Meeting Point : …ಇದೇ ಕಾರಣಕ್ಕೆ ಹುಡುಗ ಹುಡುಗಿಯರು ಹೆಚ್ಚು ‘ದೈವಭಕ್ತ’ರಾಗುತ್ತಿರುವುದು

End Point : ‘ಯಾವುದಕ್ಕೂ ಹುಷಾರು, ಅಲ್ಲೆಲ್ಲಾ ಹುಡುಗರು ಹೇಗೆ ಬೇಕೋ ಹಾಗೆ ಮಾಡ್ತಾರಂತೆ, ಎಲ್ಲರೆದುರು’ ಎನ್ನುವುದೇ ಅನೇಕರ ಮಾತಾಗಿತ್ತು. ನಡುಗುತ್ತಲೇ ಕಾಲೇಜಿಗೆ ಕಾಲಿಟ್ಟಿದ್ದು ಹೌದು. ಅದೊಂದು ವಿಭಿನ್ನ ಪ್ರಪಂಚ ಎನ್ನುವುದೂ ಸರಿಯೇ! ಆದರೆ ಹೆಣ್ಣು-ಗಂಡು ಬೇಧವಿರಲಿಲ್ಲ, ಯಾರಿಗೂ ಯಾರ ಒತ್ತಾಯವೂ ಇಲ್ಲ. ಇಷ್ಟವಿದ್ದರೆ ಏನೂ ಮಾಡಬಹುದು, ಇಲ್ಲದಿದ್ದರೆ ಏನೂ ಇಲ್ಲ’ ಡಾ. ಕೆ. ಎಸ್. ಚೈತ್ರಾ

Meeting Point : ...ಇದೇ ಕಾರಣಕ್ಕೆ ಹುಡುಗ ಹುಡುಗಿಯರು ಹೆಚ್ಚು ‘ದೈವಭಕ್ತ’ರಾಗುತ್ತಿರುವುದು
ಲೇಖಕಿ ಡಾ. ಕೆ. ಎಸ್. ಚೈತ್ರಾ
Follow us
|

Updated on:Sep 09, 2021 | 10:45 AM

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಡಾ. ಕೆ. ಎಸ್. ಚೈತ್ರಾ ಮೂಲತಃ ಶಿವಮೊಗ್ಗೆಯವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ವೃತ್ತಿಯಲ್ಲಿ ದಂತವೈದ್ಯೆ, ಪ್ರವೃತ್ತಿಯಲ್ಲಿ ಲೇಖಕಿ ಮತ್ತು ನಿರೂಪಕಿ. ನೃತ್ಯ ಸಂಗೀತ ಕಲಾವಿದೆಯಾಗಿರುವ ಚೈತ್ರಾ, ಭರತನಾಟ್ಯದಲ್ಲಿ ದೂರದರ್ಶನದ ಗ್ರೇಡೆಡ್​  ಕಲಾವಿದೆ ಮತ್ತು ಶಿಕ್ಷಕಿ. ನೃತ್ಯ-ಸಂಗೀತ-ಸಂಸ್ಕೃತಿಯ ಪ್ರಚಾರ-ಅಭಿವೃದ್ಧಿಗಾಗಿ ಇರುವ ಶ್ರೀವಿಜಯ ಕಲಾನಿಕೇತನದ ಟ್ರಸ್ಟಿಯಾಗಿದ್ದಾರೆ.

ಚೈತ್ರಾ ಅವರ ಬರಹ ನಿಮ್ಮ ಓದಿಗೆ :

‘ಒಬ್ಬಳೇ ಎಲ್ಲೂ ಹೋಗಬೇಡ, ಕತ್ತಲಾದ ನಂತರ ಮನೆಯಿಂದ ಕಾಲಿಡಬೇಡ, ಆಟ, ಹಾಡು, ಡಾನ್ಸ್ ಯಾವುದಕ್ಕೂ ಸೇರಬೇಡ, ಹುಡುಗರೊಡನೆ ಮಾತನಾಡಬೇಡ-ನಗಬೇಡ, ಕಾಲೇಜು ಪ್ರವಾಸವೇ? ಖಂಡಿತಾ ಬೇಡ’

