Meeting Point : ಒಂಟಿ ಹುಡುಗನ ಮೇಲೆ ಹುಡುಗಿಯರು ಅತ್ಯಾಚಾರ ಮಾಡುವುದಿಲ್ಲವೆಂಬ ಧೈರ್ಯ ನಮಗೆ!

Rape and Sex : ‘ಸೆಕ್ಸ್ ಅಂದ್ರೆ ಗಂಡಸರಿಗೆ ಮಾತ್ರವೇ ಸಂತೋಷದ ಸಾಧನ ಅಂತ ನಾವೆಲ್ಲ ನಂಬಿದ್ದೇವೆ. ಅವನು ಅದನ್ನು ಬಲವಂತವಾಗಿ ಪಡೆದುಕೊಳ್ಳುವುದು ತಪ್ಪು, ಆದರೆ ಆದು ಸಂಭವಿಸಿದರೆ ಆಶ್ಚರ್ಯ ಇಲ್ಲ ಅಂತ ನಮ್ಮ ನಂಬಿಕೆ. ಸಿನಿಮಾಗಳಲ್ಲಿ ಬರುವ ರೇಪ್‍ ಸೀನ್​ ಗೆ “ಹುಡುಗಿಯನ್ನು ಹಾಳು ಮಾಡೋದು” ಅನ್ನುವ ಪದಗಟ್ಟು ಚಾಲ್ತಿಯಲ್ಲಿತ್ತು. ಅಂದರೆ ಬಲವಂತದ ಕಾಮದಿಂದ ಹಾಳಾಗೋದು ಹುಡುಗಿ. ಹುಡುಗ ಕಾಮದಿಂದ ಹಾಳಾಗೋ ಕಾನ್ಸೆಪ್ಟ್ ಇಲ್ಲವೇ ಇಲ್ಲ!’ ಸೌರಭಾ ಕಾರಿಂಜೆ

Meeting Point : ಒಂಟಿ ಹುಡುಗನ ಮೇಲೆ ಹುಡುಗಿಯರು ಅತ್ಯಾಚಾರ ಮಾಡುವುದಿಲ್ಲವೆಂಬ ಧೈರ್ಯ ನಮಗೆ!
ಲೇಖಕಿ ಸೌರಭಾ ಕಾರಿಂಜೆ
Follow us
ಶ್ರೀದೇವಿ ಕಳಸದ
|

Updated on: Sep 11, 2021 | 9:50 AM

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಸೌರಭಾ ಕಾರಿಂಜೆ ಮೂಲತಃ ದಕ್ಷಿಣ ಕನ್ನಡದವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿ.  ಓದು, ಬರಹ, ಪ್ರವಾಸ, ಬ್ಯಾಡ್ಮಿಂಟನ್, ಅಡುಗೆ, ಯೋಗ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕತೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕೆಲವು ಬಹುಮಾನವನ್ನೂ ಗಳಿಸಿವೆ.

ಸೌರಭಾ ಅವರ ಬರಹ ನಿಮ್ಮ ಓದಿಗೆ.

