New Book : ಅಚ್ಚಿಗೂ ಮೊದಲು ; ‘ಸೃಷ್ಟಿಯು ಸೃಷ್ಟಿಯನ್ನೇ ಮುಟ್ಟುವ ಆ ಗಳಿಗೆ ಏನಾಗಿತ್ತು’

ಶ್ರೀದೇವಿ ಕಳಸದ

|

Updated on:Aug 08, 2021 | 2:21 PM

Poetry : ‘ಈ ಸಂಕಲನವು ತೇಜಶ್ರೀಯವರ ಕಾವ್ಯ ಸಾಧನೆಯ ಒಂದು ಮಜಲು. ಅಪೂರ್ವ ಪ್ರತಿಭೆಯ ಅವರು ಪ್ರತಿ ಹಂತದಲ್ಲಿಯೂ ತಮ್ಮನ್ನು ತಾವೇ ಪುನರ್ ಆವಿಷ್ಕಾರ ಮಾಡಿಕೊಳ್ಳುತ್ತ ಬರೆಯುತ್ತಾರೆ. ಹೀಗಾಗಿ ಬೆಳವಣಿಗೆ ಇತ್ಯಾದಿ ಪದಗಳನ್ನು ಬಳಸುವುದು ಅನುಚಿತವಾಗುತ್ತದೆ.‘ ಡಾ. ರಾಜೇಂದ್ರ ಚೆನ್ನಿ, ಹಿರಿಯ ವಿಮರ್ಶಕರು

New Book : ಅಚ್ಚಿಗೂ ಮೊದಲು ; ‘ಸೃಷ್ಟಿಯು ಸೃಷ್ಟಿಯನ್ನೇ ಮುಟ್ಟುವ ಆ ಗಳಿಗೆ ಏನಾಗಿತ್ತು’
ಕವಿ ಜ. ನಾ. ತೇಜಶ್ರೀ

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

* ಕೃತಿ : ಯಕ್ಷಿಣಿ ಕನ್ನಡಿ (ಕವನಗಳು)  ಕವಿ : ಜ. ನಾ. ತೇಜಶ್ರೀ ಪುಟ : 56 ಬೆಲೆ : ರೂ. 80 ಮುಖಪುಟ ವಿನ್ಯಾಸ : ಅಪಾರ ಪ್ರಕಾಶನ : ಪಲ್ಲವ ಪ್ರಕಾಶನ, ಬಳ್ಳಾರಿ

* ಸೂಕ್ಷ್ಮ ಗ್ರಹಿಕೆ, ಆಳ ಸಂವೇದನೆಯೊಂದಿಗೆ ಕಾವ್ಯದೊಳಗೆ ತೀವ್ರವಾಗಿ ಜೀವಿಸುವ ಜ. ನಾ. ತೇಜಶ್ರೀ ಅವರು ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುರುಬುಂಡೆ, ಮಾಗಿಕಾಲದ ಸಾಲುಗಳು, ಕ್ಯಾಪ್ಟನ್ ಕವಿತೆಗಳ ನಂತರ ‘ಯಕ್ಷಿಣಿ ಕನ್ನಡಿ’ಯನ್ನು ಕಾವ್ಯಪ್ರಿಯರ ಕೈಗಿಡುತ್ತಿದ್ದಾರೆ.

