New Book : ಅಚ್ಚಿಗೂ ಮೊದಲು ; ಇದೇ ಭಾನುವಾರ ಉದಯ ಇಟಗಿ ಅವರ ‘ಶೇಕ್ಸ್ಪಿಯರನ ಶ್ರೀಮತಿ’ಯೊಂದಿಗೆ ಭೇಟಿ
Anne Hathaway : ‘ನಾವು ಹೆಂಗಸರು ನಮ್ಮನಮ್ಮ ಗಂಡಂದಿರು ಕಚ್ಚೆ ಹರುಕರು ಅಂತಾ ಗೊತ್ತಾದ ಮೇಲೂ ಅವರು ಮತ್ತೆ ಮತ್ತೆ ನಮ್ಮನ್ನೇ ಪ್ರೀತಿಸಲಿ ಅಂತಾ ಯಾಕೆ ಆಸೆ ಪಡ್ತೀವಿ? ಯಾಕೆ ಬಯಸ್ತೀವಿ? ಗೊತ್ತಿಲ್ಲ! ನನ್ನ ಗಂಡನ ವಿಷ್ಯ ಎಲ್ಲಾ ತಿಳಿದ ಮೇಲೂ ಅವ ನನ್ನ ಇನ್ನೂ ಪ್ರೀತಿಸ್ತೀದಿನಾ ಅನ್ನೂ ಕುತೂಹಲ ಇತ್ತು ನನಗೆ.‘
New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಶೇಕ್ಸ್ಪಿಯರನ ಶ್ರೀಮತಿ (ಏಕವ್ಯಕ್ತಿ ರಂಗಪ್ರಯೋಗ) ಲೇಖಕರು : ಉದಯ ಇಟಗಿ ಪುಟ : 75 ಬೆಲೆ : ರೂ. 85 ಮುಖಪುಟ ವಿನ್ಯಾಸ : ಮಹಾಂತೇಶ ದೊಡ್ಡಮನಿ ಪ್ರಕಾಶನ : ಸಿದ್ಧಾರ್ಥ ಪ್ರಕಾಶನ, ಬೆಂಗಳೂರು
ಇದೇ ಭಾನುವಾರ (ಅ.17) ಬೆಂಗಳೂರಿನ ನಯನ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಹಿರಿಯ ರಂಗಭೂಮಿ ಕಲಾವಿದೆ ಲಕ್ಷ್ಮೀ ಚಂದ್ರಶೇಖರ್, ಹಿರಿಯ ಅನುವಾದಕಿ ವನಮಾಲಾ ವಿಶ್ವನಾಥ್ ಮತ್ತು ನಿರ್ದೇಶಕ ಬಿ. ಸುರೇಶ ಅವರ ಸಮ್ಮುಖದಲ್ಲಿ ಈ ಕೃತಿ ಬಿಡುಗಡೆಯಾಗಲಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ವಿಶ್ವರಾಜ ಪಾಟೀಲ ನಿರ್ದೇಶನದಡಿ ಲಕ್ಷ್ಮೀ ಚಂದ್ರಶೇಖರ್ ಅವರು ಏಕವ್ಯಕ್ತಿ ರಂಗಪ್ರಯೋಗವನ್ನೂ ಮಾಡಲಿದ್ದಾರೆ.