ಮೈಸೂರಿನ ಘಟನೆ ಓದಿ ಮೈ ನಡುಗಿಹೋಯಿತು. ಅದಕ್ಕೆ ಕಾರಣ ನಾನೂ ಓದಿದ್ದು ಮೈಸೂರಲ್ಲಿ. ಚಾಮುಂಡಿ ಬೆಟ್ಟಕ್ಕೆ ಎಷ್ಟು ಸಲ ಹೋಗಿದ್ದೆನೋ ಲೆಕ್ಕವಿಲ್ಲ. ಒಂದರೆಗಳಿಗೆ ಮನೆಯೊಳಗೇ ಅಪಘಾತವಾದ ಹಾಗೆ ಅನಿಸಿತು. ಒಂದು ಹುಡುಗಿಯನ್ನು ನಿರ್ಜನ ಪ್ರದೇಶದಲ್ಲಿ ಕಂಡಾಗ ನಮಗೆಲ್ಲ, ಅಂದ್ರೆ ನಿರುಪದ್ರವಿಗಳಿಗೆ “ಅಯ್ಯೋ ಏನಾದರೂ ಅಪಾಯ ಆದ್ರೆ!” ಅನ್ನುವ ಯೋಚನೆ ಬರುತ್ತದೆ. ನಮ್ಮಲ್ಲಿ ಬಹಳ ಮಂದಿ ಯಾಕಮ್ಮ, ಒಬ್ಬಳೇ ಇದ್ದೀಯ ಅಂತ ಕಾಳಜಿಯೂ ತೋರಿಸುತ್ತೇವೆ. ಈ ಭಯ ಸಿನಿಮಾದಲ್ಲಿ ಒಂಟಿ ಹುಡುಗಿಯನ್ನು ಕಂಡಾಗಲೂ ಆಗುತ್ತದೆ. “ಓ ಈಗ ರೇಪ್ ಆಗತ್ತೆ” ಅಂತ ನಮಗೆಲ್ಲ ಮುಂದಿನ ಕತೆ ಎಲ್ಲ ಗೊತ್ತಾಗಿರುತ್ತದೆ.

ಅದೇ ಒಂಟಿ ಹುಡುಗನನ್ನು ಕಂಡರೆ ಅಷ್ಟು ತೀವ್ರವಾದ ಆಲೋಚನೆ ಬರುವುದಿಲ್ಲ. ಹುಡುಗನನ್ನು ಹುಡುಗಿಯರು ರೇಪ್ ಮಾಡಲ್ಲ ಅಂತ ನಮಗೆಲ್ಲ ಧೈರ್ಯ. ಅವನ ಸುರಕ್ಷತೆಯ ಖಾತ್ರಿ ನಮಗೆಲ್ಲ ಇದೆ. ವೈಜ್ಞಾನಿಕವಾಗಿ ಪುರುಷನೊಬ್ಬನ ಮೇಲೆಯೂ ಅತ್ಯಾಚಾರ ಸಾಧ್ಯವಾಗಬಹುದಾದ ವಿಚಾರವೇ. ಆದರೆ ಆ ಯೋಚನೆಯೇ ಬರುವುದಿಲ್ಲ ನಮಗೆ. ಯಾಕೆ? ಸೆಕ್ಸ್ ಅಂದ್ರೆ ಗಂಡಸರಿಗೆ ಮಾತ್ರವೇ ಸಂತೋಷದ ಸಾಧನ ಅಂತ ನಾವೆಲ್ಲ ನಂಬಿದ್ದೇವೆ ಅದಕ್ಕೆ. ಅವನು ಅದನ್ನು ಬಲವಂತವಾಗಿ ಪಡೆದುಕೊಳ್ಳುವುದು ತಪ್ಪು, ಆದರೆ ಆದು ಸಂಭವಿಸಿದರೆ ಆಶ್ಚರ್ಯ ಇಲ್ಲ ಅಂತ ನಮ್ಮ ನಂಬಿಕೆ. ನಾವೆಲ್ಲ ಚಿಕ್ಕವರಿದ್ದಾಗ ಸಿನಿಮಾಗಳಲ್ಲಿ ಬರುವ ರೇಪ್‍ಗೆ “ಹುಡುಗಿಯನ್ನು ಹಾಳು ಮಾಡೋದು” ಅನ್ನುವ ಪದಗಟ್ಟು ಚಾಲ್ತಿಯಲ್ಲಿತ್ತು. ಅಂದರೆ ಬಲವಂತದ ಕಾಮದಿಂದ ಹಾಳಾಗೋದು ಹುಡುಗಿ. ಹುಡುಗ ಕಾಮದಿಂದ ಹಾಳಾಗೋ ಕಾನ್ಸೆಪ್ಟ್ ಇಲ್ಲವೇ ಇಲ್ಲ!

