AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ!

ಕರ್ನಾಟಕದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 8 ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. PWD, ವಿದ್ಯುತ್ ಇಲಾಖೆ, ಜಲಮಂಡಳಿ ಅಧಿಕಾರಿಗಳು ಸೇರಿ ಹಲವರ ಕಚೇರಿ ಮತ್ತು ಮನೆಗಳ ಮೇಲೆ ಲೋಕಾ ದಾಳಿ ನಡೆದಿದೆ.

ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ!
ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ!
ಭಾವನಾ ಹೆಗಡೆ
|

Updated on: Mar 05, 2026 | 8:32 AM

Share

ಬೆಂಗಳೂರು, ಮಾರ್ಚ್​ 05: ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ಲೋಕಾಯುಕ್ತ (Lokayukta Raid) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ, ಧಾರವಾಡ, ಹಾಸನ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.

ಎಲ್ಲೆಲ್ಲಿ, ಯಾರ ವಾಸ್ತವ್ಯಗಳ ಮೇಲೆ ಲೋಕಾ ದಾಳಿ?

ಬೆಳಗ್ಗೆ ಸುಮಾರು 6 ಗಂಟೆಯಿಂದಲೇ ಲೋಕಾಯುಕ್ತ ಪೊಲೀಸರು ಹಲವು ತಂಡಗಳಾಗಿ ವಿಭಜನೆಗೊಂಡು ದಾಳಿ ಆರಂಭಿಸಿದ್ದಾರೆ. ಬೆಂಗಳೂರು ನಗರದಲ್ಲಿ ವೆಟರ್ನರಿ ಕಾಲೇಜು ಹೆಬ್ಬಾಳದ ಅಸಿಸ್ಟೆಂಟ್ ಪ್ರೊಫೆಸರ್ ಇಂದರೇಶ್ ಹಾಗೂ ಸಿಂಗನಾಯಕನಹಳ್ಳಿ ಕೋ-ಆಪರೇಟಿವ್ ಸೊಸೈಟಿಯ ಸಿಇಒ ಶಶಿಧರ್ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಯಾದಗಿರಿಯಲ್ಲಿ ಎಲೆಕ್ಟ್ರಿಕಲ್ ಇಲಾಖೆ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ವಿರೇಶ್ ಹಿರೇಮಠ್ ಅವರ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಮಂಡ್ಯದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್. ಸತೀಶ್ ಅವರ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಧಾರವಾಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಂ.ಕೆ. ಸುರಕೋಡ ಅವರ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಹೈಡ್ರಾಮಾ!

ಹಾಸನ ಮಹಾನಗರ ಪಾಲಿಕೆಯ ಎಇಇ ಎಂ.ಸಿ. ಸತ್ಯನಾರಾಯಣ ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ಅಧಿಕಾರಿಗಳು ಬಾಗಿಲು ತೆರೆಯದೆ ಹೈಡ್ರಾಮ ನಡೆದ ಘಟನೆ ಕೂಡ ಕಂಡುಬಂದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಅಧಿಕಾರಿಗಳ ತಂಡ ಮನೆ ಮುಂದೆ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು. ಲೋಕಾಯುಕ್ತ ಡಿವೈಎಸ್‌ಪಿ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಮೈಸೂರಿನಲ್ಲಿ ಜಲಮಂಡಳಿಯ ಎಇಇ ಹಾಗೂ ಇಇ (ಇನ್‌ಚಾರ್ಜ್) ಆಶಿಫ್ ಇಕ್ಬಾಲ್ ಅವರ ನಿವಾಸದಲ್ಲಿ ಪರಿಶೀಲನೆ ನಡೆಯುತ್ತಿದೆ. ವಿಜಯಪುರದಲ್ಲಿ ಕೃಷ್ಣಭಾಗ್ಯ ಜಲ ನಿಗಮದ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ. ಅವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡಸಿದ್ದಾರೆ.

ಇದನ್ನೂ ಓದಿ ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್, ದೇವರ ಫೋಟೊಗಳ ಫ್ರೇಮ್​ನಲ್ಲಿಟ್ಟು ಮಾರಾಟ: ಬಯಲಾಯ್ತು ಜೋಡಿಯ ಮೋಜು-ಮಸ್ತಿ ರಹಸ್ಯ

ಲೋಕಾ ದಾಳಿ ವೇಳೆ ಕಾಣಿಸಿಕೊಂಡ ಹಾವು!

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ್ ವಾಲಪ್ಪ ನಾಯಕ್ ಅವರ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅವರ ಮನೆಗಳ ಜೊತೆಗೆ ಬಾಗಲಕೋಟೆಯ ಪೋಸ್ಟಲ್ ಕಾಲೋನಿಯಲ್ಲಿರುವ ಅವರ ಸಹೋದರ ಭೀಮಸಿಂಗ್ ನಾಯಕ್ ಅವರ ಮನೆ ಮೇಲೂ ದಾಳಿ ನಡೆದಿದೆ. ಭೀಮಸಿಂಗ್ ನಾಯಕ್ ಅವರು ಬಾಗಲಕೋಟೆ ಡಿಎಆರ್‌ನಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದು, ಬಾಗಲಕೋಟೆ ತಾಲೂಕಿನ ಬಿಲ್ ಕೆರೂರು ಗ್ರಾಮದಲ್ಲಿರುವ ಅವರ ಮೂಲ ನಿವಾಸದಲ್ಲಿಯೂ ಪರಿಶೀಲನೆ ನಡೆಸಲಾಗಿದೆ.

ಬಾಗಲಕೋಟೆ ಲೋಕಾಯುಕ್ತ ಎಸ್‌ಪಿ ಮಾನಿಂಗ್ ನಂದಗಾವಿ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಕೆಲವು ಸ್ಥಳಗಳಲ್ಲಿ ಅಪರೂಪದ ಘಟನೆಗಳೂ ನಡೆದಿದ್ದು, ಬಾಗಲಕೋಟೆಯ ಪೋಸ್ಟಲ್ ಕಾಲೋನಿಯೊಂದರಲ್ಲಿ ದಾಳಿ ನಡೆಯುವ ಸಂದರ್ಭದಲ್ಲಿ ಮನೆಯ ಕೆಳಭಾಗದಲ್ಲಿ ಹಾವು ಕಾಣಿಸಿಕೊಂಡ ಘಟನೆ ಕೂಡ ನಡೆದಿದೆ. ಒಟ್ಟಾರೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ನಡೆದ ಈ ದಾಳಿಯ ವೇಳೆ ಅಧಿಕಾರಿಗಳು ಮಹತ್ವದ ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us