*
ಶೇಕ್ಸಪಿಯರನ ಜೀವನದ ಬಗ್ಗೆ ನಮಗೆ ತಿಳಿದಿರುವುದರಲ್ಲಿ ಊಹಾಪೋಹಗಳೇ ಹೆಚ್ಚು. ತನ್ನ ಪಾತ್ರಗಳ ಮನದಾಳವನ್ನು ಶೋಧಿಸಿ ಅವರ ಭಾವನೆಗಳ ಹೃದಯಸ್ಪರ್ಶಿ ಚಿತ್ರಣ ಕೊಡುವ ಆ ಅಪ್ರತಿಮ ನಾಟಕಕಾರ ಅವನ ಅಭಿಮಾನಿಗಳ ದೃಷ್ಟಿಯಲ್ಲಿ ಒಳ್ಳೆಯ ಗಂಡನಾಗದೇ ಇರಲು ಸಾಧ್ಯವೇ ಇಲ್ಲ. ಅವನು ಹದಿನೆಂಟನೆಯ ಪ್ರಾಯದಲ್ಲಿಯೇ ತನಗಿಂತ ಎಂಟು ವರ್ಷ ಹಿರಿಯಳನ್ನು ಮದುವೆಯಾಗಿ ಮೂರೇ ವರ್ಷದಲ್ಲಿ ಹೆಂಡತಿ, ಮೂರು ಮಕ್ಕಳನ್ನು ಬಿಟ್ಟು ಲಂಡನ್ನಿಗೆ ಓಡಿ ಹೋಗಲು ಅವನ ಹೆಂಡತಿಯ ಆ್ಯನ್ ಹ್ಯಾಥ್ ವೇ ಕಾಟವೇ ಕಾರಣವಾಗಿರಬೇಕು ಎಂಬುದು ಹಲವರ ಆಧಾರರಹಿತ ವಾದವಾಗಿದೆ. ಇಂಥ ಆಧಾರರಹಿತ ವಾದಕ್ಕೆ ಪ್ರತಿವಾದವಾಗಿ ಉದಯ ಇಟಗಿಯವರ ‘ಶೇಕ್ಸಪಿಯರನ ಶ್ರೀಮತಿ’ ಕೃತಿ ಹೊರಹೊಮ್ಮಿದೆ. ಶೇಕ್ಸಪಿಯರನ ಕಾಲದ ಸ್ಟ್ಯಾಟ್ಫೋರ್ಡ್ ಹಾಗೂ ಸುತ್ತಮುತ್ತಲ ಪ್ರದೇಶದ ಚರ್ಚು, ಕೋರ್ಟಿನ ಕಡತಗಳು, ಲೇವಾದೇವಿ, ವ್ಯಾಪಾರ, ಭೂಮಾಲಿಕತ್ವ ಕುರಿತ ರೆಕಾರ್ಡುಗಳು, ಅಂದಿನ ಹೆಂಗಸರ ಜೀವನ, ದುಡಿಮೆ, ಆಚಾರವಿಚಾರಗಳನ್ನು ಸಂಶೋಧಿಸಿ ಬರೆದ ಕೃತಿಗಳನ್ನು ಆಧರಿಸಿದ ಈ ನಾಟಕ ಶೇಕ್ಸಪಿಯರನ ವೈವಾಹಿಕ ಜೀವನವನ್ನು ಇದ್ದಕ್ಕಿದ್ದಂತೆ ತೆರೆದಿಡುತ್ತದೆ. ಜೊತೆಗೆ ಹೆಂಡತಿಯಿಂದ ಅವನಿಗೆ ದೊರೆತಿರಬಹುದಾದ ಸಹಕಾರ, ಒಂಟಿಯಾಗಿ ಅವಳು ಜೀವನವನ್ನು ಎದುರಿಸಿದ ರೀತಿ, ತನ್ನ ದುಡಿಮೆಯಿಂದಲೇ ಮಕ್ಕಳನ್ನು ಬೆಳೆಸಿದ ಒಬ್ಬ ಗಟ್ಟಿ ಹೆಣ್ಣಿನ ಚಿತ್ರಣ ನೀಡುತ್ತದೆ. ಗಂಡನ ಕೀರ್ತಿಯ ನೆರಳಲ್ಲಿ ಮಸುಕಾದ ಹೆಂಡತಿಯ ತ್ಯಾಗ, ನೋವು, ನಲಿವುಗಳ ಮೇಲೆ ಬೆಳಕು ಚೆಲ್ಲುವ ‘ಶೇಕ್ಸಪಿಯರನ ಶ್ರೀಮತಿ’ ಒಂದು ಉತ್ತಮ ರಂಗಕೃತಿಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಶೇಕ್ಸಪಿಯರನನ್ನುಅವನ ಶ್ರೀಮತಿಯ ಕಂಗಳಿಂದ ನೋಡುವ ಈ ಪ್ರಯತ್ನ ಹೊಸತನದಿಂದ ಕೂಡಿದ್ದು ನಮಗೆ ಗೊತ್ತಿರದ ಶೇಕ್ಸಪಿಯರ್ ಇಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತಾನೆ.