ಹೀಗೆ ಬೇಡಗಳ ನಡುವೆಯೇ ಕೆಲ ದಶಕಗಳ ಹಿಂದೆ ಹೆಣ್ಣುಮಕ್ಕಳ ಜೀವನ ಸಾಗಬೇಕಿತ್ತು. ನಿಧಾನವಾಗಿ ವಿದ್ಯಾಭ್ಯಾಸ-ಆರ್ಥಿಕ ಮಟ್ಟ ಹೆಚ್ಚಿತು, ಹೆಣ್ಣುಮಕ್ಕಳು ಸ್ವಾವಲಂಬಿಗಳಾದರು ನಿಜ. ಆದರೆ ಮಹಿಳೆ ಏನೇ ಪ್ರಗತಿ ಸಾಧಿಸಿದ್ದರೂ ಸುರಕ್ಷತೆಯ ವಿಷಯಕ್ಕೆ ಬಂದಾಗ ಪರಿಸ್ಥಿತಿ ಸುಧಾರಿಸಿಲ್ಲ. ಉದಾಹರಣೆಗೆ ಒಂಟಿಯಾಗಿ ಮಹಿಳೆ ಪ್ರಯಾಣ ಮಾಡುವುದು, ರಾತ್ರಿ ಹೋಟೆಲ್​ನಲ್ಲಿ ತಂಗುವುದು ಎಂದರೆ ಈಗಲೂ ಯೋಚಿಸುವಂತಾಗುತ್ತದೆ. ಕಾರಣ ಎಲ್ಲಿ ಯಾವಾಗ ಏನಾಗುತ್ತದೋ ಎಂಬ ಹೆದರಿಕೆ, ಇತರರು ವರ್ತಿಸುವ ರೀತಿ! ಎಂಬತ್ತರ ಹಿರಿಯ ಮಹಿಳೆ, ದಾರಿ ಬದಿಯ ಭಿಕ್ಷುಕಿ, ಕಾಲೇಜು ಹುಡುಗಿ, ಒಂದು ವರ್ಷದ ಹಸುಗೂಸು ಎಲ್ಲರ ಮೇಲೂ ಲೈಂಗಿಕ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಅತ್ಯಂತ ಖೇದಕರ ಸಂಗತಿಯೆಂದರೆ ಅಂದಿಗೂ ಇಂದಿಗೂ ಇಂಥ ಪ್ರಕರಣಗಳು ನಡೆದಾಗಲೆಲ್ಲಾ ಉಟ್ಟ ಬಟ್ಟೆ, ತೊಟ್ಟ ರೀತಿ, ಹೋದ ಸಮಯ, ತೆರಳಿದ ಸ್ಥಳ, ಸ್ನೇಹಿತರು, ನಡತೆ… ಹೀಗೆ ತಪ್ಪುಗಳ ಮತ್ತು ದೌರ್ಜನ್ಯಕ್ಕೆ ಕಾರಣವಾದ ಸಂಗತಿಗಳ ದೊಡ್ಡ ಪಟ್ಟಿಯನ್ನೇ ನೀಡಲಾಗುತ್ತದೆ. ಇಲ್ಲಿ ಕೇಂದ್ರ ಬಿಂದು ಹೆಣ್ಣು ಮತ್ತು ಅಂಥ ಹೇಯ ಕೃತ್ಯವನ್ನು ಎಸಗಲು ಆಕೆ ಪ್ರೋತ್ಸಾಹಿಸಿದ ಅಂಶಗಳು! ಇಂಥ ಸಮಯದಲ್ಲೂ ಆಕೆಗೆ ಸರಿ-ತಪ್ಪುಗಳ, ಆ ಮೂಲಕ ಎಲ್ಲಾ ಹೆಣ್ಣುಮಕ್ಕಳಿಗೆ ನಿಯಮಗಳ ಸಂದೇಶ ನೀಡುವ ಕಾಳಜಿ! ನಿಜವಾಗಿ ಚರ್ಚೆಯಾಗಬೇಕಿದ್ದು ಇಂಥ ಹೀನ ಕೃತ್ಯಗಳನ್ನು ಎಸಗುತ್ತಿರುವವರ ಬಗ್ಗೆ, ಅಪರಾಧಿಗಳಿಗೆ ಶಿಕ್ಷೆಯ ಬಗ್ಗೆ, ಅವರನ್ನು ರೂಪಿಸಿದ ವ್ಯವಸ್ಥೆ ಬಗ್ಗೆ, ಅವರು ಬೆಳೆದ ವಾತಾವರಣದ ಬಗ್ಗೆ… ಊಹೂಂ! ಬದಲಾಗಿ ‘ಅವಳು ಹೀಗಾಡಿದ್ದಕ್ಕೆ ಆತ ಹೀಗೆ ಮಾಡಿದ’ ಎನ್ನುವ ಸಮರ್ಥನೆ ನಿಜಕ್ಕೂ ದುಃಖ, ಸಿಟ್ಟು ಮತ್ತು ಹೆದರಿಕೆಯನ್ನು ಮೂಡಿಸುತ್ತದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಘಟನೆ ಮೈನಡುಗಿಸುವುದರ ಜತೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಏಕೆಂದರೆ ಮೈಸೂರು ಹೆಚ್ಚು ಸದ್ದು ಗದ್ದಲವೇ ಇಲ್ಲದ ಪ್ರಶಾಂತ ಊರು. ಅಲ್ಲಿನ ಜನರೂ ಸಭ್ಯತೆ, ಸೌಜನ್ಯಕ್ಕೆ ಹೆಸರಾದವರು. ಹೀಗಿರುವಾಗ ಇಂಥ ಅಮಾನವೀಯ ಕೃತ್ಯ ನಡೆಯಿತೆಂದರೆ? ಹರೆಯದ ಯುವಕ ಯುವತಿಯರಲ್ಲಿ ಆಕರ್ಷಣೆ, ಪ್ರೀತಿ- ಪ್ರೇಮ ಸಹಜ. ವಿದೇಶಗಳಲ್ಲಿರುವಂತೆ ನಮ್ಮಲ್ಲಿ ಪ್ರೇಮಿಗಳಿಗೆ ಮೀಸಲಾದ ಸ್ಥಳಗಳಿಲ್ಲ. ಮದುವೆಯ ಮುನ್ನ ಪ್ರೀತಿ-ಪ್ರೇಮ, ಭೇಟಿ-ಮಾತುಕತೆ ಕುರಿತು ಸಂಶಯವೇ ಹೆಚ್ಚು. ಹೀಗಿರುವಾಗ ಪ್ರೇಮಿಗಳು ಏನು ಮಾಡಲು ಸಾಧ್ಯ? ಮನೆಯವರಿಗೆ ಗೊತ್ತಾಗದ ಹಾಗೆ ಎಲ್ಲೋ ಭೇಟಿ ಮಾಡಬೇಕು. ಜನಸಂಚಾರ ಹೆಚ್ಚಿರದ ಸ್ಥಳವನ್ನೇ ಆಯ್ಕೆ ಮಾಡುವುದು ಸಹಜವೇ. ಮೈಸೂರಿನ ಜನರಿಗೆ ಚಾಮುಂಡಿ ಬೆಟ್ಟವೆಂದರೆ ಲೊಕೇಶನ್ ಅಲ್ಲ, ಎಮೋಶನ್! ಹೀಗಿದ್ದಾಗ ಅಲ್ಲಿಗೆ ಪ್ರಾಯಪ್ರಬುದ್ಧರಾದ ಇಬ್ಬರು ಹೋದರೆ ತಪ್ಪೇನು? ಬೆಟ್ಟದ ತಪ್ಪಲಲ್ಲಿ ಕತ್ತಲಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ವಿಷಯ ಗೊತ್ತಿದ್ದು ಆ ಬಗ್ಗೆ ಏನನ್ನೂ ಮಾಡದೇ ಈಗ ದುರ್ಘಟನೆಯ ನಂತರ ಅಲ್ಲಿಗೆ ಹೋಗಲೇಬೇಡಿ ಎನ್ನುವುದು ಸಮಂಜಸವೇ? ಅದರೊಂದಿಗೇ ಪ್ರೇಮಿಗಳು ಎಲ್ಲಿ ಹೋದರೂ ಅವರ ಹಿಂದೆಯೇ ಪೊಲೀಸರು ತಿರುಗಲು ಸಾಧ್ಯವೂ ಇಲ್ಲ, ಬೇಡವೂ ಬೇಡ. ಆದರೆ ದೀಪಗಳ ವ್ಯವಸ್ಥೆ, ಸ್ಥಳ ಸುರಕ್ಷತೆ ಬಗ್ಗೆ ಸರ್ಕಾರದ ಜವಾಬ್ದಾರಿ ಬೇಕಲ್ಲವೇ? ಅದಿಲ್ಲದಿದ್ದಲ್ಲಿ ಯಾರೇ-ಹೇಗೇ ಹೋದರೂ ಅಪಾಯ ಖಂಡಿತ. ಅದೇ ರೀತಿ ಪೋಷಕರು ಮಕ್ಕಳಿಗೆ ಎಚ್ಚರಿಕೆ ಮಾತು ಹೇಳಬಾರದು ಎಂದಲ್ಲ. ಪಕ್ಕದ ಬೀದಿಯಲ್ಲಿ ಗೆಳೆಯರ ಮನೆಗೆ ಹೋದ ಮಗಳು ಹತ್ತು ನಿಮಿಷ ತಡವಾಗಿ ಬಂದರೆ ಹೆದರುವ ಪರಿಸ್ಥಿತಿ ಇರುವಾಗ ಎಲ್ಲಿಗಾದರೂ ಹೊರಹೋಗುವಾಗ ‘ಮಗಳೇ ಜಾಗ್ರತೆ’ ಎನ್ನುವ ಅನಿವಾರ್ಯತೆ ಇದೆ. ಅದರೊಂದಿಗೇ ಮಗನಿಗೂ ‘ಮಗನೇ, ಎಚ್ಚರ ’ ಎನ್ನುವ ಅಗತ್ಯವೂ! ಗಂಡು-ಹೆಣ್ಣು ಎಲ್ಲರೂ ದೇಹ-ಮನಸ್ಸುಳ್ಳ ಮನುಷ್ಯರೇ. ಆದ್ದರಿಂದಲೇ ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳು ಪರಸ್ಪರ ಹೇಗೆ ಗೌರವಿಸಬೇಕು-ವರ್ತಿಸಬೇಕು ಎಂಬುದರ ಬಗ್ಗೆ ಮನೆಯಿಂದಲೇ ಶಿಕ್ಷಣ ದೊರೆಯಬೇಕು. ಮನೆಯಲ್ಲಿ, ಶಾಲೆಯಲ್ಲಿ, ಬಸ್ಸಿನಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿ ಹೀಗೆ ಹೆಣ್ಣು ಮಕ್ಕಳು ಎಲ್ಲಿದ್ದರೂ ಹೇಗಿದ್ದರೂ ಅವರನ್ನು ಆದರದಿಂದ ಕಾಣುವ, ಅವರ ಸ್ವಾತಂತ್ರ್ಯವನ್ನು ಗೌರವಿಸುವ ಮನಸ್ಥಿತಿ ಮೂಡಬೇಕೇ ಹೊರತು ದೌರ್ಜನ್ಯಕ್ಕೆ ಸಮರ್ಥನೆ ಹುಡುಕುವುದಲ್ಲ!

