Women Empowerment; ನಾನೆಂಬ ಪರಿಮಳದ ಹಾದಿಯಲಿ: ಅದ್ಯಾವ್ದೋ ನಾಟಕ್ ಸಾಲಿಗೆ ಸೇರ್ಕೊಂಡಾಳಂತs ಗಂಡಸರ ಜೊತಿ ಕುಣ್ಯಾಕ

Art-Theatre-Cinema | 'ಕಾಲವನ್ನು ಸರಿಯಗೊಡದಂತೆ ಪಾತ್ರಗಳನ್ನು ಅಭಿನಯಿಸುತ್ತಲೇ ಜೀವಿಸಿಬಿಡಬೇಕಿತ್ತು ಎಂದು ತೀವ್ರವಾಗಿ ಅನ್ನಿಸಿದಾಗೆಲ್ಲ ‘ಮಲ್ಲಿನಾಥ ಧ್ಯಾನ’ ನೆನಪಾಗುತ್ತದೆ. ಈ ಪಾತ್ರ ನನ್ನೊಳಗೆ ಮತ್ತೇನು ಹೊಸ ಹೊಸ ಅರ್ಥಗಳನ್ನು ಧ್ವನಿಸಬಹುದು ಎಂಬ ಹಂಬಲಕ್ಕಾಗಿಯಾದರೂ ಮತ್ತೊಮ್ಮೆ ಮಾಡಬೇಕು ಅನ್ನಿಸುತ್ತದೆ; ಬದುಕಿನ ಬಗ್ಗೆ ವಿಶಾಲ ದೃಷ್ಟಿಯಿಂದ ಯೋಚಿಸಲು ಪ್ರಾರಂಭಿಸಿದಾಗಲೇ ನಮ್ಮ ಎದೆಯೊಳಗೆ ‘ಬೋಲ್ಡ್’​ ಎನ್ನುವುದು ಕಾವು ಕೊಡುತ್ತ ಹೋಗುವುದಲ್ಲವೆ? ನಾನೀಗ ಅಂಥ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ.' ಲಕ್ಷ್ಮೀ ನಾಡಗೌಡ

Women Empowerment; ನಾನೆಂಬ ಪರಿಮಳದ ಹಾದಿಯಲಿ: ಅದ್ಯಾವ್ದೋ ನಾಟಕ್ ಸಾಲಿಗೆ ಸೇರ್ಕೊಂಡಾಳಂತs ಗಂಡಸರ ಜೊತಿ ಕುಣ್ಯಾಕ
ರಂಗಕಲಾವಿದೆ, ನಟಿ ಲಕ್ಷ್ಮೀ ನಾಡಗೌಡ (ಕಬ್ಬೇರಳ್ಳಿ)
Follow us
ಶ್ರೀದೇವಿ ಕಳಸದ
| Updated By: ರಾಜೇಶ್ ದುಗ್ಗುಮನೆ

Updated on:Feb 14, 2021 | 8:31 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

‘ಮೊದಲ ಮಗು ಹೆಣ್ಣೇ ಆಗಬೇಕೆಂಬ ಅಪ್ಪನ ಆಸೆಗೆ ಅವಾಕ್ಕಾಗಿದ್ದಳಂತೆ ಅವ್ವ. ‘ಹಲ್ಲಿಪಿಲ್ಲಿ ಹಾಂಗಿದ್ದ ನೀನು ರಾತ್ರೆಲ್ಲಾ ಉಂಯ್ ಉಂಯ್ ಅಂತಿದ್ರs, ತಟಗೂ ಬ್ಯಾಸರಾ ಮಾಡಕೊಳ್ಳದನ ಎದಿಗವಿಚಿಕೊಂಡು ಅಡ್ಯಾತಿದ್ರವ್ವಾ ನಿಮಪ್ಪಾಜಿ‘ ಅಂತ ಯಾವಾಗಲೂ ಹೇಳೋರು.

ಬ್ಯಾಂಕ್ ಉದ್ಯೋಗಿಯಾಗಿದ್ದ ಅಪ್ಪ ಫೈಲುಗಳ ಮಧ್ಯೆ ಹೈರಾಣಾಗುತ್ತಿದ್ದಾಗಲೂ ಉತ್ಸಾಹಹೀನನಾಗಿದ್ದನ್ನು ನಾನು ಕಾಣಲೇ ಇಲ್ಲ. ಜಗತ್ತಿನ ಕೌತುಕಗಳನ್ನೆಲ್ಲ ತನ್ನ ಮಕ್ಕಳಿಗೆ ಹೇಳಿ ಬಿಡಬೇಕೆಂಬ ಹಪಾಹಪಿ. ಮೂಢನಂಬಿಕೆ ವಿರೋಧಿಸುತ್ತಿದ್ದ ಅಪ್ಪ ಗ್ರಹಣದ ದಿನ ನಾವೆಲ್ಲ ಹೊರಗೆ ಬಂದು ತಾನೇ ತಯಾರಿಸಿದ ಬಣ್ಣದ ಕನ್ನಡಕದಲ್ಲಿ ಸೂರ್ಯ-ಚಂದ್ರರನ್ನು ತೋರಿಸಿ ವಿವರಿಸುತ್ತಿದ್ದರೆ, ಎಳೆಯರಾದ ನಾವು ಕಣ್ಣರಳಿಸಿ ನಿಂತು ಬಿಡುತ್ತಿದ್ದ ನೆನಪು ನನಗೆ. ಅಂಥ ಅಪ್ಪನ ಅಗಲಿಕೆ ಅಷ್ಟು ಬೇಗ ಆದೀತು ಅಂತ ಊಹೆ ಮಾಡಲೂ ಅಸಾಧ್ಯ. ಅಪ್ಪ-ಚಿಕ್ಕಪ್ಪನ ಅಕಾಲಿಕ ಸಾವು  ಬರಸಿಡಿಲಿನಂತೆ ಬಂದೆರಗಿದಾಗ ಅಕ್ಷರಶಃ ಬೀದಿಯಲ್ಲಿ ನಿಲ್ಲುವ ಪರಿ ಸ್ಥಿತಿಯಲ್ಲಿದ್ದಾಗ ತಾಯಿಯ ಅಕ್ಕ-ಬಾವ ಮಾನಸಿಕವಾಗಿ ಅವ್ವ ಕುಗ್ಗದಂತೆ ನೋಡಿಕೊಂಡರು. ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಬೆಳೆದಿದ್ದ ಅವ್ವ ಅಪವಾದಗಳೊಂದೂ ಬರದಂತೆ ತಾನೂ ಬದುಕಿ ನಮ್ಮನ್ನೂ ಬದುಕಿಸಿಬಿಟ್ಟಳು. 26-27 ರ ಹರೆಯದ ಅವ್ವ ಕಳೆದುಕೊಂಡಿರುವುದರ ಅರ್ಥವೇನು ಎಂದು ಈಗೀಗ ಹೆಚ್ಚು ಯೋಚಿಸುತ್ತಿದ್ದೇನೆ.

