ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್; ಈ ಪರಿಸ್ಥಿತಿ ಬರಲು ಅಭಿಮಾನಿಗಳೇ ಕಾರಣ
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕಾಲಿವುಡ್ ನಟ ಅಜಿತ್ ಕುಮಾರ್ ಅವರು ದಾಖಲಾಗಿದ್ದಾರೆ. ಅಭಿಮಾನಿಗಳು ಮಾಡಿದ ಅವಾಂತರದಿಂದಲೇ ಅಜಿತ್ ಅವರಿಗೆ ಈ ಪರಿಸ್ಥಿತಿ ಬಂದಿದೆ. ಇತ್ತೀಚೆಗಷ್ಟೇ ಅಜಿತ್ ಕುಮಾರ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆ ಖುಷಿಯ ನಡುವೆಯೇ ಈಗ ಬೇಸರದ ಸುದ್ದಿ ಕೇಳಿಬಂದಿದೆ.

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟಕ್ಕೂ ಅಜಿತ್ ಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು? ಕಾಲಿಗೆ (Leg Injury) ಪೆಟ್ಟಾಗಿದೆ. ಬೇಸರದ ಸಂಗತಿ ಏನೆಂದರೆ ಅವರಿಗೆ ಈ ಸಮಸ್ಯೆ ಬರಲು ಅಭಿಮಾನಿಗಳೇ ಕಾರಣ! ಹೌದು, ಅಜಿತ್ ಅವರನ್ನು ಭೇಟಿ ಮಾಡಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಮುಗಿಬಿದ್ದರು. ಆ ಜನಜಂಗುಳಿಯಲ್ಲಿ ಅಜಿತ್ ಕುಮಾರ್ ಕಾಲಿಗೆ ಏಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ.
ಇತ್ತೀಚೆಗೆ ಅಜಿತ್ ಕುಮಾರ್ ಅವರು ದೆಹಲಿಗೆ ತೆರಳಿದ್ದರು. ಅಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಚಿತ್ರರಂಗದಲ್ಲಿ ಸಾಧನೆ ಮಾಡಿದ ಅಜಿತ್ ಅವರಿಗೆ ಈ ಗೌರವ ಸಿಕ್ಕಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಚೆನ್ನೈಗೆ ವಾಪಸ್ ಬರುವಾಗ ಅಜಿತ್ ಅವರಿಗೆ ಅಭಿಮಾನಿಗಳಿಂದಲೇ ತೊಂದರೆ ಆಗಿದೆ.
ದೆಹಲಿಯಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಅಜಿತ್ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅಜಿತ್ ಬರುತ್ತಿರುವ ವಿಷಯ ಮೊದಲೇ ತಿಳಿದಿದ್ದರಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಜನರನ್ನು ನಿಯಂತ್ರಿಸುವುದೇ ಕಷ್ಟ ಆಯಿತು. ಈ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಅಜಿತ್ ಕುಮಾರ್ ಅವರ ಕಾಲಿಗೆ ಪೆಟ್ಟಾಯಿತು.
ಇದನ್ನೂ ಓದಿ: ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಬಾಲಯ್ಯ, ಅಜಿತ್ ಕುಮಾರ್, ಶೇಖರ್ ಕಪೂರ್
ಆದರೆ ಈ ಸಮಸ್ಯೆ ತೀರ ಗಂಭೀರವಾಗಿಲ್ಲ. ಸದ್ಯಕ್ಕೆ ಅವರಿಗೆ ಫಿಜಿಯೋ ಥೆರಪಿ ನೀಡುವ ಸಲುವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ ಅಭಿಮಾನಿಗಳು ಆತಂಕಪಡುವ ಅವಶ್ಯಕತೆ ಇಲ್ಲ.
ಅಜಿತ್ ಕುಮಾರ್ ಅವರು ಹಲವು ವರ್ಷಗಳಿಂದ ಚಿತ್ರರಂದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಲಾ ಕ್ಷೇತ್ರದಲ್ಲಿನ ಅವರ ಸಾಧನೆಗಾಗಿ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ತಮ್ಮ ನೆಚ್ಚಿನ ನಟನಿಗೆ ಈ ಗೌರವ ಸಿಕ್ಕಿದ್ದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಅತಿ ಉತ್ಸಾಹದಲ್ಲಿ ಅಭಿನಂದನೆ ತಿಳಿಸಲು ತೆರಳಿದಾಗ ಜನರಿಂದಲೇ ಅಜಿತ್ ಅವರಿಗೆ ತೊಂದರೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