‘ಮೇಡಮ್, ಶೇಕ್ಸಪಿಯರನ ಕುರಿತಾಗಿ ಅವನ ಹೆಂಡತಿ ಹೇಳುವಂಥ ಒಂದು ಏಕವ್ಯಕ್ತಿ ನಾಟಕವನ್ನು ಬರೆದಿರುವೆ. ಅದನ್ನು ನೀವು ಅಭಿನಯಿಸಲಾಗುತ್ತದಾ? ನೋಡಿ’ ಎಂದರು ಉದಯ. ಸ್ಕ್ರಿಪ್ಟ್ ನೋಡಿದ ತಕ್ಷಣ, ಶ್ರೀಮತಿ ಶೇಕ್ಸಪಿಯರಳಾಗಿ ಅಭಿನಯಿಸಲು ಸಿದ್ಧನಿದ್ದೇನೆ. ನಾನಿದನ್ನು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಮಾಡುವೆ ಎಂದೆ. ನಾನೊಬ್ಬ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಶೇಕ್ಸಪಿಯರನ ಪಾತ್ರಗಳನ್ನು ಆಸ್ವಾದಿಸಿದ್ದೇನೆ. ಮುಂಬರುವ ದಿನಗಳಲ್ಲಿ ಅವನ ಹೆಂಡತಿಯಾಗಿ ಅಂದರೆ “ಶೇಕ್ಸಪಿಯರನ ಶ್ರೀಮತಿ” ಯಾಗಿ ರಂಗದ ಮೇಲೆ ಕಾಣಿಸಿಕೊಳ್ಳಲು ಉತ್ಸುಕಳಾಗಿದ್ದೇನೆ. ಲಕ್ಷ್ಮೀ ಚಂದ್ರಶೇಖರ್, ರಂಗಭೂಮಿ ಕಲಾವಿದೆ
ಶೇಕ್ಸ್ಪಿಯರ್ ಎಂಬ ಬರಹಗಾರನ ಕೃತಿಗಳು ಇಪ್ಪತ್ತೊಂದನೇ ಶತಮಾನದಲ್ಲಿಯೂ ಜಗತ್ತಿನಾದ್ಯಂತ ಓದುಗರಲ್ಲಿ ಸೃಷ್ಟಿಸುತ್ತಿರುವ ಸಂಚಲನ ವಿಸ್ಮಯವನ್ನುಂಟು ಮಾಡುತ್ತಿರುವಂತೆಯೇ ಅವನ ಬದುಕು, ವ್ಯಕ್ತಿತ್ವಗಳ ಬಗೆಗೂ ಹೆಚ್ಚಿನ ಆಸಕ್ತಿ ಬೆಳೆಯುತ್ತಲಿದ್ದು ಅವನ ಬದುಕಿನ ಶೋಧಗಳು ಅನೇಕ ಬಗೆಯಲ್ಲಿ ಅವನನ್ನು ಸೃಜಿಸುತ್ತಲಿವೆ. ಇದಲ್ಲವೇ ವಿಶೇಷ! ಈ ಮಾಂತ್ರಿಕ ಬರಹಗಾರನ ಬದುಕಿನ ಪುರಾವೆಗಳನ್ನು ಹುಡುಕುತ್ತಾ, ಅವನ ಕೃತಿಗಳ ಪ್ರಮಾಣಗಳ ಚುಂಗು ಹಿಡಿದುಕೊಂಡು ಅವನ ವ್ಯಕ್ತಿತ್ವ ಕಲ್ಪಿಸಿ ಕೊಡುವ ಪ್ರಯತ್ನಗಳಿಗೆ ತಮ್ಮ ಜೀವಮಾನಗಳನ್ನು ತೆತ್ತುಕೊಂಡ ಸಂಶೋಧಕರು, ಆಸಕ್ತರು ಇರುವುದರಿಂದಲೇ ಅವನ ಬಗೆಗಿನ ಕತೆಗಳು ನಮ್ಮ ಮುಂದೆ ಸೃಜನಶೀಲವಾಗಿ ನರ್ತಿಸುತ್ತಾ ಇವೆ. ರಿನೈನ್ಸನ ಅಪರಿಮಿತ ಸಾಧ್ಯತೆಗಳನ್ನು ದುಡಿಸಿಕೊಂಡ ಈ ಬರಹಗಾರ ದೈವದ ಹಂಗಿಲ್ಲದೆ ಮನುಷ್ಯನ ಶಕ್ತಿ, ಸಾಮರ್ಥ್ಯಗಳನ್ನು ಕಂಡುಕೊಳ್ಳುವ ಹಂಬಲದಿಂದ ಬರೆಯುತ್ತಾ ಹೋದ. ರಮ್ಯತೆಯ ಅತ್ಯುನ್ನತ ನೆಲೆಯನ್ನು ತನ್ನ ಸಾಹಿತ್ಯದ ಮೂಲಕ ಶೋಧಿಸಿಕೊಂಡ. ಪ್ರಾಯಶ: ಇದೇ ರಮ್ಯತೆಯ ರೋಚಕ ಅಂಶಗಳು ಅವನ ವ್ಯಕ್ತಿತ್ವದಲ್ಲಿಯೂ ಇದ್ದುದರಿಂದ ಅವನ ವ್ಯಕ್ತಿತ್ವವನ್ನು ಸಹ ಸೃಜನಶೀಲವಾಗಿ ಕಟ್ಟಿಕೊಳ್ಳುವ ಅವಕಾಶ ದೊರೆತಿದೆ.