ಹುಟ್ಟಾ ಹಟಮಾರಿಯಾಗಿದ್ದ ನಾನು ಸೋದರಮಾವಂದಿರ ಆಶ್ರಯದ ನೆಪಕ್ಕೆ ಅವರೂರಿನಲ್ಲಿ ಆಶ್ರಯ ಪಡೆಯಲು ಸುತರಾಂ ಸಿದ್ಧವಿರಲಿಲ್ಲ. ‘ನಿಮ್ಮೂರಿಗೆ ಕರ್ಕೊಂಡ್ಹೋದ್ರ ನಾ ಸತ್ತಹೊಕ್ಕೇನಿ’ ಅಂತ ಮಾವಂದರಿಗೇ ಎದುರುನಿಂತೆ. ಭಾರ ಇಳಿಸಿಕೊಂಡವರಂತೆ ಅವರು ಹಗುರವಾಗಿದ್ದು ನನ್ನ ಗಮನಕ್ಕೆ ಬಂದಿದ್ದು ಮಾತ್ರ ಸತ್ಯ. ಅವ್ವ, ‘ಕಷ್ಟಾನೋ- ಸುಖಾನೋ ಧಾರವಾಡದಾಗ ಮಕ್ಕಳನ್ನ ಓದಸ್ತೀನಿ. ಎಷ್ಟರ ತ್ರಾಸ್ ಬರಲಿ; ನಾ ಯಾರಿಗೂ ಕೈ ಒಡ್ಡೂದಿಲ್ಲ’ ಅಂದ್ಲು. ನನ್ನಪ್ಪನೂ ಹಾಗೇ ಬದುಕಿದ್ದ. ಸಹಾಯ ಮಾಡುವ ಹಾಗಿರಬೇಕು ಬೇಡುವ ಹಾಗಿರಬಾರದು ಎನ್ನುತ್ತಿದ್ದನಂತೆ. ನಮಗೆ ನಾವು, ನನಗೆ ನಾನೇ ಅನ್ನುವ ಸತ್ಯದ ಹುರುಳು ದಿನಗಳೆದಂತೆ ನನ್ನಲ್ಲಿ ಬಲವಾಗತೊಡಗಿತು. ತಮ್ಮಂದಿರ ಪಾಲಿನ ಹೀರೋ ನಾನಾದೆ. ಇನ್ನೂ ಸರಿಯಾಗಿ ಮಾತುಬಾರದ ಸಣ್ಣ ತಮ್ಮ ಅಮ್ಮನಿಗೆ ಅಂಟಿಕೊಂಡಿದ್ದರೆ, ದೊಡ್ಡವ ಸದಾ ನನ್ನ ಹಿಂದಿಂದೆ. ಮಹಾನ್ ಪುಕ್ಕಲು. ಯಾರಾದರೂ ಕೈಯಲ್ಲಿನ ಚೆಂಡನ್ನು ಕಿತ್ತುಕೊಂಡರೆ ಗಡಗಡ ನಡುಗುತ್ತಾ ನಿಂತುಬಿಡುತ್ತದ್ದ ಭೂಪ! ನಾನು ಸರ್ರನೆ ನುಗ್ಗಿ ಬಿರುಗಾಳಿಯಂತೆ ಸುತ್ತಿ ಪ್ರತಾಪ ತೋರಿಸಿಬಿಡುತ್ತಿದ್ದೆ.

naanemba parimaladha haadhiyali

ರಂಗದ ಮೇಲೆ ಲಕ್ಷ್ಮೀ

ಪ್ರಾಥಮಿಕ ಶಾಲೆಯಲ್ಲಿನ ಪ್ರತಿಯೊಂದು ಕಾರ್ಯಕ್ರಮದಲ್ಲೂ ನಾನಿರುತ್ತಿದ್ದೆ. ಅಲ್ಲಿನ ಶಿಕ್ಷಕರ ಪ್ರೋತ್ಸಾಹವೂ ಹಾಗೆ ಇತ್ತು. ಧಾರವಾಡದ ನಾರಾಯಣಪೂರದಂಥ ಉತ್ತಮ ಪರಿಸರ ನಮ್ಮ ಬದುಕಿಗೊಂದು ಸ್ಪಷ್ಟರೂಪ ನೀಡುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಂತೂ ಸತ್ಯ. ಹೈಸ್ಕೂಲ್ ಶಿಕ್ಷಣಕ್ಕೆ ಧಾರವಾಡದ ಕೆ.ಇ. ಬೋರ್ಡ್​ಗೆ ಸೇರಿಕೊಂಡಾಗಲೇ ಬೇರೊಂದು ಲೋಕ ತೆರೆದುಕೊಂಡಿತು. ಅಲ್ಲಿಯವರೆಗೂ ಹುಡುಗ-ಹುಡುಗಿಯರು ಎನ್ನುವ ಬೇಧವಿಲ್ಲದೆ ಆಡಾಡಿಕೊಂಡಿದ್ದವಳಿಗೆ ಚಡ್ಡಿದೋಸ್ತರನ್ನೂ ಮಾತನಾಡಿಸದ ಪರಿಸ್ಥಿತಿ ತೀರಾ ಗೊಂದಲಮಯ ಅನಿಸಹತ್ತಿತು. ಹೈಸ್ಕೂಲಿನ ಎರಡನೇ ವರ್ಷ ಮುಗಿಯುತ್ತಿದ್ದ ಹಾಗೆ ಬೇಸಿಗೆ ರಜೆಯಲ್ಲಿ ಹೆಣ್ಣಾಗಿ ಅರಳಿದ್ದೆ. ಇಷ್ಟರವರೆಗೆ ಅರೆಕ್ಷಣವೂ ಸುಮ್ಮನೆ ಕೂಡದಿದ್ದವಳಿಗೆ ಬರೋಬ್ಬರಿ ಒಂಬತ್ತು ದಿನಗಳ ಗೃಹಬಂಧನ. ನಡುಕೋಣೆಯ ಮೂಲೆಯಲ್ಲಿ ಹಾಸಿದ ಹಾಸಿಗೆ ರತ್ನಗಂಬಳಿಯಾಯ್ತು. ಅಮ್ಮ ತಮ್ಮಂದಿರ ಕೈಗೆ ಚಿಲ್ಲರೆ ಕೊಡುವುದು. ಫರ್ಲಾಂಗು ದೂರದ ಅಂಗಡಿಗೆ ಹಾರಾಡಿಕೊಂಡು ಹೋದ ಇಬ್ಬರೂ ಆರಿಸಿ ತರುತ್ತಿದ್ದ ಬಣ್ಣಬಣ್ಣದ ಕ್ಲಿಪ್​ಗಳು ನನ್ನ ತೆಪ್ಪಗಿರಿಸುವ ತಂತ್ರಗಳಾಗಿದ್ದವು.

ಇದನ್ನೂ ಓದಿ : ಮದುವೆಯಾಗುವುದೇ ನನ್ನ ಪರಮ ಗುರಿಯಾಗಿತ್ತು!

ಧಾರವಾಡ ಆಗ ಸಂಪೂರ್ಣ ಪುಣೆ-ಮುಂಬೈನ ಪ್ರಭಾವಕ್ಕೆ ಒಳಗಾಗಿತ್ತು. ಹತ್ತಿರದ ಗೋವಾ ಸಂಪರ್ಕದಲ್ಲಿದ್ದವರಂತೂ ಅಲ್ಲಿನ ಫ್ರಾಕುಗಳನ್ನು ಮಕ್ಕಳಿಗೆ ತರುವ ರೂಢಿಯಿತ್ತು. ಉಡುಗೆತೊಡುಗೆಯ ವಿಚಾರದಲ್ಲಿ ಧಾರವಾಡ, ಬೆಳಗಾವಿ ಹಿಂದಿ ಸಿನೆಮಾಗಳ ಪ್ರಭಾವದಲ್ಲಿದ್ದವೆಂದೇ ಹೇಳಬೇಕು. ಹಾಗಾಗಿ ನಾವು ಬಟ್ಟೆಗಳ ವಿಷಯದಲ್ಲಿ ಹೆಚ್ಚು ರಗಳೆ ಎದುರಿಸಲೇ ಇಲ್ಲವೆನ್ನಬೇಕು. ಹೆಚ್ಚಿನ ಬಟ್ಟೆಗಳಿರದಿದ್ದರೂ ಆ ವಿಷಯದಲ್ಲಿ ತೃಪ್ತಿ ಇತ್ತು. ಹೀಗಿರುವಾಗ ಹೈಸ್ಕೂಲಿನ ದಿನಗಳಲ್ಲಿ ಜೊತೆಯಾದವಳೇ ಗೆಳತಿ ಗೌರಿ. ವಯಸ್ಸಿಗೂ ಮೀರಿದ ತಿಳಿವಳಿಕೆ ಆಕೆಯದ್ದು. ತೀರಾ ಸೈಲೆಂಟ್. ಆದರೆ ಶಾಲೆ ತಲುಪುವ ದಾರಿಯುದ್ದಕ್ಕೂ ಅವಳು ಹೇಳುವ ಕಾದಂಬರಿ ಸಾರಾಂಶ, ಸಿನೆಮಾ ವಿವರಣೆ ಕೇಳುವಲ್ಲಿ ಮುಳುಗಿ ಬಸ್ಸಿನ ಪಾಸ್ ಕಳೆದು, ಮತ್ತದನ್ನು ಹುಡುಕುತ್ತ ಅವಳೊಂದಿಗಿನ ಹೆಜ್ಜೆಗೆ ನನ್ನ ಕುತೂಹಲದ ಹೆಜ್ಜೆಗಳು ಜೊತೆಯಾಗುತ್ತ ಹೋದವು. ನನ್ನ ಜೀವನದ ಪಥ ಬದಲಾಗಿದ್ದೇ ಅವಳಿಂದ ಅಂದರೆ ಖಂಡಿತಾ ಅತಿಶಯೋಕ್ತಿಯಲ್ಲ.