ಇದೆಲ್ಲವನ್ನೂ ನೋಡುವಾಗ ಸುಮಾರು ಎರಡೂವರೆ ದಶಕಗಳ ಹಿಂದೆ ಶಿವಮೊಗ್ಗೆಯಿಂದ ಮಣಿಪಾಲಕ್ಕೆ ದಂತವೈದ್ಯಕೀಯ ಓದಲು ಹೋದಾಗ ಹೆದರಿದ್ದು ನೆನಪಾಗುತ್ತದೆ. ಶಿವಮೊಗ್ಗೆ ಮಲೆನಾಡಿನ ಸೊಗಡು-ಸಂಪ್ರದಾಯ ಎರಡೂ ಇದ್ದ ಪುಟ್ಟ ಊರು. ಇಂಥ ವಾತಾವರಣದಿಂದ ದೇಶ-ವಿದೇಶದ ವಿದ್ಯಾರ್ಥಿಗಳು ಮುಕ್ತವಾಗಿ ಬೆರೆಯುವ ಕಾಲೇಜಿಗೆ ಹೋಗಬೇಕಾದಾಗ, ‘ಯಾವುದಕ್ಕೂ ಹುಷಾರು, ಅಲ್ಲೆಲ್ಲಾ ಹುಡುಗರು ಹೇಗೆ ಬೇಕೋ ಹಾಗೆ ಮಾಡ್ತಾರಂತೆ, ಎಲ್ಲರೆದುರು’ ಎನ್ನುವುದೇ ಅನೇಕರ ಮಾತಾಗಿತ್ತು. ನಡುಗುತ್ತಲೇ ಕಾಲೇಜಿಗೆ ಕಾಲಿಟ್ಟಿದ್ದು ಹೌದು. ಅದೊಂದು ವಿಭಿನ್ನ ಪ್ರಪಂಚ ಎನ್ನುವುದೂ ಸರಿಯೇ! ಆದರೆ ಹೆಣ್ಣು-ಗಂಡು ಬೇಧವಿರಲಿಲ್ಲ, ಯಾರಿಗೂ ಯಾರ ಒತ್ತಾಯವೂ ಇಲ್ಲ. ಇಷ್ಟವಿದ್ದರೆ ಏನೂ ಮಾಡಬಹುದು, ಇಲ್ಲದಿದ್ದರೆ ಏನೂ ಇಲ್ಲ. ಪ್ರೇಮಿಗಳ ತಾಣ ಎಂದೇ ಪ್ರಸಿದ್ಧವಾಗಿದ್ದ ‘ಎಂಡ್ ಪಾಯಿಂಟ್’ ಆಗ ಬಲು ಚೆಂದದ ಆದರೆ ನಿರ್ಜನ ಪ್ರದೇಶವಾಗಿತ್ತು. ವೀಕೆಂಡ್​ಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಹೋಗುತ್ತಿದ್ದರು. ಆದರೆ ಸೀನಿಯರ್​ಗಳಿಂದ ಕಟ್ಟುನಿಟ್ಟಾಗಿ ಸೂಚನೆ ಸಿಕ್ಕಿತ್ತು. ‘ಬ್ಯೂಟಿಫುಲ್ ಪ್ಲೇಸ್! ಸಾಧ್ಯವಾದಷ್ಟೂ ಗುಂಪಾಗಿ ಹೋಗಿ. ಇಬ್ಬರೇ ಹೋಗುವುದಾದರೆ ಹುಷಾರು. ಯಾರಿಗಾದರೂ ತಿಳಿಸಿ ಹೋಗಬೇಕು. ಅಲ್ಲದೇ ಕರೆದುಕೊಂಡು ಹೋದ ಹುಡುಗಿಯರನ್ನು ಸೇಫಾಗಿ ಕರೆದುಕೊಂಡು ಬರುವ ಜವಾಬ್ದಾರಿ ಹುಡುಗರದ್ದು. ವಿ ಆಲ್ ಆರ್ ರೆಸ್ಪಾನ್ಸಿಬಲ್ ಇಫ್ ಎನಿಥಿಂಗ್ ಹ್ಯಾಪನ್ಸ್​;  ಮೋರ್ ಸೊ ವಿತ್ ಜೆಂಟ್ಲ್​ಮೆನ್ ಆಸ್ ವಿ ಲಿವ್ ಇನ ಮೇಲ್ ಡಾಮಿನೇಟೆಡ್ ಸೊಸೈಟಿ’. ಈಗ ಅಲ್ಲಿ ಹೇಗಿದೆಯೋ ಗೊತ್ತಿಲ್ಲ, ಆದರೆ ಗಂಡು-ಹೆಣ್ಣಿನ ನಡುವೆ ಸ್ನೇಹ, ಪ್ರೀತಿ ಎಲ್ಲವೂ ಪರಸ್ಪರ ಒಪ್ಪಿಗೆಯಿಂದ ಸಾಧ್ಯ ಎನ್ನುವ ಸರಳ ಸುಂದರ ಸತ್ಯ ಅರಿವಾದದ್ದು ಅಲ್ಲಿಯೇ!

