಂಸ್ಕೃತಿಯ ಕಾರಣಕ್ಕೆ ಭಾರತೀಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಂಟಾಗುವ ತಾಕಲಾಟ, ರೋಗ, ಮರಣ, ಪ್ರೀತಿ, ಮೋಹ ಎಲ್ಲವನ್ನೂ ಹೇಳಲು ಪಾತ್ರಗಳು ಒಂದೇ ಮನಸ್ಸಿನಿಂದ ದುಡಿಯುತ್ತವೆ. ಇಲ್ಲಿಂದ ಹೋದ ಪ್ರತಿ ಭಾರತೀಯನ ಮನಸ್ಸಿನ ದುರ್ದಮ್ಯವಾದ ಏಕಾಂತದ ವೇದನೆ ಅಷ್ಟೇ ತೀಕ್ಷ್ಣವಾಗಿ ನಮ್ಮನ್ನು ತಟ್ಟುತ್ತದೆ. ಆಶ್ಚರ್ಯವೆಂದರೆ ಗೋಕಾಕ್‍ರು ಕಾದಂಬರಿಯಲ್ಲಿ ಹಡಗಿನ ಪ್ರಯಾಣದ ಬಗ್ಗೆ ವಿವರಗಳನ್ನು ಕೊಡುವುದು! ಅದೆಷ್ಟು, ಅನುಭವ ಅವರ ಚೀಲದಲ್ಲಿ! ‘ಸಮುದ್ರಯಾನ’ದಲ್ಲಿ ‘ಹಡಗು’ ಕೂಡಾ ಒಂದು ಪಾತ್ರವೋ ಎಂಬಂತೆ ಭಾಸವಾಗುತ್ತದೆ. ವಿಷ್ಣು, ಶೀನು ರ ಜೊತೆಗೆ ಪಟೇಲ, ತ್ರೀವೇದಿ, ಚಾತರ್ಜಿ, ಕುಮಾರಿ ಬರ್ವೆ, ಕೆಲವು ವಿದೇಶೀಯರು- ಎಲ್ಲ ಪಾತ್ರಗಳೂ ಡೆಕ್ಕಿನ ಮೇಲೆ ತಮ್ಮ ತಮ್ಮ ಸ್ವಭಾವವನ್ನು ವ್ಯಕ್ತಿತ್ವವನ್ನು ಅನಾವರಣ ಮಾಡುತ್ತ ಬೃಹತ್ ಕಾದಂಬರಿಯ ತೃಣಭಾಗವಾಗಿ ಸಾರ್ಥಕ ಪ್ರಕಟತೆಯನ್ನು ಪಡೆದುಕೊಳ್ಳುತ್ತವೆ. ವಿದೇಶೀಯರ ವಿಲಾಸಿ ಹುಚ್ಚು, ನಮ್ಮ ಸಂಸ್ಕೃತಿಯ ನಾಡಿಮಿಡಿತವೇ ಗೊತ್ತಿಲ್ಲದ ಅನೇಕ ಭಾರತೀಯ ಮನಸ್ಸುಗಳ ಆಂಗ್ಲಮೋಹ- ಇವೆಲ್ಲವನ್ನೂ ತೀವ್ರತರವಾಗಿ ಗಮನಿಸುವ ಕೆಲವು ಪ್ರಜ್ಞೆಗಳು! ಎಲ್ಲವೂ ಕಾದಂಬರಿಯಲ್ಲಿ ಮೈ ಪಡೆಯುತ್ತವೆ. ಇವೆಲ್ಲವೂ ಹಡಗಿನ ಡೆಕ್ಕಿನ ಮೇಲೆ ನಡೆಯುವ ವಿವರಗಳು.

ಇತ್ತ ಮೊಗ್ಗಾಮಿಯ ವಿಷಯ ಬೇರೆಯದೇ ಕಾಲವನ್ನು ಪ್ರತಿನಿಧಿಸುತ್ತಾ ಸಮಯ ಕಳೆಯುತ್ತದೆ. ಮೇನಕೆ- ಕೇಶವನಿಗೆ ಈಗೊಬ್ಬ ಮಗ. ಅವನ ಕರಣಕ್ಕೆ ಜಾನಕಿಬಾಯಿರಿಗೆ ಆಗೀಗ ಮುದ್ದು ಮಾಡಲು ಮೊಮ್ಮಗನೊಬ್ಬ ಸಿಕ್ಕಂತಾಗಿದೆ. ಮೊದಲಿನ ಕುದಿ ದ್ವೇಷ ಮೆಲ್ಲಗೆ ಮೊನಚು ಕಳಕೊಂಡಿದೆ.