naanemba parimaladh haadhiyali

ರಂಗಭೂಮಿಯೆಂಬ ಮಹಾಗುರುವಿನ ಸಾನಿಧ್ಯದಲ್ಲಿ

ಎಂಬತ್ತರ ದಶಕದ ಉತ್ತರಾರ್ಧ ಧಾರವಾಡದಲ್ಲಿ ರಂಗಭೂಮಿ ಗರಿಗೆದರಿ ನಿಂತ ಘಳಿಗೆಯಾಗಿತ್ತು. ಸಮಾನಾಸಕ್ತರು ಸೇರಿ ಹೊಸಹೊಸ ಸಾಧ್ಯತೆಗಳನ್ನು ಹುಡುಕುತ್ತ ಹೊಸ ಅಲೆಯ ನಾಟಕಗಳನ್ನು ಪ್ರದರ್ಶಿಸಲು ಹಾತೊರೆಯುತ್ತಿದ್ದ ಕಾಲವದು. ಕಂಪನಿ ನಾಟಕಗಳ ಹೊರತಾಗಿ, ಟಿಕೆಟ್ ಕೊಟ್ಟು ನೋಡುವ ಇರಾದೆ ಹವ್ಯಾಸಿ ರಂಗಭೂಮಿಗಿನ್ನೂ ಒಗ್ಗಿರಲೇ ಇಲ್ಲವಾದ್ದರಿಂದ ಮೂರನೇ ರಂಗಭೂಮಿ ಸುಲಭದ ದಾರಿಯಾಗಿತ್ತು. ಹೀಗೆ ಅಂಥದ್ದೊಂದು ನಾಟಕ ಶಿಬಿರಕ್ಕೆ ನನ್ನನ್ನೂ ಜೊತೆ ಮಾಡಿ ಕರೆದುಕೊಂಡು ಹೋದದ್ದೇ ಗೌರಿ. ಆವಾಗಾಗಲೇ ಥರ್ಡ್​ ಥಿಯೇಟರ್ ಕಾನ್ಸೆಪ್ಟ್ಅನ್ನು ಬಾದಲ್ ಸರ್ಕಾರರಿಂದ ಕರಗತ ಮಾಡಿಕೊಂಡು ಬಂದಿದ್ದ ಮುಕುಂದ ಮೈಗೂರ್ ಅವರು ‘ಸೃಷ್ಟಿ’ ರಂಗ ತರಬೇತಿ ಶಿಬಿರದ ನಿರ್ದೇಶಕರಾಗಿದ್ದರು. ಶಿಬಿರದಲ್ಲಿ ನಾವಿಬ್ಬರೇ ಹೆಣ್ಣುಮಕ್ಕಳು. ಉಳಿದವರೆಲ್ಲ ಗಂಡುಮಕ್ಕಳು. ಈಗಿನಂತೆ ವಯಸ್ಸಿನ ಮಿತಿ ಇರಲಿಲ್ಲವಾಗಿ ಮಿಡ್ಲ್ ಸ್ಕೂಲಿನಿಂದ ಕಾಲೇಜು ಓದುವವರೆಲ್ಲಾ ಶಿಬಿರದ ಶಿಬಿರಾರ್ಥಿಗಳಾಗಿದ್ದರು. ಬೆಳಗಿನ ಜಾವ ಸರಿಯಾಗಿ 6 ಗಂಟೆಗೆ 2 ಕಿ.ಮೀಟರ್ ದೂರದ  ಬಯಲು ರಂಗಮಂದಿರದಲ್ಲಿರಬೇಕಿತ್ತು. ಇಬ್ಬರೇ ಹುಡುಗಿಯರು. ಕೈಯಲ್ಲಿ ತ್ರಿಜ್ಯ ಅಥವಾ ಅರ್ಧ ಕತ್ತರಿಸಿದ್ದ ಬ್ಲೇಡು ನಮ್ಮ ಆತ್ಮರಕ್ಷಣೆಯ ಆಯುಧಗಳು!

ಶಿಬಿರದಲ್ಲಿ ನಾವೆಲ್ಲ ಸೇರಿ ಮಾಡಿದ ಏಕಲವ್ಯ ನಾಟಕ ಪ್ರದರ್ಶನಗೊಂಡಿತು. ಕತ್ತು ಏರಿಸಿ ನಾನು-ಗೌರಿ ನಮ್ಮ ನಮ್ಮ ಅಮ್ಮಂದಿರಿಗೆ ನಗು ಬೀರಿದೆವು. ನಂತರದ ಕಾರ್ಯಕ್ರಮ Trust game. ತೀರಾ ಪೀಚಲಾಗಿದ್ದ ನಾನು ಗಾಳಿಯಂತೆ ಹಾರುತ್ತಿದ್ದ ರೀತಿಯನ್ನು ಪ್ರೇಕ್ಷಕರು ಚಪ್ಪಾಳೆಯಿಂದ ಮೆಚ್ಚುಗೆ ಸೂಚಿಸಿದರು. ಆದರೆ ನಮ್ಮಿಬ್ಬರ ಅಮ್ಮಂದಿರೂ ಮಂಗಮಾಯವಾಗಿದ್ದರು! ಮನೆಗೆ ಬರುತ್ತಿದ್ದಂತೆ ಮಹಾ ಮಂಗಳಾರತಿ, ‘ಮಕ್ಕಳ ನಾಟಕ ಅಂತ ನಾವು ಹೋಗಾಕ ಬಿಟ್ರ, ದೊಡ್ಡ ಹುಡುಗ್ರ ನಿಮ್ಮನ್ನ ತೂರಿ ಹಿಡಿಯೋದೇನು, ಓಡಿ ಹೋಗಿ ಅವರ ಕೈಯಾಗ ಹಾರೂದೇನು? ಕೆಟ್ಟ ಅಸಹ್ಯವಾ. ಸಾಕು ನೀವು ನಾಟಕ ಮಾಡೂದು.’ ಹೀಗೆಂದವರಿಗೆ ಮೈಗೂರರ ತಿಳಿವಳಿಕೆ ಮಾತುಗಳೇ ಮದ್ದಾದವು. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲೇ ‘ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನದಲ್ಲಿ ಗೊಂಬೆಯಾಟ ಜೊತೆಗೂಡಿ ಭರ್ತಿ 15 ದಿನಗಳ ಕಾಲ ಮನೆಯಿಂದ ಹೊರಗೇ ಇದ್ದದ್ದು ನನ್ನ ರಂಗಾಸಕ್ತಿಯನ್ನು ಇನ್ನಷ್ಟು ಹಿಗ್ಗಿಸಿತ್ತು. ಕಥೆ-ಕವನ ಮೈದಳೆಯಲು ಶುರುವಾದವು. ನಂತರ ಬೇಂದ್ರೆ ರಂಗಾವಳಿಯಲ್ಲಿ ಭಾಗವಹಿಸಿದೆ. ನನ್ನ ಆಸಕ್ತಿ ಗಮನಿಸಿದ ಮೈಗೂರ ಸರ್ ನನ್ನನ್ನು ನೀನಾಸಂ ರಂಗ ಶಿಕ್ಷಣ ಹೆಗ್ಗೋಡಿಗೆ ಸೇರಿಸಲು ಯೋಚಿಸಿದಾಗ ಅವ್ವ ಹೌಹಾರಿದಳು; ‘ಪಿಯುಸಿ ಮುಗದ ಕೂಡಲೇ ಅಪ್ಪನ ನೌಕರಿ ಕೊಡ್ಸೂಣು ಅಂದ್ಕೊಂಡ್ರ ಗಂಡಸರಗತೇ ನಾಟಕಕ್ಕ ಹೊಂಟ ನಿಂತೀ?’

