ಹೆಂಡ್ತಿಯೊಂದಿಗೆ ಗಲಾಟೆ: ಸಂಧಾನದ ವೇಳೆ ಮದ್ವೆ ಮಾಡಿಸಿದ್ದ ಬ್ರೋಕರನನ್ನೇ ಕೊಂದ
ಆತ ಮದುವೆಯಾಗಿ ಜಸ್ಟ್ ಎಂಟು ತಿಂಗಳಾಗಿತ್ತು.ಈ ನಡುವೆ ಗಂಡ ಹೆಂಡತಿ ಸಂಬಂಧದಲ್ಲಿ ಬಿರುಕು ಉಂಟಾಗಿದೆ.ಸಂಬಂಧ ಸರಿಮಾಡಲು ಹೆಣ್ಣು ತೋರಿಸಿದ ಬ್ರೋಕರ್‌ನ ಎಂಟ್ರಿಯಾಗಿದೆ.ಆದ್ರೆ ಗಂಡ ಮಾತ್ರ ಹೆಣ್ಣು ತೋರಿಸಿದ ಬ್ರೋಕರ್‌ನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೌದು...ಮಂಗಳೂರಿನಲ್ಲಿ ಮದುವೆ ವಿಚಾರವಾಗಿ ನಡೆದ ಕಲಹವೊಂದು ಕೊಲೆಯಲ್ಲಿ ಅಂತ್ಯ ಕಂಡಿದೆ. ಮಂಗಳೂರು ನಗರ ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿ ಬ್ರೋಕರ್ ಸುಲೈಮಾನ್ ಹತ್ಯೆ ನಡೆದಿದೆ.
ಮಂಗಳೂರು, (ಮೇ 23):.ಮಂಗಳೂರಿನಲ್ಲಿ ಮದುವೆ ವಿಚಾರವಾಗಿ ನಡೆದ ಕಲಹವೊಂದು ಕೊಲೆಯಲ್ಲಿ ಅಂತ್ಯ ಕಂಡಿದೆ. ಮಂಗಳೂರು ನಗರ ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿ ಬ್ರೋಕರ್ ಸುಲೈಮಾನ್ ಹತ್ಯೆ ನಡೆದಿದೆ.ವಳಚ್ಚಿಲ್ ಪದವು ನಿವಾಸಿ ಮುಸ್ತಫಾ ಕೊಲೆಗೈದ ಆರೋಪಿ.ಮುಸ್ತಫಾನಿಗೆ ಎಂಟು ತಿಂಗಳ ಹಿಂದೆ ಮದುವೆಯಾಗಿತ್ತು.ಬ್ರೋಕರ್ ಆಗಿದ್ದ ವಾಮಂಜೂರು ನಿವಾಸಿ ಸುಲೈಮಾನ್ ತನ್ನ ಸಹೋದರ ಸಂಬಂಧಿ ಯುವತಿಯನ್ನು ಮುಸ್ತಫಾಗೆ ಮದುವೆ ಮಾತುಕತೆ ಮಾಡಿದ್ರು. ಅದ್ಧೂರಿಯಾಗಿ ಮದುವೆನೂ ಆಗಿತ್ತು.ಆದರೆ ಮುಸ್ತಫಾ ಮದುವೆಯಾದ ಕೆಲವೇ ತಿಂಗಳಲ್ಲಿ ತನ್ನ ನಿಜ ಬುದ್ಧಿಯ ಪ್ರದರ್ಶನ ಮಾಡಿದ್ದ.ಹೆಂಡತಿಗೆ ಕಿರುಕುಳ ನೀಡೋಕೆ ಆರಂಭಿಸಿದ್ದ.ಹೆಂಡತಿಗೆ ಹೊಡೆಯೋದು, ಬೈಯುವುದು ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಗಂಡನ ಕಿರಿ ಕಿರಿಗೆ ಹೆಂಡತಿ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು.ಇತ್ತ ಹೆಣ್ಣಿನ ಕಡೆಯವರು ಎಷ್ಟೇ ಮಾತುಕತೆ ಮಾಡಿದ್ರೂ ಮುಸ್ತಫಾ ಮಾತ್ರ ಬದಲಾಗಿರಲಿಲ್ಲ. ಬೇರೆ ದಾರಿ ಕಾಣದೆ ಹುಡುಗಿ ಮನೆಯವರು ಹೆಣ್ಣಿಗೆ ಗಂಡು ತೋರಿಸಿದ ಬ್ರೋಕರ್ ಸುಲೈಮಾನ್‌ನನ್ನೇ ಮಾತುಕತೆಗೆ ಮುಸ್ತಫಾ ಮನೆಗೆ ಕಳುಹಿಸಿದ್ದಾರೆ. ತನ್ನ ಇಬ್ಬರು ಮಕ್ಕಳಾದ ಸಿಯಾಬ್ ಮತ್ತು ರಿಯಾಬ್‌ನ ಜೊತೆ ನಿನ್ನೆ ರಾತ್ರಿ ವಳಚ್ಚಿಲ್‌ನ ಮುಸ್ತಫಾ ಮನೆಗೆ ಹೋದ ಸುಲೈಮಾನ್ ಮುಸ್ತಫಾನ ಜೊತೆ ಮಾತುಕತೆ ನಡೆಸಿದ್ದಾರೆ.
ಅಲ್ಲಿ ಮಾತಿನ ಚಕಮಕಿಯಾಗಿ ಸುಲೈಮಾನ್ ಹಿಂದುರುಗಿ ಬರುವಾಗ ಮುಸ್ತಫಾ ಅಡುಗೆ ಮನೆಯಲ್ಲಿದ್ದ ಚೂರಿಯಿಂದ ಅಟ್ಟಿಸಿಕೊಂಡು ಬಂದು ಹಿಂದಿನಿಂದ ಸುಲೈಮಾನ್ ಕುತ್ತಿಗೆ ಭಾಗಕ್ಕೆ ತಿವಿದಿದ್ದಾನೆ.ತಡೆಯಲು ಬಂದ ಇಬ್ಬರು ಮಕ್ಕಳ ಮೇಲೂ ದಾಳಿಗೆ ಮುಂದಾಗಿದ್ದಾನೆ.ಗಂಭೀರ ಗಾಯಗೊಂಡ ಸುಲೈಮಾನ್‌ನ್ನು ತಕ್ಷಣ ಆಸ್ಪತ್ರೆಗೆ ತಂದರೂ ಬ್ರೋಕರ್ ಸುಲೈಮಾನ್ ದಾರುಣವಾಗಿ ಸಾವನ್ನಪ್ಪಿದ್ದಾರೆ.