ನಾನೆಂಬ ಪರಿಮಳದ ಹಾದಿಯಲಿ: ಆ್ಯಟಿಟ್ಯೂಡ್ ಎಂಬ ಬ್ರಹ್ಮಾಸ್ತ್ರ ಪಡೆದುಕೊಂಡಿದ್ದು ಹೀಗೆ…
‘ಮೊದಲ ಕವಿತೆ ಬರೆದಾಗ ನಾನು ಐದನೇ ತಗತಿಯಲ್ಲಿದ್ದೆ. ಅದೇನೋ ದೆವ್ವದ ಕವಿತೆ. ನನ್ನ ಕವಿತೆಯನ್ನು ಬಹಳ ಸೀರಿಯಸ್ ಆಗಿ ಓದಿದ ಅಪ್ಪ, ಕವಿತೆ ಚೆನ್ನಾಗಿದೆ ಬರೆಯಬಹುದು ನೀನು ಎನ್ನುತ್ತ ಇದ್ದಕ್ಕಿದ್ದಂತೆ, ನೀನು ದೆವ್ವ ಭೂತವನ್ನೆಲ್ಲ ನಂಬ್ತೀಯಾ? ಎಂದು ಕೇಳಿದ್ದರು. ನಾನು ಇಲ್ಲ ಎಂದಿದ್ದೆ. ಹಾಗಾದರೆ ನೀನು ನಂಬದಿರುವುದರ ಕುರಿತು ಯಾಕೆ ಬರೆಯೋದು? ನಿನಗೆ ನಂಬಿಕೆ ಇರುವ ವಿಷಯಗಳ ಬಗ್ಗೆ ಬರೆ ಎಂದು ನನ್ನ ಬರವಣಿಗೆಯ ದಿಕ್ಕನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದರು.’ ಶ್ರೀದೇವಿ ಕೆರೆಮನೆ
ಪರಿಕಲ್ಪನೆ: ಶ್ರೀದೇವಿ ಕಳಸದ
ಕಪ್ಪೆಚಿಪ್ಪಿನಿಂದ ಹೊರಬಂದು ನಾನೆಂಬ ನಾನು ಮುತ್ತಾಗುತ್ತಿರುವುದು ಹೇಗೆಂದು ಇಲ್ಲಿ ಹದವಾಗಿ ಹಂಚಿಕೊಂಡಿದ್ದಾರೆ ಕವಿ, ಲೇಖಕಿ ಶ್ರೀದೇವಿ ಕೆರೆಮನೆ.
‘ಅಯ್ಯೋ ಇವಳು ಕಪ್ಪು ಮೂಗೂ ಮೊಂಡು. ಇವಳು ಹುಡುಗನಾಗಿ ಅವನೇ ಹುಡುಗಿಯಾಗಿದ್ರೆ ಎಷ್ಟು ಚೆನ್ನಾಗಿತ್ತು. ಅಥವಾ ಅವನ ಬಣ್ಣ, ಉದ್ದದ ಮೂಗಾದರೂ ಇವಳಿಗೆ ಬಂದಿದ್ರೆ ಸಾಕಿತ್ತು’ ನಾನು ಹುಟ್ಟಿದಾಗ ನನ್ನನ್ನು ನೋಡಲು ಬಂದ ಬಹುತೇಕರು ಹೇಳಿದ ಮಾತಂತೆ ಇದು. ನನಗೇನು ಗೊತ್ತು? ಎಲ್ಲ ಮಕ್ಕಳಂತೆ ಅಥವಾ ಅದಕ್ಕೂ ತುಸು ಹೆಚ್ಚೇ ಕುಯ್ಯೋ ಮರ್ರೋ ಎಂದು ಅಳುತ್ತಿದ್ದಿರಬಹುದು. ಹೆಣ್ಣಾದರೆ ನಿಭಾಯಿಸೋದು ಕಷ್ಟ. ಮತ್ತೊಂದೂ ಗಂಡೇ ಆಗಿಬಿಡಲಿ. ಅಮ್ಮ ಮನಸ್ಸಿನಲ್ಲೇ ಬೇಡಿಕೊಂಡಿದ್ದು ನನಗೆ ಗೊತ್ತಾಗಿದ್ದೂ ನಾನು ಪ್ರಾಥಮಿಕ ಶಾಲೆ ಮುಗಿಸಿದ ನಂತರವೇ. ಆದರೆ ಅಪ್ಪನಿಗೆ ಮಾತ್ರ ನಾನು ಮಗಳಾಗಿಯೇ ಹುಟ್ಟಬೇಕಿತ್ತು. ಅದೆಷ್ಟೋ ಸಲ ‘ನೀನೇ ಹೆಣ್ಣಾಗಲಿ ಅಂತ ಬಯಸಿದ್ದು. ಹೀಗಾಗಿ ನನಗೆ ನಿನ್ನದೇ ಬಣ್ಣ ಬಂದಿದೆ’ ಜಗದ ಪ್ರೀತಿಯನ್ನೆಲ್ಲ ಮೊಗೆದುಕೊಟ್ಟ ಅಪ್ಪನ ಬಳಿ ನಾನು ಜಗಳವಾಡಿದ್ದು ಅದೆಷ್ಟು ಸಲವೋ. ಅಪ್ಪ ಮೀಸೆಯ ಅಡಿಯಲ್ಲಿ ನಗುತ್ತ ಅದೆಂದೋ ಮದುವೆಯಾದ ಹೊಸತರಲ್ಲಿ ಒಂದೇ ಒಂದು ಸಲ ತೆಗೆಸಿದ್ದ ಕಪ್ಪು ಬಿಳುಪಿನ ಪೋಟೋ ಎದುರಿಗೆ ಹಿಡಿದು, ‘ಇಲ್ಲಿ ನೋಡು, ಯಾರು ಚಂದ? ಕಪ್ಪಗಿನ ನಾನೋ? ಬಿಳಿಯ ನಿಮ್ಮಮ್ಮನೋ?’ ಎಂದು ತೋರಿಸಿ ‘ಅರರೆ ಅಪ್ಪ ಅದೆಷ್ಟು ಚಂದ, ಸಿನೆಮಾ ಹೀರೋನಂತೆ. ಹಾಗಾದರೆ ಅಪ್ಪನಂತಿರುವ ನಾನೂ ಚಂದವೇ’ ಎಂದುಕೊಳ್ಳುವಂತೆ ಮಾಡಿಬಿಡುತ್ತಿದ್ದರೂ ಆ ಸಮಾಧಾನ ಕೆಲವೇ ಸಮಯಕ್ಕಷ್ಟೇ ಸೀಮಿತವಾಗಿ ಬಿಡುತ್ತಿತ್ತು. ಯಾಕೆಂದರೆ ಯಾರಾದರೂ, ‘ಅಣ್ಣ ಉಲ್ಲಾಸ ಎಷ್ಟು ಬಿಳಿ, ಇವಳ್ಯಾಕೆ ಕಪ್ಪಾದಳು?’ ಎಂದು ಮರುಕ ತೋರಿಸಿಯೋ, ‘ಅವನ ಬಣ್ಣವಾದರೂ ಇವಳಿಗೆ ಬಂದಿದ್ದರೆ ಎಷ್ಟು ಚಂದ ಕಾಣ್ತಿದ್ಲು’ ಎಂದೋ, ಕೊನೆಯ ಪಕ್ಷ ‘ಅವನ ಉದ್ದದ ಮೂಗಾದರೂ ಇವಳಿಗೆ ಬಂದಿದ್ದರೆ ಸಾಕಾಗಿತ್ತು’ ಎಂದು ಸಂತಾಪ ಸೂಚಿಸಿಯೋ ನನ್ನ ಹೆಮ್ಮೆಯ ಬಲೂನಿಗೆ ಸೂಜಿ ಚುಚ್ಚಿ ವಿಲಕ್ಷಣ ಸಂತೋಷ ಅನುಭವಿಸಿಬಿಡುತ್ತಿದ್ದರು. ನಾನು ಹೈರಾಣಾಗಿಬಿಡುತ್ತಿದ್ದೆ.