ಇತ್ತ ನರಹರಿ- ಕುಸುಮೆಯರ ಜೀವನದಲ್ಲಿ ಮಹತ್ವದ ಘಟನೆಯೊಂದು ಜರುಗಿತು. ಸ್ವಾತಂತ್ರ್ಯದ ಕಹಳೆ ಮೊಳಗುತ್ತಿದ್ದ ಕಾಲ. ನರಹರಿ ಮನಸ್ಸಿನಲ್ಲೇ ಉದ್ವೇಗಗೊಳ್ಳುತ್ತಿದ್ದ. ಕುಸುಮೆ ಓದು ಮುಗಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರಾಯ್ತೆಂದು ಅಂದುಕೊಳ್ಳುವಳು! ದೇಸಾಯಿಯರ ಆಸೆಯೂ ಅದೇ ಆಗಿತ್ತು. ಆದರೆ ನರಹರಿಯ ದೈವ ಬೇರೆ ಇತ್ತು. ಪರೀಕ್ಷೆಗೆ ಇನ್ನೊಂದೆರಡು ತಿಂಗಳು ಬಾಕಿ ಇದೆ ಎಂದಾಗ ದಾರಿಯ ಮಧ್ಯದಲ್ಲಿ ತಿರುಗುತ್ತಾ ಹೋಗುತ್ತಿರಬೇಕಾದರೆ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಅವನೆದೆಯನ್ನು ಭೋರ್ಗರೆಸಿ ಬೆಂಕಿಯ ಕಿಡಿ ಹಚ್ಚಿತು. ನರಹರಿ ಅಲ್ಲಿಯ ಭಾಷಣಕ್ಕೆ ಕೇವಲ ಕಿವಿ ಕೊಟ್ಟಿದಷ್ಟೇ ಅಲ್ಲ, ಹೃದಯವನ್ನೂ ಕೊಟ್ಟ. ಅಂದಿನಿಂದ ಅವನ ಜೀವನದ ದಿಕ್ಕು ಬದಲಾಯಿತು. ಹಾಗೆ ನೋಡಿದರೆ ಈ ಕಾದಂ ಬರಿಯ ಹೆಸರು ʼಸಮುದ್ರಯಾನʼ. ನರಹರಿಯನ್ನು ಬಿಟ್ಟು ಉಳಿದವರೆಲ್ಲರೂ ಸಮುದ್ರಯಾನವನ್ನು ಕೈಗೊಂಡು ವಿದೇಶಕ್ಕೆ ಸಾಗಿದ್ದರು. ಆದರೆ ನರಹರಿಯ ಜೀವನ ಮಾತ್ರ ನಿಜವಾದ ಸಮುದ್ರಯಾನವಾಗಿತ್ತು. ಉಳಿದೆಲ್ಲ ಅವನ ಸ್ನೇಹಿತರು ಕೇವಲ ಭೌತಿಕ ಶರೀರವನ್ನು ಹೊತ್ತು ಸಮುದ್ರದಾಚೆ ಹಾರಿ ಖಂಡಾಂತರ ಪ್ರವಾಸ ಕೈಗೊಂಡಿದ್ದರು! ನರಹರಿ ಸಮುದ್ರ ದಾಟದೇ ಜೀವನ ಸಮುದ್ರದ ಹಡುಗನ್ನೇರಿ ಹೊರಟಿದ್ದನು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಅವನಂತಹ ಉಕ್ಕಿನ ಯುವಕರ ಕೈಯ್ಯ ಮಾಣಿಕ್ಯವಾಗಿತ್ತು. ಅವನದಕ್ಕೆ ತನ್ನನ್ನೇ ತಾನು ಸಮರ್ಪಿಸಿಕೊಳ್ಳಲು ಸಿದ್ಧನಿದ್ದ.

ಮುಂದುವರೆಯುತ್ತದೆ..

SANDHYA HEGADE

ಲೇಖಕರು: ಸಂಧ್ಯಾ‌ ಹೆಗಡೆ ದೊಡ್ಡಹೊಂಡ

 

ಲೇಖನದ 2ನೇ ಭಾಗವನ್ನು ಇಲ್ಲಿ ಓದಿ: Vinayaka Krishna Gokak: ಗೋಕಾಕರ ಕಾದಂಬರಿ ಲೋಕ, ಪಾತ್ರಗಳ ಅಗಾಧ ಅನುಭವದ ಸಂತೆ

Published On - 3:18 pm, Mon, 9 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