Meeting Point KS Chaitra

ಸೌಜನ್ಯ : ಅಂತರ್ಜಾಲ

ಇದೆಲ್ಲಾ ಯೋಚಿಸುತ್ತಾ ವಾಕಿಂಗ್​ನಲ್ಲಿ ಸಿಗುವ ಡಿಗ್ರಿ ಓದುವ ಹುಡುಗಿಯ ಹತ್ತಿರ ಈ ಬಗ್ಗೆ ಮಾತುಕತೆ ನಡೆಯಿತು. ಆಕೆ ‘ನಿಮ್ಮ ಕಾಲದಲ್ಲಿ ಹೇಗಿತ್ತೋ ಗೊತ್ತಿಲ್ಲ. ಈಗ ನಾವೂ ಸೇಫ್ಟಿ ಬಗ್ಗೆ ಯೋಚನೆ ಮಾಡಲೇಬೇಕು. ಪಾರ್ಕಿಗೆ ಹೋಗಬಹುದು ನಿಜ. ಆದರೆ ಓಡಾಡುವ ಜನ ಒಂಥರಾ ಮಾಡಿ ನೋಡ್ತಾರೆ. ಕೆಲವರಂತೂ ಇದೆಲ್ಲಾ ಸರಿಯಲ್ಲ ಎನ್ನುವ ಬುದ್ಧಿವಾದವನ್ನೂ ಕೊಡ್ತಾರೆ. ಯಾಕಂದ್ರೆ ಅದು ರಿಸರ್ವ್ಡ್ ಪ್ಲೇಸ್ ಅಲ್ವಲ್ಲ! ಆದ್ರೆ ನಾವೂ ಸ್ಮಾರ್ಟ್ ಆಗಿದ್ದೀವಿ. ಸಿನಿಮಾ ಥಿಯೇಟರ್​ಗಳಿಗೆ ಹೋಗಿ ಟೈಮ್ ಸ್ಪೆಂಡ್ ಮಾಡ್ತೀವಿ. ಮತ್ತೆ ಕೆಲವರು ಶಾಪಿಂಗ್ ಮಾಲ್​ಗಳಿಗೆ  ಹೋಗ್ತಾರೆ. ಎಷ್ಟೋ ಸಲ ಪರಸ್ಪರ ಗೊತ್ತಿರೋ ಸ್ನೇಹಿತರ ಮನೆಯಲ್ಲಿ ಮೀಟ್ ಆಗ್ತಾರೆ. ನಿಮಗೆ ಆಶ್ಚರ್ಯ ಆಗಬಹುದು, ಅನೇಕ ಹುಡುಗ-ಹುಡುಗಿಯರು ದೇವರ ಭಕ್ತರೂ ಆಗ್ತಾರೆ! ಕಾರಣ ಭೇಟಿಯಾಗಲು ಟೆಂಪಲ್ ಒಳ್ಳೆಯ ಪ್ಲೇಸ್ ಅಂತ. ನನ್ನ ಪ್ರಕಾರ ಇವೆಲ್ಲಾ ಜನರು ಇದ್ದೂ ಒಂದಷ್ಟು ಸ್ವಾತಂತ್ರ್ಯ ಸಿಗುವ ಸ್ಥಳಗಳು. ಎಲ್ಲಕ್ಕಿಂತ ಮುಖ್ಯವಾಗಿ ಸೇಫ್ ಕೂಡಾ! ನಿಜ ; ಲವರ್ಸ್​ಗೆ ಅಂತ ಒಂದಿಷ್ಟು ಪ್ಲೇಸ್ ಇದ್ರೆ ಒಳ್ಳೆಯದು, ಆದ್ರೆ ನಮ್ಮಲ್ಲಿ ಹಾಗೆ ಹೇಳ್ಕೊಂಡ್ರೆ ಒಪ್ಪ್ತಾರಾ? ಹಾಗಂತ ಎಲ್ಲೆಲ್ಲೊ ಒಬ್ಬೊಬ್ಬರೇ ಹೋಗೋದು ಸರಿ ಇಲ್ಲ. ಹೆದರಿಕೆಯೇ? ಒಬ್ಬರೇ ಅವರೇನು ಮಾಡಲು ಸಾಧ್ಯ? ಹಾಗಾಗಿ ನಾವೇ ಏನೋ ಸೇಫಾಗಿರೋ ದಾರಿ ಕಂಡ್ಕೋಬೇಕು’.