ಇದರೊಟ್ಟಿಗೆ ಒಂದು ಮಾತನಾಡಿದರೆ ಇಡೀ ದಿನದ ಆಗು ಹೋಗುಗಳ ವರದಿ ಒಪ್ಪಿಸಿಬಿಡುವ ನಾನು, ಎರಡು ಮಾತನಾಡಿಸಿದರೆ ಅರ್ಧ ಮಾತನಾಡುವ ಅಣ್ಣನ ಎದುರು ‘ಅದೆಷ್ಟು ಮಾತನಾಡುತ್ತಾಳಪ್ಪ? ಅವನು ಹುಡುಗ, ಮಾತೇ ಆಡೋದಿಲ್ಲ. ಅವನ ಗುಣವಾದರೂ ಇವಳಿಗೆ ಬಂದಿದ್ದರೆ’ ಎಂದು ಮತ್ತೆ ನನ್ನ ಮೊಂಡು ಮೂಗನ್ನು ಮತ್ತಷ್ಟು ಕತ್ತರಿಸಿ ಬಿಡುತ್ತಿದ್ದರು. ಅಲ್ಲಿಗೆ ನನ್ನ ಸಹನೆಯ ಕಟ್ಟೆ ಒಡೆದು ಹೋಗುತ್ತಿತ್ತು. ನನ್ನೆಲ್ಲ ಅವಮಾನಗಳಿಗೆ ಮೂಲ ಕಾರಣ ಅಣ್ಣನೇ ಎಂದು ಅವನ ಬಳಿ ಜಗಳ ಕಾಯುತ್ತಿದ್ದೆ. ಅವನೋ ಸಹನೆಯ ಪ್ರತಿರೂಪ. ಶಾಂತವಾಗಿ ಕುಳಿತು ನನ್ನ ಬೇಸರವನ್ನು ಕಡಿಮೆ ಮಾಡಿಬಿಡುತ್ತಿದ್ದ. ಚಿಕ್ಕವಳಿರುವಾಗ ಒಂದೇ ಒಂದು ಸಲಕ್ಕಾದರೂ ಆತ ನನ್ನೊಡನೆ ಜಗಳ ಕಾದಿದ್ದು ನನಗೆ ನೆನಪಿಲ್ಲ. ಆದರೆ ನನ್ನನ್ನು ಸಾಕಷ್ಟು ಕೆಣಕಿ ಸಿಟ್ಟು ಮಾಡಿಕೊಳ್ಳುವಂತೆ ಮಾಡುವುದರಲ್ಲಿ ಮಾತ್ರ ಆತ ಎತ್ತಿದ ಕೈ. ಆದರೆ ಅವನಲ್ಲಿ ಒಂದು ನಂಬಿಕೆಯಿತ್ತು. ತಾನು ಸಾಧಿಸಲಾಗದ್ದನ್ನು ತಂಗಿ ಸಾಧಿಸುತ್ತಾಳೆ ಎಂಬುದು. ಹೀಗಾಗಿ ನನ್ನೆಲ್ಲ ಕ್ರಿಯಾತ್ಮಕತೆಗೆ ಆತನ ಸಹಕಾರ, ಪ್ರೋತ್ಸಾಹ ಸದಾ ನನ್ನ ಬೆನ್ನಿಗಿರುತ್ತಿತ್ತು. ಈ ಕಾರಣಕ್ಕಾಗಿಯೇ ನಾನು ಯಾವುದೇ ಕೀಳರಿಮೆ ಇಲ್ಲದೇ ಬೆಳೆಯಲು ಸಾಧ್ಯವಾಗಿದ್ದು.
