Dr. Leela Appaji Birthday : ನಾನೆಂಬ ಪರಿಮಳದ ಹಾದಿಯಲಿ: ಕಾಜಾಣ ಪ್ರೆಸೆಂಟ್ ಮೇಡಮ್ ಕೆಂಬೂತ ಪ್ರೆಸೆಂಟ್ ಮೇಡಮ್ ಗುಬ್ಬಚ್ಚಿ ಅಬ್ಸೆಂಟ್ ಮೇಡಮ್

‘ಜೀವನ ಅಂದರೆ ಏನು ಅಂತಾ ಇವತ್ತಿಗೂ ನಾನು ಅರ್ಥೈಸಲಾರೆ. ಆ ಕ್ಷಣದ ಆ ಬದುಕನ್ನು ಅದು ಸರಿ ಎನಿಸಿದರೆ ಹಾಗೆ ನಡೆದುಬಿಡುವುದು, ನನಗೆ ಅಭ್ಯಾಸವಾದ ಪಥವಿದು. ಸರಿ ಯಾವುದು ತಪ್ಪು ಯಾವುದು ಇವೆಲ್ಲಾ ಯೋಚಿಸುತ್ತಾ ಕೂರುವ ವ್ಯವಧಾನವೂ ಇಲ್ಲದ ಓಘದಲ್ಲಿ ಬದುಕಿನ ಓಟ ಇರುತ್ತದೆಯಷ್ಟೆ. ಯಾರು ಯಾರ ಪಥದಲ್ಲಿ ಏನು ಪ್ರಭಾವ ಬೀರಿದರೋ ಇಲ್ಲವೋ ಅಥವಾ ನಾನು ಪ್ರಭಾವ ಬೀರಿದೆನೊ ಇಲ್ಲವೋ ಅದು ಮುಖ್ಯವಲ್ಲ. ಹಿಡಿದ ಪಥ ನಾಲ್ಕಾರು ಪಥಿಕರಿಗೆ ಮಾರ್ಗ ತೋರಿಸಿತೇ, ಇಷ್ಟೆ ಮಹತ್ವದ್ದು.‘ ಡಾ. ಲೀಲಾ ಅಪ್ಪಾಜಿ

Dr. Leela Appaji Birthday : ನಾನೆಂಬ ಪರಿಮಳದ ಹಾದಿಯಲಿ: ಕಾಜಾಣ ಪ್ರೆಸೆಂಟ್ ಮೇಡಮ್ ಕೆಂಬೂತ ಪ್ರೆಸೆಂಟ್ ಮೇಡಮ್ ಗುಬ್ಬಚ್ಚಿ ಅಬ್ಸೆಂಟ್ ಮೇಡಮ್
Follow us
ಶ್ರೀದೇವಿ ಕಳಸದ
|

Updated on:Oct 03, 2021 | 10:52 AM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಮಂಡ್ಯದಲ್ಲಿ ವಾಸಿಸುತ್ತಿರುವ ಡಾ. ಲೀಲಾ ಅಪ್ಪಾಜಿ ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ನಂತರ ಕ್ಯಾಮೆರಾ ಕೊರಳಿಗೆ ಹಾಕಿಕೊಂಡು ಕಾಡು ಹೊಕ್ಕವರು. ಈಗಲೂ ಪ್ರತೀದಿನ ಬೆಳಗಿನ ನಾಲ್ಕಕ್ಕೆ ಎದ್ದು ಹಕ್ಕಿಧ್ಯಾನಕ್ಕೆ ಹೊರಟರೆ ಮುಗಿಯಿತು. ನಿಮ್ಮ ಧ್ಯಾನವನ್ನು ನಾವು ಪ್ರೀತಿಯಿಂದ ಸ್ವಲ್ಪ ಭಂಗಗೊಳಿಸುತ್ತೇವೆ ಎಂದು ಕೇಳಿಕೊಂಡಾಗ…

ಇಡೀ ಕಾಡಿನ ನೀರವ ಮೌನದಲ್ಲಿ ನನ್ನದು ಸದ್ದಿರದ ಪಯಣ. ಮಂಜು ಮುಸುಕಿದಾಗಲೇ ಚಿತ್ರ ತೆಗೆಯುವ ಸಾಹಸಕ್ಕೆ ಇಳಿಯುವ ನನ್ನನ್ನು ಚಳಿ, ಬಿಸಿಲು ಬಿಡದೆ ನಡೆಸುತ್ತದೆ. ಹಕ್ಕಿಗಳ ಹಿಂದೆ ಅಲೆಸುತ್ತದೆ. ಚಳಿಗಾಲದ ದಿನಗಳಲ್ಲಿ ಕೋಟಿನಿಂದ ಕೈ ಆಚೆ ತೆಗೆಯಲಾರದ ಅವಸ್ಥೆಯಲ್ಲೂ ಬಿಸಿ ಗಾಳಿ ಊದಿಕೊಳ್ಳುತ್ತಾ ವಾತಾವರಣಕ್ಕೆ ತಕ್ಕಂತೆ ಸೆಟಿಂಗ್ಸ್ ಬದಲಿಸಿಕೊಳ್ಳುತ್ತಾ ಹೋಗುವುದೊಂದೇ ಗುರಿ.