ಪ್ರೀತಿ-ಪ್ರೇಮ-ಸ್ನೇಹ ಎಲ್ಲವೂ ಇರಲಿ. ಹಾಗೆಯೇ ಕಾನೂನು ಬಿಗಿಯಾಗಬೇಕು, ಸರ್ಕಾರ ಸುವ್ಯವಸ್ಥೆ ಕಾಪಾಡಬೇಕು, ಸಮಾಜದ ಧೋರಣೆ ಬದಲಾಗಬೇಕು. ಒಂದೇ ದಿನದಲ್ಲಿ ಆಗುವಂಥದ್ದಲ್ಲ, ಪ್ರಯತ್ನ ನಿರಂತರವಾಗಿ ನಡೆಯಬೇಕು; ಆದರೆ ಅದರೊಂದಿಗೇ ಇಂದಿನ ವಿದ್ಯಮಾನಗಳನ್ನು ನೋಡುತ್ತಲೇ ಇರುವ ಯುವಜನರಿಗೆ ಒಂದಿಷ್ಟು ಮುನ್ನೆಚ್ಚರಿಕೆ, ವಿವೇಚನೆ ಕೂಡಾ ಮುಖ್ಯ. ಸ್ವಾತಂತ್ರ್ಯ ಇದೆಯೆಂದು ಸ್ವೇಚ್ಛಾಚಾರ ಸರಿಯಲ್ಲ. ತಮ್ಮ ಚಲನವಲನಗಳ ಬಗ್ಗೆ ಆತ್ಮೀಯರಿಗೆ ಮಾಹಿತಿ, ಹೋಗುವ ಸ್ಥಳದ ತಿಳಿವಳಿಕೆ, ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಎಚ್ಚರ, ಸುತ್ತಲಿನ ಆಗು-ಹೋಗುಗಳ ಜ್ಞಾನ, ಸ್ವರಕ್ಷಣಾ ತಂತ್ರಗಳನ್ನು ಕಲಿತು ಅಗತ್ಯವಿದ್ದಲ್ಲಿ ಉಪಯೋಗಿಸುವುದು ಈ ಪ್ರಾಯೋಗಿಕ ಕೌಶಲಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಇವುಗಳ ಬಗ್ಗೆ ಲಿಂಗಬೇಧವಿಲ್ಲದೇ ಮಕ್ಕಳಿಗೆ ಮೊದಲಿನಿಂದಲೇ ತರಬೇತಿಯೂ ಅವಶ್ಯಕ. ಇವೆಲ್ಲಾ ನಂತರದ ಮಾತಾಯಿತು; ಸದ್ಯಕ್ಕೆ ತುರ್ತಾಗಿ ಆಗಬೇಕಾದದ್ದು, ಅಪರಾಧಿಗಳಿಗೆ ತಕ್ಕ ಶಿಕ್ಷೆ! ದೌರ್ಜನ್ಯದ ನಂತರ ಒಂದೊಂದು ದಿನ ಕಳೆದಂತೆ ಅದು ‘ಹಳೆಯ ಸುದ್ದಿ’ಯಾಗುತ್ತದೆ, ನಂತರ ರದ್ದಿಯಾಗುತ್ತದೆ! ವ್ಯಕ್ತಿಯ ಮೇಲೆ ನಡೆದ ದೈಹಿಕ ಮತ್ತು ಮಾನಸಿಕ ನೋವು ಒಳಗೊಳಗೇ ದಹಿಸಿದರೂ ಜೀವನವಿಡೀ ಕಾಡಿದರೂ, ಸಮಾಜದ ಭಾವತೀವ್ರತೆ-ಸ್ಪಂದನ ಕಡಿಮೆಯಾಗುತ್ತದೆ. ಮತ್ತೇನೋ ಹೊಸ ಸುದ್ದಿಯತ್ತ ಮನ ಹೊರಳುತ್ತದೆ. ಹೀಗೆ ದಿನಕಳೆದಷ್ಟೂ ಅಪಾಯ ಹೆಚ್ಚು. ಏಕೆಂದರೆ ‘ಕಡೆಗೆ ಆದದ್ದಾಯ್ತು, ಇನ್ನೇನು ಪ್ರಯೋಜನ’ ಎಂದು ಮರೆ/ಕ್ಷಮಿಸುವಲ್ಲಿ ಇಡೀ ಪ್ರಕರಣ ಕೊನೆಯಾಗುತ್ತದೆ. ಇದು ಇಂಥಹದ್ದೇ ಮನಃಸ್ಥಿತಿಯ ದುಷ್ಟರಿಗೆ ತಪ್ಪು ಸಂದೇಶ ನೀಡುತ್ತದೆ. ಹಾಗಾಗಿ ಕಾನೂನುಪ್ರಕಾರ ಇಂಥಹ ಕೃತ್ಯಕ್ಕೆ ತಕ್ಷಣ ಘೋರ ಶಿಕ್ಷೆ ನೀಡಿ ಸಮಾಜದಲ್ಲಿ ಮುಂದೆಂದೂ ಮರುಕಳಿಸದ ಹಾಗೆ ಹೆದರಿಕೆ ಹುಟ್ಟಿಸಬೇಕು. ಹಾಗಾದಾಗ ಮಾತ್ರ ನ್ಯಾಯ ಸಿಕ್ಕಂತೆ… ಹಾಗಾದೀತೇ?