*

ತೇಜಶ್ರೀ, ಸಂಕಲನವನ್ನೋದಿ ಇಟ್ಟಾಗ, ಬಿರುಮಳೆ ಬಿಟ್ಟ ಮೇಲೆ ಬೆಟ್ಟದ ತಪ್ಪಲೊಂದರ ಪುರಾತನ ಮರದಡಿಗೆ ನಿಂತ ನಿಡುಶಾಂತ ಅನುಭವ ನನ್ನ ಮನಸ್ಸನ್ನಾವರಿಸಿತು. ನೀವೊಬ್ಬ ಗಂಭೀರ ಕಾವ್ಯೋಪಾಸಕಿ ಎಂದರೆ ನನಗೇ ಕ್ಲೀಷೆಯಂತೆ ಕೇಳಿಸುತ್ತದೆ. ಬೇರೆ ಹೇಗೆ ಇದನ್ನು ಹೇಳಬಹುದು? ಕವಿತೆಗೆ ನಾನಿಲ್ಲದೆಯೂ ನಡೆಯುತ್ತದೆ, ಆದರೆ ನನಗೆ ಕವಿತೆಯಿಲ್ಲದೆ ನಡೆಯದೆಂಬ ಸತ್ಯ ಅರಿತಂತೆ ನೀವು ಕವಿತೆ ಬರೆಯುತ್ತೀರಿ. ನಿಮ್ಮ ಹೊಸಪದಗಳ ಟಂಕು, ಹಳೆಪದಗಳಿಗೆ ಪುಟವಿಟ್ಟಿರುವ ಕೈಚಳಕ. ವಿಸ್ತರದ ಓದಿನ ಫಲವಾಗಿ ಗಳಿಸಿಕೊಂಡಿರುವ ಲೋಕಸ್ನೇಹ ಎಲ್ಲವೂ ನಿಮ್ಮ ಕವಿತೆಗಳನ್ನು ಓದುಗ ಮಿತ್ರವನ್ನಾಗಿಸಿವೆ. ನಿಮ್ಮ ಕಾವ್ಯವೃಕ್ಷಕ್ಕೆ ನೆಲದ ಮರೆದ ನಿಧಾನವೂ, ನೆಲದ ಮೇಗಣ ಜೀವರಸವೂ ಒದಗಿ ಬಂದು ಓದುಗರಿಗೊಂದು ಕಾವ್ಯನೆರಳಿನ ತಾಣ ದಕ್ಕಲಿ. ಲಲಿತಾ ಸಿದ್ಧಬಸವಯ್ಯ, ಹಿರಿಯ ಕವಿ

ಈ ಸಂಕಲನವು ತೇಜಶ್ರೀಯವರ ಕಾವ್ಯ ಸಾಧನೆಯ ಒಂದು ಮಜಲು. ಅಪೂರ್ವ ಪ್ರತಿಭೆಯ ಅವರು ಪ್ರತಿ ಹಂತದಲ್ಲಿಯೂ ತಮ್ಮನ್ನು ತಾವೇ ಪುನರ್ ಆವಿಷ್ಕಾರ ಮಾಡಿಕೊಳ್ಳುತ್ತ ಬರೆಯುತ್ತಾರೆ. ಹೀಗಾಗಿ ಬೆಳವಣಿಗೆ ಇತ್ಯಾದಿ ಪದಗಳನ್ನು ಬಳಸುವುದು ಅನುಚಿತವಾಗುತ್ತದೆ. ನನ್ನ ಸ್ವಂತದ ಪೂರ್ವಗ್ರಹವು (ಕಾವ್ಯದ ಬಗ್ಗೆ) ಇರುವುದು ತೀವ್ರತೆ, Tension, ಭಾಷೆಯೊಂದಿಗೆ ತಿಕ್ಕಾಟ ಇವುಗಳನ್ನು ಹೊಂದಿದ ಕಾವ್ಯದ ಬಗ್ಗೆ. ಅದು ನನ್ನ ವ್ಯಕ್ತಿತ್ವದ ಸ್ವಭಾವದಿಂದಾಗಿ ಬಂದಿರುವಂಥದು. ಅದಕ್ಕಿಂತ ಭಿನ್ನವಾದ ಈ ಸಂಕಲನದ ಪದ್ಯಗಳ ಭಾಷೆ ಹಾಗೂ ಲಯಗಳ ನಿರುಮ್ಮಳ ಖಚಿತತೆ, ಹಿಡಿತ ಮತ್ತು ಕ್ರಿಯಾಶೀಲತೆ ನನ್ನಲ್ಲಿ ಬೆರಗನ್ನೂ, ಅಚ್ಚರಿಯನ್ನೂ, ಹಾಗೆಯೆ ಮೆಚ್ಚುಗೆಯನ್ನು ಉಂಟುಮಾಡಿದ್ದಾವೆ. ಡಾ. ರಾಜೇಂದ್ರ ಚೆನ್ನಿ, ಹಿರಿಯ ವಿಮರ್ಶಕರು

*

acchigoo modhalu ja na thejashree

ಡಾ. ಯು. ಆರ್. ಅನಂತಮೂರ್ತಿಯವರೊಂದಿಗೆ ತೇಜಶ್ರೀ

ಉತ್ಕಟ ದನಿಗಾಗಿ ತಲ್ಲಣಿಸಿ ; ತೇಜಶ್ರೀ ಮಾತು

ತನ್ನ ಪತಿ ಶಿವನಿಗಾದ ಅವಮಾನವನ್ನು ಪ್ರತಿಭಟಿಸಿ ಸತಿ ದೇವಿಯು ಯಾಗಾಗ್ನಿಯಿಂದ ತನ್ನನ್ನು ದಹಿಸಿಕೊಳ್ಳುತ್ತಾಳೆ. ಇದನ್ನು ತಿಳಿದ ಶಿವನು ಆಕೆಯಿದ್ದಲ್ಲಿಗೆ ಹೋಗಿ ಅವಳ ಸುಟ್ಟ ದೇಹವನ್ನು ನೋಡಿ ತಲ್ಲಣಗೊಳ್ಳುತ್ತಾನೆ. ಸತಿಯ ಪ್ರೀತಿಯು ಶಿವನನ್ನು ದಿಕ್ಕೆಡಿಸುತ್ತದೆ. ಸುಟ್ಟ ದೇಹವನ್ನು ಕೈಯಲ್ಲಿ ಹಿಡಿದು ಶಿವನು ಜೋರಾಗಿ ಕೂಗತೊಡಗುತ್ತಾನೆ. ಅವಳನ್ನು ಎತ್ತಿಕೊಂಡು ದಿಕ್ಕು ತೋಚದೆ ಎಲ್ಲಾ ದಿಕ್ಕುಗಳಲ್ಲೂ ಓಡಾಡುತ್ತಾನೆ. ಪ್ರಕೃತಿಯ ಅಂಶಗಳಲ್ಲೆಲ್ಲ ಅವನಿಗೆ ಸತಿಯೇ ಕಾಣತೊಡಗುತ್ತಾಳೆ. ಶಿವ ಮತ್ತು ಸತಿಯ ಈ ಅಲೌಕಿಕ ಪ್ರೀತಿಯನ್ನು ಕಂಡು ಇಡೀ ಸೃಷ್ಟಿ ಸ್ಥಬ್ಧವಾಗುತ್ತದೆ. ಸೃಷ್ಟಿಯ ಚಲನವಲನಗಳು ನಿಂತು ಹೋಗುತ್ತವೆ.

ಪ್ರೀತಿಯ ಉತ್ಕಟತೆಯನ್ನು ಸಂಕೇತಿಸುವ ಪುರಾಣದ ಕಥೆ ಇದು. ಸತಿಗೆ ಶಿವನ ಮೇಲಿರುವ ಪ್ರೀತಿಯ ತೀವ್ರತೆ ಒಂದು ನೆಲೆಯದ್ದು; ಅವಳ ಈ ತೀವ್ರತೆಯು ಶಿವನನ್ನು ಬದಲಿಸುವ ಪ್ರೀತಿಯ ನೆಲೆ ಇನ್ನೊಂದು ತೆರನದ್ದು; ಇವರಿಬ್ಬರ ಪ್ರೀತಿಗೆ ಕಂಗೆಡುವ ಸೃಷ್ಟಿಯ ಒದ್ದಾಟ ಮತ್ತೊಂದು ಬಗೆಯದ್ದು. ತೀವ್ರವಾದ ಒಂದು ಭಾವ, ವಿಚಾರ, ಘಟನೆಯು ತನ್ನ ತೀವ್ರತೆಯ ಮೂಲಕವೆ ಮತ್ತೊಂದನ್ನು ತೀವ್ರವಾಗಿ ಬದಲಿಸುತ್ತದೆ ಅನ್ನುವುದಕ್ಕೆ ಇದು ಒಂದು ಚಿಕ್ಕ ಉದಾಹರಣೆ.