Naanemba Parimaladha Hadhiyali

ನಟ ಶ್ರೀನಿವಾಸ ಪ್ರಭು ಅವರೊಂದಿಗೆ ಲಕ್ಷ್ಮೀ

ಹರಸಾಹಸ ಮಾಡಿ ಮೈಗೂರ್ ಸರ್ ಅವ್ವನನ್ನು ಒಪ್ಪಿಸಿ ನೀನಾಸಂಗೆ ಸೇರಿಸಿಯೇಬಿಟ್ಪರು. ಧಾರವಾಡದಂಥ ಅರೆಮಲೆನಾಡಿನ ಸೊಗಡೊಂದು ದಟ್ಟ ಕಾಡಿನ ನಡುವೆ ರಂಗಪ್ರಪಂಚದೊಳಗೆ ಸಂಪೂರ್ಣ ಮುಳುಗಿ ಹೋಯಿತು. ಮನೆಗೆಲಸದಲ್ಲಿ ಚೂರೂ ಸಹಾಯ ಮಾಡಲು ಕ್ಯಾತೆ ತೆಗೆಯುತ್ತಿದ್ದ ನಾನು ರಂಗಶಿಕ್ಷಣದೊಂದಿಗೆ ಹಾಸ್ಟೆಲ್ಲಿನ ಸ್ವಚ್ಛತಾ ಕೆಲಸಗಳಿಗೆ ಒಗ್ಗಿಕೊಳ್ಳತೊಡಗಿದೆ. ಅದು ಪ್ರತೀ ರಂಗವಿದ್ಯಾರ್ಥಿಗಳ ನಿತ್ಯಕರ್ತವ್ಯವಾಗಿತ್ತು. ಯಕ್ಷಗಾನದಿಂದ ಪ್ರಾರಂಭವಾದ ನಮ್ಮ ಕಲಿಕೆ ಮೊದಮೊದಲು ಬಣ್ಣದ ಲೋಕದೊಳಗೆ ತೇಲಾಡಿಸಿತು. ನಂತರ ಶುರು! ಆಗಿನ ಪ್ರಿನ್ಸಿಪಾಲರಾಗಿದ್ದ ಸಿ.ಆರ್. ಜಂಬೆಯವರು ರಷ್ಯನ್ ನಾಟಕಕಾರ ಚೆಕಾವ್​ನ Uncle Vanya ನಾಟಕದ ರೂಪಾಂತರ ‘ವೇಣುಮಾವ’ ರಂಗತಾಲೀಮಿನಲ್ಲಿ ತಲೆತಿರುಗತೊಡಗಿತು. ಹೆಣ್ಣು-ಗಂಡುಗಳ ಸಂಬಂಧಗಳನ್ನು ವಿಶ್ಲೇಷಿಸುವ ಮನೋವೈಜ್ಞಾನಿಕ ವಿಷಯವುಳ್ಳ ನಾಟಕವದು. ಅಕ್ಷರಶಃ ತಲೆಬುಡ ಅರ್ಥವಾಗಲಿಲ್ಲ. ಎಳೆಯ ವಯಸ್ಸಿನ ನಾವೆಲ್ಲ ಅಭಿನಯಿಸಿದೆವಷ್ಟೇ ಜೀವಿಸಲಿಲ್ಲ.

ಇದನ್ನೂ ಓದಿ: ನಾನೊಬ್ಬ ರೈತಮಹಿಳೆ ಮತ್ತಿದೇ ನನ್ನ ಅಸ್ತಿತ್ವ

ಒಟ್ಟಾರೆ ಕಲಾವಿದರಿಗೆ ಓದು ಎಷ್ಟು ಮುಖ್ಯ ಎಂಬುದರ ಅರಿವು ನನಗಾಗಿದ್ದು ನೀನಾಸಂ ತಿರುಗಾಟ ಪ್ರಾರಂಭಿಸಿದ ಮೇಲೆಯೇ. ನನ್ನ ಪ್ರಥಮ ತಿರುಗಾಟಕ್ಕೆ ಆಗಲೇ ಸಾಕಷ್ಟು ಹೆಸರು ಮಾಡಿದ್ದ ಏಣಗಿ ನಟರಾಜ್, ಭಾಗೀರತಿಬಾಯಿ ಕದಂರಂತಹ ನುರಿತ ಕಲಾವಿದರು ಮುಖ್ಯಭೂಮಿಕೆಯಲ್ಲಿದ್ದುದು ನಟನೆಯ ಬೇರೆಬೇರೆ ಆಯಾಮಗಳನ್ನು ಗುರುತಿಸುವಂತೆ ಮಾಡಿತ್ತು. ನಂತರ ತಿರುಗಾಟದ ‘ಹೂಹುಡುಗಿ’ ನಾಟಕದಲ್ಲಿ ನನ್ನ ನಟನೆ ಗಮನ ಸೆಳೆದು ಅದೇ ಹೆಸರಿನಿಂದಲೇ ನನ್ನನ್ನು ಎಲ್ಲರೂ ಕರೆಯಲಾರಂಭಿಸಿದರು. ನಾಟಕದ ಪೂರ್ವಾರ್ಧ ಪಕ್ಕಾ ನನ್ನದೇ ವ್ಯಕ್ತಿತ್ವ ಹೋಲುವ-ಕುತೂಹಲದಿಂದ ಪ್ರತಿಯೊಂದನ್ನೂ ಪ್ರಶ್ನಿಸುವ ತರಲೆ ಹುಡುಗಿಯ ಪಾತ್ರವದು. ನಾಟಕದ ಉತ್ತರಾರ್ಧದಲ್ಲಿ ಮಾತ್ರ ಪ್ರಬುದ್ಧವಾದ ಅಭಿನಯ ಬೇಕಿತ್ತು. ನಿರ್ದೇಶಕ ಅತುಲ್ ತಿವಾರಿ ಅಲ್ಲದೇ ನೀನಾಸಂ ನ ಪ್ರತೀ ನಿರ್ದೇಶಕರು ಆ ಪಾತ್ರದ ಒಳಹೊರಗನ್ನು ಅರ್ಥೈಸಿ ನನ್ನನ್ನು ತಯಾರು ಮಾಡಿದರು. ಆನಂತರದ ತಿರುಗಾಟದ ನಾಟಕಗಳು ಆ ಕ್ಷೇತ್ರದಲ್ಲಿ ನನ್ನನ್ನು ಬಲವಾಗಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟವು.

‘ಯಾವುದೋ ನಾಟಕ್ ಕಂಪನಿಗೆ ಕುಣಿಯಾಕ್ ಕಳಸ್ಯಾಳ ಮಗಳನ್’ ಅಂತ ಆಡಿಕೊಂಡವರಿಗೆ ನೀನಾಸಂನ ಉದ್ದೇಶ ಅರ್ಥವಾಗತೊಡಗಿತ್ತು. ತಿರುಗಾಟದ ಸಂಬಳದಿಂದ ಉಳಿಸಿದ ದುಡ್ಡು ಅರ್ಧಕ್ಕೆ ನಿಲ್ಲಿಸಿದ್ದ ಓದನ್ನು ನೆನಪಿಸಿತು. ಧಾರವಾಡದ ಗುಣವೇ ಅಂಥದ್ದು. ಬದುಕುವಷ್ಟು ಹಣವಿದ್ದರೆ ಸಾಕು ಉಳಿದ ಗಳಿಕೆ ಓದಲಿಕ್ಕೆ ಅನ್ನುವವರೇ ಎಲ್ಲರೂ. ಪಿಯುಸಿ ಕಾಮರ್ಸಿಗೆ ಸೇರಿದೆ. ಧಾರವಾಡದ ಹಲವಾರು ತಂಡಗಳಲ್ಲಿ ಅಭಿನಯಿಸಿದೆ. ಕೆಲವು ಶಾಲಾ-ಕಾಲೇಜುಗಳ ಅಭಿನಯ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡೆ. ಬರುತ್ತಿದ್ದ ಗೌರವಧನವೆಲ್ಲ ನನ್ನ ಜೀವನ ನಿರ್ವಹಣೆಗೆ ಸಾಕಾಗದಾಯ್ತು. ಅವ್ವ ಮದುವೆ ಸುದ್ದಿ ತೆಗೆದಳು. ತವರಿನ ಸೆಳೆತಕ್ಕೆ ಒಳಗಾಗುವುದರ ಸುಳಿವು ಸಿಕ್ಕೊಡನೆ ಬಲವಾಗಿ ವಿರೋಧಿಸಿದೆ. ‘ನಿಮ್ಮ ನಾಟಕದವ್ರನ್ನ ಮಾಡ್ಕೋಬೇಕಂತ ಮಾಡಿಯೇನು?’ ಅಂತ ನೇರವಾಗಿ ಪ್ರಶ್ನಿಸಿಯೇಬಿಟ್ಟಳು. ಹೌದು ಎನ್ನಲೂ ಆಗದೇ ಇಲ್ಲ ಎನ್ನಲೂ ಆಗದೇ ಗೊಣಗೊಣ ಗೊಣಗಿ ಜಾರಿಕೊಳ್ಳುತ್ತಿದ್ದೆ. ಇಷ್ಟವಾಗಿದ್ದವರು ಬದುಕನ್ನು ಕಟ್ಟಿಕೊಡಲಾರದ ನನ್ನದೇ ಎಳೆಯ ವಯಸ್ಸಿನವರು. ಬೇರೆಯದೇ ಸಂಸ್ಕೃತಿಯಲ್ಲಿ ಬೆಳೆದವರು. ಒಂದು ವರ್ಷದ ನಂತರ ತಮ್ಮೂರಿನ ನೆಲಕ್ಕೆ ಅಂಟಿಕೊಂಡುಬಿಟ್ಟಾಗ ಸಂಪರ್ಕ ತಪ್ಪಿಹೋಗುವ ಸಂಭವವೇ ಹೆಚ್ಚಿದ್ದಾಗ ಯಾರನ್ನು ನೆಚ್ಚಿಕೊಂಡು ಕೂಡಲು ಸಾಧ್ಯವಿತ್ತು?