ಶೇಕ್ಸ್ಪಿಯರನ ಜೀವನದಲ್ಲಿ ಬಂದ ಸ್ಫುರದ್ರೂಪಿ, ಪೋಷಕ-ಗೆಳೆಯ, ಮೋಹ ಹುಟ್ಟಿಸಿದ ಕಪ್ಪುಹೆಣ್ಣು, ಬರೆಯುವ ಹಂಬಲವನ್ನು ಅಸೂಯೆಯಿಂದ ಹೆಚ್ಚಿಸಿದ ಶತ್ರು ಕವಿ ಇವರುಗಳು ಶೇಕ್ಸ್ಪಿಯರನ ಜೀವನವನ್ನು ನಾಟಕೀಯವಾಗಿ ಕಟ್ಟಿಕೊಳ್ಳಲು ಬೇಕಾದ ಪರಿಕರಗಳನ್ನು ಒದಗಿಸಿದರು. ಆದರೆ ನಿಜಜೀವನದ ಹೆಂಡತಿಯಾಗಿ, ಶೇಕ್ಸ್ಪಿಯರನ ಮಕ್ಕಳ ತಾಯಿಯಾಗಿ ಜೀವನ ಕಳೆದ ಅವನ ಹೆಂಡತಿ ತನ್ನ ಗಂಡನನ್ನು ನೋಡಿದ್ದು ಹೇಗೆ ಎಂಬ ಕುತೂಹಲದಿಂದ ಹೊರಟರೆ ಶೇಕ್ಸ್ಪಿಯರನ ಇನ್ನೊಂದು ಪುಟವೇ ತೆರೆಯಬಹುದು. ಸ್ತ್ರೀವಾದ ಕ್ರಿಯಾಶೀಲವಾಗಿರುವ ಈ ದಿನಗಳಲ್ಲಿ ಹೀಗೆ ಪೋಸಿಶನ್ನುಗಳ ಬದಲಾದ ನೋಟಗಳು ಪ್ರಸ್ತುತವಾಗುತ್ತಲಿವೆ. ಹೀಗೆ ನೋಡುವ ಅನೇಕ ಪ್ರಯತ್ನಗಳು ಇಂಗ್ಲಿಷಿನಲ್ಲಿ ನಡೆದಿದ್ದು ಅಂತಹ ಅನೇಕ ಪ್ರಯತ್ನಗಳನ್ನಾಧರಿಸಿ ಏಕವ್ಯಕ್ತಿ ನಾಟಕ ರಚಿಸಿರುವ ಉದಯ ಇಟಗಿ ಅವರ ಪ್ರಯತ್ನ ಓದುಗರ ಮುಂದಿದೆ. ಶೇಕ್ಸ್ಪಿಯರನ ಅಭಿಮಾನಿಗಳು ಕನ್ನಡದಲ್ಲಿ ಮೂಡಿದ ಅವನ ಈ ಹೊಸ ವ್ಯಕ್ತಿತ್ವ ವಿಶ್ಲೇಷಣೆಯನ್ನು ಸವಿದು, ಅವನ ಬಗ್ಗೆ ಒಲವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲಿ. ಡಾ. ಆರ್. ತಾರಿಣಿ ಶುಭದಾಯಿನಿ, ವಿಮರ್ಶಕರು
(ನಾಟಕದ ಆಯ್ದ ಭಾಗ)
ಮತ್ತೆ ನೆನಪಾಗುತ್ತಿದೆ… ನಾನೊಮ್ಮೆ ಅದೇ ಥೇಮ್ಸ್ ನದಿ ದಂಡೆಯ ಮೇಲೆ ಸಂಜೆ ವಿಹಾರಕ್ಕೆಂದು ಅವನ ಜೊತೆ ಹೋದಾಗ ಕುತೂಹಲಕ್ಕೆಂದು ಕೇಳಿದ್ದೆ ನಿನ್ನ ಗೆಳೆಯ ಬೇಸಿಗೆಯ ಹಗಲಾದರೆ, ನಾನೇನು ಹಾಗಾದರೆ? ಎಂದು. ಅದಕ್ಕವನು ನಿರ್ಭಿಡೆಯಿಂದ ನೀನು ಚಳಿಗಾಲದ ಒಂದು ದಿನ ಎಂದು ಹೇಳಿದ್ದ. ನನಗಾಗ ಅರ್ಥವಾಗದೆ ನಗುತ್ತಾ ಸುಮ್ಮನೆ ತಲೆಯ ಮೇಲೊಂದು ಮೊಟಕಿದ್ದೆ. ಆದರೆ ಈಗ ಎಲ್ಲವೂ ಅರ್ಥವಾಗುತ್ತಿದೆ. ನಿಜಕ್ಕೂ ನಾನವನ ಮೈ ಮನಗಳ ಬಿಸಿಯೇರಿಸದ ಚಳಿಗಾಲದ ಒಂದು ದಿನವಾಗಿ ಉಳಿದುಬಿಟ್ಟೆನೆಂದು. ನಿಮಗೆ ಒಂದು ವಿಷ್ಯ ಗೊತ್ತಾ? ನಾವು ಹೆಂಗಸರು ನಮ್ಮನಮ್ಮ ಗಂಡಂದಿರು ಕಚ್ಚೆ ಹರುಕರು ಅಂತಾ ಗೊತ್ತಾದ ಮೇಲೂ ಅವರು ಮತ್ತೆ ಮತ್ತೆ ನಮ್ಮನ್ನೇ ಪ್ರೀತಿಸಲಿ ಅಂತಾ ಯಾಕೆ ಆಸೆ ಪಡ್ತೀವಿ? ಯಾಕೆ ಬಯಸ್ತೀವಿ? ಗೊತ್ತಿಲ್ಲ! ನನ್ನ ಗಂಡನ ವಿಷ್ಯ ಎಲ್ಲಾ ತಿಳಿದ ಮೇಲೂ ಅವ ನನ್ನ ಇನ್ನೂ ಪ್ರೀತಿಸ್ತೀದಾನಾ ಅನ್ನೂ ಕುತೂಹಲ ಇತ್ತು ನನಗೆ. ಬೇಕಾದ್ರೆ ನೀವದನ್ನು ಕೆಟ್ಟ ಕುತೂಹಲ ಅಂತಾ ಕರೆಯಿರಿ. ಹೀಗಾಗಿ ಅವನು ಬರೆದಿದ್ದನ್ನೆಲ್ಲಾ ನನ್ನ ಹಿರಿಮಗಳ ಕೈಲಿಂದ ಒಮ್ಮೆ ತಿರುಗಿಸಿ ಹಾಕುವಾಗ ಅವನ ಒಂದು ಸಾನೆಟ್‍ನಲ್ಲಿ ಒಂದಿಷ್ಟು ಚಿತ್ರಣ ಸಿಕ್ಕಿತು…
ನನ್ನವಳ ಕಣ್ಣು ರವಿಯಂತೆ ಖಂಡಿತ ಅಲ್ಲ, ಅವಳ ತುಟಿ ಕೂಡ ಹವಳದ ಹಾಗೆ ಕೆಂಪಲ್ಲ; ಮೊಲೆ ಬಣ್ಣ ತುಸು ಕಂದು, ಹಿಮದಂಥ ಬಿಳುಪಲ್ಲ, ಕೂದಲೋ ತಂತಿ ಥರ, ತಲೆಯೋ ಕರಿ ತಂತಿ ಹೊಲ