ಆಧುನಿಕ ತಂತ್ರಜ್ಞಾನದ ಹಲಬಗೆಯ ನಡೆತಪ್ಪಿಸುವ ಕವಲು ದಾರಿಗಳಿಂದಾಗಿ ಈ ಬಗೆಯ ತೀವ್ರತೆ, ಉತ್ಕಟತೆಯು ನಮ್ಮೊಳಗೆ ಸೊರಗಿದೆಯೆ? ಭಾಷೆಯನ್ನು ಉತ್ಕಟವಾಗಿ ಬಳಸಲು ಮತ್ತು ಆ ಮೂಲಕ ಅದನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲದ್ದರಿಂದಾಗಿ ಅದು ತನ್ನ ಎಲ್ಲ ಶಕ್ತಿಯನ್ನು ಕಳೆದುಕೊಂಡು ಕೇವಲ ಸಂವಹನ ಮಾಧ್ಯಮವಾಗಿ ಮಾತ್ರ ಉಳಿದು ಹೋಗಿದೆಯೆ? ಎನ್ನುವ ಪ್ರಶ್ನೆ ನನ್ನ ದೀರ್ಘಕಾಲದಿಂದ ಕಾಡಲು ತೊಡಗಿದ ಹೊತ್ತಲ್ಲಿ ಹುಟ್ಟಿದ ಕವಿತೆಗಳಿವು.

‘ಮಾಗಿಕಾಲದ ಸಾಲುಗಳು’ ಸಂಕಲನದ ನಂತರದ ಬಿಡಿಕವಿತೆಗಳು ಇದರಲ್ಲಿವೆ. ಏಳೆಂಟು ವರ್ಷಗಳ ದೀರ್ಘ ಅವಧಿಯ ಈ ಕವಿತೆಗಳು ನಾನು ನಡೆದು ಬಂದ ಹಾದಿಯ ಅಸ್ಪಷ್ಟ ಹೆಜ್ಜೆಗುರುತುಗಳು; ನನ್ನನ್ನು ರೂಪಿಸಿದ ಬಗೆಗಳೂ, ಭಾವಗಳನ್ನೂ ಇವು ತೋರುತ್ತಿವೆ.

ಹಕ್ಕಿ ಮತ್ತು ನೀಲಾಂಜನೆ

ಕೀಚು ಕಡ್ಡಿಯನೊಂದ ಹಿಡಿದು ಸಪೂರ ಬೆರಳಿಂದ ತೊನೆಯುತ್ತಿದೆ ಹಕ್ಕಿ ತೂಗುತ್ತ, ಜಗ್ಗುತ್ತ, ಆಡುತ್ತ ಏತ-ಬಾತ ಏತ-ಬಾತ.

ಹಕ್ಕಿಯ ಬಿಡಲಾಗದ ಸೆಳೆತ ಕಡ್ಡಿಗೆ ಕಡ್ಡಿ ಮುರಿಯಬಾರದ ಗೊಡವೆ ಹಕ್ಕಿಗೆ, ನಡುವಲ್ಲಿ ತೇಲುವ ಗಾಳಿ ಅಲ್ಲೇ ಹೊದರು, ಒಂದಷ್ಟು ಒಣಹುಲ್ಲು ಮತ್ತೊಂದಷ್ಟು ಚಿಗುರೆಲೆಯ ಹೆಣಿಗೆ.