ಮನೆಯೊಳಗಾದರೂ ಎಷ್ಟು ಮಂದಿಗೆ ತಂದೆ ತಾಯಿಯ ನಡುವಿನ ಪ್ರೀತಿಯನ್ನು ಮುಕ್ತವಾಗಿ ಗಮನಿಸಲು ಅವಕಾಶವಾಗಿದೆ? ಏನಿದ್ದರೂ ಜಗಳ ಮಾತ್ರ. ತಂದೆ-ತಾಯಿಯರ ನಡುವಿನ ಪ್ರೀತಿಯೋ ನವಿರು ಭಾವವೋ ಇವೆಲ್ಲ ಮುಚ್ಚಿದ ಗೋಡೆಯ ನಡುವೆ ವ್ಯಕ್ತವಾಗುತ್ತದೆ ಅಥವಾ ಆಗದೆಯೂ ಇರಬಹುದು. ಅಂದರೆ ಹೆಣ್ಣು ಗಂಡಿನ ಸಂಬಂಧ ಒಂದು ಚಂದದ ಚೌಕಟ್ಟನ್ನು ಹೊಂದಿದೆ, ಅಲ್ಲಿ ಒಪ್ಪಿಗೆ ಇರುತ್ತದೆ, ಸಂತೋಷ ಇರುತ್ತದೆ, ಗೆಳೆತನ ಇರುತ್ತದೆ, ಅದರಿಂದಾಗಿ ಸಂಸಾರ ಸುಲಲಿತವಾಗಿ ಸಾಗುತ್ತದೆ ಅನ್ನುವುದನ್ನು ನಾವು ಬಾಲ್ಯದಿಂದಲೂ ನೋಡಿಕೊಂಡು ಬೆಳೆದಿಲ್ಲ. ಸಿನಿಮಾದಲ್ಲಿ ಗಂಡುಹೆಣ್ಣು ಮುತ್ತಿಟ್ಟರೆ ಮನೆಯಲ್ಲಿ ಟಿವಿ ಚಾನೆಲ್‍ ಬದಲಾಗುತ್ತದೆ. ಆದರೆ ಬೇಡವೆಂದರೂ ಹುಡುಗಿಯನ್ನು ಹಿಂಬಾಲಿಸಿ ಕಾಡಿ ಒಲಿಸಿಕೊಳ್ಳುವ ಹೀರೋಗಳು, ಶ್ರೀಮಂತ ನಾಯಕಿಯನ್ನು ಕೀಳಾಗಿ ನಡೆಸಿಕೊಂಡು “ಬುದ್ಧಿ” ಕಲಿಸುವ ನಾಯಕರು, ರೇಪ್‍ ಆದರೆ ಮದುವೆಯಲ್ಲಿ ನಡೆಯುವ ಪರ್ಯಾವಸಾನ (ಇದಕ್ಕಿಂತ ಕೆಟ್ಟ ಪರಿಕಲ್ಪನೆ ಇನ್ನೊಂದಿರಲಾರದು), ಇವೆಲ್ಲ ಸಿನಿಮಾಗಳಲ್ಲಿ ಬರುವಾಗ ಯಾರೂ ಚಾನೆಲ್‍ ಬದಲಾಯಿಸುವುದಿಲ್ಲ. ಇವೆಲ್ಲ ಸಹಜ ಒಪ್ಪಿತ ಬದುಕು! ಇದನ್ನೆಲ್ಲ ನೋಡಿಯೇ ಬೆಳೆಯುವ ಎಳೆ ಮನಸುಗಳಿಗೆ ಮಾರ್ದವದ  ಪರಿಚಯ ಕಮ್ಮಿ ಇರುವುದು ಆಶ್ಚರ್ಯವೇ?

