ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ: ಡೋಲಿಯಲ್ಲಿ ಹೊತ್ತೊಯ್ದ ಕುಟುಂಬಸ್ಥರು
ಉತ್ತರ ಕನ್ನಡದ ಶಿರಸಿ ತಾಲೂಕಿನ ಶಿರಗುಣಿ ಗ್ರಾಮದಲ್ಲಿ ಭಾರಿ ಮಳೆಯಿಂದ ರಸ್ತೆ ಹಾನಿಗೊಳಗಾದ ಕಾರಣ, ಕಾಲು ಮುರಿದ ವೃದ್ಧೆ ಮಾದೇವಿ ಹೆಗಡೆಯವರನ್ನು ಕುಟುಂಬಸ್ಥರು ಡೋಲಿಯಲ್ಲಿ ಆಸ್ಪತ್ರೆಗೆ ಸಾಗಿಸುವ ದುರಂತ ಘಟನೆ ನಡೆದಿದೆ. ವರ್ಷಗಟ್ಟಲೆ ರಸ್ತೆ ಸಮಸ್ಯೆಯನ್ನು ಅಧಿಕಾರಿಗಳು ನಿರ್ಲಕ್ಷಿಸಿರುವುದರಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುವ ಈ ಗ್ರಾಮದ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿರಗುಣಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಭಾರಿ ಮಳೆಯಾಗಿ ರಸ್ತೆ ಹದಗೆಟ್ಟಿದ್ದರಿಂದ ಕಾಲು ಮುರಿದುಕೊಂಡಿದ್ದ ವೃದ್ಧಯನ್ನು ಕುಟುಂಬಸ್ಥರು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಶಿರಗುಣಿ ಗ್ರಾಮದ ವೃದ್ಧೆ ಮಾದೇವಿ ಹೆಗಡೆ ಮನೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ತಕ್ಷಣ ಮಾದೇವಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ರಸ್ತೆ ಇಲ್ಲ.
ಹೌದು, ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿದ್ದರಿಂದ ಶಿರಸಿ ಪಟ್ಟಣಕ್ಕೆ ಸಂಪರ್ಕಿಸುವ ಗ್ರಾಮದ ರಸ್ತೆ ಹಾಳಾಗಿದೆ. ಹೀಗಾಗಿ, ವೃದ್ಧೆ ಮಾದೇವಿಯವರನ್ನು ಡೋಲಿಯಲ್ಲಿ ಹೊತ್ತು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಶಿರಗುಣಿ ಗ್ರಾಮವು ಶಿರಸಿ ಪಟ್ಟಣದಿಂದ 40 ಕಿ.ಮೀ. ದೂರದಲ್ಲಿದೆ. ಪ್ರತಿ ವರ್ಷ ಮಳೆ ಆರಂಭವಾದರೆ ರಸ್ತೆ ಇಲ್ಲದೆ ಶಿರಗುಣಿ ಗ್ರಾಮಕ್ಕೆ ಸಂಚಾರ ಬಂದ್ ಆಗುತ್ತದೆ. ಅಧಿಕಾರಿಗಳಿಗೆ ರಸ್ತೆ ಮಾಡಿಕೊಡುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.