180 ಕಿಮೀ ವೇಗದಲ್ಲಿ ಅಜಿತ್ ಕಾರು ಅಪಘಾತ; ವಿಡಿಯೋ ವೈರಲ್: ನಟನ ಪರಿಸ್ಥಿತಿ ಹೇಗಿದೆ?
ಕಾಲಿವುಡ್ ನಟ ಅಜಿತ್ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ದುಬೈನಲ್ಲಿ ಈ ಘಟನೆ ನಡೆದಿದೆ. ಅಪಘಾತ ಸಂಭವಿಸುವಾಗ ಕಾರು ಬರೋಬ್ಬರಿ 180 ಕಿಮೀ ವೇಗದಲ್ಲಿ ಸಾಗುತ್ತಿತ್ತು. ಅಜಿತ್ ಅವರ ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದ ವಿಡಿಯೋ ಕೂಡ ಲಭ್ಯವಾಗಿದೆ. ಅಪಘಾತದ ತೀವ್ರತೆಯನ್ನು ಕೇಳಿ ಅಭಿಮಾನಿಗಳಿಗೆ ಆತಂಕ ಆಗಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
ಖ್ಯಾತ ನಟ ಅಜಿತ್ ಅವರು ದೊಡ್ಡ ಸಾಹಸಿ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಕಾರುಗಳ ಬಗ್ಗೆ ಅವರಿಗೆ ವಿಶೇಷವಾದ ಕ್ರೇಜ್ ಇದೆ. ಅದರಲ್ಲೂ ಕಾರ್ ರೇಸ್ ಮತ್ತು ಬೈಕ್ ರೇಸ್ ಎಂದರೆ ಅವರಿಗೆ ಸಖತ್ ಇಷ್ಟ. ಆದರೆ ಅದರಿಂದ ಅಪಾಯ ಕೂಡ ಎದುರಾಗಿದೆ. ದುಬೈನಲ್ಲಿ ಕಾರು ರೇಸ್ ಅಭ್ಯಾಸ ಮಾಡುವ ಸಂದರ್ಭದಲ್ಲಿ ಅಜಿತ್ ಅವರಿಗೆ ಅಪಘಾತ ಆಗಿದೆ. 180 ಕಿಮೀ ವೇಗದಲ್ಲಿ ಅಜಿತ್ ಅವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ತಡೆಗೋಡೆಗೆ ಡಿಕ್ಕಿಯಾಗಿದೆ.
ಕಾರು ಅಪಘಾತ ಆದ ಕೂಡಲೇ ಅಜಿತ್ ಅವರನ್ನು ರಕ್ಷಿಸಲಾಗಿದೆ. ಬಳಿಕ ಆ್ಯಂಬುಲೆನ್ಸ್ನಲ್ಲಿ ಅವರನ್ನು ಆಸ್ಪತ್ರೆಗೆ ಕಳಿಸಲಾಗಿದೆ. ಈ ಮೊದಲು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಕೂಡ ಅಜಿತ್ ಅವರ ಕಾರು ಅಪಘಾತಕ್ಕೆ ಈಡಾಗಿತ್ತು. ಆಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಮತ್ತೆ ಅದಕ್ಕಿಂತಲೂ ಭಯಂಕರವಾದ ರೀತಿಯಲ್ಲಿ ಅವರ ಕಾರು ಅಪಘಾತ ಸಂಭವಿಸಿದೆ.
Ajith Kumar’s massive crash in practise, but he walks away unscathed. Another day in the office … that’s racing!#ajithkumarracing #ajithkumar pic.twitter.com/dH5rQb18z0
— Ajithkumar Racing (@Akracingoffl) January 7, 2025
‘ದುಬೈ 24 ಅವರ್ಸ್ ರೇಸ್’ (24 ಹೆಚ್ ದುಬೈ 2025) ಸ್ಪರ್ಧೆಯಲ್ಲಿ ಅಜಿತ್ ಅವರು ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 6 ಗಂಟೆ ದೀರ್ಘ ಅವಧಿಯ ಪರೀಕ್ಷೆಯಲ್ಲಿ ಅಜಿತ್ ಪಾಲ್ಗೊಂಡಿದ್ದರು. ಈ ಪರೀಕ್ಷೆ ಪೂರ್ಣಗೊಳ್ಳಲು ಇನ್ನೇನು ಕೆಲವೇ ನಿಮಿಷಗಳು ಇರುವಾಗ ಅಜಿತ್ ಅವರ ಕಾರು ತಡೆಗೋಡೆಗೆ ಡಿಕ್ಕಿ ಆಯಿತು. ಅಜಿತ್ ಅವರು ದುಬೈನಲ್ಲಿ ತಮ್ಮದೇ ರೇಸಿಂಗ್ ತಂಡವನ್ನು ಹೊಂದಿದ್ದಾರೆ.
ಇದನ್ನೂ ಓದಿ: 3.5 ಕೋಟಿ ರೂ. ಬೆಲೆಯ ಕಾರು ಖರೀದಿಸಿದ ಅಜಿತ್; ಹೆಮ್ಮೆಯಿಂದ ಫೋಟೋ ಹಂಚಿಕೊಂಡ ಪತ್ನಿ
ಸಮಾಧಾನದ ಸಂಗತಿ ಏನೆಂದರೆ, ಅಜಿತ್ ಅವರಿಗೆ ಈ ಅಪಘಾತದಿಂದ ಯಾವುದೇ ತೊಂದರೆ ಆಗಿಲ್ಲ. 180 ಕಿಲೋ ಮೀಟರ್ ವೇಗದಲ್ಲಿ ಕಾರು ಡಿಕ್ಕಿ ಆಗಿದ್ದರೂ ಕೂಡ ಅವರಿಗೆ ಯಾವುದೇ ಗಾಯಗಳು ಆಗಿಲ್ಲ ಎಂದು ಅವರು ಮ್ಯಾನೇಜರ್ ತಿಳಿಸಿದ್ದಾರೆ ಎಂದು ವರದಿ ಆಗಿದೆ. ಅಜಿತ್ ಕುಮಾರ್ ಕಾರು ಅಪಘಾತ ಆಗಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಯಾವುದೇ ತೊಂದರೆ ಆಗದೇ ಇರಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.