ಇಂದಿಗೂ ನಮ್ಮ ಮಕ್ಕಳಿಗೆ ಲೈಂಗಿಕತೆಯ ಕುರಿತ ಪರಿಚಯ ಅಸಂಬದ್ಧ ದಾರಿಗಳ ಮೂಲಕವಾಗುತ್ತದೆಯೇ ಹೊರತು ವೈಜ್ಞಾನಿಕವಾಗಿ, ನೇರವಾಗಿ ನಡೆಯುವುದಿಲ್ಲ. ಅದರ ಕುರಿತು ಅವರು ನಮ್ಮ ಬಳಿ ಪ್ರಶ್ನೆಗಳನ್ನು ಕೇಳಿದರೆ ನಮಗೆಲ್ಲರಿಗೂ ಇರಿಸು ಮುರಿಸಾಗುತ್ತದೆ. ನಮ್ಮ ಈ ಇರಿಸು ಮುರಿಸು ಮಕ್ಕಳ ಮೇಲೆ ಯಾವ ಪರಿಣಾಮ ಬೀರಬಹುದು? ಲೈಂಗಿಕತೆ ಒಂದು ಟ್ಯಾಬೂ, ಕೆಟ್ಟ ಸಂಗತಿ ಅಂತಲೇ ಅನಿಸುವುದಿಲ್ಲವೇ?

ಹಾಗಂತೆ, ಹೀಗಂತೆ ಅಂತ ಅರೆಸತ್ಯಗಳ ನಡುವೆ ಬೆಳೆಯುವ ಮಕ್ಕಳು. ಇವರು ಬೆಳೆದು ಮದುವೆಯಾದರೂ ಪ್ರೀತಿಯನ್ನು ಹಸಿಯಾಗಿ ಪಡೆಯಲು, ನೀಡಲು ಬರದೆ ಒಂದು ರೀತಿಯ ಅಪರಿಪೂರ್ಣತೆಯಲ್ಲೇ ಸಾಗುವ ಕುಟುಂಬ ವ್ಯವಸ್ಥೆ.

Meeting point sowrabha karinje

ಸೌಜನ್ಯ : ಅಂತರ್ಜಾಲ

ಇಷ್ಟೆಲ್ಲ ವೈರುಧ್ಯಗಳು, ಅಸಹಜತೆಗಳು ಆಳವಾಗಿ ಬೇರೂರಿರುವ ನಮ್ಮ ಸಮಾಜದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಲ್ಲದೇ ಇನ್ಯಾವ ಥರ ನೋಡಲು ಸಾಧ್ಯ? ಬಸ್‍ಗಳಲ್ಲಿ, ಜಂಗುಳಿಯಲ್ಲಿ ಹೆಣ್ಣುಮಕ್ಕಳ ಮೈ ಕೈ ತಾಗಿಸುವವರು, ಸುಮ್ಮನೆ ಜಿಗುಟಿ ಸಾಗುವವರು ಇವರೆಲ್ಲ ಪಡುವ ಸುಖ ಕಲ್ಪಿತವಾದದ್ದು. ಒಪ್ಪಿಗೆಯಿಂದ ಸಿಗುವ ಪ್ರೇಮ, ಪ್ರಣಯದ ಸಂತೋಷವು ಈ ರೀತಿಯಿಂದ ವಿಕಾರಗಳಿಂದ ದೊರಕಬಹುದೆಂಬ ಭಾವನೆಯೇ ಎಷ್ಟು ನಂಬಲಸಾಧ್ಯ! ಇವುಗಳಲ್ಲೆಲ್ಲ ಸುಖ ಇದೆ ಎನ್ನುವ ಕಲ್ಪನೆ ನಮ್ಮ ಸಮಾಜದ ಪ್ರತಿ ವಿಲಕ್ಷಣತೆಯಿಂದಲೂ ಪ್ರೇರೇಪಿತವಾಗಿದೆ.