Naanemba Parimaladha haadhiyali

ಗಂಗಾ ಧಾರಾವಾಹಿಯಲ್ಲಿ ಲಕ್ಷ್ಮೀ

ಪಿಯುಸಿಯನ್ನು ಮೊದಲ ಶ್ರೇಣಿಯಲ್ಲಿ ಪಾಸು ಮಾಡಿದ್ದೇ ಡಿಗ್ರಿ ಮುಗಿಸಲೇಬೇಕು ಅನ್ನುವ ಹಠಕ್ಕೆ ಬಿದ್ದೆ.  ಸಾಹಿತ್ಯಾಸಕ್ತಿ ವಾಣಿಜ್ಯದಿಂದ ಕಲೆಗೆ ಜಿಗಿಯುವಂತೆ ಮಾಡಿತು. ಕೆಲವು ಊರಿನ ನನ್ನ ರಂಗಾಸಕ್ತ ಸ್ನೇಹಿತರು ನಾಟಕಗಳಲ್ಲಿ ಅಭಿನಯಿಸಲು ಆಹ್ವಾನಿಸತೊಡಗಿದರು. ಅಪರೂಪದ ನಾಟಕಗಳಲ್ಲಿ ಅಭಿನಯಿಸಿದ್ದಕ್ಕೆ ಹೆಸರೂ ಬಂತು. ಅಷ್ಟರಲ್ಲಾಗಲೇ ಪ್ರಕಾಶ್ ಗರುಡರ ಬೊಂಬೆಮನೆ ಪ್ರಾಜೆಕ್ಟ್​ ಧಾರವಾಡದಲ್ಲೇ ಪ್ರಾರಂಭಗೊಂಡಿದ್ದರಿಂದ ಆ ಕಡೆ ಓದು- ಈ ಕಡೆ ಆಸಕ್ತಿಯ ಕೆಲಸದೊಂದಿಗೆ ಸಣ್ಣ ಪ್ರಮಾಣದ ಹಣದ ಭದ್ರತೆ ಸಿಕ್ಕಂತಾಗಿ ಹಗಲಿರುಳು ದುಡಿದರೂ ದಣಿವಾಗುತ್ತಿರಲಿಲ್ಲ. ಕೆಲಸ ಮುಗಿಸುವಷ್ಟರಲ್ಲಿ ರಾತ್ರಿ ಒಂಬತ್ತಾಗುತ್ತಿತ್ತು. ಪ್ರದರ್ಶನ ಇದ್ದರಂತೂ ಇನ್ನೂ ತಡವಾಗುತ್ತಿತ್ತು. ಅವ್ವ, ‘ಹಿಂಗಾದರ ನೀನು ಮನೀಗ ಬರಬ್ಯಾಡ’ ಅನ್ನತೊಡಗಿದಳು. ಬದುಕೆನ್ನುವುದಾದರೆ ಇದೇ ಅಂದುಕೊಂಡವಳು ಕೆಲಸಕ್ಕೆ ಅನುಕೂಲವಾಗುವಂತೆ ಪುಟ್ಟ ಮನೆ ನೋಡಿಕೊಂಡೆ.

ಮಕ್ಕಳ ರಂಗಭೂಮಿ-ಪ್ರಯೋಗಾತ್ಮಕ ರಂಗಭೂಮಿ ಗೊಂಬೆಮನೆಯ ಪ್ರಯೋಗಗಳು. ಅದರೊಂದಿಗೆ ಕಾಲೇಜಿನ ಕ್ಲಾಸುಗಳು. ರಂಗಭೂಮಿಯೇ ನನ್ನ ಬದುಕಾಯಿತು. ಬಿ.ಎ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ದೂರಶಿಕ್ಷಣದ ಮೂಲಕ ಜಾನಪದದಲ್ಲಿ ಎಂ.ಎ. ಮಾಡಿದೆ. ಸರಿಯಾಗಿ ಪರೀಕ್ಷೆ ವೇಳೆಗೆ ಕಾರ್ನಾಡರ ಕಾನೂರಿನ ಹೆಗ್ಗಡತಿಗೆ ಆಯ್ಕೆ ಆದೆ. ಪುಟ್ಟ ಪಾತ್ರಕ್ಕೆ ಎಂದದ್ದು ಮುಖ್ಯ ಪಾತ್ರಕ್ಕೆ ಅಂತಾಗಿ ಮೂರು ತಿಂಗಳು ತೀರ್ಥಹಳ್ಳಿಯಲ್ಲೇ ಇರುವಂತಾಗಿದ್ದರಿಂದ ಸಿನೆಮಾ ಜಗತ್ತಿನ ಪರಿಚಯಕ್ಕೂ ಕಾರಣವಾಯಿತು. ಈ ಮುಂಚೆ ದೂರದರ್ಶನದಲ್ಲಿನ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅನುಭವ ಇತ್ತು. ಅನಂತ್ ನಾಗ್ ಮುಖ್ಯ ಭೂಮಿಕೆಯ ಗಂಗವ್ವ ಗಂಗಾಮಾಯಿ ಸಿನೆಮಾದಲ್ಲಿ ಅಭಿನಯಿಸಿದ್ದರೂ ಈ ಸಿನೆಮಾ ಹೊಸ ದಿಕ್ಕಿನತ್ತ ಹೊರಳುವಂತೆ ಮಾಡಿತು. ಇದರ ಮಧ್ಯೆ ಮೈಗೂರ್ ಸರ್ ಕುಟುಂಬದ ಸ್ನೇಹಿತರ ಕುಟುಂಬವೊಂದು ನನ್ನನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳತೊಡಗಿತ್ತು. ಇಂಡಿಯನ್ ಏರ್​ಫೋರ್ಸ್​ನಲ್ಲಿದ್ದ ರಾಘವೇಂದ್ರ ನಾಡಗೌಡರು ದೂರದ ಲಡಾಕಿನಿಂದ ಮೈಸೂರಿಗೆ ವರ್ಗವಾಗಿದ್ದು ನನ್ನ ಮದುವೆಯ ವಿಧಿಲಿಖಿತಕ್ಕೆ ವರದಾನವಾಗಿಬಿಟ್ಟಿತೇನೋ! ವಾರ್ಷಿಕ ರಜೆಯಲ್ಲಿ ಅಪರೂಪಕ್ಕೆ ಭೇಟಿಯಾಗುತ್ತಿದ್ದಷ್ಟೇ. ಅಪ್ಪ-ಅಮ್ಮಂದಿರ ಮರಣದ ನಂತರ ಅಣ್ಣಂದಿರ ಮನೆಗೆ ಬರುತ್ತಿದ್ದವನಿಗೆ ನನ್ನ ಪರಿಸ್ಥಿತಿಯ ಅರಿವಾಯಿತು. ಸರಳ ರೀತಿಯ ಬದುಕನ್ನು ಜೀವಿಸಲು ಒಪ್ಪಿಗೆ ಅಂತಾದರೆ ಸಾಥ್ ಕೊಡುವುದಕ್ಕೆ ಸಿದ್ಧ ಎನ್ನುವ ಅವರ ಅಭಿಪ್ರಾಯಕ್ಕೆ ನಾನು ಸಹಮತಳಾದೆ. ನನ್ನ ಕೆಲಸದ ಬಗ್ಗೆ ಅಪಾರ ಗೌರವ ಹೊಂದಿದವರ ಬಗ್ಗೆ ಬೇರೆ ಏನೂ ಯೋಚನೆ ಮಾಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಅವರು ಮೈಸೂರಲ್ಲಿ ನಾನು ಧಾರವಾಡದಲ್ಲಿ ಒಂದು ವರ್ಷ ಕಳೆದಮೇಲೆ, ಬೆಂಗಳೂರಿನಲ್ಲಿ ಅದಾಗಲೇ ನೆಲೆ ಕಂಡುಕೊಳ್ಳಲು ಅಲ್ಲಿ ನೆಲೆಸಿದ್ದ ನನ್ನ ರಂಗಸ್ನೇಹಿತರು ಬಂದು ಬಿಡು ಇಲ್ಲಿ ಅಂತ ಒತ್ತಾಯಿಸಿದ್ದರು. ಬೆಂಗಳೂರಿನಲ್ಲಿ ಮನೆ ಮಾಡಿದೆ. ನಾಟಕ-ಸಿರಿಯಲ್-ಸಿನೆಮಾ ಅಂತ ಬೆಂಗಳೂರಿನ ಬದುಕು ನನ್ನದಾಯ್ತು. ಇಲ್ಲಿಯವರೆಗೂ ಹಿಂತಿರುಗಿ ನೋಡಿಲ್ಲ.