ಕ್ಲಿಕ್ ಕ್ಲಿಕ್ ಬಟನ್ ಒತ್ತಿದರೆ ಚಿತ್ರ ರೆಡಿ. ಕ್ಲಿಕ್ ಎನಿಸುವುದು ಕ್ಷಣ ಮಾತ್ರ. ಚಿತ್ರ ಮೂಡುವುದೂ ಕ್ಷಣಾರ್ಧದಲ್ಲಿ. ಆದರೆ ಕ್ಲಿಕ್ ಮಾಡುವ ಆ ಕ್ಷಣದ ಹಿಂದೆ ಎಷ್ಟು ತಯಾರಿ, ಎಷ್ಟು ಅನುಭವದ ಅಡುಗೆ ಇಟ್ಟಿರಬೇಕು. ಇಷ್ಟೆಲ್ಲಾ ಆದರೂ ಚಿತ್ರ ಪರ್ಫೆಕ್ಟ್ ಎಂದು ನಿರ್ಧರಿಸುವುದು ಹೇಗೆ? ಇನ್ನೇನೋ ಬೇಕಿತ್ತು, ಹೀಗಿರಬೇಕಿತ್ತು, ಸ್ವಲ್ಪ ಲೈಟ್, ತುಂಬಾ ಬ್ರೈಟ್, ಸ್ವಲ್ಪ ಬ್ಲರ್, ಸ್ವಲ್ಪ ಡಾರ್ಕ್ ಹೀಗೆ ಎಷ್ಟೆಲ್ಲಾ ರಿಮಾರ್ಕ್. ಹೀಗೆ ಬದುಕಿನ ಸಂಜೆಯಲ್ಲಿ ಫೋಟೋಗ್ರಫಿಯ ಅದರಲ್ಲೂ ಹಕ್ಕಿ ಹೆಜ್ಜೆಯರಸಿ ಪಯಣ ಬೆಳೆಸಿದ್ದೇನೆ.

ಬಹಳ ದೊಡ್ಡ ಪರಿವಾರದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪಡೆದ, ಮೊದಲು ಕೆಲಸಕ್ಕೆ ಸೇರಿದ ಹೆಣ್ಣುಮಗಳು ನಾನು. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಪವಿತ್ರ ಕಾಯಕಧಾರಿ. ಹತ್ತಾರು ಚಿತ್ರಪ್ರದರ್ಶನಗಳನ್ನು ಸಂಯೋಜಿಸಿ ಪ್ರದರ್ಶಿಸಿದವಳು. ಪ್ರಾಂಶುಪಾಲೆಯಾಗಿ ಹೊಸ ದಾರಿಗಳನ್ನು ಅನ್ವೇಷಿಸಿ ಕಾರ್ಯಗತಗೊಳಿಸಿದ್ದ ನಾನು ನಿವೃತ್ತಿಯ ಬಳಿಕ ಕ್ಯಾಮೆರಾದ ಎಬಿಸಿಡಿ ಗೊತ್ತಿಲ್ಲದೆ ಹಕ್ಕಿಗಣ್ಣಿಗೆ ಗುರಿಯಿಟ್ಟು ಕಲಿಯುತ್ತಾ ಕಲಿಯುತ್ತಾ ಇನ್ನೂ ಕಲಿಯುತ್ತಲೇ ಇರುವವಳು. ‘ಮೇಡಂ ನೀವು ತೆಗೆದ ಹಕ್ಕಿ ಚಿತ್ರ ಬಹಳ ಖುಷಿ ಕೊಡುತ್ತದೆ’ ಎಂದಾಗ ನಾಳೆ ಮತ್ತೇನು ಎನ್ನುತ್ತಾ ಹೊಸತಿಗಾಗಿ ತುಡಿಯುತ್ತಾ ಬದುಕಿಗೆ ಹೊಸ ವ್ಯಾಖ್ಯಾನ ಹುಡುಕುತ್ತಲೇ ಇದ್ದೇನೆ.

ಜೀವನ ಅಂದರೆ ಏನು ಅಂತಾ ಇವತ್ತಿಗೂ ನಾನು ಅರ್ಥೈಸಲಾರೆ. ಆ ಕ್ಷಣದ ಆ ಬದುಕನ್ನು ಅದು ಸರಿ ಎನಿಸಿದರೆ ಹಾಗೆ ನಡೆದುಬಿಡುವುದು. ನನಗೆ ಅಭ್ಯಾಸವಾದ ಪಥವಿದು. ಸರಿ ಯಾವುದು ತಪ್ಪು ಯಾವುದು ಇವೆಲ್ಲಾ ಯೋಚಿಸುತ್ತಾ ಕೂರುವ ವ್ಯವಧಾನವೂ ಇಲ್ಲದ ಓಘದಲ್ಲಿ ಬದುಕಿನ ಓಟ ಇರುತ್ತದೆಯಷ್ಟೆ. ಯಾರು ಯಾರ ಪಥದಲ್ಲಿ ಏನು ಪ್ರಭಾವ ಬೀರಿದರೋ ಇಲ್ಲವೋ ಅಥವಾ ನಾನು ಪ್ರಭಾವ ಬೀರಿದೆನೊ ಇಲ್ಲವೋ ಅದು ಮುಖ್ಯವಲ್ಲ. ಹಿಡಿದ ಪಥ ನಾಲ್ಕಾರು ಪಥಿಕರಿಗೆ ಮಾರ್ಗ ತೋರಿಸಿತೇ, ಇಷ್ಟೆ ಮಹತ್ವದ್ದು.