ನಾನು ಹುಟ್ಟುವುದಕ್ಕೆ ಕೇವಲ ಐದು ದಿನ ಮೊದಲು ತೀರಿಕೊಂಡ ತನ್ನ ಅಮ್ಮನೇ ನನ್ನ ರೂಪದಲ್ಲಿ ಮತ್ತೆ ಬಂದಿದ್ದಾಳೆ ಎಂದು ಅಪ್ಪ ಅಂದುಕೊಂಡಿದ್ದರು. ನನ್ನ ಜಾತಕದ ಯಾವುದೋ ಒಂದು ಶಬ್ಧವನ್ನು ತೋರಿಸಿ ‘ಹೀಗೆಂದರೆ ಪುನರ್ಜನ್ಮ ಅಂತೆ. ನೀನು ನನ್ನ ಅಮ್ಮನೇ. ಮತ್ತೆ ನನ್ನ ಮಗಳಾಗಿ ಹುಟ್ಟಿದ್ದೀಯಾ’ ಎಂದು ಹೇಳುತ್ತಿದ್ದರು. ಹೀಗಾಗಿ ಅಪ್ಪನ ಮೇಲೆ ಅಧಿಕಾರ ಚಲಾಯಿಸಲು ನನಗೆ ಸಂಪೂರ್ಣ ಹಕ್ಕಿದೆ ಎಂದು ನಂಬಿಕೊಂಡು ಬಿಟ್ಟಿದ್ದೆ. ನನಗೆ ಒಂದು ವರ್ಷವಾಗುವ ಮೊದಲೇ, ಅಂದರೆ ಹೆಂಡತಿ ತೀರಿಕೊಂಡ ವರ್ಷದಲ್ಲೇ ಅಜ್ಜನೂ ಸ್ವರ್ಗಸ್ಥರಾಗಿದ್ದರು. ಹೀಗಾಗಿ ನನಗೆ ಸ್ವಂತ ಅಜ್ಜನ ಪ್ರೀತಿ ನೀಡಿದ್ದು ನಮ್ಮೊಡನೆಯೇ ಇರುತ್ತಿದ್ದ ಅಪ್ಪನ ಚಿಕ್ಕಪ್ಪ, ನಾವೆಲ್ಲ ಸಿಣ್ಣಪ್ಪ ಎಂದು ಕರೆಯುತ್ತಿದ್ದ ಸುಬ್ರಾಯ ಕೆರೆಮನೆ. ಸ್ವಾತಂತ್ರ್ಯಹೋರಾಟಗಾರರಾದ ಅವರು ಸರ್ವೋದಯ ಚಳುವಳಿಯ ಮುಂಚೂಣಿಯಲ್ಲಿದ್ದವರು. ಬಿಳಿಬಿಳಿ ಹಾಲಿನ ಕೆನೆಯ ಮೈಬಣ್ಣದ ಅವರು ಸರಿಸುಮಾರು ಲೆಕ್ಕ ಹಾಕಿದಂತೆ ಎರಡು ತಿಂಗಳಿಗೊಮ್ಮೆ ನಾವು ಇರುತ್ತಿದ್ದ ಶಿರಸಿಯ ಅಮ್ಮಿನಳ್ಳಿ ಎನ್ನುವ ಹಳ್ಳಿಯ ಬಾಡಿಗೆ ಮನೆಗೆ ಬರುತ್ತಿದ್ದರು. ತಮ್ಮ ಬಟ್ಟೆಗಳನ್ನೆಲ್ಲ ಸ್ವಚ್ಛವಾಗಿ ತಾವೇ ತೊಳೆದುಕೊಳ್ಳುತ್ತಿದ್ದ ಅವರ ಪಂಚೆ ಎಂದರೆ ಅದೊಂದು ಒಂದೂ ಕಲೆಗಳಿಲ್ಲದ ಬಿಳಿಯ ಟುವಾಲು. ಅವರು ಬಂದಾಗಲೆಲ್ಲ ಕೈಕಾಲು ಮುಖ ತೊಳೆದು ಅವರ ಪಂಚೆಯಲ್ಲೇ ಮುಖ ಒರೆಸಿಕೊಳ್ಳುವುದು ನನ್ನ ಚಿಕ್ಕಂದಿನ ರೂಢಿ. ‘ತಂಗೀ ನೀ ಮುಖ ಒರೆಸಿದ್ರೆ ನಿನ್ನ ಬಣ್ಣ ತಾಗಿ ನನ್ನ ಪಂಚೆ ಕಪ್ಪಾಗಿ ಬಿಡೂದು’ ಅವರು ಪ್ರತಿಸಲವೂ ಹೇಳುತ್ತಿದ್ದರು. ಮೊದಮೊದಲು ತಮಾಷೆ ಎನ್ನಿಸುತ್ತಿದ್ದ ಮಾತು ನಾನು ದೊಡ್ಡವಳಾಂತೆ ಸಿಟ್ಟು ತರಿಸಲಾರಂಭಿಸಿತ್ತು. ಹೀಗಾಗಿ ಆಟ ಆಡಿ ಬಂದವಳು ಸರಿಯಾಗಿ ಕೈಕಾಲು ಮುಖ ತೊಳೆಯದೆ ಅವರ ಪಂಚೆಯಲ್ಲಿ ಒರೆಸಿ ಮಣ್ಣು ಅದಕ್ಕೆ ತಾಗುವಂತೆ ಮಾಡಿ ಕೆಂಪಾಗಿಸಿ ಬಿಡುತ್ತಿದ್ದೆ. ಕೇಳಿದಾಗಲೆಲ್ಲ, ‘ನೀನೇ ಹೇಳಿದ್ಯಲ್ಲ ಸಿಣ್ಣಪ್ಪ, ನನ್ನ ಬಣ್ಣ ತಾಗೂದು ಅಂತಾ. ಅದ್ಕೆ ಹಾಗಾಗದೆ’ ಎಂದು ಬಿಡುತ್ತಿದ್ದೆ. ಕೊನೆ ಕೊನೆಗೆ ಇದೆಲ್ಲ ಉಪಾಯ ಮುಗಿದು ಸಿಟ್ಟು ಮಾಡಿಕೊಂಡು ಅವರ ಬಳಿ ಮಾತು ನಿಲ್ಲಿಸಿದ್ದೂ ಇದೆ.
ಇದೆಲ್ಲ ಬಾಲ್ಯದ ಹಳಹಳಿಕೆಗಳಾದರೆ ಯೌವ್ವನದಲ್ಲೂ ಈ ಬಣ್ಣ ನನ್ನನ್ನು ಸದಾ ಕಾಡುವ ಸಂಗತಿಯಾಗಿಯೇ ಉಳಿದುಬಿಟ್ಟಿತ್ತು. ಆದರೆ ಆ ಹೊತ್ತಿಗಾಗಲೇ ‘ಬಣ್ಣ ಅರ್ಕೊಂಡು ಕುಡಿಲಿಕ್ಕೆ ಆಗ್ತದಾ? ನಮ್ಮ ವ್ಯಕ್ತಿತ್ವ ಮುಖ್ಯ. ನಾವು ಜೀವನವನ್ನು ಹೇಗೆ ಎದುರಿಸ್ತೇವೆ ಅನ್ನೋದು ಮುಖ್ಯ’ ಎನ್ನುವುದನ್ನು ಅಪ್ಪ ಅಮ್ಮ ನನ್ನ ವ್ಯಕ್ತಿತ್ವದಲ್ಲಿ ಬೆರೆಸಿಬಿಟ್ಟಿದ್ದರು. ಅಪ್ಪ ಅಮ್ಮ ಇಬ್ಬರೂ ಶಿಕ್ಷಕರಾಗಿದ್ದರಿಂದ ಸದಾ ಓದುವುದು ಅವರ ರೂಢಿಯಾಗಿತ್ತು. ಅವರ ಓದಿನ ಚಟ ಅಣ್ಣ ಹಾಗು ನಾನು ಇಬ್ಬರಲ್ಲೂ ಮೊಳಕೆಯೊಡೆದಿತ್ತು. ನಾಲ್ಕನೆ ತರಗತಿಗೆ ಬರುವಷ್ಟರಲ್ಲಿ ಅಪ್ಪ ಕಾರಂತರ, ಕುವೆಂಪುರವರ ಕಾದಂಬರಿಗಳನ್ನು ಕೈಗಿತ್ತಿದ್ದರು. ಈ ನಡುವೆ ನಮ್ಮೊಡನೆ ಶಾಲೆಗೆ ಹೋಗಲೆಂದು ಇದ್ದ ನನ್ನ ಮಾವನ ಮಕ್ಕಳೂ ಪುಸ್ತಕದ ಹುಳುಗಳು. ಅವರು ಸಾಮಾಜಿಕ ಕಾದಂಬರಿಗಳನ್ನು ಓದುತ್ತಿದ್ದುದರಿಂದ ನಾನೂ ಕಾದಂಬರಿಗಳ ಓದಿನ ಚಟ ಬೆಳೆಸಿಕೊಂಡು ಬಿಟ್ಟಿದ್ದೆ. ಹೀಗಾಗಿ ಬಣ್ಣದ ಗೊಡವೆ ಬಿಟ್ಟು ಓದು ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಂಡೆ. ಅಷ್ಟರಲ್ಲಾಗಲೇ ಅಮ್ಮ ಪದೇಪದೆ ಕಸ್ತೂರಿ ಕಪ್ಪು. ಆದರೆ ಅದರ ಸುವಾಸನೆ ಎಷ್ಟು ಚಂದ’ ಎನ್ನುತ್ತಲೋ, ‘ದೇವರ ಮೂರ್ತಿ ಕಪ್ಪು ಕಲ್ಲಿಂದ ಮಾಡಿದ್ದರೆ ಅದರ ಸೆಳೆತ ಮತ್ತು ಶಕ್ತಿ ಜಾಸ್ತಿ.’ ಎನ್ನುತ್ತಲೋ ನನ್ನ ಆತ್ಮವಿಶ್ವಾಸ ಹೆಚ್ಚಿಸಿದ್ದರು. ಹೀಗಾಗಿ ಕಪ್ಪು ಎಂದವರನ್ನೆಲ್ಲ ಒಂದು ತರಹ ಅನಾಗರಿಕರು ಎಂಬಂತೆ ನೋಡುವ ಗುಣ ಬೆಳೆಸಿಕೊಳ್ಳಲು, ಇದು ನನಗೆ ಸಹಾಯಕವಾಗಿತ್ತು. ನನ್ನ ಮೊದಲ ಕವಿತೆ ಬರೆದಾಗ ನಾನು ಐದನೇ ತಗತಿಯಲ್ಲಿದ್ದೆ. ಅದೇನೋ ದೆವ್ವದ ಕವಿತೆ. ನನ್ನ ಕವಿತೆಯನ್ನು ಬಹಳ ಸೀರಿಯಸ್ ಆಗಿ ಓದಿದ ಅಪ್ಪ ‘ಕವಿತೆ ಚೆನ್ನಾಗಿದೆ. ಬರೆಯಬಹುದು ನೀನು’ ಎನ್ನುತ್ತ ಇದ್ದಕ್ಕಿದ್ದಂತೆ ‘ನೀನು ದೆವ್ವ ಭೂತವನ್ನೆಲ್ಲ ನಂಬ್ತೀಯಾ?’ ಎಂದು ಕೇಳಿದ್ದರು. ನಾನು ಇಲ್ಲ ಎಂದಿದ್ದೆ. ‘ಹಾಗಾದರೆ ನೀನು ನಂಬದಿರುವುದರ ಕುರಿತು ಯಾಕೆ ಬರೆಯೋದು? ನಿನಗೆ ನಂಬಿಕೆ ಇರುವ ವಿಷಯಗಳ ಬಗ್ಗೆ ಬರೆ’ ಎಂದು ನನ್ನ ಬರವಣಿಗೆಯ ದಿಕ್ಕನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದರು.
