ಶಿರಾಡಿ, ಚಾರ್ಮಾಡಿ, ಶಿರೂರಿನಲ್ಲಿ ಭೂಕುಸಿತ: ಉತ್ತರ ಕನ್ನಡದಲ್ಲಿ ಹೆದ್ದಾರಿಯ 19 ಕಡೆ ವಾಹನ ನಿಲುಗಡೆ ಬಂದ್
ಕರ್ನಾಟಕದಾದ್ಯಂತ ಮುಂಗಾರು ಮಳೆ ಬಿರುಸುಗೊಂಡಿದ್ದು, ಅದರಲ್ಲಿಯೂ ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ವರ್ಷಧಾರೆ ಜೋರಾಗಿದೆ. ಇದರ ಬೆನ್ನಲ್ಲೇ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ಶಿರಾಡಿ, ಚಾರ್ಮಾಡಿ, ಶಿರೂರಿನಲ್ಲಿ ಭೂಕುಸಿತಗಳು ಸಂಭವಿಸಿವೆ. ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ಸಂಭಾವ್ಯ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಜಾಗಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಎಲ್ಲೆಲ್ಲಿ ಎಂಬ ವಿವರಗಳು ಇಲ್ಲಿವೆ.

ಬೆಂಗಳೂರು, ಮೇ 27: ಉತ್ತರ ಕನ್ನಡ ಜಿಲ್ಲೆಯ ಶಿರೂರು ಭೂಕುಸಿತ (Shirur Landslide) ದುರಂತವಾಗಿ ಇನ್ನೂ ಒಂದು ವರ್ಷ ಕೂಡಾ ಕಳೆದಿಲ್ಲ. ಆಗಲೇ ರಾಜ್ಯದಲ್ಲಿ ಸುರಿಯುತ್ತಿರುವ ಭಯಾನಕ ಮಳೆ ಮತ್ತೆ ಗುಡ್ಡ ಕುಸಿತದ ಭೀತಿ ಸೃಷ್ಟಿಸಿದೆ. ಈಗಾಗಲೇ ಶಿರಾಡಿ ಘಾಟ್ (Shoradi Ghat), ಚಾರ್ಮಾಡಿ ಘಾಟ್ ಮತ್ತು ಉತ್ತರ ಕನ್ನಡದ ಶಿರೂರಿನಲ್ಲಿ ಹಲವೆಡೆ ಭೂಮಿ ಕುಸಿಯುತ್ತಿದೆ. ಸಂಭಾವ್ಯ ಅಪಾಯಕರ ಜಾಗಗಳನ್ನು ಉತ್ತರಕನ್ನಡ ಜಿಲ್ಲಾಡಳಿತ ಗುರುತಿಸಿದೆ.
ಹೆದ್ದಾರಿಯಲ್ಲಿ ವಾಹನ ನಿಲುಗಡೆ ಬಂದ್
ಶಿರೂರು ದುರಂತದಿಂದ ಎಚ್ಚೆತ್ತುಕೊಂಡಿರುವ ಉತ್ತರಕನ್ನಡ ಜಿಲ್ಲಾಡಳಿತ ಸಂಭಾವ್ಯ ಗುಡ್ಡ ಕುಸಿತದ 439 ಸ್ಥಳಗಳನ್ನು ಗುರುತು ಮಾಡಿದೆ. ಈ ಪೈಕಿ 19 ಸೂಕ್ಷ್ಮ ಪ್ರದೇಶಗಳು ಹೆದ್ದಾರಿ ಪಕ್ಕದಲ್ಲಿವೆ. ಹೆದ್ದಾರಿಯ ಈ 19 ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
ಚಾರ್ಮಾಡಿಯಲ್ಲಿ ಭೂಕುಸಿತ: ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ನಲ್ಲಿ ಕಳೆದ ವರ್ಷ ಕುಸಿದ ಜಾಗದಲ್ಲೇ ಮತ್ತೆ ಮಣ್ಣು ಕುಸಿಯುತ್ತಿದೆ. ಆದರೆ, ಅಧಿಕಾರಿಗಳು ಮಣ್ಣು ಕುಸಿಯುತ್ತಿರುವ ಜಾಗವನ್ನು ಪ್ಲಾಸ್ಟಿಕ್‌ನಿಂದ ಮುಚ್ಚಿದ್ದಾರೆ. ಆದರೆ, ತಡೆಗೋಡೆ ಕೂಡಾ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಈ ಮಳೆಗಾಲದ ಹೊತ್ತಿಗೆ ಕಾಮಗಾರಿ ಮುಗಿಸುವಂತೆ ಜಿಯಾಲಜಿಕಲ್ ಸರ್ವೇ ವಿಜ್ಞಾನಿಗಳು ಹೇಳಿದ್ದರು. ಆದರೆ, ಮಳೆ ಆರಂಭವಾದರೂ ಇನ್ನೂ ಕೂಡಾ ಕೆಲಸ ಮುಗಿದಿಲ್ಲ. ಇದರಿಂದ ಮತ್ತೆ ಆತಂಕ ಸೃಷ್ಟಿಯಾಗಿದೆ.
ಶಿರಾಡಿ ಘಾಟಿಯಲ್ಲೂ ಭೂಕುಸಿತ
ಶಿರಾಡಿ ಘಾಟ್‌ನಲ್ಲೂ ಭೂಮಿ ಕುಸಿದಿದೆ. ಭಾರಿ ಮಳೆಯಿಂದ ಶಿರಾಡಿಘಾಟ್‌ನ ಹಲವೆಡೆ ಭೂಕುಸಿತದ ಭೀತಿ ಉಂಟಾಗಿದೆ. ನೂರಾರು ಅಡಿ ಎತ್ತರಕ್ಕೆ ಗುಡ್ಡ ಕಡಿದಿರುವ ಕಾರಣ ಮಣ್ಣು ಕುಸಿಯುವ ಆತಂಕ ಮೂಡಿದೆ. ಆನೆಮಹಲ್ ಬಳಿಯೂ ಭಾರಿ ಪ್ರಮಾಣದ ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಕುಸಿಯುತ್ತಿದೆ. ಆತಂಕದಲ್ಲೇ ವಾಹನ ಸವಾರರು ಸಂಚರಿಸ್ತಿದ್ದಾರೆ. ಶಿರಾಡಿ ಘಾಟ್ ಮಾತ್ರವಲ್ಲ ಸಕಲೇಶಪುರದ ಹಲವೆಡೆ ಇದೇ ರೀತಿಯ ಸ್ಥಿತಿ ನಿರ್ಮಾಣವಾಗಿದೆ. ಮನೆಗಳು ಕೂಡಾ ಕುಸಿಯುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ಮಳೆ ಅವಾಂತರದ ಬೆನ್ನಲ್ಲೇ ಸಕಲೇಶಪುರ ಭಾಗದ ಶಿರಾಡಿಘಾಟ್‌ಗೆ ಸಂಸದ ಶ್ರೇಯಸ್ ಪಟೇಲ್ ಸೋಮವಾರ ಭೇಟಿ ನೀಡಿದ್ದಾರೆ. ಇಂದು ವಿಪಕ್ಷ ನಾಯಕ ಆರ್.ಅಶೋಕ್ ಕೂಡಾ ಭೂಕುಸಿತ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 am, Tue, 27 May 25