ಕನಸುಗಳೆಂದರೆ ಏನು ಎಂಬುದು ಇನ್ನೂ ಸ್ಪಷ್ಟವಾಗಿ ಮೂಡುವ ಮುನ್ನವೇ ಹಿರಿಯರು ನಿರ್ದೇಶಿಸಿದ ದಾರಿಯಲ್ಲಿ ನಡೆದಾಗಿತ್ತು. ಸಂಬಂಧವನ್ನು‌ ನಿಶ್ಚಯಿಸಿಕೊಂಡರು ಅವರವರೇ. ಅಂದರೆ ನನ್ನಪ್ಪ ಅಮ್ಮ. ಸೋದರಮಾವನೇ ಆದ ಅವನಪ್ಪ ಅಮ್ಮ ಯಾನೆ ನಮ್ಮಜ್ಜಿ ಅಜ್ಜ . ಹುಡುಗಿ ನಾನೇ! ನನ್ನನ್ನು ಕೇಳಬೇಕೆಂದು ಅವರಿಗೆಂದೂ ಅನ್ನಿಸಲೇ ಇಲ್ಲ, ಕೇಳಲೂ ಇಲ್ಲ. ಕೇಳಿದರೂ ಏನು ಹೇಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಅಜ್ಜಿ ಊರು ಎಂದರೆ ನನ್ನ ಆಟ ಕುಣಿದಾಟಕ್ಕೆ ಮನೆ ತುಂಬಾ ಜನ ಹಿತ್ತಿಲು ಇದ್ದ ಜಾಗ ಅದು. ಅಮ್ಮ ಬಾಣಂತನಕ್ಕೆ ಊರಿಗೆ ಹೋದಾಗ ಆ ಊರಿನ ಶಾಲೆ, ಮರಳಿ ಬಂದಾಗ ಅಪ್ಪ ಕೆಲಸ ಮಾಡುತ್ತಿದ್ದ ಊರು. ನೆನಪುಗಳು ಮಿಶ್ರಣಗೊಂಡು ಗೊಂದಲದ ಗೂಡೂ ಆಗಿವೆ. ಶಾಲೆಗೆ ಸೇರಲು‌ ವಯಸ್ಸಿನ ಮಿತಿ ಇತ್ತೋ ಇಲ್ಲವೋ ನಾನಂತೂ ಮಧ್ಯೆ ಮಧ್ಯೆ ಬಡ್ತಿ ಪಡೆದು ಹನ್ನೆರಡೂವರೆ ವರ್ಷಕ್ಕೆ ಎಸ್ ಎಸ್ ಎಲ್ ಸಿ ಮುಗಿಸಿದೆ. ಪಿಯುಸಿ ಸೈನ್ಸ್. ಭೌತಶಾಸ್ತ್ರ ಭೂತಶಾಸ್ತ್ರವಾಗಿ ಮರುವರ್ಷಕ್ಕೆ ಮತ್ತೊಮ್ಮೆ ಪರೀಕ್ಷೆ ಬರೆಸಿ ಪಾಸಾದವರ ಪಟ್ಟಿಯಲ್ಲಿ ಸೇರಿಸಿತು. ಪಾಸಾದ ಮೇಲಿನ ಅರ್ಧ ವರ್ಷದಲ್ಲಿ ಮದುವೆ ಮಾಡಿ ಮುಗಿಸಿ ಒಮ್ಮೆಯೂ ಅಡುಗೆಮನೆಗೆ ಕಾಲಿಡದಿದ್ದ ನನ್ನನ್ನು ಮನೆಯ ಜವಾಬ್ದಾರಿ‌ ಹೊರೆಸಿ ಕಳಿಸಿದರು.

ಈ ಆಟ ಜೀವನಾಟದ ನಡುವೆ ಒಳಗೆ ಉಳಿದಿದ್ದ ಒಂದೇ ಆಸೆ ಮುಂದೆ ಓದಲೇಬೇಕು. ಆದರೆ ಏನೆಂಬುದೂ ಸ್ಪಷ್ಟವಿರಲಿಲ್ಲ. ಗಂಡನೂ ಒಪ್ಪಿಕೊಂಡ. ಆತ ಅದಾಗಲೇ ಸ್ವತಂತ್ರ ವೃತ್ತಿಯಲ್ಲಿದ್ದ. ಆರ್ಥಿಕ ಸ್ಥಿತಿ ಕಷ್ಟವೇ ಆಗಿರದಿದ್ದರೂ ನಾನು ಕಾಸಿರದವಳು. ಆಗ ನನ್ನೂರಲ್ಲೂ ಮಹಿಳಾ ಕಾಲೇಜೊಂದು ಪ್ರಾರಂಭವಾಗಿ‌ ನನ್ನಾಸೆಯ ಬೆಟ್ಟಕ್ಕೆ ಮೆಟ್ಟಿಲುಗಳು ಮೂಡಿಕೊಂಡವು. ಕಟ್ಟಡಗಳಿಲ್ಲದ ಕಾಲೇಜು ಹೈಸ್ಕೂಲ್ ಕಟ್ಟಡದಲ್ಲಿ ಬೆಳಗಿನ ಪಾಳಿಯಲ್ಲಿ ಪ್ರಾರಂಭ. ಆ ಹೈಸ್ಕೂಲಿನ ಜೊತೆ ಕಾಲೇಜಿನ ಸಂಬಂಧ ನಾನು ಪ್ರಾಂಶುಪಾಲೆಯಾಗಿ ಬರುವ ತನಕವೂ ಇದ್ದು ಕೊನೆಗೆ ನನ್ನಿಂದಲೇ ಆ ಕಟ್ಟಡಕ್ಕೆ ಚರಮಗೀತೆ ಹಾಡಲಾಯಿತು. ಅಂದರೆ ಮುಂದೆ ಕಾಲೇಜು ಸ್ವತಂತ್ರ ಕಟ್ಟಡ ಹೊಂದಿತು.

ಮಜಾ ಏನೆಂದರೆ ಬಿ.ಎ ಅಂದರೆ ಏನು, ಏನೇನು ಕಾಂಬಿನೇಷನ್ ಇರುತ್ತವೆ ಅನ್ನೋದೇ ಗೊತ್ತಿರಲಿಲ್ಲ. ಅಸಲಿಗೆ ಬಿಎಸ್ಸಿ ಸೇರುವ ಇರಾದೆ ನನ್ನದಾಗಿತ್ತು. ಗಂಡನ ಗೆಳೆಯ ಉಪನ್ಯಾಸಕರೊಬ್ಬರು, ‘ಬಿಎಸ್ಸಿ ಸೇರಿದರೆ ಪ್ರ್ಯಾಕ್ಟಿಕಲ್ಸ್​ನ ಗೋಳು ಮತ್ತೆ ಹುಡುಗರ ಕಾಲೇಜು… ಇದೆಲ್ಲಾ ಯಾಕೆ ತೊಂದರೆನೇ. ಸುಮ್ಮನೆ ಬಿ.ಎ ಗೆ ಸೇರಿ’ ಎಂದು ತಾವೇ ಕಾಂಬಿನೇಷನ್ ಕೂಡಾ ಬರೆದರು. ಬಿ.ಜಿ.ಲೀಲಾ ಆಗಿದ್ದ ನನ್ನ ಹೆಸರನ್ನು ನನ್ನ ಗಂಡ ತಾನಾಗಿಯೇ ಲೀಲಾ ಅಪ್ಪಾಜಿ ಎಂದು ಬರೆದು ಬಿಡದೆ ನನ್ನ ಹೆಸರಿನಲ್ಲಿ ತಾನೇ ಉಳಿದುಕೊಂಡ. ಕೆಎಸ್​ಪಿ ಕಾಂಬಿನೇಷನ್ ಏನೆಂದು ಅರಿಯದ ನನಗೆ ಕನ್ನಡ-ಸಮಾಜಶಾಸ್ತ್ರ ಮೇಜರ್ ಆಗಿ ತತ್ವಶಾಸ್ತ್ರ ಮೈನರ್ ಆಗಿತ್ತು. ಬೆಳಿಗ್ಗೆ ತಿಂಡಿ ಮಾಡಿ ಅರ್ಧ ಅಡಿಗೆ ಮಾಡಿ ತರಗತಿ ಮುಗಿಸಿ ಬಂದು ಉಳಿದದ್ದನ್ನು ಪೂರೈಸುತ್ತಿದ್ದೆ. ಮೊದಲ ವರ್ಷ ಮುಗಿಯಿತು. ಎರಡನೇ ವರ್ಷಕ್ಕೂ ಬಂದೆ. ಯಾಕೋ ನನ್ನ ಗಂಡನಿಗೆ ನಾನು ಮುಂದೆ ಓದುವುದು ಬೇಡ ಎನಿಸಿ ಹಾಗೆ ಹೇಳಿಯೂ ಹೇಳಿದ. ನಾನು ಪುಸ್ತಕ ಕೊಡಿಸುವುದಿಲ್ಲ ಎಂದು ಹೆದರಿಸಿದ. ಆದರೆ ಬಡಪೆಟ್ಟಿಗೆ ಬಗ್ಗದೆ ಪರವಾಗಿಲ್ಲ ಎನ್ನುತ್ತಾ‌ ಕಾಲೇಜಿಗೆ ಹೋಗಿಯೂ ಹೋದೆ. ಬೇಕಾದ ಪಾಠಗಳನ್ನು ಬರೆದುಕೊಂಡೆ. ಇವಳನ್ನು ಪಳಗಿಸುವುದು ಸಾಧ್ಯವಿಲ್ಲ ಎಂದು ಅವ ಸುಮ್ಮನಾದ. ಸಾಂದರ್ಭಿಕವಾಗಿ ಅಮ್ಮನ ಮನೆಗೆ ಶಿಫ್ಟ್ ಆಗಬೇಕಾಯಿತು. ಓದು ಮುಂದುವರೆಯಿತು.

ಆದರೆ ಆ ವರ್ಷದ ಕೊನೆಗೆ ಎರಡು ಪರೀಕ್ಷೆ ಬರೆಯಬೇಕಾದ ಅವಸ್ಥೆ ತಲುಪಿದ್ದೆ. ಸರಿಯಾಗಿ ಮಾರ್ಚಿಯಲ್ಲಿ ಇಂಗ್ಲೀಷ್ ಪರೀಕ್ಷೆ ಬರೆಯಬೇಕಿದ್ದ ದಿನ ಹೆರಿಗೆಗಾಗಿ ಆಸ್ಪತ್ರೆಗೆ ಸೇರಿದ್ದೆ. ಇಂಗ್ಲಿಷ್ ಪರೀಕ್ಷೆ ಬರೆಯಲಿಲ್ಲ. ಅದೇ ಸಮಯಕ್ಕೆ ಮಗಳಿಗೆ ತಾಯಾದೆ. ಯಾರೋ ಹೆದರಿಸಿದರು ಒಂದಾದರೂ ಪರೀಕ್ಷೆ ಬರೆಯಲೇಬೇಕೆಂದು. ಆಸ್ಪತ್ರೆಯ ಬೆಡ್ಡಲ್ಲಿ ಮಲಗಿಯೇ ಪುಸ್ತಕ ಹಿಡಿದೆ. ಅಪ್ಪ ಇನ್ನೂ ಆಟೋ ಕೂಡಾ ಇರದಿದ್ದ ಊರಿನಲ್ಲಿ ಜಟಕಾದಲ್ಲಿ ಕಾಲೇಜಿಗೆ ಕರೆದುಕೊಂಡು ಹೋಗಿ ಅರ್ಧ ಗಂಟೆ ಮಾತ್ರ ಬರೆದು ಬೆಲ್ ಹೊಡೆದ ಕೂಡಲೇ ಬಾ ಎಂದರು. ಅರ್ಧಗಂಟೆಯ ಬೆಲ್ ಬಳಿಕ ಹೊರಬಂದು ಮನೆ ಸೇರಿ ಮಗಳ ಜವಾಬ್ದಾರಿ ಹೊತ್ತೆ. ಅರ್ಧ ಗಂಟೆ ಬರೆದದ್ದಕ್ಕೆ ಇವತ್ತಿಗೂ ಸರಿಯಾಗಿ ಅರ್ಥವಾಗದೇ ಇರುವ ಮತ್ತು ಅನುಸರಿಲು ಆಗದಿರುವ ತತ್ವಶಾಸ್ತ್ರದಲ್ಲಿ ಇಪ್ಪತ್ಮೂರು ಅಂಕ ಪಡೆದೆ. ಆಮೇಲೆ ಮತ್ತೆ ಪರೀಕ್ಷೆ ಕಟ್ಟಿ ಪಾಸೂ ಆದೆ. ಎಷ್ಟಾದರೂ Halt and Proceed ಮಾರ್ಗದ ಪಥಿಕಳು ನಾನು. ಮೂರು ತಿಂಗಳ ಬಳಿಕ ಅಮ್ಮ ನಿನ್ನ ಕೊನೆಯ ವರ್ಷದ ಓದು ಮುಂದುವರೆಸು, ‌ಕಾಲೇಜಿನಿಂದ ಬರುವ ತನಕ ಮೊಮ್ಮಗಳನ್ನು ನೋಡಿಕೊಳ್ಳುವೆ ಎಂದು ಭರವಸೆ ಇತ್ತು ಓದಿನ ದಡ ಸೇರಿಸಿದರು. ಅಂತೂ ನಾನೂ ಪದವಿ ಪಡೆದುಕೊಂಡೆ.

ಆದರೆ ಮತ್ತೂ ಓದುವ ಆಸೆ ಇತ್ತು. ಅಪ್ಪನಿಗೆ ಬೇರೆ ಊರಿಗೆ ವರ್ಗವಾಗಿ ಶಿಫ್ಟ್ ಆದರು. ವರ್ಷದ ಮಗಳನ್ನು ಮತ್ತೆಲ್ಲೋ ಬಿಟ್ಟು ಓದಲು ಬೇರೆ ಊರಿಗೆ ಹೋಗುವ ಸ್ಥಿತಿಯಲ್ಲಂತೂ ಇರಲಿಲ್ಲ. ಆಗ ಆಸೆಗೆ ಊರುಗೋಲಾಗಿದ್ದದು ಅಂಚೆ ಮತ್ತು ತೆರಪಿನ ಸಂಸ್ಥೆ. ಕನ್ನಡ ಎಂ.ಎಗೆ ಸೇರುವ ಕನಸಿಗೆ ಇಂಬಿತ್ತಿತು. ಮಗಳೂ ಬೆಳೆದಳು. ಎಂ.ಎ ಕೂಡಾ ಮುಗಿಯಿತು. ಮತ್ತೆ ಮುಂದೆ ಓದುವ ಆಸೆ ಇನ್ನೂ ಇತ್ತು. ನಾನು ಬಯಸಿದ ಗೈಡ್ ಬಳಿ ಅವಕಾಶ ಇರಲಿಲ್ಲ. ಕೆಲವು ಕಾಲ ಬಿಟ್ಟು ಮುಂದುವರೆಸಲು ನಿರ್ಧರಿಸಿ ಮನೆಯಲ್ಲೇ ಉಳಿದೆ. ಗ್ರಂಥಾಲಯದಿಂದ ಪುಸ್ತಕ ತಂದು ಓದುವುದು, ಮಗಳ ಮುತುವರ್ಜಿ ಬಿಟ್ಟರೆ ಮತ್ತೊಂದು ಕೆಲಸ ಮಾಡಲೇ ಇಲ್ಲ. ಕೆಲಸಕ್ಕೆ ಹೋಗಬೇಕೆನ್ನುವ ಕಡೆಯೂ ನಿಗಾ ಇರಲಿಲ್ಲ.

ಆದರೆ ಅದೊಂದು ದಿನ ನನ್ನ ಸಂಬಂಧಿ ಉಪನ್ಯಾಸಕರೊಬ್ಬರು ಸುಮ್ಮನೆ ಮನೆಯಲ್ಲಿ ಇದ್ದೀಯಲ್ಲಮ್ಮ ಯಾಕೆ ಕೆಲಸಕ್ಕೆ ಸೇರಬಾರದು ಎಂದರು. ಆಗ ಅಪ್ಪ Boys College ನಲ್ಲಿ ಪ್ರಾಂಶುಪಾಲರಾಗಿದ್ದರು. ತಾತ್ಕಾಲಿಕ ಉಪನ್ಯಾಸಕಿ‌ ಹುದ್ದೆಗೆ ಅರ್ಜಿ ಹಾಕಿದೆ. ಇನ್ನೂರು ರೂಪಾಯಿ ಗೌರವಧನ‌. ಅದು ಅಂದಿಗೂ ಇಂದಿಗೂ ಅಮೂಲ್ಯವಾದ ಮೊತ್ತ. ಆ ಮೊದಲ ತಿಂಗಳ ಹಣದಲ್ಲಿ ನನ್ನ ನಾಲ್ವರು ಹಿರಿಯರಿಗೂ ಉಡುಗೊರೆ ಕೊಡಿಸಿದ ನೆನಪು ಎದೆಯಾಳದಲ್ಲಿ ಉಳಿದಿದೆ. ನಾನು ಪಾಠ ಮಾಡಬಲ್ಲೆ ಎಂಬ ಭರವಸೆ ಬಂದಿತು. ಮರುವರ್ಷ ಸ್ಥಳೀಯ ಅಭ್ಯರ್ಥಿ ಉಪನ್ಯಾಸಕ ಹುದ್ದೆಗೆ ಅದೇ ಕಾಲೇಜಿಗೆ ಸೇರಿದೆ. ಅಕಾಡೆಮಿಕ್ ವರ್ಷದ ಕೊನೆಯಲ್ಲಿ ಉಳಿಸಿ ಮುಂದುವರೆಸಿದ್ದ ನಮ್ಮನ್ನು ನಾಲ್ಕೈದು ವರ್ಷಗಳ ಬಳಿಕ ಖಾಯಂಗೊಳಿಸಿದರು. ಹೆಣ್ಣುಮಕ್ಕಳಿಗೆ ಆರ್ಥಿಕ ಭದ್ರತೆ ಅತ್ಯವಶ್ಯ ಎಂಬ ಸತ್ಯ ಒಳಗಿಳಿಯಿತು. ಆಗಲೇ ನಿರ್ಧಾರ ಪಟ್ಟು ಹಿಡಿದು ಕೂತಿತು. ಮಕ್ಕಳಿಗೆ ನಾನು ಆಸ್ತಿ ಕೊಡದಿದ್ದರೂ ಮಕ್ಕಳನ್ನೇ ಆಸ್ತಿ ಮಾಡಬೇಕು, ವಿದ್ಯೆ ಕೊಡಿಸಲೇಬೇಕು ಎಂದು. ಅದರಲ್ಲೂ ಜೀವದ ಕಷ್ಟಕ್ಕೆ ಮಿಡಿಯುವ ವೈದ್ಯೆಯಾಗುವ ನನ್ನೊಳಗಿನ ಆಸೆಯನ್ನು ಮಕ್ಕಳಿಗೆ ವಿಸ್ತರಿಸಬೇಕೆನ್ನುವ ನಿರ್ಧಾರ.

ಒಬ್ಬಳೇ ಮಗಳೆ ನಮ್ಮ ಬದುಕಬಂಡಿಗೆ ಸಾಕೆಂದು ನಿಶ್ಚಿತವಾಗಿದ್ದ ತೀರ್ಮಾನ ಬದಲಿಸಬೇಕಾದ ಸಂದರ್ಭ ವಿಷಾದದಿಂದ ಎದುರಾಯ್ತು. ನಮ್ಮ ಮನೆಯಲ್ಲೆ ಇದ್ದು ಪದವಿ ಮುಗಿಸಿದ್ದ ಕಿರಿಯ ಮೈದುನ ಗದ್ದೆಯ ಬಾವಿಯಲ್ಲಿ ಈಜಲು ಹೋಗಿ ಕೆಸರಿಗೆ ಸಿಕ್ಕಿಕೊಂಡು ಗತಪ್ರಾಣನಾದ. ನಮ್ಮೆಲ್ಲರ ಪ್ರೀತಿಗೆ ಪಾತ್ರನಾಗಿದ್ದ ಅವನ ಅಗಲಿಕೆಯ ನೋವಿಗೆ ನಲುಗಿದ ಅಜ್ಜ ಅಜ್ಜಿ ಮತ್ತೊಂದು ಮಗು ಅವನ ನೆನಪಲ್ಲಿ ನಿಮಗೆ ಹುಟ್ಟಲೇಬೇಕು ಎಂದು ಹಟ ಹಿಡಿದ ಪರಿಣಾಮ ಹತ್ತು ವರ್ಷಗಳ ಬಳಿಕ ಮತ್ತೊಮ್ಮೆ ತಾಯಾದೆ, ಆದರೆ ಅವನು ಹುಟ್ಟಲಿಲ್ಲ, ಬೇಸರವಿಲ್ಲ ಅವಳು ಹುಟ್ಟಿದಳು. ಒಮ್ಮೆಯಾದರೂ ಗಂಡು ಮಗು ಹುಟ್ಟಲಿಲ್ಲ ಎಂಬ ಎಳೆಯೂ ನನ್ನನೆಂದೂ ಕನಸಿನಲ್ಲೂ ಕಾಡಿಲ್ಲ. ಪಾಠ, ಮಕ್ಕಳ ಪಾಲನೆ ಜೊತೆಗೆ ಜೀವನ ಸಾಗುವಿಕೆ. ಆದರೆ ಹೆಣ್ಣುಮಕ್ಕಳ ಕಾಲೇಜಿಗೆ ವರ್ಗ ಆದ ಬಳಿಕ ಒಳಗಿದ್ದ ಇತರ ಆಸಕ್ತಿಗಳು ಚಿಗಿತವು. ವಿದ್ಯಾರ್ಥಿನಿಯರ ಜೊತೆ ನಾನೂ ಬೆಳೆದೆ.

ಇಷ್ಟೆಲ್ಲದರ ಒಳಗೂ ಓದುವ ಆಸೆ ಹಸಿರಾಗೇ ಇತ್ತು. ಹಿರಿಯ ಮಗಳ ವಿದ್ಯೆ ಮದುವೆ ಜಬಾಬ್ದಾರಿ ನಿರ್ವಹಿಸಿ ಮುಗಿದಿತ್ತು. ಗಂಡ ಹೃದ್ರೋಗಿಯಾದ, ರಜಾ ಹಾಕಿ ಆಪರೇಷನ್ ಮಾಡಿಸಿ ಒಂದಷ್ಟು ದಿನ ಆರೈಕೆ ಮಾಡಿದ್ದಾಯ್ತು. ಕಿರಿಯ ಮಗಳನ್ನು ಬೆಂಗಳೂರಿಗೆ ಪಿಯುಸಿ ಓದಲು ಸೇರಿಸಿ ಮೆಲ್ಲಗೆ ಪಿಎಚ್.ಡಿಗೆ ರಿಜಿಸ್ಟರ್ ಮಾಡಿಸಿದೆ. ಆದರೆ ಮಗಳಿಗಾಗೇ ಆರು ತಿಂಗಳು ಬೆಂಗಳೂರು ಸೇರಿ ಅಲ್ಲಿಂದ ಮಂಡ್ಯ ಕಾಲೇಜಿಗೆ ಓಡಾಡಿದೆ. ಅವಳನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ಸೇರಿಸಿದೆ. ಸಂಶೋಧನಾ ವ್ಯಾಸಂಗಕ್ಕೆ ನನಗೆ ರಜೆ ಸಿಕ್ಕಿದ್ದರಿಂದ ಮೈಸೂರು ಸೇರಿ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಯಾದೆ. ಅಮ್ಮ ಮಗಳು ಇಬ್ಬರೂ ಸ್ಟೂಡೆಂಟ್ ಲೈಫಿಗಿಳಿದೆವು. ಇಬ್ಬರಿಗೂ ಓದುವುದನ್ನು ಬಿಟ್ಟು ಬೇರೇನೂ ಇರಲಿಲ್ಲ.

ಸಂಶೋಧನೆಯ ನಡುಮಧ್ಯದಲ್ಲಿಯೆ ನಾನು ಮೊಮ್ಮಗಳಿಗೆ ಅಜ್ಜಿಯಾಗಿದ್ದೆ. ಅಜ್ಜಿ ಅಧ್ಯಯನ ಮುಂದುವರೆಸಿ ಡಾಕ್ಟರೇಟ್ ಪಡೆದಳು. ಮಹಾರಾಣಿ ಕಾಲೇಜಿನಲ್ಲಿ ಮುಂದಿನ ವೃತ್ತಿಜೀವನ ಸಾಗುತ್ತಿದ್ದಂತೆ ಕುವೆಂಪು, ಗಾಂಧಿ ಜೊತೆಗೆ ಬಂದರು. ನನ್ನೊಳಗೆ ಆತ್ಮವಿಶ್ವಾಸ ಹುಟ್ಟಿಸಿ ದಿಕ್ಕು ತೋರಿಸಿದರು.

ಓದಿದೆ ಓದಿಸಿದೆ. ಸಾವಿರಾರು ಮಕ್ಕಳಿಗೆ ಮಾರ್ಗದರ್ಶಿಯಾದೆ. ಧೈರ್ಯ ತುಂಬಿಸಲು ವೇದಿಕೆ ಹತ್ತಿಸಿದೆ. ಹಾಡಲು ಆಸೆಯಾದರೂ ಸಂಗೀತ ಕಲಿಯಲು ಪ್ರಯತ್ನಿಸಿದರೂ ಹಾಡಲು ಬಾರದ ನಾನು ನೂರಾರು ಹುಡುಗಿಯರನ್ನು ಹಾಡಲು ಅಭ್ಯಾಸ ಮಾಡಿಸಿಸಿದೆ, ಸಿಕ್ಕ ವೇದಿಕೆಯನ್ನೆಲ್ಲಾ ಹತ್ತಿಸಿದೆ. ಒಮ್ಮೆಯಂತೂ ನೂರು ಹುಡುಗಿಯರನ್ನು ಒಂದೇ ವೇದಿಕೆಯಲ್ಲಿ ನಿಲ್ಲಿಸಿ ಹಾಡಿಸಿದ್ದೆ. ಹಾಡು ಮುಗಿದ ಬಳಿಕ ಅಷ್ಟೂ ಮುಖಗಳಲ್ಲಿದ್ದ ಧನ್ಯತೆಯ ಭಾವ ಬದುಕನ್ನು ಸಾರ್ಥಕ ಅನ್ನಿಸಿತು. ನನ್ನ ವಿದ್ಯಾರ್ಥಿನಿ ನಾಟಕದಲ್ಲಿ ನಟಿಸಿ ಪಡೆದ ಅನುಭವ ಬಿ.ಎಡ್ ನಲ್ಲಿ ಪ್ರ್ಯಾಕ್ಟೀಸ್ ಪಾಠ ಮಾಡಲು ಅನುಕೂಲವಾಯಿತೆಂದಳು. ನಮಗೀಗ ಯಾವ ಭಯವೂ ಇಲ್ಲ ಎನ್ನುವ ಅವರ ನುಡಿಗಳು, ಲೀಲಾ ಅಪ್ಪಾಜಿ ವಿದ್ಯಾರ್ಥಿನಿಯರನ್ನು ತಯಾರು ಮಾಡಿ ಕಳಿಸುತ್ತಾರೆನ್ನುವುದಷ್ಟೆ ಕಿವಿಯಲ್ಲಿ ಅನುರಣಿಸುತ್ತಿವೆ.

ಪಾಠ ಮಾಡಿಯೇ, ವಿದ್ಯಾರ್ಥಿನಿಯರೊಡನೆ ವಯಸ್ಸು ಮರೆತು ಕುಣಿದು ಖುಷಿಪಡುತ್ತಿದ್ದವಳಿಗೆ ಗಾಂಧಿ ಸಹವಾಸ ಒಂದಿಷ್ಟು ಮೌಲ್ಯಗಳ ಜೊತೆಗೆ ಮುನ್ನಡೆಸುವ ನಾಯಕತ್ವಕ್ಕೆ ಪ್ರೇರೇಪಿಸಿ ಪ್ರಿನ್ಸಿಪಾಲ್ ಆದೆ. ನನ್ನ ನಾಯಕ ಗಾಂಧಿ ಹಲವು ಹತ್ತು ಪ್ರಯೋಗಗಳನ್ನು ನಡೆಸಿದ್ದು ಮನದಲ್ಲಿತ್ತು. ಕಾಲೇಜುಗಳಿಗೆ ಅವಶ್ಯವಿದ್ದ ಬಹುಮುಖಿ ಪ್ರಯೋಗಗಳಿಗೆ ಒಡ್ಡಿಕೊಂಡೇ ನಾಯಕತ್ವದ ಉರಿಪೀಠದಲ್ಲಿ ಏಳು ವರ್ಷ ಇದ್ದೆ. ನನಗೋ ಬೆಂಕಿಯನ್ನು ಬೆಳದಿಂಗಳಾಗಿಸುವ ಕನಸುಗಳು. ವಿದ್ಯೆಗೆ ಜೊತೆಗೆ ಇನ್ನಷ್ಟು ಅರಿವು ಸೇರಿಸಿ ಕೊಡುವ ತವಕ‌. ನನ್ನ ಪ್ರತಿ ಪ್ರಯೋಗವೂ ಸಾರ್ಥಕ ಫಲ ನೀಡುವ ಪ್ರಯತ್ನವಾಗಿತ್ತು. ನೀವು ಹೇಗೆ ಇಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯ ಎಂಬ ಪ್ರಶ್ನೆಗೆ ಫಲಿತಾಂಶಗಳೇ ಉತ್ತರಗಳಾಗಿದ್ದವು. ನಿದರ್ಶನಕ್ಕೆ ಜ್ಞಾನಸಿರಿ ಎಂಬ ವಾರದ ಕಾರ್ಯಕ್ರಮ ಮೂರು ವರ್ಷದಲ್ಲಿ ನಾನೂರು ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನಡೆಸಿ ನೂರಾರು ಸಂಪನ್ಮೂಲ ವ್ಯಕ್ತಿಗಳನ್ನು ಬರಮಾಡಿಕೊಂಡಿತ್ತು. ಖರ್ಚಿಗೆ ನನ್ನ ಕೈ ಎಂದೂ ಹಿಂದೇಟು ಹಾಕಿರಲಿಲ್ಲ. ಎಲ್ಲ ಕೊಟ್ಟ ಕ್ಷೇತ್ರಕ್ಕೆ ಒಂದಿಷ್ಟಾದರೂ ಕೊಡಬೇಕೆನ್ನುವ ತುಡಿತವೊಂದೇ ಲಕ್ಷಾಂತರ ರೂಪಾಯಿಗಳ ಕೊಡುಗೆ ಕೊಡಲು ಸಿದ್ಧವಿತ್ತು.

ಕೈಗೊಂಡ ಕೆಲಸ ಹಿರಿದಾಗಿತ್ತು. ಕೆಲವರು ಕೈ ಜೋಡಿಸಿ ಹೆಗಲು ಕೊಟ್ಟರು. ಇನ್ನು ಕೆಲವರು ಕೈಕೊಟ್ಟು ಇರಿದರು. ಕೆಲಕಾಲ ಸುಡುಸುಡುವ ಮರುಳುಗಾಡಿನಲ್ಲಿ ಒಂಟಿ ಆದಂತೆ. ನಂಬಿ ನಡೆದ ದಾರಿಯೇ ದೂರಿ ದೂರ ಮಾಡಿತೇ ಎಂಬ ಹತಾಶೆ. ಆದರೂ ಬದುಕು ದೊಡ್ಡದು ಎನ್ನುವ ಅರಿವು ನನ್ನ ಹೊತ್ತು ನಡೆಯಿತು. ಎಲ್ಲ ಮುಗಿಯಿತೆಂದಾಗ ಮತ್ತೆ ದಾರಿ ವಿಶಾಲವೆಂಬುದು ವಿಶದವಾಯಿತು. ಇರುವ ಜಗ ಇರುವಷ್ಟು ದಿನ ಸಹನೀಯ ಆಗಲು ಹೊಸ ದಾರಿ ತೆರೆದುಕೊಂಡಿತು. ಮೂವತ್ತೈದು ವರ್ಷ ಸವೆಸಿದ್ದ ದಾರಿಗಿಂತ ಮತ್ತೂ ಭಿನ್ನವಾದ ಆಕರ್ಷಕ ಹಕ್ಕಿಲೋಕ ಕರೆದು ಮಮತೆಯಿಂದ ತಬ್ಬಿತು. ಕಲ್ಲೋಲವಾಗಿದ್ದ ಪ್ರಕ್ಷುಬ್ಧ ಮನಃಸಾಗರವನ್ನು ಶಾಂತಗೊಳಿಸಿತು, ಮರುಹುಟ್ಟು ನೀಡಿತು.

ನಾನು ನಾನಾದೆ ಎನ್ನಲಾರೆ, ನನ್ನೊಳಗಿನ ಆ ಇನ್ನೂ ಏನೋ ಆಗಬೇಕಾಗಿದ್ದವಳು ಹೊರಬಂದಳು. ಊರೂರು ಕಾಡುಮೇಡು ಎನ್ನದೆ ಕಾಲುನೋವಿನ ಜೊತೆಯೇ ಅಲೆದಲೆದೆ. ಮನೆ ಇದ್ದಲ್ಲೇ ಇತ್ತು. ಅದರ ಜವಾಬ್ದಾರಿ ಜಾರಿಸಿಕೊಂಡೆ. ಮಕ್ಕಳಿಗೆ ಮನೆಯವನ ಹೊಣೆ. ನಾನು ಅರವತ್ತರ ಇಳಿಎಳೆವಯಸಿನಲಿ ಹಕ್ಕಿಪಾಲಾದೆ.

ಏಳುನೂರಕ್ಕೂ ಹೆಚ್ಚು ಹಕ್ಕಿಗಳು ಚಿತ್ರಗಳಾಗಿ ಅರವತ್ತೈದರ ಈ ಹರೆಯದಲ್ಲೂ ನನ್ನ ಜೊತೆ ಸೇರಿವೆ. ಪಾಠ ಕಲಿಸಿವೆ, ಧ್ಯಾನದಲ್ಲಿ ತಲ್ಲೀನಗೊಳಿಸಿವೆ. ಸದಾ ಇರುವ ಕಾಲುನೋವನ್ನು ಮರೆಸಿವೆ. ನಮ್ಮಮ್ಮ ಗಾಂಧಿ ಹಾದಿಯ ಹಟಮಾರಿ ಎಂದು ಮಕ್ಕಳು ಅರಿತಿದ್ದಾರೆ. ಲಡಾಖಿನಲ್ಲಿ ಉಸಿರು ಮರೆತ ಅವಸ್ಥೆಯಲ್ಲಿ ಕಿರಿಯ ಮಗಳು ಅಲ್ಲಿಗೆ ಬಂದು ಊರಿಗೆ ಮರಳಿತಂದಳು. ಅವರಿಬ್ಬರಿಗೂ ಗೊತ್ತು ಅಮ್ಮನನ್ನು ತಡೆಯಲಾಗದೆಂದು. ಆಯ್ತಮ್ಮ ಹುಷಾರು ಎಂದು ಬೀಳ್ಕೊಡುತ್ತಾರೆ. ಅವರಮ್ಮ ಹಕ್ಕಿ ಚಿತ್ರ ಸಮೇತ ಮರಳುತ್ತಿದ್ದಾಳೆ, ಕೈ ಕ್ಯಾಮೆರಾ ಹಿಡಿಯಲಾಗುವ ತನಕ. ಆಮೇಲೆ ಇದ್ದೇ ಇದೆಯಲ್ಲ ನೆನಪುಗಳ ಸಂದೂಕ. ಕಾಲರಾಯನ ಎದೆಯ ಪದಕ.

***

ಪರಿಚಯ: ಮಂಡ್ಯದಲ್ಲಿ ವಾಸವಾಗಿರುವ ಇವರು ನಿವೃತ್ತ ಕಾಲೇಜು ಪ್ರಾಂಶುಪಾಲರು. ಹಕ್ಕಿಗಳ ಬೆನ್ನೇರಿರುವ ಇವರು ಈ ತನಕ ಉತ್ತರಕಾಂಡ, ಮಣಿಪುರ, ನೇಪಾಳ, ಪಶ್ಚಿಮ ಬಂಗಾಳ, ಒರಿಸ್ಸಾ, ಕೇರಳ, ಅಂಡಮಾನ್‌ ಮುಂತಾದ ಕಾಡುಗಳೊಳಗೆ ಸಂಚರಿಸಿದ್ದಾರೆ. ಈ ತನಕ ಸುಮಾರು 700 ಕ್ಕೂ ಹೆಚ್ಚು ಪಕ್ಷಿಗಳನ್ನು ಕಲಾತ್ಮಕವಾಗಿ ಕ್ಯಾಮೆರಾದೊಳಗೆ ಸೆರೆಹಿಡಿದಿದ್ದಾರೆ.

ನಾನೆಂಬ ಪರಿಮಳದ ಹಾದಿಯಲಿ: ನನಗ ನನ್ನ ಅಸ್ತಿತ್ವ ಮುಖ್ಯ ಗಂಡನ ಪಗಾರ ಅಲ್ಲ…

Published On - 2:08 pm, Wed, 3 February 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