ಇದರೊಂದಿಗೆ ಯುವಜನರಲ್ಲಿ ಈ ಬಗೆಯ ಅಪರಾಧಿಪ್ರವೃತ್ತಿಗೆ ಕಾರಣಗಳನ್ನು ವಿಮರ್ಶಿಸುವುದೂ ಅಗತ್ಯ. ಏಕಾಏಕಿ ಹೀಗೆ ಆಗುವಂಥದಲ್ಲ. ಇಂಥ ಅಪರಾಧಗಳನ್ನು ಮಾಡುವ ಬಹುತೇಕರಲ್ಲಿ ಸಾಮಾಜಿಕ ವಿರೋಧಿ ವ್ಯಕ್ತಿತ್ವ ದೋಷ ಇರುತ್ತದೆ. ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಆನುವಂಶಿಕತೆ ಜತೆ ಪರಿಸರದ ಪ್ರಭಾವ ಹೆಚ್ಚಿನದ್ದು. ಹುಟ್ಟಿ ಬೆಳೆದ ಪರಿಸರ, ಕುಟುಂಬದಲ್ಲಿನ ಸಮಸ್ಯೆಗಳು (ಪೋಷಕರ ವರ್ತನೆ, ಮದ್ಯ ವ್ಯಸನ, ಕೌಟುಂಬಿಕ ಹಿಂಸೆ) ಮಕ್ಕಳ ಮನಸ್ಸು ಮತ್ತು ನಡವಳಿಕೆಯನ್ನು ಅವರಿಗರಿವಿಲ್ಲದೆ ರೂಪಿಸುತ್ತವೆ. ಇದರೊಂದಿಗೆ ನೈತಿಕ ಶಿಕ್ಷಣದ ಕೊರತೆ ಮತ್ತು ಮಾಧ್ಯಮಗಳಲ್ಲಿ ಹಿಂಸೆಯ ವೈಭವೀಕರಣ ಮತ್ತಷ್ಟು ಸಮಾಜ ವಿರೋಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತವೆ. ಹಾಗಾಗಿಯೇ ಮಕ್ಕಳನ್ನು ಬೆಳೆಸುವ ಬಗ್ಗೆ ಪೋಷಕರಿಗೆ ಶಿಕ್ಷಣ, ಶಾಲೆಗಳಲ್ಲಿ ಈ ಬಗೆಯ ವ್ಯಕ್ತಿತ್ವ ಹೊಂದಿರುವ ಮಕ್ಕಳನ್ನು ಗುರುತಿಸುವುದು – ಚಿಕಿತ್ಸೆ ನೀಡುವುದು ಇವೆಲ್ಲವೂ ಕೈಗೊಳ್ಳಬೇಕಾದ ಕ್ರಮಗಳು.

ಹಾಗಾಗಿ ಬೇಕುಗಳತ್ತ ಗಮನ ಹರಿಸುವುದು ಇಂದಿನ ತುರ್ತು ಅಗತ್ಯ ಹೊರತು ಬೇಡಗಳ ಪಟ್ಟಿಯಲ್ಲ!

ಇದನ್ನೂ ಓದಿ :Meeting Point : ಅವಳನ್ನು ದೂರ ಮಾಡುವುದು ಅಷ್ಟು ಸುಲಭದ್ದಾಗಿರಲಿಲ್ಲ

Published On - 3:41 pm, Tue, 7 September 21

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್