ಹೆಂಗಸರಿಗೂ ಸೆಕ್ಸ್ ಮುಖ್ಯ, ಅದರಲ್ಲಿ ಪರಾಕಾಷ್ಠೆಯನ್ನು ಕಂಡುಕೊಳ್ಳುವುದು ಹೆಂಗಸಿಗೂ ಬೇಕು ಅನ್ನುವುದನ್ನು ವಿವಾಹಿತ ಪುರುಷರಲ್ಲಿಯೇ ಎಷ್ಟು ಮಂದಿ ಒಪ್ಪಿ ಹಾಸಿಗೆಯನ್ನು ಸಮವಾಗಿ ಹಂಚಿಕೊಳ್ಳುತ್ತಾರೆ? ಹಾಸಿಗೆಯಲ್ಲಿ, ನಗ್ನತೆಯ ಪರಮಾಪ್ತತೆಯಲ್ಲಿ ಈ ಸಮಾನತೆ ಮತ್ತು ಗೌರವ ಕಾಣಸಿಗುವುದಿಲ್ಲ ಅಂತಾದರೆ ಬೇರೆಲ್ಲಿ ಕಾಣಸಿಕ್ಕೀತು? ಸೆಕ್ಸ್ ಅನ್ನೋದು ಹೆಂಗಸರಿಗೂ ಸಂತೋಷದ ಸಾಧನ ಅನ್ನೋದನ್ನು ನಾವು ಎಲ್ಲಿಯವರೆಗೆ ಸಹಜವಾಗಿ ಒಪ್ಪಿ ನಂಬುವುದಿಲ್ಲವೋ ಅಲ್ಲಿಯವರೆಗೆ ಈ ತರಹದ ವಿಕಾರಗಳು ಸಂಭವಿಸುತ್ತಲೇ ಇರ್ತವೆ.

ಇಂದಿಗೂ ನಮ್ಮ ಹರೆಯದ ಹುಡುಗ-ಹುಡುಗಿಯರಿಗೆ ಕೂತು ಮಾತಾಡಲು ಸುರಕ್ಷಿತ ಸ್ಥಳವಿಲ್ಲ. ಲಾಲ್​ಬಾಗ್​ನಲ್ಲಿ ನಡೆದ ಘಟನೆ ಇದು; ಒಂದು ಹುಡುಗ-ಹುಡುಗಿ ಪ್ರೀತಿಯಲ್ಲಿ ಮಾತಾಡುತ್ತಿದ್ದರು. ಹಾಗೆಯೇ ಅವನು ಸುಮ್ಮನೆ ಅವಳಿಗೆ ಮುತ್ತಿಟ್ಟಿದ್ದಾನೆ. ತೃತೀಯ ಲಿಂಗಿಯೊಬ್ಬರು ಅದ್ಯಾವ ಮಾಯದಲ್ಲೋ ಬಂದು ಅವನನ್ನು ಹೆದರಿಸಿ ಬೆದರಿಸಿ ಕೈಲಿದ್ದ 500 ರೂಪಾಯಿ ಪೀಕಿಸಿದ್ದಾರೆ. ಹುಡುಗ ಮುತ್ತಿಟ್ಟ “ಅಪರಾಧ”ಕ್ಕೆ ಬೆಲೆ ತೆತ್ತು ಪೆಚ್ಚಾಗಿದ್ದಾನೆ.  ಇದು ನಮ್ಮ ದೇಶದಲ್ಲಿ ಪ್ರೇಮಿಸುವವರ ಪಾಡು. ಹುಡುಗ ಹುಡುಗಿ ಮುತ್ತಿಟ್ಟರೆ ಸಾಕು, “ಹೋಗ್ರೀ ರೂಂ ನೋಡಿಕೊಳ್ಳಿ, ಇಲ್ಲೆಲ್ಲ ಪಬ್ಲಿಕ್ಕಲ್ಲಿ ಅಸಹ್ಯ ಮಾಡಬೇಡ್ರೀ” ಅಂತ ಪೋಲಿಸರಿಂದ ಹಿಡಿದು ವಾಕಿಂಗ್‍ ಬರುವ ಅಂಕಲ್‍ಗಳೂ ಸಿರ್ರೆನ್ನುತ್ತಾರೆ. ಪೋಲೀಸರಂತೂ ನಿಮ್ಮ ಅಪ್ಪ-ಅಮ್ಮನ ಫೋನ್‍ ನಂಬರ್ ಕೊಡಿ ಅಂತ ಬೆದರಿಸಿ ಯಾಕಪ್ಪಾ ಪ್ರೀತಿ ಮಾಡಿದ್ವಿ ಅನ್ನೋವಷ್ಟು ಮಾಡ್ತಾರೆ. ಅದೇ ದಾರಿ ಬದಿಯಲ್ಲಿ ಮೂತ್ರ ಹೊಯ್ಯುವವರನ್ನು ಎಷ್ಟು ಮಂದಿ ತಡೆದು ನಿಲ್ಲಿಸಿ ಬುದ್ಧಿ ಹೇಳುತ್ತೇವೆ? ಅಂದರೆ ಪ್ರೀತಿ ಮಾಡುವಷ್ಟು ಪರಮ ಅಸಹ್ಯ ಬೇರೊಂದಿಲ್ಲ ಅಂತ ಅರ್ಥವೇ?

ಎಷ್ಟು ಮಂದಿ ಮಧ್ಯಮ ವರ್ಗದವರಿಗೆ ರೂಂ ಬಾಡಿಗೆ ಹಿಡಿಯಲು ಧೈರ್ಯ ಇರುತ್ತದೆ? ಎಷ್ಟು ವಿದ್ಯಾರ್ಥಿಗಳ ಬಳಿ ದುಡ್ಡಿರುತ್ತದೆ? ಎಷ್ಟೋ ಕಡೆ ಮದುವೆಯಾಗದವರಿಗೆ ರೂಂ ನಿರಾಕರಿಸುವುದೂ ಇದೆ. ಹೆಣ್ಣುಮಕ್ಕಳಿಗಂತೂ, ರೂಂಗಳಲ್ಲಿ ಕ್ಯಾಮೆರಾ ಇದ್ದರೆ, ಅಥವಾ ಸುರಕ್ಷತೆ ಇಲ್ಲದೆ ಇದ್ದರೆ ಇತ್ಯಾದಿ ಭಯ ಬೇರೆ. ಹೀಗೆ ಕದ್ದುಕದ್ದು ಪ್ರೀತಿ ಮಾಡಬೇಕಾದ ಪರಿಸ್ಥಿತಿಗೇ ಮೊದಲು ತಲೆತಗ್ಗಿಸಬೇಕಾಗಿದೆ ನಾಗರಿಕರು ಎಂದು ಕರೆಸಿಕೊಳ್ಳುವ ನಾವು.

ಪ್ರತಿ ಸಾರಿ ಈ ನೈತಿಕ ಪೊಲೀಸರ ಕೈಗೆ ಸಿಕ್ಕಾಗಲೂ, ನಾವೇನೂ ಮಾಡ್ತಾ ಇರಲಿಲ್ಲ, ಸುಮ್ಮನೆ ಕೂತಿದ್ವಿ ಅನ್ನುವ ಗೋಗರೆತ ಹುಡುಗ-ಹುಡುಗಿಯದ್ದು. ಈ “ಏನೋ ಮಾಡೋದು” ಇಷ್ಟು ಕೆಟ್ಟ ಕೆಲಸ ಆಗಿರುವುದೇ ಹಾಸ್ಯಾಸ್ಪದ. ಗಂಡು-ಹೆಣ್ಣು ಪ್ರೀತಿ ಮಾಡೋದು ಎಷ್ಟು ಸಹಜ ವಿಚಾರ. ದೈಹಿಕತೆ ಕೂಡಾ ಅದರ ಮುಖ್ಯ ಭಾಗ. ಬರೇ ಮಾತಾಡ್ತಾ ಇದ್ವಿ, ಇನ್ನೇನೂ ಮಾಡ್ತಾ ಇರಲಿಲ್ಲ ಅನ್ನುವ ಸಮಜಾಯಿಷಿಯೇ ನಮ್ಮ ಸಮಾಜದ ಶೋಷನೀಯ ಪರಿಸ್ಥಿತಿಗೆ ಹಿಡಿದ ಕನ್ನಡಿ. ಈ ರೀತಿಯ ಹೆದರಿಕೆ ಬೆದರಿಕೆ ನಿಯಂತ್ರಣ ಎಲ್ಲ ಇರದೇ ಹೋದರೆ ಸ್ವೇಚ್ಛೆ ಆಗಿ ಹೋಗತ್ತೆ, ಸಮಾಜ ಕೆಟ್ಟು ಹೋಗತ್ತೆ ಅನ್ನುವ ವಾದಗಳು! ಕೆಟ್ಟು ಹೋಗಲು ಇನ್ನೇನು ಬಾಕಿ ಇದೆ. ದಿನ ಬೆಳಗಾದರೆ ವಿಕೃತಿಗಳದ್ದೇ ಸುದ್ದಿ!