ಅದು ನನ್ನ ಬಗ್ಗೆನೇ ಇರುವಂಥದ್ದು ಅಂತಾ ನಾನು. ಆದರೆ ಮಗಳು ಇರಲಿಕ್ಕಿಲ್ಲ. ಅದು ಕಪ್ಪು ಸುಂದರಿ ಬಗ್ಗೆಯೇ ಇರಬೇಕು ಅಂತಾ ಅವಳು. ಆದರೆ ಅವನ ಆ ಚಿತ್ರಣ ಹೆಚ್ಚುಕಮ್ಮಿ ನನ್ನನ್ನೇ ಹೋಲುತ್ತಿದ್ದುದು ಸುಳ್ಳಲ್ಲ ಕಣ್ರೀ… (ನಿಧಾನವಾಗಿ ಬಿಕ್ಕುವಳು)
ಇರಲಿ. ಇಷ್ಟೆಲ್ಲಾ ಹೇಳಿದ ಮೇಲೆ ನನ್ನ ಮೂರು ಮಕ್ಕಳ ಬಗ್ಗೆ ಹೇಳಲೇಬೇಕು. ಸೂಸನ್ ಮತ್ತು ಜುಡಿತ್ ಎಂಬ ಎರಡು ಹೆಣ್ಣುಮಕ್ಕಳು ನನಗೆ. ಹ್ಯಾಮ್ನೆಟ್ ಎಂಬುವ ಗಂಡುಮಗ. ಸೂಸನ್ ಹಿರಿಮಗಳಾದರೆ ಜುಡಿತ್ ಮತ್ತು ಹ್ಯಾಮ್ನೆಟ್ ಅವಳಿ-ಜವಳಿ. ನಾನು ಶೇಕ್ಸಪಿಯರನ ಗೈರು ಹಾಜರಿಯಲ್ಲಿಯೇ ನನ್ನ ಮೂರು ಜನ ಮಕ್ಕಳನ್ನು ಬೆಳೆಸಿದೆ. ಚನ್ನಾಗಿಯೇ ಬೆಳೆಸಿದೆ. ಅವನು ಲಂಡನ್ನಲ್ಲಿ. ನಾನು ಸ್ಟ್ರ್ಯಾಟ್ ಫೋರ್ಡ್ನಲ್ಲಿ. ಜೊತೆಗೆ ಶೇಕ್ಸಪಿಯರನ ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಿದ್ದೆ. ಹ್ಯಾಮ್ನೆಟ್ ಹನ್ನೊಂದು ವರ್ಷದವನಿರುವಾಗಲೇ ಪ್ಲೇಗ್ ಬಂದು ಸತ್ತುಹೋದ. ಹೀಗಾಗಿ ಅವನೊಟ್ಟಗಿನ ನೆನಪುಗಳು ಅಷ್ಟಕ್ಕಷ್ಟೇ. ಸೂಸನ್ ನನ್ನ ಮತ್ತು ಶೇಕ್ಸಪಿಯರನ ಮೊದಲ ಮಿಲನದಲ್ಲಿಯೇ ಹುಟ್ಟಿದಾಕೆ. ಸೂಸನ್ ಜಾಣೆ, ಬುದ್ಧಿವಂತೆ, ಲೋಕಜ್ಞಾನವಿದ್ದಾಕೆ. ವ್ಯವಹಾರದಲ್ಲಿ ತುಂಬಾ ಚುರುಕು. ಅವಳನ್ನು ನೋಡಿದರೆ ಏನೋ ಒಂಥರಾ ಖುಶಿ ನನಗೆ!