ಇದರ ನಡುವೆ ನಾನು ಮತ್ತೊಂದು ವಿಷಯ ಹೇಳಲೇಬೇಕು. ನಾನು ಕಾಲೇಜಿಗೆ ಹೋಗುವಾಗ ಆಗಿನ ಕಾಲದಲ್ಲಿ ಯಾರಿಗೂ ಸಿಗದ ದೊಡ್ಡ ಸವಲತ್ತೊಂದು ನನಗೆ ಸಿಕ್ಕಿತ್ತು. ಪಾಕೆಟ್ ಮನಿ ಎಂದರೇನೆಂದು ತಿಳಿಯದ ಕಾಲದಲ್ಲೇ ಅಪ್ಪ ನನಗೆ ಸಾವಿರ ರೂಪಾಯಿ ಪಾಕೆಟ್ ಮನಿ ಕೊಡುತ್ತಿದ್ದರು. ಖಂಡಿತಾ ಖರ್ಚು ಮಾಡಿದ ಹಣಕ್ಕೆ ಲೆಕ್ಕ ಒಪ್ಪಿಸಬೇಕಾಗಿದ್ದರೂ ನಾನು ಖರೀದಿಸುವ ಪುಸ್ತಕಗಳ ಹಣವನ್ನು ಮಾತ್ರ ಪುನಃ ನನಗೆ ಅಪ್ಪ ಕೊಡುತ್ತಿದ್ದರು. ಹೀಗಾಗಿ ಪುಸ್ತಕ ಖರೀದಿಸಿದರೆ ನನ್ನ ಪಾಕೆಟ್ ಮನಿ ಖರ್ಚಾಗುವುದಿಲ್ಲ ಎಂಬ ಕಾರಣಕ್ಕೆ ನಾನು ಹೆಚ್ಚು ಹೆಚ್ಚು ಪುಸ್ತಕ ಖರೀದಿಸುತ್ತಿದ್ದೆ.
ಮುಂದೆಲ್ಲ ನನಗೆ ನನ್ನ ಬಣ್ಣ ಒಂದು ಸಮಸ್ಯೆ ಅನ್ನಿಸಿದ್ದೇ ಇಲ್ಲ. ಮದುವೆಯ ಸಮಯದಲ್ಲೂ ಹುಡುಗ ತುಂಬಾ ಬಿಳಿ ಬಣ್ಣದವನು ಎಂದಾಗ ‘ಹುಡುಗಿ ಕಪ್ಪು ಅಂತಾ ಬೇಡಾ ಅಂತಾನೆ ಬಿಡು’ ಎಂದು ಅಣ್ಣನ ಬಳಿ ತಮಾಷೆ ಮಾಡಿದ್ದೆ. ಆದರೆ ಹುಡುಗ ಮರುಮಾತನಾಡದೇ ಒಪ್ಪಿಕೊಂಡಾಗ ಒಂದಿಷ್ಟು ಅಚ್ಚರಿ ಆಗಿದ್ದಂತೂ ನಿಜ. ಈಗಲೂ, ಹುಡುಗಿ ಕಪ್ಪು ಅಂತಾ ಗೊತ್ತಿದ್ದೂ ಒಪ್ಪಿಕೊಂಡಿದ್ಯಾಕೆ? ಎಂದು ಗಂಡನಿಗೆ ಕೇಳುತ್ತಲೇ, ಕಪ್ಪು ಹುಡುಗಿಯರಿಗೆ ಆ್ಯಟಿಟ್ಯೂಡ್ ಜಾಸ್ತಿ! ಎಂದು ರೇಗಿಸುತ್ತಿರುತ್ತೇನೆ. ಮಕ್ಕಳು ಮುಖಮುಖ ನೋಡಿಕೊಳ್ಳುತ್ತವೆ.