ಅತ್ತಲೊಮ್ಮೆ ತುಯ್ದು ಇತ್ತಲೊಮ್ಮೆ ಒಯ್ದು ಹಕ್ಕಿ ಮೈಯ ಕಣಕಣದಲ್ಲಿ ಜೀವಜೀವದ ನಾಟ್ಯ.

ಕಾಣುತ್ತಾಳೆ ನೀಲಾಂಜನೆ ಹೀಗೆ ಕಣ್ಣಾರಾಗಿ ಹಕ್ಕಿಯಾಗಿ ಒಮ್ಮೆ, ಕೀಚು ಕಡ್ಡಿಯಾಗಿ ಮತ್ತೊಮ್ಮೆ. * ಕ್ಷಣರುಚಿಯ ಮಲರಂಬು ಏನಾಗಿತ್ತು ಆ ಗಳಿಗೆ ಎಲ್ಲಿತ್ತು ಅದು ಇಟ್ಟುಕೊಂಡಿತ್ತು ಹೇಗೆ ಕ್ಷಣರುಚಿಯ ಮಲರಂಬು.

ಅವಳ ಹುಬ್ಬಕುಣಿಕೆಯಲ್ಲಿ ಅವನ ಕಣ್ಣುಗಳ ಕಟ್ಟಿಹಾಕಿ ತೋರಿಸಿತ್ತು ಅದು ಬಿಚ್ಚುತ್ತ ಅಂಗಾಂಗಗಳ, ದಳದಳ ಬಿಡಿಸಿಕೊಂಡು ರೆಪ್ಪೆಕಟ್ಟು ಜಾರಿಸಿತ್ತು ಅವನ ಕಣ್ಣುಗಳನ್ನು ಅವಳ ಮೂಗಿನ ಜಾರುಬಂಡಿಯಿಂದ, ಒಕ್ಕುಡಿತೆ ಮಕರಂದವನೊಪ್ಪಿಸಿಕೋ ಎಂಬಂತೆ ಚಾಚಿತ್ತು ತುಟಿಯೆಸಳು: ಏನಾಗಿತ್ತು ಆ ಹೊತ್ತು ಎಲ್ಲಿತ್ತು ಅದು ಈಗ ಹೇಗಿತ್ತು.

ಒಲ್ಲಣಿಗೆಯ ಹಾಗೆ ಅಪ್ಪಿತ್ತು ಮೈಯನ್ನು ಆ ಕೈ ಗಲ್ಲೆಗಟ್ಟುತ್ತ ಗಲ್ಲಗಲ್ಲ ಮೆಲ್ಲಮೆಲ್ಲನೆ ನೀಳಕುತ್ತಿಗೆಯ ಬಳಸಿ ಬಿಚ್ಚುಮೊಗ್ಗೆಯಂತೆ ಹೆಣ್ಣು ಅದುರುತ್ತಿತ್ತು ತೆರೆದು ಕಣ್ಣು,

ಸೃಷ್ಟಿಯು ಸೃಷ್ಟಿಯನ್ನೇ ಮುಟ್ಟುವ ಆ ಗಳಿಗೆ ಏನಾಗಿತ್ತು ಎಲ್ಲಿತ್ತು ಅದು ಇಟ್ಟುಕೊಂಡಿದೆ ಹೇಗೆ ಕ್ಷಣರುಚಿಯ ಮಲರಂಬು.

* ಕವನ ಸಂಕಲನ ಖರೀದಿಸಲು : 9480353507

ಇದನ್ನೂ ಓದಿ : Art and Entertainment : ಬೆದೆಯೊಳು ಕುರುಡಪ್ಪ ಪ್ರಕೃತಿ ಒಲವೊಳು ಕಣ್ತೆರೆವಳು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada