ನಾನೆಂಬ ಪರಿಮಳದ ಹಾದಿಯಲಿ: ಅಮ್ಮನೆಂಬ ಪಂಜರದ ಹಕ್ಕಿ ರೆಕ್ಕೆ ಬಿಚ್ಚಿ ಹಾರುವಾಗ

ನಾನೆಂಬ ಪರಿಮಳದ ಹಾದಿಯಲಿ: ಅಮ್ಮನೆಂಬ ಪಂಜರದ ಹಕ್ಕಿ ರೆಕ್ಕೆ ಬಿಚ್ಚಿ ಹಾರುವಾಗ

‘ಮೊದಲು ಅವರ ಮಕ್ಕಳನ್ನು ಬೇರೆಯವರು ಆಡಿಕೊಂಡಾಗ ಅವರ ಅದೃಷ್ಟವನ್ನು ಬೈದುಕೊಳ್ಳುತ್ತಾ ಕಣ್ಣೀರು ಹಾಕುವುದು ಮಾತ್ರ ಗೊತ್ತಿದ್ದ ಈ ಅಮ್ಮಂದಿರು ಈಗ ಆ ಟೀಕೆಗಳಿಗೆ ಉತ್ತರ ಕೊಡುತ್ತಾರೆ. ತಮ್ಮ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವವರೊಡನೆ ಜಗಳ ಮಾಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಬಂಧಿಸಿಟ್ಟ ಸಂಕೋಲೆಗಳನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.‘ ಸುಮಾ ಅನಿಲ್

ಶ್ರೀದೇವಿ ಕಳಸದ | Shridevi Kalasad

|

Feb 04, 2021 | 1:37 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ನಮ್ಮ ಈ ಸರಣಿಯ ಪರಿಕಲ್ಪನೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತೃತಗೊಳಿಸಬೇಕೆಂದು ಯೋಚಿಸುತ್ತಿರುವಾಗಲೇ ನಮಗೆ ಸಿಕ್ಕವರು ಫೋರ್ಥ್ ವೇವ್ ಫೌಂಡೇಶನ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾ ಅನಿಲ್. ಎಲ್ಲ ವಿಶೇಷ ಅಮ್ಮಂದಿರ ಮತ್ತು ವಿಶೇಷ ಮಕ್ಕಳಿಗೆ ತರಬೇತಿ ನೀಡುವಲ್ಲಿ ಭಾಗಿಯಾದವರ ಪರವಾಗಿ ತಮ್ಮ  ಅನುಭವಗಳನ್ನು ಮಾಹಿತಿಪೂರ್ಣವಾಗಿ ಅವರಿಲ್ಲಿ ಹಂಚಿಕೊಂಡಿದ್ದಾರೆ.

ಇವಳು ನನ್ನ ಮಗಳು ಮೇಡಮ್ಮಾರೆ ಹತ್ತು ವರ್ಷಈಕೆಗೆ. ಹುಟ್ಟಿದಾಗಿನಿಂದ ಹೀಗೆ ಕೈಕಾಲುಗಳಲ್ಲಿ ಬಲ ಇಲ್ಲ ಕುತ್ತಿಗೆ ನಿಲ್ಲಲ್ಲ ಎಲ್ಲ ಹಾಸಿಗೆಲೇ ಆಗಬೇಕು. ಇವಳನ್ನು ಹೇಗೆ ಶಾಲೆಗೆ ಸೇರಿಸಿಕೊಳ್ಳುತ್ತಾರೆ ಹೇಳಿ, ಏನಿದ್ದರೂ ಜೀವಮಾನಪೂರ್ತಿ ಹೀಗೆ ಅಂತ ನಿರ್ಧಾರ ಮಾಡಿದ್ದೇವೆ. ನಾವಿರುವವರೆಗೂ ನಡೆಯುತ್ತೆ ಮುಂದೆ ಹೇಗೊ ಅನ್ನುವುದೇ ನಮ್ಮ ಯೋಚನೆ. ಇವಳೂ ಸ್ಕೂಲ್​ಗೆ ಹೋದರೆ ನಿಜವಾಗಲೂ ಖುಷಿ ಮೇಡಂ. ಬೇರೆ ಶಾಲೆಗೆ ಕಳಿಸಲು ನಮ್ಮ ಕೈಲಾಗಲ್ಲ ಮೇಡಂ ದಿನದಿನ ಊಟಕ್ಕೆ ಹೊಂದಿಸುವುದೇ ನಮಗೆ ಸಾಕಾಗುತ್ತದೆ. * ಇವನು ನನ್ನ ಮಗ ಎಂಟು ವರ್ಷ ಏನು ತಿಳುವಳಿಕೆ ಇಲ್ಲ. ಆಗಾಗ ಫಿಟ್ಸ್ ಬರುತ್ತೆ. ಹೇಳಿದ್ದು ತಿಳಿಯಲ್ಲ. ಊಟ ಸ್ನಾನ ಎಲ್ಲವನ್ನು ನಾವೇ ಮಾಡಿಸಬೇಕು. ಉಚ್ಚೆ ಸಂಡಾಸು ಬಂದದ್ದು ತಿಳಿಯಂಗಿಲ್ಲಇವನನ್ನೂ ನಿಮ್ಮ ಶಾಲೆಗೆ ಕರೆದುಕೊಂಡು ಬರಬಹುದಾ? ಅವನಿಗೂ ನೀವು ಕಲಿಸುತ್ತೀರಾ ಮೇಡಂ? * ಇವನಿಗೆ ಕಿವಿ ಕೇಳಂಗಿಲ್ಲ ಮಾತು ಬರಂಗಿಲ್ಲ ಇಲ್ಲಿನ ಶಾಲೆಗೆ ಸೇರಿಸಿಕೊ‍ಳ್ಳಲ್ಲ ಅಂದರು. ಬೇರೆ ಕಿವುಡು ಮೂಕರ ಶಾಲೆಗೆ ಕಳುಹಿಸಬೇಕಂತೆ. ನಾವು ಕೂಲಿನಾಲಿ ಮಾಡಿಕೊಂಡು ಬದುಕುವವರು ಮೇಡಮ್ಮಾರೆ ಆ ಶಾಲೆಗೆಲ್ಲ ಹೇಗೆ ಕಳಿಸಣ ಅದಕ್ಕೆ ಒಂಬತ್ತು ವರ್ಷ ಆದರೂ ಮನೇಲೇ ಇಟ್ಟುಕೊಂಡಿದ್ದೇವೆ. ಈಗ ನಿಮ್ಮ ಶಾಲೆಗೆ ಕರೆದುಕೊಂಡು ಬರಬಹುದಾ? * ಇವಳಿಗೆ ಹದಿಮೂರು ವರ್ಷ ಮೇಡಂ ಇವಳಿಗೆ ಮಾತು ಬರಂಗಿಲ್ಲ ತಿಳುವಳಿಕೆ ಸಹ ಇಲ್ಲ. ಹುಟ್ಟಿದಾಗಿನಿಂದ ಇವಳ ಎಲ್ಲ ಕೆಲಸಗಳೂ ನಾನೇ ಮಾಡುವುದು ಈಗ ದೊಡ್ಡವಳಾಗಿದ್ದಾಳೆ ತಿಂಗಳು ತಿಂಗಳು ಅದು ಬೇರೆ. ತುಂಬಾ ಕಷ್ಟಆಗುತ್ತೆ ಮೇಡಂ. ಏನು ಮಾಡುವುದು ಗೊತ್ತಿಲ್ಲ ಇವಳನ್ನು ನಿಮ್ಮ ಶಾಲೆಗೆ ಸೇರಿಸಬಹುದಾ? ಏನಾದರೂ ಸಹಾಯ ಆಗುತ್ತಾ?

ಸಾಂದರ್ಭಿಕ ಚಿತ್ರ

ಮೇಲಿನವು ಮೂರು ವರ್ಷಗಳ ಹಿಂದೆ ನಾನು ಕೆಲಸ ಮಾಡುವ ‘ಫೋರ್ಥ್ ವೇವ್ ಫೌಂಡೇಶನ್‘ನ ‘ನನಗೂ ಶಾಲೆ‘ ಯೋಜನೆಗಾಗಿ ವಿಶಿಷ್ಟ ಚೇತನ ಮಕ್ಕಳನ್ನು ಹಾಗೂ ಅವರ ಪಾಲಕರನ್ನು ಸಂದರ್ಶಿಸಲು ನಾವು ಅವರ ಮನೆಗಳಿಗೆ ಭೇಟಿ ನೀಡಿದಾಗ, ನಮಗೆ ಎದುರಾದ ಪ್ರಶ್ನೆಗಳ ಹಾಗೂ ಹತಾಶ ತಾಯಂದಿರ ಮನದ ಅಳಲುಗಳ ಕೆಲವು ಉದಾಹರಣೆಗಳು ಮಾತ್ರ.

ಒಬ್ಬೊಬ್ಬರದ್ದು ಒಂದೊಂದು ಕಥೆ. ಎರಡನೂರು ಮಕ್ಕಳ, ಅವರ ತಾಯಂದಿರ ಮಾತುಗಳಿಗೆ ಕಿವಿಯಾದಂತೆ ನಮಗೆ ಅರಿವಿಲ್ಲದ ಕ್ರೂರ ಮತ್ತು ಅಮಾನವೀಯ ಮುಖಗಳ ಪರಿಚಯವಾಗುತ್ತಾ ಹೋಯಿತು.  ಕೂಲಿಗೆ ಹೋಗಬೇಕಾದ ತಾಯಿ ವಿಶಿಷ್ಟ ಚೇತನ ಮಗುವನ್ನು ಮನೆಯಲ್ಲಿ ಕಟ್ಟಿಹಾಕಿ ತಟ್ಟೆಯಲ್ಲಿ ಅನ್ನ ಇಟ್ಟು ಹೊರಟರೆ ಕೈಗಳನ್ನು ಬಳಸಿ ತಿನ್ನಲು ಬಾರದ ಆ ಮಗು ಅದನ್ನು ಪ್ರಾಣಿಗಳಂತೆ ತಿನ್ನುವ ಕಥೆ, ಮಗುವು ಕುಳಿತಲ್ಲೇ ಶೌಚ ಮಾಡುತ್ತದೆ ಎಂದು ಊಟ ನೀಡದ ಕತೆ. ಸಮಾಜದ ತಿರಸ್ಕಾರದಿಂದ ಬೇಸತ್ತು ಈ ಮಕ್ಕಳನ್ನು ಸಂಪೂರ್ಣ ಉಪೇಕ್ಷೆಗೆ ಒಳಪಡಿಸಿರುವ ಕತೆ… ಒಂದಾ ಎರಡಾ?

ಇದು ಅಮ್ಮಂದಿರಿಗೂ ಇಷ್ಟವಿಲ್ಲದ್ದುಆದರೂ ಇದನ್ನು ಮಾಡದೇ ವಿಧಿಯಿಲ್ಲ ಎಂಬ ಪರಿಸ್ಥಿತಿ. ಪರಿಣಾಮ ಅಪರಾಧೀ ಮನೋಭಾವದಿಂದ ಕುಗ್ಗಿದ ತಾಯಂದಿರು. ಇಲ್ಲಿ ಅಮ್ಮಂದಿರಷ್ಟೇ ಕಠಿಣವಾಗಿ ಶಿಕ್ಷೆ ನೀಡುವ ರೀತಿಯಲ್ಲಿ ಮಕ್ಕಳನ್ನು ನಡೆಸಿಕೊಳ್ಳುತ್ತಾರೆ ಎಂದು ನಾವು ಭಾವಿಸಿದರೆ ನಮಗಿಂತ ದಡ್ಡರು ಮತ್ತೊಬ್ಬರಿಲ್ಲ. ತಮ್ಮ ಅಂಗವಿಕಲತೆಯನ್ನೇ ನೆಪಮಾಡಿಕೊಂಡು ತಾಯಂದಿರನ್ನು ಹಿಂಸೆಗೆ ಒಳಪಡಿಸುವ ಮಕ್ಕಳ ಕಥೆಗಳೂ ನಮ್ಮ ಮುಂದೆ ಬಿಚ್ಚಿಕೊಂಡು ನಮಗೆ ಮತ್ತೊಂದು ಲೋಕದದರ್ಶನ ಮಾಡಿಸಿದವು.

ಈ ವಾಸ್ತವವು ಕ್ರೂರತೆ ಎನಿಸಿದರೆ, ಈ ಮಕ್ಕಳನ್ನೇ ಸರ್ವಸ್ವ ಎಂದುಕೊಂಡು ಹತ್ತಾರು ಕಿ.ಮೀ ಇವರುಗಳನ್ನು ಹೊತ್ತುಕೊಂಡು ಅವರಿಗೆ ಸಾಧ್ಯವಾದಂತಹ ಚಿಕಿತ್ಸೆ ತರಬೇತಿ ಕೊಡಿಸಲು ಹೆಣಗುತ್ತಿರುವ ಅಮ್ಮಂದಿರದು ಮಾನವೀಯ ಮುಖಗಳ ಕತೆ.

ಇವುಗಳನ್ನು ಕೇಳಿದಾಗ ನಮಗೆ ಅರ್ಥವಾದ ವಿಷಯವೆಂದರೆ:

ಅಮ್ಮನಾಗುವುದೆಂದರೆ ಪುಳಕ, ಅಮ್ಮನಾಗುವುದೆಂದರೆ ಅದು ಹೊಸ ಕನಸುಗಳಿಗೆ ಮುನ್ನುಡಿ, ಅಮ್ಮನಾಗುವುದೆಂದರೆ… ಇವೆಲ್ಲ ವಿಶೇಷಣಗಳು ನಿಜವಾಗುವುದು ಹುಟ್ಟಿದ ಮಗು ಆರೋಗ್ಯವಾಗಿದ್ದು ಎಲ್ಲರಂತೆ ಸ್ವಾವಲಂಬಿಯಾದಾಗ ಮಾತ್ರ, ಹುಟ್ಟಿದ ಮಗು ಮಕ್ಕಳು ಯಾವುದಾದರೂ ಅಂಗವಿಕಲತೆಗೆ ಒಳಗಾಗಿ ವಿಶೇಷ ಅಗತ್ಯಉಳ್ಳ ಮಗುವಾಗಿ ಅಮ್ಮನ ಪೂರ್ಣ ಗಮನವನ್ನು ತನ್ನೆಡೆಗೆ ಬೇಡುವಂತಹ ಪರಿಸ್ಥಿತಿ ಬಂದಾಗ ಮೇಲಿನ ಎಲ್ಲ ವಿಶೇಷ ಉಕ್ತಿಗಳು ಹೊರೆಯಾಗಲಾರಂಭಿಸುತ್ತವೆ. ಅಮ್ಮನ ಜವಾಬ್ದಾರಿಗಳು ಕೈಕಾಲಿಗೆ ತೊಡಿಸಿದ ಬೇಡಿಗಳಾಗುತ್ತವೆ. ಜೀವನದಲ್ಲಿ ಹತಾಶೆ ಮೂಡಲಾರಂಭಿಸುತ್ತದೆ. ಅದರಲ್ಲೂ ಆ ಮಗು ಜನಿಸಿದ ಕುಟುಂಬವು ಆರ್ಥಿಕವಾಗಿ ಸಬಲವಿಲ್ಲದೆ ಈ ಮಗುವಿಗೆ ಯಾವುದೇ ರೀತಿಯ ಶಾಲಾ ಶಿಕ್ಷಣವನ್ನಾಗಲಿ ಅಥವಾ ಬೇರೆ ರೀತಿಯ ಕೌಶಲದ ತರಬೇತಿಗಳನ್ನಾಗಲಿ ನೀಡಲಾಗದಿದ್ದಾಗ ಆ ಮಗು ಮನೆಗೆ ಹೊರೆಯಾಗಲಾರಂಭಿಸುತ್ತದೆ ಮತ್ತು ಅದರ ಅಮ್ಮಅದನ್ನು ಹೆತ್ತ ಕಾರಣಕ್ಕೆ ತನ್ನದಲ್ಲದ ತಪ್ಪಿಗೆ  ಕುಟುಂಬದ, ಸಮಾಜದ ತಿರಸ್ಕಾರಕ್ಕೆ ಒಳಗಾಗಬೇಕಾಗುತ್ತದೆ. ಇಂತಹ ಪರಿಸ್ಥಿಯಲ್ಲಿ ಆ ಮಗುವನ್ನು ಸಂಭಾಳಿಸಿ ತಮ್ಮದಲ್ಲದ ಜೀವನವನ್ನು ನಡೆಸಬೇಕಾದ ಒತ್ತಡಕ್ಕೆ ಈ ಅಮ್ಮಂದಿರು ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಹೊರಗಿನಿಂದ ದೊರಕುವ ಯಾವುದೇ ಸಹಾಯ, ಆಸರೆ ಅವರಿಗೆ ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂತೆ ಕಾಣುತ್ತದೆ.

ಸಾಂದರ್ಭಿಕ ಚಿತ್ರ

ಅದೇ ರೀತಿ ನಮ್ಮ ‘ನನಗೂ ಶಾಲೆ‘ ಯೋಜನೆ ಭರವಸೆಯ ಕಿರಣದಂತೆ ಕಂಡಿತು. ಇದರ ಮೂಲಕ ನಾವು ನಾಲ್ಕು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡೆವು. ಯಾವುದೇ ರೀತಿಯ ಅಂಗವಿಕಲತೆ ಹೊಂದಿರುವ ಮಕ್ಕಳನ್ನು ತರಬೇತುಗೊಳಿಸಿ ಮುಖ್ಯವಾಹಿನಿ ಶಾಲೆಗಳಿಗೆ ದಾಖಲು ಮಾಡುವ ನಮ್ಮಈ ಯೋಜನೆಯ ಬಗ್ಗೆ ವಿವರಿಸಿದಾಗ, ಮೊದಲಿಗೆ ಬಹುತೇಕ ಅಪಸ್ವರಗಳೇ ಕೇಳಿಬಂದವು. ಆದರೆ ನಮ್ಮನ್ನು ನಂಬಿ ನಮ್ಮ ಜೊತೆ ಕೈಗೂಡಿಸಿದ್ದು ಮಾತ್ರ ನಮ್ಮಈ ತಾಯಂದಿರು. ಮನೆಯಲ್ಲಿ ಮೂಲೆಗೆ ತಳ್ಳಿರುವ ಈ ಮಕ್ಕಳಿಗೆ ಹೊರಬರುವ ಅವಕಾಶ ಸಿಕ್ಕಿರುವುದೇ ಒಂದು ದೊಡ್ಡ ವರದಾನ ಎಂಬಂತೆ ಅವರು ತಮ್ಮ ಮಕ್ಕಳನ್ನು ನಮ್ಮ ಶಾಲಾ ಸಿದ್ಧತಾ ಕೇಂದ್ರಗಳಿಗೆ ಕರೆತಂದರು. ನಮ್ಮ ಅಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನು ಬೆರಗಿನಿಂದ ನೋಡಿ, ನಾವು ಒದಗಿಸಿದ ವಿವಿಧ ಥೆರಪಿಗಳ ಸೇವೆಯನ್ನು ಕ್ರಮ ತಪ್ಪದೇ ಅನುಸರಿಸಿ ತಮ್ಮ ಮಕ್ಕಳನ್ನು ತರಬೇತುಗೊಳಿಸಲಾರಂಭಿಸಿದರು. ಇದರ ಪರಿಣಾಮ ಅವರ ಮಕ್ಕಳ ಮೇಲಷ್ಟೇ ಅಲ್ಲದೇ ಅವರ ಮೇಲೂ ಆಗಲಾರಂಭಿಸಿದ್ದು ನಮಗೆ ಗೋಚರವಾಗಲಾರಂಭಿಸಿತು.

ಶಾಲಾ ಸಿದ್ಧತಾ ಕೇಂದ್ರ ಆರಂಭಿಸಿದ ಮೊದಲ ವರ್ಷದಲ್ಲಿ ನಮಗೆ ಕಂಡದ್ದು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡ ತಾಯಂದಿರ ಮುಖಗಳು, ಅದರಲ್ಲೂ ತಮ್ಮ ಮಕ್ಕಳ ಬಗ್ಗೆ ಬರಿದೇ ಚಿಂತೆ ಹೊತ್ತ ಮಾತುಮಾತಿಗೂ ಹನಿಗಣ್ಣಾಗುವ ತಾಯಂದಿರು. ತಮ್ಮ ಮಕ್ಕಳು ಇತರರಂತೆ ಇಲ್ಲ ಎಂಬ ಕೀಳರಿಮೆಯಿಂದ ಕುಗ್ಗಿಹೋದ ಅಮ್ಮಂದಿರು. ತಮ್ಮ ಮಕ್ಕಳ ಅಂಗವಿಕಲತೆಯನ್ನು ಒಪ್ಪಲಾರದ ಮನಸ್ಥಿತಿಯ ಹೆ‍ಣ್ಣುಮಕ್ಕಳು. ಆ ಮಕ್ಕಳ ಸ್ಥಿತಿಗೆ ತಮ್ಮ ಪೂರ್ವಜನ್ಮದ ಪಾಪಕಾರಣ ಎಂದು ಬಲವಾಗಿ ನಂಬಿದ ಪಾಲಕರು. ಇದರೊಂದಿಗೆ ಹೊರಲಾರದ ಸಂಸಾರದ ಭಾರ ಹೊತ್ತು ತಮ್ಮದೇ ಸಂಕೋಲೆಗಳಲ್ಲಿ ಬಂಧಿಯಾಗಿ ಹೊರಬರಲು ಚಡಪಡಿಸುತ್ತಿರುವ ಜೀವಗಳನ್ನು.

ಆ ಸಮಯದಲ್ಲಿ ಅವರಿಗೆ ಅವರ ಮಕ್ಕಳ ಸಾಮರ್ಥ್ಯದ ಮೇಲೆ ಭರವಸೆ ಮೂಡಿಸಲು ನಾವು ಪದೇಪದೇ ಕೌನ್ಸ್‌ಲಿಂಗ್‌ ನ ಮೊರೆ ಹೋಗಬೇಕಾಗುತ್ತಿತ್ತು.  ಅವರಿಗೆ ಕೌನ್ಸ್‌ಲಿಂಗ್‌ ಮಾಡುತ್ತಾ ಅವರ ನೋವುಗಳಿಗೆ ಕಿವಿಯಾಗಿ ಅವರ ಪರಿಸ್ಥಿತಿಗಳನ್ನು ನೋಡಿ ನಾವು ಹನಿಗಣ್ಣಾದಕ್ಷಣಗಳಿಗೆ ಲೆಕ್ಕವಿಲ್ಲ. ಅಂತೆಯೇ ಶಾಲೆಗೆ ಬಂದ ಮಗುವಿಗೆ ಅಆಇಈ ಹೇಳಿಕೊಡದೆ ಊಟ ಮಾಡುವ, ಸ್ನಾನಮಾಡುವ, ಬಟ್ಟೆ ಹಾಕಿಕೊಳ್ಳುವಂತಹ ಜೀವನ ಕೌಶಲಗಳನ್ನು ಮತ್ತು ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮಾಡಿಸುವಾಗ ನಮ್ಮ ಉದ್ದೇಶ ಅರ್ಥವಾಗದ ತಾಯಂದಿರ ಕೋಪಕ್ಕೆ ಬೈಗುಳಕ್ಕೆ ತುತ್ತಾದ ಕ್ಷಣಗಳಿಗೂ ಲೆಕ್ಕವಿಲ್ಲ.

ನೀವು ಏನಾದರೂ ಮಾಡಿ ಮೇಡಂ ಆದರೆ ಏನು ತಿಳಿವಳಿಕೆನೇ ಇಲ್ಲಅವನಿಗೆ ಅವ ಹೇಗೆ ಕಲೀತಾನೆ ಕೋಪ, ಹಸಿವು ಗೊತ್ತಾಗಲ್ಲರೀ ಸುಮ್ಮನೆ ನಾವು ಅವರ ಕೆಲಸ ಮಾಡಿದರೆ ಆತು ಅನ್ನುವ ಅಮ್ಮಂದಿರಿಗೆ, ಅವರ ಮಕ್ಕಳು ಮಾಡಬಲ್ಲರು ಎಂದು ಅರ್ಥ ಮಾಡಿಸುವಾಗ ನಾವು ಪಟ್ಟ ಶ್ರಮಕ್ಕೆ ಉತ್ತರ ದೊರಕಲಾರಂಭಿಸಿರುವುದು ಈಗ ಮೂರು ವರ್ಷಗಳ ನಂತರ…

ಸಾಂದರ್ಭಿಕ ಚಿತ್ರ

ಆ ಮಕ್ಕಳು ತಮ್ಮ ಕೆಲಸ ತಾವೇ ಮಾಡಿಕೊಳ್ಳುವಷ್ಟು ಸುಧಾರಣೆಯಾಗಿ ಅಮ್ಮಂದಿರಿಗೂ ನಮ್ಮ ಮೇಲೆ ಭರವಸೆ ಮೂಡಿ ನಮ್ಮ ಬಳಿ ಬಂದು ಖುಷಿಖುಷಿಯಾಗಿ. ನಾವೇ ಕೈಬಿಟ್ಟಿದ್ದ ನಮ್ಮ ಮಗುವಿಗೆ ನೀವು ತರಬೇತಿ ಕೊಟ್ಟಿದ್ದರಿಂದ ಇವತ್ತು ಅವನು ಅವನ ಕೆಲಸ ತಾನೇ ಮಾಡಿಕೊಳ್ಳುತ್ತಾನೆ. ಇದರಿಂದ ನನ್ನ ಮನಸ್ಸಿಗೆ ನಿರಾಳವಾಗಿದೆ ಮೇಡಮ್ ಅವನ ಚಿಂತೆ ಎಷ್ಟೊಂದು ಕಮ್ಮಿಯಾಗಿದೆ ಎಂದು ಹೇಳುವಾಗ ಆ ಅಮ್ಮಂದಿರ ಕಣ್ಣಿನಲ್ಲಿ ಕಾಣುವ ಹೊಸ ವಿಶ್ವಾಸವನ್ನು ಕಂಡಾಗ.

‘ನನಗೂ ಶಾಲೆ‘ ಮಕ್ಕಳಿಗಾಗಿ ಕೆಲಸ ಮಾಡಿದರೂ ಅಮ್ಮಂದಿರ ಜೀವನವೂ ಅದರಿಂದ ಬಹಳಷ್ಟು ಬದಲಾಗಿದೆ ಎಂಬುದು ಈಗ ನಮಗೆ ಹೆಮ್ಮೆ ತರುವ ವಿಷಯ. ಮಕ್ಕಳ ಥೆರಪಿಗಾಗಿ ಅವರೊಡನೆ ಚಟುವಟಿಕೆ ಮಾಡುತ್ತಾ ಅಮ್ಮಂದಿರು ಮಕ್ಕಳಾದರು. ತಾವು ಬಣ್ಣಬಳಿದರು, ಆಟವಾಡಿದರು, ಸಂಗೀತ ವಾದ್ಯಗಳನ್ನು ನುಡಿಸಲು ಪ್ರಯತ್ನಪಟ್ಟರು.

ಅವರ ಮಕ್ಕಳ ತೊಂದರೆಗಳಿಗೆ ಹೊಸ ಹೊಸ ರೀತಿಯ ಮಾರ್ಗೋಪಾಯಗಳನ್ನು ಹುಡುಕಿದರು. ಇದೆಲ್ಲವೂ ಅವರೊಳಗಿನ ನೋವನ್ನು ಹೊರತರಲು ಸಹಾಯಕವಾಗಿ ಅವರಲ್ಲಿ ಅದ್ಭುತ ಬದಲಾವಣೆಗಳನ್ನು ತಂದಿತು. ಅವರಲ್ಲಿದ್ದ ಕೀಳರಿಮೆಗಳನ್ನು ಕಡಿಮೆಮಾಡಿ ಅವರ ಮಕ್ಕಳ ಮೇಲೆ ವಿಶ್ವಾಸ ಹೆಚ್ಚಿಸಿತು ಮತ್ತು ಈಗ ತಮ್ಮ ಮಕ್ಕಳ ಭಾವನೆಗಳನ್ನು ಗುರುತಿಸುವ ಮತ್ತು ಅದಕ್ಕೆ ಬೆಲೆಕೊಡುವ ಮನಸ್ಥಿತಿಗೆ ಅವರನ್ನು ತಂದಿದೆ.  ಮುಂಚೆ ಅವರ ಮಕ್ಕಳನ್ನು ಬೇರೆಯವರು ಆಡಿಕೊಂಡಾಗ ಅವರ ಅದೃಷ್ಟವನ್ನು ಬೈದುಕೊಳ್ಳುತ್ತಾ ಕಣ್ಣೀರು ಹಾಕುವುದು ಮಾತ್ರಗೊತ್ತಿದ್ದ ಈ ಅಮ್ಮಂದಿರು ಈಗ ಆ ಟೀಕೆಗಳಿಗೆ ಉತ್ತರ ಕೊಡುತ್ತಾರೆ. ತಮ್ಮ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವವರೊಡನೆ ಜಗಳ ಮಾಡುತ್ತಾರೆ.  ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಬಂಧಿಸಿಟ್ಟ ಸಂಕೋಲೆಗಳನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಶಾಲೆಗೆ ಬರುವ ಪ್ರತಿಯೊಬ್ಬ ಅಮ್ಮನೂ ಮತ್ತೊಬ್ಬ ಅಮ್ಮನ ನೋವಿಗೆ ಹೆಗಲಾಗುತ್ತಾಳೆ ನೋವಿನ ಕತೆಗೆ ಕಿವಿಯಾಗುತ್ತಾಳೆ. ಇದು ಅವರಿಗೆ ನೀಡುತ್ತಿರುವ ಸಾಂತ್ವನದ ಹರಿವೂ ಬಹಳ ದೊಡ್ಡದಾಗಿದೆ. ತಮ್ಮ ಮಗುವನ್ನು ತಾವಷ್ಟೇ ಅಲ್ಲದೆ ಮತ್ತೊಬ್ಬರು ಸಹ ಕಾಳಜಿ ಮಾಡುತ್ತಾರೆ, ಅವರ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆ ಅವರ ಬದುಕಿಗೆ ನಿರಾಳತೆಯನ್ನು ತಂದಿದೆ. ಈಗ ನಮಗೆ ಕಾಣಸಿಗುವುದು ಹತಾಶ ಮುಖಗಳಲ್ಲ ಬದಲಿಗೆ ಜೀವನೋತ್ಸಾಹ ತುಂಬಿದ ಮುಖಗಳು. ಆತ್ಮವಿಶ್ವಾಸ ತುಂಬಿದ ದನಿಗಳು. ಬೇರೆಯವರಿಗೆ ಭರವಸೆ ತುಂಬಬಲ್ಲ ಮಾತನಾಡುವ ಅಮ್ಮಂದಿರು. ಇವರೆಲ್ಲರೂ ಈಗ ತಮ್ಮೊಳಗಿನ ಶಕ್ತಿಯನ್ನು ಗುರುತಿಸಿಕೊಂಡು ಪುಟಿದೆದ್ದು ನಿಂತಿದ್ದಾರೆ ಜೀವನದ ಯಾವುದೇ ಸವಾಲುಗಳನ್ನು ಎದುರಿಸುವ ಮಾತನಾಡುತ್ತಾರೆ. ಇಲ್ಲಿ ನಾವು ನೆನಪಿಡಬೇಕಾದ ವಿಷಯ ಇವರೆಲ್ಲ ಕೆಳಮಧ್ಯಮವರ್ಗದ, ಗ್ರಾಮೀಣ ಹಿನ್ನಲೆಯ ಅತಿ ಕಡಿಮೆ ವಿದ್ಯಾಭ್ಯಾಸ ಪಡೆದ ಹೆಣ್ಣುಮಕ್ಕಳು ಎಂಬುದು.

ಮೇಡಮ್ ನಾನು ಮನೆಯೊಳಗೆ ಕೂತು ಮಗುವನ್ನು ಒಳಗೆ ಇಟ್ಟಿದ್ದರೆ ನನಗೆ ಪ್ರಪಂಚ ಜ್ಞಾನವೇ ಬರುತ್ತಾ ಇರಲಿಲ್ಲ. ನನ್ನ ಕಷ್ಟ ಮಾತ್ರ ದೊಡ್ಡದು ಅಂತ ಅಂದುಕೊಂಡು ಜೀವನಮಾಡುತ್ತಿದ್ದೆ. ನನ್ನ ಕಷ್ಟಕ್ಕೆ ಏನು ಪರಿಹಾರ ಇಲ್ಲ ಅಂತ ತೀರ್ಮಾನ ಮಾಡಿಕೊಂಡಿದ್ದೆ ಈಗ ಅದು ಸರಿಯಲ್ಲ ಅಂತ ತಿಳೀತಿದೆ ಮೇಡಮ್… ಅನ್ನುವಾಗ ಅವರಲ್ಲಿನ ಬದಲಾದ ಹೆಣ್ಣುಮಗಳ ಆತ್ಮವಿಶ್ವಾಸ ಎದ್ದುಕಾಣುತ್ತದೆ.

ಇವರನೆಲ್ಲ ನೋಡುವಾಗ ನನಗೆ ಅನ್ನಿಸುವುದು ಅಮ್ಮನಾಗುವುದು ಸುಲಭವಲ್ಲ ಅದರಲ್ಲೂ ಈ ರೀತಿ ವಿಶೇಷ ಅಮ್ಮನಾಗುವುದು ಎಲ್ಲರಿಗೂ ಸಾಧ್ಯವಿಲ್ಲವೇ ಇಲ್ಲ. ಹಾಗಂತ ಇವರಿಗೆ ಸಿಟ್ಟು ಕೋಪ ಹತಾಶೆಗಳು ಇಲ್ಲವೆಂದಲ್ಲ ಅಥವಾ ಇವರು ದೇವತೆಗಳೆಂದು ನಾನು ಹೇಳುತ್ತಿಲ್ಲ ನನಗೆ ಇವರಲ್ಲಿ ವಿಶೇಷವೆನಿಸುವುದು ಅವರಲ್ಲಿನ ಪುಟಿದೇಳುವ ಶಕ್ತಿ. ತಮ್ಮ ಕಷ್ಟಗಳ ನಡುವೆಯೂ ಸಾಧಿಸುವ ಛಲ. ಯಾವುದೇ ಸಣ್ಣ ಭರವಸೆ ಸಿಕ್ಕರೂ ಅದನ್ನು ಒಪ್ಪಿ ಮುಂದುವರಿಯುವ ಸಕಾರಾತ್ಮಕಗುಣ. ಪಂಜರದಲ್ಲಿ ಬಂದಿಯಾಗಿದ್ದ ಅಮ್ಮನೆಂಬ ಹಕ್ಕಿ ಹೊರಬಂದು ಹಾರಲು ಪ್ರಯತ್ನಿಸುತ್ತಿದೆ ಹೊಸ ಆಕಾಶಕ್ಕಾಗಿ ಹುಡುಕಾಡುತ್ತಿದೆ. ಆ ಹುಡುಕಾಟದಲ್ಲಿ ಜೊತೆಯಾಗುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ.

ಇದು ಸದಾ ನನಗೆ ಸ್ಫೂರ್ತಿ ತುಂಬುವ ವಿಷಯ. ನಾನು ಜೀವನದ ಸವಾಲುಗಳನ್ನುಇಂದು ಸಶಕ್ತವಾಗಿ ಸಕಾರಾತ್ಮಕವಾಗಿ ಎದುರಿಸಿ ನಿಂತಿದ್ದೇನೆ ಎಂದರೆ ಅದರಲ್ಲಿ ಈ ಅಮ್ಮಂದಿರ ಕೊಡುಗೆ ದೊಡ್ಡದಿದೆ.

ನಾನೆಂಬ ಪರಿಮಳದ ಹಾದಿಯಲಿ: ಇದ್ದಲ್ಲಿ ಅಗಿ ಬಿದ್ದಲ್ಲಿ ಚಿಗಿ ಇದೇ ಬದುಕಿನ ‘ಆಸ್ವಾದ’

Follow us on

Most Read Stories

Click on your DTH Provider to Add TV9 Kannada