ಲೈಂಗಿಕತೆ ಅನ್ನುವುದು ಮುಚ್ಚಿಟ್ಟ ಕೆಂಡವಾಗಿದೆ. ಬಹಳ ಸಲ ಅನಿಸುತ್ತದೆ, ಅದು ಹಚ್ಚಿದ ನಂದಾದೀಪವಾಗಿದ್ದಿದ್ದರೆ ಇಷ್ಟೆಲ್ಲ ದೌರ್ಜನ್ಯ ನಡೀತಾ ಇರಲಿಲ್ಲವೇನೋ ಅಂತ. ಲೈಂಗಿಕತೆಗೆ ಬಹಳ ಆಯಾಮಗಳಿವೆ. ಸಂತಾನೋತ್ಪತ್ತಿ ಮತ್ತು ಸುಖ ಇವೆರಡನ್ನು ಮೀರಿದ ಆಯಾಮಗಳನ್ನು ನಾವು ಅನ್ವೇಷಿಸುವ ಪ್ರಯತ್ನ ಮಾಡಿಲ್ಲ. ಅತ್ಯಾಚಾರ, ದೌರ್ಜನ್ಯ ಇವೆಲ್ಲ ರೋಗಲಕ್ಷಣಗಳು ಅಷ್ಟೇ. ಮೂಲರೋಗ ವಾಸಿ ಮಾಡದೆ, ಕೇವಲ ಲಕ್ಷಣಗಳಿಗೆ ಮದ್ದು ನೀಡುತ್ತಾ ಹೋದರೆ ಸೈಡ್‍ ಎಫೆಕ್ಟ್​ಗಳಷ್ಟೇ ಪ್ರಾಪ್ತಿ. ಹೆಣ್ಣುಮಕ್ಕಳು ಸಂಜೆ ಮೇಲೆ ಹೊರಹೋಗಬಾರದು, ಮೈ ಮುಚ್ಚಿಕೊಳ್ಳಬೇಕು ಅಂತೆಲ್ಲ ತಿಕ್ಕಲು ತಿಕ್ಕಲಾಗಿ ಪರಿಹಾರ ಸೂಚಿಸುವ ಅನೇಕ ಸ್ಥರದ ಆಡಳಿತ ಸ್ವಲ್ಪ ಗಂಭೀರವಾಗಿ ಸಮಸ್ಯೆಯ ಮೂಲಕ್ಕೆ ಇಳಿಯುವ ಸೂಕ್ಷ್ಮತೆ ಬೆಳೆಸಿಕೊಳ್ಳದೆ ಬೇರೆ ದಾರಿಯಿಲ್ಲ. ಲೈಂಗಿಕತೆಯ ವಿಚಾರದಲ್ಲಿ ಘನತೆಯೊಂದಿಗಿನ ಮುಕ್ತತೆಯನ್ನು ಇಂದಿನ ಪರಿಸ್ಥಿತಿಗೆ ಪರಿಹಾರವಾಗಿ ಪರಿಗಣಿಸಬೇಕಾಗಿದೆ.

ಇದನ್ನೂ ಓದಿ : Meeting Point : ಹೆಣ್ಣಿಗೆ ಎಲ್ಲಿ ಗೌರವ ಸಿಗುವುದಿಲ್ಲವೋ ಆ ಸಂಸ್ಕೃತಿಯಲ್ಲಿ ದೋಷವಿದೆ ಎಂದರ್ಥ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