VHP ಮುಖಂಡ ಶರಣ್ ಪಂಪ್ವೆಲ್ ಅರೆಸ್ಟ್: ಹಿಂದೂ ಕಾರ್ಯಕರ್ತರ ಜಮಾವಣೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನದಿಂದ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಮುಸ್ಲಿಂ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಮಂಗಳೂರು, ಮೇ 27: ಮಂಗಳವಾರ (ಮೇ.27) ಬಂಟ್ವಾಳದ (Bantwala) ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಕೊಲೆಯಾಗಿದೆ. ಇದರಿಂದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶರಣ್ ಪಂಪ್ವೆಲ್ ಅವರನ್ನು ಬಂಧಿಸಿದ್ದಾರೆ. ಶರಣ್ ಪಂಪ್ವೆಲ್ ಅವರ ಬಂಧನ ತಿಳಿಯುತ್ತಿದ್ದಂತೆ ಕದ್ರಿ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ.
ಮುಸ್ಲಿಮರನ್ನು ಒಲೈಸಿಲು ಬಂಧಿಸಿದ್ದಾರೆ: ವಿಹೆಚ್ಪಿ ಮುಖಂಡ
ಮುಸ್ಲಿಮರನ್ನು ಒಲೈಸಿಲು ಸರ್ಕಾರ ಪೊಲೀಸರಿಗೆ ಒತ್ತಡ ತಂದಿದೆ. ಸುಹಾಸ್ ಶೆಟ್ಟಿ ಹತ್ಯೆಯ ದಿನ ಬಂದ್ಗೆ ಕರೆ ನೀಡಿರುವುದಕ್ಕೆ ಕೇಸ್ ಆಗಿತ್ತು. ಪ್ರಕರಣ ದಾಖಲಾಗಿ 20 ದಿನಗಳು ಕಳೆದುಹೋಗಿವೆ. ಈಗ ಬಂಧನ ಮಾಡಿರುವುದು ಯಾಕೆ? ಇವತ್ತಿನ ಘಟನೆ ಹಿನ್ನೆಲೆಯಲ್ಲಿ ಮುಸ್ಲಿಮರನ್ನು ಓಲೈಕೆ ಮಾಡಲು ಬಂಧಿಸಲಾಗಿದೆ. ಜೈಲಿಗೆ ಹಾಕಲ್ಲ ಅಂತ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಶರಣ್ ಪಂಪ್ವೆಲ್ ಅವರನನ್ನು ಜೈಲಿಗೆ ಹಾಕಿದರೆ ಮುಂದೆ ಆಗುವ ಘಟನೆಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಸರ್ಕಾರ ಮತ್ತು ಪೊಲೀಸರಿಗೆ ವಿಹೆಚ್ಪಿ ಮುಖಂಡ ಮುಖಂಡ ಪ್ರದೀಪ್ ಸರಿಪಲ್ ಎಚ್ಚರಿಕೆ ನೀಡಿದ್ದಾರೆ.
ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಿ: ಮುಸ್ಲಿಂ ಮುಖಂಡರ ಒತ್ತಾಯ
ಕೆಲ ದಿನಗಳಿಂದ ಕೆಲ ಕಿಡಿಗೇಡಿಗಳು ಮುಸ್ಲಿಮರಿಗೆ ಬಹಿರಂಗ ಬೆದರಿಕೆ ಹಾಕುತ್ತಿದ್ದಾರೆ. ರೌಡಿಶೀಟರ್ ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮೊನ್ನೆ ಪ್ರತಿಭಟನೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬಾತ ರಕ್ತಕ್ಕೆ ರಕ್ತ ಅಂತ ಹೇಳಿದ್ದಾನೆ. ಮತ್ತೊಬ್ಬ ಭರತ್ ಕುಮ್ಡೇಲ್ ಎಂಬ ಗೂಂಡಾ, ಪೋಸ್ಟ್ಮಾರ್ಟ್ಂ ಕೂಡ ಮಾಡಲು ಆಗದ ರೀತಿಯಲ್ಲಿ ಕೊಲೆ ಮಾಡುತ್ತೇನೆ ಎಂದಿದ್ದಾನೆ. ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕಿದವರ ವಿರುದ್ಧ 45 ಎಫ್ಐಆರ್ ಆಗಿವೆ. ಆದರೆ ಒಬ್ಬಿಬ್ಬರನ್ನು ಬಿಟ್ಟು ಯಾರನ್ನೂ ಬಂಧನ ಮಾಡಲಿಲ್ಲ. ಎಲ್ಲರನ್ನು ಬಂಧಿಸಿ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಕೇಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ಸುಹಾಸ್ ಶೆಟ್ಟಿ ಕೊಲೆ
ಕಳೆದ ಗುರುವಾರ (ಮೇ.01) ದಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದರು.