ಇದನ್ನೂ ಓದಿ: ಇದು ನಾನಲ್ಲ ಇನ್ನೇನೋ ಆಗುವುದಿದೆ ಆಗಬೇಕಿದೆ

ಬೆಂಗಳೂರು ನನಗೆ ಬದುಕಿನ ಪ್ರೀತಿ ಕಲಿಸಿತು. ಹೋರಾಡುವ ಮನಸ್ಥಿತಿಯನ್ನು ಗಟ್ಟಿಗೊಳಿಸಿತು. ನನ್ನೂರು ನನ್ನ ಒಳಗಿನ ಕಂಪೇ ಆಗಿದ್ದರೂ ಬೆಂಗಳೂರು ನನ್ನ ಬದುಕಿನ ವಿಸ್ತಾರವಾಗಿದ್ದು ಸುಳ್ಳಲ್ಲ. ಬೇಂದ್ರೆಯವರು ಹೇಳಿದಂತೆ ಬದುಕು ಮಾಯೆಯ ಮಾಟವೇ ಸರಿ. ಮದುವೆಯಾದ ಮೂರು ತಿಂಗಳಲ್ಲಿ ಬಸಿರೊಂದು ಇಲ್ಲವಾಗಿತ್ತು. ಮೊದಲನೆಯ ಬಸಿರು ಹೀಗಾಗುವುದು ಸಹಜ ಎನ್ನುವುದನ್ನು ಮನಸ್ಸು ಒಪ್ಪಿತು. ಬೆಂಗಳೂರಿಗೆ ಬಂದ ಎರಡನೇ ವರ್ಷಕ್ಕೆ ನಾನಾಗ ದೆಹಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಜ್ಯೂನಿಯರ್ ಫೆಲೋಷಿಪ್​ಗೆ ಆಯ್ಕೆಯಾಗಿ ಮಹಿಳೆಯರ ಸಮಸ್ಯೆಗಳು ಅನ್ನುವ ವಿಷಯದ ಬಗ್ಗೆ ಅಧ್ಯಯನ ಮಾಡಿ ಕೊನೆಯ ಹಂತದಲ್ಲಿ ವೈದೇಹಿಯವರ ಮೂರು ಕಥೆಗಳನ್ನು ಹೇಳುವ ಹೊಸ ರಂಗಸಾಧ್ಯತೆಗೆ ನನ್ನ ನೀನಾಸಂ ಗೆಳತಿಯರೊಂದಿಗೆ ಪ್ರಯೋಗದ ಹಂತದಲ್ಲಿದ್ದೆ. ಅರುಂಧತಿ ನಾಗ್ ಅವರ ಹೊಸೂರು ರಸ್ತೆಯಲ್ಲಿನ ಶಂಕರ್ ನಾಗ್ ಬಾಳಿ ಬದುಕಿದ್ದ ಫಾರ್ಮ್​ ಹೌಸ್​ನಲ್ಲಿ ಹದಿನೈದು ದಿನಗಳ ಕಾಲ ಇದ್ದ ಸಮಯದಲ್ಲಿ ನನ್ನ ಎರಡನೆಯ ಚಿಗುರೂ ಇಲ್ಲವಾಗಿತ್ತು. ಒಂದು ವಾರದ ವಿಶ್ರಾಂತಿಯ ನಂತರವೂ ಭರ್ತಿ ಇಪ್ಪತ್ತೊಂದು ದಿನ ರಕ್ತ ಹನಿಯುತ್ತಲೇ ಇತ್ತು. ತೊಡೆಗಳ ಸೆಳೆತ ಲೆಕ್ಕಿಸದೇ ‘ಮಲ್ಲಿನಾಥ ಧ್ಯಾನ’ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದೆ. ಆನಂತರ ಐದು ವರ್ಷಗಳ ಕಾಲ ಬಸಿರು ಹೇಳಹೆಸರಿಲ್ಲದಾಯ್ತು. ಅದನ್ನು ಮರೆಯಲು ಮತ್ತೆ ಓದು ಸಹಾಯ ಮಾಡಿತು.

naanemba parimaladha haadhiyali

ಹೆಗ್ಗೋಡಿನ ನೀನಾಸಂನಲ್ಲಿ ಬಿ. ವಿ. ಕಾರಂತರೊಂದಿಗೆ

ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಕಲೆಯಲ್ಲಿ ಸ್ನಾತಕೋತ್ತರ ಪದವಿ ಓದಿ ಮೊದಲ ರ್ಯಾಂಕ್ ಪಡೆದುಕೊಂಡೆ. ಅದರ ಮಧ್ಯೆ ಮೂರು ನಾಲ್ಕು ಸಿರಿಯಲ್​ಗಳಲ್ಲಿ ಅಭಿನಯಿಸಿದೆ. ‘ಬ್ಯೂಟಿ ಹಾಳ ಆಗ್ತದಂತ ಏನರ ಮಕ್ಕಳ ಮಾಡ್ಕೋವಲ್ಯನ ಮತ್ತ’ ಅಂತ ಓರಗಿತ್ತಿ ಸಹಜವಾಗಿ ಅಂದಿದ್ದರೂ ದೇವರ ಮುಂದೆ ನಿಂತು ಪ್ರಥಮ ಬಾರಿಗೆ ಕಣ್ಣಿರಾಗಿದ್ದೆ. ಕೆ. ಎಮ್​. ಚೈತನ್ಯ ನಿರ್ದೇಶನದ ‘ಕಿಚ್ಚು’ ಧಾರಾವಾಹಿಯ ಸಮಯವದು. ಉಮಾಶ್ರೀ ಅವರೊಂದಿಗೆ ಅಭಿನಯ. ಮಗಳು ‘ಕುಹೂ’ ಗಟ್ಟಿಯಾಗಿ ನನ್ನ ಉದರದಲ್ಲಿ ನೆಲೆನಿಂತಳು. ಮೂರು ಮೂರು ಸೀರಿಯಲ್​ಗಳ ಮಧ್ಯೆ ಎಸ್​. ಸುರೇಂದರನಾಥ ಅವರ ‘ನೀ ನಾನಾದ್ರೆ ನಾ ನೀನೇನಾ’  ನಾಟಕದಲ್ಲಿನ ಮುಖ್ಯ ಪಾತ್ರ ನಿಭಾಯಿಸುತ್ತಿದ್ದೆ. ಹೊಟ್ಟೆ ಮುಂದೆ ಬಂದು ಪಾದಗಳು ಕಾಣದಂತಾದಾಗ ನನ್ನೂರಿನಲ್ಲೇ ಹೆರಿಗೆ ಆಗಬೇಕೆಂಬ ಬಯಕೆಗೆ ಧಾರವಾಡಕ್ಕೆ ಹೋದೆ. ಅದಾಗಲೇ ಒಂಟಿಯಾಗಿದ್ದು ನಿರ್ಲಿಪ್ತತೆಯನ್ನು ರೂಢಿಸಿಕೊಂಡಿದ್ದ ಅವ್ವ ಬಾಣಂತನ ಮಾಡಲು ಕಷ್ಟ ಅಂತ ಚಿಕ್ಕತಮ್ಮನ ಹೆಂಡತಿಯ ನೆಪ ಮಾಡಿದಳು. ದೊಡ್ಡ ತಮ್ಮ ಮತ್ತವನ ಹೆಂಡತಿ ಬೇಸರವಿಲ್ಲದೇ ಬಾಣಂತನ ಮಾಡಿದರು.