ಅವಳು ಯಾವಾಗ್ಲೂ ಹೇಳೋಳು; ನನ್ನ ಗಂಡನ ನಾಟಕದಲ್ಲಿನ ಸ್ತ್ರೀ ಪಾತ್ರಗಳಿಗೆ ಬಹಳಷ್ಟು ಅನ್ಯಾಯವಾಗಿದೆ, ಅವಮಾನವಾಗಿದೆ, ಮಾನನಷ್ಟವಾಗಿದೆಯೆಂದು. ಒಂದೋ ಅವರ ಪ್ರಾಮಾಣಿಕತೆಯನ್ನು ಅಥವಾ ಪಾತಿವೃತ್ಯವನ್ನು ವೈಭವಿಕರಿಸಿ ಅವರನ್ನು ಪೀಠದ ಮೇಲೆ ಕೂರಿಸುತ್ತಿದ್ದ. ಇಲ್ಲವೇ ಅವರ ದಾಂಪತ್ಯ ನಿಷ್ಟೆಯನ್ನು ಪ್ರಶ್ನಿಸುತ್ತಾ ಅವರನ್ನು ತುಚ್ಛವಾಗಿ ಕಾಣುತ್ತಿದ್ದ. ಅವನ ದೃಷ್ಟಿಯಲ್ಲಿ ಹೆಣ್ಣೆಂದರೆ ಗಂಡಸಿನ ಕೈಗೊಂಬೆ ಮತ್ತು ಹೆಂಗಸರೆಂದರೆ ದೇವತೆಯರು ಅಥವಾ ಹಾದರಗಿತ್ತಿಯರು ಅಷ್ಟೇ! ನಂಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದಿರೋದರಿಂದ ಇವುಗಳ ಬಗ್ಗೆ ನಂಗೇನೂ ಅಷ್ಟಾಗಿ ತಿಳಿಯುವದಿಲ್ಲ. ನಾವು ಬದುಕಿದ ಕಾಲಘಟ್ಟಾನು ಹಾಗೇ ಇತ್ತಲ್ಲ? ಹೆಣ್ಣನ್ನು ತುಚ್ಛವಾಗಿ ಕಾಣುತ್ತಿದ್ದ ಕಾಲವದು. ಈಗ್ಲೂ ಹೆಚ್ಚೇನೂ ಬದಲಾವಣೆಯಾಗಿಲ್ಲ! ಆ ಮಾತು ಬೇರೆ! ಇನ್ನು ಇದರಿಂದಾಚೆ ಅವನು ಹೇಗೆ ತಾನೆ ಭಿನ್ನವಾಗಿ ಬರೆಯಬಹುದಿತ್ತು? ಎಂದು ನಾನು ಅವಳನ್ನು ಸಮಾಧಾನಪಡಿಸುತ್ತಿದ್ದೆ. ಇವಳಿಗೆ ಎಲಿಜಿಬೆಥ್ ಎನ್ನುವ ಮುದ್ದಾದ ಮಗಳಿದ್ದಳು. ಅವಳನ್ನು ಅವಳ ಅಪ್ಪ-ಅಮ್ಮ ಒಳ್ಳೆ ಕಡೆ ಕೊಟ್ಟು ಮದುವೆ ಮಾಡಿದ್ದರು. ಆದರೆ ಅವಳಿಗೆ ಮಕ್ಕಳಾಗಲಿಲ್ಲ.
ಪರಿಚಯ : ಉದಯ ಇಟಗಿ ಮೂಲತಃ ಕೊಪ್ಪಳ ಜಿಲ್ಲೆಯ ಮುಧೋಳದವರು. ಹುಟ್ಟಿ ಬೆಳೆದಿದ್ದು ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ. ಧಾರವಾಡದಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಪದವಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಪಡೆದು ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ ಉತ್ತರ ಆಫ್ರಿಕಾದಲ್ಲಿ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕ ವೃತ್ತಿ ಮುಂದುವರಿಸಿ 2015 ರಲ್ಲಿ ಭಾರತಕ್ಕೆ ವಾಪಸಾದರು. ಇದೀಗ ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಲೇಖನಗಳು, ಕೆಲವು ಅನುವಾದಿತ ಕಥೆಗಳು ಮತ್ತು ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಕಷ್ಟು ಅರೇಬಿಕ್ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮೊದಲ ಕೃತಿ ‘ಲಿಬಿಯಾ ಡೈರಿ’ ಇದೀಗ ‘ಶೇಕ್ಸ್ಪಿಯರ್ನ ಶ್ರೀಮತಿ’.
(ಈ ಕೃತಿಯ ಖರೀದಿಗೆ ಸಂಪರ್ಕಿಸಿ : 86605 61450)
ಇದನ್ನೂ ಓದಿ : New Book : ಅಚ್ಚಿಗೂ ಮೊದಲು : ಕವಿ ಸುಧಾ ಆಡುಕಳ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ‘ಗೀತಾಂಜಲಿ’ ನಾಳೆಯಿಂದ ಲಭ್ಯ
Published On - 2:12 pm, Thu, 14 October 21