‘ಎಸ್ ಬಿ ಕೆರೆಮನೆ ಮಾಸ್ತರ್ ಮಗಳು ಶ್ರೀದೇವಿ ಅಂತಲ್ಲ, ಶ್ರೀದೇವಿ ಕೆರೆಮನೆಯ ಅಪ್ಪ ಎಸ್. ಬಿ. ಕೆರೆಮನೆ ಮಾಸ್ತರ್ ಎಂದು ಕರೆಯಿಸಿಕೊಳ್ಳಬೇಕು.’ ಇದು ಸದಾ ನನ್ನ ಅಪ್ಪ ಚಿಕ್ಕಂದಿನಲ್ಲಿ ಹೇಳುತ್ತಿದ್ದ ಮಾತು. ಈಗ ಯಾರಾದರೂ ‘ಶ್ರೀದೇವಿ ಕೆರೆಮನೆಯ ತಂದೆಯವರಾ?’ ಎಂದು ಕೇಳಿದರೆ ಅಪ್ಪನ ಮುಖ ಊರಗಲವಾಗುತ್ತದೆ. ಅಮ್ಮನ ಕಣ್ಣು ಹೆಮ್ಮೆಯಿಂದ ಬೀಗುತ್ತದೆ. ಈ ಬೀಗುವಿಕೆಯೂ ಆ ಕ್ಷಣದ್ದಷ್ಟೇ. ಮತ್ತೆ ನಾನು ನನ್ನೊಳಗೆ ಪಯಣಿಸುವುದು ನನ್ನ ಬರಹದೊಂದಿಗೆ ಕವಿತೆಯೊಂದಿಗೆ ಗಝಲುಗಳೊಂದಿಗೆ.
ಬಲವಂತವಾಗಿ ಪಡೆಯಲಾದೀತೆ ಪ್ರೀತಿಯನು ತೊರೆದು, ಕನಸು ನನಸಾಗುವಂತಿದ್ದರೆ ಹೊರಟುಬಿಡು
ಜೊತೆಗಿದ್ದು ಸಾಧಿಸಲಾಗದೆಂಬುದು ಅರಿವಾಗಿದೆ ಬಿಟ್ಟು ಬವಣೆ ಬಗೆಹರಿಯುವಂತಿದ್ದರೆ ಹೊರಟುಬಿಡು
ಬಿಟ್ಟರೂ ಬಿಡಲಾಗುತ್ತಿಲ್ಲ ಸರಾಯಿಯ ನಂಟು ತ್ಯಜಿಸಿ ಸುರೆ ನಶೆಯೇರಿಸುವಂತಿದ್ದರೆ ಹೊರಟುಬಿಡು
ಜೊತೆಗಿರುವುದು ಖುಷಿಗಾಗಿಯೆ ಹೊರತು ಮಿಲನಕ್ಕಲ್ಲ ಸಾಂಗತ್ಯ ನೋವು ನೀಡುವಂತಿದ್ದರೆ ಹೊರಟುಬಿಡು
ಏಳೇಳು ಜನ್ಮ ಜೊತೆಗಿರುವ ಆಣೆ ಮುರಿದಾಗಿದೆ ಬಿಟ್ಟರೆ, ಬವಣೆ ಬಗೆಹರಿವಂತಿದ್ದರೆ ಹೊರಟುಬಿಡು
ಸಿರಿ, ಬಲವಂತದಿಂದ ಜೊತೆಗಿರಿಸಿಕೊಳ್ಳಲಾಗದು ಮರೆತು ಆತ್ಮಬಲ ಹೆಚ್ಚುವಂತಿದ್ದರೆ ಹೊರಟುಬಿಡು
ಪರಿಚಯ: ಉತ್ತರ ಕನ್ನಡ ಜಿಲ್ಲೆಯ ಹಿರೇಗುತ್ತಿ ಮೂಲದ ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ‘ನಾನು ಗೆಲ್ಲುತ್ತೇನೆ’, ’ಹೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’ ಪ್ರಕಟಿತ ಪುಸ್ತಕಗಳು. ‘ಅಲೆಯೊಳಗಿನ ಮೌನ’ ಗಝಲ್ ಸಂಕಲನ. ‘ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು ಕತೆಗಳ ಗುಚ್ಛ. ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಶ್ರೀಗಂಧ ಹಾರ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಗ್ರಂಥ ಪುರಸ್ಕಾರ, 2020ನೇ ಶ್ರೀವಿಜಯ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.
ನಾನೆಂಬ ಪರಿಮಳದ ಹಾದಿಯಲಿ: ನೀನೊಬ್ಬಳು ಗಂಡಾಗಿ ಹುಟ್ಟಿದ್ರೆ ನನ್ನ ಎದೆ ಬೇಯುತಿತ್ತು
Published On - 5:53 pm, Fri, 5 February 21