ಹದಿಮೂರು ತುಂಬಿ ಹದಿನಾಲ್ಕರ ಕುಹೂವನ್ನು ಬೆಳೆಸಿದ್ದು ಸುಲಭದ ಹಾದಿಯಲ್ಲಂತೂ ಖಂಡಿತ ಅಲ್ಲ. ದುಡಿಮೆ-ಹಣ, ಎಲ್ಲ ಸಮಸ್ಯೆಗಳನ್ನು ನೀಗಿಸಲಾರದು. ದಣಿದ ಮನಸ್ಸಿಗೆ ಸ್ಥೈರ್ಯ ತುಂಬುವ ಮನಸುಗಳು ಬೇಕೆನ್ನಿಸುತ್ತದೆ. ಹಾಗಂತ ಸದಾ ಜನರೊಂದಿಗಿರುವುದೂ ನನಗಾಗದು. ಕೇವಲ ಹಣಕ್ಕಾಗಿ ಬಯಸುವ ಸಂಬಂಧಗಳ ಬಗ್ಗೆ ದೊಡ್ಡ ನಿರ್ಲಕ್ಷ್ಯವಿದೆ ನನ್ನಲ್ಲಿ. ಆಗಾಗ ಉಂಟಾಗುವ ನನ್ನ ಮೂಡೀತನಕ್ಕೆ ಸಂದರ್ಭಗಳೇ ಅಂಥದೊಂದು ಮನಸ್ಥಿತಿಯನ್ನು ರೂಪಿಸುತ್ತವೆಯೋ ಏನೋ ಗೊತ್ತಿಲ್ಲ. ಒಟ್ಟಾರೆ ಏಕಾಂತವನ್ನೂ ವಿಪರೀತ ಇಷ್ಟಪಡುತ್ತೇನೆ.

ಮಹಾನವಮಿ ಧಾರಾವಾಹಿ ಸಂದರ್ಭದಲ್ಲಿ ಎಳೆಯ ಕಂದಮ್ಮನನ್ನು ರಮಿಸುತ್ತಲೇ ಚಿತ್ರೀಕರಣಕ್ಕೆ ತಯಾರಾಗಬೇಕಿತ್ತು. ತೀರಾ ರಗಳೆ ಮಾಡಿದ‌ ಮಗುವಿಗೆ ಏಟು ಹಾಕಿ ಗದರಿಸಿ ಸುಮ್ಮನಿರಿಸಿ ಕಟ್ ಹೇಳುತ್ತಿದ್ದಂತೆ ಎದೆಗವುಚಿ ಸಂಭಾಳಿಸುವಾಗ ಕರುಳು ಚುರುಕ್ಕೆನ್ನುತ್ತಿತ್ತು. ಆ ಸಮಯದಲ್ಲಿ ಮತ್ತೊಂದು ಮಗು ಬೇಡವೇ ಬೇಡ ಅಂತ ಹಟ ಮಾಡಿದ ನನ್ನ ಗಂಡ, ಮತ್ತೊಂದು ಮಗುವನ್ನು ಬೇಡವಾಗಿಸಿಬಿಟ್ಟಾಗ ಮನಸ್ಸು ಕಲ್ಲಾಗಿಬಿಟ್ಟಿತು. ಒಂಚೂರೂ ವಿಶ್ರಾಂತಿ ಇಲ್ಲದೇ ಕೆಲಸ ಮುಂದುವರೆಸಿದ ಪರಿಣಾಮ ಹೈಪರ್ ಎಸಿಡಿಟಿಯಿಂದ ನರಳಿದೆ. ಇಡೀ ತಂಡ ಆ ಸಮಯದಲ್ಲಿ ನನಗೆ ಸಹಕರಿಸಿತು. ‘ಗಂಗಾ’ ಧಾರಾವಾಹಿ ಒಪ್ಪಿಕೊಂಡಾಗ ಮಗಳು ಕುಹೂ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ದೂರದ ಇಟಗಿಯಲ್ಲಿ ಶೂಟಿಂಗ್. ಪ್ರಾರಂಭದಲ್ಲಿ 15-20 ದಿನದ ಅಗಲಿಕೆ. ವಾರಕ್ಕೊಮ್ಮೆ ಬಂದು ಹೋಗುತ್ತಿದ್ದೆ. ಶಾಲೆ ನಂತರ ಕ್ರೀಚ್​ನಲ್ಲಿ ಇರುತ್ತಿದ್ದವಳು ಆಮೇಲಾಮೇಲೆ ಮನೆಯಲ್ಲೇ ಇರುವಷ್ಟು ಧೈರ್ಯ ರೂಢಿಸಿಕೊಂಡಳು. ಆ ಧಾರಾವಾಹಿಗೆ ಎರಡು ವರ್ಷಗಳ ನಂತರ ಅವಾರ್ಡ್ ಬಂದಾಗ ’ನಾನ್ ನಿಂಗ Co-operate ಮಾಡಿದ್ದಕ್ಕ ನಿನಗ ಪ್ರಶಸ್ತಿ ಬಂತು ಹೌದಿಲ್ಲ’ ಅಂತ ಪಕ್ಕಾ ಧಾರವಾಡದ ಭಾಷೆಯಲ್ಲಿ ಕಾಲೆಳೆದಿದ್ದಳು. ಗಂಡ ಹೆಂಡತಿಯರ ಮಧ್ಯೆ ಅನೇಕ ವಿಷಯಗಳಲ್ಲಿ ವೈರುಧ್ಯವಿದ್ದರೂ ಹೊಂದಿಕೊಂಡು ಹೋಗುವುದು ಇಬ್ಬರಿಗೂ ರೂಢಿಯಾಗಿದೆ. ಆರ್ಥಿಕ ಭದ್ರತೆಗೆ ಹೆಚ್ಚು ಒತ್ತು ನೀಡುವ ನನ್ನ ಧೋರಣೆಗೆ ವಿರುದ್ಧ ಮನಸ್ಥಿತಿ ಅವರದ್ದು. ಪರಸ್ಪರರಲ್ಲಿ ಸಂಶಯ ಇಲ್ಲ. ಮಗಳೀಗ ಪ್ರೀತಿಯಿಂದ ಗದರಿಸುವಷ್ಟು ಪ್ರಬುದ್ಧತೆ ಬೆಳೆಸಿಕೊಳ್ಳುತ್ತಿದ್ದಾಳೆ. ಹೊಂದಾಣಿಕೆಯಿಂದ ಹಣ ಉಳಿಸಿ ಇರಲೊಂದು ನೆಲೆ ಕಂಡಿದ್ದೇವೆ. ಅವರೀಗ ಖಾಸಗಿ ಉದ್ಯೋಗಿ. ನಾನು ಕಲಾದೇವಿಯ ಸೆರಗನ್ನೇ ಅಪ್ಪಿ ಹಿಡಿದಿದ್ದೇನೆ. ಬದುಕು ನಿರಂತರ ಹರಿಯುವ ನದಿಯಂತಿದೆ.

naanemba parimaladha haadhiyali

ಝೀ ಕುಟುಂಬ – ಉತ್ತಮ ನಟಿ ಪ್ರಶಸ್ತಿ ಪಡೆದ ಕ್ಷಣ

ನಾನೆಂಬ ಪರಿಮಳದ ಹಾದಿಯಲ್ಲಿ ನಾನು ಕಂಡುಕೊಂಡ ಸತ್ಯಗಳು ನನ್ನನ್ನು ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದಂತೂ ಹೌದು. ಕಂಚಿನ ಕಂಠದ ಅಪ್ಪನ ಶಿಸ್ತು ಆಗ ಕಿರಿಕಿರಿ ಅನಿಸಿದ್ದು ಹೌದು. ಆದರೆ ಅವನ ಹಾಡುಗಾರಿಕೆ, ಅವನ ಜೀವನಪ್ರೀತಿ ಅವನ ಅಗಾಧ ಗಣಿತ ಜ್ಞಾನದ ಅರಿವು ಈ ವಯಸ್ಸಿನಲ್ಲಿ ನನ್ನ ಅಪ್ಪನ ಬಗ್ಗೆ ಹೆಮ್ಮೆ ಪಡುವಂತಾಗುತ್ತದೆ. ಸೈಕಲ್ ಕಲಿಸುವಾಗ ಕ್ಯಾರಿಯರ್ ಹಿಡಿದು, ‘ನಿನ್ನ ಹಿಂದ ಇದ್ದೀನಿ ಸೈಕಲ್ ತುಳಿ ನೀನು’ ಅನ್ನುತ್ತಾ ಅರ್ಧಕ್ಕೆ ಕೈಬಿಟ್ಟು ನಿಂತುಬಿಡುತ್ತಿದ್ದ. ಧೈರ್ಯದಿಂದ ನಾನೇ ಮುಂದೆ ಹೋಗಬೇಕು ಇಲ್ಲಾ ಬ್ರೇಕ್ ಹಾಕಿ ನಿಲ್ಲಬೇಕು. ಎರಡೇ ಆಯ್ಕೆ ಇದ್ದಿದ್ದು. ಒಂದೊಮ್ಮೆ ಬಿದ್ದುಬಿಟ್ಟೆ. ಅಪ್ಪ ಹತ್ತಿರವೂ ಬರಲಿಲ್ಲ ಎದ್ದೇಳು ಎದ್ದೇಳು ಅನ್ನುತ್ತಿದ್ದವನನ್ನು ಅಳುನುಂಗಿ ಕೆಕ್ಕರಿಸಿ ನೋಡಿದ್ದೆ. ‘ನಾ ಇಲ್ಲದಾಗ ಬಿದ್ದರೇನ ಮಾಡತಿ? ನೀನ ಎಳಬೇಕ ಹೌದಲ್ಲ?’ ಅಂದಿದ್ದ ನಗುತ್ತ. ಬೇರೆ ಸಮಯದಲ್ಲಿ ಒಂದು ಸಣ್ಣ ಕೆಮ್ಮಿಗೂ ಎತ್ತಿಕೊಂಡು ದವಾಖಾನೆಗೆ ಓಡುತ್ತಿದ್ದ ಅಪ್ಪನ ಮಾತಿನ ಅರ್ಥಗಳು ಮಗಳನ್ನು ಹೆತ್ತು ಬೆಳೆಸುತ್ತಿರುವ ಈ ಸಮಯದಲ್ಲಿ ಹೊಳೆಯುತ್ತಿವೆ.

ಇದನ್ನೂ ಓದಿ : ಕಾಜಾಣ ಪ್ರೆಸೆಂಟ್ ಮೇಡಮ್ ಕೆಂಬೂತ ಪ್ರೆಸೆಂಟ್ ಮೇಡಮ್

ಅವ್ವ ಹೆಚ್ಚು ಓದಿದವಳಲ್ಲ. ಆದರೆ ಅವಳ ಮಾರ್ಮಿಕ ಮಾತುಗಳು ಇಂದಿಗೂ ವಿಚಿತ್ರ ಹೊಳಹುಗಳನ್ನು ಕೊಡುತ್ತಲೇ ಇರುತ್ತವೆ. ನೀನಾಸಂಗೆ ಕಳಿಸುವಾಗ ಅವಳು ಹೇಳಿದ್ದಿಷ್ಟೇ. ‘ನೋಡು ಒಂದ್ ಸರ್ತಿ ಬಿದ್ದರ ಎದ್ದ್ ನಿಲ್ಲೂದನ್ ಕಲಿ. ಮತ್ತ ಬಿದ್ರ ದಡಕ್ಕನ ಎದ್ದನಿಲ್ಲು. ಆದರ ಮತ್ತಮತ್ತ ಬಿದ್ದಲ್ಲೇ ಬಿದ್ದರ ನಿನ್ನ ಹಾದಿ ನಿಂಗ ಅಂತ ಯಾರೂ ನಿನ್ನ ಹತ್ರ ಬರೂದಿಲ್ಲ.’ ಆಕೆಯ ಇನ್ನೊಂದು ಮಾತಿನ ಅರ್ಥ ನನಗೆ ಕಳೆದ ವರ್ಷ ಅರ್ಥವಾಯಿತು. ಯಾರಾದರೂ ಹೊರಗೆ ದುಡಿಯುವ ಹೆಣ್ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾಗ ಆಕೆ ಎದುರೇಟು ಕೊಡುತ್ತಿದ್ದುದು, ‘ಕೆಡಬೇಕಂದ್ರ ಬಚ್ಚಲ ಹರ್ಯಾಗೂ ಕೆಡತಾರ, ಹೊಚ್ಚಲಾ ದಾಟೇ ಕೆಡಬೇಕಾಗಿಲ್ಲ.’ ಇದೆಲ್ಲವನ್ನೂ ಈಗ ನೆನಪಿಸಿಕೊಳ್ಳುತ್ತ, ಅಭಿನಯಿಸಿದ ನಾಟಕಗಳು ಕಣ್ಮುಂದೆ ಬಂದು, ಆಗ ಮಾಡಿದ್ದ ಪಾತ್ರಗಳನ್ನು ಈಗ ಮಾಡಿದರೆ? ಅಂತ ಅನ್ನಿಸಿ ರೋಮಾಂಚನವಾಗುತ್ತದೆ. ಕಾಲವನ್ನು ಸರಿಯಗೊಡದಂತೆ ಪಾತ್ರಗಳನ್ನು ಅಭಿನಯಿಸುತ್ತಲೇ ಜೀವಿಸಿಬಿಡಬೇಕಿತ್ತು ಎಂದು ತೀವ್ರವಾಗಿ ಅನ್ನಿಸಿದಾಗೆಲ್ಲ ‘ಮಲ್ಲಿನಾಥ ಧ್ಯಾನ’ ನೆನಪಾಗುತ್ತದೆ. ಈ ಪಾತ್ರ ನನ್ನೊಳಗೆ ಮತ್ತೇನು ಹೊಸ ಹೊಸ ಅರ್ಥಗಳನ್ನು ಧ್ವನಿಸಬಹುದು ಎಂಬ ಹಂಬಲಕ್ಕಾಗಿಯಾದರೂ ಮತ್ತೊಮ್ಮೆ ಮಾಡಬೇಕು ಅನ್ನಿಸುತ್ತದೆ; ಬದುಕಿನ ಬಗ್ಗೆ ವಿಶಾಲ ದೃಷ್ಟಿಯಿಂದ ಯೋಚಿಸಲು ಪ್ರಾರಂಭಿಸಿದಾಗಲೇ ನಮ್ಮ ಎದೆಯೊಳಗೆ ‘ಬೋಲ್ಡ್’​ ಎನ್ನುವುದು ಕಾವು ಕೊಡುತ್ತ ಹೋಗುವುದಲ್ಲವೆ? ನಾನೀಗ ಅಂಥ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ.

naanemba parimaladha haadhiyali

ನಿರ್ದೇಶಕ ಗಿರೀಶ ಕಾರ್ನಾಡ ಮತ್ತು ನಟ ಅಚ್ಯುತ್ ಅವರೊಂದಿಗೆ

ಪರಿಚಯ: ಕಲಾವಿದೆ ಲಕ್ಷ್ಮೀ ನಾಡಗೌಡ (ಕಬ್ಬೇರಳ್ಳಿ) ಮೂಲ ಧಾರವಾಡದವರು. ನೀನಾಸಂ ತಿರುಗಾಟದ ಪ್ರಮುಖ ನಾಟಕಗಳು: ಹೂ ಹುಡುಗಿ, ತಲೆದಂಡ, ಸ್ವಪ್ನ ವಾಸವದತ್ತ, ಗೋಕುಲ ನಿರ್ಗಮನ,  ಅಗ್ನಿ ಮತ್ತು ಮಳೆ, ಮಾಮಾಮೂಷಿ, ಮುಂತಾದವು. ಪ್ರಮುಖ ರಂಗ ನಿರ್ದೇಶಕರಾದ ಬಿ. ವಿ. ಕಾರಂತ, ಚಿದಂಬರರಾವ್ ಜಂಬೆ, ಕೆ. ವಿ. ಅಕ್ಷರ, ಪ್ರಸನ್ನ, ಜರ್ಮನಿಯ ಪ್ರಿಟ್ಜ್ ಬೆನವಿಟ್ಜ್, ಸುರೇಶ್ ಆನಗಳ್ಳಿ, ಎಸ್. ಸುರೇಂದ್ರನಾಥ, ಜಯತೀರ್ಥ ಜೋಶಿ ಮುಂತಾದವರೊಂದಿಗೆ ಮತ್ತು ಹಲವಾರು ವರ್ಷಗಳ ಕಾಲ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವ. ಕನ್ನಡದ ಕಿರುತೆರೆಯಲ್ಲಿ 50ಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯ. ಸುದರ್ಶನ್ ದೇಸಾಯಿ ರಂಗ ಪ್ರಶಸ್ತಿ, ಝೀ ಕನ್ನಡ ವಾಹಿನಿಯಲ್ಲಿ ಸತತ ಎರಡು ವರ್ಷಗಳ ಕಾಲ ಗಂಗಾ ಧಾರಾವಾಹಿಯಲ್ಲಿನ ಅಭಿನಯಕ್ಕೆ ಉತ್ತಮ ನಟಿ ಪ್ರಶಸ್ತಿ ಮತ್ತು ಅನೇಕ ರಂಗ ಪುರಸ್ಕಾರಗಳು.

Published On - 7:41 pm, Sun, 14 February 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